ಈ ದಿನ ಸಂಪಾದಕೀಯ | ಇತ್ತ ಮೌಢ್ಯ ಬಿತ್ತನೆ, ಅತ್ತ ಮೋಡ ಬಿತ್ತನೆ- ಇದು ಎಡಬಿಡಂಗಿ ಸರ್ಕಾರ

Date:

ಮೋಡ ಬಿತ್ತನೆ ದುಬಾರಿ ಸರ್ಕಾರಿ ಯೋಜನೆಯಾಗಬಹುದು. ಪೂಜೆ-ಪುನಸ್ಕಾರ ಜನಮಾನಸದಲ್ಲಿ ಸರ್ಕಾರಿ ಪ್ರಾಯೋಜಿತ ಮೌಢ್ಯ ಬಿತ್ತನೆಗೆ ಕಾರಣವಾಗಬಹುದು. ಮಳೆ ಬರಬಹುದು, ಬರದಿರಬಹುದು; ಸಾರ್ವಜನಿಕ ಹಣ ಮತ್ತು ನಂಬಿಕೆಯಂತೂ ಮಣ್ಣುಗೂಡುತ್ತವೆ. ಮೊದಲು ನೆಲದ ನೀತಿ ಬದಲಾಗಬೇಕು. ಮೋಡ ಮತ್ತು ಮೌಢ್ಯ ಬಿತ್ತುವ ಮೊದಲು ನೀರನ್ನು ಉಳಿಸುವ ಸಂಸ್ಕೃತಿಯನ್ನು ಬಿತ್ತಬೇಕು.

ಮಳೆ ಕೈಕೊಟ್ಟಾಗ ರೈತನ ಕಣ್ಣು ಆಕಾಶದತ್ತ ನೆಟ್ಟಿರುತ್ತದೆ. ಬರದ ಬಿಸಿ ಏರತೊಡಗಿದೊಡನೆ ಸರ್ಕಾರವೂ ಆಕಾಶದತ್ತ ನೋಡತೊಡಗುತ್ತದೆ. ಸದ್ಯ ರಾಜ್ಯದಲ್ಲಿ ಉಂಟಾಗಿರುವ ತೀವ್ರ ಮಳೆ ಕೊರತೆಯ ಹಿನ್ನೆಲೆಯಲ್ಲಿ 101 ತಾಲೂಕುಗಳನ್ನು ಅಧಿಕೃತವಾಗಿ ಬರಪೀಡಿತ ಎಂದು ಸರ್ಕಾರ ಘೋಷಿಸಿದೆ.

- Advertisement -

ಈಗಾಗಲೇ ಬರ ಬಾಧಿತ ತಾಲ್ಲೂಕುಗಳಿಂದ ಗ್ರೌಂಡ್ ಟ್ರೂಥಿಂಗ್ ವರದಿಯನ್ನು ಪಡೆಯಲಾಗಿದ್ದು, ಬರ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರ ಸಂಪೂರ್ಣ ಸನ್ನದ್ಧವಾಗಿದೆ, ಕೇಂದ್ರ ಸರ್ಕಾರದ ಮಾನದಂಡಗಳ ಅನ್ವಯ ಅಂತಿಮ ವರದಿಯನ್ನು ಸಿದ್ಧಪಡಿಸುತ್ತಿದೆ ಎಂದಿದ್ದಾರೆ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್. ಅಲ್ಲದೆ ಬರ ಕುರಿತು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು ಎಂದಿದ್ದಾರೆ. ಆದರೆ, ಬರ ಪರಿಸ್ಥಿತಿ ಕುರಿತು ಚರ್ಚಿಸಲು ಸಿಕ್ಕ ಸದನವೆಂಬ ಅಪೂರ್ವ ಅವಕಾಶವನ್ನು ಆಳುವ-ಕೇಳುವ ಪಕ್ಷಗಳೆರಡೂ ಪೈಪೋಟಿಗೆ ಬಿದ್ದು ಹಾಳು ಮಾಡಿವೆ. ಸಾಲದು ಎಂದು, ಮಾಧ್ಯಮಗಳ ಮುಂದೆ ನಿಂತು ಬರ-ಬೆಳೆ-ರೈತರ ಕುರಿತು ಮೊಸಳೆ ಕಣ್ಣೀರು ಸುರಿಸುತ್ತಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಶಿಕ್ಷಣ ಮಾರಾಟ ಮಾಡಿದ ಶಾಲೆಗಳೇ ಈಗ ಮಾರಾಟಕ್ಕೆ!

