ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2026) ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಟೂರ್ನಿಯಲ್ಲಿ ಅದ್ಭುತ ಶುಭಾರಂಭ ಮಾಡಿದೆ.
ಇಂದು ತವರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರೋಚಕ ಪಂದ್ಯದಲ್ಲಿ 202 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ ಆರ್‌ಸಿಬಿ, ಕೇವಲ 15.4 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿ ಸಂಭ್ರಮಿಸಿತು.
ಬೃಹತ್ ಗುರಿ ಬೆನ್ನತ್ತಿದ ಆರ್‌ಸಿಬಿ ಪರ ವಿರಾಟ್ ಕೊಹ್ಲಿ ಹಾಗೂ ಇಂಪ್ಯಾಕ್ಟ್ ಆಟಗಾರ ದೇವದತ್ ಪಡಿಕ್ಕಲ್ ಅವರ ಆಟ ಎಷ್ಟರಮಟ್ಟಿಗೆ ಇತ್ತೆಂದರೆ, ಎದುರಾಳಿ ಬೌಲರ್‌ಗಳು ಅಕ್ಷರಶಃ ಬೆಚ್ಚಿಬಿದ್ದರು. ಆರಂಭಿಕ ಆಟಗಾರ ಫಿಲ್ ಸಾಲ್ಟ್ (8) ಬೇಗನೆ ಔಟಾದರೂ, ಕೊಹ್ಲಿ ಮತ್ತು ಪಡಿಕ್ಕಲ್ ಸೇರಿ ಸನ್‌ರೈಸರ್ಸ್ ಬೌಲರ್‌ಗಳನ್ನು ಧೂಳೀಪಟ ಮಾಡಿದರು.
ವಿರಾಟ್ ಕೊಹ್ಲಿ ಕೇವಲ 38 ಎಸೆತಗಳಲ್ಲಿ 5 ಬೌಂಡರಿ ಮತ್ತು 5 ಭರ್ಜರಿ ಸಿಕ್ಸರ್ ಸಿಡಿಸಿ ಅಜೇಯ 69 ರನ್ ಗಳಿಸಿದರೆ, ಆಕ್ರಮಣಕಾರಿ ಆಟ ಪ್ರದರ್ಶಿಸಿದ ಪಡಿಕ್ಕಲ್ ಕೇವಲ 26 ಎಸೆತಗಳಲ್ಲಿ 7 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ 61 ರನ್ ಸಿಡಿಸಿದರು. ಇವರಿಬ್ಬರು 2ನೇ ವಿಕೆಟ್‌ಗೆ ಕೇವಲ 45 ಎಸೆತಗಳಲ್ಲಿ 101 ರನ್‌ಗಳ ಸ್ಫೋಟಕ ಜೊತೆಯಾಟವಾಡಿ ತಂಡದ ಗೆಲುವಿಗೆ ಭದ್ರ ಬುನಾದಿ ಹಾಕಿದರು.
ನಾಯಕ ರಜತ್ ಪಾಟಿದಾರ್ ಕೂಡ ಕೇವಲ 12 ಎಸೆತಗಳಲ್ಲಿ 31 ರನ್ ಚಚ್ಚಿ ಗೆಲುವನ್ನು ಮತ್ತಷ್ಟು ಸುಲಭಗೊಳಿಸಿದರು.
ತವರಿನ ಅಭಿಮಾನಿಗಳ ಮುಂದೆ ಆರ್‌ಸಿಬಿ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲೂ ಪ್ರಾಬಲ್ಯ ಮೆರೆಯಿತು. ಬೌಲಿಂಗ್ ವಿಭಾಗದಲ್ಲಿ ಆರ್‌ಸಿಬಿ ಪರ ಪಾದಾರ್ಪಣೆ ಮಾಡಿದ ಜಾಕೋಬ್ ಡಫಿ ಕೇವಲ 22 ರನ್ ನೀಡಿ ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ ಸೇರಿದಂತೆ 3 ಪ್ರಮುಖ ವಿಕೆಟ್ ಕಬಳಿಸಿ ಮಿಂಚಿದರು.ರೋಮಾರಿಯೋ ಶೆಫರ್ಡ್ ಕೂಡ 3 ವಿಕೆಟ್ ಪಡೆದು ಎಸ್‌ಆರ್‌ಹೆಚ್ ಓಟಕ್ಕೆ ಕಡಿವಾಣ ಹಾಕಿದರು.
