ಬೆಳಗಾವಿ ತಾಲೂಕಿನ ಮಚ್ಚೆ ಗ್ರಾಮದ ಕೆರೆಯಲ್ಲಿ ಗಣೇಶ ಮೂರ್ತಿ ವಿಸರ್ಜನೆಗೆ ತೆರಳಿದ್ದ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಮೃತರನ್ನು ಬೆಳಗಾವಿ ನಗರದ ಕಾಲೇಜಿನಲ್ಲಿ ಬಿಎಸ್‌ಸಿ ವ್ಯಾಸಂಗ ಮಾಡುತ್ತಿದ್ದ ವಿಶ್ವೇಶ ನಾಯಕ (20) ಎಂದು ಗುರುತಿಸಲಾಗಿದೆ.
ವಿಶ್ವೇಶ ಹಾಗೂ ಸ್ನೇಹಿತರು ಸಾರ್ವಜನಿಕ ಸ್ಥಳದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದರು. ಶುಕ್ರವಾರ ಸಂಜೆ ಗಣೇಶ ಮೂರ್ತಿ ವಿಸರ್ಜನೆಗಾಗಿ ಸ್ನೇಹಿತರೊಂದಿಗೆ ಮಚ್ಚೆ ಗ್ರಾಮದ ಕೆರೆಗೆ ತೆರಳಿದ್ದರು. ವಿಸರ್ಜನೆ ಬಳಿಕ ಸ್ನೇಹಿತರೆಲ್ಲರೂ ದಡಕ್ಕೆ ಮರಳಿದರೂ ವಿಶ್ವೇಶ ಮಾತ್ರ ಕಾಣಿಸಿಕೊಳ್ಳಲಿಲ್ಲ.
ವಿಶ್ವೇಶ ಕೆರೆಯಲ್ಲಿ ಮುಳುಗಿರುವುದು ಖಚಿತವಾದ ಬಳಿಕ ಶೋಧ ಕಾರ್ಯ ನಡೆಸಲಾಯಿತು. ಬಳಿಕ ಮೃತದೇಹವನ್ನು ಕೆರೆಯಿಂದ ಹೊರತೆಗೆಯಲಾಯಿತು.
This video cannot be played in your browser. Open the video directly
ಗಣೇಶ ಮೂರ್ತಿ ವಿಸರ್ಜನೆಯ ಸಂಭ್ರಮದಲ್ಲಿದ್ದ ಗ್ರಾಮದಲ್ಲಿ ಯುವಕನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಸೂತಕದ ಛಾಯೆ ಆವರಿಸಿತು. ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ವಿಸರ್ಜನೆಯ ಸಂಭ್ರಮ ಕ್ಷಣಾರ್ಧದಲ್ಲೇ ದುಃಖವಾಗಿ ಮಾರ್ಪಟ್ಟಿತು.
ಘಟನೆ ಕುರಿತು ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.




