ವಚನ ಕಲ್ಯಾಣ | ಎಲ್ಲಿ ನೋಡಿದಡೆ ಬಯಲೊಂದೇ!

Date:

ಊರ ಒಳಗಣ ಬಯಲು, ಊರ ಹೊರಗಣ ಬಯಲೆಂದುಂಟೆ? ಊರೊಳಗೆ ಬ್ರಾಹ್ಮಣ ಬಯಲು, ಊರ ಹೊರಗೆ ಹೊಲೆ ಬಯಲೆಂದುಂಟೆ? ಎಲ್ಲಿ ನೋಡಿದಡೆ ಬಯಲೊಂದೇ; ಭಿತ್ತಿಯಿಂದ ಒಳಹೊರಗೆಂಬ ನಾಮವೈಸೆ, ಎಲ್ಲಿ ನೋಡಿದಡೆ ಕರೆದಡೆ ಓ ಎಂಬಾತನೆ ಬಿಡಾಡಿ.

- Advertisement -

ವಚನಕಾರ್ತಿ ಬೊಂತಾದೇವಿ ಬಸವಣ್ಣನವರ ಸಮಕಾಲೀನ ಶರಣೆ ಎಂದು ಹೇಳಲಾಗುತ್ತದೆ. ಮೂಲತಃ ಕಾಶ್ಮೀರ ದೇಶದ ಮಾಂಡವ್ಯಪುರದ ಅರಸನ ಮಗಳಾದ ಬೊಂತಾದೇವಿ, ಚಿಕ್ಕಂದಿನಿಂದಲೂ ಅಧ್ಯಾತ್ಮದ ಕಡೆಗೆ ಹೆಚ್ಚಿನ ಒಲವು ಇತ್ತು. ಲೌಕಿಕ ಸಂಪತ್ತು ಮತ್ತು ರಾಜವೈಭವದ ಹಂಗನ್ನು ತೊರೆದು ವೈರಾಗ್ಯದ ಬದುಕನ್ನು ಸ್ವೀಕರಿಸಲು ನಿರ್ಧರಿಸಿದರು. ಬಸವಣ್ಣನವರ ನೇತೃತ್ವದಲ್ಲಿ ನಡೆದ ಕಾಯಕ ಚಳವಳಿಯ ಹಿರಿಮೆಯನ್ನು ಅರಿತು ಕಲ್ಯಾಣಕ್ಕೆ ಆಗಮಿಸಿ, ಅಲ್ಲಿಯೇ ನೆಲೆಸಿದರು ಎಂಬುದು ಸಂಶೋಧಕರಿಂದ ತಿಳಿದು ಬರುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಶಿವಶರಣೆ ಬೊಂತಾದೇವಿ ಕಾಶ್ಮೀರದ ಅರಸ ಹಾಗೂ ಕಾಯಕನಿಷ್ಠ ಶರಣ ಮೊಳಿಗೆ ಮಾರಯ್ಯನವರ ಸಹೋದರಿ ಎನ್ನಲಾಗುತ್ತದೆ. ಬೊಂತಾದೇವಿ ಮೊದಲ ಹೆಸರು ‘ನಿಜದೇವಿ’ ಎಂದಾಗಿದ್ದು, ನಂತರ ‘ಬೊಂತಾದೇವಿ’ ಎಂಬ ಹೆಸರು ಬಳಕೆಯಲ್ಲಿ ಬಂತು. ಕಾಶ್ಮೀರದಿಂದ ಕಲ್ಯಾಣಕ್ಕೆ ಬಂದ ನಂತರ ಕೌದಿಯನ್ನೇ ಹೊದೆಯುತ್ತಿದ್ದ ಕಾರಣ ‘ಬೊಂತಾದೇವಿ’ ಎಂಬ ಹೆಸರು ಬಂದಿರಬಹುದು ಎಂಬ ಅಭಿಪ್ರಾಯವಿದೆ. ತೆಲುಗು ಭಾಷೆಯಲ್ಲಿ ‘ಬೊಂತಾ’ ಎಂದರೆ ‘ಕೌದಿ’ ಎಂಬ ಅರ್ಥವೂ ಇದೆ.

