ಜಯಶ್ರೀ ದಿವಾಕರ್ ಅವರ ಕತೆ | ನೆಲೆ ಕಾಣದ ನೆರಳು

Date:

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.

ರಾತ್ರಿಯಿಡೀ ನಿದ್ದೆಯಿಲ್ಲದೆ ಹೊರಳಾಡಿ ಹೊರಳಾಡಿ ಅದೇ ಆಗ ತಾನೇ ಹತ್ತಿದ್ದ ನಸುಕಿನ ಸಣ್ಣ ಮಂಪರಿನಲ್ಲಿ ಶ್ರೀಕಂಠಣ್ಣ ಬೆಂಗಳೂರಿಗೆ ಬಂದಾಗ ಅಂದ ಮಾತು, ಗೇರುಸೊಪ್ಪು ಗುಡ್ಡದ ಹೊಲೆಯರ ಗುಡಿಯಲ್ಲಿ ಕೂಗಿದ ಕೋಳಿಯ ಕೂಗಿನಂತೆ ಕ್ಷೀಣವಾಗಿ, ಕನಸಿನ ಹಾಗೆ ಬಂದು ತಟ್ಟಿದಾಗ, ಕೇಸಲೂರಿಗೆ ಬಂದು ಎರಡು ದಿನವಾದರೂ ಇನ್ನೂ ಕಂಡಿರದ ಸಾವಿತ್ರತ್ತೆಯ ನೆನಪಾಯಿತು.

- Advertisement -

ಅದೇ ಕಾರಣವಾಗಿ ಬಂದವಳು ಇನ್ನೂ ಅವರ ಮನೆ ಕಡೆ ಹೋಗಿಲ್ಲದರ ಅರಿವಾಗಿ, ಇಂದಾದರೂ ಸಾವಿತ್ರತ್ತೆಯನ್ನು ಕಾಣಬೇಕು ಎನ್ನುವ ನಿರ್ಧಾರದಿಂದ ಕಣ್ಣು ಬಿಟ್ಟು ಅಟ್ಟದ ಸುತ್ತ ಕಣ್ಣಾಡಿಸಿದೆ. ಇನ್ನೂ ಚುಮುಚುಮು ನಸುಕು. ಮರದ ಸರಳಿನ ತೆರೆದ ಕಿಡಕಿಕಂಡಿಯಲ್ಲಿ ಇಣುಕಿದರೆ ಹೊರಗೆ, ಇದೀಗ ಅರಳುತ್ತಿದ್ದ ಬೆಳಕಿನಲ್ಲಿ ದೈತ್ಯಾಕಾರವಾಗಿ ಕಪ್ಪಗೆ ಬೆಳೆದು ಅಷ್ಟಗಲ ಹರಡಿ ನಿಂತಂತೆ ಕಾಣುವ ಹಲಸಿನ ಮರ. ಹಿತ್ತಿಲ ಗಿಡದಲ್ಲಿ ಕೂತು, ಬೆಳಗಿನ ಸಂಭ್ರಮವನ್ನಾಚರಿಸುತ್ತಿರುವ ಕಾಜಾಣದ್ದೋ ಬೆಳ್ಳಕ್ಕಿಯದೋ ಕೆಂಬೂತದ್ದೋ ಬಿಟ್ಟೂ ಬಿಟ್ಟೂ ಬರುವ ಗೊಟರ್ ಗೊಟರ್ ಗೋ…ರ್. ಆಗಲೇ ಎದ್ದು ಹಿಂದುಗಡೆ ಕೊಟ್ಟಿಗೆಯಲ್ಲಿ ಹಾಲು ಕರೆಯುತ್ತಿರುವ ಅತ್ತಿಗೆ; ಕೌಳಿಗೆಗೆ ಹಾಲು ಬೀಳುತ್ತಿರುವ ಚರ್‍ರ್ ಚರ್‍ರ್ ಸಪ್ಪಳ; ಬಚ್ಚಲು ಮನೆ ಒಲೆಗೆ ಯಾರೋ ಬೆಂಕಿಯೂಡಿರಬೇಕು- ಮೂಗಿಗೆ ಬಡಿದ ಸುಟ್ಟ ಅಡಿಕೆಸಿಪ್ಪೆಯ, ದರಗಿನ ಕರಕಲು ವಾಸನೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಕರಾವಳಿ ಕಾಂಗ್ರೆಸ್‌ಗೆ ಬೂಸ್ಟ್ ನೀಡಿದ ಸಚಿವ ಸಂಪುಟ ಸಭೆ:...

ಕೇವಲ ಯೋಜನೆಗಳ ಘೋಷಣೆಯಾದರೆ ಸಾಲದು; ಅನುದಾನ ಬಿಡುಗಡೆಯಾಗಬೇಕು, ಟೆಂಡರ್ ಪ್ರಕ್ರಿಯೆ ಮುಗಿದು ಕಾಮಗಾರಿಗಳು ನೆಲಮಟ್ಟದಲ್ಲಿ ಆರಂಭವಾಗಬೇಕು. ಕೆಲಸ ವಿಳಂಬವಾದರೆ ಜನರಲ್ಲಿ ನಿರಾಸೆ ಮೂಡುವುದು ಖಂಡಿತ. ಈ ರಾಜಕೀಯ ಲಾಭವು ಚುನಾವಣೆಯಲ್ಲಿ ಮತಗಳಾಗಿ ಬದಲಾಗಬೇಕಾದರೆ,...

ಅಸ್ಸಾಂ, ಬಿಹಾರ ಕತ್ತಲಲ್ಲಿ ಮುಳುಗಿದಾಗ ಮೋದಿಗೆ ‘ಆಶೀರ್ವಾದ್ ಕಾ...

ದೆಹಲಿಯಲ್ಲಿ ಕಟ್ಟಡ ಕುಸಿದು ವಿದ್ಯಾರ್ಥಿಗಳು ಹೆಣವಾದಾಗ, ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಆಘಾತಗೊಂಡು ಎಳೆ ಜೀವಗಳು ಸಾವಿನ ದಾರಿ ಹಿಡಿದಾಗ, ತಮ್ಮ ಹಕ್ಕುಗಳಿಗಾಗಿ ದೇಶದ ಯುವಜನ ಬೀದಿಗಿಳಿದಾಗ, ಕೊನೆಗೆ ನೈಸರ್ಗಿಕ ವಿಕೋಪದಿಂದ ದೇಶದ ಜನ...

ಚುನಾವಣಾ ಕಳ್ಳತನ: ಎದುರಾಳಿಗಳೇ ಮಾಯವಾದರೆ! ನಂದಿಗ್ರಾಮದ ಟ್ರೇಲರ್ –...

ಮತದಾನಕ್ಕೂ ಮುನ್ನ ಎದುರಾಳಿಯೇ ಕಣದಿಂದ ಮಾಯವಾದರೆ, ಅದನ್ನು ಚುನಾವಣೆ ಎನ್ನಬಹುದೇ? ನಂದಿಗ್ರಾಮದ ಬೆಳವಣಿಗೆಗಳು 2027ರ ಉತ್ತರ ಪ್ರದೇಶ ಚುನಾವಣೆಗೂ ಗಂಭೀರ ಸವಾಲು ಒಡ್ಡುವಂತಿವೆ ಪಶ್ಚಿಮ ಬಂಗಾಳದ ನಂದಿಗ್ರಾಮ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ. ನಂದಿಗ್ರಾಮದ...

ಎಂದೋ ಮರೆತ ಊರು! ಐದು ವರ್ಷದ ಹಿಂದೆ ಅಪ್ಪಯ್ಯ ಸತ್ತಾಗ, ಹದಿನೈದು ದಿನ ಉಳಿಯುವ ಹಾಗೆ ಕೇಸಲೂರಿಗೆ ಬಂದಿದ್ದೆ ಅಷ್ಟೆ. ಅಪ್ಪಯ್ಯ ಸತ್ತು ವರ್ಷವಾಗುವದರೊಳಗೆ ಅದೇ ಕೊರಗಿನಲ್ಲಿ ಅಮ್ಮ ತೀರಾ ಮಂಕಾಗಿ ಹೋಗಿದ್ದಳು. ಯಾರೊಡನೆಯೂ ಮೊದಲಿನ ಉತ್ಸಾಹದಿಂದ ವರ್ತಿಸದೆ ಸದಾ ಮೂಲೆ ಹಿಡಿದು ಕೂತ ಇವಳು ಕೇಸಲೂರಿನಲ್ಲಿ ಉಳಿದರೆ ಹಳೇ ನೆನಪಿನಿಂದ ಇನ್ನಷ್ಟು ಜರ್ಜರಿತಳಾಗಬಹುದೆಂದು ತಿಳಿದ ನನ್ನ ಕೊನೆಯಣ್ಣ ಸೀನಣ್ಣ, ಶಿವಮೊಗ್ಗದಲ್ಲಿ ಮನೆ ಹೂಡಿ ಅಮ್ಮನನ್ನು ಕರೆಸಿಕೊಂಡಿದ್ದ. ಸೀನಣ್ಣನ ಜೊತೆ ನೆಲೆಸಿದ ಮೇಲೆ ಬಾಲ್ಯದ ಕೇಸಲೂರು ನನಗೂ ಅಪರೂಪವಾಗಿತ್ತು. ಹಬ್ಬ ಹರಿದಿನಗಳಲ್ಲಿ ವಿಶೇಷ ಸಮಾರಂಭಗಳಲ್ಲಿ ನಾನೂ, ಇವರೂ, ಮಕ್ಕಳೂ, ಅಮ್ಮ-ಸೀನಣ್ಣ-ಅತ್ತಿಗೆ ಅವನ ಮಕ್ಕಳೂ ಎಲ್ಲಾ ಒಟ್ಟಿಗೆ ದಂಡುಗೂಡಿ ಇಲ್ಲಿಗೆ ಬಂದು ನಾಲ್ಕು ದಿನ ಗಲಗಲ ಮಾಡಿ ಹೋದದ್ದು ಬಿಟ್ಟರೆ, ಹೀಗೆ ಏಕಾಏಕಿ ನಾನು ಬಂದದ್ದು ಇದೇ ಮೊದಲು.

ಇದನ್ನು ಓದಿದ್ದೀರಾ?: ನೇಮಿಚಂದ್ರ ಅವರ ಕತೆ | ಹೊಸ ಹುಟ್ಟು

ರಾತ್ರಿ ಸುಮಾರು ಹೊತ್ತು ನಿದ್ದೆ ಬಂದಿರಲಿಲ್ಲ. ಅಟ್ಟದಲ್ಲಿ ಗುಂಯೀ ಎನ್ನುವ ಕತ್ತಲು; ನೆಟ್ಟಗೆ ನಿಂತರೆ ತಲೆಗೆ ತಾಗುವಷ್ಟು ಕುಳ್ಳಗಿನ ಮಾಡಿನಲ್ಲಿ ತೊಲೆಗೆ ನೇತುಬಿಟ್ಟ ಗದ್ದೆ ಸೌತೇಕಾಯಿ, ಬಾಳೆ ಹಗ್ಗದ ಬಟ್ಟಲಲ್ಲಿ ಭದ್ರವಾಗಿ ಕೂತ ಅವು ಒಂದಕ್ಕೊಂದು ತಾಗಿ ಕರಕರ ಸದ್ದು ಮಾಡಿದಾಗ ಎಂಥದೋ ಹೆದರಿಕೆ; ಕಿಡಕಿಕಂಡಿಯಲ್ಲಿ ಮಬ್ಬಾಗಿ ಕಂಡ ಪಕ್ಕದ ಕಣ; ಕಣದ ಮಧ್ಯೆ ಗುಪ್ಪೆಯಾಗಿ ಪೇರಿಸಿಟ್ಟ ಹುಲ್ಲಿನ ಮೆದೆಯ ಸುತ್ತಮುತ್ತಲಿನ ಕತ್ತಲಲ್ಲಿ ಮಿಣುಕು ಹುಳುಗಳು ಮಿಣಿ ಮಿಣಿ ಮಿಂಚಿದಾಗ, ಮನಸ್ಸಿನ ಮೂಲೆಯಲ್ಲೆಲ್ಲೋ ಎಚ್ಚೆತ್ತ ಬಾಲ್ಯದಲ್ಲಿ ಕೇಳಿದ ಕೊಳ್ಳಿದೈವದ ಕತೆಗಳು… ಮಾಲತೀ ನದಿ ಬುಡದಲ್ಲಿ ಬಿಕೊ ಎಂದು ಹಾಳು ಸುರಿಯುವ ಸಾವಿತ್ರತ್ತೆಯ ದೊಡ್ಡ ಮನೆ; ಹೊರಗೆ ಅಷ್ಟಾಗಿ ಕಾಣಿಸದೆ ಒಳಚೌಕಿಯಲ್ಲೇ ವಾಸಿಸುತ್ತಿರುವ ಎಂಭತ್ತರ ಹರೆಯದ, ನಾ ಎಂದೋ ಕಂಡ ಸಾವಿತ್ರತ್ತೆಯ ಮಾಸಲು ರೂಪ ಎಲ್ಲಾ ಒಂದಕ್ಕೊಂದು ಕೊಂಡಿ ಬೆಸೆದುಕೊಂಡು ಬಂದು, ಐದು ವರ್ಷದಲ್ಲಿ ಸಂಪೂರ್ಣ ಮರೆತ ಬದುಕು ನಿದ್ದೆ ಹತ್ತದ ಕಣ್ಣ ಮುಂದೆ ತಕಪಕ ಕುಣಿಯಲು ಶುರುಮಾಡಿತ್ತು. ಇವೆಲ್ಲದರ ಜೊತೆಗೆ ಕಳ್ಳ ಹೆಜ್ಜೆಯಲ್ಲಿ ಮೆಟ್ಟಲೇರಿ ಬಂದು, ಮಧ್ಯರಾತ್ರಿಯಲ್ಲಿ ಮಗ್ಗಲು ಕೂತು ಮುಸಿಮುಸಿ ಅತ್ತ ಶ್ರೀಕಂಠನ ಮಗಳು ಪಾರೋತಿ ಬೇರೆ! “ಅತ್ತೆ ಹೀಗೆ ಬಂದ್ ಎಬ್ಬಿಸ್ದೆ ಅಂತ ಸಿಟ್ಟ್ ಮಾಡಿಕಾಬ್ಯಾಡಿ. ನಾಳೀಗ್ ನೀವು ಹ್ವರಟಹ್ವಾಗ್‌ತೀರಂತೆ- ಅಪ್ಪಯ್ಯ ಅಂತು. ನಂಗೆ ಕಲೀಕ್ಕೆ ಆಸೆ ಅದೆ… ನಾ ಕಾಲೇಜು ಕಂಡ್ರೆ ಸಾವಿತ್ರತ್ತೆ ಮಗಳು ಸೀತೀಕಣಾಂಗೆ ಕೆರೀನೋ ಬಾಂಮಿನೋ ಕಾಣೂಕಾತದಂತೆ-ಅಪ್ಪಯ್ಯ ಹೀಂಗೆ ಬೈದು, ನನ್ನ ಸಾಲಿ ಬಿಡ್‌ಸದೆ. ಅಪ್ಪಯ್ಯಂಗೆ ತಿಳಿಹ್ಯಾಳಿ ನಿಮ್ಮ ಜ್ವತೆ ಬೆಂಗಳೂರಿಗೆ ಕರ್ ಕ್ಕೊಂಡ್ ಹ್ಯಾಗಿ, ನಾ ಕಲೀ ಹಂಗೆ ಮಾಡಿ…” ಕತ್ತಲಲ್ಲಿ ಗುಟ್ಟಾಗಿ ಪಿಸುಗುಟ್ಟಿದ ಪಾರೋತಿಯ ಧ್ವನಿ ವಿಚಿತ್ರವಾಗಿ ಕೇಳಿಸಿ ನನ್ನ ಮನಸ್ಸಿನಲ್ಲಿ ಎಂದೋ ಮಾಸಿ ಹೋಗಿದ್ದ ಸಾವಿತ್ರತ್ತೆಯ ಸತ್ತ ಮಗಳು ಸೀತೆಯ ನೆನಪನ್ನೂ ಕೆದಕಿತ್ತು. ಕೊನೆಗೆ ಶ್ರೀಕಂಠಣ್ಣನಿಗೆ ನಾನು ಹೇಳುತ್ತೇನೆ ಎಂದು ಅವಳನ್ನು ಸಮಾಧಾನಪಡಿಸಿ, ಏನು ಹೇಳುವುದು ಎಂದು ತಿಳಿಯದೆ ಯೋಚಿಸಿ ಯೋಚಿಸಿ ತಲೆಬಿಸಿಯಾಗಿ ರಾತ್ರಿಯಿಡೀ ಹೊರಳಾಡಿ ಮಗ್ಗಲು ಬದಲಾಯಿಸಿದ್ದಷ್ಟೇ ಗೊತ್ತು.

