ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ ಅಥವಾ ಪ್ರಶ್ನೆಗಳನ್ನು ಕೇಳಿದ ಕಾರಣಕ್ಕೆ ವಿದ್ಯಾರ್ಥಿಗಳಿಗೆ ಶಿಕ್ಷೆ ವಿಧಿಸುವುದು ಅಥವಾ ಅವರ ವಿರುದ್ಧ ಕಠಿಣ ಕ್ರಮದ ಬೆದರಿಕೆ ಹಾಕುವುದು ಸಂವಿಧಾನಬಾಹಿರ ಹಾಗೂ ಅಧಿಕಾರದ ದುರುಪಯೋಗ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರು ಪ್ರತಿಪಾದಿಸಿದ್ದಾರೆ.
ದೆಹಲಿಯ ನ್ಯಾಷನಲ್ ಲಾ ಯೂನಿವರ್ಸಿಟಿಯ (NLU) 13ನೇ ಪದವಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿಶ್ವವಿದ್ಯಾನಿಲಯಗಳು ಸ್ವತಂತ್ರ ಚಿಂತನೆ ಮತ್ತು ಮುಕ್ತ ಸಂವಾದದ ಕೇಂದ್ರಗಳಾಗಬೇಕು ಎಂದು ಕರೆ ನೀಡಿದರು.
ಇದನ್ನೂ ಓದಿ: ಗಂಗಾ ನದಿಯ ಮೇಲೆ ಮಾಂಸ ತಿನ್ನುವುದನ್ನು ನಿಷೇಧಿಸುವ ಯಾವುದೇ ಕಾನೂನು ಇಲ್ಲ: ನ್ಯಾ. ಉಜ್ಜಲ್ ಭುಯಾನ್
ವಿಶ್ವವಿದ್ಯಾನಿಲಯವು ಸ್ಥಾಪಿತ ಕಲ್ಪನೆಗಳನ್ನು ಪ್ರಶ್ನಿಸುವ ಮತ್ತು ಸ್ವತಂತ್ರವಾಗಿ ಚಿಂತಿಸುವ ವಾತಾವರಣವನ್ನು ಹೊಂದಿರಬೇಕು. ಸಂಕೋಚವಿಲ್ಲದೆ ಕಠಿಣ ಪ್ರಶ್ನೆಗಳನ್ನು ಕೇಳುವ ಪ್ರವೃತ್ತಿ ವಿದ್ಯಾರ್ಥಿಗಳಲ್ಲಿ ಬೆಳೆಯಬೇಕು. ಪ್ರಶ್ನೆ ಕೇಳುವ ಹಕ್ಕು ಅಧಿಕಾರದ ವಿರುದ್ಧದ ಬಂಡಾಯ ಅಥವಾ ಅಸಹಕಾರ ಅಲ್ಲ. ಅಸಹಿಷ್ಣುತೆಯ ಮನೋಭಾವವು ಭಾರತೀಯ ಸಂವಿಧಾನದ ಆಶಯಗಳಿಗೆ ತದ್ವಿರುದ್ಧವಾಗಿದೆ ಎಂದು ತಿಳಿಸಿದ್ದಾರೆ.
ಭಿನ್ನಾಭಿಪ್ರಾಯಗಳನ್ನು ಶತ್ರುತ್ವದಿಂದ ನೋಡಬಾರದು. ಪ್ರಜಾಪ್ರಭುತ್ವದಲ್ಲಿ ಸಹಿಷ್ಣುತೆ ಮತ್ತು ಭಿನ್ನ ಅಭಿಪ್ರಾಯಗಳಿಗೆ ಜಾಗ ನೀಡುವುದು ಸಂವಿಧಾನಾತ್ಮಕ ಮೌಲ್ಯವಾಗಿದೆ ಎಂದೂ ಹೇಳಿದ್ದಾರೆ.
ಕಾನೂನು ಶಿಕ್ಷಣವು ಕೇವಲ ಕಾಯ್ದೆಗಳನ್ನು ತಿಳಿಸಿಕೊಡುವುದಲ್ಲ, ಬದಲಾಗಿ ಕಾನೂನಿನ ಅನ್ವಯವು ನ್ಯಾಯವನ್ನು ಒದಗಿಸುತ್ತಿದೆಯೇ ಎಂದು ಪ್ರಶ್ನಿಸುವ ಧೈರ್ಯವನ್ನು ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.




