ರಂಗಭೂಮಿ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಲು ಇಚ್ಛಾಶಕ್ತಿ, ಬದ್ಧತೆ ಹಾಗೂ ಸಾಂಸ್ಕೃತಿಕ ಹೊಣೆಗಾರಿಕೆ ಅಗತ್ಯ. ಸಮಾಜದ ಜಡತ್ವವನ್ನು ಕಳೆಯಲು ಚಲನಶೀಲತೆ ಬೇಕಿದ್ದು, ಆ ಚಲನಶೀಲತೆಗೆ ಸಂಸ್ಕೃತಿ ಕೀಲೆಣ್ಣೆಯಂತೆ ಕಾರ್ಯನಿರ್ವಹಿಸುತ್ತದೆ ಎಂದು ನಾಟಕಕಾರ ಹಾಗೂ ಚಿಂತಕ ಕೋಟಗಾನಹಳ್ಳಿ ರಾಮಯ್ಯ ಹೇಳಿದರು.
ನಗರದಲ್ಲಿ ನಿರಂತರ ಫೌಂಡೇಶನ್ ವತಿಯಿಂದ ಇಂದಿರಾ ನಾಯರ್ ಹಾಗೂ ಗಂಗಾಧರಸ್ವಾಮಿ ಅವರ ಸ್ಮರಣಾರ್ಥ ಆಯೋಜಿಸಿರುವ ಸಹಜರಂಗೋತ್ಸವದ ಎರಡನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿರಂತರ ರಂಗತಂಡ ಹಲವು ವರ್ಷಗಳಿಂದ ತಮ್ಮ ಪರಿಚಯದಲ್ಲಿದ್ದು, ಇದು ಕೇವಲ ರಂಗತಂಡವಲ್ಲ. ಚಿಂತನಾ ಪ್ರಧಾನ ಸಾಂಸ್ಕೃತಿಕ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿರುವುದು ಇದರ ವಿಶೇಷತೆ ಎಂದರು.
ಸಮಾನತೆ, ಜನಪರ ಚಿಂತನೆ ಹಾಗೂ ಸಾಂಸ್ಕೃತಿಕ ಹೊಣೆಗಾರಿಕೆಯನ್ನು ಮನಗಂಡು ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ. ರಂಗಭೂಮಿಯ ಚಟುವಟಿಕೆಗಳನ್ನು ನಿರಂತರವಾಗಿ ಮುಂದುವರಿಸುವುದು ಸುಲಭದ ಕೆಲಸವಲ್ಲ. ಇಂತಹ ಪ್ರಯತ್ನಗಳ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಅಗತ್ಯವಾದ ಹೊಸ ಪ್ರಯೋಗಗಳು ನಡೆಯಬೇಕು ಎಂದು ಹೇಳಿದರು.
ನಿರಂತರತೆಯ ಮಹತ್ವವನ್ನು ಸಾರುವ ಜನಪದ ಕಥೆಯನ್ನು ಪ್ರಸ್ತಾಪಿಸಿದ ಅವರು, ಬರಗಾಲದಲ್ಲೂ ರೈತನೊಬ್ಬ ತನ್ನ ಹೊಲವನ್ನು ಉಳುತ್ತಲೇ ಇದ್ದ. ‘ನಾನು ನನ್ನ ಕಸುಬನ್ನು ಅಭ್ಯಾಸ ಮಾಡದಿದ್ದರೆ ಮರೆತುಬಿಡುತ್ತೇನೆ’ ಎಂಬ ಆತನ ಮಾತು ಕೇಳಿದ ಮೋಡಗಳು, ‘ನಾವು ಮಳೆ ಸುರಿಸದಿದ್ದರೆ ನಮ್ಮ ಕೆಲಸವನ್ನೇ ಮರೆತುಬಿಡುತ್ತೇವೆ’ ಎಂದು ಮಳೆ ಸುರಿಸಿದವು. ಇದೇ ನಿರಂತರತೆಯ ನಿಜವಾದ ಭರವಸೆ ಎಂದು ವಿವರಿಸಿದರು.
ಇಂದಿನ ತಲ್ಲಣದ ಕಾಲಘಟ್ಟದಲ್ಲಿ ರಂಗಭೂಮಿ ವರ್ತಮಾನವನ್ನು ಎದುರಿಸುವ ಹಲವು ತಂತ್ರಗಳನ್ನು ಅಳವಡಿಸಿಕೊಳ್ಳಬೇಕಿದೆ. ‘ಮಿಡ್ ಸಮ್ಮರ್ ನೈಟ್ಸ್ ಡ್ರೀಮ್’ ಹಾಗೂ ‘ಜಾತ್ರೆ’ಯಂತಹ ನಾಟಕಗಳು ಸಮಕಾಲೀನ ಸಂದರ್ಭವನ್ನು ಎದುರಿಸುವ ಪ್ರಯತ್ನಗಳಾಗಿವೆ. ಸಹಜ ರಂಗಭೂಮಿಯ ಪ್ರಯೋಗಗಳು ಇನ್ನಷ್ಟು ವಿಸ್ತಾರಗೊಳ್ಳಲಿ ಎಂದು ಆಶಿಸಿದರು.
