ಜಾಗತಿಕ ರಾಜಕಾರಣದ ಬಿಕ್ಕಟ್ಟುಗಳು, ಯುದ್ಧಗಳ ಭೀಕರತೆ ಹಾಗೂ ಅಂತಾರಾಷ್ಟ್ರೀಯ ವಲಯದ ಆತಂಕಗಳ ನಡುವೆಯೇ ಜಗತ್ತಿನ ಕಣ್ಣುಗಳು ಸದ್ಯಕ್ಕೆ ಕ್ರೀಡಾಂಗಣದತ್ತ ತಿರುಗಿವೆ. ಯುದ್ಧ ಮತ್ತು ಅದರಿಂದಾಗಿರುವ ಜಾಗತಿಕ ಪರಿಣಾಮಗಳ ಹತಾಶೆ ಮತ್ತು ಹಿಂಸೆಯ ವಾತಾವರಣದ ನಡುವೆ ಫುಟ್‌ಬಾಲ್ ಕ್ರೀಡಾಕೂಟವು ಭರವಸೆಯ ಕೋಲ್ಮಿಂಚಾಗಿ ಮೂಡಿಬಂದಿದೆ. ಇಡೀ ವಿಶ್ವವನ್ನು ಒಂದು ಸೂರಿನಡಿ ತಂದು ನಿಲ್ಲಿಸಿದೆ.
ಜಗತ್ತಿನ ಅತ್ಯಂತ ಜನಪ್ರಿಯ ಮತ್ತು ಬೃಹತ್ ಕ್ರೀಡಾಕೂಟವಾದ ‘ಫಿಫಾ ಫುಟ್‌ಬಾಲ್ ವಿಶ್ವಕಪ್-2026’ಕ್ಕೆ ಮೆಕ್ಸಿಕೋದಲ್ಲಿ ಅದ್ದೂರಿ ಮತ್ತು ವರ್ಣರಂಜಿತ ಚಾಲನೆ ಸಿಕ್ಕಿದೆ. ಯುದ್ಧದ ಭೀತಿಯಿಂದ ಜರ್ಜರಿತವಾಗಿರುವ ಜಾಗತಿಕ ಸಮುದಾಯಕ್ಕೆ ಕ್ರೀಡಾಕೂಟವು ಕೇವಲ ಮನರಂಜನೆ ಮಾತ್ರವಲ್ಲದೆ, ಶಾಂತಿ ಮತ್ತು ಭ್ರಾತೃತ್ವದ ಸಂಕೇತವಾಗಿ ಕಾಣುತ್ತಿದೆ.
ವಿಶ್ವಕಪ್ ಇತಿಹಾಸದಲ್ಲೇ ಈ ಬಾರಿಯ ಕ್ರೀಡಾಕೂಟವು ವಿಶಿಷ್ಟವೂ ಅಭೂತಪೂರ್ವವೂ ಆಗಿದೆ. ಏಕೆಂದರೆ, ಮೆಕ್ಸಿಕೋ, ಕೆನಡಾ ಹಾಗೂ ಯುದ್ಧದಾಹಿ ಅಮೆರಿಕ– ಮೂರು ರಾಷ್ಟ್ರಗಳು ಜಂಟಿಯಾಗಿ ಮಹಾ ಕ್ರೀಡಾಕೂಟವನ್ನು ಆಯೋಜಿಸಿವೆ. ಮೆಕ್ಸಿಕೋ ನಗರದಲ್ಲಿರುವ ಐತಿಹಾಸಿಕ ಅಜ್ಟೆಕಾ ಕ್ರೀಡಾಂಗಣದಲ್ಲಿ ಉದ್ಘಾಟನಾ ಸಮಾರಂಭ ನಡೆದಿದೆ. ಜಾಗತಿಕ ಕ್ರೀಡಾ ಪ್ರೇಮಿಗಳ ಮನಸ್ಸಿನಲ್ಲಿ ಹುಮ್ಮಸ್ಸು ಹೆಚ್ಚಿಸಿದೆ.
ಉದ್ಘಾಟನಾ ಸಮಾರಂಭದಲ್ಲಿ ಜರುಗಿದ ಸಾಂಪ್ರದಾಯಿಕ ಮೆಕ್ಸಿಕನ್ ಸಂಗೀತ, ನೃತ್ಯ ಮತ್ತು ಅತ್ಯಾಧುನಿಕ ಲೇಸರ್ ತಂತ್ರಜ್ಞಾನದ ಸಮ್ಮಿಲನವು ಜಾಗತಿಕ ಬಿಕ್ಕಟ್ಟುಗಳನ್ನು ಕ್ಷಣಕಾಲ ಮರೆಸಿ ರೋಮಾಂಚಕ ವಾತಾವರಣವನ್ನು ಸೃಷ್ಟಿಸಿತ್ತು. ಕ್ರೀಡಾಂಗಣದಲ್ಲಿ ಹಾರಾಡುತ್ತಿದ್ದ ಜಗತ್ತಿನ ವಿವಿಧ ದೇಶಗಳ ಧ್ವಜಗಳು, ರಾಜಕೀಯ ವೈಷಮ್ಯಗಳನ್ನು ಬದಿಗಿಟ್ಟು ಕ್ರೀಡಾ ಮನೋಭಾವದಿಂದ ಒಂದಾಗಬಹುದು ಎಂಬ ಸಂದೇಶ ರವಾನಿಸುತ್ತಿದ್ದವು.