ಕರ್ನಾಟಕದಲ್ಲಿ ಖಾಸಗಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿದ್ದು, ಮಾರಾಟಕ್ಕೆ ಸಜ್ಜಾಗಿವೆ. ಕೋವಿಡ್-19 ಆಕ್ರಮಣದ ನಂತರದಲ್ಲಿ ಖಾಸಗಿ ಶಾಲೆಗಳಲ್ಲಿ ದಾಖಲಾತಿಯಲ್ಲಿ ಭಾರೀ ಕುಸಿತ, ಪ್ರತಿಷ್ಠಿತ ಶಾಲೆಗಳ ಜೊತೆಗೆ ಪೈಪೋಟಿ, ಮೂಲಭೂತ ಸೌಕರ್ಯಕ್ಕೆ ತಕ್ಕಂತೆ ಲಾಭದ...

ಬಿಗಿದ ತುಟಿಯ ದೃಶ್ಯಭಾಷೆ: ನಿರ್ಬಂಧಗಳ ನೆರಳಲ್ಲಿ ರೂಪಕಗಳ ಪ್ರತಿರೋಧ

ಸಿನೆಮಾವನ್ನು ನಿಯಂತ್ರಿಸಲು ಅಧಿಕಾರಶಾಹಿ ಸದಾ ಹೊಸ ಕಟ್ಟುಪಾಡುಗಳನ್ನು ಸೃಷ್ಟಿಸುತ್ತಲೇ ಇರುತ್ತದೆ; ಆದರೆ ಕಲೆಗೆ ಇರುವ ಶಕ್ತಿಯೆಂದರೆ, ಅದು ನಿರ್ಬಂಧಗಳ ಗೋಡೆಗಳನ್ನೇ ಹೊಸ ನೋಟದ ಕಿಟಕಿಗಳನ್ನಾಗಿಸಿಕೊಳ್ಳುತ್ತದೆ. ನೇರ ಮಾತನ್ನು ಕಸಿದುಕೊಂಡಷ್ಟೂ ರೂಪಕಗಳ ನಡಿಗೆ ಬಿಗಿಯಾಗುತ್ತದೆ,...

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

ಇದರ ನಡುವೆಯೇ ರಾಜ್ಯ ಸರ್ಕಾರ ಮೋಡ ಬಿತ್ತನೆ ಕಾರ್ಯಕ್ಕೆ ಕೈಹಾಕಿದೆ. ‘ಸೆಪ್ಟೆಂಬರ್ ನಿಂದ ಸುಮಾರು 60 ದಿನಗಳ ಕಾಲ, 4 ಕಂದಾಯ ವಿಭಾಗಗಳಲ್ಲಿ ಮೋಡ ಬಿತ್ತನೆ ಮಾಡುತ್ತಿದ್ದೇವೆ. ಎಲ್ಲಿ ಕ್ಲೌಡ್ ಇರುತ್ತೋ ಅಲ್ಲಿ ಮೋಡ ಬಿತ್ತನೆ ಮಾಡುತ್ತೇವೆ. ಸಕ್ಸಸ್ ರೇಟ್ ಕಡಿಮೆ ಇದೆ. ಆದರೂ ರೈತರ ಒತ್ತಡ ಇದೆ. ಬರ ಇದೆ. ಮೋಡ ಬಿತ್ತನೆ ಮಾಡಿದ್ರೆ ಅನುಕೂಲ ಆಗಬಹುದು ಅಂತ ಮಾಡುತ್ತಿದ್ದೇವೆ. ಅದಕ್ಕಾಗಿ 27 ಕೋಟಿ ಖರ್ಚಾಗಲಿದೆʼ ಎಂದು ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದ್ದಾರೆ.

