ವಿದ್ಯಾರ್ಥಿಗಳಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ (ವಿಟಿಯು) ಮುಂದಿನ ದಿನಗಳಲ್ಲಿ ಏವಿಯೇಷನ್ ಎಂಜಿನಿಯರಿಂಗ್ ಹಾಗೂ ರೈಲ್ವೆ ಎಂಜಿನಿಯರಿಂಗ್ ಕೋರ್ಸ್‌ಗಳನ್ನು ಆರಂಭಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ತಿಳಿಸಿದರು.
ವಿಟಿಯುನ 26ನೇ ವಾರ್ಷಿಕ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ವಿಟಿಯು ದೇಶದ ಟಾಪ್-10 ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವಂತೆ ಅಗತ್ಯ ಯೋಜನೆ ರೂಪಿಸಲಾಗುವುದು. ಉದ್ಯೋಗಾಧಾರಿತ ಹಾಗೂ ಭವಿಷ್ಯದ ಬೇಡಿಕೆಗೆ ಅನುಗುಣವಾಗಿ ಹೊಸ ಕೋರ್ಸ್‌ಗಳನ್ನು ಆರಂಭಿಸಲು ಪ್ರತ್ಯೇಕ ತಜ್ಞರ ಸಮಿತಿ ರಚಿಸಲಾಗುವುದು ಎಂದರು.
ವಿಟಿಯು ಕುಲಪತಿ ಪ್ರೊ. ಎಸ್. ವಿದ್ಯಾಶಂಕರ್ ಮಾತನಾಡಿ, ಪದವಿ ಪೂರ್ಣಗೊಳಿಸಿರುವ ವಿದ್ಯಾರ್ಥಿಗಳು ಇದೀಗ ವೃತ್ತಿಪರ ಜೀವನಕ್ಕೆ ಹೆಜ್ಜೆ ಇಡುತ್ತಿದ್ದಾರೆ. ತಾವು ಗಳಿಸಿರುವ ಜ್ಞಾನವನ್ನು ಸಮಾಜದ ಅಭಿವೃದ್ಧಿ ಹಾಗೂ ವೃತ್ತಿಜೀವನದಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯದ ಜತೆಗೆ ಜವಾಬ್ದಾರಿಯೂ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಅವರು ಕೈಗೊಳ್ಳುವ ನಿರ್ಧಾರಗಳು ಅವರ ವೃತ್ತಿಜೀವನವನ್ನು ರೂಪಿಸಲಿದ್ದು, ಜ್ಞಾನ, ಕೌಶಲ್ಯ ಹಾಗೂ ಜವಾಬ್ದಾರಿಯೊಂದಿಗೆ ಮುನ್ನಡೆಯಬೇಕು ಎಂದರು.