ಬೊಂತಾದೇವಿಯವರು ‘ಬಿಡಾಡಿ’ ಎಂಬ ಅಂಕಿತನಾಮದಲ್ಲಿ ವಚನಗಳನ್ನು ರಚಿಸಿದ್ದಾರೆ. ‘ಬಿಡಾಡಿ’ ಎಂದರೆ ದೇವರ ಪರಿಕಲ್ಪನೆ ಅರ್ಥವೂ ಇದೆ. ಬೊಂತಾದೇವಿ ರಚಿಸಿದ ಐದು ವಚನಗಳು ಮಾತ್ರ ಉಪಲಬ್ಧವಾಗಿದ್ದು, ವಚನಗಳಲ್ಲಿ ಭಕ್ತಿ, ಜಾತೀಯತೆಯ ವಿಡಂಬನೆ, ಸಾಮಾಜಿಕ ಕಾಳಜಿ ಹಾಗೂ ಸಮಾನತೆಯ ಆಶಯ ಸ್ಪಷ್ಟವಾಗಿ ಕಾಣುತ್ತದೆ.

ಜಾತಿ, ಮತ, ವರ್ಗ, ವರ್ಣಗಳೆಂಬ ಭೇದಗಳು ಪ್ರಕೃತಿಯಲ್ಲಿಲ್ಲ. ಎಲ್ಲವೂ ಒಂದೇ ‘ಬಯಲು ಆಲಯ’ ಎಂಬ ತಾತ್ವಿಕ ಚಿಂತನೆಯನ್ನು ಬೊಂತಾದೇವಿ ತಮ್ಮ ವಚನದಲ್ಲಿ ಪ್ರತಿಪಾದಿಸುತ್ತಾಳೆ. ಭವ, ನೆಲ, ಜಲಕ್ಕೆ ಯಾವುದೇ ಜಾತಿ, ಕುಲ, ಮತ, ಪಂಥವಿಲ್ಲ. ಹಾಗಿದ್ದ ಮೇಲೆ ʼಊರ ಒಳಗಣ ಬಯಲು, ಊರ ಹೊರಗಣ ಬಯಲು ಎಂದುಂಟೆ? ಊರ ಒಳಗಿನವರು ತಾವು ವಾಸಿಸುವ ಜಾತಿಯ ಹೆಸರಿನಿಂದ ಕರೆಯುವುದು, ಊರ ಹೊರಗೆ ಇರುವವರನ್ನು ಅಲ್ಲಿನ ಜಾತಿಯ ಹೆಸರಿನಿಂದ ಕರೆಯಬಹುದೇ? ಎಂದು ಪ್ರಶ್ನಿಸುವ ಬೊಂತಾದೇವಿ ಅಸ್ಪ್ರಶ್ಯತೆ ಮಹಾರೋಗವನ್ನು ಖಂಡಿಸುತ್ತಾರೆ.

ಹಿಂದಿನಿಂದಲೂ ಶ್ರೇಷ್ಠ-ಕನಿಷ್ಠ, ಕರಿಯ-ಬಿಳಿಯ, ಸ್ಪ್ರಶ್ಯ- ಅಸ್ಪ್ರಶ್ಯ ಎಂದು ಒಬ್ಬ ಮನುಷ್ಯ, ಮತ್ತೊಬ್ಬ ಮನುಷ್ಯನನ್ನು ಶೂದ್ರ ಎಂದು ಗುರುತಿಸಿ ಮುಟ್ಟಿಸಿಕೊಳ್ಳದಂತೆ ಸೃಷ್ಟಿಸಿದ್ದು ಕರಾಳ ಸತ್ಯ. ಊರು-ಕೇರಿಗಳೆಂಬ ಪ್ರತ್ಯೇಕ ಜನವಸತಿ ಪ್ರದೇಶಗಳೆಂದು ವಿಂಗಡಿಸಿ ಅವರ ಮೇಲೆ ಶೋಷಣೆ, ದಬ್ಬಾಳಿಕೆಗೈದು ಊರ ಹೊರಗಿಡಲಾಯಿತು. ಇಂತಹ ಅವ್ಯವಸ್ಥೆ, ಅಸ್ಪ್ರಶ್ಯತೆ ವಿರುದ್ಧ ಬೊಂತಾದೇವಿ ಪ್ರತಿಭಟಿಸುತ್ತ ಧೈರ್ಯದಿಂದ ಎಚ್ಚರಿಸುತ್ತಾರೆ. ಊರಿನ ಒಳಗಿರುವ ಬಯಲು ಮತ್ತು ಹೊರಗಿನ ಬಯಲು ಭಿನ್ನವಲ್ಲ. ನೆಲ, ಜಲ, ವಾಯು ಎಲ್ಲವೂ ಒಂದೇ ಆಗಿದ ಬಳಿಕ ಅದು ಎಲ್ಲರಿಗೂ ಸೇರಬೇಕು. ಮೇಲ್ವರ್ಗ, ತಳವರ್ಗ ಎಂಬ ಸಂಕರದಿಂದ ಹೊರಬರಬೇಕು. ಸಮಾಜವೇ ಒಂದು ಆಲಯ; ಸಕಲ ಜೀವಾತ್ಮರೂ ಸಮಾನರು ಎಂಬ ತಾತ್ವಿಕ ಚಿಂತನೆ ಆಚರಣೆಯಲ್ಲಿ ತರಬೇಕೆಂಬುದು ಅವರು ನಿರೂಪಿಸುತ್ತಾರೆ.

