ಗಾಂಧಿ ಮತ್ತು ಅಸ್ಪೃಶ್ಯರ ವಿಮೋಚನೆ: ಅಂಬೇಡ್ಕರ್ ನೋಡಿದ್ದು ಹೀಗೆ…

Date:

ಕೃತಿ: ‘Mr. Gandhi and the Emancipation of the Untouchables’ (‘ಶ್ರೀಮಾನ್ ಗಾಂಧಿ ಮತ್ತು ಅಸ್ಪೃಶ್ಯರ ವಿಮೋಚನೆ’)
ಮೊದಲ ಮುದ್ರಣ:  1943, ಥ್ಯಾಕರ್ ಅಂಡ್ ಕಂಪನಿ, ಬಾಂಬೆ
ಮಹಾರಾಷ್ಟ್ರ ಸರ್ಕಾರದ ಪ್ರಕಟಣೆ: 1991
ಇಂಗ್ಲಿಷ್ ಸಂಪುಟ: 09


ಡಾ. ಬಿ.ಆರ್. ಅಂಬೇಡ್ಕರ್ ಅವರು ಡಿಸೆಂಬರ್ 1942 ರಲ್ಲಿ ಕೆನಡಾದ ಕ್ಯೂಬೆಕ್‌ನಲ್ಲಿ ಮಂಡಿಸಿದ ಪ್ರಬಂಧವನ್ನು ಆಧರಿಸಿದ ಕೃತಿಯೇ ‘Mr. Gandhi and the Emancipation of the Untouchables’. ಈ ಪುಸ್ತಕದಲ್ಲಿ, ಅಸ್ಪೃಶ್ಯರ ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಮತ್ತು ಆರ್ಥಿಕ ಬೇಡಿಕೆಗಳನ್ನು ಓದುಗರಿಗೆ ಪರಿಚಯಿಸುತ್ತಾರೆ. 94 ಪುಟಗಳ ಈ ಪುಸ್ತಕವು 10 ಅಧ್ಯಾಯಗಳನ್ನು ಹೊಂದಿದೆ. ಭಾರತೀಯ ಸಮಾಜದ ಸಾಮಾಜಿಕ ರಚನೆಯ ಅವಲೋಕನದೊಂದಿಗೆ, ವಿಶೇಷವಾಗಿ ಅಸ್ಪೃಶ್ಯರು ಮತ್ತು ಹಿಂದೂಗಳ ನಡುವಿನ ಸಂಬಂಧಗಳ ಕುರಿತು ಚರ್ಚಿಸುತ್ತಾರೆ.

- Advertisement -

ಭಾರತದ ರಾಜಕೀಯ ಇತಿಹಾಸದಲ್ಲಿ ಗಾಂಧಿ ಮತ್ತು ಅಂಬೇಡ್ಕರ್ ಅವರ ವಿಚಾರಗಳ ಮತ್ತು ಸಿದ್ಧಾಂತಗಳ ತೌಲನಿಕ ಅಧ್ಯಯನವನ್ನು ಮುಕ್ತ ಮನಸ್ಸಿನಿಂದ ಮಾಡಿದ ಯಾರಿಗೇ ಆದರೂ ಅಂದಿನ ಸಂಪೂರ್ಣ ರಾಜಕೀಯದ ಒಂದು ಸಮಗ್ರ ಚಿತ್ರಣವನ್ನು ಗ್ರಹಿಸುವಷ್ಟು ಸಾಮಗ್ರಿ ಸಿಕ್ಕೇ ಸಿಗುತ್ತದೆ. ಆದರೆ ಯಾವುದೇ ವೈಚಾರಿಕ ಕಟ್ಟುಪಾಡುಗಳಿಗೆ ಒಳಗಾಗದೆ ಅವುಗಳನ್ನು ಗ್ರಹಿಸಬೇಕು. ಇದರಲ್ಲಿ ಅತಿ ಮುಖ್ಯವಾದ ಅಂಶವೆಂದರೆ ಓದುಗ ಅವರಿಬ್ಬರನ್ನು ಅತಿ ಮಾನುಷ ದೃಷ್ಟಿಕೋನದಿಂದ ನೋಡದೆ ವಾಸ್ತವಿಕತೆಯ ನೆಲಗಟ್ಟಿನ ಮೇಲೆ ಮತ್ತು ಅತಿ ಮುಖ್ಯವಾಗಿ ಅವರಿಬ್ಬರೂ ಇದ್ದ ಕಾಲಮಾನದ ರಾಜಕೀಯ ಇತಿಹಾಸದ ಹಿನ್ನೆಲೆಯಲ್ಲಿ ಅರ್ಥೈಸಿಕೊಳ್ಳಬೇಕು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಗಾಂಧಿ, ಅಂಬೇಡ್ಕರ್ ಇಬ್ಬರ ಬದುಕು, ಹಿನ್ನೆಲೆ ನೋಡಿದಾಗ, ಗಾಂಧಿ ಧರ್ಮವನ್ನು ಪರಿಗಣಿಸುವ ಮತ್ತು ವರ್ಣಾಶ್ರಮ ವ್ಯವಸ್ಥೆಯನ್ನು ಅತ್ಯಂತ ಸಹಜವಾಗಿ ಒಪ್ಪಿಕೊಳ್ಳುವ ರೀತಿ ಸಹಜವಾಗಿಯೇ ಸಮಾಜದಲ್ಲಿನ ಅವರ ಉತ್ತಮ ಸ್ಥಾನಮಾನ ಹಾಗೂ ಜಾತಿಯಿಂದ ಪ್ರೇರಿತವಾಗಿದೆ. ಹಾಗೆಂದ ಮಾತ್ರಕ್ಕೆ ಜಾತಿಯನ್ನು ಮೀರಿ ಬೆಳೆಯಲಾರದ ಸಂಕುಚಿತ ಬುದ್ಧಿಯವರು ಗಾಂಧಿ ಎಂದುಕೊಳ್ಳುವ ಅವಶ್ಯಕತೆ ಇಲ್ಲ. ಜಾತಿ ವ್ಯವಸ್ಥೆಯ ಬಗೆಗಿನ ಗಾಂಧೀಜಿಯ ಆರಂಭಿಕ ವಿಚಾರಗಳಿಗೂ, ಅವರ ಕೊನೆ ದಿನಗಳಲ್ಲಿ ವ್ಯಕ್ತಪಡಿಸಿದ ವಿಚಾರಗಳಿಗೂ ಬದಲಾವಣೆಯನ್ನು ಕಾಣಬಹುದು. ಆದರೆ ಈ ಬದಲಾವಣೆ ಮನುಷ್ಯತ್ವ ಮತ್ತು ನೈತಿಕತೆಗಳ ಹಿನ್ನೆಲೆಯಲ್ಲಿ ವ್ಯಕ್ತವಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಅಂಬೇಡ್ಕರ್ ಅವರಲ್ಲಿನ ಜಾತಿ ಪ್ರಜ್ಞೆ ಆಳವಾದ ನೋವು, ಅನುಭವ ಮತ್ತು ಅವಮಾನಗಳ ಹಿನ್ನೆಲೆಯಲ್ಲಿ ವ್ಯಕ್ತವಾಗುತ್ತದೆ. ಅದಕ್ಕಾಗಿಯೇ ಗಾಂಧೀಜಿ ಅಸ್ಪೃಶ್ಯತೆ ನಿವಾರಣೆಯ ಬಗ್ಗೆ ಮಾತನಾಡುವಾಗ, ಜಾತಿ ವ್ಯವಸ್ಥೆಯನ್ನು ಟೀಕಿಸುತ್ತ ವರ್ಣವ್ಯವಸ್ಥೆಯನ್ನು ಸಮರ್ಥಿಸುವಾಗ, ಅದೆಲ್ಲ ಸಂತನೊಬ್ಬನ ಸ್ವಗತಗಳಂತೆ ಅಂಬೇಡ್ಕರ್ ಅವರಿಗೆ ಅನಿಸಿದ್ದರೆ ತಪ್ಪೇನಿಲ್ಲ.

SaveClip.App 505181771 17842730715514824 419441286954986247 n
‘ಶ್ರೀಮಾನ್ ಗಾಂಧಿ ಮತ್ತು ಅಸ್ಪೃಶ್ಯರ ವಿಮೋಚನೆ’ ಕೃತಿ