ನನ್ನ ಮದುವೆಯಾಗಿ ದೂರದ ಬೆಂಗಳೂರಿನಲ್ಲಿ ಸಂಸಾರ ಹೂಡಿದ ಮೇಲೆ ಬಾಲ್ಯದ ಸೀತೆಯ ನೆನಪು ಯಾರೋ ತಂದ ಗಾಳಿಸುದ್ದಿಯ ಅಂತೆಕಂತೆಗಳಲ್ಲಿ ಒಂದುಕ್ಷಣ ಕಣ್ಣೆದುರು ಕುಣಿದು, ಮತ್ತೊಂದು ಕ್ಷಣದಲ್ಲಿ ಮುರುಟಿಯೇ ಹೋಗಿತ್ತು. ಆದರೆ ರಾತ್ರಿ ಪಾರೋತಿ, “ಸಾವಿತ್ರತ್ತೆಯ ಮಗಳು ಸೀತೀಕಣಾಂಗೆ ಕೆರೀನೋ ಬಾಂಮಿನೋ ಕಾಣೂಕಷ್ಟೆ” ಎಂದು ತನ್ನ ಅಪ್ಪಯ್ಯ ಹೀಂಗೆ ಬೈಯುತ್ತೆ ಎಂದಾಗ, ಕಣ್ಣು ಮುಚ್ಚಿ ಬಿಚ್ಚಿದರೂ ತಿಳಿಯದ ಗಾಢಗತ್ತಲಲ್ಲಿ ಇದ್ದಕ್ಕಿದ್ದಂತೆ ಬಿಚ್ಚಿಕೊಂಡ ಸೀತೆಯ ನೆನಪು… ಸಣ್ಣ ಜೊಂಪು ಹತ್ತುತ್ತಿದ್ದಂತೆ, ಬಟ್ಟೆ ಬಿಚ್ಚಿ ಬರಿ ಮೈಯಲ್ಲಿ ಗಣಮಗನಂತೆ ಥೈಥೈಥೈ ಕುಣಿದ ಸಾವಿತ್ರತ್ತೆಯ ಮಗ ವಾಸುದೇವ! ಕೆಂಪು ಸೀರೆಯಲ್ಲಿ ಮುದಿಯಾದ ಸಾವಿತ್ರತ್ತೆ! ಮಗ್ಗಲಲ್ಲಿ ಯಾರೋ ಬಂದ ಹಾಗೆ; “ಶಾರದೂ” ಎಂದು ಪಕ್ಕದಲ್ಲಿ ಕೂತ ಹಾಗೆ;

“ನಾನೇ ಸೀತೆ. ಇನ್ನೂ ಬದುಕ್ ಅದೀನಿ, ಕಾಣು-” ಎಂದು ಅಟ್ಟಹಾಸದಲ್ಲಿ ನಕ್ಕ ಹಾಗೆ- ಏನೇನೋ ಹಾಳು ಕನಸು!…

ಇದನ್ನು ಓದಿದ್ದೀರಾ?: ಜಯಂತ ಕಾಯ್ಕಿಣಿ ಅವರ ಕತೆ | ಅಮೃತಬಳ್ಳಿ ಕಷಾಯ

ಇವತ್ತು ಸಾವಿತ್ರತ್ತೆ ಮನೆಗೆ ಹೋದರೆ, “ಸೀತು ಸತ್ತದ್ದು ತಿಳೀತೇನೇ?…” ಎಂದು ಕೇಳಬಹುದು. ಎಂಟೋ ಹತ್ತೋ ವರ್ಷಗಳ ಹಿಂದಿನ ಸಂಪೂರ್ಣ ಮರೆತುಹೋದ ಬದುಕಿನ ಪುನರುತ್ಥಾನವಾಗಬಹುದು. ಯಾವುದೋ ಅವ್ಯಕ್ತ ಭಯ. ಸೀತೆಯ ಹೆಸರು ನೆನಪಾಗುತ್ತಿದ್ದಂತೇ ಅಧೀರಗೊಳ್ಳುವ ಮನಸ್ಸು.

ಅಪ್ಪಣ್ಣ ಮಾವಯ್ಯ ಸತ್ತ ಮೇಲೆ ನಾನು ಸಾವಿತ್ರತ್ತೆಯನ್ನು ಕಂಡದ್ದೇ ಇಲ್ಲ. ನಾನು ಕೇಸಲೂರು ಬಿಡುವವರೆಗೂ ಸಾವಿತ್ರತ್ತೆಯ ಹಾಲು ಬಿಳುಪಿನ ಹಣೆಯಲ್ಲಿ ದೊಡ್ಡ ಕುಂಕುಮ ಮುತ್ತೈದೆ ಕಳೆಕೊಟ್ಟು ಶೋಭಿಸಿತ್ತು. ಕಾಡಿಗೆ ಹಚ್ಚಿದ ದೊಡ್ಡ ಕಣ್ಣು, ಅರಿಶಿಣದ ಕೆನ್ನೆ, ಮಾಟವಾದ ಮೂಗು, ಮುಖ ತಿರುಗಿದಾಗೆಲ್ಲಾ ಕಿವಿಯಲ್ಲಿ ಮೂಗಿನಲ್ಲಿ ಪಳಪಳ ಹೊಳೆಯುತ್ತಿದ್ದ ವಜ್ರದ ಬೆಂಡೋಲೆ, ಮೂಗುಬೊಟ್ಟು ಇಡೀ ಮೊಗಕ್ಕೆ ಬಂಗಾರದ ಕಳೆಯಿಟ್ಟು ಬೆಳಗಿಸಿದ್ದುವು. ಗಂಡ ಸತ್ತ ಮೇಲೆ ಸಾವಿತ್ರತ್ತೆ ಹಣೆ, ಕಿಮಿ, ಮೂಗು, ಕುತ್ತಿಗೆ, ಕೈಯೆಲ್ಲಾ ಬೋಳುಬೋಳಾಗಿಸಿಕೊಂಡು, ತಲೆ ಕೂದಲು ತೆಗಿಸಿ, ಕೆಂಪು ಸೀರೆ ಉಟ್ಟರಂತೆ!

ಒಮ್ಮೆ ಬೆಂಗಳೂರಿಗೆ ಬಂದ ನನ್ನಮ್ಮನೇ ಅಂದದ್ದು: “ಸಾವಿತ್ರೀನ ಕಾಣೋಹಂಗೆ ಇಲ್ಲ ಕಣೇ. ಅಷ್ಟು ಲಕ್ಷಣವಾಗಿದ್ದ ಮುಖ! ಈಗದೆಂತ ಬೋಳು ಅಂತೀ! ಕಂಡು ಕಣ್ಣಲ್ಲಿ ನೀರು ಬಂತು… ಆ ಸುಟ್ಟ ಸೀತೆ ಯೆತ್ಲಾಗೋ ಓಡಿಹ್ವಾದ್, ಮಾಲತೀಹ್ವಳೀ ದಡದಲ್ಲಿ ಹೆಣವಾಗಿ ಬಿದ್ದಿತ್ತಂತೆ- ಅಯ್ಯೋ ಸಾವಿತ್ರಿ ಗೋಳು ಯಾರಿಗೂ ಬ್ಯಾಡಪ್ಪಾ…”

ಸೀತೆ ಎಂದರೆ, ಅಮ್ಮನಿಗೆ ಯಾವಾಗಲೂ ಅಷ್ಟಕಷ್ಟೆ! ಕಾಲು ಎತ್ತಿ ಎತ್ತಿ ಹಾಕುತ್ತಾ ಒಂಟಿಯಾಗಿ, ಜೋಲು ಮುಖ ಮಾಡಿಕೊಂಡು ಆಕೆ ಮನೆಗೆ ಬಂದರೆ ಸಾಕು.

“ಓತಿಕೇತಕಣಾಂಗೆ ತಿಣುಕೊಂಡು ಬಂತು, ಪ್ರಾರಬ್ಧದ್ದು! ಅಂಥ ಸಾವಿತ್ರೀಗ್ ಇಂಥ ಸುಟ್ಟ ಸೀತೆ! ಥೇಟ್ ಅಪ್ಪಣ್ಣ ಭಟ್ಟರೇ!”… ಎಂದು ಗೊಣಗುಟ್ಟುತ್ತಿದ್ದಳು.

ಇದನ್ನು ಓದಿದ್ದೀರಾ?: ಕುಂ. ವೀರಭದ್ರಪ್ಪ ಅವರ ಕತೆ | ಎಲುಗನೆಂಬ ಕೊರಚನೂ ಚವುಡನೆಂಬ ಹಂದಿಯೂ

ಸೀತೆ-ಅಪ್ಪಣ್ಣ ಮಾವಯ್ಯರ ತದ್ರೂಪಾದದ್ದು ಹೌದು. ಕಪ್ಪಗೆ, ತೆಳ್ಳಗೆ, ಕೋಲುಕೋಲಾಗಿ ಒಣಗಿಕೊಂಡಿದ್ದ ಮೈ. ಸೀತೆಗೆ ಅಮ್ಮನದಾಗಿ ಬಳುವಳಿಯಾಗಿ ಬಂದದ್ದು ಮಾತ್ರ ಎಂಥವರನ್ನೂ ಆಕರ್ಷಿಸುವಂತಹ ಎರಡು ಸುಂದರ ಕಣ್ಣುಗಳು: ನೂರಾರು ನಿಗೂಢಗಳನ್ನು ತುಂಬಿಕೊಂಡಂತೆ ಕಪ್ಪಗೆ ಸದಾ ಮಿರಮಿರ ಮಿಂಚುವ ದೊಡ್ಡ ಕಣ್ಣುಗಳು!

ಯಾರೊಂದಿಗೂ ಎಂದೂ ಹೆಚ್ಚು ಮಾತುಕತೆಯಿಲ್ಲ. ಒಳಗಿದ್ದೂ ಹೊರಗಿದ್ದ ಹಾಗೆ; ಹತ್ತು ಮಾತಿಗೆ ಗೂಢಾರ್ಥವನ್ನು ಹೊರಚೆಲ್ಲುವ ಒಂದು ಮಾತು! ಬಾಲ್ಯದಲ್ಲಿ ಅವಳು ಮಗುವಾಗಿ ಕೇಕೇ ಹಾಕಿದ್ದನ್ನು, ತನ್ನ ಮುಗ್ಧತೆಯಲ್ಲಿ, ಮುದ್ದಿನವಳಾಗಿ ಎಲ್ಲರ ಪ್ರೀತಿಪಾತ್ರಳಾದದ್ದನ್ನು ನಾನೆಂದೂ ಕಂಡಿಲ್ಲ.

ಓಡಿಹೋದ ಮೂರುವರ್ಷದಲ್ಲೇ ಹೆಣವಾಗಿ ಮತ್ತೆ ಬಂದಳಂತೆ! ಇಂತಹದೇ ಬೇಸಿಗೆಯಲ್ಲಿ ಇದೇ ಮಾಲತಿ ನದಿಯಲ್ಲಿ ಬಿಸಿಲಿಗೆ ಲಕಲಕ ಹೊಳೆಯುವ ಹೆಬ್ಬೆಟ್ಟಗಲದ ನೀರಿನಲ್ಲಿ ಗುರುತುಹಿಡಿಯಲಾಗದಂತೆ ಕೊಳೆತುನಾರಿದ ಹೆಣ್ಣುದೇಹವೇ ಕೊನೆಗೆ ಸೀತೆಯಾದಾಗ ಊರಲ್ಲಿ ಗುಸುಗುಸು ಸುದ್ದಿಯಾಯಿತಂತೆ; ಮಹಜರು ನಡೆಸಿದ ಪೊಲೀಸರು ಆತ್ಮಹತ್ಯೆ ಎಂದರಂತೆ; ಊರವರು ಪ್ರೇಮಪ್ರಕರಣ ಎಂದರಂತೆ… ‘ಸೊಕ್ಕಿತ್ತು! ಹುಡುಗಿ ಬಸುರಾಗಿತ್ತು’ ಎಂದೂ ಒಂದು ಸುದ್ದಿ ಹುಟ್ಟಿ, ವಾಸುದೇವ- ಬದುಕಿನಲ್ಲಿ ಒಂದು ದಿನವೂ ತಂಗಿಯನ್ನು ಪ್ರೀತಿಸದ ವಾಸುದೇವ, ಮಾಲತಿನದಿಯ ಕೆಸರಿನಲ್ಲಿ ಸಿಕ್ಕಿಕೊಂಡ ದೇಹಕ್ಕೇ ‘ತಂಗಿ’ ಎಂದು ಹೆಸರಿಸಿ ಗೋಳಾಡುತ್ತಾ ಸಂಸ್ಕಾರ ನಡೆಸಿದ್ದನಂತೆ!…

ಈ ಸುದ್ದಿಯನ್ನು ಬೆಂಗಳೂರಿನಲ್ಲಿರುವ ನನ್ನ ಕಿವಿಗೂ ತಂದು ಅರಹಿದ್ದು ಯಾರು? ಊರಿನಿಂದ ಅಚಾನಕವಾಗಿ ಆಗಾಗ ಇವಳು ಬಸುರಿ, ಅವಳು ಬಾಣಂತಿ, ಇವಳು ಮುದುಕಿ, ಅವಳು ಮುಂಡೆ ಇಂತಹ ಎಷ್ಟೋ ಸುದ್ದಿ ಬರುತ್ತಿದ್ದಂತೆ ಇದೂ ಒಂದು ಬಂದು ತಲಪಿರಬೇಕು ಅಂಥ ಯಾವ ವಿಶೇಷವೂ ಇಲ್ಲದೆ!

ತಲೆಯಲ್ಲಿ ಎರಡು ದಿನದಿಂದ ಕಾಡುತ್ತಿದ್ದ ಯೋಚನೆಯೇ ಮತ್ತೆ ಸುಳಿದು ಗಿರಗಿರ ಎಂದಿತು. ಸಾವಿತ್ರತ್ತೆಯನ್ನು ಕಾಣೋದು ಹೇಗೆ? ನನ್ನ ಕಂಡು ಏನೆನ್ನಬಹುದು? ವಾಸುದೇವ ಬೇರೆ ಮನೆ ಮಾಡಿದ ವಿಷಯ ನನಗೆ ಹೊಸದಲ್ಲ. ಐದು ವರ್ಷದ ಹಿಂದೆ ಅಪ್ಪಯ್ಯ ಸತ್ತಾಗ ಬಂದಿದ್ದೆ. ಆಗ ಇದೇ ಶ್ರೀಕಂಠಣ್ಣ ಹೇಳಿದ್ದ: ‘ಸಾವಿತ್ರತ್ತೆಗೂ ವಾಸುದೇವನ ಹೇಂಡ್ತಿಗೂ ಸರಿಬರದೇ, ತ್ವಾಟದ ಮನೀಗ್ ಹ್ವಾಗ್ ಆದಾರೆ…” ಅಂತ. ಗವ್ವೆನ್ನುವ ಕಾಡಿನ ಮಧ್ಯೆ ದೊಡ್ಡ ಮನೆಯಲ್ಲಿ ಸಾವಿತ್ರತ್ತೆ ಒಬ್ಬರೇ… ಯಾಕೋ ಅದನ್ನು ನೆನಸಿಕೊಂಡೇ ಹೆದರಿಕೆಯಾಗಿ, ಹಿಂದಿನ ಸರ್ತಿ ಬಂದಾಗ ಸಾವಿತ್ರತ್ತೆಯನ್ನು ಕಾಣಲು ಧೈರ್ಯವಾಗಿರಲಿಲ್ಲ.

