ಮೈಕ್ರೋಸ್ಕೋಪು | ಡಾರ್ವಿನ್‌ ಹೇಳಿದ್ದು ಅರಗಿಸಿಕೊಳ್ಳಲಾಗದಂಥ ಸತ್ಯವೇ?

Date:

ವಿಕಾಸವಾದ ಸಿದ್ಧಾಂತವನ್ನು ಒಂದೇ ಸಾಲಿನಲ್ಲಿ ಹೇಳಬಹುದಾದರೆ, ಜಗತ್ತಿನಲ್ಲಿ ಇರುವ ಅಸಂಖ್ಯ ಬಗೆಯ ಜೀವಿಗಳೆಲ್ಲವೂ ಒಂದಿನ್ನೊಂದಕ್ಕೆ ಸಂಬಂಧಿಗಳು. ಇದನ್ನು ಹೇಳಿದ್ದಕ್ಕೆ ಯಾಕೆ ವಿವಾದ ಮಾಡಬೇಕು ಎಂಬ ಪ್ರಶ್ನೆ ನಿಮ್ಮದಾಗಿದ್ದರೆ, ಅದಕ್ಕೆ ಉತ್ತರ ಈ ಆಡಿಯೊ ಮತ್ತು ಬರಹದಲ್ಲಿದೆ 

ಈಗ ಚಾರ್ಲ್ಸ್‌ ಡಾರ್ವಿನ್‌ನದ್ದೇ ಸುದ್ದಿ. ಕೇಂದ್ರ ಸರ್ಕಾರದ ಎನ್‌ಸಿಇಆರ್‌ಟಿ ಸಂಸ್ಥೆ ಸಿಬಿಎಸ್‌ಇ ಪಠ್ಯಪುಸ್ತಕದಲ್ಲಿದ್ದ ವಿಕಾಸವಾದದ ಪಾಠ ಮತ್ತು ಡಾರ್ವಿನ್‌ ಕುರಿತ ಉಲ್ಲೇಖವನ್ನು ಕೈಬಿಟ್ಟಿದೆ ಎಂದು ವಿವಾದವೆದ್ದಿದೆ. ಇತ್ತೀಚೆಗೆ ಮುಘಲರನ್ನು ಕುರಿತ ಪಾಠಗಳನ್ನು ಸಿಬಿಎಸ್‌ಇ ಚರಿತ್ರೆಯ ಪಠ್ಯಪುಸ್ತಕಗಳಿಂದ ಕೈಬಿಡಲಾಗಿತ್ತು. ವಿಕಾಸವಾದದ ಪಾಠಗಳನ್ನು ತೆಗೆದುಹಾಕಿದ್ದೂ ಇಂತಹುದೇ ರಾಜಕೀಯ, ಅವೈಜ್ಞಾನಿಕ ತೀರ್ಮಾನ ಎಂದು ಶಿಕ್ಷಣ ತಜ್ಞರು ಕಳವಳಪಟ್ಟಿದ್ದಾರೆ. ವಿಕಾಸವಾದ ಮತ್ತು ಡಾರ್ವಿನ್ ಬಗ್ಗೆ ತಿಳಿಯದಿದ್ದರೆ ಜೀವಿವಿಜ್ಞಾನ ಎನ್ನುವುದು ಅಪೂರ್ಣ ಎನ್ನುವುದು ಅವರ ವಾದ.

ವಿಕಾಸವಾದ ಹೀಗೆ ವಿವಾದಕ್ಕೆ ಸಿಲುಕಿದ್ದಾಗಲೀ, ಚಾರ್ಲ್ಸ್ ಡಾರ್ವಿನ್ನನ ಹೆಸರು ಸುದ್ದಿಯಲ್ಲಿ ಇರುವುದಾಗಲೀ ಹೊಸತೇನಲ್ಲ. ಡಾರ್ವಿನ್‌ ತನ್ನ ವಿಕಾಸವಾದವನ್ನು ಮಂಡಿಸಿ 150 ವರ್ಷಗಳು ಮೀರಿವೆ. ಅಂದಿನಿಂದಲೂ ಅದು ಚರ್ಚೆಯಲ್ಲಿದೆ. ಕೆಲವೊಮ್ಮೆ ಸಾರ್ವಜನಿಕವಾಗಿ, ಕೆಲವೊಮ್ಮೆ ವೈಜ್ಞಾನಿಕ ಜಗತ್ತಿನಲ್ಲಿ. ಹಾಗೆಯೇ, ಡಾರ್ವಿನ್‌ ಸತ್ತು 130 ವರ್ಷಗಳಾಗಿವೆ. ಅಂದಿನಿಂದಲೂ ಆತನ ಹೆಸರು ಆಗಾಗ್ಗೆ ಸುದ್ದಿಯಾಗುತ್ತಲೇ ಇದೆ.

