ಮಾದಕದ್ರವ್ಯಗಳ ಮಾರಾಟ ಮತ್ತು ಸೇವನೆ ಕಾನೂನುಬಾಹಿರ ಅಪರಾಧವಾಗಿದ್ದು, ಅದು ವ್ಯಕ್ತಿಯ ಬದುಕಿನ ಜೊತೆಗೆ ಸಮಾಜದ ಆರೋಗ್ಯಕರ ವಾತಾವರಣಕ್ಕೂ ಗಂಭೀರ ಹಾನಿ ಉಂಟುಮಾಡುತ್ತದೆ ಎಂದು ಬೆಳಗಾವಿ ಉತ್ತರ ವಲಯದ ಪೊಲೀಸ್ ಮಹಾನಿರೀಕ್ಷಕ (ಐಜಿಪಿ) ಸಂದೀಪ ಪಾಟೀಲ್ ಹೇಳಿದರು.
ಬಾಗಲಕೋಟೆ ನಗರದ ಬಿವಿವಿ ಸಂಘದ ಎಸ್. ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಮಾದಕದ್ರವ್ಯ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, “ತಂತ್ರಜ್ಞಾನದ ಯುಗದಲ್ಲಿ ಡ್ರಗ್ಸ್ ಸೇವನೆ ಮತ್ತು ಅದರ ಜಾಲವನ್ನು ಪತ್ತೆಹಚ್ಚುವುದು ಸುಲಭವಾಗಿದ್ದು, ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಮಾನಸಿಕ ಒತ್ತಡ, ಕುತೂಹಲ ಮತ್ತು ಸ್ನೇಹಿತರ ಪ್ರಭಾವದಿಂದ ಮಾದಕದ್ರವ್ಯ ವ್ಯಸನ ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆ” ಎಂದು ಅಭಿಪ್ರಾಯಿಸಿದರು.
“ಒತ್ತಡ ನಿವಾರಣೆಗೆ ಕ್ರೀಡೆ, ಓದು, ಸಾಂಸ್ಕೃತಿಕ ಚಟುವಟಿಕೆಗಳಂತಹ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಎಲ್ಲಿಯಾದರೂ ಮಾದಕದ್ರವ್ಯ ಮಾರಾಟ ಅಥವಾ ಸೇವನೆ ಕಂಡುಬಂದರೆ ತಕ್ಷಣವೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವ ಮೂಲಕ ಸಮಾಜವನ್ನು ಈ ಕಿಡಿಗೇಡಿತನದಿಂದ ಮುಕ್ತಗೊಳಿಸಲು ಸಹಕರಿಸಬೇಕು” ಎಂದು ಕರೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೊಯಲ್ ಮಾತನಾಡಿ, “ಯುವಜನರಲ್ಲಿ ಮಾದಕದ್ರವ್ಯ ಸೇವನೆಯು ಹೆಚ್ಚುತ್ತಿರುವುದು ಚಿಂತಾಜನಕ ಸಂಗತಿ. ಆತ್ಮವಿಶ್ವಾಸದ ಕೊರತೆ ಮತ್ತು ದುಷ್ಟ ಸಹವಾಸವೂ ವ್ಯಸನಕ್ಕೆ ಪ್ರಮುಖ ಕಾರಣಗಳಾಗಿವೆ. ಶಾಲೆ ಹಾಗೂ ಕಾಲೇಜುಗಳಲ್ಲಿ ನಿರಂತರ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಗುತ್ತಿದೆ” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿವಿವಿ ವೈದ್ಯಕೀಯ ಸಂಘದ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ, “ಯುವಪೀಳಿಗೆಯನ್ನು ಮಾದಕದ್ರವ್ಯ ವ್ಯಸನದಿಂದ ರಕ್ಷಿಸಲು ಪೊಲೀಸ್ ಇಲಾಖೆ ಕೈಗೊಂಡಿರುವ ಜಾಗೃತಿ ಅಭಿಯಾನ ಶ್ಲಾಘನೀಯವಾಗಿದೆ” ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಸಾರ್ವಜನಿಕರು ಮಾದಕದ್ರವ್ಯ ಸಂಬಂಧಿತ ಮಾಹಿತಿ ಸುಲಭವಾಗಿ ಪೊಲೀಸರಿಗೆ ತಲುಪಿಸಲು ಅನುಕೂಲವಾಗುವಂತೆ ವಿಶೇಷ ಕ್ಯೂಆರ್ ಕೋಡ್‌ನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಭುವನೇಶ್ವರಿ ಯಳಮಲಿ, ಡಾ. ವಿನೋದ ಅಕ್ಕಸಾಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಡಾ. ವಿನೋದ ಅಕ್ಕಸಾಲಿ ಅವರು “ನಶಾಮುಕ್ತ ಭಾರತ” ಕುರಿತು ವಿಶೇಷ ಉಪನ್ಯಾಸ ನೀಡಿದರು.