ಮನುಷ್ಯ ತನ್ನ ಸ್ವಾರ್ಥಕ್ಕಾಗಿ ರೂಪಿಸಿದ ವರ್ಗ, ವರ್ಣ, ಜಾತಿ, ಮತಗಳ ಭೇದಗಳು ಸಮಾಜದಲ್ಲಿ ಅನೇಕ ಅಂತರಗಳನ್ನು ಸೃಷ್ಟಿಸಿದೆ. ಆದರೆ ಸರ್ವವ್ಯಾಪಿಯಾದ ಸೃಷ್ಟಿಯೊಳಗೆ ದೇವರು ಅನಂತ ಮತ್ತು ಅಗೋಚರನಾಗಿದ್ದಾನೆ. ಹಾಗೆಯೇ ಪ್ರತಿಯೊಬ್ಬರ ಅಂತರಂಗದಲ್ಲಿಯೂ ದೈವತ್ವದ ಅಸ್ತಿತ್ವವಿದೆ. ಅದನ್ನು ಸತ್ಯನಿಷ್ಠೆ, ಸದಾಚಾರ ಮತ್ತು ಶುದ್ಧವಾದ ಮನಸ್ಸಿನ ಮೂಲಕ ಅರಿತುಕೊಳ್ಳಬಹುದು ಎಂಬ ಪರಿಕಲ್ಪನೆಯನ್ನು ಶರಣರು ಸಮಾಜದ ಮುಂದಿಟ್ಟರು. ʼಎತ್ತೆತ್ತ ನೋಡಿದಡತ್ತತ್ತ ನೀನೇ ದೇವಾ, ಸಕಲವಿಸ್ತಾರದ ರೂಹು ನೀನೇ ದೇವಾʼ ಎಂದು ಬಸವಣ್ಣ ದೇವರ ಕುರಿತು ಸೃಷ್ಟಿಕರಣ ಕೊಡುತ್ತಾರೆ. ದೇವರು ಜಗದಗಲ, ಮಿಗಿಲಗಲ ವ್ಯಾಪಿಸಿದ್ದು, ʼಅಗಮ್ಯ ಅಗೋಚರ ಅಪ್ರತಿಮʼ ಎಂದು ಸ್ಪಷ್ಟಪಡಿಸುತ್ತಾರೆ.