ಇದನ್ನು ಓದಿದ್ದೀರಾ?: ಬೊಳುವಾರು ಮಹಮ್ಮದ್‌ ಕುಂಞಿ ಅವರ ಕತೆ | ಒಂದು ತುಂಡು ಗೋಡೆ

”ಪಾರೋತಿ, ಶಾರದೂ ಯೆದ್ದಾಳ ಕಂಡು ಬಾ. ನಂಗೆ ತ್ವಾಟಕ್ಕೆ ಹ್ವಾಗಲಿಕ್ಕೆ ಹ್ವತ್ತಾತು…” ಶ್ರೀಕಂಠಣ್ಣನ ಧ್ವನಿ ಅಟ್ಟವನ್ನು ಸೀಳಿಕೊಂಡು ಬಂದಾಗ, ಹಾಸಿಗೆ ಸುತ್ತಿ ಮೆಟ್ಟಿಲಿಳಿದು ಕೆಳಗೆ ಬಂದೆ.

ಹೆಜ್ಜೆ ಸದ್ದು ಕೇಳಿ, ನಡುಮನೆಗೆ ಬಂದ ಶ್ರೀಕಂಠಣ್ಣ, “ಯೆಂಥದೇ? ಅಟ್ಟದಲ್ಲಿ ಚಂದ ನಿದ್ದೆ ಬಂತೋ, ಹೇಂಗೆ? ಸ್ವಲ್ಪ ತ್ವಾಟಕ್ಕೆ ಹ್ವಾಗೊಕಿತ್ತು ಮಾರಾಯ್ತಿ. ಹ್ವಾಗಿ, ಬ್ಯಾಗ ಮಿಂದು ಬಾ. ಒಟ್ಟಿಗೆ ತಿಂಡಿ ತಿನ್ನೋಣ…” ಎಂದ.

ಬಚ್ಚಲಿಗೆ ಹೋಗುವಾಗ, ನಡುಮನೆಯ ಬಾಗಿಲಲ್ಲಿ ನಮ್ಮಿಬ್ಬರ ಮಾತನ್ನು ಕದ್ದು ಕೇಳುತ್ತಾ ಆಸೆಯಿಂದ ನಿಂತಿದ್ದ ಪಾರೋತಿ ಕಣ್ಣಿಗೆ ಬಿದ್ದಳು. ಆಗಲೇ ಸ್ನಾನ ಮುಗಿಸಿ ಸೀರೆ ಉಟ್ಟುಕೊಂಡಿದ್ದಾಳೆ. ನೋಡಲು ಚಂದದ ಹೆಣ್ಣು! ಶ್ರೀಕಂಠಣ್ಣ ಅವಳನ್ನು ಶಾಲೆ ಬಿಡಿಸಲು ಯಾವುದಾದರೂ ಬಲವಾದ ಕಾರಣವಿರಬಹುದೇ? ಎಂಬ ಅನುಮಾನದಿಂದ ಬಚ್ಚಲ ಮನೆಯಲ್ಲಿ ಹಲ್ಲು ತಿಕ್ಕುತ್ತಿರುವಾಗ ಮತ್ತೊಮ್ಮೆ ಕಣ್ಣ ಮುಂದೆ ಸುಳಿದ ಪಾರೋತಿಯನ್ನು ನಿಟ್ಟಿಸಿದೆ. ಛೇ! ಪಾಪದ ಹುಡುಗಿ! ಹೆಣ್ಣಿನ ಬಗ್ಗೆ ಹೆಣ್ಣಾದ ನಾನು ಇಷ್ಟು ಕೆಟ್ಟದಾಗಿ ಯೋಚಿಸಬಾರದು ಅನಿಸಿತು. ನಾನು ಶ್ರೀಕಂಠಣ್ಣನಿಗೆ ಹೇಳಬಹುದು, ಇಲ್ಲಾ, ನನ್ನ ಜೊತೆ ಬೆಂಗಳೂರಿಗೆ ಕರೆದುಕೊಂಡು ಹೋಗಬಹುದು ಎನ್ನುವ ಅದಮ್ಯ ಉತ್ಸಾಹ ಅವಳ ಓಡಾಟದಲ್ಲೇ ಕಾಣುತ್ತಿತ್ತು. ಕೊಡದಲ್ಲಿ ನೀರು ತಂದು, ಅರ್ಧ ಇದ್ದ ತಣ್ಣೀರಿನ ಹಂಡೆಗೆ ಸುರುವಿ, “ಆ ಹಂಡೇಲಿ ಬಿಸಿನೀರ್ ಅದೆ. ಹವಣಾ ಮಾಡಿ ಕೊಡಲೇ, ಅತ್ತೆ…?” ಎಂದು ಏನು ಮಾಡಲೂ ತಯಾರು ಅನ್ನುವ ಉತ್ಸಾಹದಲ್ಲಿ ಕೇಳಿದಳು. “ಬೇಡ, ನಾನೇ ಮಾಡಿಕೊಳ್ಳುತ್ತೇನೆ…” ಎಂದೆ. ಸ್ವಲ್ಪ ಪೆಚ್ಚಾಗಿ ಮಾರುದ್ದದ ಜಡೆಯನ್ನು ಹಿಂದಕ್ಕೆಸೆದು, ಮತ್ತೆ ಕೊಡಪಾನ ಎತ್ತಿಕೊಂಡು ಹೋದಳು.

ಅಡಿಗೆ ಮನೆಗೆ ಬಂದಾಗ, ಶ್ರೀಕಂಠಣ್ಣ ಮಜ್ಜಿಗೆ ಗೂಡಿನ ಪಕ್ಕ ಕೂತು ನನಗಾಗಿ ಕಾಯುತ್ತಿದ್ದ. ಅತ್ತಿಗೆ ಒಲೆ ಮುಂದೆ ಕೂತು ದೋಸೆ ಹೊಯ್ಯುತ್ತಿದ್ದರು. ನನ್ನ ಹಿಂದೆಯೇ ಬಂದ ಪಾರೋತಿ, ಸಡಗರದಿಂದ ಬಾಳೆಲೆಗೆ ಬೆಲ್ಲ ಬೆಣ್ಣೆ ಹಾಕಿ ಕೂತುಕೊಳ್ಳಲು ಮಣೆಯಿಟ್ಟು ಕಾತರದಿಂದ ಬಾಗಿಲಿಗೊರಗಿ ನಿಂತಳು. ಇನ್ನೊಂದು ಕ್ಷಣದಲ್ಲಿ ಎಂಥದೋ ಸ್ಫೋಟಿಸಿ ಹೊಸದೊಂದು ತಿರುವು ಹುಟ್ಟಲಿರುವಂತೆ, ಪ್ರತಿಯೊಂದು ಘಳಿಗೆಯೂ ಯುಗವಾದಂತೆ ಚಡಪಡಿಸುತ್ತಾ ತನ್ನ ಬದುಕಿನ ಸಂಪೂರ್ಣ ಜವಾಬ್ದಾರಿ ಹೊರುವವಳು ಇವಳೇ ಎಂಬ ಖಚಿತನಿರ್ಧಾರದಲ್ಲಿ ನನ್ನನ್ನೇ ನಿಟ್ಟಿಸಿದ ಅವಳ ದೃಢ ಕಣ್ಣುಗಳನ್ನು ಕಂಡು, ಯಾಕೋ ಮನಸ್ಸು ಮುದುಡಿತು.

ಇದನ್ನು ಓದಿದ್ದೀರಾ?: ಎಸ್.ಎಫ್. ಯೋಗಪ್ಪನವರ್ ಅವರ ಕತೆ | ಆರಾಮ ಕುರ್ಚಿ

“ಇವತ್ತು ಸಾವಿತ್ರತ್ತೆ ಕಾಣಲಿಕ್ಕೆ ಹ್ವಾಗಲುಂಟಾ?…” ದೋಸೆ ತಿಂದು ಮುಗಿಸಿ, ನಿಧಾನವಾಗಿ ಕಾಫಿ ಕುಡಿಯುತ್ತಿದ್ದ ಶ್ರೀಕಂಠಣ್ಣ ಮೆಲ್ಲಗೆ ಕೇಳಿದ.

ಅದೇ ಆಗ ತಾನೇ ದೋಸೆ ಹುಯ್ದು ಮುಗಿಸಿ, ಕೊಟ್ಟಿಗೆಯ ಮಾಡಿನಿಂದ ಒಂದೆರಡು ಕಟ್ಟಿಗೆ ತಂದು ಹೂಡಿ ಊದುಗೊಳವೆಯಲ್ಲಿ ಒಲೆ ಊದುತ್ತಿದ್ದ ಅತ್ತಿಗೆ, ನಾನು ಬಾಯಿ ತೆರೆಯುವುದಕ್ಕೆ ಮುಂಚೆಯೇ ಸಟ್ಟನೆ ತಿರುಗಿ.. “ಜ್ವಾಕೆ ಮಾರಾಯ್ತಿ…” ಅಂದರು. ಅನುಮಾನಿಸಿದ ನನ್ನನ್ನು ಕಂಡು ಶ್ರೀಕಂಠಣ್ಣ, ಬಾಗಿಲೊರಗಿ ನಿಂತ ಪಾರೋತಿಯನ್ನೊಮ್ಮೆ ಓರೆಗಣ್ಣಲ್ಲಿ ನೋಡಿ, ತಗ್ಗಿದ ಧ್ವನಿಯಲ್ಲಿ ಅಂದ… “ನೀ ಇಲ್ಲಿದ್ದಂಗೆ ಈಗ ಯೆಂತದೂ ಇಲ್ಲೇ… ಊರಲ್ಲಿ ಸಾಕಷ್ಟು ಬದಲಾಗಿದೆ. ಇದೇ ನಮ್ಮ ಪಾರೋತಿ ಗೇರುಸೊಪ್ಪು ಗುಡ್ಡದಾಚೆ ಇದ್ದ ಸರ್ಕಾರಿ ಸಾಲೀಗ್ ಹ್ವಾಗುತಿತ್ತು. ನೋಡು! ಯಾವತ್ತೋ ಒಂದು ದಿವಸ ಪಾರೋತಿ ಸಾಲೆ ಮುಗ್ಸಿ, ಮುಸ್ಸಂಜೇಲಿ ಗೇರುಸೊಪ್ಪು ಗುಡ್ಡದಾಗೆ ಬರ್‌ತಿದ್ದಾಗ, ಈ ವಾಸುದೇವ ಸಿಕ್ಕು- ‘ಶ್ರೀಕಂಠಂಗೆ ಇಷ್ಟು ಲಾಯಕ್ಕಾದ ಬೆಳೆದ ಮಗಳಿದಾಳೋ, ಸೈಬಿಡು…’ ಅಂತ ಮೀಸೆ ತಿರುವಿದನಂತೆ. ಪಾರೋತಿ ಅಳುತ್ತಾ ಹೆದರ್ ಕ್ಕೊಂಡ್ ಓಡಿ ಬಂದು, ಮನೇಲಿ ಹಂಗೇ ಅಂತು. ಇನ್ನು ಕೇಳೂದಾ- ಮೊದ್ಲೇ ಊರಲ್ಲಿ ರಾಕ್ಷಸರ ಕಣಾಂಗೆ ಅದಾನವ್ನು. ಹೆದರ್‌ಕ್ಕೊಂಡು ನಾವು ಪಾರೋತಿ ಸಾಲಿ ಬಿಡ್ಸಿ ಮನೀಲಿಟ್ಟಾತು. ನೀ ಜ್ವಾಪಾನ ಹ್ವಾಗಿಬಿಟ್ಟು ಬಾ ಮರಾಯ್ತಿ…”

ಒಲೆ ಬಳಿ ಬಾಳೆಲೆಗೆ ದೋಸೆ ಹಾಕಿಕೊಂಡು ನಿಧಾನವಾಗಿ ತಿನ್ನುತ್ತಿದ್ದ ಅತ್ತಿಗೆಯ ಮುಖದಲ್ಲಿ ಎಂಥದೋ ಗಾಬರಿ. ಕಾಫಿ ಕುಡಿದು ಮುಗಿಸಿ, ಕೈತೊಳೆದು ಬಂದು, ಅಡಿಗೆ ಮನೆ ಹೊಸ್ತಿಲಲ್ಲಿ ಕುಕ್ಕರಗಾಲಿನಲ್ಲಿ ಕೂತ ಶ್ರೀಕಂಠಣ್ಣ ತಲೆ ಎತ್ತಿ ಯಾವುದೋ ನಿಗೂಢ ಹೇಳುವವನಂತೆ ನನ್ನನ್ನೇ ನೋಡುತ್ತಾ ಮತ್ತೆ ಅಂದ: “ಅಪ್ಪಣ್ಣ ಮಾವಯ್ಯ ಸತ್ತು, ಓಡಿ ಹ್ವಾದ್ ಸೀತಿ ಹೆಣವಾಗಿ ಬಂದ ಮ್ಯಾಲೆ, ಸಾವಿತ್ರತ್ತೆಗೆ ಒಂದು ನಮೂನಿ ಮಂಕು ಬಡೀತ್ತು ನೋಡು, ಬೆಳಗ್‌ನಿಂದ ಸಾಯಂಕಾಲದವರೀಗೂ ದೇವರ ದೀಪದ ಸೊಡರು ಹಿಡ್ಕೊಂಡು ಒಂದೊಂದೇ ಕ್ವಾಣೀ ಬಾಗಿಲ್ ತೆಕ್ಕೋತಾ ಕತ್ತಲಲ್ಲಿ ದೆವ್ವ ಕಣಾಂಗೆ ತಿರುಗ್ತಾರಂತೆ. ನಾಗಂದಿಗೆ ಪಾತ್ರೆನೆಲ್ಲಾ ದಡಬಡ ಚೌಕಿಹೊಂಡಕ್ಕೆ ಎಸ್ದು ‘ಸಾಯಿ! ಸಾಯಿ! ಸಾಯಿ!’ ಯೆಂತ ಹಿಡಿಶಾಪ ಹಾಕಿ, ಮತ್ತೊಂದು ಗಳಿಗೀಲಿ ಉಯ್ಯಾಲೆ ಮ್ಯಾಲೆ ಬೋರಲು ಬಿದ್ದು ತಲೀ ತಲೀ ಚಚ್ಚಿಕೋತ ಗೋಳಾಡ್ತಾರಂತೆ. ವಾಸುದೇವ ರಾತ್ರೋರಾತ್ರಿ ಹೆಂಡ್ತಿ ಕರಕ್ಕೊಂಡು ತ್ವಾಟದ ಮನೀಗ್ ಹ್ವಾದ್ದು ಆಗಲೇ. ಹ್ವಾಗ್‌ವಾಗ ಇಡೀಮನೀ ಜಪ್ತಿ ಮಾಡ್‌ದ್ನಂತೆ… ಮನೀಲಿದ್ದಷ್ಟು ಬೆಳ್ಳಿ ನಗ, ಒಡವೆ, ಪಾತ್ರೆ ಪದಾರ್ಥ- ಕೊನೀಗ್ ಸಾವಿತ್ರತ್ತೆ ಮದುವೀದ್ ದೊಡ್ಡ ಸೀರೀಪಾರೀನೂ ಹ್ವತ್‌ಕ್ಕೊಂಡು ಹ್ವಾದನಂತೆ. ರಾಜರ ತರ ಮೆರಿಯೋ ಆಸೆ ಅವಂಗೆ. ಅಪ್ಪಣ್ಣ ಮಾವಯ್ಯರ ಕಾಲಿಗ್ ಸರಪಣಿ ತೊಡಿಸಿದ್ದು ಸಮ! ಸೀತೀಗ್ ಸಾಯಬೀಳಾಂಗೆ ಬಡಿದದ್ ಸಮ! ಸಾವಿತ್ರತ್ತೆ ಬದುಕ್ದಂಗೇ ಮನೀ ಜಪ್ತಿ ಮಾಡಿ, ಒಂಟಿ ಬಿಟ್ಟು ಮನೀ ಖಾಲಿ ಮಾಡು ಸಮ! ತ್ವಾಟದ ಮನೀ ಆಳಕಾಳ ಜೀವ ಹಿಂಡಿಂಡಿ ಹಿಪ್ಪಿ ಮಾಡ್ದು ಸಮ! ಎಷ್ಟು ಜಬರ್ದಸ್ತು ತ್ವಾರಿದ್ರೂ ಯೆಂತ ಬಂತೇ, ಪಾಪ? ಮಕ್ಕಳಾಗಲಿಲ್ಲ. ಅಂವ ಗಂಡೇ ಅಲ್ಲಾಂತ ಊರಲ್ಲಿ ಸುದ್ದಿ ನೋಡು…” ಹೊರಗೆ ಯಾರದ್ದೋ ಹೆಜ್ಜೆ ಸದ್ದಾಗಿ, ಪಾರೋತಿ ಎದ್ದು ಹೋದಾಗ, ಅತ್ತಿಗೆ ಧ್ವನಿಯನ್ನು ಮತ್ತಷ್ಟು ಕುಗ್ಗಿಸಿ- “ವಾಸುದೇವ ಭಾವಯ್ಯರ ಹೆಂಡ್ತಿ ಸುಮಿತ್ರನ್ನ ನೀ ನೋಡಿರೂಕು. ಚಂದೊಳ್ಳಿ ಹಂಗೆ ಅದಾಳೆ! ಮಕ್ಕಳಾಗಿ ಮುಕ್ಕಾಗದ ಮೈ ಅದು! ವಾಸುದೇವ ಭಾವಯ್ಯ ಹ್ವರಕ್ ಹುಲಿ, ಒಳಗ್ ಇಲಿ ಕಣಾಂಗೆ ಅಂತೆ! ಸುಮಿತ್ರ ಕಂಡ್ರೆ ದೆವ್ವ ಬಡಿದವರಂಗೆ ಮಂಕಾಗಿ ತರತರ ನಡುಗುತ್ತಾರಂತೆ. ಸೈಯಲ್ಲ!… ಪಾರೋತಿ ಮೈ ಕೈ ತುಂಬಿಕೊಂಡು ಚಂದ ಆಗ್‌ಅದೀಯೆ. ಕಂಡದ್ದೇ ಕಂಡು ಕಂಡು ನಾಳೀಗ್ ಊರವ್ರ ಕಣ್ಣು ಅದಕ್ಕೂ ಬಿದ್ದೀತು ಅಂತ ಹೆಣ್ಣು ಜೀವ ಪಕಪಕ ಅನ್ನುತ್ತೆ. ಮೊದಲದಕ್ಕೆ ಮದುವೀ ಮಾಡಿ ಒಂದು ಗಡಿ ಕಾಣಿಸಣಾಂತೆ…” ಅಂದರು.

