ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಕೇವಲ ಎರಡೂವರೆ ತಿಂಗಳಾಗಿದೆ. ಆಗಲೇ ಅವರ ಆಡಳಿತ ವೈಖರಿಯನ್ನು ನಿಕಷಕ್ಕೊಡ್ಡುವುದು ಸೂಕ್ತವಲ್ಲವಾದರೂ, ಮುಖ್ಯಮಂತ್ರಿಯಾಗಿ ಮೊದಲ ಅಧಿವೇಶನದ ಅಧ್ವಾನವನ್ನು ಹೇಳಲೇಬೇಕಾಗಿದೆ.
ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿ ಎರಡೂವರೆ ತಿಂಗಳಾಗಿದೆ. ಮುಂಗಾರು ಅಧಿವೇಶನ ಆರಂಭವಾಗಿ ಆರು ದಿನಗಳಾಗಿದೆ. ಅಧಿವೇಶನದ ಆರಂಭದ ಆರು ದಿನಗಳಲ್ಲಿ ಕಂಡುಬಂದ ಸಾಮಾನ್ಯ ವಿದ್ಯಮಾನವೆಂದರೆ- ಪಕ್ಷಾತೀತವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಗುಣಗಾನ. ಅದಕ್ಕೆ ದಿವಂಗತ ಚನ್ನಮ್ಮನವರ ಅಂತ್ಯ ಸಂಸ್ಕಾರದಿಂದ ಹಿಡಿದು ಮಂಕಾಳ ವೈದ್ಯರನ್ನು ಉಪಸಭಾಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದ್ದನ್ನು ನೆಪ ಮಾಡಿಕೊಂಡ ವಿರೋಧ ಪಕ್ಷದ ಶಾಸಕರು ಪೈಪೋಟಿಗೆ ಬಿದ್ದು ಮುಖ್ಯಮಂತ್ರಿಗಳ ಹೊಗಳಿಕೆಗೆ ನಿಂತರು. ಇದು ಬಿಜೆಪಿಯ ಕೆಲ ನಾಯಕರಿಗೇ ಅತಿ ಅನಿಸಿತು. ಅದರಲ್ಲೂ ಎಸ್. ಸುರೇಶ್ ಕುಮಾರ್ ಸೇರಿದಂತೆ ಹಲವರು ಅಧಿವೇಶನದಿಂದ ಹೊರನಡೆದದ್ದೂ ಆಯಿತು.
ಸಾಮಾನ್ಯವಾಗಿ ಅಧಿವೇಶನ ಎಂದಾಕ್ಷಣ ವಿಪಕ್ಷಗಳು ಮೈ ಕೊಡವಿ ಎದ್ದು ನಿಲ್ಲುವುದು; ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಶ್ನೆಗಳು, ಟೀಕೆಗಳು ಎದುರಾಗುವುದು ಸಹಜ. ಹಾಗೆಯೇ ವಿಪಕ್ಷಗಳು ಎಂದಾಕ್ಷಣ ಸರ್ಕಾರದ ಪ್ರತಿ ನಡೆಯನ್ನು ವಿರೋಧಿಸಬೇಕು ಎಂದಲ್ಲ. ಸರ್ಕಾರ ಎಡವಿದಾಗ ಎಚ್ಚರಿಸುವ ಕೆಲಸ ಮಾಡಬೇಕು. ಆದರೆ, ಅಧಿವೇಶನ ಆರಂಭದ ಆರು ದಿನಗಳೂ, ವಿಪಕ್ಷ ನಾಯಕರೇ ಮುಖ್ಯಮಂತ್ರಿಗಳ ಗುಣಗಾನಕ್ಕೆ ನಿಂತರು.
