ಕೇರಳದ ಕಲ್ಪೆಟ್ಟ ವಿಧಾನಸಭಾ ಕ್ಷೇತ್ರದ ಯುಡಿಎಫ್ ಅಭ್ಯರ್ಥಿ ಅಡ್ವೊಕೇಟ್ ಟಿ. ಸಿದ್ದಿಕ್ ತಮ್ಮ ಚುನಾವಣಾ ಪ್ರಚಾರದ ಅಂಗವಾಗಿ ಆಯೋಜಿಸಿದ್ದ ಸಭೆಯಲ್ಲಿ ಕರ್ನಾಟಕ ರಾಜ್ಯದ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ ಮಾತನಾಡಿ, ‘ಯುಡಿಎಫ್ ಅಧಿಕಾರಕ್ಕೆ ಬಂದಲ್ಲಿ ರಾಹುಲ್ ಗಾಂಧಿ ಕೇರಳಕ್ಕೆ ಘೋಷಿಸಿದ ಪಂಚ ಗ್ಯಾರೆಂಟಿ ಯೋಜನೆಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವುದು’ ಎಂದು ಭರವಸೆ ನೀಡಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನೀಡಿದ ಎಲ್ಲಾ ಭರವಸೆಗಳನ್ನು ಯಶಸ್ವಿಯಾಗಿ ಜಾರಿಗೆ ತರಲಾಗಿದೆ. ಪ್ರಾರಂಭದಲ್ಲಿ ಬಿಜೆಪಿ ಸೇರಿದಂತೆ ಹಲವಾರು ಪಕ್ಷಗಳು ಈ ಭರವಸೆಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರೂ, ಸರ್ಕಾರವು ತನ್ನ ಮಾತು ಉಳಿಸಿಕೊಂಡಿದೆ ಎಂದು ಅವರು ಹೇಳಿದರು. ಇದೇ ರೀತಿಯಲ್ಲಿ, ತೆಲಂಗಾಣದಲ್ಲಿಯೂ ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವ ನೀಡಿದ್ದ ಭರವಸೆಗಳನ್ನು ಕ್ರಮೇಣ ಜಾರಿಗೆ ತಂದಿರುವುದನ್ನು ಅವರು ಉಲ್ಲೇಖಿಸಿದರು.
ಕರ್ನಾಟಕದಲ್ಲಿ ಮೊದಲಿಗೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಯೋಜನೆಯನ್ನು ಮೊದಲಾಗಿ ಜಾರಿಗೆ ತಂದು, ನಂತರ ಇತರೆ ಭರವಸೆಗಳನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗಿದೆ ಎಂದು ತಿಳಿಸಿದರು.
ಅಭ್ಯರ್ಥಿ ಟಿ. ಸಿದ್ದಿಕ್ ಅವರು ಜನರೊಂದಿಗೆ ಸದಾ ನಿಂತುಕೊಳ್ಳುವ ನಾಯಕರು. ಕಳೆದ ಐದು ವರ್ಷಗಳಲ್ಲಿ ಶಾಸಕರಾಗಿ ಅವರ ಸಾಧನೆ ಗಮನಾರ್ಹವಾಗಿದೆ. ಅವರನ್ನು ಹೆಚ್ಚಿನ ಬಹುಮತದಿಂದ ಗೆಲ್ಲಿಸಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಕೇರಳ | ಬದಲಾವಣೆಯ ಗಾಳಿ ಬೀಸುತ್ತಿದೆ; ಯುಡಿಎಫ್ ಅಲೆ ಏಳುತ್ತಿದೆ: ಕೆ ಸಿ ವೇಣುಗೋಪಾಲ್
ಚುನಾವಣಾ ಪ್ರಚಾರ ಸಭೆಯಲ್ಲಿ ಯುಡಿಎಫ್ ಕ್ಷೇತ್ರದ ಅಧ್ಯಕ್ಷ ಸಲೀಂ ಮೇಮನಾ, ಡಿಸಿಸಿ ಅಧ್ಯಕ್ಷ ಅಡ್ವೊಕೇಟ್ ಟಿ.ಜೆ. ಐಸಾಕ್, ಎಐಸಿಸಿ ಸದಸ್ಯ ಎನ್.ಡಿ. ಅಪ್ಪಚ್ಚನ್, ಕ್ಷೇತ್ರ ಸಂಚಾಲಕ ಪಿ.ಪಿ. ಅಲಿ, ರಜಾಕ್ ಕಲ್ಪೆಟ್ಟ, ಟಿ. ಹಮ್ಸಾ, ಚಂದ್ರಿಕಾ ಕೃಷ್ಣನ್, ಬಿ. ಸುರೇಶ್ ಬಾಬು, ಪಾಲ್ಸನ್ ಕೂವಕ್ಕಲ್, ಕೆ.ವಿ. ಪೋಕರಹಾಜಿ, ಬ್ಲಾಕ್ ಪಂಚಾಯತ್ ಅಧ್ಯಕ್ಷ ಕೆ.ಕೆ. ಹನೀಫಾ, ವೆಂಗಪ್ಪಲ್ಲಿ ಪಂಚಾಯತ್ ಅಧ್ಯಕ್ಷ ಜಸ್ಸರ್ ಪಾಲಕ್ಕಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದು ಮಾತನಾಡಿದರು.