ಊರ ಒಳಗಿನ ಬಯಲು ಮತ್ತು ಊರ ಹೊರಗಿನ ಬಯಲು ಬೇರೆ-ಬೇರೆ ವಿಂಗಡಿಸಲು ಸಾಧ್ಯವಿಲ್ಲ. ಚಾತುರ್ವರ್ಣ ವ್ಯವಸ್ಥೆಯಿಂದ ಉಂಟಾದ ಸಾಮಾಜಿಕ ವಿಭಜನೆ ಪರಿಣಾಮದಿಂದಾಗಿ ಸಮಾಜದಲ್ಲಿ ವರ್ಗ, ವರ್ಣ, ಲಿಂಗ ತಾರತಮ್ಮ ಹುಟ್ಟಿಕೊಂಡಿತು. ಅದರಿಂದ ಮನುಷ್ಯರಲ್ಲಿ ಭೇದ-ಭಾವ ಉಂಟಾಗಿ ಸಾಮಾಜಿಕ ಅಸಮಾನತೆಗೆ ಕಾರಣವಾಯಿತು. ಒಂದು ಊರಿನಲ್ಲಿ ಎಲ್ಲ ಜಾತಿ, ಸಮುದಾಯದವರು ವಾಸಿಸಬಹುದು, ಅಲ್ಲಿ ಯಾವ ತಾರತಮ್ಮವೂ ಇರಕೂಡದು. ಎಲ್ಲಾ ಬಯಲು ಒಂದೇ ಎಂಬ ತತ್ವದ ಮುಖಾಂತರ ಮನುಷ್ಯರೆಲ್ಲರೂ ಒಂದೇ ಎಂಬ ಭಾವ ಮೂಡಿಸುತ್ತಾರೆ. ಅಂತರಂಗ ಪರಿಶುದ್ಧವಾದ ಪ್ರತಿಯೊಬ್ಬರಲ್ಲಿಯೂ ದೇವರ ಆಲಯವಿದೆ. ದೇವರ ಆಲಯ ಊರಿನ ಒಳಗಿರಲಿ, ಹೊರಗಿರಲಿ, ಎಲ್ಲೆಡೆಯೂ ಸಮಾನವಾಗಿಯೇ ಇರುತ್ತದೆ. ಅದು ಬೇರೆ ಬೇರೆ ಅಲ್ಲ ಎಂಬ ಖಚಿತ ನಿಲುವನ್ನು ಬೊಂತಾದೇವಿ ಸ್ಪಷ್ಟಪಡಿಸುತ್ತಾರೆ.

ʼಜಾತಿ–ವಿಜಾತಿಯೆನಬೇಡ, ದೇವನೊಲಿದಾತನೆ ಜಾತʼ ಎಂದು ಕವಿ ಸರ್ವಜ್ಞ ಜಾತಿವ್ಯವಸ್ಥೆಯ ಕುರಿತು ಕಠೋರವಾಗಿ ಹೇಳುತ್ತಾರೆ. ʼಕುಲ–ಕುಲವೆಂದು ಹೊಡೆದಾಡುವ ಅಣ್ಣಾಗಳಿರಾ, ನಿಮ್ಮ ಕುಲದ ನೆಲೆವೇನಾದರೂ ಬಲ್ಲಿರಾ? ಎಂದು ಕನಕದಾಸರು ಪ್ರಶ್ನಿಸುತ್ತಾರೆ. ಕುಲ, ಜಾತಿ, ಮೇಲು-ಕೀಳು, ಮತಭೇದಗಳು ಮಾನವ ಸೃಷ್ಟಿಯೇ ಹೊರತು ದೇವರ ಸೃಷ್ಟಿಯಲ್ಲ ಎಂಬ ಸಂದೇಶವನ್ನು ವಚನಕಾರರು, ದಾಸರು ತಮ್ಮ ಸಾಹಿತ್ಯದ ಮೂಲಕ ಸಾರಿ ವೈಚಾರಿಕೆ ಪ್ರಜ್ಞೆ ಬಿತ್ತಿದ್ದಾರೆ.

‘ಬಯಲು’ ಎಂಬುದು ಕೇವಲ ಶೂನ್ಯವಲ್ಲ; ಅದು ಎಲ್ಲವನ್ನೂ ಒಳಗೊಂಡಿರುವ ವಿಶಾಲ ಅಸ್ತಿತ್ವದ ಸಂಕೇತ. ಬಯಲಲ್ಲಿ ಬದುಕುವ ಸರ್ವರೂ ಸಮಾನರು ಮತ್ತು ಸ್ವತಂತ್ರರು. ಜಾತಿ-ಕುಲ ಭೇದಗಳ ಅಡ್ಡಗೋಡೆಗಳನ್ನು ನಿರ್ಮಿಸಿ ಸಮಾಜವನ್ನು ಅಸಮಾನತೆಯತ್ತ ಕೊಂಡೊಯ್ಯುವುದು ಅಮಾನುಷ ಕೃತ್ಯಕ್ಕೆ ಸಮಾನ. ಜಗದಗಲ, ಮುಗಿದಗಲ, ಅಗಮ್ಯ-ಅಗೋಚರನಾದ ದೇವರು ಎಲ್ಲೆಡೆ ಇದ್ದಾನೆ. ಆತನನ್ನು ಕರೆದಾಗ ʼಓʼ ಎಂದು ಸ್ಪಂದಿಸುವ ಶಕ್ತಿ ಎಲ್ಲರಲ್ಲೂ ಒಂದೇ ಆಗಿರುವಾಗ, ದೇವರಿಗೆ ಬೇರೆ ಬಯಲುಂಟೆ? ಬೇರೆ ನಾಮವಿದೆಯೆ? ಕುಲ-ಜಾತಿ ಭೇದವಿದೆಯೆ? ಎಂದು ಕೇಳುತ್ತಾಳೆ.