ಇದನ್ನು ಓದಿದ್ದೀರಾ?: ಫಕೀರ್ ಮುಹಮ್ಮದ್ ಕಟ್ಪಾಡಿ ಅವರ ಕತೆ | ನೋಂಬು

ಅಂಗಳದಲ್ಲಿ ಅಡಿಕೆ ಕೊಯಿಲಿನಲ್ಲಿ ಹಾಸಿದ್ದ ಚಪ್ಪರ; ಗಿಡ ಮರಗಳನ್ನು ಮೆಲ್ಲಗೆ ಅಲುಗಿಸಿ ಬೀಸಿಕೊಂಡು ಬಂದ ಸಣ್ಣ ತಂಗಾಳಿ. ಕಾಲುದಾರಿಯ ಬದಿಯ ಹೊಲೆಯರ ಗುಡಿಯಲ್ಲಿ ಯಾರೋ ತಮಟೆ ಬಾರಿಸುತ್ತಿದ್ದರು. ಕೂಗ್ರ… ನಿಂಗ…ಬೆಳ್ಳ…ಚೂಡಿ…ಕಾಳ… ಇವರಲ್ಲಿ ಯಾರೋ? ಕಣ್ಣ ಮುಂದೆ ಅಪ್ಪಯ್ಯನ ವೈಕುಂಠ ಸಮಾರಾಧನೆಯಲ್ಲಿ ಕಂಡ ವಾಸುದೇವನ ಮಸಕು ಮಸುಕು ರೂಪು! ಬಾಲ್ಯದಲ್ಲೆಂದೋ ಕಂಡ ಅವನ ಹೆಂಡತಿ ಸುಮಿತ್ರೆಯ ಮುಕ್ಕಾಗದ ಮೈ!

ಗೇರುಸೊಪ್ಪು ಕಾಡಿನಲ್ಲಿ ಬೆಳಕು ಬೀಳದ ದಟ್ಟ ಪೊದೆಯಲ್ಲಿ ಹಾಡುಹಗಲಲ್ಲೂ ಕೂಗುತ್ತಿದ್ದ ಜೀರುಂಡೆಯ ಎದೆ ಒಡೆಯುವ ಚೀತ್ಕಾರ! “ಇಂದಾದರೂ ಸಾವಿತ್ರತ್ತೆಯನ್ನು ಕಾಣಲು ಹೋಗಬೇಕು…” ಬೆಳಿಗ್ಗೆ ಏಳುವಾಗ ಮಾಡಿಕೊಂಡ ನಿರ್ಧಾರ ಹೊರಡುವ ಘಳಿಗೆ ಹತ್ತಿರವಾದಂತೆ ಆತಂಕದಲ್ಲಿ ಸಡಿಲಗೊಳ್ಳುತ್ತಿರುವ ಅನುಭವ! ಐದು ವರ್ಷದಲ್ಲಿ ಸಂಪೂರ್ಣ ಮರೆತ ಬದುಕು, ನಾನಿಲ್ಲಿಗೆ ಬರುವುದನ್ನೇ ಕಾದು ಕುಳಿತು ತನ್ನ ಮೈಯೊಳಗಿನ ಯಾವುದೋ ನಿಗೂಢವನ್ನು ಬಿಚ್ಚಿಕೊಳ್ಳಲು ಹಾತೊರೆದಂತೆ… ಚಿಪ್ಪಿನಲ್ಲಿ ಮುದುರಿ ಕುಳಿತು ಹೆಮ್ಮರವಾಗಿ, ಇದೀಗ ಗರ್ಭ ಸೀಳಿ ಬಂದು ವಿಚಿತ್ರವಾಗಿ ಕಣ್ಣು ಮಿಟುಕಿಸಿ ಕೈಕಾಲು ಬಡಿದು ಸುತ್ತಲಿನ ಪ್ರಪಂಚದೊಡನೆ ಬೆರೆಯುವ ತೀವ್ರ ಆತಂಕದಲ್ಲಿ ಮಗ್ಗಲು ಬದಲಾಯಿಸಿ, ಅರ್ಥವಾಗದ ರೀತಿಯಲ್ಲಿ ನುಣುಚಿ ಹೊರ ಪ್ರಪಂಚಕ್ಕೆ ಜಾರುತ್ತಾ “ಬಂದೀಯಾ? ಬಂದೀಯಾ? ಕೊನಿಗೂ ಬಂದೀಯಾ?” ಎಂದು ನನ್ನ ಸುತ್ತ ತಿಪ್ಪರಲಾಗ ಹಾಕಿ, ಯಾವುದೋ ಇಕ್ಕಟ್ಟಿನಲ್ಲಿ ನನ್ನನ್ನು ಬಂಧಿಸಿ, ಕೇಕೆ ಹಾಕಿ ನಕ್ಕಂತೆ…!

ಕೊಟ್ಟಿಗೆ ಪಕ್ಕದ ಕಾಲುದಾರಿಯಲ್ಲಿ ಹತ್ತು ಹೆಜ್ಜೆ ನಡೆದರೆ, ಅದೇ ಇಣಿಕಲು! ಹಿಂದೊಮ್ಮೆ ತೀರಾ ಪರಿಚಿತವಾದ ಹಾದಿ! ಗದ್ದೆಯ ಇಳಿಜಾರಿನಲ್ಲಿ ಇಕ್ಕಟ್ಟಾಗಿ, ಮಾಲತೀನದಿ ದಡದ ಕೆಸರಿನಲ್ಲಿ ಹುಗಿದ ಕಾಲನ್ನು ಎತ್ತಿ ಎತ್ತಿ ಇಡುತ್ತಾ ಮುಗ್ಗರಿಸದಂತೆ ಜೋಪಾನವಾಗಿ ನಡೆದ ದಾರಿ… ಸದಾ ಕೆಂಪಾಗಿ ಆಳವಿಲ್ಲದೆ, ತೆಳುವಾಗಿ ಸಾವಕಾಶವಾಗಿ ಹರಿಯುವ ಮಾಲತೀನದಿ…! ಮಕ್ಕಳಾಟಿಕೆಯಲ್ಲಿ, ಬಟ್ಟೆ ಬಿಚ್ಚಿ ಶ್ರೀಕಂಠಣ್ಣ, ಸೀನಣ್ಣ, ವಾಸುದೇವ ಈಜು ಕಲಿಯುವಾಗ, ನುಣುಪು ಕಲ್ಲಾರಿಸುತ್ತಾ ಕಾಗೆ ಬಂಗಾರ ಹುಡುಕಿದ ನಾನೂ, ಸೀತೆ…! ಸ್ನಾನ ಮುಗಿಸಿ ಒದ್ದೆ ಮೈಯಲ್ಲಿ ಅಶ್ವತ್ಥಮರದ ಕಪ್ಪು ಬಂಡೆಯಲ್ಲಿ ಮೈ ಒಣಗಿಸುತ್ತಾ ಬಿದ್ದ ವಾಸುದೇವ, ಶ್ರೀಕಂಠಣ್ಣ, ಸೀನಣ್ಣ! ಅಶ್ವತ್ಥಮರದ ಮರಮರ ಸದ್ದು!…

ಇದನ್ನು ಓದಿದ್ದೀರಾ?: ಎ.ಕೆ. ರಾಮಾನುಜನ್ ಅವರ ಕತೆ | ಅಣ್ಣಯ್ಯನ ಮಾನವಶಾಸ್ತ್ರ

ಕಟ್ಟೆಯ ಬದಿಯ ಮೆಟ್ಟಲಿಳಿದು, ಪಕ್ಕಕ್ಕೆ ತಿರುಗಿ ಸಾರ ದಾಟಿದರೆ, ಕಾಡಿನ ಮಧ್ಯದಲ್ಲೇ ಸೀಳುಬಿಟ್ಟಂತೆ ಉಬ್ಬು ತಗ್ಗಿನಲ್ಲಿ ಹರಿಯುವ ಎರಡಂಗೈ ಅಗಲದ ಕಾಲು ದಾರಿ… ಇದ್ದಕ್ಕಿದ್ದಂತೇ ಕಪ್ಪಾಗಿ ನೂರಾರು ವರ್ಷಗಳಿಂದ ಸೂರ್ಯನನ್ನೇ ಕಂಡಿಲ್ಲದಂತೆ ಒತ್ತೊತ್ತಾಗಿ ಕಿಚಿಕಿಚಿಯಾಗಿ ಮುಗಿಲೆತ್ತರ ಬೆಳೆದು ನಿಂತ ಮರಗಳ ನಡುವೆ, ಕಾಲಡಿ ತಣ್ಣಗೆ ಕೊರೆಯುವ ನೆಲ. ಉದ್ದಕ್ಕೂ ಬೆಳ್ಳಗೆ ನಕ್ಷತ್ರದಂತೆ ಹಾಸಿದ ರಂಜದ ಹೂವು; ಕಾಡಲ್ಲಿ ಎಲ್ಲೋ ಅರಳಿದ ನಾಗಸಂಪಿಗೆ; ಮಾಲತಿನದಿಯ ಬದಿಯ ಬನದಲ್ಲರಳಿದ ಕೇದಗೆ; ಗೊಂಚಲು ಗೊಂಚಲು ಕಾಯಿ ಹೊತ್ತು ನಿಂತ ನೇರಲೆ ಪನೀರಲೆ ಇಪ್ಪೇ ಹಣ್ಣು. ಧೂಪದ ಮರಕ್ಕೆ ನೇತುಬಿಟ್ಟ ನೀರಾಟೆ! ಪೊದೆಯಲ್ಲಿ ಗೊಂಪೆ ಗೊಂಪೆ ಸಿಂಬಳ, ಗುಡ್ಡದಾಸವಾಳದ ಹಣ್ಣು!

ನಾನು ಸೀತೆ ಎಲೆ ಹುದುಗಿಸಿ ಹಣ್ಣು ಬಿಡಿಸಿ, ಹಾಲವಾಣದ ಗಿಡಕ್ಕೆ ದೋಂಟಿ ಎಸೆದು ಚನ್ನೇಮಣೆಕಾಯಿ ಹೆರಕಿ, ಬಾಳೇನಾರಿಗೆ ರಂಜದ ಹೂವು ಪೋಣಿಸುತ್ತಿದ್ದೆವು. ಕೈ ಕೈ ಹಿಡಿದು ಮರಗಳ ಸುತ್ತಾ ಗಿರಿಗಿಟ್ಟಲೆಯಾಡುತ್ತಿದ್ದೆವು.

ಕಣ್ಣಾ ಮುಚ್ಚಾಲೆಯಾಡುತ್ತಾ ಮರಗಳ ಸಂದಿ ಬಚ್ಚಿಟ್ಟುಕೊಂಡ ಶ್ರೀಕಂಠಣ್ಣ, ಸೀನಣ್ಣ, ವಾಸುದೇವ.

ಧೋಧೋ ಎಂದು ಸುರಿಯುತ್ತಿದ್ದ ಮಳೆಗಾಲದ ನಿರಂತರ ಮಳೆಯ ನೆಲದಲ್ಲಿ ಮೊಣಕಾಲಿನವರೆಗೆ ಹುಗಿದ ಕಾಲುಗಳಿಗೆ ಹತ್ತಿಕೊಂಡ ಇಂಬಳದಿಂದಾಗಿ ಗಣಮಗರಂತೆ ತಕಪಕ ಕುಣಿದು ಕುಪ್ಪಳಿಸುತ್ತಿದ್ದೆವು… ಬೆಳಗ್ಗಿನ ಮಸುಕು ಬೆಳಕಲ್ಲಿ ಬಹುದೂರದಿಂದ ಕೇಳುವ ಕಾಡಿನ ಜೀ… ಜೀ… ಸದ್ದು, ಮುಸ್ಸಂಜೆಯ ಮಬ್ಬಿನಲ್ಲಿ ಯಾವುದೋ ಹಕ್ಕಿಯ ಅಸ್ಪಷ್ಟ ಚಿಲಿಚಿಲಿಯಲ್ಲಿ ಗವ್ವೆನ್ನುತ್ತಾ… ಕತ್ತಲೇರಿದಂತೆ ರಾತ್ರಿ ಹಕ್ಕಿಗಳ ವಿಚಿತ್ರ ಚೀತ್ಕಾರದಲ್ಲಿ… ಹೆಪ್ಪುಗಟ್ಟುತ್ತಾ ನಿಗೂಢವಾಗುತ್ತಿದ್ದ ಅದೇ ಕಾಡು!…

ದಬ್ಬೆ ದಾಟಿ ಒಳಗಡಿ ಇಟ್ಟೆ. ಅಂಗಳದಲ್ಲಿ ಮಳೆ ಚಳಿ ಗಾಳಿಗೆ ಜಗ್ಗಿ, ಏರುಪೇರಾದ ಎಂದೋ ಹಾಸಿದ ಚಪ್ಪರ, ಹಿತ್ತಲಲ್ಲಿ ಪೊದೆಯಾಗಿ ಬೆಳೆದ ಗರಿಕೆ. ತಳದಲ್ಲಿ ಹುಗಿದಂತೆ ಹೊಂಡದಲ್ಲಿರುವ ಹಳೇ ಮನೆ. ಸೂರ್ಯನ ಪ್ರಖರ ಬೆಳಕಿನಲ್ಲೂ ಸದಾ ಹಬ್ಬಿ ನಿಂತ ಮಬ್ಬುಗತ್ತಲು…

ಇದನ್ನು ಓದಿದ್ದೀರಾ?: ಚದುರಂಗ ಅವರ ಕತೆ | ನಾಲ್ಕು ಮೊಳ ಭೂಮಿ

ಎಂಟು-ಹತ್ತು ವರ್ಷದಲ್ಲಿ ಮನೆ ಸಾಕಷ್ಟು ಮುಪ್ಪಾದಂತೆ ಕಂಡಿತು. ಸಾವಿತ್ರತ್ತೆ ಇದರ ಅಂತರಂಗದಲ್ಲೆಲ್ಲೋ ಹುದುಗಿರಬೇಕು.