ಇದನ್ನು ಓದಿದ್ದೀರಾ?: ಯುವಜನರ ನಿಜ ಆಕ್ರೋಶ ಪರೀಕ್ಷಾ ಅಕ್ರಮದಾಚೆಗಿದೆ ನಿರುದ್ಯೋಗ ಬಿಕ್ಕಟ್ಟಿನಲ್ಲಿ…

ವಿಪರ್ಯಾಸವೆಂದರೆ, ಕಳೆದ ಜೂನ್, ಜುಲೈ, ಆಗಸ್ಟ್ ಮೊದಲ ವಾರದಲ್ಲಿ ಮೋಡ ಬಿತ್ತನೆ ಮಾಡುವಂತೆ, ಒಂದಲ್ಲ ಎರಡಲ್ಲ, ಹತ್ತಾರು ಬಾರಿ ಉತ್ತರ ಕರ್ನಾಟಕ ಭಾಗದ ಹಲವಾರು ರೈತರು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು. ಆದರೆ ಆ ಮುಂಗಾರಿನ ಹಂಗಾಮಿನಲ್ಲಿ ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿ ಬದಲಾವಣೆ, ಸಚಿವರ ಆಯ್ಕೆ, ಖಾತೆ ಹಂಚಿಕೆಯ ರಾಜಕಾರಣದಲ್ಲಿ ಮುಳುಗಿತ್ತು. ರೈತರ ಮನವಿಯನ್ನು ಮೂಲೆಗೆಸೆದಿತ್ತು. ಈಗ, ಬರ ಪರಿಸ್ಥಿತಿ ಬಿಗಡಾಯಿಸಿರುವಾಗ ಮೋಡ ಬಿತ್ತನೆಯ ಮಂತ್ರ ಜಪಿಸುತ್ತಿದೆ. 

ಮೋಡ ಬಿತ್ತನೆ ಎಂದರೆ ವಿಜ್ಞಾನದ ನೆರವಿನಿಂದ ಮೋಡಗಳಿಗೆ ಸೂಕ್ತವಾದ ಸೂಕ್ಷ್ಮ ಕಣಗಳನ್ನು ಸೇರಿಸಿ, ಪ್ರಚೋದಿಸಿ ಮಳೆ ಸುರಿಸುವ ಕೃತಕ ಪ್ರಯತ್ನ. ಆಕಾಶದಲ್ಲಿ ಈಗಾಗಲೇ ಇರುವ ಮೋಡಗಳ ಮೇಲೆ ಬೆಳ್ಳಿ ಅಯೋಡೈಡ್, ಉಪ್ಪಿನ ಕಣಗಳು ಮತ್ತು ಒಣ ಮಂಜು ಹರಡಿ, ನೀರಿನ ಹನಿಗಳ ರಚನೆಗೆ ಉತ್ತೇಜಿಸಲಾಗುತ್ತದೆ. ಇದಕ್ಕೆ ಮುಖ್ಯವಾಗಿ ವಿಮಾನ ಅಥವಾ ಡ್ರೋನ್‌ಗಳನ್ನು ಬಳಸಲಾಗುತ್ತದೆ. ಮೋಡ ಬಿತ್ತನೆಗೆ ಮೋಡ ಮುಖ್ಯ. ಅದೇ ಇಲ್ಲದಿದ್ದರೆ ಮಳೆ ಸುರಿಸಲು ಸಾಧ್ಯವಿಲ್ಲ.

