ಮಧ್ಯಪ್ರಾಚ್ಯ ಯುದ್ಧಕ್ಕೆ ಆರು ತಿಂಗಳು ತುಂಬುತ್ತಿರುವ ಸಂದರ್ಭದಲ್ಲಿ, ಪ್ರಾದೇಶಿಕ ಮುಸ್ಲಿಂ ರಾಷ್ಟ್ರಗಳು ಒಗ್ಗೂಡಿ ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ನಿಲ್ಲಬೇಕು ಎಂದು ಇರಾನ್ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಕರೆ ನೀಡಿದ್ದಾರೆ.
ಶಿಯಾ ಮುಸ್ಲಿಮರು ಪ್ರವಾದಿ ಮೊಹಮ್ಮದ್ ಅವರ ಜನ್ಮದಿನ ಆಚರಿಸುತ್ತಿರುವ ಸಂದರ್ಭದಲ್ಲಿ ಭಾನುವಾರ ಲಿಖಿತ ಸಂದೇಶ ಹೊರಡಿಸಿರುವ ಖಮೇನಿ, “ಇಸ್ಲಾಮಿಕ್ ರಾಷ್ಟ್ರಗಳ ಸಮಸ್ಯೆಗಳಿಗೆ ಪರಿಹಾರವವು ಏಕತೆ, ಸ್ನೇಹ ಹಾಗೂ ಒಳ್ಳೆಯ ಸಹಕಾರದಲ್ಲಿದೆ” ಎಂದು ಹೇಳಿದ್ದಾರೆ.
“ಮುಸ್ಲಿಮರ ನಡುವೆ ಭಿನ್ನಾಭಿಪ್ರಾಯ ಮತ್ತು ಸಂಘರ್ಷ ಉಂಟುಮಾಡುವ ಯಾವುದೇ ನಡೆ, ಅದು ಉದ್ದೇಶಪೂರ್ವಕವಾಗಿರಲಿ ಅಥವಾ ಅರಿವಿಲ್ಲದೆ ಆಗಿರಲಿ, ಇಸ್ಲಾಂನ ಶತ್ರುಗಳ ಉದ್ದೇಶಕ್ಕೆ ನಾವು ನೀರೆರೆಯುವಂತಾಗಬಾರದು” ಎಂದು ಅವರು ಎಚ್ಚರಿಸಿದ್ದಾರೆ.
ಪ್ರಾದೇಶಿಕ ರಾಷ್ಟ್ರಗಳ ಆಡಳಿತಗಾರರನ್ನು ಉದ್ದೇಶಿಸಿ ಮಾತನಾಡಿದ ಖಮೇನಿ, “ನಿಮ್ಮ ನಿಜವಾದ ಶತ್ರು ಯಾರು ಎಂಬುದನ್ನು ಗುರುತಿಸಿ, ಅವರ ಯೋಜನೆಯನ್ನು ಅರ್ಥಮಾಡಿಕೊಳ್ಳಿ ಹಾಗೂ ಅದನ್ನು ಎದುರಿಸಿ” ಎಂದು ಕರೆ ನೀಡಿದ್ದಾರೆ. ಅವರು ಅಮೆರಿಕ ಮತ್ತು ಇಸ್ರೇಲ್ಗಳು ಮಧ್ಯಪ್ರಾಚ್ಯದ ಶತ್ರಗಳು ಪರೋಕ್ಷವಾಗಿ ಸೂಚಿಸಿದ್ದಾರೆ.
ಫೆಬ್ರವರಿ 28ರಂದು ಯುದ್ಧ ಆರಂಭವಾದ ಬಳಿಕ, ಸೌದಿ ಅರೇಬಿಯಾ, ಯುಎಇ, ಜೋರ್ಡನ್, ಕುವೈತ್, ಕತಾರ್ ಹಾಗೂ ಬಹ್ರೇನ್ ಸೇರಿದಂತೆ ಮಧ್ಯಪ್ರಾಚ್ಯದ ವಿವಿಧ ಭಾಗಗಳಲ್ಲಿರುವ ಅಮೆರಿಕದ ಸೈನಿಕ ನೆಲೆಗಳನ್ನು ಇರಾನ್ ಗುರಿಯಾಗಿಸಿತ್ತು. ಆ ದಾಳಿಗಳ ಬಳಿಕ ಇರಾನ್ ಮತ್ತು ಈ ರಾಷ್ಟ್ರಗಳ ನಡುವಿನ ಸಂಬಂಧವೂ ಹದಗೆಟ್ಟಿದೆ.
ಮೊಜ್ತಬಾ ಖಮೇನಿ ಅವರು ತಮ್ಮ ತಂದೆ ಅಲಿ ಖಮೇನಿ ಯುದ್ಧದ ಆರಂಭಿಕ ಹಂತದಲ್ಲೇ ಸಾವಿಗೀಡಾದ ನಂತರ ಅಧಿಕಾರಕ್ಕೆ ಬಂದಿದ್ದರು. ಆದರೆ, ನೇಮಕವಾದ ದಿನದಿಂದಲೂ ಅವರು ಇನ್ನೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಅಧಿಕಾರಿಗಳು ಅವರ ಯಾವುದೇ ಹೊಸ ವಿಡಿಯೋ ಅಥವಾ ಆಡಿಯೋ ಸಂದೇಶವನ್ನು ಬಿಡುಗಡೆ ಮಾಡಿಲ್ಲ ಎನ್ನಲಾಗಿದೆ.
ಇರಾನ್ನ ಪ್ರಮುಖ ನೀತಿ ನಿರ್ಧಾರಗಳ ಅಂತಿಮ ಅಧಿಕಾರ ಖಮೇನಿ ಅವರಿಗಿದ್ದು, ದೇಶದ ಒಳಗಿನ ಭಿನ್ನಾಭಿಪ್ರಾಯಗಳನ್ನೂ ಬದಿಗಿಟ್ಟು ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಒಂದಾಗಿ ನಿಲ್ಲುವಂತೆ ಅವರು ಅಧಿಕಾರಿಗಳು ಮತ್ತು ನಾಗರಿಕರಿಗೂ ಕರೆ ನೀಡಿದ್ದಾರೆ.
“ಇರಾನ್ ಜನರು ಯಾವುದೇ ರೀತಿಯ ಒಳಭಿನ್ನತೆಗಳಿಗೆ ಅವಕಾಶ ಕೊಡಬಾರದು” ಎಂದು ಅವರು ಹೇಳಿದ್ದಾರೆ.