ಈ ಆಡಿಯೊ ಕೇಳಿದ್ದೀರಾ?: ಮೈಕ್ರೋಸ್ಕೋಪು | ಗಿಡಮರಗಳೂ ಮಾತನಾಡುತ್ತವೆ; ನೀವು ಯಾವತ್ತಾದರೂ ಕೇಳಿಸಿಕೊಂಡಿದ್ದೀರಾ?

ವಿಕಾಸವಾದದ ಅಂದರೆ, ಜಗತ್ತಿನಲ್ಲಿ ಇರುವ ಅಸಂಖ್ಯ ಬಗೆಯ ಜೀವಿಗಳೆಲ್ಲವೂ ಒಂದಿನ್ನೊಂದಕ್ಕೆ ಸಂಬಂಧಿಗಳು. ನೊಣದಲ್ಲಿರುವ ನಿಯಮಗಳೇ ಮನುಷ್ಯನಲ್ಲಿಯೂ ಇವೆ ಎನ್ನುವಂತಹ ಸಿದ್ಧಾಂತಗಳಿಗೆ ಬಲ ಕೊಟ್ಟಿದ್ದು ಡಾರ್ವಿನ್ನನ ವಿಕಾಸವಾದ. 1859ರಲ್ಲಿ ಡಾರ್ವಿನ್‌ ಪ್ರಕಟಿಸಿದ ‘ನೈಸರ್ಗಿಕ ಆಯ್ಕೆಯಿಂದ ಪ್ರಬೇಧಗಳ ಉತ್ಪತ್ತಿಯಾಯಿತು’ ಎನ್ನುವ ವಾದ ಮತ್ತು ಅನಂತರ ವಿವಿಧ ವಾನರಗಳಿಗೂ ಮಾನವನಿಗೂ ಸಂಬಂಧವಿದೆ ಎನ್ನುವ ವಾದ ಅಂದು ವಿವಾದದ ವಸ್ತುವಾಗಿತ್ತು. ಮನುಷ್ಯನೆಂಬ ಜೀವಿ ಒಂದು ವಿಶೇಷ ಸೃಷ್ಟಿ. ಉಳಿದ ಜೀವಿಗಳೆಲ್ಲವೂ ನಿಕೃಷ್ಟ ಎನ್ನುವ ಧಾರ್ಮಿಕರ ನಂಬುಗೆಗೆ ಬುಡಪೆಟ್ಟು ನೀಡಿದ ವಾದ ಇದು. ಐದಾರು ವರ್ಷಗಳ ಕಾಲ ಪ್ರಪಂಚ ಪರ್ಯಟನೆ ಮಾಡಿದಾಗ ತಾನು ಕಂಡಿದ್ದ ಸಂಗತಿಗಳೆಲ್ಲವನ್ನೂ ಕ್ರೋಢೀಕರಿಸಿ ಡಾರ್ವಿನ್‌ ಈ ತೀರ್ಮಾನಕ್ಕೆ ಬಂದಿದ್ದ. ಅದೇ ರೀತಿ, ಪ್ರಪಂಚದ ಇನ್ನೊಂದು ಬದಿಯಲ್ಲಿ ಸುತ್ತಾಡಿ ಬಂದಿದ್ದ ಇನ್ನೊಬ್ಬ ವಿಜ್ಞಾನಿ ಆಲ್ಫ್ರೆಡ್‌ ರಸೆಲ್‌ ವ್ಯಾಲೇಸ್‌ ಕೂಡ ಇದೇ ತೀರ್ಮಾನಕ್ಕೆ ಬಂದಿದ್ದ. ವ್ಯಾಲೇಸ್‌ ಈ ಬಗ್ಗೆ ಡಾರ್ವಿನ್ನನಿಗೆ ಬರೆದ ಪತ್ರ, ಡಾರ್ವಿನ್‌ ತನ್ನ ಪುಸ್ತಕವನ್ನು ಬೇಗನೆ ಪ್ರಕಟಿಸುವಂತೆ ಮಾಡಿತು. ಇಲ್ಲದಿದ್ದರೆ ಆತ ಇನ್ನೂ ಸ್ವಲ್ಪ ಕಾಲ ಈ ಬಗ್ಗೆ ಹಿಂಜರಿಯುತ್ತಿದ್ದ ಎನ್ನುತ್ತದೆ ಚರಿತ್ರೆ. ಅಂದಿನ ಸಾಂಪ್ರದಾಯಿಕರನ್ನು ಡಾರ್ವಿನ್ನನ ವಿಚಾರಗಳು ರೊಚ್ಚಿಗೇಳಿಸಿದ್ದವು. ಹಾಗೆಯೇ, ಹೊಸ ವಿಚಾರಗಳಿಗೂ ಹಾದಿ ಮಾಡಿಕೊಟ್ಟಿದ್ದುವು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಹೊಸ ಪ್ರಬೇಧಗಳು ಹುಟ್ಟುವುದಕ್ಕೆ ನಿಸರ್ಗದಲ್ಲಿ ಸಹಜವಾಗಿಯೇ ಕಾಣುವ ವೈವಿಧ್ಯಮಯ ಜೀವಿಗಳು ಕಾರಣವೆಂದೂ, ಇವುಗಳಲ್ಲಿ ನಿಸರ್ಗಕ್ಕೆ ಚೆನ್ನಾಗಿ ಹೊಂದಿಕೊಂಡು ಸಂತತಿಯನ್ನು ಬೆಳೆಸಿಕೊಳ್ಳುವಂಥವು ಮಾತ್ರ ಬದುಕಿ ಉಳಿಯುತ್ತವೆ, ಉಳಿದವು ನಾಶವಾಗುತ್ತವೆ; ಹೀಗೆ ಹೊಸ ಪ್ರಬೇಧಗಳು ಹುಟ್ಟುತ್ತವೆ ಎಂದೂ ಡಾರ್ವಿನ್‌ ಪ್ರತಿಪಾದಿಸಿದ್ದ. ಆದರೆ, ಈ ವೈವಿಧ್ಯ ನಿಸರ್ಗದಲ್ಲಿ ಉಂಟಾಗುವುದಾದರೂ ಹೇಗೆ ಎನ್ನುವ ಪ್ರಶ್ನೆಗೆ ಅವನ ಬಳಿ ಉತ್ತರ ಇರಲಿಲ್ಲ. ಈ ಪ್ರಶ್ನೆಯೇ ಮುಂದೆ ‘ತಳಿವಿಜ್ಞಾನ’ಕ್ಕೆ ನಾಂದಿಯಾಯಿತು. ಇಂದಿನ ‘ಜೈವಿಕ ತಂತ್ರಜ್ಞಾನ’ಕ್ಕೂ ಹಾದಿ ಮಾಡಿಕೊಟ್ಟಿತು. ಬಹುಶಃ ಎಲ್ಲ ಜೀವಿಗಳಲ್ಲಿಯೂ ಸಂಬಂಧವಿದೆ ಎನ್ನುವುದು ಸ್ಪಷ್ಟವಾಗದಿದ್ದರೆ ಈ ತಂತ್ರಜ್ಞಾನ ಬೆಳೆಯುತ್ತಿತ್ತೋ ಇಲ್ಲವೋ ಗೊತ್ತಿಲ್ಲ.

