ಮೂಲಭೂತ ಸೌಲಭ್ಯಕ್ಕಾಗಿ ಮೂರು ವರ್ಷಗಳಿಂದ ಹೋರಾಟ ನಡೆಸುತ್ತಿದ್ದ ಬೂದನೂರು ಗ್ರಾಮದ ಮಹಿಳೆಯರಿಗೆ ಕೊನೆಗೂ ನ್ಯಾಯ ದೊರೆತಿದೆ. ಮಾಧ್ಯಮದ ವರದಿ ಮತ್ತು ಅಧಿಕಾರಿಗಳ ಸ್ಪಂದನೆಯಿಂದ ಸಮಸ್ಯೆಗೆ ಪರಿಹಾರ ಸಿಕ್ಕಿದ್ದು, ಉಳಿದಿರುವ ಸ್ವಚ್ಛತಾ ಕಾಮಗಾರಿಯನ್ನೂ ಪೂರ್ಣಗೊಳಿಸಿದರೆ ಸಾರ್ವಜನಿಕ ಶೌಚಾಲಯದ ಉದ್ದೇಶ ಸಂಪೂರ್ಣವಾಗಿ ಸಾರ್ಥಕವಾಗಲಿದೆ.
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕದಾಂಪೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೂದನೂರು ಗ್ರಾಮದಲ್ಲಿ ಸಾರ್ವಜನಿಕ ಮಹಿಳೆಯರ ಶೌಚಾಲಯ ನಿರ್ಮಿಸಿ ಮೂರು ವರ್ಷಗಳಾಗಿದ್ದರೂ, ನೀರಿನ ಸಂಪರ್ಕ ಕಲ್ಪಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಹಿಳೆಯರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದರು. ಆದರೆ ಈ ಬಗ್ಗೆ ಈ ದಿನ.ಕಾಮ್ ವರದಿ ಪ್ರಕಟಿಸಿದ ಬಳಿಕ ಎಚ್ಚೆತ್ತ ಅಧಿಕಾರಿಗಳು ಕೇವಲ ನಾಲ್ಕು ದಿನಗಳಲ್ಲಿ ಶೌಚಾಲಯಕ್ಕೆ ನೀರಿನ ಸಂಪರ್ಕ ಕಲ್ಪಿಸಿದ್ದಾರೆ.
ಈ ದಿನ.ಕಾಮ್ ಜುಲೈ 31ರಂದು ಬೆಳಗಾವಿ | 3 ವರ್ಷ ಕಳೆದರೂ ಮಹಿಳಾ ಶೌಚಾಲಯಕ್ಕೆ ನೀರಿನ ಸಂಪರ್ಕವಿಲ್ಲ: ಅನಿವಾರ್ಯವಾದ ಬಯಲು ಶೌಚ ಶಿರ್ಷಿಕೆಯಡಿ ವರದಿ ಪ್ರಕಟಿಸಿದ್ದು, ʼಬೂದನೂರ ಗ್ರಾಮದಲ್ಲಿ ಮೂರು ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ಸಾರ್ವಜನಿಕ ಶೌಚಾಲಯಕ್ಕೆ ಈವರೆಗೂ ನೀರಿನ ಸಂಪರ್ಕ ಕಲ್ಪಿಸಿಲ್ಲ. ಇದರಿಂದ ಮಹಿಳಾ ಶೌಚಾಲಯ ಬಳಸಲು ಸಾಧ್ಯವಾಗದೆ ಮಹಿಳೆಯರು ಇಂದಿಗೂ ಬಯಲಿನಲ್ಲೇ ಶೌಚಕ್ಕೆ ತೆರಳುವ ಪರಿಸ್ಥಿತಿ ಎದುರಿಸುತ್ತಿದ್ದಾರೆʼ ಎಂಬುದನ್ನು ಗಮನ ಸೆಳೆದಿತ್ತು. ಇದರ ಬೆನ್ನಲ್ಲೇ ರಾಮದುರ್ಗ ತಾಲೂಕು ಪಂಚಾಯಿತಿ ಅಧಿಕಾರಿಗಳು, ಕದಂಪೂರ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ತಹಶೀಲ್ದಾರ್ ಅವರ ಗಮನಕ್ಕೆ ವಿಷಯ ತರಲಾಗಿತ್ತು. ಇದಾದ ಬಳಿಕ ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಿ ನಾಲ್ಕು ದಿನಗಳಲ್ಲೇ ಶೌಚಾಲಯಕ್ಕೆ ನೀರಿನ ಸಂಪರ್ಕ ಕಲ್ಪಿಸಿದ್ದಾರೆ.