ವಿಪಕ್ಷ ನಾಯಕರ ಹೊಗಳಿಕೆಗೆ ಮಾರುಹೋದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ‘ಅಧಿಕಾರ ಶಾಶ್ವತವಲ್ಲ. ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತು ಯಾವುದೇ ದ್ವೇಷ ಸಾಧನೆ ಮಾಡುವುದಿಲ್ಲ’ ಎಂದರು. ಶಿವಕುಮಾರ್ ನೇರ ಮಾತಿಗೆ ಹೆಸರಾಗಿರಬಹುದು. ಆದರೆ, ಆಡಳಿತ ಪಕ್ಷ ಮತ್ತು ವಿಪಕ್ಷಗಳೆರಡೂ ಒಪ್ಪಂದ ಮಾಡಿಕೊಂಡಂತೆ, ನಿಮಗೆ ತೊಂದರೆ ಕೊಡುವುದಿಲ್ಲ, ನೀವೂ ತೊಂದರೆ ಕೊಡಬೇಡಿ ಎಂದು ರಾಜಕೀಯ ಹೊಂದಾಣಿಕೆ ಮಾಡಿಕೊಂಡರೆ, ಪ್ರಜಾಪ್ರಭುತ್ವಕ್ಕೆ ಅರ್ಥ ಇದೆಯೇ? ಅಧಿವೇಶನದಲ್ಲಿ ನಿಂತು ಆಡುತ್ತಿರುವ ಮಾತುಗಳು ಸರ್ಕಾರದ ಮುಖ್ಯಸ್ಥ ಮುಖ್ಯಮಂತ್ರಿ ವಿವೇಚನೆಯನ್ನು ನಿಕಷಕ್ಕೊಡ್ಡುವುದಿಲ್ಲವೇ? ಮುಂದಿನ ದಿನಗಳಲ್ಲಿ ಅಧಿವೇಶನ ಯಾವ ದಿಕ್ಕಿನಲ್ಲಿ ಸಾಗಬಹುದು ಎಂಬುದರ ಸುಳಿವು ನೀಡಿದಂತಲ್ಲವೇ? ಇದರಿಂದ ರಾಜ್ಯಕ್ಕೆ ಏನಾದರೂ ಪ್ರಯೋಜನವಾಗುತ್ತದೆಯೇ?
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಕೆಪಿಎಸ್‌ಸಿಯ ʼಭ್ರಷ್ಟʼ ರೋಗಕ್ಕೆ ಅರೆಬರೆ ತೇಪೆ ಸಾಕು; ಶಾಶ್ವತ ಮದ್ದು ಬೇಕು!
ಹಾಗೆಯೇ ಮತ್ತೊಂದು ಅಧ್ವಾನ, ವಿಧಾನಸಭೆಯ ಸಭಾಧ್ಯಕ್ಷರಾಗಿ ಜಿ.ಎಸ್. ಪಾಟೀಲರು ಆಯ್ಕೆ ಸಂದರ್ಭದಲ್ಲಿ ನಡೆದದ್ದು. ಹಂಗಾಮಿ ಸಭಾಧ್ಯಕ್ಷ ಟಿ.ಬಿ. ಜಯಚಂದ್ರ ಅವರು, ಜಿ.ಎಸ್. ಪಾಟೀಲ್ ಅವರು ನೂತನ ಸಭಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು. ಆಗ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಪಾಟೀಲರು ಕುಳಿತಿದ್ದ ಆಸನದತ್ತ ತೆರಳಿ ಅವರನ್ನು ಕೈಹಿಡಿದು ವಿಧಾನಸಭಾಧ್ಯಕ್ಷರ ಪೀಠಕ್ಕೆ ಕರೆತಂದರು. ಆಗ, ಮುಖ್ಯಮಂತ್ರಿ ಶಿವಕುಮಾರ್ ಅವರು ಸಭಾಧ್ಯಕ್ಷರ ಪೀಠದ ಮುಂದೆಯೇ ಪಾಟೀಲರ ಮುಖವನ್ನು ತಮ್ಮ ಕೈಗಳಿಂದ ಹಿಡಿದು, ಅಶೋಕ್ ರತ್ತ ಬಲವಂತವಾಗಿ ತಿರುಗಿಸಿ, ‘ಇವರೇ ವಿರೋಧ ಪಕ್ಷದ ನಾಯಕರು, ನೋಡ್ಕಂಬಿಡಿ’ ಎಂದು ನಕ್ಕರು.
