ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತನೂ ಪ್ರಾಮಾಣಿಕವಾಗಿ ಮತದಾರರನ್ನು ಸಂಪರ್ಕಿಸಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿಸುವ ಮೂಲಕ ಆಗ್ನೇಯ ಪದವೀಧರರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೆಮಠ್ ಅವರನ್ನು ಗೆಲ್ಲಿಸಲು ಶ್ರಮಿಸಬೇಕು ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ
ತಿಳಿಸಿದರು.
ಪಟ್ಟಣದ ಶಾಸಕರ ಗೃಹ ಕಛೇರಿಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಿದ್ದ ಆಗ್ನೇಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೆಮಠ್ ಅವರ ಪರ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಈ ಬಾರಿ ನಮ್ಮ ಅಭ್ಯರ್ಥಿ ಗೆಲ್ಲುವುದು ನಿಶ್ಚಿತ ಎಂಬ ವಿಶ್ವಾಸವಿದೆ. ಈ ಹಿಂದೆ ಗೆಲುವು ಸಾಧ್ಯವಾಗಿರಲಿಲ್ಲ. ಆದರೆ, ಈ ಬಾರಿ ಒಂದು ವರ್ಷ ಮುಂಚಿತವಾಗಿಯೇ ಅಭ್ಯರ್ಥಿ ಘೋಷಿಸಿ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹೀಗಾಗಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸಂಘಟಿತವಾಗಿ ಕೆಲಸ ಮಾಡಿದರೆ ಗೆಲುವು ಸುಲಭ ಎಂದು ತಿಳಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೆಮಠ್ ಅವರು ವಿದ್ಯಾವಂತರು, ವಿಚಾರವಂತರು ಹಾಗೂ ಉತ್ತಮ ಶೈಕ್ಷಣಿಕ ಹಿನ್ನೆಲೆ ಹೊಂದಿದ್ದಾರೆ. ತುಮಕೂರಿನಲ್ಲಿ ಯುವ ಕಾಂಗ್ರೆಸ್ ಮೂಲಕ ಕಾರ್ಯನಿರ್ವಹಿಸಿದ ಅನುಭವವೂ ಅವರಿಗಿದೆ. ಆಯ್ಕೆಯಾದರೆ ವಿಧಾನ ಪರಿಷತ್ತಿನಲ್ಲಿ ಪದವೀಧರರ ಸಮಸ್ಯೆಗಳ ಕುರಿತು ಧ್ವನಿ ಎತ್ತಿ, ಯುವಕರಿಗೆ ಹೆಚ್ಚಿನ ಅವಕಾಶ ಕಲ್ಪಿಸಲು ಶ್ರಮಿಸಲಿದ್ದಾರೆ. ಆದ್ದರಿಂದ ತಾಲ್ಲೂಕು ಪದವೀಧರರು ಅವರಿಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಈ ವೇಳೆ ಮಾತನಾಡಿದ ಅಭ್ಯರ್ಥಿ ಶಶಿ ಹುಲಿಕುಂಟೇಮಠ್, ಆಗ್ನೇಯ ಪದವಿಧರರ ಕ್ಷೇತ್ರಕ್ಕೆ ಯುವ ಅಭ್ಯರ್ಥಿ ಬೇಕೆಂದು ಕಾಂಗ್ರೆಸ್ ನಾಯಕರು ವರ್ಷದ ಹಿಂದೆಯೇ ತಮ್ಮನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದ್ದರು.ಆಗಿನಿಂದಲೂ ತಾವು ನಿರಂತರವಾಗಿ ಆಗ್ನೇಯಕ್ಷೇತ್ರ ಪ್ರವಾಸ ಮಾಡಿ ಪದವಿಧರ ಮತದಾರರನ್ನು ಮುಖತ: ಭೇಟಿ ಮಾಡಿ, ಅವರ ಬೆಂಬಲ ಕೋರಿದ್ದು, ಎಲ್ಲಾ ಕ್ಷೇತ್ರಗಳ ಶಾಸಕರು, ಮಾಜಿ ಶಾಸಕರ ಬೆಂಬಲ ಪಡೆದುಅವರೊಂದಿಗೆ ಸಂಪರ್ಕದಲ್ಲಿದ್ದು ಅವರು ತಮ್ಮ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಕ್ಷೇತ್ರದೆಲ್ಲೆಡೆ ತಮ್ಮ ಪರವಾಗಿ ಉತ್ತಮ ಬೆಂಬಲ ವ್ಯಕ್ತವಾಗಿದ್ದು ತಮ್ಮ ಗೆಲುವು ಖಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
‘ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಎಂಟು ಬಾರಿ ಬಿಜೆಪಿ, ಜೆಡಿಎಸ್ ಎರಡು ಬಾರಿ ಗೆದ್ದಿವೆ. ನನಗೆ 11 ತಿಂಗಳ ಮುಂಚೆಯೇ ಟಿಕೆಟ್ ಘೋಷಿಸಿ ಪಕ್ಷದ ಮುಖಂಡರು ಹುಮ್ಮಸ್ಸು ತುಂಬಿದ್ದಾರೆ. ಹಿಂದೆಲ್ಲಾ ಹೆಚ್ಚು ಆಸಕ್ತಿ ವಹಿಸದ ಕಾರಣ ಸೋಲು ಎದುರಾಗುತಿತ್ತು. ಆದರೆ, ಈ ಬಾರಿ ಗೆಲುವಿನ ವಿಶ್ವಾಸವಿದೆ’ ಎಂದರು.