ಚಾರ್ಲ್ಸ್ ಡಾರ್ವಿನ್

ಡಾರ್ವಿನ್‌ ಕೇವಲ ವಿಕಾಸವಾದವನ್ನು ಮುಂದಿಟ್ಟವನಲ್ಲ. ಅವನ ಕೊಡುಗೆಗಳು ಇನ್ನೂ ಹಲವು ಇವೆ. ಆದರೆ, ವಿವಾದಕ್ಕೆ ಸಿಲುಕಿದ್ದು ಮಾತ್ರ ಇದು. ಅವನ ಹೆಸರನ್ನು ಸುದ್ದಿ ಮಾಡಿದ್ದೂ ಇದೇ. ಡಾರ್ವಿನ್ನನ ಇನ್ನೊಂದು ಪ್ರಮುಖ ಕೊಡುಗೆ ಎಂದರೆ ಸಸ್ಯಗಳ ಚಟುವಟಿಕೆ. ಸಸ್ಯಗಳು ಕೂಡ ಪರಿಸರದಲ್ಲಿನ ಬದಲಾವಣೆಗಳಿಗೆ ಸ್ಪಂದಿಸುತ್ತವೆ ಎಂದು ಪ್ರಯೋಗಗಳ ಮೂಲಕ ಡಾರ್ವಿನ್‌ ಸಾಧಿಸಿದ್ದ. ಸಸ್ಯಗಳ ಕಾಂಡಗಳು ಬೆಳಕಿಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಬೆಳಕಿನತ್ತ ಬೆಳೆಯುತ್ತವೆ ಎಂದೂ; ಬೇರುಗಳು, ಬೆಳಕಿಗೆ ನಕಾರಾತ್ಮಕವಾಗಿ ಸ್ಪಂದಿಸಿ, ಕತ್ತಲೆ ಇರುವತ್ತ ಸಾಗುತ್ತವೆಂದೂ ಈತ ನಿರೂಪಿಸಿದ್ದ. ಎರೆಹುಳುವನ್ನು ನಾವು ‘ರೈತ ಮಿತ್ರ’ ಎನ್ನುತ್ತೇವಷ್ಟೆ. ಪ್ರಪಂಚದಲ್ಲಿ ಮೊತ್ತಮೊದಲ ಬಾರಿಗೆ ಎರೆಹುಳುವಿನ ಜೀವನವನ್ನು ಅಧ್ಯಯನ ಮಾಡಿ, ಭೂಮಿಯ ಫಲವತ್ತತೆಗೆ ಅದರ ಕೊಡುಗೆಯನ್ನು ವಿವರವಾಗಿ ತಿಳಿಸಿಕೊಟ್ಟವನೂ ಡಾರ್ವಿನ್ನೇ. ಭೂವಿಜ್ಞಾನದ ಬಗೆಗೂ ಈತನ ಕೊಡುಗೆ ಅಪಾರ. ಹವಳ ದ್ವೀಪಗಳು ಹೇಗಾಗುತ್ತವೆ ಎನ್ನುವುದನ್ನು ವಿಸ್ತಾರವಾಗಿ ಅಧ್ಯಯನ ಮಾಡಿ ವಿವರಿಸಿದ್ದ. ಹೀಗೆ, ಹತ್ತು ಹಲವು ಹೊಸ ವಿಚಾರಗಳನ್ನು ಡಾರ್ವಿನ್‌ ವಿಜ್ಞಾನ ಜಗತ್ತಿಗೆ ಕೊಡುಗೆಯಾಗಿ ನೀಡಿದ್ದಾನೆ. ಆದರೆ, ವಿವಾದಕ್ಕೆ ಸಿಲುಕುವುದು ಮಾತ್ರ ವಿಕಾಸವಾದ.

ಡಾರ್ವಿನ್‌ನ ಪ್ರಾಮುಖ್ಯತೆಯ ಬಗ್ಗೆ ತಿಳಿಯಬೇಕೆಂದರೆ, ಬ್ರಿಟಿಷ್‌ ಸರ್ಕಾರದ ನೆರವಿನಿಂದ ಸ್ಥಾಪಿಸಿರುವ ‘ಡಾರ್ವಿನ್‌ ನೋಟ್ಸ್‌’ ಎಂಬ ಜಾಲತಾಣ ಗಮನಿಸಬಹುದು. ಇದರಲ್ಲಿ ಆತನ ಸಾವಿರಾರು ಪತ್ರಗಳು, ಟಿಪ್ಪಣಿಗಳು, ಪುಸ್ತಕಗಳು, ಪ್ರಬಂಧಗಳೆಲ್ಲದರ ದಾಖಲೆ ಇದೆ. ಡಾರ್ವಿನ್ನನ ಕೊಡುಗೆಯನ್ನು ಪಟ್ಟಿ ಮಾಡುವುದು ಕಷ್ಟ ಎಂದು ವಿಷಯಾನುಸೂಚಿ ಪಟ್ಟಿ ಮಾಡದೆ, ವಿವಿಧ ವಿಷಯಗಳಿಗೆ ಸಂಬಂಧಿಸಿದ ಗುಂಪುಗಳನ್ನಾಗಿ ವಿಂಗಡಿಸಿದ್ದಾರೆ. ಹತ್ತಿಪ್ಪತ್ತು ಗುಂಪಲ್ಲ, ನೂರಾರು ಗುಂಪು ಎನ್ನುವುದು ವಿಶೇಷ.