ಅಂಬೇಡ್ಕರ್ ಅವರ ಮೇಲೆ ಕೆಲವೊಂದು ಆರೋಪಗಳು ಇವೆ. ಅದರಲ್ಲಿ ಮುಖ್ಯವಾಗಿ “ಕೇವಲ ಜಾತಿ ತಾರತಮ್ಯದಿಂದ ಹೊರಗೆ ಬರಲು ಸ್ವರಾಜ್ಯಕ್ಕೆ ಬದಲು ಬ್ರಿಟಿಷರ ಆಡಳಿತವನ್ನು ಒಪ್ಪಿಕೊಳ್ಳುವುದು ಎಷ್ಟು ಸರಿ” ಎಂಬುದು ಮತ್ತು “ಅಂಬೇಡ್ಕರ್ ದಲಿತರ ಮುಕ್ತಿಯ ದಾರಿ ಮಾಡುತ್ತಾ ಉಳಿದ ಹಿಂದುಳಿದ ಸಮುದಾಯದ ಬಗ್ಗೆ ನಿರ್ಲಕ್ಷ್ಯ ಹೊಂದಿದ್ದರು ಎಂಬುದು”. ಈ ಎರಡು ಆರೋಪಗಳನ್ನು ವಿಶ್ಲೇಷಿಸುವಾಗಲೂ ಈ ಮೊದಲೇ ಹೇಳಿದಂತೆ ಅಂದಿನ ಕಾಲಘಟ್ಟದ ಹಿನ್ನೆಲೆಯಲ್ಲಿಯೇ ಅರ್ಥೈಸಿಕೊಳ್ಳಬೇಕು. ಸ್ವಾತಂತ್ರ‍್ಯ ಎಂಬುದು ಇನ್ನೂ ಮರೀಚಿಕೆಯಾಗಿದ್ದಾಗ ಮತ್ತು ಹೋರಾಟದ ಮುಂಚೂಣಿಯಲ್ಲಿ ಇದ್ದವರು ದೇಶಪ್ರೇಮದ ಹೆಸರಿನಲ್ಲಿ ದಲಿತರ ಸ್ವಾತಂತ್ರ‍್ಯ ಹಾಗೂ ಸಮಾನತೆಯ ಬೇಡಿಕೆಗಳನ್ನು ಕಡೆಗಣಿಸುತ್ತಿದ್ದಾಗ, ಅವರ ಬೇಡಿಕೆಗಳನ್ನು ಕೇಳಿಸಿಕೊಳ್ಳುವ ಮತ್ತು ಜಾತಿ ಆಧಾರದ ತಾರತಮ್ಯವನ್ನು ಮಾಡದ ಬ್ರಿಟಿಷ್ ಆಡಳಿತ ತುಲನಾತ್ಮಕವಾಗಿ ಸ್ವಲ್ಪಮಟ್ಟಿಗಾದರೂ ಲೇಸು ಎಂದು ಅವರಿಗೆ ಅನಿಸಿದ್ದರಲ್ಲಿ ತಪ್ಪಿರಲಿಕ್ಕಿಲ್ಲ. ಇಂದಿನ ಸಮಾಜದಲ್ಲಿ ನಿಂತು ಭೀಮಾ ಕೋರೆಗಾಂವ್ ಘಟನೆಯ ವಿಶ್ಲೇಷಣೆ ಮಾಡುವಾಗ, ಅದನ್ನು ದಲಿತರ ಸ್ವಾಭಿಮಾನದ ಪ್ರತೀಕ ಎಂಬಂತೆ ನೋಡಬೇಕೊ ಅಥವಾ ದಲಿತರು ಬ್ರಿಟಿಷರ ಜೊತೆ ಸೇರಿ ಪೇಶ್ವೆಗಳ ವಿರುದ್ಧ ನಿಂತಿದ್ದರು ಎಂಬಂತೆ ಬಿಂಬಿಸಬೇಕೊ ಎಂಬ ದ್ವಂದ್ವ ಎದುರಾಗುತ್ತದೆ. ಇಲ್ಲಿ ಪೇಶ್ವೆಗಳನ್ನು ಒಂದು ಸಮುದಾಯದಂತೆ ಅಲ್ಲದೆ ಸಂಪ್ರದಾಯವಾದಿ ಹಿಂದೂ ದಮನಕಾರಿ ಶಕ್ತಿಯ ಪ್ರತೀಕದಂತೆ ನೋಡಿದಾಗ ಆ ಪ್ರತಿಭಟನೆಯ ಮಹತ್ವ ತಿಳಿಯುತ್ತದೆ. ಅದೇ ರೀತಿ ಅಂಬೇಡ್ಕರ್ ಅವರು ತನ್ನೆಲ್ಲ ಅಧ್ಯಯನದಲ್ಲೂ ಇತರ ಹಿಂದುಳಿದ ವರ್ಗದವರನ್ನು ಸಹ ಸವರ್ಣೀಯರು ಎಂದೇ ಗುರುತಿಸಿದ್ದಾರೆ, ಕೇವಲ ದಲಿತರು ಮಾತ್ರ ಅವರ್ಣೀಯರು. ಇದಕ್ಕೆ ಕಾರಣ ಇದೆ ಇತರ ಹಿಂದುಳಿದ ವರ್ಗದವರು ವರ್ಣವ್ಯವಸ್ಥೆಯಲ್ಲಿ ಗುರುತಿಸಲ್ಪಡುತ್ತಾರೆ. ಅಂದರೆ ಪ್ರತಿಯೊಂದು ರಾಜ್ಯ, ರಾಜ ಮನೆತನ, ಆಡಳಿತ ಕ್ಷೇತ್ರಗಳ ಹಿನ್ನೆಲೆಯಲ್ಲಿ ಈ ಹಿಂದುಳಿದ ಜಾತಿಗಳ ಪ್ರಾಬಲ್ಯ ಮತ್ತು ಮಹತ್ವ ಗುರುತಿಸಲ್ಪಡುತ್ತದೆ. ಆದರೆ ದಲಿತರು ಮಾತ್ರ ಎಲ್ಲ ಕಡೆಯೂ ಒಂದೇ ರೀತಿಯ ತಾರತಮ್ಯಕ್ಕೆ ಒಳಗಾಗಿದ್ದಾರೆ.

ಇದನ್ನೂ ಓದಿರಿ: ‘ಹಿಂದೂಧರ್ಮದ ಒಗಟುಗಳು’: ಉತ್ತರ ಸಿಗದ ಪ್ರಶ್ನೆಗಳ ಬೆನ್ನೇರಿ

ಗಾಂಧಿ ಮತ್ತು ಅಂಬೇಡ್ಕರ್ ತಮ್ಮ ವಾದಗಳಿಗೆ ಪೂರಕವಾಗಿ ಬಳಸಿಕೊಂಡಿದ್ದು ಹಿಂದೂ ಧರ್ಮದ ಗ್ರಂಥಗಳನ್ನೇ. ಗಾಂಧೀಜಿ ವೈದಿಕ ವರ್ಣಾಶ್ರಮ ವ್ಯವಸ್ಥೆಯನ್ನು ವಿವರಿಸುವಾಗ ಅದೊಂದು ವೈಜ್ಞಾನಿಕ ಹಿನ್ನೆಲೆಯಲ್ಲಿ ರಚಿಸಲಾದ ಶ್ರಮದ ವಿಭಜನೆ (Division of Labour) ಎನ್ನುತ್ತಾರೆ. ಆದರೆ ಅಂಬೇಡ್ಕರ್ ಇದನ್ನು ಶ್ರಮಿಕರ ವಿಭಜನೆ ಎಂದು ಗುರುತಿಸುತ್ತಾರೆ. ಅದೇ ಕಾರಣಕ್ಕಾಗಿ ಅಮಾನವೀಯ ವರ್ಣವ್ಯವಸ್ಥೆಯನ್ನು ಅದರ ಒಳಗೆ ಇದ್ದುಕೊಂಡು ನಿವಾರಿಸಬೇಕು ಎಂದು ಗಾಂಧೀಜಿ ಹೇಳಿದಾಗ ಅದರ ಆಳ, ಅಗಲ, ಮತ್ತು ವ್ಯಾಪ್ತಿಯ ಸ್ವಂತ ಅನುಭವವಿದ್ದ ಅಂಬೇಡ್ಕರ್ ಸಂವಿಧಾನಾತ್ಮಕ ದಾರಿಗಳಲ್ಲದೆ, ವೇದಶಾಸ್ತ್ರಗಳ ಶಕ್ತಿಯನ್ನು ನಾಶ ಮಾಡದೆ ವರ್ಣವ್ಯವಸ್ಥೆಯ ನಿರ್ಮೂಲನೆ ಸಾಧ್ಯ ಇಲ್ಲ ಎಂಬ ಖಚಿತ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

‘ಪೂನಾ ಪ್ಯಾಕ್ಟ್’ ಸಮಯದಲ್ಲಿ ನಡೆದ ಅವರಿಬ್ಬರ ನಡುವಿನ ಸಂವಾದ ಇಂದಿಗೂ ಚರ್ಚೆಯ ವಿಷಯವಾಗಿರುವುದಕ್ಕೆ ಇದೇ ಕಾರಣ; ಧರ್ಮದಲ್ಲಿ ಸಮಾಧಾನ ಹುಡುಕುವ ಗಾಂಧೀಜಿ ಮತ್ತು ಈ ಧರ್ಮವೇ ಜಾತಿ ವ್ಯವಸ್ಥೆಯ ಮೂಲ ಕಾರಣ, ಆದ್ದರಿಂದ ಜಾತಿ ವ್ಯವಸ್ಥೆಯ ನಿರ್ನಾಮವಾಗಬೇಕಾದರೆ, ಈಗ ಇದ್ದ ಸ್ವರೂಪದಲ್ಲಿನ ಹಿಂದೂ ಧರ್ಮವೂ ನಿರ್ನಾಮವಾಗಬೇಕು ಎಂದಿರುವ ಅಂಬೇಡ್ಕರ್, ಪರಸ್ಪರ ವಾಗ್ವಾದಗಳನ್ನು ನಡೆಸಿರುವುದು ಮಹತ್ವದ ಸಂಗತಿ.

image 173
ಗಾಂಧಿ ಮತ್ತು ಅಂಬೇಡ್ಕರ್

ಇಲ್ಲಿ ಚರ್ಚೆಗೆ ಎತ್ತಿಕೊಂಡಿರುವ ‘ಶ್ರೀಮಾನ್ ಗಾಂಧಿ ಮತ್ತು ಅಸ್ಪೃಶ್ಯರ ವಿಮೋಚನೆ’ (‘Mr Gandhi and the emancipation of untouchables’) ಕೃತಿಯ ಹೆಸರು ನೋಡಿದಾಗ, ಬಹುಶಃ ಗಾಂಧಿಯವರ ದೃಷ್ಟಿಯಲ್ಲಿ ಅಸ್ಪೃಶ್ಯರ ಸ್ವಾತಂತ್ರ‍್ಯ ಅಥವಾ ಮುಕ್ತಿಯ ಕಲ್ಪನೆಯ ಬಗ್ಗೆ ಬರೆದಿರಬಹುದು ಅನಿಸುತ್ತದೆ. ಆದರೆ ಓದುತ್ತಾ ಸಾಗಿದಂತೆ ಗಾಂಧೀಜಿಯ ಪ್ರಸ್ತಾಪ ಬರುವುದು ಕೊನೆಯ ಅಧ್ಯಾಯದಲ್ಲಿ. ಆದರೆ ಅಲ್ಲಿಗೆ ಬರುವಷ್ಟರಲ್ಲಿ ಗಾಂಧಿ ಎಂಬುದು ಕೇವಲ ಒಬ್ಬ ವ್ಯಕ್ತಿ ಎಂದಷ್ಟೇ ಅಲ್ಲದೆ ಸಂಪೂರ್ಣ ಹಿಂದೂ ಸಮಾಜದ ಪ್ರತೀಕ ಎನ್ನುವಂತೆ ಬಿಂಬಿಸಲಾಗಿದೆ ಅಥವಾ ಅವರ ಹೆಸರು ಒಂದು ಪ್ರತೀಕದ ಹೆಸರಿನಂತೆ ಅನಿಸಲು ಶುರುವಾಗುತ್ತದೆ.

ಭಾರತದ ಸ್ವಾತಂತ್ರ‍್ಯ ಸಂಗ್ರಾಮ ತೀವ್ರ ಗತಿಯಲ್ಲಿದ್ದ ಸಮಯದಲ್ಲಿ ಆ ಹೋರಾಟದ ಮುಂಚೂಣಿಯಲ್ಲಿದ್ದ ನಾಯಕರಲ್ಲಿ ಪರಿಶಿಷ್ಟ ಜಾತಿಗಳ ಜನರ ಬೇಡಿಕೆಗಳ ಬಗೆಗಿನ ಧೋರಣೆಗಳು ಹೇಗೆ ಏಕಮುಖಿಯಾಗಿದ್ದವು ಮತ್ತು ದ್ವಂದ್ವಗಳಿಗೆ ಎಡೆ ಮಾಡಿ ಕೊಟ್ಟಿದ್ದವು ಎಂಬುದನ್ನು ಎರಡನೇ ವಿಶ್ವ ಯುದ್ಧದ ಹಿನ್ನೆಲೆಯಲ್ಲಿ ಬ್ರಿಟಿಷ್ ಸರ್ಕಾರ ಹಾಗೂ ಭಾರತದ ನಾಯಕತ್ವದ ನಡುವೆ ನಡೆಯುತ್ತಿದ್ದ ವೈಚಾರಿಕ, ತಾರ್ಕಿಕ ಚರ್ಚೆಗಳ ಹಿನ್ನೆಲೆಯಲ್ಲಿ ಅಂಬೇಡ್ಕರ್ ಅವರು ಅತ್ಯಂತ ಸಹಜವಾಗಿ, ಸರಳವಾಗಿ ಅರ್ಥವಾಗುವಂತೆ ವಿವರಿಸಿದ್ದಾರೆ.