ಜಗುಲಿಯೇರಿ ಅಗುಳಿ ಹಾಕಿಲ್ಲದ ಹೆಬ್ಬಾಗಿಲು ದೂಡುತ್ತಿದ್ದಂತೇ “ದೈವ! ದೈವ! ದೈವ ಕಣಾಂಗೆ ಅದೆ, ಸಾವಿತ್ರಿ…!” ಅಂತ ಅಮ್ಮ ಅಂದದ್ದು ನೆನಪಾಗಿ, ಮೈ ನಡುಗಿತು. ಒಳಹೊಕ್ಕದ್ದೇ ಕಣ್ಣಿಗೆ ರಪ್ ಎಂದು ಬಡಿದ ಕತ್ತಲು! ಹೊರಗಿನ ಪ್ರಪಂಚಕ್ಕೆ ಅಸಂಬದ್ಧ ರೀತಿಯಲ್ಲಿ ಸುತ್ತಲೂ ಹರಡಿ ನಿಂತ ನೀರವತೆ.

ಸಾವಿತ್ರತ್ತೆಯ ಈ ಹಳೇಗಾಲದ ದೊಡ್ಡಮನೆಯ ಬಗ್ಗೆ ಹೇಳಲಿಕ್ಕೆ ಎಷ್ಟೊಂದು ಇಲ್ಲ? ಮಜಭೂತಾದ ಭಾರಿ ತೊಲೆಗಳ ನಡುವೆ, ಗವ್ವೆನ್ನುವ ಕತ್ತಲಲ್ಲಿ ಇತಿಹಾಸದ ಪುರಾವೆಗಳನ್ನೇ ದಾಖಲಿಟ್ಟಂತೆ ಥಂಡಿಗೆ ಜುಮ್ಮು ಹಿಡಿದ ಬಾಗಿಲುಗಳು ಡರ್‍ರೋ ಎಂದು ಒಂದೊಂದಾಗಿ ತೆರೆದುಕೊಳ್ಳುತ್ತಾ ಕಣ್ಣತುಂಬ ಅಷ್ಟಗಲ ಹರಡಿಕೊಳ್ಳುವ ಕರಿಗತ್ತಲ ಪ್ರವಾಹದಲ್ಲಿ, ದಢಕ್ಕನೆ ಮುನ್ನುಗ್ಗಿದಾಗ ತಡವರಿಸುವ ಬೃಹದಾಕಾರದ ಗೋಡೆಗಳ ನಡುವೆಯೇ ಪಳಕ್ಕನೆ ಮಿಂಚಿ ಮಾಯವಾದ, ಮಬ್ಬುಗತ್ತಲಿನಲ್ಲೇ ಮತ್ತೊಮ್ಮೆ ಅಸ್ಪಷ್ಟ ರೂಪ ತೋರಿ ಎದ್ದೆದ್ದು ಕುಣಿವ ಭೂತದ ಘಟನೆಯಂತೆ… ನೆನಪಿದೆ!…

ಸಾವಿತ್ರತ್ತೆಯ ಮನೆ ಬಾಗಿಲುಗಳೆಂದರೆ, ನನ್ನಲ್ಲೀಗಲೂ ಕಾರಣವಿಲ್ಲದೇ ಅಸ್ಪಷ್ಟ ಹೆದರಿಕೆಯೊಂದು ಗರಗುಟ್ಟಿ ನಡುಗಿಸುತ್ತದೆ..

ಮುಸ್ಸಂಜೆಯಲ್ಲಿ ಶಾಲೆಯಿಂದ ಮನೆಗೆ ಬಂದದ್ದೇ, ಒಂದೊಂದು ದಿನ ನನಗೂ ಸೀತೆಗೂ ಆ ಮನೆಯ ಬಾಗಿಲೆಣಿಸುವ ಒಂದು ವಿಚಿತ್ರ ಆಟ ಅದು. ಹೆಚ್ಚು ಬಾಗಿಲುಗಳನ್ನು ದಾಟಿ, ಚೌಕಿಯನ್ನು ಹಾದು, ಹೊರ ಅಂಗಳಕ್ಕೆ ಯಾರು ಮೊದಲು ಬರುತ್ತಾರೋ ಅವರಿಗೆ ಆ ದಿನದ ಸಂಗ್ರಹಣೆಯಲ್ಲಿದ್ದ ಚನ್ನೇಮಣೆಕಾಯಿ ನೀರಾಟೆ, ರಂಜದ ಹಣ್ಣು, ಗುಡ್ಡದಾಸವಾಳದ ಹಣ್ಣು, ಗೇರು ಬೀಜದ ಹೆಚ್ಚಿನ ಪಾಲು ದಕ್ಕುತ್ತಿತ್ತು.

ಚೌಕಿಯ ಗವ್ವೆನ್ನುವ ನೀರವತೆಯನ್ನು ಹಾದು ಒಂದೊಂದೇ ಕೋಣೆಯನ್ನು ದಾಟಿ ಹೋದ ಹಾಗೆ, ಎಷ್ಟೋ ವರ್ಷಗಳಿಂದ ತೆರೆಯದೆ ಒಂದು ರೀತಿಯಲ್ಲಿ ಜಡಗಟ್ಟಿದ ಕೋಣೆಯ ಬಾಗಿಲುಗಳು ಸದ್ದು ಮಾಡುತ್ತಾ ತೆಗೆದುಕೊಳ್ಳುತ್ತಿದ್ದಂತೆ, ಕತ್ತಲ ಹೊಸ ಪ್ರಪಂಚದಲ್ಲಿ ಇದ್ದಕ್ಕಿದ್ದಂತೆ ಹುಟ್ಟಿಕೊಳ್ಳುವ ಏಕಾಂತದಲ್ಲಿ, ಬಾವಲಕ್ಕಿಯ ಉಚ್ಚೆ ವಾಸನೆ, ಕಾಲಿಗೆ ಪಚಕ್ಕನೆ ಸಿಕ್ಕಿಕೊಂಡು ಗವ್ವೆನ್ನುವ ಇಲಿ ಹೆಗ್ಗಣ; ನಿಚ್ಚಳವಾಗಿ ಅಲ್ಲೆಲ್ಲೋ ಬೇರುಬಿಟ್ಟ ಪುರಾತನ ಗಮಟುನಾತ. ಹೆದರಿಕೆಯಿಂದ ನಡುಗುತ್ತಲೇ ನಡುನಡುವೆ ಪುಟಿದ ಉತ್ಸಾಹದಲ್ಲಿ ಒಂದೊಂದೇ ಬಾಗಿಲನ್ನು ದಾಟುತ್ತಾ… ದಾಟುತ್ತಾ… ಹೊರ ಅಂಗಳ ಸಮೀಪಿಸುತ್ತಿದ್ದವಳಿಗೆ ಮೈಯ ಒಂದೊಂದು ರೋಮವೂ ನಿಮಿರಿನಿಂತು, ಕಿಟಾರನೆ ಕಿರಿಚಿಕೊಳ್ಳುವಂತೆ ಸೀತೆ ವಿಕಾರವಾಗಿ ಧ್ವನಿ ತೆಗೆದು ಸಹಸ್ರಾರು ಮೈಲಿಗಳಾಚಿ ಅರಚಿಕೊಂಡಿದ್ದು ತೀಕ್ಷ್ಣವಾಗಿ ಅಷ್ಟೇ ಭಯಂಕರವಾಗಿ ಒಂದೊಂದೇ ಬಾಗಿಲುಗಳಿಗೆ ಬಡಿಯುತ್ತಾ ನನ್ನ ಕಿವಿಗೆ ಬಂದು, ಅಪ್ಪಳಿಸಿದ್ದು…!

ಇದನ್ನು ಓದಿದ್ದೀರಾ?: ಕೊಡಗಿನ ಗೌರಮ್ಮ ಅವರ ಕತೆ | ವಾಣಿಯ ಸಮಸ್ಯೆ

…ತೆರೆದ ಬಾಗಿಲು ದಾಟಿ ಪಡಸಾಲೆಗೆ ಬಂದರೆ ಎಡಗಡೆ ಸಾಲುಗಟ್ಟಿ ನಿಂತ ಮೆಟ್ಟಿಲು! ಒಂದೊಂದನ್ನೇ ಹತ್ತಿ ಮೇಲೆ ಹೋದರೆ, ಉಪ್ಪರಿಗೆ! ಆ ಕಾಲದಲ್ಲಿ ಸೀತೆ ಒಂಟಿಯಾಗಿ ತಪಸ್ಸು ಮಾಡುತ್ತಾ ಕುಳಿತಿರುತ್ತಿದ್ದ ಗಾಳಿಯುಪ್ಪರಿಗೆ! ಎದುರಿಗೆ ಶಾಂತವಾಗಿ, ತಣ್ಣನೆ ಹರಿಯುವ ಕೆಂಪು ಮಾಲತೀನದಿ, ಎಲ್ಲೋ ಗಾಳಿಗೆ ಸುಂಯೀ ಎಂದು ನೆಲಕ್ಕೆ ಬಾಗುವ ಗಾಳೀಮರಗಳ ಸದ್ದು, ಗೊಟರ್ ಗೊಟರ್ ಗೊಟರ್, ಬಿಟ್ಟೂ ಬಿಟ್ಟೂ ಸದ್ದು ಮಾಡುವ ಮರಕುಟಿಕ ಹಕ್ಕಿ; ಹೊಳೆಯಲ್ಲಿ ಎಮ್ಮೆಗೆ ಮೈ ತೊಳೆಸುತ್ತಾ ಯಾವ ರಾಗಕ್ಕೂ ಬರಲೊಪ್ಪದಂತೆ ಹಾಡುತ್ತಿರುವ ಲಕ್ಷ್ಮಣ, ಆ ಬದಿಯ ಅಗ್ರಹಾರದ ಯಾರದ್ದೋ ಮನೆಯಲ್ಲಿ ತೊಟ್ಟಿಲು ತೂಗುತ್ತಾ ಜೋಗುಳ ಹಾಡುತ್ತಿರುವ ಹೆಣ್ಣು; ಕೆಳಗೆ ಊಟಮಾಡಿ ಎಲೆ ಅಡಿಕೆ ಹಾಕಿಕೊಳ್ಳುತ್ತಾ ಲವಲವಿಕೆಯಿಂದ ಕೋಯ್ಯೋ ಕೊ…ಕ್ ಎಂದು ಉಯ್ಯಾಲೆ ತೂಗಿಕೊಳ್ಳುತ್ತಿರುವ ಅಪ್ಪಣ್ಣ ಮಾವಯ್ಯ; ಪಕ್ಕದ ಕಾಡಿನಲ್ಲಿ ಹುಲ್ಲು ಮೇಯುತ್ತಿರುವ ದನ-ಕರುಗಳ ಕೊರಳಿನ ಗಂಟೆಯ ಗಣಗಣ ನಾದ; ಇಂಪಾಗಿ ಗಾಳಿ ಸೀಳಿ ಅಲೆಅಲೆಯಾಗಿ ಬರುವ ದನಕಾಯುವ ಹುಡುಗರ ಕೊಳಲಧ್ವನಿ; ರಂಜದ ಮರದಿಂದ ಮಾವಿನ ಮರಕ್ಕೆ, ಮಾವಿನ ಮರದಿಂದ ಹಲಸಿನ ಮರಕ್ಕೆ ಪ್ರಣಯದಲ್ಲಿ ತೊಡಗಿ ಹಾರುತ್ತಿರುವ ಎರಡು ಮೈನಾಹಕ್ಕಿ… ಆಕಾಶದಲ್ಲಿ ಗುಂಪಾಗಿ, ಗಾಳಿ ತಿವಿಯುತ್ತಾ ರೆಕ್ಕೆಯ ರಪರಪ ಸದ್ದಲ್ಲಿ ಆ ತುದಿಯಿಂದ ಈ ತುದಿಗೆ, ಈ ತುದಿಯಿಂದ ಆ ತುದಿಗೆ ಹಾರುತ್ತಿರುವ ಬೆಳ್ಳಕ್ಕಿ ಹಿಂಡುಗಳು; ಎದುರಿನ ಗೇರುಸೊಪ್ಪು ಗುಡ್ಡದಲ್ಲಿ ಯಾವ ಎಗ್ಗೂ ಇಲ್ಲದೆ ಸೀರೆಯನ್ನು ಸಂಪೂರ್ಣ ಮೇಲಕ್ಕೆತ್ತಿಕಟ್ಟಿ, ಹೊರೆಸೊಪ್ಪು ಹೊತ್ತು ಬಳುಕುತ್ತಾ ಬರುವ ಯೆಂಕು, ಮೀನಾಕ್ಷಿ, ಚೀರಿ, ಹಾಲಿ… ರಾಮಿ… ಗುಡ್ಡಿ… ಪುಟ್ಟಿ…

ತೆರೆದ ಹಾಗೂ ತೆರೆದುಕೊಳ್ಳುವ ಬಾಗಿಲುಗಳು; ಒಂದು ಇನ್ನೊಂದಕ್ಕೆ ವ್ಯತ್ಯಾಸ ತಿಳಿಯದ ಕೋಣೆಗಳು; ಸೀತೆ ಹುಟ್ಟಿ ಸತ್ತ; ಅಪ್ಪಣ್ಣ ಮಾವಯ್ಯರ ಹುಚ್ಚು ಮರುಕಳಿಸಿ, ಅವರನ್ನು ಕೆರಳಿಸಿ ಕೊನೆಗಾಣಿಸಿದ; ಇದೇ ಈಗ ಸಾವಿತ್ರತ್ತೆಯನ್ನು ಅಂತರಂಗದಲ್ಲಿ ಹಿಡಿದು ಹಿಂಡುತ್ತಿರುವ ಚೌಕಿ ಎಲ್ಲಿದೆಯೋ?

ಇಷ್ಟಗಲ ತೆರೆದು ನಿಂತ ಬಾಗಿಲು ದಾಟಿ ಒಳಗಡಿ ಇಡುತ್ತಿದ್ದಂತೇ ಕಣ್ಣಿಗೆ ಬಿತ್ತು ಚೌಕಿ! ಒಳಗಿನ ಮಂದಬೆಳಕಿನಲ್ಲಿ ಅಸ್ಪಷ್ಟವಾಗಿ ಕಂಡ ಆಕೃತಿ ಕ್ರಮೇಣ ಸ್ಪಷ್ಟವಾಗುತ್ತಿದ್ದಂತೇ, ಸಾವಿತ್ರತ್ತೆಯ ಕೆಂಪು ಸೀರೆ ಮೊದಲು ಕಾಣಿಸಿ ಮೈ ಜುಮ್ಮೆಂದಿತು.

ಚೌಕಿ ಕಂಬಗಳ ನಡುವೆ ಗೋಡೆಗೊರಗಿ ಕೂತು, ಮಾಡು ಸೀಳಿ ಚೌಕಿಹೊಂಡದಲ್ಲಿ ತೆಳ್ಳಗೆ ಅಲ್ಲಾಡುತ್ತಾ ಮೂಡಿದ್ದ ಬಿಸಿಲುಗೋಲನ್ನೇ ನಿಟ್ಟಿಸುತ್ತಿರುವ ಸಾವಿತ್ರತ್ತೆ! ಬಲಗಾಲನ್ನು ಮೇಲೆತ್ತಿ ಬೆತ್ತಲೆ ಬಲಕೈಯಲ್ಲಿ ಅದನ್ನು ಬಳಸಿ, ಎಡಗಾಲು ನೆಲಕ್ಕೂರಿ ಹಿಂದಕ್ಕೊರಗಿ ಕೂತಿದ್ದರು.

