ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗದ ಭ್ರಷ್ಟಾಚಾರವನ್ನು ಬಯಲಿಗೆಳೆಯಲು ಮಾಹಿತಿ ಹಕ್ಕು ಕಾಯ್ದೆ-2005 ಸಾರ್ವಜನಿಕರ ಕೈಯಲ್ಲಿರುವ ಪ್ರಬಲ ಅಸ್ತ್ರ. ಇದರ ಸರಿಯಾದ ಬಳಕೆ ಕುರಿತು ಆಸಕ್ತರಿಗೆ ಶೀಘ್ರದಲ್ಲೇ ಕಾರ್ಯಾಗಾರ ನಡೆಸಲಾಗುವುದು ಎಂದು ತುಮಕೂರು ಜಿಲ್ಲಾ ಮಾಹಿತಿ ಹಕ್ಕು ಕಾರ್ಯಕರ್ತರ ವೇದಿಕೆ (ರಿ) ರಾಜ್ಯಾಧ್ಯಕ್ಷ ಹನುಮಂತರಾಯಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಕ್ಕು ಹೋರಾಟಗಾರ ಅರ್ಜುನ್ ಮುಳೆ ಅವರು ಸಿದ್ಧಪಡಿಸಿದ “ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಸಾರ್ವಜನಿಕ ಹಕ್ಕುಗಳಿಗಾಗಿ ಮಾರ್ಗದರ್ಶಿ ಕೈಪಿಡಿ”ಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ರೈತರ ಮಕ್ಕಳೆಲ್ಲ ಸೇರಿ ಈ ಸಂಸ್ಥೆಯನ್ನು ಹುಟ್ಟುಹಾಕಿದ್ದು, ಇದು ಭಾರತ ಸರ್ಕಾರದಲ್ಲಿ ನೋಂದಾಯಿತವಾಗಿದೆ. ಅಧಿಕಾರಿಗಳಿಂದ ಜನಸಾಮಾನ್ಯರಿಗೆ ಆಗುವ ತೊಂದರೆಗಳನ್ನು ನಿವಾರಿಸುವುದೇ ವೇದಿಕೆಯ ಉದ್ದೇಶ ಎಂದು ಅವರು ಹೇಳಿದರು.
“ತುಮಕೂರು ಅತಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದು. ಇಂತಹ ನಗರಗಳಲ್ಲೇ ಭ್ರಷ್ಟಾಚಾರ ಹೆಚ್ಚಾಗಿ, ಬಡವರು ಹೆಚ್ಚು ಸಂಕಷ್ಟಕ್ಕೆ ಒಳಗಾಗುತ್ತಾರೆ. ಅವರಿಗೆ ನ್ಯಾಯ ಕೊಡಿಸಬೇಕು” ಎಂದ ಅವರು, ಕಳೆದ ಎರಡು ವರ್ಷಗಳಿಂದ ವೇದಿಕೆ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದೆ ಎಂದರು. ಶಿಕ್ಷಣ, ಆರೋಗ್ಯ ಮತ್ತು ಮೂಲಭೂತ ಸೌಕರ್ಯ ವೇದಿಕೆಯ ಆದ್ಯತೆಯ ವಿಷಯಗಳಾಗಿದ್ದು, ಗ್ರಾಮೀಣ-ನಗರ ಎಂಬ ಭೇದವಿಲ್ಲದೆ ಯಾರಿಗೇ ತೊಂದರೆಯಾದರೂ ಆರ್‌ಟಿಐ ಮೂಲಕ ಮಾಹಿತಿ ಕಲೆಹಾಕಿ, ತಪ್ಪುಗಳನ್ನು ಅಧಿಕಾರಿಗಳ ಮುಂದಿಟ್ಟು, ಸಂತ್ರಸ್ತರಿಗೆ ನ್ಯಾಯ ಸಿಗುವವರೆಗೂ ಪ್ರತಿಫಲಾಪೇಕ್ಷೆಯಿಲ್ಲದೆ ಹೋರಾಡುವುದಾಗಿ ತಿಳಿಸಿದರು.
ಮಹಿಳಾ ಅಧ್ಯಕ್ಷೆ ಸುಮ ಮಾತನಾಡಿ, ವೇದಿಕೆಯ ಪ್ರಯತ್ನದಿಂದ ಚಿಕ್ಕನಾಯಕನಹಳ್ಳಿಯ ತೀರ್ಥಪುರ ಮತ್ತು ಗೋಡೆಕೆರೆ ಗ್ರಾಮ ಪಂಚಾಯಿತಿಗಳಲ್ಲಿ ಸೂರಿಲ್ಲದೆ ಪರದಾಡುತ್ತಿದ್ದ ಬಡವರಿಗೆ ಕಾನೂನುಬದ್ಧವಾಗಿ ಹಕ್ಕುಪತ್ರ ಮತ್ತು ಕುಡಿಯುವ ನೀರು ಒದಗಿಸಲಾಗಿದೆ, ಮಕ್ಕಳ ಶಿಕ್ಷಣಕ್ಕೂ ಅವಕಾಶ ಕಲ್ಪಿಸಲಾಗಿದೆ ಎಂದರು. “ಹತ್ತಾರು ವರ್ಷಗಳಿಂದ ಆಗದ ಕೆಲಸ ಕೆಲವೇ ದಿನಗಳಲ್ಲಿ ಆಯಿತು. ಮುಂದೆ ಜಿಲ್ಲಾ ಮಟ್ಟದಲ್ಲೂ ಹೋರಾಟ ರೂಪಿಸಲಾಗುವುದು” ಎಂದು ಹೇಳಿದರು.
ಜಿಲ್ಲಾಧ್ಯಕ್ಷ ನವೀನ್ ಮಾತನಾಡಿ, ಆರ್‌ಟಿಐ, ಸಕಾಲ ಮತ್ತು ಲೋಕಾಯುಕ್ತ ಕಾಯ್ದೆಗಳನ್ನು ಸಮರ್ಪಕವಾಗಿ ಬಳಸಿ ಜಡ್ಡುಗಟ್ಟಿದ ಆಡಳಿತಕ್ಕೆ ಚುರುಕು ಮುಟ್ಟಿಸಲು ವೇದಿಕೆ ಶ್ರಮಿಸುತ್ತಿದೆ ಎಂದರು. ಅಧಿಕಾರಿಗಳಿಂದ ತೊಂದರೆಯಾದರೆ ಅಥವಾ ಕಾನೂನುಬದ್ಧ ಕೆಲಸಕ್ಕೆ ವಿನಾಕಾರಣ ವಿಳಂಬ ಮಾಡಿದರೆ7021068355 ಸಂಖ್ಯೆಗೆ ಕರೆ ಮಾಡಬಹುದು. ಸಂತ್ರಸ್ತರು ಮತ್ತು ಸಂಬಂಧಿತ ಅಧಿಕಾರಿಗಳ ಮಾಹಿತಿ ಪಡೆದು, ಈ ಮೂರು ವ್ಯವಸ್ಥೆಗಳ ಮೂಲಕ ಒತ್ತಡ ತರಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಸಂಚಾಲಕ ನಟರಾಜು, ಸಹ ಸಂಚಾಲಕ ರವಿ ಎಸ್., ಮಹಿಳಾ ಉಪಾಧ್ಯಕ್ಷೆಯರಾದ ದಾಕ್ಷಾಯಣಮ್ಮ ಮತ್ತು ರವಿ ಉಪಸ್ಥಿತರಿದ್ದರು.