ಈ ಆಡಿಯೊ ಕೇಳಿದ್ದೀರಾ?: ಮೈಕ್ರೋಸ್ಕೋಪು | ಅತಿ ಸಣ್ಣ ಪದಗಳು ತಂದೊಡ್ಡುವ ಅತ್ಯಂತ ದೊಡ್ಡ ಸಮಸ್ಯೆ

ಡಾರ್ವಿನ್ನನ ಈ ಬರಹಗಳು ಬೆಲೆ ಕಟ್ಟಲಾಗದಂಥವು. ನಾವು ಅವನಿಗೆ ಬೆಲೆ ಕೊಡುತ್ತೇವೋ ಇಲ್ಲವೋ, ಕಳ್ಳರಂತೂ ಅದಕ್ಕೆ ಬೆಲೆ ತೆರುತ್ತಾರೆ ಎನ್ನುವುದಕ್ಕೆ ಎರಡು ವರ್ಷಗಳ ಹಿಂದೆ ನಡೆದ ಘಟನೆಯೊಂದು ಸಾಕ್ಷಿ. ಡಾರ್ವಿನ್ನನ ಪುಸ್ತಕಗಳನ್ನು ಸಂಗ್ರಹಿಸಿದ್ದ ಕೇಂಬ್ರಿಜ್‌ ವಿಶ್ವವಿದ್ಯಾನಿಲಯದ ಗ್ರಂಥಾಲಯ ಇಪ್ಪತ್ತು ವರ್ಷಗಳ ಹಿಂದೆ ಇವೆಲ್ಲವನ್ನೂ ಡಿಜಿಟೀಕರಿಸಲು ಆರಂಭಿಸಿತು. ಒಂದೊಂದೇ ಪುಸ್ತಕವನ್ನು ತೆಗೆದು ಡಿಜಿಟಲೀಕರಿಸಿ ಗಣಕದಲ್ಲಿ ಸಂಗ್ರಹಿಸಿದರು. ಇವೆಲ್ಲ ಮುಗಿದ ಮೇಲೆ ಗಮನಿಸಿದಾಗ, ಡಾರ್ವಿನ್ನನ ಎರಡು ಪುಸ್ತಕಗಳು ಕಾಣೆಯಾಗಿದ್ದುವು. ಇವೇನೂ ದೊಡ್ಡ ಗ್ರಂಥಗಳಲ್ಲ. ಪೋಸ್ಟ್‌ಕಾರ್ಡು ಸೈಜಿನ ಪುಸ್ತಕಗಳು. ಡಾರ್ವಿನ್‌ ಸ್ವಂತ ಬರಹದಲ್ಲಿ ಬರೆದಿದ್ದ ಟಿಪ್ಪಣಿಗಳವು. ವಿಕಾಸವಾದ ಹೇಗಾಗಿರಬಹುದು ಎಂದು ವಿವಿಧ ಪ್ರಾಣಿಗುಂಪುಗಳ ವಂಶವೃಕ್ಷವನ್ನು ಸ್ವಹಸ್ತದಿಂದ ಡಾರ್ವಿನ್‌ ರಚಿಸಿದ್ದ ಚಿತ್ರವೂ ಕಾಣೆಯಾದವುಗಳಲ್ಲಿ ಇತ್ತು. ಅಂದಿನ ಗ್ರಂಥಪಾಲಕರು ಇಡೀ ಗ್ರಂಥಾಯಲವನ್ನು ಜಾಲಾಡಿದರೂ ಅದು ಸಿಕ್ಕಲಿಲ್ಲ. ಒಂದು ಕೋಟಿಗೂ ಹೆಚ್ಚು ಪುಸ್ತಕಗಳ ಮಹಾಸಾಗರವಾದ ಆ ಗ್ರಂಥಾಲಯದಲ್ಲಿ ಸ್ಥಳ ಬದಲಾವಣೆಯಾಗಿ ಎಲ್ಲಿಯೋ ಇರಬೇಕು, ನಿಧಾನವಾಗಿ ಸಿಗುತ್ತದೆ ಎಂದು ಕೈಬಿಟ್ಟಿದ್ದರು.