ಈ ದಿನ.ಕಾಮ್ ಜತೆ ಮಾತನಾಡಿದ ಗ್ರಾಮದ ಮಹಿಳೆ ಚಿನ್ನವ್ವ, “ಮೂರು ವರ್ಷಗಳಿಂದ ಶೌಚಾಲಯ ಇದ್ದರೂ ನೀರಿನ ಸೌಲಭ್ಯ ಇಲ್ಲದ ಕಾರಣ ಮಹಿಳೆಯರು ಬಯಲಿಗೆ ತೆರಳಬೇಕಾಗುತ್ತಿತ್ತು. ಈ ದಿನ.ಕಾಮ್ ಮಾಧ್ಯಮ ನಮ್ಮ ಸಮಸ್ಯೆಯನ್ನು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನಕ್ಕೆ ತಂದ ಪರಿಣಾಮ ಈಗ ನೀರಿನ ಸಂಪರ್ಕ ದೊರೆತಿದೆ. ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಈ ದಿನ.ಕಾಮ್ ಮಾಧ್ಯಮಕ್ಕೆ ಗ್ರಾಮದ ಮಹಿಳೆಯರ ಪರವಾಗಿ ಧನ್ಯವಾದಗಳು” ಎಂದು ಹೇಳಿದರು.
“ಆದರೆ, ಶೌಚಾಲಯದ ಸುತ್ತ ಗಿಡಗಂಟಿಗಳು ಬೆಳೆದಿದ್ದು, ಸ್ವಚ್ಛತಾ ಕಾಮಗಾರಿ ಇನ್ನೂ ಬಾಕಿಯಿದೆ. ಶೌಚಾಲಯವನ್ನು ಸಂಪೂರ್ಣವಾಗಿ ಬಳಕೆಗೆ ಯೋಗ್ಯವಾಗಿಸಲು ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಿ ಅಗತ್ಯ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು” ಎಂದು ಆಗ್ರಹಿಸಿದರು.
ಇದನ್ನೂ ಓದಿದ್ದೀರಾ? ಒಂಡೆಡೆ ನೀರಿಗಾಗಿ ಹಾಹಾಕಾರ, ಹೋರಾಟ; ಮತ್ತೊಂದೆಡೆ ಪ್ರವಾಹ: ರಾಜ್ಯದ ಮುಂದೆ ಬಹುಮುಖ ಜಲ ಸವಾಲು
ಮೂಲಭೂತ ಸೌಲಭ್ಯಕ್ಕಾಗಿ ಮೂರು ವರ್ಷಗಳಿಂದ ಹೋರಾಟ ನಡೆಸುತ್ತಿದ್ದ ಬೂದನೂರು ಗ್ರಾಮದ ಮಹಿಳೆಯರಿಗೆ ಕೊನೆಗೂ ನ್ಯಾಯ ದೊರೆತಿದೆ. ಮಾಧ್ಯಮದ ವರದಿ ಮತ್ತು ಅಧಿಕಾರಿಗಳ ಸ್ಪಂದನೆಯಿಂದ ಸಮಸ್ಯೆಗೆ ಪರಿಹಾರ ಸಿಕ್ಕಿದ್ದು, ಉಳಿದಿರುವ ಸ್ವಚ್ಛತಾ ಕಾಮಗಾರಿಯನ್ನೂ ಪೂರ್ಣಗೊಳಿಸಿದರೆ ಸಾರ್ವಜನಿಕ ಶೌಚಾಲಯದ ಉದ್ದೇಶ ಸಂಪೂರ್ಣವಾಗಿ ಸಾರ್ಥಕವಾಗಲಿದೆ.

ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು



