ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ಲಿಂಗದೋಗರ
ನಿಶ್ಚಲವೆಂಬ ಭಾಜನದಲ್ಲಿ
ನಿಜಜ್ಞಾನವೆಂಬ ಅಕ್ಕಿಯ ತುಂಬಿ, ಪರಮಾನಂದವೆಂಬ ಜಲವನೆರೆದು,
ಸ್ವಯಂ ಪ್ರಕಾಶವೆಂಬ ಅಗ್ನಿಯಿಂದ ಪಾಕವಾದ ಲಿಂಗದೋಗರವು ಮಹಾಘನದಲ್ಲಿ ನಿಂದು ಘನತೃಪ್ತಿಯ ನೀವುತ್ತಿದ್ದಿತ್ತು ಕಾಣಿರೆ! ಅದ
ಕಣ್ಣಿಲ್ಲದೆ ಕಂಡು
ಕೈಯಿಲ್ಲದ ಕೊಂಡು
ಬಾಯಿಲ್ಲದೆ ಉಂಡ ತೃಪ್ತಿಯ,
ಅರಿವಿಲ್ಲದ ಅರಿವಿನಿಂದ ಅರಿದು,
ಸುಖಿಯಾದೆ ನಾನು ಗುಹೇಶ್ವರಾ.
ಪದಾರ್ಥ:
ನಿಶ್ಚಲ = ಸ್ಥಿರವಾದ, ಗಟ್ಟಿಯಾದ
ಭಾಜನ = ಪಾತ್ರೆ
ಓಗರ = ಆಹಾರ, ಅನ್ನ
ವಚನಾರ್ಥ:
ಅಡಿಗೆ ಮಾಡಿ ಆಹಾರವನ್ನು ಸಿದ್ದಪಡಿಸಿ ದೈವಕ್ಕೆ ಊಟ ಬಡಿಸಬೇಕು. ಅದು ಲಿಂಗದೋಗರ. ನಾವು ಲಿಂಗಕ್ಕೆ ನೀಡುವ ಆಹಾರ. ಅದೇ ಸಾಂಪ್ರದಾಯಕವಾದ ನೈವೇದ್ಯ ಅರ್ಪಣೆ. ಯಾವ ಆಹಾರವನ್ನು ದೈವಕ್ಕೆ ನಿವೇದಿಸುತ್ತೇವೆಯೋ ಅದು ನೈವೇದ್ಯ. ಅಂತಹ ನೈವೇದ್ಯ ಹೇಗಿರಬೇಕು ಎಂದು ಹೇಳಿರುವುದೇ ಈ ವಚನ ವೈಶಿಷ್ಟ್ಯ. ಗಟ್ಟಿಯಾದ ಗಡಿಗೆಯಲ್ಲಿ ಅಕ್ಕಿಯನ್ನು ಹಾಕಿ ನೀರಲ್ಲಿ ನೆನೆಸಿ ಒಲೆಯ ಮೇಲಿಟ್ಟು ಬೇಯಿಸಿದರೆ ಅನ್ನ ಅರಳುತ್ತದೆ. ಹಸಿದ ಹೊಟ್ಟೆಗೆ ಘನವಾದ ಸಂತೃಪ್ತಿಯನ್ನು ನೀಡುತ್ತದೆ. ಹಾಗೆಯೇ ದೃಢ ಮನಸ್ಸೆಂಬ ಪಾತ್ರೆಯಲ್ಲಿ ಜ್ಞಾನವೆಂಬ ಅಕ್ಕಿಯನ್ನು ತುಂಬಿ ಆನಂದವೆಂಬ ನೀರಿನಲ್ಲಿ ನೆನೆಸಿ ಪ್ರಖರವಾದ ಕ್ರಿಯಾತ್ಮಕ ಚಿಂತನೆಗಳ ಶಾಖ ನೀಡಿದರೆ ಆತ್ಮಜ್ಞಾನವೆಂಬ ಆಹಾರ ಸಿದ್ದವಾಗುತ್ತದೆ. ಅದು ಮಹಾಘನದಲ್ಲಿ ನೈವೇದ್ಯವಾಗಿ ನಿಂತು ಘನವಾದ ತೃಪ್ತಿಯನ್ನು ನೀಡುತ್ತದೆ. ಅದೇ ಲಿಂಗದೋಗರ. ಅದು ಕಣ್ಣಿಲ್ಲದೆ ಕಾಣುವಂತದ್ದು. ಕೈಯಿಲ್ಲದೇ ಕೊಡುವಂತದ್ದು. ಬಾಯಿಯಿಲ್ಲದೆ ಭಕ್ಷಿಸುವಂತದ್ದು. ಅರಿವಿನಲ್ಲಿ ಅರೆದು ಜಗಿಯುವಂತದ್ದು. ನಿರಂತರವಾದ ತೃಪ್ತಿಯನ್ನು ನೀಡುವಂತದ್ದು. ಅನುಪಮವಾದ ಸುಖದ ರುಚಿಯನ್ನು ಹರಿಸುವಂತದ್ದು.
ಪದ ಪ್ರಯೋಗಾರ್ಥ:
ಲಿಂಗದೋಗರ ಎಂಬುದೇ ವಚನದ ವಸ್ತು. ಲಿಂಗದೋಗರ ಎಂದರೆ ಲಿಂಗದ ಅಥವಾ ದೈವದ ಆಹಾರ. ಈ ಜಗತ್ತನ್ನು ಮತ್ತು ನಮ್ಮನ್ನು ಸೃಷ್ಟಿಸಿದ ದೈವಕ್ಕೆ ನಾವು ಆಹಾರವನ್ನು ತಯಾರಿಸಿ ಬಡಿಸುತ್ತೇವೆ ಎಂಬುದು ಒಪ್ಪದ ಮಾತು. ಅಂತಹ ದೈವ ನಮ್ಮಿಂದ ಎಂತಹ ಊಟವನ್ನು ಬಯಸುತ್ತದೆ ಎಂದು ವಿವರಿಸುವ ಉದ್ದೇಶವೇ ಈ ವಚನ. ಲಿಂಗದೋಗರ. ಗಡಗಿ ತೊಳದು ಅಡಗಿ ಮಾಡವ್ವ, ಅನುಭಾವದಡಗಿ ಮಾಡಿ ಎಡಿಯ ಮಾಡವ್ವಾ, ದೇವರಿಗೆ ಎಡಿಯ ಮಾಡಿ ಗಂಡಗುಣಿಸವ್ವಾ ಎಂಬ ಕಡಕೋಳ ಮಡಿವಾಳಪ್ಪನವರ ತತ್ವಪದದಲ್ಲಿ ಬರುವ ಅಡಿಗೆಯ ಅರ್ಥವೇ ಲಿಂಗದೋಗರ. ಸಾರದಡುಗೆಯನೊಳ ವಿಚಾರದೊಲೆಯಲಿ ಮಾಡು ಎನ್ನುತ್ತದೆ ಕಗ್ಗ. ಅನುಭವದಡುಗೆಯ ಮಾಡಿ ಅದಕ್ಕನುಭವಿಗಳು ಬಂದು ನೀವೆಲ್ಲ ಕೂಡಿ, ತನುವೆಂಬ ಭಾಂಡವ ತೊಳೆದು ಕೆಟ್ಟ ಮನದ ಚಂಚಲವೆಂಬ ಮುಸುರೆಯ ಕಳೆದು ಘನವಾಗಿ ಮನೆಯನ್ನು ಬಳಿದು ಅಲ್ಲಿ ಮಿನುಗುವ ತ್ರಿಗುಣವ ಒಲೆಗುಂಡನೆಡೆದು ಎಂದು ಪುರಂದರ ದಾಸವಾಣಿ. ಲಿಂಗದೋಗರ ಎಂದರೆ ಏನೆಂದು ವ್ಯಾಖ್ಯೆ ನೀಡಿ ವ್ಯಾಖ್ಯಾನ ಮಾಡಿ ಅಲ್ಲಮ ಪ್ರಯೋಗಿಸಿರುವ ಅನನ್ಯ ಪದ ಲಿಂಗದೋಗರ. ಗಡಗಿ ತೊಳದು ಅಡಗಿ ಮಾಡವ್ವ ತತ್ವಪದವನ್ನು ಕನ್ನಡದ ಗಾಯಕಿ ಸವಿತಕ್ಕ ಅತ್ಯುತ್ತಮವಾಗಿ ಹಾಡಿದ್ದು ಯೂಟ್ಯೂಬಿನಲ್ಲಿ ಲಭ್ಯವಿದೆ.
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಒಡಲು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾಯದ ಮಂಜು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ದಳದುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಯಲು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಷ್ಟಸಂತಾನ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅಗ್ನಿಸ್ತಂಭದ ರಕ್ಷೆ

ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.