ಎರಡು ವರ್ಷಗಳ ಹಿಂದೆ ಈ ಪುಸ್ತಕಗಳನ್ನು ಹುಡುಕುವ ಪ್ರಯತ್ನ ಮತ್ತೆ ನಡೆಯಿತು. ಆಗಲೂ ಸಿಗದಿದ್ದಾಗ, ಈ ಪುಸ್ತಕಗಳು ಕಾಣೆಯಾಗಿಲ್ಲ, ಕಳುವಾಗಿರಬೇಕು ಎಂಬ ತೀರ್ಮಾನಕ್ಕೆ ಬರಲಾಯಿತು. ಕಳುವಾದ ಪುಸ್ತಕಗಳ ವಿವರಗಳನ್ನು ನೀಡಿ ಈ ಬಗ್ಗೆ ಮಾಹಿತಿ ಇದ್ದವರು ದಯವಿಟ್ಟು ಸಂಪರ್ಕಿಸಿ ಎಂದು ಜಾಹೀರಾತು ಪ್ರಕಟಿಸಿದ್ದರು. ಆದರೂ ಪುಸ್ತಕಗಳು ಸಿಕ್ಕಿರಲಿಲ್ಲ. ಕೊನೆಗೆ, ಕಳ್ಳರು ಅದನ್ನು ದುಬಾರಿ ಬೆಲೆಗೆ ಮಾರಲು ಕಾಯುತ್ತಿರಬೇಕು ಎಂದು ತೀರ್ಮಾನಿಸಿದ ಹೊಸ ಗ್ರಂಥಪಾಲಕಿ, ಸ್ಕಾಟ್ಲೆಂಡ್‌ ಯಾರ್ಡಿಗೆ ದೂರನ್ನೂ ಸಲ್ಲಿಸಿದರು. ಇನ್ನೊಂದೆಡೆ, ಇಂತಹ ಕಳ್ಳ ಕಲಾಕೃತಿ, ಶಿಲ್ಪ ಹಾಗೂ ಪುಸ್ತಕಗಳನ್ನು ಮಾರುವ ಡಾರ್ಕ್‌ ವೆಬ್‌ಲೋಕವನ್ನು ಪೊಲೀಸರು ಹುಡುಕಿದರು. ಏನೂ ಪ್ರುಯೋಜನವಾಗಲೇ ಇಲ್ಲ. ಡಾರ್ಕ್‌ವೆಬ್‌ನಲ್ಲಿಯೂ ಈ ಪುಸ್ತಕಗಳು ಕಳುವಾಗಿವೆ ಎಂದು ಪ್ರಕಟಿಸಿದರು. ಒಮ್ಮೆ ಅದು ಕಳುವಾದ ಕೃತಿ ಎಂದು ತಿಳಿದ ಮೇಲೆ ಕಳ್ಳರೂ ಅವನ್ನು ಕೊಳ್ಳುವುದಿಲ್ಲವೆನ್ನುವುದು ಪೊಲೀಸರ ನಂಬಿಕೆ.