ಈ ಲೇಖನ ಓದಿದ್ದೀರಾ?: ನೆಹರೂ ದಾಖಲೆ ಮುರಿದ ಮೋದಿ: ದೇಶ ಮುನ್ನಡೆಯಿತೋ, ಹಿಂದಕ್ಕೆ ಹೋಯಿತೋ?
ವಿಶೇಷವಾಗಿ, ಆತಿಥೇಯ ಮೆಕ್ಸಿಕೋ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಉದ್ಘಾಟನಾ ಪಂದ್ಯವು ವಿಶ್ವಕಪ್‌ನ ತೀವ್ರತೆಗೆ ಮುನ್ನುಡಿ ಬರೆಯುವಂತಿತ್ತು. ರೋಚಕ ವಾತಾವರಣದಲ್ಲಿ ನಡೆದ ಈ ಪಂದ್ಯದಲ್ಲಿ ರೆಫರಿಗಳು ಬರೋಬ್ಬರಿ ಮೂರು ಕೆಂಪು ಕಾರ್ಡ್‌ಗಳನ್ನು ಪ್ರದರ್ಶಿಸುವ ಮೂಲಕ ಕ್ರೀಡಾಂಗಣದ ಶಿಸ್ತು ಮತ್ತು ನಿಯಮಗಳ ಕಠಿಣತೆಯನ್ನು ಸಾಬೀತುಪಡಿಸಿದರು. ಅಂತಿಮವಾಗಿ ಮೆಕ್ಸಿಕೋ ತಂಡವು ಎರಡು ಅದ್ಭುತ ಗೋಲುಗಳನ್ನು ಗಳಿಸುವ ಮೂಲಕ ಜಯ ಸಾಧಿಸಿತು. ಈ ಪಂದ್ಯವು ಕೇವಲ ಗೆಲುವು-ಸೋಲಿಗೆ ಸೀಮಿತವಾಗಿರದೆ, ಈ ಬಾರಿಯ ವಿಶ್ವಕಪ್‌ನಲ್ಲಿ ಕಾಣಿಸಲಿರುವ ತೀವ್ರ ಸ್ಪರ್ಧೆ ಮತ್ತು ಆಟಗಾರರ ಸವಾಲುಗಳ ಮುನ್ಸೂಚನೆಯನ್ನೂ ಸೂಚಿಸಿತು.
ಪ್ರಸ್ತುತ ಜಗತ್ತಿನಲ್ಲಿ ನಡೆಯುತ್ತಿರುವ ಯುದ್ಧಗಳು ಮತ್ತು ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳ ಕಾರಣದಿಂದಾಗಿ ಈ ಕ್ರೀಡಾಕೂಟಕ್ಕೆ ಹಿಂದೆಂದಿಗಿಂತಲೂ ಹೆಚ್ಚಿನ ಭದ್ರತೆಯನ್ನು ಕಲ್ಪಿಸಲಾಗಿದೆ. ಕ್ರೀಡಾಂಗಣಗಳ ಒಳಗೆ ಮತ್ತು ಹೊರಗೆ ಕಣ್ಗಾವಲು ವ್ಯವಸ್ಥೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಆಯೋಜಕ ದೇಶಗಳು ಎಚ್ಚರಿಕೆಯಿಂದ ಶ್ರಮಿಸುತ್ತಿವೆ.
ಆದಾಗ್ಯೂ, ಜಾಗತಿಕ ಬಿಕ್ಕಟ್ಟುಗಳ ನಡುವೆಯೂ ಕ್ರೀಡಾಪಟುಗಳು ಮತ್ತು ಪ್ರೇಕ್ಷಕರು ತೋರುತ್ತಿರುವ ಉತ್ಸಾಹವು ಕ್ರೀಡಾಸ್ಪೂರ್ತಿಯನ್ನು ಹೆಚ್ಚಿಸಿದೆ. ಕ್ರೀಡೆಯು ರಾಜಕೀಯ ಗಡಿಗಳನ್ನು ದಾಟಿ, ಭಾಷೆ ಮತ್ತು ಧರ್ಮದ ಭೇದಗಳನ್ನು ಮರೆಸಿ ಮನುಕುಲವನ್ನು ಹೇಗೆ ಒಟ್ಟುಗೂಡಿಸಬಲ್ಲದು ಎಂಬುದಕ್ಕೆ ಮೆಕ್ಸಿಕೋ ವಿಶ್ವಕಪ್ ಉತ್ತಮ ಉದಾಹರಣೆ ನೀಡಿದೆ.