ಇದನ್ನೂ ಓದಿರಿ: ವರ್ತಮಾನದ ಬಿಕ್ಕಟ್ಟಿಗೆ ‘ಕ್ರಾಂತಿ ಮತ್ತು ಪ್ರತಿಕ್ರಾಂತಿ’ಯ ಮದ್ದು

1942ರ ಡಿಸೆಂಬರ್ ತಿಂಗಳಿನಲ್ಲಿ ಕೆನಡಾ ದೇಶದ ಕ್ವುಬೆಕ್‌ನ ಮಾಂಟ್ ಟ್ರಾಂಬ್ಲಾಂಟ್ ಎಂಬಲ್ಲಿ ನಡೆಯುತ್ತಿದ್ದ ಸಮ್ಮೇಳನವೊಂದಕ್ಕಾಗಿ ಬರೆಯಲಾಗಿದ್ದ ‘ಭಾರತದ ಅಸ್ಪೃಶ್ಯರ ಸಮಸ್ಯೆಗಳು’ ಎಂಬ ಲೇಖನವನ್ನು ಅದರ ಮುಂದಿನ ವರ್ಷ ಸಮ್ಮೇಳನದ ಸಂಘಟಕರ ಅನುಮತಿಯ ಮೇರೆಗೆ ಪುಸ್ತಕವಾಗಿ ಪ್ರಕಟಿಸಲಾಯಿತು. ಸಮ್ಮೇಳನಕ್ಕಾಗಿ ಬರೆದಿದ್ದರಿಂದ ಇದು ಚಿಕ್ಕದಾಗಿದೆ. ಕೇವಲ 50 ಪುಟಗಳನ್ನು ಇದು ಹೊಂದಿದ್ದರೂ ಅಂಬೇಡ್ಕರ್ ಅವರಲ್ಲಿ ಹಗಲು ರಾತ್ರಿ ಹೊತ್ತಿ ಉರಿಯುತ್ತಿದ್ದ ಅಸ್ಪೃಶ್ಯರ ಏಳಿಗೆ ಮತ್ತು ಅಭ್ಯುದಯದ ಕಲ್ಪನೆಗಳು ಅತ್ಯಂತ ಖಚಿತ ಹಾಗೂ ನೇರ ವಿಚಾರಗಳಲ್ಲಿ ವ್ಯಕ್ತವಾಗಿವೆ. ಸ್ವತಂತ್ರ ಭಾರತದಲ್ಲಿ ಅಸ್ಪೃಶ್ಯರ ಸ್ಥಾನಮಾನ ಹಾಗೂ ಅವರ ಏಳಿಗೆಗಾಗಿ ಕೈಗೊಳ್ಳಬಹುದಾದ ಕ್ರಮಗಳು ಮತ್ತು ಕಾನೂನುಗಳ ಸ್ಪಷ್ಟತೆಯನ್ನು ಅಂಬೇಡ್ಕರ್ ಅವರ ಈ ಲೇಖನದಲ್ಲಿ ಕಾಣಬಹುದು. ಸಂವಿಧಾನ ರಚನೆ ಸಮಯದಲ್ಲಿ ಕೈಗೊಂಡ ಕೆಲವು ಕ್ರಮಗಳ ಮೂಲಗಳನ್ನು ಇಲ್ಲಿ ನೋಡಬಹುದು. ಅಸ್ಪೃಶ್ಯರ ಸಮಸ್ಯೆಗಳನ್ನು ಬಿಂಬಿಸುವಲ್ಲಿ ಹೇಗೆ ಕೇವಲ ಕೆಲವು ತಪ್ಪು ಶಬ್ದಗಳಿಂದ ಸಮಸ್ಯೆಯನ್ನೇ ವಿಭಿನ್ನವಾಗಿ ಪರಿಗಣಿಸುವ ಅಪಾಯವಿರುತ್ತದೆ ಎಂಬ ಎಚ್ಚರಿಕೆಯನ್ನು ಅವರು ಇಲ್ಲಿ ನೀಡುತ್ತಾರೆ. ಜಗತ್ತಿನ ಎಲ್ಲ ಬಗೆಯ ದಮನಿತರಿಗೆ ಸ್ಪಂದಿಸುವ ರೀತಿಯಲ್ಲಿ ಅಸ್ಪೃಶ್ಯರ ಸಮಸ್ಯೆಗಳನ್ನು ಬಗೆಹರಿಸುವಲ್ಲಿಯೂ ಇಡೀ ಜಗತ್ತಿನ ಜವಾಬ್ದಾರಿ ಇದೆ ಎಂದು ಅವರು ಸಮ್ಮೇಳನದಲ್ಲಿ ಎಚ್ಚರಿಸುತ್ತಾರೆ.

ಕೃತಿಯ ಕುರಿತು

‘ಗಾಂಧಿ ಮತ್ತು ಅಸ್ಪೃಶ್ಯರ ವಿಮೋಚನೆ’ ಕೃತಿಯು ಒಟ್ಟು 10 ಅಧ್ಯಾಯಗಳನ್ನು ಹೊಂದಿದ್ದು ಪ್ರತಿಯೊಂದು ಅಧ್ಯಾಯವೂ ಅಸ್ಪೃಶ್ಯತೆಯ ಸಮಸ್ಯೆ ಮತ್ತು ನಿವಾರಣೆಯ ಸಂಘಟಿತ ಮಾರ್ಗಗಳನ್ನು ಸೂಚಿಸುವ ಜೊತೆಗೆ ಆ ನಿಟ್ಟಿನಲ್ಲಿರುವ ಸವಾಲುಗಳು, ಅದರ ತೀವ್ರತೆ ಹಾಗೂ ಪರಿಹಾರ ಮಾರ್ಗಗಳ ಬಗ್ಗೆ ಒಂದೊಂದಾಗಿ ಚರ್ಚಿಸುತ್ತವೆ.

ಮೊದಲ ಅಧ್ಯಾಯದಲ್ಲಿ ಅಸ್ಪೃಶ್ಯರ ಜನಸಂಖ್ಯೆಯ ಬಗ್ಗೆ ಹೇಳುವಾಗ ಇಲ್ಲಿಯವರೆಗೂ ಕೇವಲ ಜನಸಂಖ್ಯಾಶಾಸ್ತ್ರಜ್ಞರಿಗೆ (ಮಾಲ್ಥೂಸಿಯನ್) ಉಪಯುಕ್ತವಾಗಿದ್ದ ಜನಗಣತಿ ಹೇಗೆ ವೃತ್ತಿಪರ ರಾಜಕಾರಣಿಗಳ ಕೈಯಲ್ಲಿ ಅಸ್ತ್ರವಾಗಿ ಬದಲಾಗಿದೆ ಮತ್ತು ಈ ಜನಗಣತಿಯ ಪಟ್ಟಿ ತಯಾರಿಕೆಯಲ್ಲಿ ಹಿಂದೂ, ಮುಸ್ಲಿಂ, ಸಿಖ್ಖರು ಹೇಗೆ ಮುಂಚೂಣಿಯಲ್ಲಿ ನಿಂತುಕೊಳ್ಳುತ್ತಾರೆ ಹಾಗೂ ಅಸ್ಪೃಶ್ಯರು, ಕ್ರೈಸ್ತರು ಇದರ ಭಾಗವೇ ಆಗಿದ್ದರೂ ಹೇಗೆ ಈ ಒಂದು ಪ್ರಕ್ರಿಯೆಯಿಂದ ಹೊರಗೆ ಉಳಿಯುವ ಮೂಲಕ ತಮ್ಮನ್ನು ತಾವು ಗುರುತಿಸಿಕೊಳ್ಳುವಲ್ಲಿಯೂ ಹಿನ್ನಡೆ ಎದುರಿಸುತ್ತಾರೆ ಎಂದು ಮಾರ್ಮಿಕವಾಗಿ ಹೇಳುತ್ತಾರೆ. ಹೇಗೆ ಇವತ್ತಿನ ದಿನ ಜನಗಣತಿ ಎಂಬುದು ರಾಜಕಾರಣಿಗಳ ಕೈಯಲ್ಲಿನ ಅಂಕಿಅಂಶಗಳ ಆಟವಾಗಿ ಬದಲಾಗಿದೆ, ಅಧಿಕಾರದ ಮೇಲಾಟದ ಹಗ್ಗ ಜಗ್ಗಾಟಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಹೇಳುತ್ತಾರೆ. 1940ರ ಜನಸಂಖ್ಯೆಯ ಬಗ್ಗೆ ಅವರು ಮಾತಾಡುತ್ತಿದ್ದರೂ ಅದು ಇವತ್ತಿನ ಭಾರತದಲ್ಲಿ ನಡೆಯುತ್ತಿರುವ ಜನಗಣತಿ ಹಾಗೂ ಜಾತಿಗಳ ಜನಗಣತಿಯ ಬಗ್ಗೆ ಮಾತನಾಡುತ್ತಿರುವಂತೆ ಅನಿಸುತ್ತದೆ.

ಪಂಜಾಬ್ ರಾಜ್ಯದಲ್ಲಿ ಅಸ್ಪೃಶ್ಯರ ಮನವೊಲಿಸಿ `ಜನಗಣತಿಯ ಸಮಯದಲ್ಲಿ ಜಾತಿಗಳ ಹೆಸರನ್ನು ನಮೂದು ಮಾಡದೆ ಕೇವಲ ಸಿಖ್ ಅಥವಾ ಹಿಂದೂ ಎಂದು ನಮೂದಿಸಿರಿ, ಇದರಿಂದ ಬೇರೆಯವರು ನಿಮ್ಮನ್ನು ತಮ್ಮವರಂತೆಯೇ ಸ್ವೀಕರಿಸುವರು’ ಎಂದು ಹೇಳಿ ಉದ್ದೇಶಪೂರ್ವಕವಾಗಿ ಅಸ್ಪೃಶ್ಯರು ತಮ್ಮ ಜಾತಿಗಳನ್ನು ಬಹಿರಂಗಪಡಿಸದಂತೆ ಮಾಡುವ ಮೂಲಕ ಜಾತಿಗಳ ಜನಸಂಖ್ಯೆಯನ್ನು ಮರೆಮಾಚುವ ಹುನ್ನಾರಗಳನ್ನು ನಡೆಸಲಾಯಿತು ಎಂದು ಬಾಬಾಸಾಹೇಬ್ ಹೇಳುತ್ತಾರೆ. 1940ರ ಜನಗಣತಿಯ ಪ್ರಕಾರ ಅಸ್ಪೃಶ್ಯರ ಜನಸಂಖ್ಯೆ 60 ಲಕ್ಷ ಹಾಗೂ ಒಟ್ಟಾರೆ ಭಾರತದ ಜನಸಂಖ್ಯೆ 32 ಕೋಟಿ.

ಎರಡನೆಯ ಅಧ್ಯಾಯದಲ್ಲಿ ಪ್ರತಿಯೊಂದು ದೇಶಗಳಲ್ಲಿ ಮತ್ತು ಸಮಾಜದಲ್ಲಿ ಒಂದಲ್ಲ ಒಂದು ಬಗೆಯ ಅಸಮಾನತೆ ಎಂಬುದು ಇದ್ದೇ ಇದೆ ಎಂಬುದನ್ನು ಹೇಳುವಾಗ ಭಾರತದ ಅಸ್ಪೃಶ್ಯರನ್ನು ರೋಮ್ ದೇಶದ ಸ್ಲೇವ್, ಸ್ಪಾರ್ಟಾ ದೇಶದ ಹೆಲ್ಟೋಸ್, ಬ್ರಿಟಿಷರ ವಿಲ್ಲನ್, ಅಮೆರಿಕದ ನಿಗ್ರೋಸ್ ಮತ್ತು ಜರ್ಮನ್‌ನ ಯಹೂದಿಗಳನ್ನು ಉದಾಹರಿಸುತ್ತ ಭಾರತದ ಅಸ್ಪೃಶ್ಯತೆ ಎಂಬುದು ಉಳಿದ ದೇಶಗಳ ಸಮಸ್ಯೆಗಳಂತೆ ನಿವಾರಿಸಲು ಆಗದ ಸಮಸ್ಯೆ ಆಗಿರುವುದಕ್ಕೆ ಕಾರಣಗಳೇನು ಎಂಬುದನ್ನು, ಹಿಂದೂ ಧರ್ಮದಲ್ಲಿ ಬೇರೂರಿರುವ ಆಂತರಿಕ ಅಸಮಾನತೆಯ ಹಿನ್ನೆಲೆಯಲ್ಲಿ ವಿವರಿಸುತ್ತಾರೆ. ಹೇಗೆ ಕೇವಲ ಹುಟ್ಟಿನ ಕಾರಣದಿಂದ ಅವಕಾಶಗಳನ್ನು ಅಸ್ಪೃಶ್ಯರಿಗೆ ನಿರಾಕರಿಸಲಾಗುತ್ತದೆ. ಹಿಂದೂಗಳ ಮತ್ತು ಮುಸ್ಲಿಮರ ಸ್ವಾತಂತ್ರ‍್ಯದ ಹೋರಾಟ ಹೇಗೆ ಸ್ವಾತಂತ್ರ‍್ಯದ ಹೆಸರಿನಲ್ಲಿ ಅಧಿಕಾರದ ಹೋರಾಟವಾಗಿದೆ; ಆದರೆ ಅಸ್ಪೃಶ್ಯರ ಹೋರಾಟ ಹೇಗೆ ನಿಜವಾದ ಅರ್ಥದಲ್ಲಿ ಬಂಧನದಿಂದ ವಿಮುಕ್ತಿಯ ಕಡೆಗಿನ ಹೋರಾಟವಾಗಿದೆ ಎಂಬುದನ್ನು ವಿವರಿಸುತ್ತ ಸಾಗುತ್ತಾರೆ. ಕಾಂಗ್ರೆಸ್ ಮಧ್ಯಮ ವರ್ಗದ ಮತ್ತು ಹಿಂದೂಗಳ ಪಕ್ಷವಾಗಿದ್ದು ಇದಕ್ಕೆ ಹಿಂದೂ ಬಂಡವಾಳ ಶಾಹಿಗಳ ಬೆಂಬಲವೂ ಇದ್ದು ಇವರೆಲ್ಲ ಸೇರಿ ಹೋರಾಟದ ಮೂಲಕ ಭಾರತವನ್ನು ಬ್ರಿಟಿಷರಿಂದ ಮುಕ್ತಗೊಳಿಸಿ ಆ ಸ್ಥಳದಲ್ಲಿ ತಾವು ಕೂಡುವುದಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಇದನ್ನೂ ಓದಿರಿ: ‘ಶೂದ್ರರು ಯಾರಾಗಿದ್ದರು?: ‘…ಅಜ್ಞಾನಿ ಶೂದ್ರರಿಗಾಗಿ ಈ ಪುಸ್ತಕ’

ಮೂರನೇ ಅಧ್ಯಾಯದಲ್ಲಿ ಮಹಾರಾಷ್ಟ್ರದ ನಾಗಪುರದಲ್ಲಿ ದಿನಾಂಕ 1942ರ ಜುಲೈ 18 ಮತ್ತು 19ರಂದು ನಡೆದ ಪರಿಶಿಷ್ಟ ಜಾತಿಗಳ ಸಮ್ಮೇಳನದಲ್ಲಿ ಕೈಗೊಂಡ ಕೆಲವೊಂದು ಚಾರಿತ್ರಿಕ ನಿರ್ಣಯಗಳನ್ನು ವಿವರಿಸುತ್ತಾರೆ.

1. ಪರಿಶಿಷ್ಟ ಜಾತಿಗಳ ಒಪ್ಪಿಗೆಯಿಲ್ಲದೆ ಸಂವಿಧಾನ ಜಾರಿಯಾಗುವಂತಿಲ್ಲ

2. ಪರಿಶಿಷ್ಟ ಜಾತಿಗಳನ್ನು ಹಿಂದೂಗಳಿಂದ ಭಿನ್ನವಾದ ಮತ್ತು ಪ್ರತ್ಯೇಕವಾದ ಸಮುದಾಯಗಳಂತೆ ಪರಿಗಣಿಸಬೇಕು.

3. ಪರಿಶಿಷ್ಟ ಜಾತಿಗಳ ಹಿತರಕ್ಷಣೆಗಾಗಿ ವಿವಿಧ ರೀತಿಯ ಸಾಂವಿಧಾನಿಕ ಕ್ರಮಗಳನ್ನು ಕೈಗೊಳ್ಳಬೇಕು ಎಂಬುವು ಮುಖ್ಯವಾದವು. ಈ ಸಾಂವಿಧಾನಿಕ ಕ್ರಮಗಳಲ್ಲಿ ಪರಿಶಿಷ್ಟ ಜಾತಿಗಳ ಒಳಿತಿಗಾಗಿ ಬಜೆಟ್‌ನಲ್ಲಿ ಹಣವನ್ನು ಹಂಚಿಕೆ ಮಾಡುವುದು, ಈ ಜಾತಿಗಳ ಜನರಲ್ಲಿ ಉನ್ನತ ವ್ಯಾಸಂಗವನ್ನು ಪ್ರೋತ್ಸಾಹಿಸುವುದು.

4. ಪರಿಶಿಷ್ಟ ಜಾತಿಗಳ ಜನಸಂಖ್ಯೆಯ ಆಧಾರದ ಮೇಲೆ ಕೇಂದ್ರ ಹಾಗೂ ರಾಜ್ಯಗಳ ಕಾರ್ಯಾಂಗದಲ್ಲಿ ಸೂಕ್ತ ಪ್ರಾತಿನಿಧ್ಯ ಕೊಡುವುದು.

5. ಸೂಕ್ತ ಕಾನೂನು ಬದಲಾವಣೆಗಳ ಮೂಲಕ ಸಾರ್ವಜನಿಕ ಸೇವೆಗಳಲ್ಲಿ ಹುದ್ದೆಗಳನ್ನು ಕಾಯ್ದಿರಿಸುವುದು, ಅದೇ ರೀತಿ ನ್ಯಾಯಾಂಗ, ಪೊಲೀಸ್ ಮತ್ತಿತರ ಕ್ಷೇತ್ರಗಳಲ್ಲೂ ಕನಿಷ್ಠ ವಿದ್ಯಾರ್ಹತೆ ಆಧಾರದ ಮೇಲೆ ಪರಿಶಿಷ್ಟ ಜಾತಿಗಳಿಗೆ ಹುದ್ದೆಗಳನ್ನು ಕಾಯ್ದಿರಿಸುವುದು. ಅದೇ ರೀತಿ ವಿಧಾನಸಭೆಗಳು ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಸ್ಥಾನಗಳನ್ನು ಕಾಯ್ದಿರಿಸುವುದು.

6. ಈ ಒಂದು ಉದ್ದೇಶಕ್ಕಾಗಿ ಪ್ರತ್ಯೇಕ ಚುನಾವಣಾ ಕ್ಷೇತ್ರಗಳನ್ನು (separate electorate) ರಚಿಸುವುದು.

7. ಲೋಕ ಸೇವಾ ಆಯೋಗ ಮತ್ತು ಪ್ರಾಂತೀಯಸೇವಾ ಆಯೋಗಗಳಲ್ಲಿ ಸೂಕ್ತ ಕಾನೂನುಗಳ ಬದಲಾವಣೆ ತಂದು ಪರಿಶಿಷ್ಟ ಜಾತಿಗಳ ಪ್ರಾತಿನಿಧ್ಯವನ್ನು ಕಾಪಾಡುವ ಕ್ರಮಗಳನ್ನು ಕೈಗೊಳ್ಳುವುದು.

ಅದೇ ರೀತಿ ಪರಿಶಿಷ್ಟ ಜಾತಿಗಳ ಪ್ರತ್ಯೇಕ ವಸತಿ ವ್ಯವಸ್ಥೆಯ ಬಗ್ಗೆಯೂ ಒತ್ತು ಕೊಡುತ್ತಾರೆ. ನಮ್ಮ ದೇಶದ ಹಳ್ಳಿಗಳ ವ್ಯವಸ್ಥೆಯಲ್ಲಿಯೇ ಜಾತಿ ಎಂಬುದು ಅತ್ಯಂತ ಪ್ರಬಲ ಅಸ್ತ್ರದಂತೆ ಇದ್ದು ಅಸ್ಪೃಶ್ಯರ ದಮನಕ್ಕೆ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದೆ. ಅದಕ್ಕಾಗಿ ಅವರು ಇರುವ ಸ್ಥಳವನ್ನೇ ಬದಲಾಯಿಸಿ ಸಂಪೂರ್ಣವಾಗಿ ಪರಿಶಿಷ್ಟ ಜಾತಿಯವರ ಹಳ್ಳಿಗಳನ್ನೇ ಮಾಡಿಬಿಟ್ಟರೆ ಅಲ್ಲಿ ಯಾವುದೇ ತಾರತಮ್ಯಕ್ಕೆ ಅವಕಾಶ ಇಲ್ಲದೆ ಘನತೆಯಿಂದ ಬದುಕುವ ಅವಕಾಶ ಸಿಗಬಹುದು ಎಂಬ ಆಶಯವನ್ನು ಅವರು ವ್ಯಕ್ತಪಡಿಸುತ್ತಾರೆ.