ಆದರೆ, ಮೋಡ ಬಿತ್ತನೆಯ ಪರವಾದ ವಾದಗಳು- ಮಳೆ ಕೊರತೆಯಿರುವ ಪ್ರದೇಶಗಳಲ್ಲಿ ಸೂಕ್ತ ವಾತಾವರಣ ಸಿಕ್ಕರೆ ಮಳೆಯ ಪ್ರಮಾಣವನ್ನು ಹೆಚ್ಚಿಸಬಹುದು. ಕೃಷಿ, ಕುಡಿಯುವ ನೀರು, ಜಲಾಶಯಗಳ ತುಂಬುವಿಕೆಗೆ ತಾತ್ಕಾಲಿಕವಾಗಿ ನೆರವಾಗಬಹುದು. ಬರ ಪರಿಸ್ಥಿತಿ ತೀವ್ರವಾಗಿರುವಾಗ ಲಭ್ಯವಿರುವ ವೈಜ್ಞಾನಿಕ ಆಯ್ಕೆಗಳಲ್ಲಿ ಇದೂ ಒಂದು, ಪ್ರಯೋಗಕ್ಕೊಡ್ಡಬಹುದು ಎಂಬುದನ್ನು ಮುನ್ನಲೆಗೆ ತರುತ್ತವೆ. ಅದನ್ನು ಮೋಡ ಬಿತ್ತನೆ ಗುತ್ತಿಗೆ ಪಡೆಯುವ ಖಾಸಗಿ ಕಂಪನಿಗಳು- ಹೆಚ್ಚಿನವು ರಾಜಕಾರಣಿಗಳ ಒಡೆತನದಲ್ಲಿರುವ ಕಂಪನಿಗಳು- ವ್ಯವಸ್ಥಿತವಾಗಿ ತೇಲಿಬಿಡುತ್ತವೆ. 

ರಾಜ್ಯದಲ್ಲಿ ಮೋಡ ಬಿತ್ತನೆ ಹೊಸದಲ್ಲ. 2003ರಲ್ಲಿ, ಎಸ್.ಎಂ. ಕೃಷ್ಣ ಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲಿಯೇ ಮೋಡ ಬಿತ್ತನೆಗಾಗಿ 9.37 ಕೋಟಿ ವ್ಯಯಿಸಲಾಗಿತ್ತು. 2004ರಲ್ಲಿ 10ರಿಂದ 15 ಕೋಟಿ, 2012ರಲ್ಲಿ 4.80 ಕೋಟಿ, 2017ರಲ್ಲಿ 30 ಕೋಟಿ, 2019ರಲ್ಲಿ 93 ಕೋಟಿ… ಹೀಗೆ ಸರ್ಕಾರದ ಅಧಿಕೃತ ಲೆಕ್ಕದ ಪ್ರಕಾರವೇ ಸುಮಾರು 150 ಕೋಟಿ ರೂಪಾಯಿಗಳನ್ನು ಈ ಮೋಡ ಬಿತ್ತನೆಗಾಗಿ ವಿನಿಯೋಗಿಸಲಾಗಿದೆ.

ಇದಕ್ಕೆ ಸಮರ್ಥನೆಯಾಗಿ ಸರ್ಕಾರ, ವಿಮಾನಗಳು, ರಾಸಾಯನಿಕಗಳು, ಹವಾಮಾನ ರಾಡಾರ್‍‌ಗಳು, ತಜ್ಞರ ತಂಡ, ನಿರಂತರ ಮೇಲ್ವಿಚಾರಣೆಗಳು ದುಬಾರಿ ಎಂಬ ಸಮಜಾಯಿಷಿ ನೀಡಬಹುದು. ಇಷ್ಟಾದರೂ, ಮೋಡ ಬಿತ್ತನೆ ಕಾರ್ಯಾಚರಣೆ ಯಶಸ್ವಿಯಾಗುತ್ತದೆ ಎನ್ನುವುದಕ್ಕೆ ಯಾವುದೇ ಖಾತರಿ ಇಲ್ಲ. ಮಳೆ ಬಂದರೆ ಅದು ಮೋಡ ಬಿತ್ತನೆಯಿಂದಾಗಿ ಅಥವಾ ಸ್ವಾಭಾವಿಕವಾಗಿ ಎಂಬುದನ್ನು ನಿರ್ಧರಿಸುವುದೂ ಸುಲಭವಲ್ಲ.

