ರಾಜ್ಯದಲ್ಲಿ ವಿದ್ಯುತ್ ವಿತರಣಾ ಸೇವೆಯನ್ನು ಖಾಸಗೀಕರಣಗೊಳಿಸುವ ಬದಲು, ರೈತಪರ ನೀತಿಗಳನ್ನು ಅನುಸರಿಸಿ ಅವರ ಹಿತಾಸಕ್ತಿಯನ್ನು ಕಾಪಾಡುವಂತೆ ಜನ ಸಾಮಾನ್ಯರ ವೇದಿಕೆಯ ಮುಖಂಡ ಯಲ್ಲಪ್ಪ ಹೆಗಡೆ ಸರ್ಕಾರವನ್ನು ಆಗ್ರಹಿಸಿದರು.
ಬಾಗಲಕೋಟೆ ನಗರದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, “ರಾಜ್ಯದ ವಿವಿಧ ವಿದ್ಯುತ್ ಕಂಪನಿಗಳ 15 ಜಿಲ್ಲೆಗಳನ್ನು ಖಾಸಗಿ ಕಂಪನಿಗೆ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಕೂಡಲೇ ಈ ನಿರ್ಧಾರವನ್ನು ಹಿಂಪಡೆಯಬೇಕು. ಇಲ್ಲದಿದ್ದರೆ, ರಾಜ್ಯದಾದ್ಯಂತ ಹೋರಾಟ ಮಾಡಲಾಗುವುದು” ಎಂದು ಎಚ್ಚರಿಸಿದರು.
“ರಾಜ್ಯದ 15 ಜಿಲ್ಲೆಗಳಲ್ಲಿ ವಿದ್ಯುತ್ ವಿತರಣೆಗೆ ಪರವಾನಗಿ ನೀಡಬೇಕು ಎಂದು ಕರ್ನಾಟಕ ವಿದ್ಯುತ್‌ಚ್ಛಕ್ತಿ ನಿಯಂತ್ರಣ ಅಯೋಗಕ್ಕೆ ಅರ್ಜಿ ಸಲ್ಲಿಸಲಾಗಿದೆ. ಅದಕ್ಕೆ ಕೆಇಆರ್‌ಸಿಯೂ ಆಕ್ಷೇಪಣೆ ಆಹ್ವಾನಿ-ಸಲಾಗಿದೆ. ವೇದಿಕೆ ಸೇರಿದಂತೆ ಹಲವು ಸಂಘಟನೆಗಳು ಆಕ್ಷೇಪಣೆ ಸಲ್ಲಿಸಿವೆ. ಅವುಗಳನ್ನು ಪರಿಗಣಿಸಿ, ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು” ಎಂದು ಆಗ್ರಹಿಸಿದರು.
“ಕೇಂದ್ರ ಸರ್ಕಾರದ ಖಾಸಗೀಕರಣದ ವಿರುದ್ಧ ರಾಜ್ಯ ಕಾಂಗ್ರೆಸ್ ನಾಯಕರು ಟೀಕೆ ಮಾಡುತ್ತಾರೆ. ಆದರೆ, ಈಗ ಅವರೂ ಅದೇದಾರಿ ತುಳಿಯಲು ಮುಂದಾಗಿದ್ದಾರೆ. ದೆಹಲಿ, ಒರಿಸ್ಸಾ ಮುಂತಾದೆಡೆ ವಿದ್ಯುತ್ ಕಂಪನಿಗಳ ಸ್ವಾಮ್ಯ ಖಾಸಗಿಯವರಿಗೆ ನೀಡಲಾಗಿದ್ದು, ವಿದ್ಯುತ್ ಬೆಲೆ ಹೆಚ್ಚಳವಾಗಿದೆ. ಇದನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು” ಎಂದು ಒತ್ತಾಯಿಸಿದರು.
“ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸಿದರೆ ರೈತರಿಗೆ ರಿಯಾಯಿತಿ ನೀಡುವ ಜವಾಬ್ದಾರಿ ಯಾರು ವಹಿಸಿಕೊಳ್ಳುತ್ತಾರೆ. ಉಚಿತ ವಿದ್ಯುತ್ ಸರಬರಾಜು ವ್ಯವಸ್ಥೆ ಏನಾಗುತ್ತದೆ. ನಷ್ಟವಾದರೂ ಗ್ರಾಮೀಣ ಪ್ರದೇಶಕ್ಕೆ ಸೇವೆ ಮುಂದುವರೆಯುತ್ತದೆಯೇ ಎಂಬ ಪ್ರಶ್ನೆಗಳಿಗೆ ಉತ್ತರ ನೀಡಬೇಕು” ಎಂದು ಆಗ್ರಹಿಸಿದರು.
ಮುಂದುವರೆದು “ರಾಜ್ಯದ ಹೆಸ್ಕಾಂ, ಬೆಸ್ಕಾಂ, ಮೆಸ್ಕಾಂ, ಬೆಸ್ಕಾಂ, ಚೆಸ್ಕಾಂ ಗಳನ್ನು ಬಲ ಪಡಿಸಬೇಕು. ಸಾರ್ವಜನಿಕ ವಿದ್ಯುತ್ ವ್ಯವಸ್ಥೆ ಬಲಪಡಿಸಬೇಕು. ರೈತರ ಹಾಗೂ ಬಡವರ ಹಿತಾಸಕ್ತಿ ಕಾಪಾಡಬೇಕು. ಸಾರ್ವಜನಿಕರ ಹಣದಲ್ಲಿ ನಿರ್ಮಾಣವಾದ ಆಸ್ತಿಯನ್ನು ಖಾಸಗಿಯವರಿಗೆ ಸಾಲದ ಸಾಧನವಾಗಿಸಲು ಅವಕಾಶ ನೀಡಬಾರದು” ಎಂದು ಒತ್ತಾಯಿಸಿದರು.
ರೈತ ಮುಖಂಡ ಪರಶುರಾಮ ಮಂಟೂರ ಮಾತನಾಡಿ, “ಇದೊಂದು ಕಿವುಡ ಸರ್ಕಾರವಾಗಿದೆ. ರೈತರ ಬದುಕಿನ ಜೊತೆಗೆ ಚೆಲ್ಲಾಟವಾಡಬಾರದು. ವಿದ್ಯುತ್ ಖಾಸಗೀಕರಣ ಮಾಡಿದರೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ” ಎಂದು ಎಚ್ಚರಿಸಿದರು.
ಕರವೇ ಮುಖಂಡರಾದ ಬಸವರಾಜ ಧರ್ಮಂತಿ, ಗಣೇಶ ನಾಯಕ, ಮಂಜುನಾಥ ಪವಾರ, ರೈತ ಮುಖಂಡ ಗೋವಿಂದಪ್ಪ ಮೆಟಗುಡ್ಡ ಇದ್ದರು.