ವಿಧಾನಸಭೆಯ ಸಭಾಧ್ಯಕ್ಷ ಸ್ಥಾನವು ಭಾರತೀಯ ಸಂವಿಧಾನದ ವಿಧಿ 178ರ ಪ್ರಕಾರ ಆಯ್ಕೆಯಾಗುವ ಅತ್ಯಂತ ಮಹತ್ವದ, ಸಂವಿಧಾನಾತ್ಮಕ ಸ್ಥಾನ. ಇದು ಕೇವಲ ಸದನವನ್ನು ನಡೆಸುವ ಹುದ್ದೆಯಲ್ಲ; ವಿಧಾನಸಭೆಯ ಸ್ವಾಯತ್ತತೆ, ಶಿಸ್ತು ಮತ್ತು ಸಂಸದೀಯ ಪರಂಪರೆಯ ರಕ್ಷಕನ ಸ್ಥಾನ. ಸಭಾಧ್ಯಕ್ಷರು ಆಡಳಿತ ಪಕ್ಷದ ಪ್ರತಿನಿಧಿಯಲ್ಲ, ವಿಧಾನಸಭೆಯ ನ್ಯಾಯಾಧೀಶರಂತೆ ವರ್ತಿಸಬೇಕು ಎಂಬುದು ಸಂಸದೀಯ ಪ್ರಜಾಪ್ರಭುತ್ವದ ಮೂಲ ಆಶಯ. ಮುಖ್ಯಮಂತ್ರಿ ಸರ್ಕಾರದ ಮುಖ್ಯಸ್ಥರಾದರೆ, ಸಭಾಧ್ಯಕ್ಷರು ವಿಧಾನಸಭೆಯ ಸಂಸದೀಯ ಗೌರವ, ನಿಯಮ ಮತ್ತು ಸ್ವಾಯತ್ತತೆಯ ರಕ್ಷಕರು. ಹೀಗಾಗಿ ಅವರ ಸ್ಥಾನಕ್ಕೆ ಘನತೆ ಮಾತ್ರವಲ್ಲ, ಪಕ್ಷಾತೀತ ನಡವಳಿಕೆಯ ಮಹತ್ವದ ಹೊಣೆಗಾರಿಕೆಯೂ ಇದೆ. ಹಾಗಿರುವಾಗ ಮುಖ್ಯಮಂತ್ರಿಗಳೇ ಸಭಾಧ್ಯಕ್ಷರ ಮುಖವಿಡಿದು ತಿರುಗಿಸುವುದು, ಆ ಸ್ಥಾನಕ್ಕೆ, ಸಂಸದೀಯ ನಡವಳಿಕೆಗೆ ಧಕ್ಕೆ ತಂದಂತಲ್ಲವೇ?
ಪ್ರಜಾಪ್ರಭುತ್ವದಲ್ಲಿ ಸರ್ಕಾರಕ್ಕೆ ಬಹುಮತವಿದ್ದರೂ ವಿರೋಧ ಪಕ್ಷದ ಪ್ರಶ್ನೆಗಳಿಗೆ ಉತ್ತರಿಸುವುದು ಮತ್ತು ಅದರ ಟೀಕೆಗೆ ಅವಕಾಶ ನೀಡುವುದು ಅತ್ಯಗತ್ಯ. ಆದರೆ, ವಾಲ್ಮೀಕಿ ಹಗರಣದಲ್ಲಿ ಆರೋಪಿ ಸ್ಥಾನದಲ್ಲಿರುವ ನಾಗೇಂದ್ರರನ್ನು, ಕಾಂಗ್ರೆಸ್ ಪಕ್ಷ ಸಚಿವರನ್ನಾಗಿಸಿದೆ. ಅದು ತಪ್ಪು ಎಂದು ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ವಿರೋಧ ಪಕ್ಷಗಳು ಸದನದೊಳಗೆ ಧರಣಿ, ಪ್ರತಿಭಟನೆ ನಡೆಸಿವೆ. ಅದಕ್ಕೆ ಸೂಕ್ತವಾಗಿ ಉತ್ತರಿಸಬೇಕಾದ್ದು ಸರ್ಕಾರದ ಕರ್ತವ್ಯ. ಆದರೆ, ಸರ್ಕಾರದ ವತಿಯಿಂದ ಉತ್ತರಿಸಬೇಕಾದ ಮುಖ್ಯಮಂತ್ರಿಗಳು, ‘ನಾನೂ ಜೈಲಿಗೆ ಹೋಗಿದ್ದೆ…’ ಎಂದು ಸರಳೀಕರಿಸಲು ನೋಡಿದರೆ, ಅದನ್ನು ಸಂಸದೀಯ ನಡವಳಿಕೆ ಎನ್ನಲಾಗುವುದೇ?