ರೈತ ಮುಖಂಡ ಹೊಸಕೋಟೆ ಬಸವರಾಜು ಮಾತನಾಡಿ, ನಿರಂತರ ರಂಗತಂಡದ ಮೂರು ದಶಕಗಳ ಪಯಣ ಕೇವಲ ರಂಗಭೂಮಿ ಚಟುವಟಿಕೆಯಲ್ಲ; ಅದು ಸಮಾಜಮುಖಿ ಚಿಂತನೆ ಹಾಗೂ ಸಾಮಾಜಿಕ ಹೊಣೆಗಾರಿಕೆಯ ಪಯಣವಾಗಿದೆ. ನಾಟಕ ಮತ್ತು ಕಲೆಗಳು ಯುವಜನರಲ್ಲಿ ಚಿಂತನೆ, ಮಾನವೀಯತೆ ಹಾಗೂ ಸಾಮಾಜಿಕ ಬದ್ಧತೆಯನ್ನು ಬೆಳೆಸುವ ಶಕ್ತಿಯನ್ನು ಹೊಂದಿವೆ. ಹಿಂದಿನ ನಾಟಕಗಳು ಹಾಗೂ ಚಲನಚಿತ್ರಗಳು ಸಮಾಜದಲ್ಲಿ ಬದಲಾವಣೆ ಮತ್ತು ಮೌಲ್ಯಗಳನ್ನು ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವು. ಇಂದಿನ ಸಂದರ್ಭದಲ್ಲಿ ಆ ಜವಾಬ್ದಾರಿ ಮತ್ತಷ್ಟು ಅಗತ್ಯವಾಗಿದೆ ಎಂದು ಹೇಳಿದರು. ಮೈಸೂರಿನ ಸಾಂಸ್ಕೃತಿಕ ಪರಂಪರೆಯಲ್ಲಿ ನಿರಂತರ ಫೌಂಡೇಶನ್ ಸಮಾಜದ ನೋವು, ಹೋರಾಟ ಹಾಗೂ ವಾಸ್ತವಗಳನ್ನು ರಂಗದ ಮೂಲಕ ಜನರಿಗೆ ತಲುಪಿಸುತ್ತಿದೆ. ಈ ಸಮಾಜಮುಖಿ ಪಯಣ ನಿರಂತರವಾಗಿ ಮುಂದುವರಿಯಲಿ ಎಂದು ಆಶಿಸಿದರು.
ನಿರಂತರ ಫೌಂಡೇಶನ್ ಅಧ್ಯಕ್ಷ ಸುಗುಣ ಮಾತನಾಡಿ, ಸಮಾಜ ಜಡವಾದಾಗ ಸಾಂಸ್ಕೃತಿಕ ಹಾಗೂ ರಂಗಭೂಮಿ ಅಭಿವ್ಯಕ್ತಿಗಳ ಮೂಲಕವೇ ಚಲನಶೀಲತೆ ತರಲು ಸಾಧ್ಯ. ರಂಗಭೂಮಿಯಲ್ಲಿನ ‘ಪರಕಾಯ ಪ್ರವೇಶ’ ಎಂದರೆ ಸಮಾಜ ಮತ್ತು ನಮ್ಮ ಅಸ್ತಿತ್ವವನ್ನು ಅರಿಯುವ ಪ್ರಕ್ರಿಯೆ. ಪ್ರಭುತ್ವದ ಓಲೈಕೆಯಿಂದ ಹೊರಬಂದು ಸಂಸ್ಕೃತಿ ಹಾಗೂ ಚಿಂತನೆಗಳನ್ನು ಜೀವಂತವಾಗಿಡುವುದು ನಮ್ಮ ಉದ್ದೇಶವಾಗಿದೆ ಎಂದರು.
ನಿರಂತರ ಫೌಂಡೇಶನ್ ಕಳೆದ ಮೂರು ದಶಕಗಳಿಂದ ರಂಗಭೂಮಿಯಲ್ಲಿ ಸಕ್ರಿಯವಾಗಿದೆ. ಹೊಸ ತಲೆಮಾರಿನ ಯುವಕರ ಆಲೋಚನೆ, ತಲ್ಲಣ ಹಾಗೂ ಅಭಿವ್ಯಕ್ತಿಗಳನ್ನು ಅರ್ಥೈಸಿಕೊಳ್ಳುವ ಉದ್ದೇಶದಿಂದ ‘ಸಹಜ ರಂಗ’ ಪ್ರಯೋಗವನ್ನು ಆರಂಭಿಸಲಾಗಿದೆ. ಈ ಬಾರಿ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರೊಂದಿಗೆ ‘ಮಿಡ್ ಸಮ್ಮರ್ ನೈಟ್ಸ್ ಡ್ರೀಮ್’ ಹಾಗೂ ಬೇಂದ್ರೆಯವರ ‘ಜಾತ್ರೆ’ ನಾಟಕಗಳನ್ನು ಪ್ರದರ್ಶಿಸಲಾಗಿದೆ ಎಂದು ತಿಳಿಸಿದರು.
ಈ ವಿಶೇಷ ವರದಿ ಓದಿದ್ದೀರಾ? SIR: ಕೊಡಗಿನ ಬ್ಯಾಡಗೊಟ್ಟದಲ್ಲಿ 66 ಮುಸ್ಲಿಂ ಮತಗಳ ಅಳಿಸುವಿಕೆಗೆ Form-7 ಅರ್ಜಿ
ಕಾರ್ಯಕ್ರಮದ ಬಳಿಕ ನಿರಂತರದ ಸಹಜರಂಗ ವಿದ್ಯಾರ್ಥಿಗಳು ಅಭಿನಯಿಸಿದ ಬೇಂದ್ರೆಯವರ ‘ಜಾತ್ರೆ’ ನಾಟಕವು ತುಂಬಿದ ರಂಗಮಂದಿರದಲ್ಲಿ ಪ್ರದರ್ಶನಗೊಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.