ಸನ್‌ರೈಸರ್ಸ್ ಬ್ಯಾಟಿಂಗ್: ಆಸರೆಯಾದ ಇಶಾನ್ ಕಿಶನ್ ಹೋರಾಟ
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ತಂಡವು ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 201 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತ್ತು. ಪವರ್‌ಪ್ಲೇನಲ್ಲೇ ಕೇವಲ 29 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಹೈದರಾಬಾದ್ ತಂಡಕ್ಕೆ ಹಂಗಾಮಿ ನಾಯಕ ಇಶಾನ್ ಕಿಶನ್ ಆಸರೆಯಾದರು.
ಅತ್ಯುತ್ತಮ ಫಾರ್ಮ್ ಪ್ರದರ್ಶಿಸಿದ ಇಶಾನ್ ಕಿಶನ್ ಕೇವಲ 38 ಎಸೆತಗಳಲ್ಲಿ 8 ಬೌಂಡರಿ ಹಾಗೂ 5 ಆಕರ್ಷಕ ಸಿಕ್ಸರ್‌ಗಳನ್ನು ಸಿಡಿಸಿ 80 ರನ್ ಚಚ್ಚಿದರು. ಹೆನ್ರಿಕ್ ಕ್ಲಾಸೆನ್ (22 ಎಸೆತಗಳಲ್ಲಿ 31 ರನ್) ಅವರೊಂದಿಗೆ 4ನೇ ವಿಕೆಟ್‌ಗೆ 97 ರನ್‌ಗಳ ಜೊತೆಯಾಟವಾಡಿದ ಇಶಾನ್, ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಕೊನೆಯಲ್ಲಿ ಅಬ್ಬರಿಸಿದ ಯುವ ಆಟಗಾರ ಅನಿಕೇತ್ ವರ್ಮಾ (18 ಎಸೆತಗಳಲ್ಲಿ 43 ರನ್) ಅವರ ಮಿಂಚಿನ ಆಟದ ನೆರವಿನಿಂದ ಹೈದರಾಬಾದ್ 200ರ ಗಡಿ ದಾಟಲು ಸಾಧ್ಯವಾಯಿತು.
ಸಂಕ್ಷಿಪ್ತ ಸ್ಕೋರ್:
ಸನ್‌ರೈಸರ್ಸ್ ಹೈದರಾಬಾದ್: 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 201 (ಇಶಾನ್ ಕಿಶನ್ 80, ಅನಿಕೇತ್ ವರ್ಮಾ 43, ಹೆನ್ರಿಕ್ ಕ್ಲಾಸೆನ್ 31; ಜಾಕೋಬ್ ಡಫಿ 22ಕ್ಕೆ 3, ರೋಮಾರಿಯೋ ಶೆಫರ್ಡ್ 54ಕ್ಕೆ 3).
ರಾಯಲ್ ಚಾಲೆಂಜರ್ಸ್ ಬೆಂಗಳೂರು: 15.4 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 203 (ವಿರಾಟ್ ಕೊಹ್ಲಿ ಅಜೇಯ 69, ದೇವದತ್ ಪಡಿಕ್ಕಲ್ 61, ರಜತ್ ಪಾಟಿದಾರ್ 31; ಡೇವಿಡ್ ಪೇನ್ 35ಕ್ಕೆ 2, ಜಯದೇವ್ ಉನಾದ್ಕಟ್ 29ಕ್ಕೆ 1).
ಫಲಿತಾಂಶ: ಆರ್‌ಸಿಬಿಗೆ 6 ವಿಕೆಟ್‌ಗಳ ಭರ್ಜರಿ ಜಯ.




