ಹೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪಕ್ಕೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಸ್ಪಷ್ಟನೆ ನೀಡಿದ್ದು, ತಾವು ಯಾವುದೇ ರೀತಿಯ ಹಲ್ಲೆ ಮಾಡಿಲ್ಲ ಎಂದು ಹೇಳಿದ್ದಾರೆ.
ಬೆಳಗಾವಿಯ ಕುವೆಂಪುನಗರದ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ರೈತರು ಹಾಗೂ ಕ್ರಷರ್ ಮಾಲೀಕರು ತಮ್ಮನ್ನು ಭೇಟಿ ಮಾಡಿ ಸಮರ್ಪಕ ವಿದ್ಯುತ್ ಪೂರೈಕೆಯಾಗುತ್ತಿಲ್ಲ, ಟ್ರಾನ್ಸ್‌ಫಾರ್ಮ‌್ರಗಳು ಸುಟ್ಟುಹೋಗಿವೆ ಎಂಬ ಸಮಸ್ಯೆಗಳನ್ನು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಹೆಸ್ಕಾಂ ಸಿಬ್ಬಂದಿಯನ್ನು ಕರೆಸಿ ಸಮಸ್ಯೆ ಕುರಿತು ಚರ್ಚಿಸಲಾಗಿತ್ತು ಎಂದರು.
ಕೆಲ ದಿನಗಳ ಹಿಂದೆ ಬಾಳೆಕುಂದರಗಿ ಬಳಿ ರೈತರು ಪ್ರತಿಭಟನೆ ನಡೆಸಿದ್ದರು. ಕ್ರಷರ್‌ಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದ ವಿಚಾರವಾಗಿ ಸಿಬ್ಬಂದಿಯನ್ನು ಕರೆಸಿ, ಮೊದಲು ನೋಟಿಸ್ ನೀಡಿ ನಂತರ ಸಂಪರ್ಕ ಕಡಿತಗೊಳಿಸುವಂತೆ ತಿಳಿಸಿದ್ದಾಗಿ ಹೇಳಿದರು.
ಹೆಸ್ಕಾಂ ಸಿಬ್ಬಂದಿಗೆ ಬುದ್ಧಿವಾದ ಹೇಳಿದ್ದು ನಿಜ. ಆದರೆ ಯಾವುದೇ ರೀತಿಯ ಹಲ್ಲೆ ಮಾಡಿಲ್ಲ. ನನ್ನ ರಾಜಕೀಯ ಜೀವನದಲ್ಲಿ ಯಾವುದೇ ಅಧಿಕಾರಿ ಅಥವಾ ಸಾಮಾನ್ಯ ಜನರಿಗೆ ಬೈದಿಲ್ಲ. ಅಸಂವಿಧಾನಿಕ ಪದಗಳನ್ನೂ ಬಳಸಿಲ್ಲ,” ಎಂದು ಚನ್ನರಾಜ ಹಟ್ಟಿಹೊಳಿ ಸ್ಪಷ್ಟಪಡಿಸಿದರು.
ಸುಮಾರು 50ರಿಂದ 60 ಜನರ ಸಮ್ಮುಖದಲ್ಲೇ ಮಾತುಕತೆ ನಡೆದಿತ್ತು. ಸಮಸ್ಯೆ ಕುರಿತು ಬುದ್ಧಿವಾದ ಹೇಳುವುದು ತಪ್ಪೇ? ಎಂದು ಪ್ರಶ್ನಿಸಿದ ಅವರು, ಸಿಬ್ಬಂದಿಯ ಮನಸ್ಸಿಗೆ ನೋವಾಗಿದ್ದರೆ ತಮ್ಮೊಂದಿಗೆ ಮಾತನಾಡಬೇಕಿತ್ತು ಎಂದರು.
“ನಮ್ಮನ್ನು ಭೇಟಿ ಮಾಡಲು ಬಂದವರ ಸಮಸ್ಯೆ ಕುರಿತು ಮಾತನಾಡಲು ಸಿಬ್ಬಂದಿಯನ್ನು ಕರೆದಿದ್ದು ನಿಜ. ಆದರೆ ಹಲ್ಲೆ ಮಾಡಿಲ್ಲ. ಮಾಡಿರುವ ಆರೋಪ ಶುದ್ಧ ಸುಳ್ಳು,” ಎಂದು ಹೇಳಿದರು.
ಹೆಸ್ಕಾಂ ಸಿಬ್ಬಂದಿಯೊಂದಿಗೆ ಕುಳಿತು ಮಾತನಾಡಲು ತಾವು ಸಿದ್ಧರಿದ್ದು, ಈ ಕುರಿತು ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸುವುದಾಗಿ ಚನ್ನರಾಜ ಹಟ್ಟಿಹೊಳಿ ತಿಳಿಸಿದರು.