ಇದನ್ನು ಓದಿದ್ದೀರಾ?: ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಕತೆ | ಕಮ್ಮಾರ ವೀರಭದ್ರಾಚಾರಿ ಜೋಯಿಸನಾದುದು

ಅರ್ಧ ಸೆರಗಿನಲ್ಲಿ ಮರೆಯಾದ ಬೋಳಿಸಿದ ತಲೆ; ಬೂದು ಬಣ್ಣಕ್ಕೆ ತಿರುಗಿ ಬಿಸಿಲುಗೋಲನ್ನೇ ನಿಟ್ಟಿಸುತ್ತಿದ್ದ ಮಾಸಲು ಕಣ್ಣುಗಳು… “ಸಾವಿತ್ರೀದ್ ಕಣ್ ಅಂದ್ರೆ ಮೀನ್, ಮೀನ್‌ಕಣಾಂಗಿದ್ದು! ನೌಣಾಂಗಿದ್ದು! ಮಾಲತೀಹ್ವಳೀ ಮೀನೂ ನಾಚೂಕು…” ಸಂಜೆಗತ್ತಲಲ್ಲಿ ಚೌಕಿಯಲ್ಲಿ ಹರಡಿದ ನಂದಾದೀಪದ ಹೊಂಬಣ್ಣದಲ್ಲಿ ಅರಿಸಿಣ ಹಚ್ಚಿಕೊಂಡು ಬಂಗಾರದಂತೆ ಪಳಪಳ ಹೊಳೆದ ಅವೇ ಕೆನ್ನೆ, ಗಲ್ಲ ಸುಕ್ಕುಸುಕ್ಕಾಗಿ, ಮಡಿಕೆಗಟ್ಟಿ ಆಳಕ್ಕಿಳಿದಿತ್ತು. ಮೂಗಿನ ಕೆಳಗೆ ಅಪ್ಪಚ್ಚಿಯಾಗಿ ದರದರಗುಟ್ಟುತ್ತಿದ್ದ ಸಾವಿತ್ರತ್ತೆಯ ಒಂದಾನೊಂದು ಕಾಲದ ಕೊರೆದಿಟ್ಟ ತುಟಿ… ಹಿಪ್ಪಿಪ್ಪೆಯಾಗಿ ಅಲ್ಲಾಡುತ್ತಿದ್ದ ಬೊಚ್ಚುಬಾಯಿ…. “ಸುಟ್ಟ ಬದನೇಕಾಯಿ ನಮೂನಿ ಆಗದೆ, ಸಾವಿತ್ರಿ…” ಮುರುಟಿಹೋಗಿ ಜೋತುಬಿದ್ದ ಕೈಯನ್ನು ವಿಚಿತ್ರವಾಗಿ ತಿರುಗಿಸಿ, ಕಪ್ಪಗೆ ಸಣಕಲಾಗಿ ಮಾಸಲು ಸೀರೆಯಲ್ಲಿ ಮತ್ತಷ್ಟು ಮಬ್ಬಾಗಿ, ಚೌಕಿಯ ಮಂದ ಬೆಳಕಿನಲ್ಲಿ ಮಿಣಿಮಿಣಿಯಾದ ಸಾವಿತ್ರತ್ತೆ…!

ಬಹಳ ದಿನಗಳ ಹಿಂದೆ ಚೌಕಿಯ ಬಲಪಕ್ಕದ ಮೂಲೆಯಲ್ಲಿ ಕತ್ತಲೆ ತುಂಬಿದ ದೇವರಕೋಣೆ, ಸಗಣಿ ಹಾಕಿ ಸಾರಿಸಿ, ಬೆಳ್ಳಗೆ ರಂಗೋಲೆ ಹಾಕಿದ ನೆಲ… ಮೇಲೆ ತೊಲೆಗೆ ಮೊಳೆಹೊಡೆದು ಕಟ್ಟಿದ, ಹೊಗೆಯಿಂದ ಮಸುಕಾದ ಶಿವ, ಪಾರ್ವತಿ, ಗಣೇಶ; ರಾಮ-ಲಕ್ಷ್ಮಣ-ಸೀತೆ-ಹನುಮಂತ; ಅಮ್ಮನವರ ದೊಡ್ಡದೊಡ್ಡ ಪಟಗಳು…ನಸುಕಿನಲ್ಲೇ ಎದ್ದು ಹಿತ್ತಲಲ್ಲಿ ಜಾಜಿ, ದಾಸವಾಳ, ಪಾರಿಜಾತ, ಸಂಪಿಗೆ ಹೂವನ್ನು ಬಿಡಿಸಿ, ಸ್ನಾನಮಾಡಿ ಮಿರಮಿರ ಮಿಂಚುತ್ತಾ ಸುತ್ತಲೂ ಬೆಳ್ಳಿಯ ಸಲಕರಣೆಯಿಟ್ಟು ರಾಗವಾಗಿ ಹಾಡು ಹೇಳುತ್ತಾ ಪೂಜೆ ಮಾಡುತ್ತಿದ್ದ ಸಾವಿತ್ರತ್ತೆ. ಮಡಿಯುಟ್ಟು ಕಂಚಿನ ಕಂಠದಲ್ಲಿ ಮಂತ್ರ ಪಠಿಸುತ್ತಾ ಜಣಜಣ ಗಂಟೆ ಬಾರಿಸಿ ದೇವರ ಮನೆಯೊಳಗೆ ಹೊಕ್ಕು ಪೂಜೆ ಮಾಡುತ್ತಿದ್ದ ತಿಪ್ಪಾ ಜೋಯಿಸರ ಮಗ-ಮರಿಭಟ್ಟ; ಕಿಸಕ್ಕನೆ ಹಲ್ಲು ಕಿಸಿದು, ಗುಟ್ಟಾಗಿ ಊರಪಂಚಾಯ್ತಿ ಹರಡಿ, ಊಟಕ್ಕಾಗಿ ಬಾಗಿಲ ಸರಪಣಿ ಕಿಣಿಕಿಣಿ ಮಾಡುತ್ತಾ ಗಂಟೆ ಹನ್ನೆರಡಾದರೂ ನಿಂತೇ ಇರುತ್ತಿದ್ದ ತಿಪ್ಪಾಜೋಯಿಸರ ಮಗಳು, ಸಣ್ಣ ತಂಗಿ… “ಬಂದಿಯಾ? ಬಾ…ಬಾ… ಈಗಷ್ಟೇ ಬಂದದ್ದಾ? ಇಗೊಳ್ಳಿ ಮಣೆ ಹಾಕ್ಕೊಳ್ಳಿ. ಉಂಡು ಹ್ವಾದರಾಯ್ತು. ಉಪಚಾರದ ಮಾತಾಡುತ್ತಾ ಚೌಕಿ ತುಂಬಾ ನಗುನಗುತ್ತಾ ತಿರುಗುತ್ತಿದ್ದ ಸಾವಿತ್ರತ್ತೆ.

ಕಣ್ಣ ಮುಂದೆ ಯಾವದೋ ನೆರಳು ಸುಳಿದಂತಾಗಿ ಸಾವಿತ್ರತ್ತೆ ತಲೆ ಎತ್ತಿದಾಗ, “ನಾನು ಶಾರದೂ, ಸಾವಿತ್ರತ್ತೆ.” ಯಾಕೋ ಗಂಟಲಿನಿಂದ ಸ್ವರವೇ ಏಳುವುದಿಲ್ಲ. ಯಾವುದೋ ದಿಗಿಲು, ತಲೆ ಮುಂದೆ ಬಾಗಿ, ಎಡಕೈಯನ್ನು ಓರೆಯಾಗಿ ಕಣ್ಣಿಗೆ ಹಿಡಿದು ಬೆಳ್ಳಗೆ ಸಾರವೇ ಇಲ್ಲದಂತೆ ಬಿಳುಚಿ ಮುರುಟಿಯೇ ಹೋದ ಕಣ್ಣನ್ನು ಮತ್ತಷ್ಟು ಕಿರಿದುಗೊಳಿಸಿ, ಸೂಕ್ಷ್ಮವಾಗಿ ಏನನ್ನೋ ಅಳೆಯುತ್ತಿರುವ ಹಾಗೆ, ಯಾವುದನ್ನೋ ಹುಡುಕುತ್ತಿರುವ ಹಾಗೆ- ಮತ್ತೆ ಮತ್ತೆ ನನ್ನ ಕಣ್ಣು, ಮೂಗು, ಬಾಯಿಯ ಮೇಲೆಲ್ಲಾ ಸಂಚರಿಸುತ್ತಿರುವ ಸಾವಿತ್ರತೆಯ ತೀಕ್ಷ್ಣ ಕಣ್ಣು!

ಇದನ್ನು ಓದಿದ್ದೀರಾ?: ಕುವೆಂಪು ಅವರ ಕತೆ | ಧನ್ವಂತರಿಯ ಚಿಕಿತ್ಸೆ

ಚೌಕಿಯಲ್ಲಿ ಹಳೇ ಗಬ್ಬು ವಾಸನೆ. ಮಧ್ಯೆ ಮಾಡುಸೀಳಿ ಬೀಳುತ್ತಿದ್ದ ತೀಕ್ಷ್ಣ ಬೆಳಕು. ಸೂರ್ಯ ಮೇಲೇರಿದಂತೆ ನಿರ್ದಿಷ್ಟ ಕೋನದಲ್ಲಿ ಒಳನುಗ್ಗಿದ ಕಿರಣಗಳು ಸಣ್ಣದಾಗಿ ಮರೆಯಾಗುತ್ತಿದ್ದಂತೇ, ಚೌಕಿಯಲ್ಲಿ ಸಟ್ಟನೆ ಆವರಿಸಿದ ದಟ್ಟಗತ್ತಲು. ಕೈಗೆಟಕುವಷ್ಟು ಅಂತರದಲ್ಲಿ, ಕಿವಿಯ ಪಕ್ಕದಲ್ಲೇ ಬಾಲಬಡಿದು, ಪರಾವ್ ಪರಾವ್ ಸದ್ದು ಮಾಡುತ್ತಾ ಹಾರುತ್ತಿರುವ ಬಾವಲಿಗಳು; ಹೆಗ್ಗಣಗಳು ನಾಗಂದಿಗೆ ಡಬ್ಬ ಉರುಳಿಸಿ, ದಡಬಡ ಮಾಡಿದ ಸದ್ದು; ಎಡಬದಿಯ ಮೂಲೆಯಲ್ಲಿ ಕತ್ತಲಲ್ಲಿ ಮುಚ್ಚಿಯೇ ಹೋದ ಉಯ್ಯಾಲೆ ಮೇಲೆ ಹೆಗ್ಗಣ ಜಿಗಿದಿರಬೇಕು- ಇದ್ದಕ್ಕಿದ್ದಂತೇ ಡೋ…ಯ್ಯೋ ಡೋಕ್ ಎಂದು ಕೂಗಿಕೊಂಡಿತು. ಇನ್ನೆಲ್ಲೋ ಇಲಿಯೋ ಹೆಗ್ಗಣವೋ ಕಳ್ಳರ ಹಾಗೆ ಅಡಿಯಿಡುತ್ತಾ ಸರಸರ ಹರಿದಾಡಿ ಒಂದಾನೊಂದು ಕಾಲದ ಸಾವಿತ್ರತ್ತೆಯ ಮಡಿ ಒಲೆಯ ಬೂದಿಯನ್ನು ಕೆದಕುತ್ತಿತ್ತು. ಮೇಲೆ ವರಲೆ ಹಿಡಿದ ನಾಗಂದಿಗೆ ! ಅಲ್ಲಲ್ಲಿ ಹಪ್ಪಳಿಕೆ ಎದ್ದು, ನೆಲದ ಮೇಲೆಲ್ಲಾ ಮರದಪುಡಿ ಉದುರಿತ್ತು. ಎಡಬದಿಯ ಸಂದಿಯಿಂದ ಹೋದ ಒಳಉಪ್ಪರಿಗೆ ಮೆಟ್ಟಿಲು ಕುಸಿದು ದೊಪ್ಪೆ ದೊಪ್ಪೆಯಾಗಿ ಬಿದ್ದಿದ್ದ ಮಣ್ಣಿನ ಹೆಂಟೆ, ಚೌಕಿಯ ತೊಲೆ, ಕಂಬಗಳಲ್ಲಿ ಹಕ್ಕಳೆ ಸೇರಿ ಮರದ ತೊಗಟೆ ಹಿಪ್ಪಿಪ್ಪೆಯಾಗಿ ನೇತಾಡುತ್ತಿತ್ತು, ಕ್ಷಣಕ್ಕೊಮ್ಮೆ ಹಿಂಡುಹಿಂಡಾಗಿ ಕೆಳಗೆ ಬಿದ್ದು ಮಿಲಮಿಲ ಒದ್ದಾಡುತ್ತಾ. ಮಾಸಲುಕಣ್ಣಲ್ಲಿ ಇನ್ನೂ ಜೀವಂತವಿದ್ದ ಸಾವಿತ್ರತ್ತೆಯ ಸುತ್ತಾ ಸುತ್ತುವರಿದ ದುಂಡಗಿನ ಬಿಳಿವರಳೆಗಳು!…

ಸಾಯಂಕಾಲದ ಹೊತ್ತಿನಲ್ಲಿ ಚೌಕಿಯ ಮಬ್ಬುಬೆಳಕಿನಲ್ಲಿ, ದೇವರ ಗೂಡಿಗೆ ಎದುರಾಗಿ ಹೂಬತ್ತಿ ಹೊಸೆಯುತ್ತಾ ರಾಗವಾಗಿ ದೇವರನಾಮ ಹಾಡುತ್ತಾ ಕೂತಿರುತ್ತಿದ್ದ ಸಾವಿತ್ರತ್ತೆಯ ನೆನಪಾಯಿತು. ಬಾಗಿಲ ಸರಪಣಿ ಕಟಕಟ ಸದ್ದಾದರೂ ಸಾಕು… “ಅರೇ ಶಾರದೂ, ಬಂದಿಯಾ?… ಬಾ… ಬಾ…” ಎಂದು ಸಡಗರದಿಂದ ಉಯ್ಯಾಲೆ ಹತ್ತಿ ತಮ್ಮ ಕುಳ್ಳ ಆಕೃತಿಗೆ ಹಾಗೇ ದಕ್ಕದ ನಾಗಂದಿಗೆ ಡಬ್ಬ ತೆಗೆದು, ರವೆಯುಂಡೆ, ಚಕ್ಕುಲಿ, ಕೋಡುಬಳೆ ಕೊಟ್ಟು… “ಸೀತು ಮ್ಯಾಲೆ ಉಪ್ಪರಿಗೆಯಲ್ಲಿದೆ, ಹ್ವಾಗ್…” ಎಂದು ಮತ್ತೆ ಹೂಬತ್ತಿ ಹೊಸೆಯುತ್ತಾ ಅರ್ಧಕ್ಕೆ ಬಿಟ್ಟ ದೇವರನಾಮವನ್ನು ರಾಗವಾಗಿ ಮುಂದುವರೆಸುತ್ತಿದ್ದರು. ದೇವರೆದುರು ಮಣೆಯಿಟ್ಟು, ಟಪ್ ಎಂದು ಎಡಗಡೆಯ ಅಂಗೈ ಮೇಲೆ ಬಲಕೈಯಿಂದ ತಲೆಬಳಸಿ ತಂದು ಹೊಡೆದು, ಕೈಯಲ್ಲಿ ಮೂಗು ಹಿಡಿದು ಭಣಭಣ ಮಾಡಿ, ಮತ್ತೊಮ್ಮೆ ಎರಡೂ ಕೈಯಲ್ಲಿ ಹಾಗೊಮ್ಮೆ ಹೀಗೊಮ್ಮೆ ಚಪ್ಪಾಳೆತಟ್ಟಿ, ಶಂಖ ಮಾಡಿ, ಚಕ್ರ ಮಾಡಿ, ಎದೆ ಸೆಟಸಿ, ಕಣ್ಣುಮುಚ್ಚಿ ತದೇಕಚಿತ್ತದಿಂದ ಮೂಲೆಯಲ್ಲಿ ಸಂಧ್ಯಾವಂದನೆ ಮಾಡುತ್ತಾ ಅಪ್ಪಣ್ಣ ಮಾವಯ್ಯ ಕೂತಿರುತ್ತಿದ್ದರು. ಕೌಳಿಗೆ ಸೌಟಿನ ಗಟಗಟ; ದೇವರಗೂಡಿನಲ್ಲಿ ಬೆಳಗಿದ ನಂದಾದೀಪದ ಮಂದಬೆಳಕು; ಮುಸ್ಸಂಜೆಯ ಮಬ್ಬುಬೆಳಕು; ಸುತ್ತ ಹಬ್ಬಿದ ನೀರವತೆ ಇಂಥ ವಾತಾವರಣದಲ್ಲಿ ಮೆಟ್ಟಿಲೇರಿ, ಒಳಉಪ್ಪರಿಗೆಯ ಒಂದೊಂದೇ ಕೋಣೆಯ ಬಾಗಿಲು ತೆರೆದಂತೆ, ನಿಶ್ಯಬ್ದದಲ್ಲೇ ಇದ್ದಕ್ಕಿದ್ದಂತೆ ಹುಟ್ಟಿಕೊಂಡ ಚೀತ್ಕಾರದಂಥ ಸದ್ದು. ಡರೋದಢಕ್ ಎಂದು ತೆರೆದುಕೊಂಡು ಮತ್ತೆ ಕುಂಯೀ ಎಂದು ಮುಚ್ಚಿಕೊಳ್ಳುವ ಬಾಗಿಲುಗಳು, ಮೆಲ್ಲಗೆ ಒಳಅಡಿಯಿಡುತ್ತಿರುವ ಕತ್ತಲು. ಒಂದು ದಿನ ತೆರೆದ ಬಾಗಿಲಲ್ಲಿ ಎರಡು ಅಸ್ಪಷ್ಟ ಆಕೃತಿಗಳು ಕಾಣಿಸಿದ್ದುವು; ವಿಕಾರವಾಗಿ ಬಾಯಿ ಅಗಲಿಸಿ, ಕಿಟಾರನೆ ಕಿರುಚಿ ಒಂದೊಂದೇ ಬಾಗಿಲನ್ನು ಅಪ್ಪಳಿಸಿ ಅಪ್ಪಳಿಸಿ ಕಿವಿಗೆ ಬಡಿದಿತ್ತು ಒಂಟಿಧ್ವನಿ…!

ವಾಸುದೇವನಲ್ಲವೇ? ಕೊಸರಾಡುತ್ತಾ ಬೆತ್ತಲೆಯಾಗಿ ನೆಲಕ್ಕೆ ಬಿದ್ದು ಮುಸಿಮುಸಿ ಅತ್ತ ಸೀತೆ! ಇನ್ನೂ ಏನೂ ಬೆಳೆಯದ ಮೈಯನ್ನು ತಡಕೀ…ತಡಕೀ…ಹಿಚುಕೀ…ಮೇಲೆ ಬಿದ್ದು ಉರುಳಾಡುತ್ತಾ ಅವಳ ತೊಡೆ ಅಗಲಿಸುತ್ತಿದ್ದ ವಾಸುದೇವ. ಎರಡೂ ಕೈಯನ್ನು ಅಂಗಾತ ಹೊರಚಲ್ಲಿ ನಿಶ್ಚೇಷ್ಟಳಾಗಿ ಬಿದ್ದಿದ್ದ ಸೀತೆ…

ಇದನ್ನು ಓದಿದ್ದೀರಾ?: ಕೆ.ವಿ. ಅಯ್ಯರ್ ಅವರ ಕತೆ | ಅನಾಥೆ ಅನಸೂಯೆ

ಹೆದರಿಕೆಯಿಂದ ಹಿಂದೆಮುಂದೆ ನೋಡದೆ, ಒಂದೇ ಉಸಿರಿನಲ್ಲಿ ದಡಬಡ ಮೆಟ್ಟಿಲಿಳಿದು, ಮನೆಗೋಡಿ ಬಂದಿದ್ದೆ. ಸಂಪೂರ್ಣ ಕತ್ತಲು ಬಡಿದ ಚೌಕಿಯಲ್ಲಿ ಇನ್ನೂ ಕೂತೇ ಇದ್ದ ಸಾವಿತ್ರತ್ತೆ ನಗುತ್ತಾ ಶಾಂತವಾಗಿ… “ಏನಾತೇ? ಯೆಂಥದೇ? ಹೆಗ್ಗಣ, ಗಿಗ್ಗಣ ಏನಾರ ಕಾಲಿಗೆ ಪಚಕ್ ಅಂತೇನೇ?” ಎಂದು ಕೇಳಿದ್ದು ಹಿಂದಿನಿಂದ ತೇಲಿ ಬಂದಂತೆ ನೆನಪು…

ಪಕ್ಕನೆ ಕಾಲಮೇಲೆ ಮೈ ಕೈ ತುಂಬಿ ಕೊಬ್ಬಿದ ಹೆಗ್ಗಣವೊಂದು ಚಂಗನೆ ಹಾರಿದಾಗ, ಬೆಚ್ಚಿ ಹಿಮ್ಮೆಟ್ಟಿದೆ. ಎದುರಿಗೆ ಸಾವಿತ್ರತ್ತೆ ಕೂತ ಜಾಗ ಬೋಳು ಬೋಳಾಗಿ ಇದ್ದಕ್ಕಿದ್ದಂತೆ ನೆಲ ಬಿರಿದಾಯಿತು! ನೆಲದ ಮೇಲೆ ರಾಶಿಯಾಗಿ ಬಿದ್ದ ಬಿಳೀವರಳೆಗಳು ನನ್ನನ್ನೇ ದುರುಗುಟ್ಟಿ ನೋಡಿ, ಮುಂದೆ ಬಂದಂತಾಗಿ ಹೆದರಿ ಹಿಂದೆ ಸರಿದು ನಿಂತು ಧ್ವನಿ ಎತ್ತಿ ‘ಸಾವಿತ್ರತ್ತೆ’ ಅಂದೆ. ಸುತ್ತಲೂ ಹರಡಿನಿಂತ ಶೂನ್ಯತೆ! ಸ್ತಬ್ಧಗೊಂಡ ಚೌಕಿ! ಕಿವಿಗೊಟ್ಟು ಆಲೈಸಿದರೆ ಸಣ್ಣಗೆ ಹೌದೋ ಅಲ್ಲವೋ ಎನ್ನುವಂತೆ, ಒಂದೊಂದೇ ಗೋಡೆಯನ್ನು ಸೀಳಿಕೊಂಡು ಬರುವ ಹೊರಗಿನ ಕಾಡಿನ ಗೊ ಧ್ವನಿ. ಉಪ್ಪರಿಗೆಯ ಮಾಡಿನಲ್ಲಿ ಮಿಯಾಂವ್‌ ಗುಟ್ಟುತ್ತಾ ಬಂದ ಬೆಕ್ಕೊಂದು ಇಲಿ ಹಿಡಿಯಲು ಚಣ್ಣನೆ ಹಾರಿದ ಸದ್ದು. ಸಾವಿನ ಕೊನೆಘಳಿಗೆಯಲ್ಲಿ ಬದುಕುವ ತೀವ್ರ ಹಂಬಲದಲ್ಲಿ ಚಿವ್ ಚಿವ್ ಗುಟ್ಟಿದ ಇಲಿ; ಎದುರಿಗೇ ಆ ಎಂದು ಅಷ್ಟಗಲ ಬಾಯಿತೆರೆದು ನಿಂತ ಕೋಣೆ!

“…ಅಪ್ಪಣ್ಣಮಾವಯ್ಯರಿಗೆ ಹುಚ್ಚು ಮರುಕಳಿಸಿ ಕೆರಳಿದಾಗ, ಚೌಕಿಯ ಬದಿಯ ಕ್ವಾಣೀಲಿ ಕೂಡುಹಾಕಿದ್ದಂತೆ …ವಾಸುದೇವ, ಅದೆಲ್ಲಿಂದಲೋ ಎರಡು ಸರಪಣಿ ತಂದು, ಕಾಲಿಗೊಂದು ಕೈಗೊಂದು ಕಟ್ಟಿ ಹಾಕಿದ್ದನಂತೆ… ಅಪ್ಪಣ್ಣಮಾವಯ್ಯ ಬುದ್ಧಿತಿಳಿದು… “ಬ್ಯಾಡ! ಬ್ಯಾಡ! ಅಯ್ಯೋ ಅಮ್ಮಾ! ಬ್ಯಾಡ! ಎಂದು ಕಿರಿಚಿಕ್ಕೊಂಡೂ ಬಿಡದೇ ಸರಪಣಿ ತ್ವಡ್‌ಸಿ, ಕಂಬಕ್ಕಟ್ಟಿ ಕ್ವಾಣೀಗೆ ಬೀಗ ಜಡಿದು ವಿಕಟನಗೆ ನಗುತ್ತಾ ತಿರುಗುತ್ತಿದ್ದನಂತೆ. ಸಾವಿತ್ರತ್ತೆ ಅತ್ತೂ ಅತ್ತೂ ಸುಣ್ಣವಾದರೂ, ಕೇಳಲಿಲ್ಲವಂತೆ. ಬಾಗಿಲು ತೆಗೆದು ದಿನಕ್ಕೆರಡು ಊಟ ಬಿಟ್ಟು ಮತ್ತೆ ಬೀಗ ಬಿಗಿದು ಕೀಲಿಕೈ ಕೈಯಲ್ಲಿ ಗರಗರ ತಿರುಗಿಸುತ್ತಾ ಇಡೀ ಮನಿ ಯಜಮಾನಿಕೆ ಹೊತ್ತವನ ಕಣ್ಣಾಂಗೆ ಜಬರ್ದಸ್ತು ತ್ವಾರಿದ್ದೇ ತ್ವಾರಿದ್ದಂತೆ.”

ಮೆಲ್ಲಗೆ ಚೌಕಿ ದಾಟಿ, ಬಾಯಿ ಕಳೆದು ನಿಂತ ಕೋಣೆಯ ಬಾಗಿಲುಹಾದು, ಒಳಗಡಿಯಿಟ್ಟೆ. ಹೂಂ… ಹೂಂ… ಬಿಟ್ಟೂ ಬಿಟ್ಟೂ ಬಂದ ಯಾರದ್ದೋ ನರಳಾಟ “ಸಾವಿತ್ರತ್ತೆ..!” ನನ್ನ ಧ್ವನಿ ನಡುಗಿದ್ದು ಕಂಡು ಕಂಗಾಲಾದೆ.

ಕೋಣೆಯಲ್ಲಿ ಎಂದೋ ಮುಚ್ಚಿದ ಕಿಟಕಿಗಳು; ಗಾಳಿಯೇ ಇಲ್ಲದೆ ಸುತ್ತಲೂ ಹರಡಿ ನಿಂತ ಮಬ್ಬು; ಮೂಗಿಗೆ ಹೊಡೆದ ಕೊಳೆತ ವಾಸನೆ. ಕಾಲಿಗೆ ಏನೋ ಅಡರಿದಂತಾಗಿ ಬಗ್ಗಿದೆ. ಮನುಷ್ಯರ ಕೈ! ಕತ್ತಲಲ್ಲಿ ಸಾವಿತ್ರತ್ತೆಯ ಬೂದುಬಣ್ಣಕ್ಕೆ ತಿರುಗಿದ ಮುಖದಲ್ಲಿ ಗಾಜಿನಂತೆ ಹೊಳೆಯುತ್ತಾ ನನ್ನನ್ನೇ ನಿಟ್ಟಿಸಿದ ಮುದಿಗಣ್ಣುಗಳು; ಬೆಳ್ಳಗೆ ಬಿಳುಚಿ, ಮುರುಟಿ ಎಲುಬಿನ ಹಂದರವಾದ ಕೈಯೊಂದು ನೇತಾಡುತ್ತಾ ಸಟ್ಟನೆ ನನ್ನ ಕೈಹಿಡಿದು ಏನೋ ತುರುಕಿ, ಸುಕ್ಕುಗಟ್ಟಿದ ಗಂಟಲು ಅಷ್ಟಗಲ ತೆರೆದು ನಕ್ಕಂತಾಗಿ ಬೆಚ್ಚಿಬಿದ್ದೆ!

ಇದನ್ನು ಓದಿದ್ದೀರಾ?: ಭಾರತೀಪ್ರಿಯ ಅವರ ಕತೆ | ಒಂದು ಹಳೆಯ ಕತೆ

ಕತ್ತಲಲ್ಲಿ ಸ್ಪಷ್ಟವಾಗಿ ಕೇಳಿದ ಗಂಟಲಿನ ಗೊರಗೊರ ಸದ್ದು. ಮತ್ತೊಂದು ಕ್ಷಣದಲ್ಲಿ ಸ್ತಬ್ಧಗೊಂಡ ಹಾಗೆ! ಡಂರೋ ದಢರ್ ಎಲ್ಲೋ ಬಾಗಿಲು ತೆಗೆದ ಸದ್ದು; ಜೊತೆಗೆ ಕುಂಯೀ ಎಂದು ಮುಚ್ಚಿಕೊಂಡಂತೆ; ಮತ್ತೆ ಡರ್‍ರೋ ದಢ‌ರ್ ಎಂದು ಇನ್ನೊಂದು ಬಾಗಿಲು ತೆರೆದು ಕುಂಯೀ ಎಂದು ಮುಚ್ಚಿಕೊಂಡಂತೆ…ಮೆಲ್ಲಗೆ ಮೆಟ್ಟಲಿಳಿದು, ಚೌಕಿಯಲ್ಲಿ ಸರಸರನೆ ಕಾಲು ಎತ್ತಿ ಹಾಕಿ ಬದಿಯ ಕೋಣೆಗೆ ಹೋದಹಾಗೆ…ಬಾಗಿಲಲ್ಲಿ ಇಣುಕಿದ ಯಾರದ್ದೋ ನೆರಳು!…

ಜೀವ ಜಿಲ್ಲೆಂದು ಚೌಕಿಗೆ ಓಡಿದೆ. ಒಳ ಉಪ್ಪರಿಗೆಯ ಬಾಗಿಲು ಕೀ ಎಂದಂತಾಗಿ ತಿರುಗಿದೆ. ದೀಪದ ಸೊಡರು ಹಿಡಿದು ಮೆಲ್ಲಗೆ ಉಪ್ಪರಿಗೆಯ ಮೆಟ್ಟಿಲೇರಿ ಹೋದ ಸಾವಿತ್ರತ್ತೆ!

“ದೈವ! ದೈವ! ದೈವ ಬಡದ್‌ದದೆ ಇಡೀ ಮನೀಗೆ…!” ‘ಅಯ್ಯೋ!’ ತೆರೆದ ವಾಸ್ತವದ ಬಾಗಿಲು ದಾಟಿ, ಹೆಬ್ಬಾಗಿಲಿಗೆ ಓಡಿದೆ.

ನನ್ನ ಹಿಂದೆ ಸರಸರ ನಡೆಯುತ್ತಾ ಹಿಂಬಾಲಿಸಿಕೊಂಡು ಬರುತ್ತಿರುವ ಬಿಳಿ ವರಳೆಗಳು! ಅಂಗಾಲಿಗೆ ತಣ್ಣಗೆ ಅಂಟುತ್ತಿದ್ದ ಕೆಂಪು ಧೂಳು! ಕಣ್ಣಿಗೆ, ಕೈಗೆ ಅಲೆಅಲೆಯಾಗಿ ಬರುವ ಚಿತ್ತಾರದ ಜೇಡರಬಲೆ! ಅಲ್ಲಲ್ಲಿ ಬಿದ್ದು ಕಾಲಿಗೆ ತೊಡರುತ್ತಿದ್ದ ಹಿತ್ತಾಳೆ, ತಾಮ್ರದ ಪಾತ್ರೆಗಳು!.. ಬಾಯಿ ತೆರೆದು ನಿಂತ ಖಾಲಿ ಕೊಡಪಾನ! ರಾಶಿ ರಾಶಿ ಹಿಕ್ಕೆಗಳು, ಹಕ್ಕಳೆಗಳ ಮುರಿದ ರೆಕ್ಕೆ ಚೂರುಗಳು… ಇಲಿ ಬಾಲಗಳು…!

ಬಾಗಿಲಲ್ಲಿ ಏನೋ ಸದ್ದಾದಂತಾಗಿ ತಿರುಗಿದೆ. ಮರದ ಚೌಕಟ್ಟಿಗೆ ಅಡ್ಡಲಾಗಿ ನಿಂತ ಯಾರದ್ದೋ ಆಕೃತಿ…ಗಂಟಲೆತ್ತಿ ನಕ್ಕು ಗಾಳಿಗೆ ತೇಲುತ್ತಾ ಕೈ ಚಾಚಿ ಮುಂದೆ ಬಂದ ಗಂಡಸು! “ಬಂದಿಯಾ? ಬಂದಿಯಾ? ಬಾ… ಬಾ…” ಬೆಳಕಿಗೆ ಕಂಡ ಮುಖ ವಾಸುದೇವನದೆ?…

“ಅಯ್ಯೋ ಅಮ್ಮಾ..!”

ಕಣ್ಣುಬಿಟ್ಟಾಗ ನನ್ನ ಸುತ್ತಲೂ ಅತ್ತಿಗೆ, ಶ್ರೀಕಂಠಣ್ಣ, ಪಾರೋತಿ ಸುತ್ತುವರೆದಿದ್ದರು. ಎಲ್ಲರ ಮುಖದಲ್ಲೂ ಏನೋ ಆತಂಕ, ಗಾಬರಿ, ಎಂಥದೋ ಪ್ರೇತಕಳೆ! ಕಾಲಿಗೆ ಬೂದಿಯೋ ಏನೋ ತಿಕ್ಕುತ್ತಿದ್ದ ಶ್ರೀಕಂಠಣ್ಣ ಪ್ರೀತಿಯಿಂದ ಕೇಳಿದ- “ಈಗ ಆರಾಮ…?” ಒಂದು ಕ್ಷಣ ಯಾವುದೂ ಅರ್ಥವಾಗದೆ ಕಣ್ಣು ಪಿಳಿಪಿಳಿ ಮಾಡಿ ಹೂಂಗುಟ್ಟಿದೆ. ನನ್ನ ಮುಖದಲ್ಲಿ ಯಾವ ಭಾವ ಮೂಡಿತ್ತೋ? ಅರ್ಥವಾದವನಂತೆ ಶ್ರೀಕಂಠಣ್ಣ ಅಕ್ಕರೆಯಿಂದ ಬೆನ್ನು ಸವರುತ್ತಾ ನಿಧಾನವಾಗಿ ಅಂದ, “ನಂದೇ ತಪ್ಪು ನೋಡು, ಬೆಂಗಳೂರಿಗೆ ಬಂದಾಗ ನಾ ಯೆಂತೋ ಅಂದೇ ಇದ್ದಿದ್ರೆ ನೀ ಈ ಪಾಟಿ ತ್ರಾಸ ತಕ್ಕೊಂಡು ಇಲ್ಲಿಗೆ ಬರುತ್ತೇ ಇರ್ಲೋ ಏನ್‌ಕತೀಯೊ? ನಾ ಅಂದೇಂತ ನೀ ಬಂದಿ. ಮುಂಚೆಯೇ ಸಾವ್ ಹೊಕ್ಕ ಮನೀಯದು! ಯೆಂಥಾತೋ ನಿಂಗೆ? ಬಿಸಿಲ್‌ನಲ್ಲಿ ಗಣಹಿಡ್ದವ್ರಂಗೆ ತರತರ ನಡುಗುತ್ತಾ ಓಡಿಬಂದವಳೇ ನಡುಮನೀಲಿ ದೊಪ್ಪಂತ ಬಿದ್ದೀಯಪ್ಪ. ಯೆಂಥದೇ? ಸಾವಿತ್ರತ್ತೆ ಯೆಂತಾರ ಹೇಳ್‌ತ್ತನೇ?”

ಇದನ್ನು ಓದಿದ್ದೀರಾ?: ಕೊರಡ್ಕಲ್ ಶ್ರೀನಿವಾಸರಾವ್ ಅವರ ಕತೆ | ಧನಿಯರ ಸತ್ಯನಾರಾಯಣ

ನನ್ನ ಕಣ್ಣ ಮುಂದೆ ಸಾವಿತ್ರತ್ತೆಯ ಮಾಸಲು ರೂಪು ಮಸುಕುಮಸುಕಾಗಿ ತೇಲಿಬಂತು. ಸದಾ ಕತ್ತಲಾವರಿಸಿಕೊಂಡ ದೊಡ್ಡಮನೆ… ಮುರಿದುಬಿದ್ದ ಗಾಳಿಯುಪ್ಪರಿಗೆ… ಕುಸಿದ ಚೌಕಿ, ಹೊಂಡ ಹುಳ ಹಿಡಿದು ಪೊಳ್ಳಾದ ನಾಗಂದಿಗೆ… ತೊಲೆ… ಚೌಕಿಕಂಬ. ಎಲುಬಿನ ಹಂದರವಾಗಿ ಬೆಳ್ಳಗೆ ಬಿಳುಚಿ ನಡುಗುತ್ತಾ ಮುಂದೆ ಬಂದ ಸಾವಿತ್ರತ್ತೆಯ ಮುಪ್ಪುಬಡಿದ ಕೈ! ಸೆರಗಿನಲ್ಲಿ ಮುಚ್ಚಿಯೇ ಹೋದ ನನ್ನ ಬಲಕೈಯಲ್ಲಿ ಸಾವಿತ್ರತ್ತೆ ಕೊಟ್ಟ ಯಾವುದೋ ಗುಪ್ತಗಂಟು… ಕ್ಷಣ ಕ್ಷಣಕ್ಕೂ ಭಾರವಾಗಿ, ಕೈಮುಷ್ಟಿಯಲ್ಲಿ ಬಿಗಿಯಾಗಿ…ಕ್ರಮೇಣ ಬಿಸಿಯಾಗಿ ಇಡೀ ಮೈ ಆವರಿಸಿಕೊಳ್ಳುತ್ತಿದ್ದಂತೆನಿಸಿ, ಮಲಗಿದ್ದಲ್ಲಿಂದ ದಡ್ಡನೆ ಎದ್ದು ಕುಳಿತೆ. ಎಲ್ಲೋ ದೂರದಲ್ಲಿ, ಸಹಸ್ರಾರು ಮೈಲಿಗಳಾಚೆ ನನ್ನ ಬರುವಿಕೆಗಾಗಿ ಕಾದು ಕುಳಿತ ಇವರೂ, ಮಕ್ಕಳೂ ಕಾದು…ಕಾದು…ಕಂಗಾಲಾದಂತೆ; ಕೊನೆಗೂ ಬಾರದ ನನಗಾಗಿ ಹತಾಶರಾದಂತೆ ಅನಿಸಿ, ದುಃಖ ಒತ್ತರಿಸಿ ಬಂದು, ಎಲ್ಲರೆದುರೇ ಸಣ್ಣ ಮಗುವಿನಂತೆ ಧ್ವನಿ ತೆಗೆದು… “ಈಗಲೇ ಈ ಕ್ಷಣವೇ ನನ್ನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗು” ಎಂದು ಶ್ರೀಕಂಠಣ್ಣನ ಕುತ್ತಿಗೆಗೆ ಜೋತುಬಿದ್ದು ಬಿಕ್ಕಿದೆ.

ಬೆಂಗಳೂರಿಗೆ ಬಂದು ಆಗಲೇ ಅದೆಷ್ಟು ದಿನಗಳು ಕಳೆದವೋ? ಸಾವಿತ್ರತ್ತೆ ಕೊಟ್ಟ ಆ ಕರಡಿಗೆ ಮಾತ್ರ ನನ್ನ ಬೀರುವಿನಲ್ಲಿ ಭದ್ರವಾಗುಳಿದಿದೆ. ಊರಿಗೆ ಬಂದ ದಿನವೇ ತೆರೆದು ನೋಡಿದಾಗ, ಕಣ್ಣಿಗೆ ಕಂಡದ್ದು ಪಳಕ್ಕನೆ ಹೊಳೆದ ವಜ್ರದ ಮೂಗುಬೊಟ್ಟು! ಜೊತೆಗೆ ಸಾವಿತ್ರತ್ತೆ ತಮ್ಮ ಅಂಕುಡೊಂಕು ಅಕ್ಷರದಲ್ಲಿ ಬರೆದ ಚಿಂದಿಚಿಂದಿಯಾಗಿ ಮಣಕಲು ವಾಸನೆ ಹೊಡೆಯುತ್ತಿದ್ದ ಒಂದು ಪುಟ್ಟ ಪತ್ರ. ಮಡಿಕೆಗಳೆಲ್ಲ ಹರಿದು, ಹಕ್ಕಳೆ ತಿಂದು ಮುಕ್ಕಾಗಿ, ಗೋಜುಗೋಜಾದ ಅಕ್ಷರಗಳಲ್ಲಿ ಕಣ್ಣಿಗೆ ಗೋಚರಿಸಿದ್ದು ಇಷ್ಟು ಮಾತ್ರ. “ಸೀತು ಬದುಕ್‌ದೆ… ಈ ಮೂಗುಬೊಟ್ಟು ಯಾರಿಗ್ ಸಿಕ್ಕೂ ಸೀತೂಗೇ ಕೊಡೋಕು”.

ನಾನು ಊರಿಗೆ ಬಂದ ಒಂದು ವಾರದಲ್ಲೇ ಶ್ರೀಕಂಠಣ್ಣನಿಂದ ಸಾವಿತ್ರತ್ತೆ ಸತ್ತ ಸುದ್ದಿ ಹೊತ್ತ ಪತ್ರ ಬಂದಿತ್ತು. ಹೆಣ ಗುರುತುಹಿಡಿಯಲಾಗದಷ್ಟು ವಿಕಾರವಾಗಿತ್ತಂತೆ; ವಾಸುದೇವ ಗೋಳಾಡುತ್ತಾ ಸಂಸ್ಕಾರ ನಡೆಸಿ, ಇಡೀ ಊರಿಗೆ ಭರ್ಜರಿ ಊಟ ಹಾಕಿಸಿದನಂತೆ. ಇನ್ನೊಂದು ದಿನ ಪಾರೋತಿಗೆ ಗಂಡು ಗೊತ್ತಾದ ಶುಭಸುದ್ದಿ ಹೊತ್ತ ಪತ್ರವೂ ಬಂತು.

ಇದನ್ನು ಓದಿದ್ದೀರಾ?: ಬಾಗಲೋಡಿ ದೇವರಾಯ ಅವರ ಕತೆ | ಅವರವರ ಸುಖದುಃಖ

ಓದಿ ಮನಸ್ಸಿಗೆ ಏನಾದರೂ ವಿಶೇಷ ಅನ್ನಿಸಿತೋ ಇಲ್ಲವೋ ತಿಳಿಯದು. ಸುಮ್ಮನೆ ಮಡಿಚಿಟ್ಟಿದ್ದೆ. ವಜ್ರದ ಮೂಗುಬೊಟ್ಟು ಮಾತ್ರ ನನ್ನ ಮನೆಯಲ್ಲಿ ಈಗಲೂ ಹಾಗೇ ಇದೆ. ಬೆಳಿಗ್ಗೆ, ಮಕ್ಕಳೂ ಇವರೂ ಶಾಲೆ, ಆಫೀಸಿಗೆ ಹೋದ ಮೇಲೆ, ಬೀರು ಬಾಗಿಲು ತೆಗೆದು ಸೀದಾ ಒಳನುಗ್ಗಿ ನಮ್ಮ ಮನೆಯ ಊಟದ ಮೇಜನ್ನು ಅಲಂಕರಿಸುತ್ತದೆ. ಪಳಪಳ ಹೊಳೆಯುತ್ತಾ, ಏಕಕಾಲದಲ್ಲಿ ಹತ್ತಾರು ದಿಕ್ಕಿನತ್ತ ಮುಖ ಹೊರಳಿಸಿ ಸಹಸ್ರಾರು ಬಣ್ಣ ಚೆಲ್ಲಿ ವರ್ತಮಾನದಲ್ಲಿ ಎಂಥವನ್ನೋ ಬಿತ್ತರಿಸುವ ಕಾತುರದಲ್ಲಿ ಹಾತೊರೆಯುತ್ತಾ- ಮಾಲತಿಹೊಳೆಯಲ್ಲಿ ಕೊಳೆತು ನಾರಿದ ಸೀತೆ- ನೀರು ಕುಡ್ದು ವಿಕಾರವಾಗಿ ಉಬ್ಬಿ ಸುಟ್ಟುಹೋದ ಸೀತೆ- ಇದೀಗ ಸಾವಿತ್ರತ್ತೆ ಪತ್ರದಲ್ಲಿ ಎಚ್ಚೆತ್ತು ಎಲ್ಲೋ ದೂರ… ಅನಂತದಾಚೆ… ಬದುಕಿರುವ ಸೀತೆಯಾಗಿ, ನಿಧಾನವಾಗಿ ಕಾಲು ಎತ್ತಿ ಎತ್ತಿ ಹಾಕಿ, ನಮ್ಮ ಮನೆಯ ಬಾಗಿಲು ತಟ್ಟಿ, ಮೆಟ್ಟಿಲು ಹತ್ತಿ ಮೇಲೆ ಬಂದು, ಬೀರಿನ ಬಾಗಿಲು ತೆಗೆದು ತನ್ನನ್ನು ಕೊಂಡೊಯ್ಯಬಹುದೆಂದು ನಿರೀಕ್ಷಿಸುತ್ತಾ ಬಿಚ್ಚಿಕೊಳ್ಳುವ ಮತ್ತೊಂದೇ ನಿಗೂಢಕ್ಕಾಗಿ ಮೌನವಾಗಿ ಕಾಯುತ್ತಿದೆ…

(ಕೃಪೆ: ಶತಮಾನದ ಸಣ್ಣ ಕತೆಗಳು, ಸಂ: ಎಸ್.ದಿವಾಕರ್, ಪ್ರ: ಪ್ರಿಸಂ ಬುಕ್ಸ್ ಪ್ರೈ.ಲಿ. ಬೆಂಗಳೂರು)

Jayashri Diwakar

ಜಯಶ್ರೀ ದಿವಾಕ‌ರ್ (1959): ಕಾಸರವಳ್ಳಿ ಸಮೀಪದ ಕೇಸಲೂರಿನಲ್ಲಿ 1959ರ ಆಗಸ್ಟ್ 9ರಂದು ಜನಿಸಿದರು. ಶಾಲೆಯಿಂದ ಪದವಿಯವರೆಗಿನ ತಮ್ಮ ವಿದ್ಯಾಬ್ಯಾಸವನ್ನು ಶಿವಮೊಗ್ಗದಲ್ಲಿ ಪೂರೈಸಿದ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ ಪದವಿ ಪಡೆದವರು. ಬಹಳಷ್ಟು ವರ್ಷ ಚೆನ್ನೈನಲ್ಲಿ ನೆಲೆಸಿ, ಅಲ್ಲಿನ ಭಾರತ್ ಸೀನಿಯರ್ ಸೆಕೆಂಡರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿದರು. ಪ್ರಕಟಿತ ಕೃತಿಗಳು: ‘ತಂತಿ ಬೇಲಿಯ ಒಂಟಿ ಕಾಗೆ’, ‘ದಿನಚರಿಯ ಕಡೇ ಪುಟದಿಂದ’, ‘ಚಿತ್ರಗುಪ್ತನ ಸನ್ನಿಧಿಯಲ್ಲಿ’ ಕಥಾಸಂಕಲನಗಳು; ‘ಮದರ್ ತೆರೆಸಾ’ ಒಂದು ಜೀವನ ಚಿತ್ರ; ‘ತೊಳರಾಯನ ತಿಪ್ಪರಲಾಗ’, ‘ಈ  ಊರಿನಲ್ಲಿ ಕಳ್ಳರೇ ಇಲ್ಲ’ ಮುಂತಾದ 30ಕ್ಕೂ ಹೆಚ್ಚು ಮಕ್ಕಳ ಕತೆಗಳು; ಜಮೈಕಾ ಕಿಂಕೇಡ್, ಆಲಿವ್ ಸೀನಿಯರ್, ಮರಿಯಾ ಡೆರ್ಮೂತ್ ಮೊದಲಾದ ವಿದೇಶೀ ಲೇಖಕಿಯರ ಕತೆಗಳ ಅನುವಾದ. ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರ, ಕರ್ನಾಟಕ ಲೇಖಕಿಯರ ಸಂಘದ ಎಚ್.ವಿ. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ಪ್ರಶಸ್ತಿ, ಧಾರವಾಡದ ವಿದ್ಯಾವರ್ಧಕ ಸಂಘದ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರು ಪ್ರತಿಷ್ಠಾನದ ‘ಅಮ್ಮ ಪ್ರಶಸ್ತಿ’ ಮುಂತಾದ ಅನೇಕ ಗೌರವಗಳು ಸಂದಿವೆ. ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಡಿ.ಆರ್. ನಾಗರಾಜ್ ಅವರ ಕತೆ | ನಗರದೇವಿಯ ದರ್ಶನ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಗೀತಾ ನಾಗಭೂಷಣ ಅವರ ಕತೆ | ಕಿಚ್ಚಿಲ್ಲದ ಬೇಗೆಯಲ್ಲಿ ಬೆಂದೆನವ್ವಾ…

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಅಮರೇಶ ನುಗಡೋಣಿ ಅವರ ಕತೆ | ತಮಂಧದ ಕೇಡು

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ವಿವೇಕ ಶಾನಭಾಗ ಅವರ ಕತೆ | ಲಂಗರು

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...