- ಹುಲಿ ಸೆರೆ ಹಿಡಿದು ಸ್ಥಳಾಂತರ ಮಾಡುವಂತೆ ಆಗ್ರಹ
- ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ – ಪರಿಶೀಲನೆ
ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಹಸುವಿನ ಮೇಲೆ ಹಾಡುಹಗಲೇ ಹುಲಿ ದಾಳಿ ನಡೆಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಣಕಲ್ ಹೋಬಳಿ ಕೊಡೆಬೈಲ್ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಲಕ್ಷ್ಮಣಗೌಡ ಎಂಬುವವರ ಹಸುವಿನ ಮೇಲೆ ಭಾನುವಾರ ಹುಲಿ ದಾಳಿ ನಡೆಸಿದೆ. ಮನೆಯ ಸಮೀಪವೇ ಇರುವ ಕೊಟ್ಟಿಯಲ್ಲಿ ಕಟ್ಟಿದ ಹಸುವಿನ ಮೇಲೆ ಹುಲಿ ದಾಳಿ ಮಾಡಿದೆ. ಹಸುವಿಗೆ ತೀವ್ರವಾಗಿ ಗಾಯಗೊಳಿಸಿದೆ.
ಗಾಯಗೊಂಡಿದ್ದ ಹಸು ತೀವ್ರ ರಕ್ತಸ್ರಾವದಿಂದ ಬಳಲಿದ್ದು, ಭಾನುವಾರ ರಾತ್ರಿ ಸಾವನ್ನಪ್ಪಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಮಹಜರು ನಡೆಸಿದ್ದಾರೆ.
“ಈ ಹಿಂದೆಯೂ ತಮ್ಮ ನಾಲ್ಕು ಹಸುಗಳು ಹುಲಿ ದಾಳಿಗೆ ಬಲಿಯಾಗಿದ್ದವು” ಎಂದು ಲಕ್ಷ್ಮಣಗೌಡ ತಿಳಿಸಿದ್ದಾರೆ.
ಬಣಕಲ್ ಹೋಬಳಿಯಾದ್ಯಂತ ಹುಲಿದಾಳಿಗೆ ನಿರಂತರವಾಗಿ ಜಾನುವಾರುಗಳು ಬಲಿಯಾಗುತ್ತಿವೆ. ಕೆಲ ದಿನಗಳ ಹಿಂದೆ ಬಿನ್ನಡಿ ಗ್ರಾಮದಲ್ಲಿ ಒಂದು ಹಸು ಹುಲಿದಾಳಿಗೆ ಬಲಿಯಾಗಿತ್ತು.
ಹುಲಿ ದಾಳಿಯನ್ನು ತಡೆಯಲು ಅರಣ್ಯ ಇಲಾಖೆ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಇಲ್ಲಿ ದಾಳಿನಡೆಸುತ್ತಿರುವ ಹುಲಿಯನ್ನು ಸೆರೆಹಿಡಿದು ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.