ಸಕಲ ಜೀವಾತ್ಮರಿಗೂ ಲೇಸನ್ನು ಬಯಸುವ ಮನಸ್ಸಿನಲ್ಲಿ ದೈವತ್ವದ ಭಾವ ಅಡಗಿದೆ. ಶಿವಾಲಯ, ದೇವಾಲಯ ಎಲ್ಲವೂ ಮಾನವ ದೇಹದೊಳಗೇ ಅಡಗಿವೆ ಎಂಬ ಶರಣರ ಚಿಂತನೆ ಇಲ್ಲಿ ಮಹತ್ವ ಪಡೆಯುತ್ತದೆ. ಅಂತರಂಗ ಮತ್ತು ಬಹಿರಂಗ ಶುದ್ಧವಾದ ಮಾನವನು ವಿಶ್ವಮಾನವನಾಗುತ್ತಾನೆ. ಅಂತಹ ವ್ಯಕ್ತಿಗೆ ಒಳ-ಹೊರಗಿನ ವ್ಯತ್ಯಾಸ ಕಾಣುವುದಿಲ್ಲ. ಇದೇ ವೈರಾಗ್ಯನಿಧಿ ಬೊಂತಾದೇವಿಯ ಸಮಾನತೆ ಸಂದೇಶವಾಗಿದೆ.

ʼಅರಸು ಆಲಯವ ಹಲವ ಕಟ್ಟಿಸಿದಂತೆ, ಶರೀರದಲ್ಲಿ ಆತ್ಮನು ಹಲವು ನೆಲೆವುಂಟೆಂದು ತಿರುಗುತ್ತಿಹ ಭೇದವಾವುದು ಹೇಳಿರಯ್ಯಾ?ʼ ಎಂಬ ಶರಣರ ಪ್ರಶ್ನೆಯಲ್ಲಿಯೂ ಇದೇ ತಾತ್ವಿಕತೆ ವ್ಯಕ್ತವಾಗುತ್ತದೆ. ಅಧಿಕಾರ ಮತ್ತು ವ್ಯವಸ್ಥೆಗಳು ಬದಲಾಗಬಹುದು; ಆದರೆ ಮನುಷ್ಯನೊಳಗಿನ ಜೀವಚೈತನ್ಯ ಒಂದೇ. ಭೇದದ ಮೂಲವನ್ನು ಮನುಷ್ಯನ ಮನಸ್ಸಿನಲ್ಲೇ ಹುಡುಕಬೇಕು. ಜಾತಿ, ಕುಲ, ವರ್ಗ, ವರ್ಣ ಮತ್ತು ಮೇಲು-ಕೀಳು ಭಾವನೆಯಿಂದ ಹೊರಬಂದು ಜಾತ್ಯತೀತ ಸಮಾನತೆ ಹಾಗೂ ಪ್ರಜ್ಞಾವಂತ ಸಮಾಜವನ್ನು ನಿರ್ಮಿಸುವುದು ಶರಣರ ಆಶಯವಾಗಿತ್ತು. ʼಇವನಾರವ ಎನ್ನದೇ ಇವನಮ್ಮವʼ ಎನ್ನುವ ಸರ್ವಸಮಾನತೆಯ ಸಿದ್ಧಾಂತ ಪ್ರಸ್ತುತವಾಗಬೇಕಾಗಿದೆ.

ಇದನ್ನೂ ಓದಿ : ವಚನ ಕಲ್ಯಾಣ | ಬೇನೆ ಬಂದಡೆ ಒರಲು, ಜೀವ ಹೋದಡೆ ಸಾಯಿ, ಇದಕ್ಕಾ ದೇವರ ಹಂಗೇಕೆ!