ಒಕ್ಕೂಟ ಸರ್ಕಾರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್

ಕಳೆದ ವರ್ಷ ಮಾರ್ಚ್‌ ಒಂಬತ್ತನೇ ತಾರೀಖು. ಗ್ರಂಥಾಲಯಕ್ಕೆ ಪೊಲೀಸರನ್ನು ಕರೆಸಬೇಕಾಯಿತು. ‘ಈಸ್ಟರ್‌ ಶುಭಾಶಯಗಳು’ ಎಂದಷ್ಟೆ ಬರೆದಿದ್ದ ಪ್ಯಾಕೇಜೊಂದು ಗ್ರಂಥಪಾಲಕಿಯ ಕಚೇರಿಯ ಮುಂದೆ, ಕ್ಯಾಮೆರಾಗಳ ಕಣ್ಗಾವಲಿಲ್ಲದ ಕಡೆ ಪತ್ತೆಯಾಗಿತ್ತು. ಪ್ಯಾಕೇಜಿನ ಮೇಲೆ ಕಳಿಸಿದವರ ವಿಳಾಸದ ಎಡೆಯಲ್ಲಿ ‘ಎಕ್ಸ್‌’ ಎಂದು ನಮೂದಿಸಲಾಗಿತ್ತು. ಯಾರಾದರೂ ಬಾಂಬ್ ಕಳಿಸಿರಬಹುದು ಎಂಬ ಗುಮಾನಿಯಿಂದ ಪೊಲೀಸರಿಗೆ ದೂರು ನೀಡಲಾಯಿತು. ಪೊಲೀಸರು ಪರಿಶೀಲಿಸಿದಾಗ ಸಿಕ್ಕಿದ್ದು ಬಾಂಬ್ ಆಗಿರಲಿಲ್ಲ; ಬದಲಾಗಿ, ಕಳೆದುಹೋದ ಡಾರ್ವಿನ್ನನ ಟಿಪ್ಪಣಿ ಪುಸ್ತಕಗಳು. ಹೀಗೆ, ಕಳೆದುಹೋದ ಡಾರ್ವಿನ್‌ ಮರಳಿ ಬಂದಿದ್ದ.

ನಮ್ಮಲ್ಲಿಯೂ ಹೀಗಾಗಬಹುದೋ? ಪುಸ್ತಕಗಳಿಂದ ಮರೆಯಾದ ಡಾರ್ವಿನ್‌ ಮರಳಬಹುದೋ? ಎನ್‌ಸಿಇಆರ್‌ಟಿ ಪ್ರಕಾರ, ಇದು ಕೇವಲ ಪ್ರಸ್ತಾವನೆಯಷ್ಟೆ, ತೀರ್ಮಾನವಾಗಿಲ್ಲವಂತೆ. ಏನೇ ಇರಲಿ, ಡಾರ್ವಿನ್‌ ವಿಜ್ಞಾನಕ್ಕೆ ನೀಡಿದ ಕೊಡುಗೆಯನ್ನು ಮಾತ್ರ ಯಾರೂ ಅಳಿಸಲಾಗದು ಎನ್ನುವುದು ಸತ್ಯ.

ಪೋಸ್ಟ್ ಹಂಚಿಕೊಳ್ಳಿ:

ಕೊಳ್ಳೇಗಾಲ ಶರ್ಮ
ಕೊಳ್ಳೇಗಾಲ ಶರ್ಮ
ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯಲ್ಲಿ ವಿಜ್ಞಾನಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. 'ಸೈನ್ಸ್‌ ರಿಪೋರ್ಟರ್‌' ಪತ್ರಿಕೆಗೆ ವರದಿಗಾರರಾಗಿದ್ದರು. ಮೂರು ದಶಕಗಳಿಂದ ವಿಜ್ಞಾನ ಬರವಣಿಗೆಯಲ್ಲಿ ಸಕ್ರಿಯರು. ವಿಜ್ಞಾನ ಸಂವಹನದ ಹೊಸ ಸಾಧ್ಯತೆಗಳನ್ನು ಹುಡುಕುವ ಉತ್ಸಾಹಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೊಸಿಲ ಒಳಗೆ-ಹೊರಗೆ | ಬ್ರಾ… ಪ್ರತಿಭಟನೆ ಮತ್ತು ಬಿಡುಗಡೆಯ ಭಾವ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಮೈಕ್ರೋಸ್ಕೋಪು | ಅಯೋಧ್ಯೆ ರಾಮ ಮಂದಿರದಲ್ಲಿ ‘ವಿಜ್ಞಾನ’ ಬಳಕೆ; ನಿಜಕ್ಕೂ ದೇಶದಲ್ಲಿ ಇದೇ ಮೊದಲಾ?

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಹೊಸಿಲ ಒಳಗೆ-ಹೊರಗೆ | ನೀವು ಕೊಕ್ಕರೆಯಾದರೂ ಸರಿಯಲ್ಲ, ನರಿಯಾದರೂ ಸರಿಯಲ್ಲ; ಯಾಕೆಂದರೆ…

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...