ಆಡಳಿತ ಪಕ್ಷ-ವಿರೋಧ ಪಕ್ಷಗಳು ಪರಸ್ಪರ ತಿಳಿವಳಿಕೆಯಿಂದ ಜನೋಪಯೋಗಿ ಚರ್ಚೆಗೆ ಮುಂದಾದರೆ ಮಾತ್ರ ಅಧಿವೇಶನದ ಉದ್ದೇಶ ಈಡೇರಲು ಸಾಧ್ಯ. ಏಕೆಂದರೆ, ಅಧಿವೇಶನದಲ್ಲಿ ಭಾಗಿಯಾಗುವ ಶಾಸಕರ ಸಂಬಳ, ಸಾರಿಗೆ, ಭತ್ಯೆ, ಊಟ, ವಸತಿ, ಭದ್ರತೆ, ಸಿಬ್ಬಂದಿ ಹಾಗೂ ಸದನದ ನಿರ್ವಹಣೆ, ಭದ್ರತೆ, ಸಿಬ್ಬಂದಿ, ವಿದ್ಯುತ್, ಮುದ್ರಣ ಇದೆಲ್ಲದಕ್ಕೂ ಜನರ ತೆರಿಗೆ ಹಣ ವೆಚ್ಚವಾಗುತ್ತದೆ. ಆ ವೆಚ್ಚ ದಿನವೊಂದಕ್ಕೆ 3 ಕೋಟಿ ಎಂಬ ಅಂದಾಜಿದೆ. ಕಲಾಪವನ್ನು ಇಡೀ ರಾಜ್ಯ ಗಂಭೀರವಾಗಿ ಗಮನಿಸುತ್ತದೆ. ಇದನ್ನು ರಾಜಕಾರಣಿಗಳು ಅರ್ಥ ಮಾಡಿಕೊಳ್ಳಬೇಕು. ಅಧಿವೇಶನ ಜನದನಿಗೆ ವೇದಿಕೆಯಾಗಬೇಕು. ಪ್ರಜಾತಂತ್ರದ ಮೌಲ್ಯಗಳನ್ನು ಎತ್ತಿಹಿಡಿಯಬೇಕು. ಅದಕ್ಕಿಂತ ಮುಖ್ಯವಾಗಿ ರಾಜಕೀಯ ಲಾಭಕ್ಕಾಗಿ ತಾವು ಏನು ಮಾಡಿದರೂ ನಡೆಯುತ್ತದೆ ಎಂಬ ಭ್ರಮೆಯಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೊರಬರಬೇಕು.
2023ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದಲ್ಲಿ ಡಿ.ಕೆ. ಶಿವಕುಮಾರ್ ಉಪಮುಖ್ಯಮಂತ್ರಿಯಾಗಿದ್ದರು. ಜಲ ಸಂಪನ್ಮೂಲ ಖಾತೆಯ ಜೊತೆಗೆ ಬೆಂಗಳೂರು ನಗರ ಅಭಿವೃದ್ಧಿ ಎಂಬ ಹೊಸ ಖಾತೆಗೂ ಸಚಿವರಾಗಿದ್ದರು. ಮೂರು ವರ್ಷಗಳಲ್ಲಿ ಜಲ ಸಂಪನ್ಮೂಲ ಖಾತೆಗೆ ಸುಮಾರು 50 ಸಾವಿರ ಕೋಟಿ ವಿನಿಯೋಗಿಸಲಾಗಿದೆ ಎಂಬುದನ್ನು ಬಜೆಟ್ ಹೇಳುತ್ತದೆ. ಆದರೆ, ಮೇಕೆದಾಟು, ಕಳಸಾ-ಬಂಡೂರಿ ಯೋಜನೆಗಳು ಒಂದಿಂಚು ಕೂಡ ಅಲುಗಾಡಲಿಲ್ಲ. ಬಯಲುಸೀಮೆಗೆ ನೀರುಣಿಸುವ ಮಹತ್ವದ ಎತ್ತಿನಹೊಳೆ ಯೋಜನೆಗೆ 24 ಸಾವಿರ ಕೋಟಿ ಖರ್ಚಾದರೂ ಬಯಲುಸೀಮೆಗೆ ನೀರು ಹರಿಯಲಿಲ್ಲ. ಇನ್ನು ಬೃಹತ್ ಬೆಂಗಳೂರು ನಗರ ಪಾಲಿಕೆಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮಾಡಿ, ಕಳೆದ ಮೂರು ವರ್ಷಗಳಲ್ಲಿ 