ಬರಪೀಡಿತ ಪ್ರದೇಶಗಳಲ್ಲಿ ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡಿದರೂ ನಿರೀಕ್ಷಿತ ಮಳೆ ಬೀಳದಿದ್ದರೆ ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳು ಏಳುವುದು ಸಹಜ. ಹೀಗಾಗಿ ಮಳೆ ಬಂತು ಎನ್ನುವುದಕ್ಕಿಂತ ಖರ್ಚು ಮಾಡಿದ ಪ್ರತಿಯೊಂದು ರೂಪಾಯಿಗೆ ಎಷ್ಟು ಹೆಚ್ಚುವರಿ ನೀರು ದೊರೆಯಿತು; ಪರಿಸರದ ಮೇಲಾಗುವ ಪರಿಣಾಮವೇನು, ಪ್ರಯೋಗ ಯಶಸ್ವಿಯಾಯಿತೇ ಎಂಬ ಪ್ರಶ್ನೆಗಳಿಗೆ ಸರ್ಕಾರ ಉತ್ತರಿಸಬೇಕಾಗುತ್ತದೆ.

ಇದನ್ನು ಓದಿದ್ದೀರಾ?: 2 ಸಾವಿರ ಅಡಿ ಹಿಮಖಂಡ ಛಿದ್ರ, 4.4 ತೀವ್ರತೆಯ ಭೂಕಂಪನ; ನೇಪಾಳದಲ್ಲಿ ಜಲಪ್ರಳಯ ಸೃಷ್ಟಿಯಾದದ್ದು ಹೇಗೆ?

ಮಳೆಯನ್ನೇ ಉತ್ಪಾದಿಸುವ ಶಕ್ತಿ ಮನುಷ್ಯನ ಕೈಗೆ ಬಂದಿದೆ ಎಂಬ ಭ್ರಮೆ ಮಾತ್ರ ಅಪಾಯಕಾರಿ. ಪ್ರಕೃತಿಯ ಸಂಕೀರ್ಣತೆಯನ್ನು ಸಂಪೂರ್ಣವಾಗಿ ನಿಯಂತ್ರಿಸುವ ಹಂತಕ್ಕೆ ವಿಜ್ಞಾನ ಇನ್ನೂ ಬಂದಿಲ್ಲ. ಆದರೂ ವೈಜ್ಞಾನಿಕ ಕ್ರಮಕ್ಕೆ ಮುಂದಾಗುವ ಸರ್ಕಾರ, ಅದಕ್ಕೆ ವ್ಯತಿರಿಕ್ತವಾಗಿ, ಉತ್ತಮ ಮಳೆಯಾಗಲೆಂದು ಮಡಿಕೇರಿ ತಾಲ್ಲೂಕಿನ ಐತಿಹಾಸಿಕ ಹಾಗೂ ಪ್ರಸಿದ್ಧ ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ವಿಶೇಷ ಪೂಜೆಯನ್ನೂ ಆಯೋಜಿಸುತ್ತದೆ. ಈ ವಿಶೇಷ ಪೂಜೆಯಲ್ಲಿ ಕೃಷಿ ಸಚಿವ ನರೇಂದ್ರಸ್ವಾಮಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ, ಶಾಸಕರು, ಅಧಿಕಾರಿಗಳು ಪಾಲ್ಗೊಳ್ಳುವ ಮೂಲಕ ಸರ್ಕಾರವೇ ಮೌಢ್ಯ ಬಿತ್ತನೆಯನ್ನೂ ಮಾಡುತ್ತದೆ.