ಅಂಬೇಡ್ಕರ್ ಅವರ ಬರಹವನ್ನು ಓದಿದಾಗ ಪ್ರತಿಬಾರಿಯೂ ಅತ್ಯಂತ ಸ್ಪಷ್ಟವಾಗಿ ಕಾಣಿಸಿಕೊಳ್ಳುವ ಒಂದು ವಿಷಯವೆಂದರೆ ಪರಿಶಿಷ್ಟ ಜಾತಿಗಳು ಮತ್ತು ಹಿಂದೂಗಳು ಮೂಲಭೂತವಾಗಿ ಪ್ರತ್ಯೇಕ ಸಮೂಹಗಳು ಎಂದು ಅವರು ಗುರುತಿಸಿದ್ದು. ಇವತ್ತಿನ ಹಿಂದುತ್ವದ ಅಮಲಿನಲ್ಲಿ ತೇಲುತ್ತಿರುವ ಅಥವಾ ಹಿಂದುತ್ವದ ಮಂಕು ಬೂದಿಯ ಪ್ರಭಾವಕ್ಕೆ ಒಳಗಾಗಿರುವ ಪರಿಶಿಷ್ಟ ಜಾತಿಗಳನ್ನು ನೋಡಿದಾಗ ಈ ಬಗ್ಗೆ ಸುಮಾರು 80 ವರ್ಷಗಳಷ್ಟು ಹಿಂದೆಯೇ ಅವರು ಎಚ್ಚರಿಸಿದ್ದು ಸ್ಪಷ್ಟವಾಗಿ ಕಾಣುತ್ತದೆ.

image 174
ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್

ಈ ಪುಸ್ತಕದಲ್ಲಿ ಮುಂದೆ ಬರುವ ಅಧ್ಯಾಯಗಳಲ್ಲಿ ಪರಿಶಿಷ್ಟ ಜಾತಿಗಳ ಈ ಬೇಡಿಕೆಗಳಿಗೆ ಹಿಂದೂಗಳು ಹೇಗೆ ವಿರೋಧ ಒಡ್ಡಿದರು ಹಾಗೂ ಅದನ್ನು ಹೇಗೆ ರಾಷ್ಟ್ರೀಯತೆಯ ಹೆಸರಿನಲ್ಲಿ ದಮನ ಮಾಡಲು ಪ್ರಯತ್ನಿಸಿದರು ಎಂಬ ವಿವರಣೆ ಸಿಗುತ್ತದೆ.

ಪರಿಶಿಷ್ಟ ಜಾತಿಗಳ ಸಮಾನತೆ ರಾಜಕೀಯ, ಶೈಕ್ಷಣಿಕ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಕೂಡ ಸೂಕ್ತವಾಗಿ ಇರಬೇಕು ಎಂಬ ಬೇಡಿಕೆಗೆ ವ್ಯಕ್ತವಾದ ವಿರೋಧಗಳ ವಿಶ್ಲೇಷಣೆ ಮೇಲ್ನೋಟದಲ್ಲಿ ಕಾಣಿಸುವಂತೆ ಉದಾತ್ತವಾಗಿದ್ದರೂ ಅದರ ಒಳಗಿನ ಕಾರಣಗಳು ನಮ್ಮ ದೇಶದಲ್ಲಿ ಬೇರೂರಿದ ಜಾತಿ ವ್ಯವಸ್ಥೆಯ ಪದ್ಧತಿಯನ್ನು ಯಥಾವತ್ ಮುಂದುವರಿಸಿಕೊಂಡು ಹೋಗಲು ನಡೆಸಿರುವ ಹುನ್ನಾರಗಳಂತೆ ಅವರಿಗೆ ಕಂಡಿದ್ದು ಸಹಜ. ಏಕೆಂದರೆ ಇಂತಹ ಬಿಕ್ಕಟ್ಟನ್ನು ಬಗೆಹರಿಸುವ ಸಂದರ್ಭದಲ್ಲಿ ಗಾಂಧೀಜಿ ಮತ್ತು ಹಿಂದೂಗಳು ಪರಿಶಿಷ್ಟ ಜಾತಿಗಳ ಈ ಬೇಡಿಕೆಗಳನ್ನು ವಿಭಜನಕಾರಿ ಅಥವಾ ಜಾತಿವಾದಿ ದೃಷ್ಟಿಕೋನದಿಂದ ನೋಡುವುದು ಮತ್ತು ಕಾಂಗ್ರೆಸ್ಸಿನ ಧೋರಣೆಯನ್ನು ರಾಷ್ಟ್ರೀಯತೆಯ ದೃಷ್ಟಿಯಿಂದ ವಿವರಿಸುವುದು ಸರಿಯಾದ ಧೋರಣೆ ಅಲ್ಲವೆಂದು ಅಂಕಿಅಂಶಗಳ ಉದಾಹರಣೆಗಳ ಸಮೇತ ವಿವರಿಸಲಾಗಿದೆ.

ಇದನ್ನೂ ಓದಿರಿ: ‘ಭಾರತದಲ್ಲಿ ಜಾತಿಗಳು’: ಅವುಗಳ ಉತ್ಪತ್ತಿ, ವಿಕಾಸ ಹೇಗಾಯಿತು?

ದೇಶದಲ್ಲಿನ ಪರಿಶಿಷ್ಟ ಜಾತಿಗಳ ಈ ಬೇಡಿಕೆಯನ್ನು ವಿದೇಶಗಳಲ್ಲಿ ಕುಳಿತ ಸಮಾನ ಮನಸ್ಕರೊಂದಿಗೆ ಹಂಚಿಕೊಳ್ಳುವಾಗ ನಮ್ಮ ದೇಶದ ಜಾತಿ ವ್ಯವಸ್ಥೆಯ ಬಗ್ಗೆ ಸರಿಯಾದ ಕಲ್ಪನೆ ಇಲ್ಲದವರೊಂದಿಗೆ ಚರ್ಚಿಸುವುದು ಹೇಗೆ ನಿರರ್ಥಕ ಎಂಬುದನ್ನು ಹೇಳುತ್ತಾ ಪ್ರಾಂತೀಯ ಮತದಾನ ವ್ಯವಸ್ಥೆ ಮತ್ತು ಮೀಸಲು ಕ್ಷೇತ್ರಗಳ ಮತದಾನ ವ್ಯವಸ್ಥೆ ಹೇಗೆ ಭಿನ್ನವಾಗಿ ನಿಲ್ಲುತ್ತವೆ ಎಂಬುದನ್ನು ಆಯಾ ರಾಜ್ಯಗಳ ಜನಸಂಖ್ಯಾವಾರು ಹಂಚಿಕೆಯ ಹಿನ್ನೆಲೆಯಲ್ಲಿ ಅವರು ವಿವರಿಸುತ್ತಾರೆ. ಪ್ರಾಂತೀಯ ಮತದಾನ ಮಾಡಿದಾಗ ಅಲ್ಪಸಂಖ್ಯೆಯಲ್ಲಿರುವ ಪರಿಶಿಷ್ಟ ಜಾತಿಗಳ ಹಿತ ರಕ್ಷಣೆಯನ್ನು ಕಡೆಗಣಿಸಲಾಗುತ್ತದೆ ಹಾಗೂ ಮೀಸಲು ಕ್ಷೇತ್ರಗಳಲ್ಲಿ ಅವನ್ನು ಎತ್ತಿ ಹಿಡಿಯಬಹುದು ಎಂಬುದಕ್ಕೆ ಹಿಂದೂಗಳಲ್ಲಿ ಮನೆ ಮಾಡಿರುವ ಜಾತಿಪ್ರೇಮ, ಸ್ವಜನ ಪಕ್ಷಪಾತ ಮತ್ತು ಆಳವಾಗಿ ಬೇರೂರಿದ ಜಾತಿ ವ್ಯವಸ್ಥೆಯ ಬಗೆಗಿನ ಒಲವುಗಳನ್ನು ಮೀರಿ ಹೊರಗೆ ಬರಲು ಆಗದ ಅವರ ಮನಸ್ಥಿತಿಗಳನ್ನು ಬಣ್ಣಿಸಲಾಗಿದೆ.

ಇಲ್ಲಿ ಒಂದು ಅತ್ಯಂತ ಸ್ವಾರಸ್ಯಕರ ವಿವರಣೆಯನ್ನು ಅಂಬೇಡ್ಕರ್ ನೀಡುತ್ತಾರೆ. ಪ್ರತ್ಯೇಕ ಮತದಾನ ವ್ಯವಸ್ಥೆಯನ್ನು ಮಾಡುವುದರಿಂದ ದೇಶದ ಐಕ್ಯತೆಗೆ ಧಕ್ಕೆಯಾಗುತ್ತದೆ ಎಂಬ ಒಂದು ವಾದವನ್ನು ಕಾಂಗ್ರೆಸ್ಸಿಗರು ಅಥವಾ ಹಿಂದೂಗಳು ಮುಂದಿಡುತ್ತಾರೆ. ‘ಆದರೆ ನಮ್ಮಲ್ಲಿ ದೇಶ ಎಂಬುದು ಕೇವಲ ಕಲ್ಪನೆಯಾಗಿದೆಯೇ ಹೊರತು ಇನ್ನೂ ದೇಶ ರಚನೆ ಆಗಿಲ್ಲ. ಆದ್ದರಿಂದ ಈ ವಾದ ನಿರಾಧಾರವಾದದ್ದು’. ಎನ್ನುತ್ತಾರೆ ಅಂಬೇಡ್ಕರ್. ಹಿಂದೂಗಳ ಆಶಯದಂತೆ ಜಂಟಿ ಮತಕ್ಷೇತ್ರಗಳ ಮೂಲಕ ಪರಿಶಿಷ್ಟ ಜಾತಿಗಳಿಗೆ ಕ್ಷೇತ್ರಗಳನ್ನು ಮೀಸಲಿಟ್ಟರೆ ಆ ಕ್ಷೇತ್ರಗಳು ಕೇವಲ ಹೆಸರಿಗೆ ಮಾತ್ರ ಪರಿಶಿಷ್ಟವಾಗಿ ಉಳಿಯುತ್ತವೆ ಎಂಬ ಆತಂಕವನ್ನು ಬಾಬಾಸಾಹೇಬರು ವ್ಯಕ್ತಪಡಿಸುತ್ತಾರೆ. ಏಕೆಂದರೆ ಅಂತಹ ಕ್ಷೇತ್ರಗಳಲ್ಲಿ ಹಿಂದೂಗಳ ಒಪ್ಪಿಗೆಯ ಮೂಲಕ ಆಯ್ಕೆಯಾಗುವ ವ್ಯಕ್ತಿ ಕೇವಲ ಹೆಸರಿಗೆ ಮಾತ್ರ ಚುನಾಯಿತ ಪ್ರತಿನಿಧಿ ಆಗುತ್ತಾನೆ, ಆದರೆ ನಿಜವಾದ ಅರ್ಥದಲ್ಲಿ ಆತ ಪರಿಶಿಷ್ಟ ಜಾತಿಗಳ ಹಿತರಕ್ಷಣೆ ಮಾಡಲು ಅಸಮರ್ಥನಾಗಿರುತ್ತಾನೆ.

ಕಾರ್ಯಾಂಗದಲ್ಲಿ ಮತ್ತು ಸಾರ್ವಜನಿಕ ಸೇವೆಗಳಲ್ಲಿ ಪರಿಶಿಷ್ಟ ಜಾತಿಗಳಿಗೆ ಕನಿಷ್ಠ ಅರ್ಹತೆಯ ಮೇರೆಗೆ ಹುದ್ದೆಗಳನ್ನು ಕಾಯ್ದಿರಿಸುವಲ್ಲಿ ಹಿಂದೂಗಳು ವಿರೋಧ ವ್ಯಕ್ತಪಡಿಸಿ ‘ಹುದ್ದೆಗಳು ಕೇವಲ ಅರ್ಹತೆ, ದಕ್ಷತೆ ಮತ್ತು ನಡತೆಯನ್ನು ಆಧರಿಸಿ ಇರಬೇಕು’ ಎಂದಾಗ ಅವರು ಹುದ್ದೆಗಳ ಆಯ್ಕೆಯಲ್ಲಿ ನಡತೆಯನ್ನು ಒಂದು ಅರ್ಹತೆಯಾಗಿ ಎಲ್ಲರೂ ಒಪ್ಪಿಕೊಳ್ಳುತ್ತಾರೆ ಆದರೆ ಕನಿಷ್ಠ ಅರ್ಹತೆ (minimum qualification) ಎಂಬುದನ್ನು ಒಪ್ಪಿಕೊಳ್ಳುವ ಮೂಲಕ ಐತಿಹಾಸಿಕ ಅಸಮಾನತೆಯನ್ನು ಅಳಿಸಿ ಹಾಕುವಲ್ಲಿ ಒಂದು ದಿಟ್ಟ ಹೆಜ್ಜೆಯನ್ನು ಇಡಬಹುದು. ಇಂಥ ಒಂದು ಪ್ರಯತ್ನಕ್ಕೆ ಹಿಂದೂಗಳ ವಿರೋಧವನ್ನು ಒಪ್ಪಲು ಆಗದು ಎನ್ನುತ್ತಾರೆ. ಜಾತಿ ಆಧಾರದ ಮೇಲೆ ಹೇಗೆ ಶಿಕ್ಷಣವನ್ನು ಪರಿಶಿಷ್ಟ ಜಾತಿಗಳಿಗೆ ನಿರಾಕರಿಸಲಾಯಿತು, ಅದರಿಂದಾಗಿ ಬಡತನದಲ್ಲಿರುವ ಈ ಜಾತಿಗಳು ತಮ್ಮ ಆರ್ಥಿಕ ಹಿಂದುಳಿಯುವಿಕೆಯಿಂದ ಉನ್ನತ ಶಿಕ್ಷಣದಿಂದ ಹೇಗೆ ವಂಚಿತರಾದರು ಮತ್ತು ಈ ಎರಡೂ ಕಾರಣಗಳಿಂದ ಹೇಗೆ ಅವಕಾಶಗಳಿಂದ ದೂರವಾದರು ಎಂದು ಗೊತ್ತಿದ್ದು, ಸಾಮರ್ಥ್ಯ ಅಥವಾ ಶಿಕ್ಷಣವನ್ನು ಮುಂದಿಟ್ಟು ಅವಕಾಶವನ್ನು ನಿರಾಕರಿಸುವುದು ಅತ್ಯಂತ ವ್ಯವಸ್ಥಿತವಾದ ನಿಯಂತ್ರಣದ ಭಾಗವೇ ಆಗಿದೆ ಎಂದು ಅಂಬೇಡ್ಕರ್ ಹೇಳುತ್ತಾರೆ.

ಇದನ್ನೂ ಓದಿರಿ: ಪಾಕಿಸ್ತಾನ ಅಥವಾ ಭಾರತದ ವಿಭಜನೆ: ಬಾಬಾ ಸಾಹೇಬರ ಒಳನೋಟ

‘ಜಾತಿ ವ್ಯವಸ್ಥೆಯ ಮೂಲಕ, ಧರ್ಮದ ಸಹಾಯದಿಂದ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತ ಬಂದಂತಹ ವ್ಯವಸ್ಥೆಯನ್ನು ಸಂಪೂರ್ಣವಾಗಿ ಮುರಿದು ಕಟ್ಟಿದರೆ ಮಾತ್ರ ಹೊಸದನ್ನು ನಿರ್ಮಿಸಲು ಸಾಧ್ಯ’ ಎಂಬ ಆಶಯ ಈ ಕೃತಿಯಲ್ಲಿ ವ್ಯಕ್ತವಾಗಿದೆ. ದೇಶದ ಮಾಧ್ಯಮಗಳು ಸಂಪೂರ್ಣವಾಗಿ ಹಿಂದೂಗಳ ಕೈಯಲ್ಲಿದ್ದು, ಅವು ಪರಿಶಿಷ್ಟ ಜಾತಿಗಳ ಅಗತ್ಯಗಳನ್ನಾಗಲಿ, ಬೇಡಿಕೆಗಳನ್ನಾಗಲಿ ಜನರ ಮುಂದೆ ಇಡಲು ಪ್ರಯತ್ನಿಸುತ್ತಿಲ್ಲ ಎನ್ನುತ್ತಾರೆ. ಮಾಧ್ಯಮಗಳ ಜೊತೆಗೆ ಕೋರ್ಟ್ಗಳಾಗಲಿ, ಪೊಲೀಸ್ ವ್ಯವಸ್ಥೆಯಾಗಲಿ ಎಲ್ಲವುಗಳ ಮೇಲೆ ಹಿಂದೂಗಳ ಬಿಗಿ ಹಿಡಿತ ಇರುವುದರಿಂದ ಈ ವ್ಯವಸ್ಥೆಯನ್ನು ಒಡೆಯುವ ಅಗತ್ಯ ಇನ್ನೂ ಹೆಚ್ಚಿಗೆ ಇದೆ ಎಂದು ಹೇಳುತ್ತಾರೆ. 1928ರಲ್ಲಿ ಬಾಂಬೆ ಸರ್ಕಾರ ರಚಿಸಿದ ತುಳಿತಕ್ಕೊಳಗಾದ ಸಮೂಹಗಳ ಅಧ್ಯಯನದ ವರದಿಯನ್ನು ಕೂಡ ಈ ಸಂದರ್ಭದಲ್ಲಿ ಉಲ್ಲೇಖಿಸುತ್ತಾರೆ.

ಮುಂದಿನ ಅಧ್ಯಾಯಗಳಲ್ಲಿ ಸಂವಿಧಾನದ ಬಗ್ಗೆ ಮಾತನಾಡುವಾಗ ಪ್ರತಿಯೊಂದು ದೇಶದ ಸಂವಿಧಾನವು ಆ ದೇಶದ ಸಾಮಾಜಿಕ ಸಂರಚನೆಯನ್ನು ಗಮನದಲ್ಲಿ ಇರಿಸಿಕೊಂಡು ರಚಿಸಬೇಕು ಎಂಬುದನ್ನು ವಿವರಿಸುತ್ತಾರೆ. ಪಾಶ್ಚಿಮಾತ್ಯ ದೇಶಗಳ ವರ್ಗ ವ್ಯವಸ್ಥೆ ಮತ್ತು ನಮ್ಮ ದೇಶದ ಜಾತಿ ವ್ಯವಸ್ಥೆಯಲ್ಲಿ ಹೆಚ್ಚಿನ ವ್ಯತ್ಯಾಸ ಇಲ್ಲ ಎಂದು ವಾದ ಮಾಡುವ ಹಿಂದೂಗಳ ಮಾತುಗಳು, ಜಾತಿ ವ್ಯವಸ್ಥೆಯು ಒಂದು ಸಮಸ್ಯೆಯೇ ಅಲ್ಲವೆಂಬ ಹಗುರವಾದ ಪರಿಕಲ್ಪನೆಯನ್ನು ಉದ್ದೇಶಪೂರ್ವಕವಾಗಿ ಮಂಡಿಸುತ್ತಿವೆ ಎನ್ನುತ್ತಾರೆ ಅಂಬೇಡ್ಕರ್.

ಕೊನೆಯ ಅಧ್ಯಾಯದಲ್ಲಿ ಹಿಂದೂಗಳು ಹೇಗೆ ಬೇರೆ ಬೇರೆ ಸಮುದಾಯಗಳ ಜೊತೆಗೆ ಬೇರೆ ರೀತಿಯಲ್ಲಿ ವರ್ತಿಸುತ್ತಾರೆ ಎಂಬುದನ್ನು ಮುಸ್ಲಿಂ ಮತ್ತು ಸಿಖ್ಖರ ಬೇಡಿಕೆಗಳ ಹಿನ್ನೆಲೆಯಲ್ಲಿ ಬಯಲಿಗೆಳೆಯುತ್ತಾರೆ. ಈ ಎರಡು ಸಮುದಾಯಗಳು ಭಾರತದಲ್ಲಿ ಪ್ರಭಾವಿ ಸಮುದಾಯಗಳ ಸಾಲಿನಲ್ಲಿ ನಿಲ್ಲುತ್ತವೆ. ಆದ್ದರಿಂದ ಅವರ ಬೇಡಿಕೆಗಳನ್ನು ಪರಿಶಿಷ್ಟ ಜಾತಿಗಳ ಬೇಡಿಕೆಗಳ ಜೊತೆಗೆ ಹೋಲಿಸಲು ಆಗುವುದಿಲ್ಲ. ಈ ಪುಸ್ತಕವನ್ನು ಸ್ವಾತಂತ್ರ‍್ಯ ಪೂರ್ವದಲ್ಲಿ ಬರೆದಿದ್ದು, ಇದು ಅವಿಭಜಿತ ಭಾರತದ ಮುಸ್ಲಿಂ ಸಮುದಾಯವನ್ನು ಉದ್ದೇಶಿಸಿದ್ದರಿಂದ ಆ ಸಮುದಾಯದ ಅಂದಿನ ಸಮಯದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗಳ ಬಗ್ಗೆ ವಿವರಿಸುತ್ತದೆ. ಮುಸ್ಲಿಂ ಮತ್ತು ಸಿಖ್ಖರ ಬೇಡಿಕೆಗಳಿಗೆ ಹೋಲಿಸಿದರೆ ಪರಿಶಿಷ್ಟ ಜಾತಿಗಳ ಬೇಡಿಕೆಗಳು ಅತ್ಯಂತ ಮೂಲಭೂತವಾದವು. ಇಡೀ ಪರಿಶಿಷ್ಟ ಜಾತಿ ಸಮುದಾಯವೇ ದುರ್ಬಲ ಮತ್ತು ಅಸಹಾಯಕವಾಗಿದ್ದು, ಹಿಂದೂ, ಮುಸ್ಲಿಂ, ಸಿಖ್ ಮೂರೂ ಸಮುದಾಯಗಳಿಂದ ತುಳಿತಕ್ಕೆ ಒಳಗಾಗಿದೆ ಎಂಬ ಅಂಶವನ್ನು ಬಿಚ್ಚಿಡುತ್ತಾರೆ. ಪ್ರತಿಯೊಂದು ಧರ್ಮಗಳಲ್ಲೂ ಆಳವಾಗಿ ಬೇರೂರಿರುವ ಅಂತ್ಯಜರ ಬಗೆಗಿನ ಭಾವನೆಗಳು ಒಂದೇ ತೆರನಾದ ಅಸಡ್ಡೆ ಮತ್ತು ತಿರಸ್ಕಾರಕ್ಕೆ ಒಳಗಾಗಿದ್ದು, ಪ್ರತಿಯೊಂದು ಧರ್ಮಗಳಲ್ಲಿನ ಪರಿಶಿಷ್ಟ ಜಾತಿಯವರ ಮತ್ತು ಅಂತ್ಯಜರ ಪರಿಸ್ಥಿತಿಗಳೂ ಒಂದೇ ತೆರನಾಗಿರುವುದನ್ನು ನೋಡಿದಾಗ ಈ ಅಂಶವನ್ನು ಅರ್ಥಮಾಡಿಕೊಳ್ಳಬಹುದು ಎನ್ನುತ್ತಾರೆ.

ಇದೇ ಅಧ್ಯಾಯದಲ್ಲಿ ಗಾಂಧೀಜಿಯ ಬಗ್ಗೆ ಬರೆಯುವಾಗ “ಅವರ ಅಭಿಪ್ರಾಯಗಳು ಹಿಂದೂ ಒಗ್ಗಟ್ಟು, ರಾಷ್ಟ್ರೀಯತೆ ಮತ್ತು ದೇಶಪ್ರೇಮದ ಹೆಸರಿನಲ್ಲಿ ಅಸ್ಪೃಶ್ಯರ ಬೇಡಿಕೆಗಳನ್ನು ಕಡೆಗಣಿಸುವುದೇ ಆಗಿದೆ” ಎಂದು ವಿಮರ್ಶಿಸಿದ್ದಾರೆ. ಚಕ್ರವರ್ತಿ ರಾಜಗೋಪಾಲಚಾರಿ ಅವರಂತೂ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಮುಸ್ಲಿಂ ಲೀಗ್ ಜೊತೆಗೆ ಗುರುತಿಸಿಕೊಂಡು ಪಾಕಿಸ್ತಾನದ ಅವರ ಬೇಡಿಕೆಗೆ ತಮ್ಮ ಸಮರ್ಥನೆಯನ್ನು ನೀಡುತ್ತಾರೆ ಎಂಬುದನ್ನು ಹೇಳುವಾಗ ಇವರ್ಯಾರಿಗೂ ಅಸ್ಪೃಶ್ಯರ ಬೇಡಿಕೆಗಳು ಮಾತ್ರ ಹೇಗೆ ಕಾಣುವುದೇ ಇಲ್ಲ ಎಂದು ಪ್ರಶ್ನಿಸುತ್ತಾರೆ. ಅಕಸ್ಮಾತ್ ಯಾರಾದರೂ ಅಸ್ಪೃಶ್ಯ ನಾಯಕ ಕಡೆಗಣಿಸಲು ಆಗದಷ್ಟು ಬೆಳೆದು ಬಿಟ್ಟರೆ ಆ ನಾಯಕನನ್ನು ಖರೀದಿಸುವ ಪ್ರಯತ್ನಗಳು ನಡೆಯುತ್ತವೆ, ಅಕಸ್ಮಾತ್ ಆ ನಾಯಕ ಅದಕ್ಕೆ ಬಗ್ಗದಿದ್ದರೆ ಅತ್ಯಂತ ವ್ಯವಸ್ಥಿತವಾಗಿ ಮಾಧ್ಯಮಗಳ ಮೂಲಕ, ಬೆದರಿಕೆಗಳ ಮೂಲಕ ಅಥವಾ ಗೊತ್ತಿರುವ ಎಲ್ಲ ದಾರಿಗಳ ಮೂಲಕ ಅಂಥವರನ್ನು ದೇಶದ್ರೋಹಿ ಎಂದು ಬಿಂಬಿಸುವ ದುಷ್ಟ ಪ್ರಯತ್ನವನ್ನು ಬಹಿರಂಗಪಡಿಸಿದ್ದಾರೆ. ಇಂದಿನ ಭಾರತದಲ್ಲಿ ಇದೇ ವ್ಯವಸ್ಥೆ, ಇದೇ ರೀತಿಯ ಅಧಿಕಾರ ದುರ್ಬಳಕೆ, ಮಾಧ್ಯಮಗಳ ತಿರುಚುವಿಕೆಗಳ ಮೂಲಕ ಹೇಗೆ ವ್ಯಕ್ತಿ, ಸಂಘ, ಸಂಸ್ಥೆ, ಸಮುದಾಯಗಳನ್ನು, ದೇಶದ್ರೋಹಿ ಎಂದು ಬಿಂಬಿಸಿ ಅವರನ್ನು ಕಟ್ಟಿ ಹಾಕಲು ಪ್ರಯತ್ನಿಸುತ್ತಿದೆ ಎಂಬುದನ್ನು ನೋಡುವಾಗ ‘ಕೇವಲ ಕಾಲ ಸರಿದಿದೆಯೇ ಹೊರತು ವಸ್ತು ಸ್ಥಿತಿ ತಳಮಟ್ಟದಲ್ಲಿ ಬದಲಾಗಿಲ್ಲ’ ಎಂದು ಅರಿವಾಗುತ್ತದೆ.

‘ಅಷ್ಟಕ್ಕೂ ಅಸ್ಪೃಶ್ಯರು ಕೇಳಿದ್ದೇನು? ಕೇವಲ ಕೆಲವೊಂದು ರಾಜಕೀಯ ಸವಲತ್ತುಗಳು. ಅಸ್ಪೃಶ್ಯರಿಗೆ ತಮಗೆ ಹಕ್ಕುಗಳನ್ನು ಕೇಳುವ ಹಕ್ಕೇ ಇಲ್ಲ ಎಂದು ಹಿಂದೂಗಳು ಅಂದುಕೊಂಡಿರುವುದು ಈ ಸಮುದಾಯದ ಮೇಲೆ ಹೇರಿರುವ ದುರ್ಗತಿ’ ಎಂದು ಮನಸ್ಸಿನ ಆಳದಿಂದ ಬಂದ ನೋವನ್ನು ಧ್ವನಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸಮಸ್ಯೆಗಳನ್ನು ಮುಂದಿಡುವಾಗಲೂ ಅಸ್ಪೃಶ್ಯರ ಸಮಸ್ಯೆಗಳು, ಅವರ ಹಕ್ಕುಗಳ ಬೇಡಿಕೆಗಳು, ಮುಂತಾದವುಗಳನ್ನು ವ್ಯಕ್ತಪಡಿಸದೆ ಕೇವಲ ರಾಷ್ಟ್ರೀಯತೆಯ ಹೆಸರಿನಲ್ಲಿ ಭಾರತದ ಸಮಸ್ಯೆಗಳನ್ನು ಬಿಂಬಿಸುವ ಹಿಂದೂ ನಾಯಕರ ಧೋರಣೆಯನ್ನು ಬೂಟಾಟಿಕೆಗೆ ಹೋಲಿಸುತ್ತಾರೆ. ಭಾರತಕ್ಕೆ ಸ್ವಾತಂತ್ರ‍್ಯದ ಭರವಸೆ ನೀಡುತ್ತಲೇ ಬ್ರಿಟಿಷರು ಎರಡನೇ ಮಹಾಯುದ್ಧದಲ್ಲಿ ಭಾರತದ ಸಹಕಾರ ಹಾಗೂ ಪಾಲ್ಗೊಳ್ಳುವಿಕೆಯನ್ನು ಬಯಸಿದಾಗ ಈ ಯುದ್ಧದಿಂದ ನೀವೇನು ಬಯಸುತ್ತೀರಿ ಎಂದು ಸ್ಪಷ್ಟವಾಗಿ ಹೇಳಬೇಕು ಎಂದು ಕಾಂಗ್ರೆಸ್ ಮತ್ತು ಹಿಂದೂಗಳು ಕೇಳುತ್ತಾರೆ. ಇದೇ ಪ್ರಶ್ನೆಯನ್ನು ಪರಿಶಿಷ್ಟ ಜಾತಿಯವರು ‘ಸ್ವಾತಂತ್ರ‍್ಯಾ ನಂತರ ನಿಮ್ಮ ಧೋರಣೆಯೇನು, ಗುರಿಗಳೇನು? ನೀವೇನು ಮಾಡಲು ಹೊರಟಿದ್ದೀರಿ’ ಎಂದು ಕೇಳಿದಾಗ ಕಾಂಗ್ರೆಸ್ ಮತ್ತು ಹಿಂದೂಗಳು ನಿರುತ್ತರರಾಗುತ್ತಾರೆ. ಸ್ವಾತಂತ್ರ‍್ಯವೇ ಈ ಹೋರಾಟದ ಗುರಿ ಮತ್ತು ಉದ್ದೇಶ ಎಂದು ಗಾಂಧಿ ಹೇಳುವಾಗ, ‘ಪರಿಶಿಷ್ಟ ಜಾತಿಗಳ ಸ್ವಾತಂತ್ರ‍್ಯ ಮತ್ತು ಸಮಾನತೆಗಾಗಿ ಏನು ಮಾಡುವಿರಿ’ ಎಂಬ ಪ್ರಶ್ನೆಗೆ ಅವರು ಮೌನ ತಳೆಯುತ್ತಾರೆ. ಈ ಮೌನವು ಧರ್ಮದ ಎಲ್ಲೆಗಳನ್ನು ಮೀರಿ ಬೆಳೆಯಲು ಆಗದ ಅವರ ಇತಿಮಿತಿಗಳನ್ನು ತೋರಿಸುತ್ತದೆ. ಪ್ರಪಂಚದಾದ್ಯಂತ ಒಡೆದು ತೋರುವ ಗಾಂಧೀಜಿಯ ಉದಾರವಾದಿ ನಡವಳಿಕೆ ಅಸ್ಪೃಶ್ಯರ ವಿಷಯ ಬಂದಾಗ ಹಿಂದೆಗೆಯುತ್ತದೆ, ಏಕೆಂದರೆ ಆಂತರ್ಯದಲ್ಲಿ ಗಾಂಧೀಜಿ ಸಹಿತ ಕಟ್ಟರ್ ಹಿಂದುತ್ವವಾದಿಯಂತೆ ಕಾಣಿಸುತ್ತಾರೆ ಎಂಬುದಾಗಿ ಅಂಬೇಡ್ಕರ್ ಅಭಿಪ್ರಾಯ ಪಡುತ್ತಾರೆ.

ಇದನ್ನೂ ಓದಿರಿ: ‘ಕಾಂಗ್ರೆಸ್ ಮತ್ತು ಗಾಂಧಿ ಅಸ್ಪೃಶ್ಯರಿಗಾಗಿ ಮಾಡಿರುವುದೇನು?’

ಅಮೆರಿಕದ ಸ್ವಾತಂತ್ರ‍್ಯ ಸಂಗ್ರಾಮದ ಘೋಷಣೆಯ ತತ್ವಗಳನ್ನು ಬರೆದ ಜಫರ್ಸನ್ “ನನ್ನ ದೇಶವಾಸಿಗಳಲ್ಲಿ ನಾನು ಕ್ಷಮೆ ಯಾಚಿಸುತ್ತೇನೆ” ಎಂದು ಕಪ್ಪು ಜನರನ್ನು ಉದ್ದೇಶಿಸಿ ಹೇಳಿರುವ ಮಾತನ್ನು ಗಾಂಧಿ ಮತ್ತು ನೆಹರೂ ಇವರ ಹಿನ್ನೆಲೆಯಲ್ಲಿ ಅಂಬೇಡ್ಕರ್ ಹೇಳುವಾಗ, ನೆಹರೂ ಜಫರಸನ್‌ಗೆ ಸ್ವಲ್ಪ ಹತ್ತಿರವಾಗುತ್ತಾರೆ, ಆದರೆ ಉಳಿದ ಯಾವ ನಾಯಕರಲ್ಲಿಯೂ ಯಾವುದೇ ಬಗೆಯ ಪಶ್ಚಾತಾಪವಾಗಲಿ, ಪರಿತಾಪವಾಗಲಿ ಕಂಡುಬರದೆ ಇರುವುದಕ್ಕೆ ಧರ್ಮ ಈ ವ್ಯವಸ್ಥೆಯನ್ನು ಸಾಂಸ್ಥಿಕರಿಸಿರುವುದೇ ಕಾರಣ ಆಗಿದೆ ಎಂದು ಕಟುವಿಮರ್ಶೆ ಮಾಡುತ್ತಾರೆ. ಪುಸ್ತಕದ ಉದ್ದಕ್ಕೂ ಅಂಬೇಡ್ಕರ್ ಅವರು ಹಿಂದೂ ಮತ್ತು ಪರಿಶಿಷ್ಟ ಜಾತಿ ಎರಡೂ ಸಂಪೂರ್ಣವಾಗಿ ಬೇರೆ ಬೇರೆ ಸಮುದಾಯಗಳೇ ಎಂದು ಒತ್ತಿ ಹೇಳಿರುವುದು, ಅಸ್ಪೃಶ್ಯರ ಸ್ಥಿತಿಗತಿಗೆ ಹಿಂದೂ ಧರ್ಮದ ಜಾತಿ ವ್ಯವಸ್ಥೆಯೇ ಕಾರಣ ಎಂಬ ಅವರ ನಂಬಿಕೆಗೆ ಪೂರಕವಾಗಿಯೇ ಇವೆ. ಗಾಂಧೀಜಿ ನಡೆಸುವ ಹರಿಜನ ಸೇವಕ ಸಂಘದಂತಹ ವ್ಯವಸ್ಥೆಯಿಂದ ಯಾವುದೇ ಬದಲಾವಣೆಗಳನ್ನು ತರಲು ಸಾಧ್ಯವಿಲ್ಲ. ಗಾಂಧಿ, ‘ದಲಿತರು ಕೂಡ ಹಿಂದೂಗಳಾಗಬೇಕು’ ಎಂದು ಹೇಳಿದಾಗ, ಈ ಹೊಸ ಒಳಗೊಳ್ಳುವಿಕೆಯಲ್ಲಿ ಪರಿಶಿಷ್ಟ ಜಾತಿಗಳ ಸ್ಥಾನಮಾನವೇನು ಎಂಬ ಪ್ರಶ್ನೆ ಗೌಣವಾಗಿರುವುದು, ಆಡದೆ ಉಳಿದ ಮಾತುಗಳಿಗೆ ಪ್ರತಿರೂಪದಂತೆ ಕಾಣುತ್ತದೆ.

ಪುಸ್ತಕದ ಉದ್ದಕ್ಕೂ ವ್ಯಕ್ತಪಡಿಸಿರುವ ಯಾವುದೇ ಸಂಗತಿಗಳನ್ನು ಹಳೆಯ ವಿಚಾರಗಳು ಎಂದು ತೆಗೆದು ಹಾಕುವಂತಿಲ್ಲ. ಇಂದಿನ ಭಾರತದ ರಾಜಕೀಯ ಸ್ಥಿತಿಗತಿಗಳ ಹಿನ್ನೆಲೆಯಲ್ಲಿ ಅಂಬೇಡ್ಕರ್ ಅವರ ವಿಚಾರಗಳು ಇವತ್ತಿಗೂ ಅಷ್ಟೇ ಪ್ರಸ್ತುತವಾಗಿ ನಿಲ್ಲುತ್ತವೆ. ಅಂಬೇಡ್ಕರ್ ಅವರು ಎಚ್ಚರಿಸಿದಂತೆ ತಳಮಟ್ಟದ ನಾಯಕರುಗಳು ಹಿಂದುತ್ವಕ್ಕೆ ಜಯಕಾರ ಹೇಳುವುದನ್ನು ನೋಡಿದಾಗ ಅವರ ವ್ಯಕ್ತಿತ್ವಗಳ ಬಗ್ಗೆ ಕನಿಕರ ಬರುತ್ತದೆ. ಈ ಜಾತಿ ವ್ಯವಸ್ಥೆ ದಿನದಿಂದ ದಿನಕ್ಕೆ ಇನ್ನೂ ಹರಳುಗಟ್ಟುತ್ತಾ ಸಾಗುತ್ತಿದ್ದು 21ನೇ ಶತಮಾನದಲ್ಲೂ ದೇವಸ್ಥಾನದ ಒಳಗೆ ಹೋದ ಕಾರಣಕ್ಕೆ, ಅಲ್ಲಿ ನೀರು ಕುಡಿದ ಕಾರಣಕ್ಕೆ, ಅದ್ದೂರಿಯಾಗಿ ಮದುವೆ ಆದ ಕಾರಣಕ್ಕೆ, ಉತ್ತಮ ಬಟ್ಟೆ ತೊಟ್ಟ ಕಾರಣಕ್ಕೆ, ಮೇಲ್ಜಾತಿಯವರ ದಬ್ಬಾಳಿಕೆಗೆ ಒಪ್ಪದ ಕಾರಣಕ್ಕೆ, ಪರಿಶಿಷ್ಟ ಜಾತಿಯ ಜನರನ್ನು ಬರ್ಬರವಾಗಿ ಹತ್ಯೆ ಮಾಡಲಾಗುತ್ತಿದೆ. ಬಾಬಾಸಾಹೇಬರ ಎಚ್ಚರಿಕೆಯ ಮಾತುಗಳ ಕಡೆಗಣಿಸುವಿಕೆಯ ಪರಿಣಾಮಗಳು ಈಗಾಗಲೇ ಕಾಣಲು ಆರಂಭವಾಗಿವೆ. ಅಂಬೇಡ್ಕರ್ ಅವರು ದಾರ್ಶನಿಕರಾಗಿ ಗೋಚರಿಸುತ್ತಾರೆ.

WhatsApp Image 2025 07 22 at 17.31.15 1
ರಾಜಲಕ್ಷ್ಮಿ ಅಂಕಲಗಿ
+ posts

ಮೂಲತಃ ವಿಜಯಪುರದವರಾದ ರಾಜಲಕ್ಷ್ಮಿ ಅಂಕಲಗಿಯವರು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್ ಅವರ ಒಡನಾಡಿಗಳಾಗಿದ್ದ ಇವರು ಹಲವು ಹೋರಾಟಗಳಲ್ಲಿ ಭಾಗಿಯಾಗುತ್ತಲೇ ಬರವಣಿಗೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಹಲವು ಪತ್ರಿಕೆಗಳಿಗೆ ಅಂಕಣಕಾರರಾಗಿದ್ದಾರೆ. ನ್ಯಾಯಾಂಗ, ರಾಜಕೀಯ, ಕೌಟುಂಬಿಕ ಕಲಹಗಳ ಕುರಿತು ನಿರಂತರ ಬರೆದಿದ್ದಾರೆ. ಸದ್ಯ ಯೂಟ್ಯೂಬ್ ಚಾನೆಲ್ ಮೂಲಕವೂ ಕೌಟುಂಬಿಕ ಕಾನೂನುಗಳ ಕುರಿತು ಅರಿವು ಮೂಡಿಸುತ್ತಿದ್ದಾರೆ. ವಾರ್ತಾಭಾರತಿ, ಈದಿನ ಸೇರಿದಂತೆ ಹಲವು ಪರ್ಯಾಯ ಮಾಧ್ಯಮಗಳ ಚರ್ಚೆಗಳಲ್ಲಿ ಮಾತನಾಡುವ ಇವರು, ತಮ್ಮ ಒಳನೋಟಗಳ ಮೂಲಕ ಗಮನ ಸೆಳೆದಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ರಾಜಲಕ್ಷ್ಮಿ ಅಂಕಲಗಿ
ರಾಜಲಕ್ಷ್ಮಿ ಅಂಕಲಗಿ
ಮೂಲತಃ ವಿಜಯಪುರದವರಾದ ರಾಜಲಕ್ಷ್ಮಿ ಅಂಕಲಗಿಯವರು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್ ಅವರ ಒಡನಾಡಿಗಳಾಗಿದ್ದ ಇವರು ಹಲವು ಹೋರಾಟಗಳಲ್ಲಿ ಭಾಗಿಯಾಗುತ್ತಲೇ ಬರವಣಿಗೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಹಲವು ಪತ್ರಿಕೆಗಳಿಗೆ ಅಂಕಣಕಾರರಾಗಿದ್ದಾರೆ. ನ್ಯಾಯಾಂಗ, ರಾಜಕೀಯ, ಕೌಟುಂಬಿಕ ಕಲಹಗಳ ಕುರಿತು ನಿರಂತರ ಬರೆದಿದ್ದಾರೆ. ಸದ್ಯ ಯೂಟ್ಯೂಬ್ ಚಾನೆಲ್ ಮೂಲಕವೂ ಕೌಟುಂಬಿಕ ಕಾನೂನುಗಳ ಕುರಿತು ಅರಿವು ಮೂಡಿಸುತ್ತಿದ್ದಾರೆ. ವಾರ್ತಾಭಾರತಿ, ಈದಿನ ಸೇರಿದಂತೆ ಹಲವು ಪರ್ಯಾಯ ಮಾಧ್ಯಮಗಳ ಚರ್ಚೆಗಳಲ್ಲಿ ಮಾತನಾಡುವ ಇವರು, ತಮ್ಮ ಒಳನೋಟಗಳ ಮೂಲಕ ಗಮನ ಸೆಳೆದಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಟವಾಡೆಯಾಗದ ಭಾಷಣ ‘ಅನಾಇಲೇಷನ್ ಆಫ್ ಕಾಸ್ಟ್’

ಕೃತಿ: ANNIHILATION OF CASTE (ಜಾತಿ ನಿರ್ಮೂಲನೆ)ಮೊದಲ ಪ್ರಕಟಣೆ: 1936 (ಬಾಬಾಸಾಹೇಬ್...

‘ಅನಾಇಲೇಷನ್ ಆಫ್ ಕ್ಯಾಸ್ಟ್’- ಜಾತಿ ಮೂಲಗಳ ಶೋಧಿಸುತ್ತಾ…

ಕೃತಿ: Annihilation of Caste (ಜಾತಿ ನಿರ್ಮೂಲನೆ)ಮೊದಲ ಪ್ರಕಟಣೆ: 1936 (ಬಾಬಾಸಾಹೇಬ್...