ಈ ದಿನ ಸಂಪಾದಕೀಯ | ಸಂವಿಧಾನ ಬದಲಿಸುವ ಸನಾತನಿಗಳ ಹುನ್ನಾರಕ್ಕೆ ವಕೀಲರೇ ದಾಳ

Date:

ಸಂವಿಧಾನಕ್ಕೂ ಮುನ್ನ ಅಂಬೇಡ್ಕರ್ ತೇಜೋವಧೆಗೆ ಸಂಘಪರಿವಾದ ಮುಂದಾಗಿದೆ. ಅಂಬೇಡ್ಕರ್ ಕುರಿತು ಜನಮಾನಸದಲ್ಲಿ ಅಸಹನೆ - ವಿರೋಧಿ ಭಾವನೆ ಬೆಳೆಸಿ ಅಂಬೇಡ್ಕರರ ನಾಯಕತ್ವವನ್ನು ಇತಿಹಾಸದಲ್ಲಿ ಅಳಿಸಿ ಹಾಕಿ, ಆ ನಂತರ ಸಂವಿಧಾನಕ್ಕೆ ಕೈ ಹಾಕುವುದು ಮನುವಾದಿಗಳ ಕುತಂತ್ರ.

ಮಧ್ಯಪ್ರದೇಶದ ಗ್ವಾಲಿಯರ್ ಹೈಕೋರ್ಟ್ ವಕೀಲ, ವಕೀಲರ ಸಂಘದ ಮಾಜಿ ಅಧ್ಯಕ್ಷ ಅನಿಲ್ ಮಿಶ್ರಾ ಅವರು ಬಾಬಾಸಾಹೇಬ್ ಅಂಬೇಡ್ಕರ್ ಕುರಿತು ನಾಲಿಗೆ ಹರಿಬಿಟ್ಟಿದ್ದಾರೆ. “ಅಂಬೇಡ್ಕರ್ ಒಬ್ಬ ಕೊಳಕು ಮನುಷ್ಯ, ಸುಳ್ಳುಗಾರ, ಬ್ರಿಟಿಷ್ ಏಜೆಂಟ್. ಸವರ್ಣೀಯರ ಮೇಲಿನ ಅನ್ಯಾಯ ಮತ್ತು ರಕ್ತಪಾತಗಳಿಗೆ ಅಂಬೇಡ್ಕರ್ ಕಾರಣ. ಅಂಬೇಡ್ಕರ್ ಸಂವಿಧಾನವನ್ನೇ ಬರೆದಿಲ್ಲ” ಎಂದು ತುಚ್ಛವಾಗಿ ಮಾತನಾಡಿದ್ದಾರೆ. ತಮ್ಮೊಳಗಿನ ವಿಕೃತಿಯನ್ನು ಹೊರಹಾಕಿದ್ದಾರೆ.

- Advertisement -

ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಓದಿ, ಅಧ್ಯಯನ ಮಾಡಿ ವಕೀಲಿಕೆ ಮಾಡುತ್ತಿರುವ ವಕೀಲನೊಬ್ಬ ಇಂತಹ ಹೇಳಿಕೆಗಳನ್ನು ಹೊರಹಾಕಲು, ಸಂವಿಧಾನದ ವಿರುದ್ಧವೇ ಮಾತನಾಡಲು, ಅಂಬೇಡ್ಕರ್ ಕುರಿತು ಅಸಹನೆ ವ್ಯಕ್ತಪಡಿಸುವುದರ ಹಿಂದೆ, ಕೇವಲ ಜಾತಿಗ್ರಸ್ತ ಮನೋಭಾವ ಮಾತ್ರ ಇಲ್ಲ. ಅದರ ಹಿಂದೆ, ಸಂಘಪರಿವಾದ ಅಜೆಂಡಾ ಕೂಡ ಇದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

ಸಂವಿಧಾನ/ಅಂಬೇಡ್ಕರ್ ವಿರುದ್ಧ ನಾಲಿಗೆ ಹರಿಬಿಡುವವರನ್ನು ಬಿಜೆಪಿ ಬೆಂಬಲಿತ ಸನಾತನಿ ಉಗ್ರರು. ಅವರ ಹೇಳಿಕೆಗಳು ಅಂಬೇಡ್ಕರ್, ಸಂವಿಧಾನ ಮತ್ತು ಸಾಮಾಜಿಕ ನ್ಯಾಯದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರದ ಭಾಗವೂ, ವ್ಯವಸ್ಥಿತ ದಾಳಿಯೂ ಆಗಿದೆ ಎನ್ನುತ್ತಾರೆ ಅಂಬೇಡ್ಕರ್ ವಾದಿಗಳು.

ನ್ಯಾಯಾಂಗ ವ್ಯವಸ್ಥೆಯಲ್ಲಿದ್ದು, ಅಂಬೇಡ್ಕರ್ ವಿರುದ್ಧ ವಿಕೃತಿ ಮೆರೆದವರಲ್ಲಿ ವಕೀಲ ಅನಿಲ್ ಮಿಶ್ರಾ ಮೊದಲಿಗರಲ್ಲ. ಇದೇ ವರ್ಷದ ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್‌ ವಕೀಲ ನಿತಿನ್ ಮೇಶ್ರಾಂ ಎಂಬಾತ, ಅಂಬೇಡರರನ್ನು ‘ಅಲ್ಲಾಹ್‌’ಗೆ ಹೋಲಿಸಿದ್ದರು. “ಬಾಬಾಸಾಹೇಬ್ ಅಂಬೇಡ್ಕರ್ ಅಲ್ಲಾಹ್‌ನ ಮಾದರಿ, ಅವರನ್ನು ಆರಾಧಿಸಬೇಕು” ಎಂದಿದ್ದರು. ಅವರ ಹೇಳಿಕೆ, ಧಾರ್ಮಿಕ ಸ್ವರೂಪದಲ್ಲಿ ಚರ್ಚೆ ಹುಟ್ಟುಹಾಕಿತ್ತು. ಧಾರ್ಮಿಕ ಆರಾಧನೆಯನ್ನು ಖಂಡಿಸಿದ್ದ ಅಂಬೇಡ್ಕರರನ್ನು ದೇವರಿಗೆ ಹೋಲಿಸಿದ್ದರ ಬಗ್ಗೆ ಆಕ್ಷೇಪಗಳು ವ್ಯಕ್ತವಾಗಿದ್ದವು.

2025ರ ಜನವರಿ 26ರಂದು ನಡೆದ ಗಣರಾಜ್ಯೋತ್ಸವ ಆಚರಣೆ ಸಮಯದಲ್ಲಿ, ಹಾಸನದ ಜಿಲ್ಲಾ ನ್ಯಾಯಾಧೀಶ ರವಿಕುಮಾರ್ ಅವರು, “ಸಂವಿಧಾನವನ್ನು ಅಂಬೇಡ್ಕರ್ ರಚಿಸಿಲ್ಲ. ಅವರು ಕರಡನ್ನು ಮಾತ್ರವೇ ಸಿದ್ಧಪಡಿಸಿದ್ದರು” ಎಂದು ಹೇಳಿದ್ದರು.

ಮೂರು ವರ್ಷಗಳ ಹಿಂದೆ, 2022ರಲ್ಲಿ ಜನವರಿ 26ರಂದು ಇದೇ ಗಣರಾಜ್ಯೋತ್ಸವ ಆಚರಣೆ ಸಮಯದಲ್ಲಿ ರಾಯಚೂರು ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಕೂಡ ಅಂಬೇಡ್ಕರ್ ವಿರೋಧಿ ಧೋರಣೆಯನ್ನು ಪ್ರದರ್ಶಿಸಿದ್ದರು. ಅಂಬೇಡ್ಕರ್ ಭಾವಚಿತ್ರಕ್ಕೆ ಹೂವು ಹಾಕಲು ನಿರಾಕರಿಸಿದ್ದರು. ‘ಸಂವಿಧಾನ ದಿನದಲ್ಲಿ ಅಂಬೇಡ್ಕರ್ ಪಾತ್ರ ಕಡಿಮೆ’ ಎಂದಿದ್ದರು.

ನ್ಯಾಯಾಂಗದ ಭಾಗವಾಗಿರುವವರ ಇಂತಹ ಹೇಳಿಕೆಗಳು ಕೇವಲ ಜಾತಿ ಆಧಾರಿತ ಧೋರಣೆಗೆ ಮಾತ್ರ ಸೀಮಿತವಾಗಿಲ್ಲ. ಇದರಲ್ಲಿ, ಬಿಜೆಪಿ-ಆರ್‌ಎಸ್‌ಎಸ್‌ನ ಸಂವಿಧಾನ ವಿರೋಧಿ ಅಥವಾ ಸಂವಿಧಾನ ಬದಲಿಸುವ ಸಿದ್ಧಾಂತದ ಅಜೆಂಡಾವಿದೆ.

ಸಂವಿಧಾನವನ್ನು ಬದಲಿಸಲು ನಿರಂತರವಾಗಿ ಯತ್ನಿಸುತ್ತಿರುವ ಮನುವಾದಿ ಬಿಜೆಪಿಗೆ ನೇರವಾಗಿ ಸಂವಿಧಾನಕ್ಕೆ ಕೈ ಹಾಕಲು ಸಾಧ್ಯವಾಗುತ್ತಿಲ್ಲ. ಹಲವು ಸಂದರ್ಭಗಳಲ್ಲಿ ಸಂವಿಧಾನ ಬದಲಾವಣೆಗೆ ಸಂಬಂಧಿಸಿದ ತಂತ್ರ-ಕುತಂತ್ರಗಳನ್ನು ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಡೆಸಿದೆ. ಆದರೆ, ಭುಗಿಲೇಳುವ ಜನಾಕ್ರೋಶದಿಂದಾಗಿ, ಹಿಂದೆ ಸರಿದಿದೆ. ನೇರವಾಗಿ ಸಂವಿಧಾನವನ್ನು ಮುಟ್ಟಲು ಸಾಧ್ಯವಿಲ್ಲ ಎಂಬುದು ಮನುವಾದಿಗಳಿಗೆ ಅರ್ಥವಾಗಿದೆ.

ಆದ್ದರಿಂದಲೇ, ಸಂವಿಧಾನಕ್ಕೂ ಮುನ್ನ ಅಂಬೇಡ್ಕರ್ ತೇಜೋವಧೆಗೆ ಸಂಘಪರಿವಾದ ಮುಂದಾಗಿದೆ. ಸಂವಿಧಾನವನ್ನು ಅಂಬೇಡ್ಕರ್ ಬರೆದಿಲ್ಲ ಎಂಬ ಹೇಳಿಕೆಯನ್ನು ಮತ್ತೆ-ಮತ್ತೆ ಮುನ್ನೆಲೆಗೆ ತರುವುದು ಮತ್ತು ಅಂಬೇಡ್ಕರ್ ಕುರಿತು ಜನಮಾನಸದಲ್ಲಿ ಅಸಹನೆ ಹುಟ್ಟುಹಾಕುವುದು ಹಾಗೂ ಅಂಬೇಡ್ಕರ್ ವಿರೋಧಿ ಭಾವನೆಯನ್ನು ಸಮಾಜದಲ್ಲಿ ಬೆಳೆಸುವುದು – ಈ ಕೃತ್ಯಗಳ ಮೂಲಕ ಅಂಬೇಡ್ಕರ್ ಅವರ ನಾಯಕತ್ವವನ್ನು ಇತಿಹಾಸದಲ್ಲಿ ಅಳಿಸಿ ಹಾಕಿ, ಆ ನಂತರ ಸಂವಿಧಾನಕ್ಕೆ ಕೈ ಹಾಕುವುದು ಮನುವಾದಿಗಳ ಕುತಂತ್ರ.

ಆದರೆ, ಅಂಬೇಡ್ಕರ್ ವಿರುದ್ಧ ರಾಜಕೀಯವಾಗಿ ಮಾತನಾಡುವುದು ಹೆಚ್ಚು ಪರಿಣಾಮಕಾರಿ ಅಲ್ಲ ಎಂಬುದೂ ಕೋಮುವಾದಿ, ಜಾತಿವಾದಿ ಬಿಜೆಪಿ/ಆರ್‌ಎಸ್‌ಎಸ್‌ಗೆ ತಿಳಿದಿದೆ. ಪರಿಣಾಮವಾಗಿ, ಅಂಬೇಡ್ಕರ್ ವಿರೋಧಿ ಹೇಳಿಕೆಗಳನ್ನು ಪ್ರಚಾರ ಮಾಡಲು ವಕೀಲರು-ನ್ಯಾಯಾಧೀಶರನ್ನೇ ಸಂಘಪರಿವಾರ ಬಳಸಿಕೊಳ್ಳುತ್ತಿದೆ.

ಜಾತಿ ವ್ಯವಸ್ಥೆ – ವರ್ಣಾಶ್ರಮ ಪದ್ದತಿ ಅಸ್ತಿತ್ವದಲ್ಲಿರಬೇಕು ಎಂಬುದು ಆರ್‌ಎಸ್‌ಎಸ್‌ ಅಜೆಂಡಾ. ಆರ್‌ಎಸ್‌ಎಸ್‌ ಸಂಸ್ಥಾಪಕ ಎಂ.ಎಸ್. ಗೋಲ್ವಾಲ್ಕರ್, 1939ರಲ್ಲಿ ಪ್ರಕಟಿಸಿದ ತನ್ನ ‘ಬಂಚ್ ಆಫ್ ಥಾಟ್ಸ್’ ಪುಸ್ತಕದಲ್ಲಿ, ಜಾತಿ ವ್ಯವಸ್ಥೆಯು ‘ಹಿಂದು ಸಮಾಜದ ಏಕೀಕರಣದ ಭಾಗ’ವೆಂದು ಪ್ರತಿಪಾದಿಸಿದ್ದಾರೆ. ಆದರೆ, ಅಂಬೇಡ್ಕರರು ‘ಜಾತಿ ವ್ಯವಸ್ಥೆ’ಯ ವಿರುದ್ಧ ಹೋರಾಡಿದವರು. ‘ಜಾತಿ ವಿನಾಶ’ ಪುಸ್ತಕದ ಮೂಲಕ ಜಾತಿ ವ್ಯವಸ್ಥೆಯನ್ನು ಅಳಿಸಿಹಾಕಲು ಕರೆಕೊಟ್ಟವರು. ಹಿಂದು ಧರ್ಮದ ವರ್ಣಾಶ್ರಮ ಪದ್ದತಿಯನ್ನು ಖಂಡಿಸಿ, ಬೌದ್ಧ ಧರ್ಮಕ್ಕೆ ಮತಾಂತರಗೊಂಡರು.

ಸಂವಿಧಾನದಲ್ಲಿ ಮಹಿಳೆಯರ ಹಕ್ಕುಗಳ ರಕ್ಷಣೆಗಾಗಿ ‘ಹಿಂದು ಕೋಡ್‌ ಬಿಲ್’ಅನ್ನು ಅಂಬೇಡ್ಕರ್ ಮಂಡಿಸಿದ್ದರು. ಜಾತಿ ತಾರತಮ್ಯವನ್ನು ತೊರೆದು ಹಾಕಲು ಮೀಸಲಾತಿ ವ್ಯವಸ್ಥೆ ಇರಬೇಕೆಂದು ಪ್ರತಿಪಾದಿಸಿ, ಜಾರಿಗೆ ತಂದರು. ಕಾರ್ಮಿಕರ ಹಕ್ಕುಗಳಿಗಾಗಿ ‘ಕಾರ್ಮಿಕ ಕಾನೂನ’ನ್ನು ಅನುಷ್ಠಾನಕ್ಕೆ ತಂದರು. ಜಾತಿ, ಲಿಂಗ, ಧರ್ಮ, ವರ್ಗ ಹಾಗೂ ಪ್ರದೇಶ ಆಧಾರಿತ ತಾರತಮ್ಯ, ಶೋಷಣೆಗಳಿಲ್ಲದಂತೆ ಎಲ್ಲರಿಗೂ ಸಮಾನತೆ, ಸಮಾನ ಹಕ್ಕುಗಳನ್ನು ಒದಗಿಸುವ ಸಂವಿಧಾನವನ್ನು ರಚಿಸಿದರು.

ಸಂವಿಧಾನವು ಬಿಜೆಪಿ-ಆರ್‌ಎಸ್‌ಎಸ್‌ನ ಜೀವಾಳವಾದ ಮನುವಾದಕ್ಕೆ ವಿರುದ್ಧವಾಗಿದೆ. ಮನುವಾದ ಪ್ರತಿಪಾದಿಸುವ ಸಮಾಜದಲ್ಲಿ ವರ್ಣಾಶ್ರಮ, ಶೂದ್ರರು-ಅಸ್ಪೃಶ್ಯರು ಮುಟ್ಟಲು ಅರ್ಹರಲ್ಲ, ಮಹಿಳೆಯರು 2ನೇ ದರ್ಜೆಯ ಪ್ರಜೆಗಳು, ಗಂಡಿನ ಅಧೀನದಲ್ಲಿರಬೇಕು ಎಂಬ ತಾರತಮ್ಯ, ಶೋಷಣೆ ಕಾನೂನುಬಾಹಿರವೆಂದು ಸಂವಿಧಾನ ಹೇಳುತ್ತದೆ.

ಈ ಲೇಖನ ಓದಿದ್ದೀರಾ?: ಅಲೆಮಾರಿಗಳ ಆರ್ತನಾದಕ್ಕೆ ಹೃದಯ ತೆರೆಯಲಿ ದೆಹಲಿ

ಅಂಬೇಡ್ಕರರ ಈ ನಿಲುವು-ನಿರ್ಧಾರ-ಹೋರಾಟಗಳು ಸಂಘಪರಿವಾರದ ಬುಡಕ್ಕೆ ಬೆಂಕಿ ಇಟ್ಟಂತಾಗಿದೆ. ಮೀಸಲಾತಿಯು ಮೇಲ್ಜಾತಿಗಳ ಕಣ್ಣು ಕುಕ್ಕಿದೆ. ಸಂವಿಧಾನವನ್ನು ಬದಲಿಸಿ ಮನುವಾದವನ್ನೇ ಸಂವಿಧಾನ ಮಾಡಲು ಸಂಘಪರಿವಾರ ಹವಣಿಸುತ್ತದೆ. ಇತ್ತೀಚೆಗೆ, ಅಂಬೇಡ್ಕರನ್ನು ಹೈಜಾಕ್ ಮಾಡಿ, ‘ಕೇಸರೀಕರಣ’ಗೊಳಿಸಲು ಸಂಘವು ಯತ್ನಿಸಿತು. ಆದರೆ, ಅದು ಸಾಧ್ಯವಾಗಲಿಲ್ಲ. ಆದ್ದರಿಂದ, ಈಗ ಅಂಬೇಡ್ಕರರನ್ನು ಇತಿಹಾಸದಲ್ಲಿ ನಗಣ್ಯವೆಂದು ಬಿಂಬಿಸುವ ಕುತಂತ್ರಕ್ಕೆ ಮುಂದಾಗಿದೆ.

ಸಂಘದ ಹುನ್ನಾರದ ಭಾಗವಾಗಿ ಅಂಬೇಡ್ಕರರನ್ನು ಅವಮಾನಿಸುವ, ಅಂಬೇಡ್ಕರ್ ಪ್ರತಿಮೆಗಳಿಗೆ ಹಾನಿ ಮಾಡುವ, ಸಂವಿಧಾನಕ್ಕೂ ಅಂಬೇಡ್ಕರ್‌ಗೂ ಅಂತಹ ಸಂಬಂಧವೇ ಇಲ್ಲವೆಂದು ವಾದಿಸುವ ವಿಕೃತಿ ಹೆಚ್ಚುತ್ತಿದೆ.

2024ರ ಡಿಸೆಂಬರ್‌ನಲ್ಲಿ ಗೃಹಸಚಿವ ಅಮಿತ್ ಶಾ, “ಅಂಬೇಡ್ಕರ್ ಹೆಸರು ಹೇಳುವುದು ಒಂದು ಫ್ಯಾಷನ್’ ಎಂದಿದ್ದರು. ಅಂಬೇಡ್ಕರ್ ಹೆಸರು ಹೇಳುವುದೇ ಅನಗತ್ಯ ಎಂಬ ಧೋರಣೆ ಅವರದ್ದಾಗಿತ್ತು. ಅಂಬೇಡ್ಕರ್-ಸಂವಿಧಾನ ವಿರೋಧಿ ಮನೋಭಾವ ಬೆಳೆಸುವ ಸಂಘಪರಿವಾರದ ಅಜೆಂಡಾಗೆ ವಕೀಲರು-ನ್ಯಾಯಾಧೀಶರು ಎನ್ನದೆ ಎಲ್ಲರೂ ದಾಳವಾಗುತ್ತಿದ್ದಾರೆ. ಜೊತೆಗೆ, ತಮ್ಮೊಳಗಿನ ವಿಕೃತಿಯನ್ನೂ ಹೊರಹಾಕುತ್ತಿದ್ದಾರೆ.

ಆದರೆ, ಭಾರತೀಯರು ಇತಿಹಾಸ ಬಲ್ಲವರಾಗಿದ್ದಾರೆ. ಮನುವಾದದ ಕುತಂತ್ರವನ್ನು ಅರಿತಿದ್ದಾರೆ. ಸಂಘಪರಿವಾರದ ಅಜೆಂಡಾಗಳನ್ನು ತಿಳಿದಿದ್ದಾರೆ. ಅಂಬೇಡ್ಕರ್-ಸಂವಿಧಾನ ವಿಚಾರದಲ್ಲಿ ಸಂಘಪರಿವಾರದ ಹುನ್ನಾರ-ಅಜೆಂಡಾಗಳನ್ನು ಭಾರತೀಯರು ಒಪ್ಪಿಕೊಳ್ಳುವುದಿಲ್ಲ. ಬಿಜೆಪಿ/ಆರ್‌ಎಸ್‌ಎಸ್‌ನ ಸಿದ್ದಾಂತಗಳು ಫಲಿಸುವುದು ಸುಲಭವಲ್ಲ. ಸಾಧ್ಯವೂ ಇಲ್ಲ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಹಬ್ಬ-ಆಚರಣೆಗಳೇ ಬಿಜೆಪಿಯ ದ್ವೇಷದ ಅಸ್ತ್ರ; ಜನತೆ ಎಚ್ಚೆತ್ತುಕೊಳ್ಳಲಿ!

ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಧಾರ್ಮಿಕ ಆಚರಣೆಗಳ ಪಾವಿತ್ರ್ಯವನ್ನು ಹಾಳುಗೆಡವುವ, ಹಬ್ಬಗಳನ್ನು...

ಈ ದಿನ ಸಂಪಾದಕೀಯ | ಪ್ರಜಾ ಸೇವೆ ಪ್ರಚಾರವೂ ಇರಲಿ, ಪ್ರಜೆಗಳ ಬದುಕಿನಲ್ಲಿ ಬದಲಾವಣೆಯನ್ನೂ ತರಲಿ

ಸರ್ಕಾರದ ಕಾರ್ಯಕ್ರಮಗಳು, ಯೋಜನೆಗಳು ಜನರಿಗೆ ತಲುಪಲು ಪ್ರಚಾರ ಮುಖ್ಯ; ಅದಕ್ಕಿಂತ ಸಾಮಾನ್ಯರ...

ಈ ದಿನ ಸಂಪಾದಕೀಯ | ಭಿನ್ನಮತಗಳ ನಡುವೆ BRICS ಶೃಂಗಸಭೆ; ಒಮ್ಮತ ಸಾಧಿಸುವುದೇ ಸವಾಲು!

ಇರಾನ್-ಯುಎಇ ಉದ್ವಿಗ್ನತೆ, ರಷ್ಯಾ-ಪಶ್ಚಿಮ ರಾಷ್ಟ್ರಗಳ ಸಂಘರ್ಷ, ಏಷ್ಯಾ ದೈತ್ಯರ ಆಂತರಿಕ ತಿಕ್ಕಾಟಗಳು...

ಈ ದಿನ ಸಂಪಾದಕೀಯ | ಪಾದಯಾತ್ರೆಯ ಪಾವಿತ್ರ್ಯತೆಯನ್ನು ಬಿಜೆಪಿ ಮುಖಂಡರು ಮಣ್ಣುಗೂಡಿಸಿದರೇ?

ದೇಶದಲ್ಲಿ ಇಲ್ಲಿಯವರೆಗೆ ಜರುಗಿದ ಪಾದಯಾತ್ರೆಗಳು ಜನರ ಸಮಸ್ಯೆಗಳನ್ನು ಹೊತ್ತು ನಡೆದ ಹೆಜ್ಜೆಗಳಾಗಿದ್ದವು,...