ಮೋಡ ಬಿತ್ತನೆ ಮತ್ತು ಮೌಢ್ಯ ಬಿತ್ತನೆಯ ಬದಲಿಗೆ ಸರ್ಕಾರ, ಅದೇ ಸಮಯದಲ್ಲಿ ಕೆರೆಗಳಿಗೆ ನೀರು ಹರಿಸುವ ಕಾಲುವೆಗಳನ್ನು ಸ್ವಚ್ಛಗೊಳಿಸುತ್ತಿದೆಯೇ, ಮಳೆನೀರಿನ ಸಂಗ್ರಹವನ್ನು ಹೆಚ್ಚಿಸುತ್ತಿದೆಯೇ, ಅಂತರ್ಜಲವನ್ನು ರಕ್ಷಿಸುತ್ತಿದೆಯೇ, ಬೆಳೆ ಪದ್ಧತಿಯನ್ನು ಬದಲಾಯಿಸುತ್ತಿದೆಯೇ, ಆ ಬಗ್ಗೆ ರೈತರಿಗೆ ತಿಳಿವಳಿಕೆ ತುಂಬುತ್ತಿದೆಯೇ ಎಂಬುದನ್ನೂ ಜನರು ಕೇಳಬೇಕು.

ಇಲ್ಲದಿದ್ದರೆ ಮೋಡ ಬಿತ್ತನೆಯೂ ಮತ್ತೊಂದು ದುಬಾರಿ ಸರ್ಕಾರಿ ಯೋಜನೆಯಾಗಬಹುದು. ಪೂಜೆ-ಪುನಸ್ಕಾರವೂ ಜನಮಾನಸದಲ್ಲಿ ಸರ್ಕಾರಿ ಪ್ರಾಯೋಜಿತ ಮೌಢ್ಯ ಬಿತ್ತನೆಗೆ ಕಾರಣವಾಗಬಹುದು. ಮಳೆ ಬರಬಹುದು, ಬರದಿರಬಹುದು; ಸಾರ್ವಜನಿಕ ಹಣ ಮತ್ತು ನಂಬಿಕೆಯಂತೂ ಮಣ್ಣುಗೂಡುತ್ತವೆ. ಪ್ರಕೃತಿಯನ್ನು ಬಲವಂತವಾಗಿ ಬದಲಿಸುವ-ಒಲಿಸಿಕೊಳ್ಳುವ ಪ್ರಯತ್ನಕ್ಕಿಂತ ಮೊದಲು ನೆಲದ ನೀತಿ ಬದಲಾಗಬೇಕು. ಮೋಡ ಮತ್ತು ಮೌಢ್ಯ ಬಿತ್ತುವ ಮೊದಲು ನೀರನ್ನು ಉಳಿಸುವ ಸಂಸ್ಕೃತಿಯನ್ನು ಬಿತ್ತಬೇಕು.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸುಪ್ರೀಂ ಆದೇಶ ಉಲ್ಲಂಘನೆ: ಕಾನೂನುಬಾಹಿರ ವಶಕ್ಕೆ ತಡೆ ಇದ್ದರೂ 100ಕ್ಕೂ ಹೆಚ್ಚು ಪ್ರತಿಭಟನಾಕಾರರ ಬಂಧನ!

ರಾಜಧಾನಿ ದೆಹಲಿಯಲ್ಲಿ ಕನ್ಹಾಟ್ ಪ್ಲೇಸ್ ಹಾಗೂ ಜಂತರ್ ಮಂತರ್ ಸುತ್ತಮುತ್ತ ನಡೆಯುತ್ತಿರುವ...

ಗ್ಯಾನೂ ವಿರುದ್ಧ ಪ್ರತಿಭಟನೆ: ವಿದ್ಯಾರ್ಥಿ ನಾಯಕಿ ನೇಹಾ ಬೋರಾ ಬಂಧನ

ದೆಹಲಿಯಲ್ಲಿ ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರದ ವಿರುದ್ಧದ ಪ್ರತಿಭಟನೆಗಳು ಭಾನುವಾರವೂ...

ಸಿಜೆಪಿ ಪ್ರತಿಭಟನೆ: ವಿದ್ಯಾರ್ಥಿ, ಯುವತಿಯರ ಮೇಲೆ ಹಲ್ಲೆ; ನಾಲ್ವರು RSS ಗೂಂಡಾಗಳ ಬಂಧನ

ದೆಹಲಿಯಲ್ಲಿ ನಡೆದ 'ಕಾಕ್ರೋಚ್ ಜನತಾ ಪಾರ್ಟಿ' (CJP) ಪ್ರತಿಭಟನೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳು...