ಬೆಂಗಳೂರಿನಲ್ಲಿ ಜುಲೈ 7ರಂದು ಗಂಟೆಗೆ 35-40 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿದ್ದು, ಇದು ವಾರಾಂತ್ಯದಲ್ಲಿ ನಿಧಾನಗೊಳ್ಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಕರ್ನಾಟಕದ ದಕ್ಷಿಣ ಒಳಭಾಗ ಮತ್ತು ಉತ್ತರ ಒಳನಾಡಿನ ಪ್ರದೇಶಗಳಲ್ಲಿ ಮುಂದಿನ ಐದು ದಿನಗಳಲ್ಲಿ 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ತಿಳಿಸಿದೆ.
“ಮಾನ್ಸೂನ್ ಸಮಯದಲ್ಲಿ ಬಿರುಗಾಳಿ ಬೀಸುವುದು ಸಾಮಾನ್ಯವಾಗಿದೆ. ಕರಾವಳಿ ಕರ್ನಾಟಕದಲ್ಲಿ ಭಾರೀ ಮಳೆಗೆ ಕಾರಣವಾಗುವ ಪಶ್ಚಿಮದಿಂದ ಬೀಸುವ ಗಾಳಿಯು ಸಾಮಾನ್ಯವಾಗಿ ಬಲವಾಗಿರುತ್ತದೆ ಮತ್ತು ತಂಪಾಗಿರುತ್ತದೆ. ಈ ಗಾಳಿಯಿಂದಾಗಿ ಬೆಂಗಳೂರಿನ ತಾಪಮಾನವೂ ಕುಸಿದಿದೆ” ಎಂದು ಬೆಂಗಳೂರಿನ ಐಎಂಡಿ ವಿಜ್ಞಾನಿ ಎ.ಪ್ರಸಾದ್ ತಿಳಿಸಿದರು.
“ವಾಸ್ತವವಾಗಿ, ಬೆಂಗಳೂರು ಗರಿಷ್ಠ ತಾಪಮಾನದಲ್ಲಿ ಕುಸಿತ ಕಂಡಿದೆ. ಜುಲೈ 6ರಂದು ನಗರವು 26.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಿಸಿದೆ. ಜುಲೈ 6 ರಂದು ನಗರದಲ್ಲಿ ಕನಿಷ್ಠ ತಾಪಮಾನ 20.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದು ವರ್ಷದ ಈ ಅವಧಿಗೆ ಸಾಮಾನ್ಯವಾಗಿದೆ” ಎಂದರು.
“ಮುಂದಿನ ಐದು ದಿನಗಳಲ್ಲಿ ಬೆಂಗಳೂರಿಗೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದೆ. ಜುಲೈ 11 ಮತ್ತು 12 ರಂದು ಭಾಗಶಃ ಮೋಡ ಕವಿದ ವಾತಾವರಣದ ಜತೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಬಿಬಿಎಂಪಿ ಕಸ ಸಂಗ್ರಹಿಸುವ ಆಟೋ ಚಾಲಕನ ಮೇಲೆ ಹಲ್ಲೆ
ಜೂನ್‌ನಲ್ಲಿ ಕರ್ನಾಟಕಕ್ಕೆ ಕೊರತೆಯಾಗಿದ್ದ ಮಳೆ ಈಗ ರಾಜ್ಯಾದ್ಯಂತ ಚುರುಕುಗೊಂಡಿದೆ. ರಾಜ್ಯದ ಬಹುತೇಕ ಭಾಗಗಳಲ್ಲಿ ಜುಲೈನಲ್ಲಿ ಸಾಮಾನ್ಯ ಅಥವಾ ಸ್ವಲ್ಪ ಹೆಚ್ಚು ಮಳೆಯಾಗುವ ನಿರೀಕ್ಷೆಯಿದ್ದರೆ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಜುಲೈನಲ್ಲಿ ವಾಡಿಕೆಗಿಂತ ಸ್ವಲ್ಪ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ ಎಂದು ಮಾಹಿತಿ ನೀಡಿದೆ.