ಇ-20 ಪೆಟ್ರೋಲ್ (ಎಥೆನಾಲ್ ಮಿಶ್ರಿತ ಪೆಟ್ರೋಲ್) ಬಳಕೆಯನ್ನು ವಿರೋಧಿಸಿ, ಸಾರ್ವಜನಿಕರ ಸಹಿಯುಳ್ಳ ಲಕ್ಷಾಂತರ ಅರ್ಜಿಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಿಸಲು ತಮ್ಮ ಬೆಂಬಲಿಗರೊಂದಿಗೆ ತೆರಳುತ್ತಿದ್ದ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಅವರನ್ನು ದೆಹಲಿ ಪೊಲೀಸರು ಮಂಗಳವಾರ ಮಾರ್ಗಮಧ್ಯೆ ತಡೆದಿದ್ದಾರೆ.
ಪ್ರಧಾನಿ ನಿವಾಸದತ್ತ ಸುಮಾರು 100 ಜನರೊಂದಿಗೆ ಮೆರವಣಿಗೆಯಲ್ಲಿ ಹೊರಟಿದ್ದ ಕೇಜ್ರಿವಾಲ್ ಅವರನ್ನು ಪೊಲೀಸರು ತಡೆದಾಗ, “ನಾವೇನು ಉಗ್ರರಲ್ಲ, ಇ-20 ಇಂಧನ ವಿಚಾರವಾಗಿ ಪ್ರಧಾನಿ ಮೋದಿಯವರನ್ನು ಭೇಟಿಯಾಗಬೇಕಿದೆ. ದಯವಿಟ್ಟು ಅವರಿಗೆ ಮಾಹಿತಿ ನೀಡಿ,” ಎಂದು ಪೊಲೀಸರಿಗೆ ಮನವಿ ಮಾಡಿದರು.
ಈ ಕುರಿತು ಮಾತನಾಡಿದ ಎಎಪಿ ದೆಹಲಿ ಘಟಕದ ಮುಖ್ಯಸ್ಥ ಸೌರಭ್ ಭಾರದ್ವಾಜ್, “ಜನರು ಲಕ್ಷಾಂತರ ಅರ್ಜಿಗಳೊಂದಿಗೆ ಇಲ್ಲಿಗೆ ಬಂದಿದ್ದಾರೆ. ನಾವು ಪ್ರಧಾನಿಯವರಿಗೆ ಈ ಅರ್ಜಿಗಳನ್ನು ನೀಡಿ, ಎಥೆನಾಲ್ ಕುರಿತು ಮುಕ್ತ ಚರ್ಚೆ ನಡೆಸಲು ಬಯಸಿದ್ದೇವೆ. ಈ ವಿಚಾರವಾಗಿ ಅರವಿಂದ್ ಕೇಜ್ರಿವಾಲ್ ಅವರು ಪ್ರಧಾನಿಗೆ ಪತ್ರವನ್ನೂ ಬರೆದಿದ್ದರು, ಹಲವು ಬಾರಿ ಪತ್ರಿಕಾಗೋಷ್ಠಿಗಳಲ್ಲೂ ಒತ್ತಾಯಿಸಿದ್ದರು. ಆದರೆ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ನಾವೇ ಖುದ್ದಾಗಿ ಭೇಟಿಯಾಗಲು ಬಂದಿದ್ದೇವೆ,” ಎಂದರು. ಆದರೆ, ಈ ಮೆರವಣಿಗೆಗೆ ಯಾವುದೇ ಪೂರ್ವಾನುಮತಿ ಪಡೆದಿರಲಿಲ್ಲ ಎಂದು ಪೊಲೀಸ್ ಮೂಲಗಳು ಸ್ಪಷ್ಟಪಡಿಸಿವೆ.
ಕೇಂದ್ರ ಸರ್ಕಾರದ ಶೇ. 20ರಷ್ಟು ಎಥೆನಾಲ್ ಮಿಶ್ರಣದ ನೀತಿಯು ಹಸಿರು ಇಂಧನ ಗುರಿಗಳಿಗಿಂತ ಹೆಚ್ಚಾಗಿ ಅಂತಾರಾಷ್ಟ್ರೀಯ ವ್ಯಾಪಾರ ಒಪ್ಪಂದಗಳ ಒತ್ತಡಕ್ಕೆ ಮಣಿದು ತೆಗೆದುಕೊಂಡ ನಿರ್ಧಾರವಾಗಿದೆ ಎಂದು ಕೇಜ್ರಿವಾಲ್ ಗಂಭೀರ ಆರೋಪ ಮಾಡಿದ್ದಾರೆ. ಭಾರತೀಯ ವಾಹನ ಸವಾರರು ದುಬಾರಿ ಬೆಲೆ ಕೊಟ್ಟು ಪೆಟ್ರೋಲ್ ಖರೀದಿಸುತ್ತಿದ್ದಾರೆ. ಆದರೆ, ಎಥೆನಾಲ್ ಮಿಶ್ರಣದಿಂದ ವಾಹನದ ಮೈಲೇಜ್ ಕಡಿಮೆಯಾಗುವುದರ ಜೊತೆಗೆ ಇಂಜಿನ್ ಬೇಗ ಹಾಳಾಗುತ್ತಿದೆ. ಇಷ್ಟೆಲ್ಲಾ ಗುಪ್ತ ನಷ್ಟಗಳಿದ್ದರೂ, ಸಾರ್ವಜನಿಕರಿಗೆ ಒಂದು ರೂಪಾಯಿ ರಿಯಾಯಿತಿಯನ್ನೂ ನೀಡದೆ ವಂಚಿಸಲಾಗುತ್ತಿದೆ ಎಂದು ಅವರು ದೂರಿದ್ದಾರೆ.
ಕಳೆದ ತಿಂಗಳು ಪ್ರಧಾನಿಗೆ ಪತ್ರ ಬರೆದಿದ್ದ ಕೇಜ್ರಿವಾಲ್, ಪೆಟ್ರೋಲ್ ಬಂಕ್‌ಗಳಲ್ಲಿ ‘ಶುದ್ಧ ಪೆಟ್ರೋಲ್’ ಹಾಗೂ ‘ಇ-20 ಪೆಟ್ರೋಲ್’ – ಎರಡೂ ಆಯ್ಕೆಗಳನ್ನು ಗ್ರಾಹಕರಿಗೆ ಒದಗಿಸುವಂತೆ ಮತ್ತು ಎಥೆನಾಲ್ ಮಿಶ್ರಿತ ಪೆಟ್ರೋಲ್ ಬೆಲೆಯನ್ನು ಇಳಿಕೆ ಮಾಡುವಂತೆ ಒತ್ತಾಯಿಸಿದ್ದರು. “ಪತ್ರಕ್ಕೆ ಯಾವುದೇ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ನಾವೇ ಖುದ್ದಾಗಿ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದೇವೆ. 2 ಲಕ್ಷಕ್ಕೂ ಹೆಚ್ಚು ಮಂದಿ ನಮ್ಮ ಅಭಿಯಾನದಲ್ಲಿ ಸಹಿ ಮಾಡಿದ್ದಾರೆ ಹಾಗೂ ಇತ್ತೀಚೆಗೆ ಆಯೋಜಿಸಿದ್ದ ‘ಎಥೆನಾಲ್ ಟೌನ್‌ಹಾಲ್’ ಕೂಡ ಭಾರಿ ಯಶಸ್ವಿಯಾಗಿದೆ” ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.




