ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಹದಿನಾರನೇ ಆವೃತ್ತಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ನಿತೀಶ್ ರಾಣಾ ಮುನ್ನಡೆಸಲಿದ್ದಾರೆ. ಕೆಕೆಆರ್ ಫ್ರಾಂಚೈಸಿ ಟ್ವಟರ್‌ನಲ್ಲಿ ಈ ಕುರಿತು ಮಾಹಿತಿ ನೀಡಿದೆ.
2012 ಮತ್ತು 2014ರ ಚಾಂಪಿಯನ್ಸ್ ಕೆಕೆಆರ್ ತಂಡವನ್ನು ಕಳೆದ ಆವೃತ್ತಿಯಲ್ಲಿ ತಂಡವನ್ನು ಮುನ್ನಡೆಸಿದ್ದ ಭರವಸೆಯ ಬ್ಯಾಟರ್ ಶ್ರೇಯಸ್ ಅಯ್ಯರ್ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದು ಈ ಬಾರಿಯ ಟೂರ್ನಿಗೆ ಅಲಭ್ಯರಾಗಿದ್ದಾರೆ. ಶೀಘ್ರದಲ್ಲೇ ಅಯ್ಯರ್ ಶಸ್ತ್ರಚಿಕಿತ್ಸೆಗೆ ಒಳಪಡಲಿದ್ದು, ಸುಮಾರು 6 ತಿಂಗಳುಗಳ ಕಾಲ ಕ್ರಿಕೆಟ್‌ನಿಂದ ದೂರ ಉಳಿಯಲಿದ್ದಾರೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಆಲ್‌ರೌಂಡರ್ ನಿತೀಶ್ ರಾಣಾಗೆ ಕೆಕೆಆರ್ ಮಹತ್ವದ ಜವಾಬ್ದಾರಿ ನೀಡಿದೆ.
2012ರಿಂದಲೂ ಕೆಕೆಆರ್ ತಂಡದ ಪ್ರಮುಖ ಆಟಗಾರನಾಗಿರುವ ವೆಸ್ಟ್ ಇಂಡೀಸ್‌ನ ಹಿರಿಯ ಸ್ಪಿನ್ನರ್ ಆಲ್‌ರೌಂಡರ್ ಸುನಿಲ್ ನರೈನ್ ಹೆಸರು ನಾಯಕ ಸ್ಥಾನಕ್ಕೆ ಕೇಳಿಬಂದಿತ್ತು. ಆದರೆ ಅಂತಿಮವಾಗಿ ರಾಣಾಗೆ ಕೆಕೆಆರ್ ಮಣೆ ಹಾಕಿದೆ.
ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಡೆಲ್ಲಿ ತಂಡವನ್ನು 12 ಪಂದ್ಯಗಳಲ್ಲಿ ಮುನ್ನಡೆಸಿದ ಅನುಭವ ರಾಣಾ ಅವರಿಗಿದೆ. 2018ರಿಂದ ಕೆಕೆಆರ್ ತಂಡದಲ್ಲಿರುವ ಎಡಗೈ ಬ್ಯಾಟರ್ ನಿತೀಶ್ ರಾಣಾ, 74 ಪಂದ್ಯಗಳನ್ನಾಡಿದ್ದು, ಒಟ್ಟು 1744 ರನ್ ಗಳಿಸಿದ್ದಾರೆ. ಈ ಬಾರಿ ನಾಯಕನಾಗಿ ಹೊಸ ಇನಿಂಗ್ಸ್ ಆರಂಭಿಸಲಿದ್ದಾರೆ. ಏಪ್ರಿಲ್ 1ರಂದು ಪಂಜಾಬ್ ಕಿಂಗ್ಸ್ ವಿರುದ್ಧ ಕೋಲ್ಕತಾ ನೈಟ್ ರೈಡರ್ಸ್ ತಂಡ ತನ್ನ ಮೊದಲ ಪಂದ್ಯವನ್ನಾಡಲಿದೆ.
“ದೇಶಿ ಕ್ರಿಕೆಟ್‌ನಲ್ಲಿ ರಾಜ್ಯದ ವೈಟ್‌ಬಾಲ್ ತಂಡವನ್ನು ಮುನ್ನಡೆಸಿದ ಅನುಭವ ಇರುವ ನಿತೀಶ್ ರಾಣಾ ತಂಡದಲ್ಲಿ ಇರುವುದು ನಮ್ಮ ಅದೃಷ್ಟ. ಜೊತೆಗೆ ಕೆಕೆಆರ್ ತಂಡದಲ್ಲಿ 2018ರಿಂದ ಆಡಿದ ಅನುಭವವೂ ಅವರಲ್ಲಿದೆ. ಹೀಗಾಗಿ ನಾಯಕನಾಗಿ ಅವರು ಅತ್ಯುತ್ತಮ ಫಲಿತಾಂಶ ತರಲಿದ್ದಾರೆ ಎಂಬ ವಿಶ್ವಾಸವಿದೆ. ಮುಖ್ಯ ಕೋಚ್ ಚಂದ್ರಕಾಂತ್ ಪಂಡಿತ್ ಮತ್ತು ಕೋಚಿಂಗ್ ಬಳಕ ಉತ್ತಮ ಫಲಿತಾಂಶ ತಂದುಕೊಡಲಿದೆ ಎಂಬ ವಿಶ್ವಾಸವಿದೆ. ಹೊಸ ಕ್ಯಾಪ್ಟನ್ ನಿತೀಶ್ ರಾಣಾಗೆ ಆನ್‌ಫೀಲ್ಡ್‌ನಲ್ಲಿ ಸಿಗಬೇಕಾದ ಎಲ್ಲ ಬೆಂಬಲಗಳನ್ನೂ ಒದಗಿಸಲಾಗುವುದು,” ಎಂದು ಕೆಕೆಆರ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡ
ಶ್ರೇಯಸ್ ಅಯ್ಯರ್, ನಿತೀಶ್ ರಾಣಾ (ನಾಯಕ), ರಹ್ಮಾಮಾನುಲ್ಲಾ ಗುರ್ಬಾಝ್, ವೆಂಕಟೇಶ್ ಅಯ್ಯರ್, ಆಂಡ್ರೆ ರಸೆಲ್, ಸುನಿಲ್ ನರೈನ್, ಶಾರ್ದುಲ್ ಠಾಕೂರ್, ಲಾಕಿ ಫರ್ಗ್ಯೂಸನ್, ಉಮೇಶ್ ಯಾದವ್, ಟಿಮ್ ಸೌಥಿ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ಅನುಕುಲ್ ರಾಯ್, ರಿಂಕು ಸಿಂಗ್, ನಾರಾಯಣನ್ ಜಗದೀಶನ್, ಸುಯಶ್ ಶರ್ಮಾ, ಡೇವಿಡ್ ವೀಸ, ಕುಲ್ವಂತ್ ಖೆಜ್ರೋಲಿಯಾ, ಮಂದೀಪ್ ಸಿಂಗ್, ಲಿಟ್ಟನ್ ದಾಸ್, ಶಕಿಬ್ ಅಲ್ ಹಸನ್.