ಶಿಕ್ಷಕರಿಗೆ ನಮ್ಮ ಸರ್ಕಾರ ‘ಟಿಆರ್’ ಬಿರುದು ಕೊಟ್ಟಿದೆ. ಅನೇಕ ಪದವೀಧರರು ಇದ್ದು, ಬಹಳಷ್ಟು ಇಲಾಖೆಗಳಲ್ಲಿ ಖಾಲಿ ಇರುವ 75 ಸಾವಿರ ಉದ್ಯೋಗ ಭರ್ತಿಗೆ ಸರ್ಕಾರ ಮುಂದಾಗಿದೆ. ಬಿಜೆಪಿ ಎರಡು ಕೋಟಿ ಉದ್ಯೋಗ ನೀಡುವ ಭರವಸೆ ನೀಡಿದ್ದು ಏನಾಯಿತು? ಎಂದು ವಾಗ್ದಾಳಿ ನಡೆಸಿದರು.
ಇದನ್ನು ಓದಿದ್ದೀರಾ..?ಕೋಲಾರ | ಟಾಟಾ ಎಲೆಕ್ಟ್ರಾನಿಕ್ಸ್ನಲ್ಲಿ ಮಹಿಳಾ ಕಾರ್ಮಿಕರ ಸಾವು: ಸಮಗ್ರ ತನಿಖೆಗೆ ಸಿಐಟಿಯು ಒತ್ತಾಯ
ಈ ಸಂದರ್ಭದಲ್ಲಿ ಚಿಮೂಲ್ ಅಧ್ಯಕ್ಷ ಮಂಜುನಾಥರೆಡ್ಡಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೇಶವರೆಡ್ಡಿ, ಗುಡಿಬಂಡೆ ಚಿಮೂಲ್ ಸದಸ್ಯ ಆದಿನಾರಾಯಣ, ಜಿ.ಎಚ್.ನಾಗರಾಜ್, ನರೇಂದ್ರ, ಕೃಷ್ಣಾರೆಡ್ಡಿ, ಮುಖಂಡರಾದ ಅಮರನಾಥರೆಡ್ಡಿ, ಗುಂಟಿಗಾನಪಲ್ಲಿ ಪಿ.ಮಂಜುನಾಥರೆಡ್ಡಿ, ಪೂಜಪ್ಪ, ಬೂರಗಮಡಗು ಲಕ್ಷ್ಮಿನರಸಿಂಹಪ್ಪ, ಎಂ.ವಿ.ಕೃಷ್ಣಪ್ಪ, ಎ.ನಂಜುಂಡ, ಚಂದ್ರಶೇಖರರೆಡ್ಡಿ, ರವಿ, (ಗೋಪಿ) ಗೋಪಾಲ್, ಶೇಖರರೆಡ್ಡಿ, ಅಶ್ವತ್ಥಪ್ಪ, ರಮೇಶ್ ಬಾಬು, ನಾರಾಯಣಸ್ವಾಮಿ, ಆಂಜನೇಯರೆಡ್ಡಿ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.