ಇಡೀ ಜಗತ್ತೇ ಒಂದು ಆಲಯ. ಮಾನವೀಯತೆಯೇ ಅದರ ಅಡಿಪಾಯ. ಎಲ್ಲ ಧರ್ಮಗಳ ಅಂತಿಮ ಆಶಯವೂ ಮನುಷ್ಯನ ಒಳಿತೇ ಆಗಿದೆ. ಅಸಮಾನತೆ, ಅಸ್ಪೃಶ್ಯತೆ ಮತ್ತು ಶೋಷಣೆ ಮುಕ್ತ ಸಮಾಜ ನಿರ್ಮಾಣದತ್ತ ಎಲ್ಲರೂ ಸಾಗಿದಾಗ ಮಾತ್ರ ನಿಜವಾದ ವಿಶ್ವಮಾನವ ಸಮಾಜ ನಿರ್ಮಾಣವಾಗುತ್ತದೆ. ʼಎಲ್ಲಿ ನೋಡಿದರೂ ಬಯಲೊಂದೇʼ ಎಂಬ ಬೊಂತಾದೇವಿಯ ವಚನದ ಸಂದೇಶ ಕೇವಲ ಒಂದು ಕಾಲಘಟ್ಟಕ್ಕೆ ಸೀಮಿತವಾದುದಲ್ಲ. ಅದು ಇಂದಿಗೂ ಮಾನವ ಸಮಾಜಕ್ಕೆ ಸಮಾನತೆ, ಸಹಬಾಳ್ವೆ, ಮಾನವೀಯತೆ ಮತ್ತು ಸಹೋದರತ್ವದ ದಾರಿಯನ್ನು ತೋರಿಸುವ ಚಿಂತನೆಯಾಗಿದೆ.

(ಆ.12ರಿಂದ ಶ್ರಾವಣ ಮಾಸ ಆರಂಭಗೊಂಡಿದೆ. ತನ್ನಿಮಿತ್ತ ಪ್ರತಿದಿನ ಬಸವಾದಿ ಶಿವಶರಣರ ವಚನ ಅನುಭಾವವನ್ನು “ವಚನ ಕಲ್ಯಾಣ” ಹೆಸರಿನಲ್ಲಿ ಸರಣಿ ಲೇಖನ ʼಈದಿನ ಡಾಟ್ ಕಾಮ್‌ʼನಲ್ಲಿ ಪ್ರಕಟವಾಗಲಿದೆ. ಓದಿ…ಓದಿಸಿ)

WhatsApp Image 2025 02 06 at 11.55.32 e1738823214905
ಬಾಲಾಜಿ ಕುಂಬಾರ್
+ posts

ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮುತ್ತಿಗೆಗಳು ಸುತ್ತುವರೆದಿರುವ ಗ್ಯಾನೇಶ್ ರಾಜೀನಾಮೆ ಸನ್ನಿಹಿತವೇ?

ದಿಲ್ಲಿ- ಮುಂಬಯಿಯಲ್ಲಿ‌ ಯುವಜನರು ಮತ್ತು  ಪ್ರತಿಪಕ್ಷಗಳ ಪ್ರತಿಭಟನೆಗಳು ಮುಂದುವರೆದಿವೆ. ಕಾಂಗ್ರೆಸ್ ಮತ್ತಿತರೆ ...

ವಿಜಯಪುರ | ಬರಪೀಡಿತ ಪ್ರದೇಶಗಳಿಗೆ ಡಿಸಿಎಂ ಪರಮೇಶ್ವರ್‌ ಭೇಟಿ

ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಅವರು ಅ.8 ಹಾಗೂ 9ರಂದು ವಿಜಯಪುರ ಮತ್ತು...

ಮಲ್ಲೇಶ್ವರಂನಲ್ಲಿ ಫಾರ್ಮ್-7‌ ದುರ್ಬಳಕೆ ಆರೋಪ; ʼಈ ದಿನʼ ವರದಿ ಆಧರಿಸಿ ಕಾಂಗ್ರೆಸ್ ದೂರು

ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ...

ಕಮಲನಗರ | ಅರ್ಹ ವೈದ್ಯಕೀಯ ಪದವಿ ಇಲ್ಲದೆ ವೈದ್ಯ ವೃತ್ತಿ: ಕ್ಲಿನಿಕ್ ಸೀಜ್

ಕಮಲನಗರ ತಾಲ್ಲೂಕಿನ ಚಾಂದೋರಿ ಗ್ರಾಮದಲ್ಲಿ ಯಾವುದೇ ವೈದ್ಯಕೀಯ ಪದವಿ ಇಲ್ಲದೆ ಅಕ್ರಮವಾಗಿ...