44 ಸಾವಿರ ಕೋಟಿ ರೂಪಾಯಿಗಳ ಬಜೆಟ್ ಲೆಕ್ಕ ತೋರಿಸಿದರೂ, ಕನಿಷ್ಠ ನಗರದ ರಸ್ತೆಗಳನ್ನು, ಸಂಚಾರ ವ್ಯವಸ್ಥೆಯನ್ನು ಕೂಡ ಸರಿ ಮಾಡಲಾಗಲಿಲ್ಲ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಭೂಮಿ ಕೊಟ್ಟವರ ದಿಕ್ಕೆಟ್ಟ ಬದುಕು; ನೈಸ್ ರಾಜಕಾರಣದ ಕೊಳಕು
ಇದಕ್ಕೆ ವ್ಯತಿರಿಕ್ತವಾಗಿ ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷವನ್ನು ಸಂಘಟಿಸಿ ಅಧಿಕಾರಕ್ಕೆ ತರುವಲ್ಲಿ ಡಿ.ಕೆ. ಶಿವಕುಮಾರ್ ಶ್ರಮ ಎದ್ದುಕಾಣುತ್ತದೆ. ಬೇರೆ ರಾಜ್ಯಗಳ ಚುನಾವಣೆಗಳನ್ನು ನಿಭಾಯಿಸುವಲ್ಲಿ, ಸಮಸ್ಯೆಗಳನ್ನು ನಿವಾರಿಸುವಲ್ಲಿ ಸಿದ್ಧಹಸ್ತರು ಎಂಬ ಹೆಸರಿದೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಮೂರು ವರ್ಷಗಳ ಕಾಲ ಅತ್ಯಂತ ಸಹನೆಯಿಂದ ವರ್ತಿಸಿ, ಹೈಕಮಾಂಡ್ ಮನ ಗೆದ್ದಿದ್ದು; ಅಧಿಕಾರ ಹಸ್ತಾಂತರದ ಸಂದರ್ಭದಲ್ಲಿ ಸಂಯಮ ಕಾಪಾಡಿಕೊಂಡದ್ದು ಮಾದರಿ ನಡೆ ಎನಿಸಿಕೊಂಡಿದೆ.
ಮುಖ್ಯಮಂತ್ರಿಯಾದ ನಂತರ, ಅವರ ಕಾರ್ಯಶೈಲಿಯನ್ನು ಗಮನಿಸಿದರೆ, ಅಭಿವೃದ್ಧಿಕೇಂದ್ರಿತ ದೃಷ್ಟಿಕೋನ ಮತ್ತು ರಾಜಕೀಯ ತಂತ್ರಗಾರಿಕೆ ಎದ್ದುಕಾಣುತ್ತದೆ. ಅದಕ್ಕೆ ಪೂರಕವಾಗಿ ಅವರು ಬಳಸುತ್ತಿರುವ ಭಾಷೆ, ತಕ್ಷಣದ ನಿರ್ಧಾರ, ಖುದ್ದು ಮೇಲ್ವಿಚಾರಣೆ ಮಾಧ್ಯಮಗಳ ಪ್ರಶಂಸೆಗೊಳಪಟ್ಟಿದೆ. ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಕೇವಲ ಎರಡೂವರೆ ತಿಂಗಳಾಗಿದೆ. ಆಗಲೇ ಅವರ ಆಡಳಿತ ವೈಖರಿಯನ್ನು ನಿಕಷಕ್ಕೊಡ್ಡುವುದು ಸೂಕ್ತವಲ್ಲವಾದರೂ, ಮುಖ್ಯಮಂತ್ರಿಯಾಗಿ ಮೊದಲ ಅಧಿವೇಶನದ ಅಧ್ವಾನವನ್ನು ಹೇಳಲೇಬೇಕಾಗಿದೆ. ಹಾಗೆಯೇ ಅವರೇ ಹೇಳಿದ ‘ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ’ ಎಂಬುದನ್ನು ಅವರಿಗೆ ನೆನಪಿಸಬೇಕಾಗಿದೆ.




