ಆಫ್ರಿಕಾದ ಕರಾವಳಿ ಪ್ರದೇಶದಲ್ಲಿ ಕಡಲ್ಗಳ್ಳರ ಹಾವಳಿ ಮತ್ತೆ ಮಿತಿಮೀರಿದ್ದು, ಯೆಮೆನ್ ಮತ್ತು ಸೊಮಾಲಿಯಾ ಕರಾವಳಿಯಲ್ಲಿ ಎರಡು ಪ್ರತ್ಯೇಕ ಘಟನೆಗಳಲ್ಲಿ ವಾಣಿಜ್ಯ ಹಡಗುಗಳನ್ನು ಹೈಜಾಕ್ ಮಾಡಲಾಗಿದೆ. ಕಡಲ್ಗಳ್ಳರ ವಶವಾಗಿರುವ ಈ ಎರಡೂ ಹಡಗುಗಳಲ್ಲಿ ಒಟ್ಟು 22 ಮಂದಿ ಭಾರತೀಯರು ಸಿಲುಕಿದ್ದು, ಅವರ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ವ್ಯಕ್ತವಾಗಿದೆ.
ಮೊದಲನೇ ಘಟನೆಯಲ್ಲಿ, ಯೆಮೆನ್ ಕರಾವಳಿಯಿಂದ ಸುಮಾರು 30 ನಾಟಿಕಲ್ ಮೈಲಿ ದೂರದಲ್ಲಿರುವ ಏಡನ್ ಕೊಲ್ಲಿಯಲ್ಲಿ ಎರಿಟ್ರಿಯಾ ದೇಶದ ಧ್ವಜ ಹೊಂದಿದ್ದ ‘ಎಂ.ಟಿ. ಸಿಬು 1’ ಎಂಬ ತೈಲ ಟ್ಯಾಂಕರ್ ಅನ್ನು ಆರು ಮಂದಿ ಶಸ್ತ್ರಸಜ್ಜಿತ ಕಡಲ್ಗಳ್ಳರು ಹೈಜಾಕ್ ಮಾಡಿದ್ದಾರೆ. ಈ ಹಡಗಿನಲ್ಲಿ 16 ಮಂದಿ ಭಾರತೀಯರು, ಒಬ್ಬ ಸಿರಿಯನ್, ಒಬ್ಬ ಸುಡಾನಿ ಮತ್ತು ಒಬ್ಬ ಇರಾಕಿ ಪ್ರಜೆ ಸೇರಿದಂತೆ ಒಟ್ಟು 20 ಸಿಬ್ಬಂದಿಯಿದ್ದರು. ಸದ್ಯದ ಮಾಹಿತಿ ಪ್ರಕಾರ ಹಡಗಿನಲ್ಲಿದ್ದ ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಕಡಲ ಆಡಳಿತ ನಿರ್ದೇಶನಾಲಯದ ವರದಿ ತಿಳಿಸಿದೆ.
ಈ ಹಡಗಿನ ಸಿಬ್ಬಂದಿಯನ್ನು ನೇಮಕಾತಿ ಮಾಡಿದ್ದ ಏಜೆನ್ಸಿಗೆ ಘಟನೆಯ ವರದಿಯನ್ನು ಹಾಗೂ ನವೀಕೃತ ಮಾಹಿತಿಯನ್ನು ‘ಇ-ನಾವಿಕ್’ ಆನ್‌ಲೈನ್ ವ್ಯವಸ್ಥೆಯ ಮೂಲಕ ನಿಯಮಿತವಾಗಿ ಒದಗಿಸುವಂತೆ ಸೂಚಿಸಲಾಗಿದೆ. ಎಸ್‌ಕೆಎಸ್ ಕೃಷಿವ್ ಮೆರೈನ್ ಸರ್ವೀಸಸ್‌ನ ಸುಮಿತ್ ಕಾಂತ್ ಸಿಂಗ್ ಅವರು ತಮ್ಮ ಕಂಪನಿಯು ನಾಲ್ವರು ಸಿಬ್ಬಂದಿಯನ್ನು ನೇಮಕ ಮಾಡಿದ್ದು, ಅವರ ವಿವರಗಳನ್ನು ಕಡಲ ಆಡಳಿತ ನಿರ್ದೇಶನಾಲಯಕ್ಕೆ ಈಗಾಗಲೇ ಹಸ್ತಾಂತರಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಎರಡನೇ ಘಟನೆಯಲ್ಲಿ, ಸೊಮಾಲಿಯಾದ ಪಂಟ್‌ಲ್ಯಾಂಡ್ ಕರಾವಳಿಯ ಮರ್ರಾಯ ಬಳಿ ಸೋಮವಾರ ಕ್ಯಾಮರೂನ್ ಧ್ವಜ ಹೊಂದಿದ್ದ ‘ಎಂ/ವಿ ಲುಟುಫ್’ ಎಂಬ ಸರಕು ಸಾಗಣೆ ಹಡಗನ್ನು ಕಡಲ್ಗಳ್ಳರು ಹೈಜಾಕ್ ಮಾಡಿದ್ದಾರೆ. ಈ ಹಡಗಿನಲ್ಲಿ ಆರು ಮಂದಿ ಭಾರತೀಯರು, ಒಬ್ಬ ಟರ್ಕಿಶ್, ಒಬ್ಬ ಜಾರ್ಜಿಯನ್ ಹಾಗೂ ಇಬ್ಬರು ಸರ್ಬಿಯನ್ ಭದ್ರತಾ ಸಿಬ್ಬಂದಿ ಸೇರಿ ಒಟ್ಟು 10 ಜನರಿದ್ದರು. ಈ ಹಡಗು ಮೊಗಾದಿಶುವಿನಲ್ಲಿರುವ ಟರ್ಕಿಶ್ ಸೇನಾ ತರಬೇತಿ ಕೇಂದ್ರಕ್ಕೆ ಶಸ್ತ್ರಾಸ್ತ್ರಗಳು ಹಾಗೂ ಉಪಗ್ರಹ ಸಂಪರ್ಕ ಸಾಧನಗಳನ್ನು ಸಾಗಿಸುತ್ತಿತ್ತು ಎಂದು ವರದಿಯಾಗಿದೆ.
ಕಳೆದ ಏಪ್ರಿಲ್‌ನಲ್ಲಿ ‘ಎಂ/ವಿ ಸ್ವಾರ್ಡ್’ ಹಡಗನ್ನು ಅಪಹರಿಸಿದ್ದ ಎಂಟು ಮಂದಿ ಕಡಲ್ಗಳ್ಳರ ತಂಡವೇ ಈ ಕೃತ್ಯವನ್ನೂ ಎಸಗಿರುವ ಶಂಕೆಯಿದೆ. ಹೈಜಾಕ್ ಆದ ಹಡಗನ್ನು ಸೊಮಾಲಿಯಾದ ಪಂಟ್‌ಲ್ಯಾಂಡ್‌ನ ಗಾರ್ಮಾಲ್ ಕರಾವಳಿಯತ್ತ ಕೊಂಡೊಯ್ಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ಹಡಗು, ಅದರಲ್ಲಿದ್ದ ಭಾರತೀಯರು ಮತ್ತು ಶಸ್ತ್ರಾಸ್ತ್ರಗಳ ನಿಖರವಾದ ಸ್ಥಿತಿಗತಿಯ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿಯಿಲ್ಲ. ಘಟನೆಗೆ ಸಂಬಂಧಿಸಿದಂತೆ ಟರ್ಕಿ ಅಧಿಕಾರಿಗಳು ಈವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.




