ಈ ದಿನ ಸಂಪಾದಕೀಯ | ನಿರುದ್ಯೋಗ ಸಮಸ್ಯೆ ಸರಳವಲ್ಲ, ಸ್ಪಂದಿಸದಿದ್ದರೆ ಸರ್ಕಾರಕ್ಕೆ ತೊಂದರೆ ತಪ್ಪಿದ್ದಲ್ಲ

Date:

ನಿರುದ್ಯೋಗ ಎನ್ನುವುದು ಸರಳ ಸಮಸ್ಯೆ ಅಲ್ಲ. ಅದು ಸದಾ ಕುದಿಯುವ ಜ್ವಾಲಾಮುಖಿ. ಧಾರವಾಡದ ನಿರುದ್ಯೋಗಿ ಯುವಜನರು ಶ್ರೀಮಂತರ ಮಕ್ಕಳಲ್ಲ, ಬಡವರ ಮಕ್ಕಳು. ಅವರ ಕಷ್ಟ, ಸಂಕಟ, ಹತಾಶೆ ಈಗ ಸ್ಫೋಟಗೊಂಡಿದೆ. ನಾಗರಿಕ ಸಮಾಜ ಅವರ ಬೆಂಬಲಕ್ಕೆ ನಿಲ್ಲಬೇಕಿದೆ.

ಕಳೆದ ಮಂಗಳವಾರ ಧಾರವಾಡದಲ್ಲಿ ನಡೆದ ಉದ್ಯೋಗ ನೇಮಕಾತಿಗೆ ಆಗ್ರಹಿಸಿ ನಡೆದ ಉದ್ಯೋಗಾಕಾಂಕ್ಷಿಗಳ ಹೋರಾಟ, ಇತ್ತೀಚಿನ ದಿನಗಳಲ್ಲಿ ನಡೆದ ಬೃಹತ್ ಪ್ರತಿಭಟನಾ ಮೆರವಣಿಗೆಯಾಗಿತ್ತು. ಮಡುಗಟ್ಟಿದ ಯುವಜನರ ಆಕ್ರೋಶ ಒಮ್ಮೆಲೆ ಸ್ಫೋಟಿಸಿತ್ತು. ಸರ್ಕಾರಗಳಿಗೆ ನೀಡಿದ ಎಚ್ಚರಿಕೆಯಾಗಿತ್ತು.

- Advertisement -

ಹಿಂದಿನಿಂದಲೂ ಖಾಲಿ ಹುದ್ದೆಗಳಿಗೆ ನೇಮಕಾತಿ ನಡೆಸಲು ಕ್ರಮ ಕೈಗೊಳ್ಳುವಂತೆ ವಿದ್ಯಾರ್ಥಿಗಳು, ಯುವಜನರು ಸರ್ಕಾರವನ್ನು ಒತ್ತಾಯಿಸುತ್ತಲೇ ಬಂದಿದ್ದರು. ಪ್ರತಿಭಟನೆ ಮೂಲಕ ಸರ್ಕಾರವನ್ನು ಎಚ್ಚರಿಸಿದ್ದರು. ಆದರೆ ಆಳುವ ಸರ್ಕಾರ ಯುವಜನರಿಗೆ ಉದ್ಯೋಗ ಒದಗಿಸುವ ಬದಲು, ಪ್ರತಿಭಟನೆಯನ್ನು ಹತ್ತಿಕ್ಕುವತ್ತ, ಅವರ ಮನೋಸ್ಥೈರ್ಯ ಕುಗ್ಗಿಸುವತ್ತ ಗಮನ ಹರಿಸಿತು. ಭಂಡಾಟಕ್ಕೆ ಬಿದ್ದು, ಮುಂದೂಡುವ ತಂತ್ರಕ್ಕೆ ತಲೆಬಾಗಿ, ಜವಾಬ್ದಾರಿಯಿಂದ ನುಣುಚಿಕೊಳ್ಳಲು ನೋಡಿತು. ಏಕೆಂದರೆ ರಾಜಕಾರಣಿಗಳ ಮಕ್ಕಳು ಯಾರೂ ನಿರುದ್ಯೋಗಿಗಳಲ್ಲ, ನಿರುದ್ಯೋಗ ಅವರಿಗೆ ಸಮಸ್ಯೆಯೇ ಅಲ್ಲ. ಹಾಗಾಗಿ ಬಡ ಯುವಜನರ ಆತಂಕ, ಹತಾಶೆ ಮತ್ತು ಅನಿಶ್ಚಿತತೆಯ ಆಳ ಮತ್ತು ಅಗಲ ಅರಿಯುವಲ್ಲಿ ಆಳುವ ಸರ್ಕಾರ ವಿಫಲವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

ಇದನ್ನು ಓದಿದ್ದೀರಾ?: ಕೊನೆಯುಸಿರಿನವರೆಗೂ ಸಮಸಮಾಜದ ಹೋರಾಟಕ್ಕೆ ಬದ್ಧರಾಗಿದ್ದ ಆರ್‌ ನಲ್ಲಕಣ್ಣು

ಧಾರವಾಡದದಲ್ಲಿ ಯುವಜನರು ಬೀದಿಗಿಳಿದದ್ದು, ಪ್ರತಿಭಟಿಸಿದ್ದು ಹುದುಗಿಟ್ಟ ಆಕ್ರೋಶದ ಪ್ರತೀಕವಾಗಿತ್ತು. ಆ ಆಕ್ರೋಶಭರಿತ ಪ್ರತಿಭಟನೆಗೆ ಬೆಚ್ಚಿದ ರಾಜ್ಯ ಸರ್ಕಾರ, ‘ಇಂದಿನ ಈ ದುಃಸ್ಥಿತಿಗೆ ಬಿಜೆಪಿ ಸರ್ಕಾರದ ಅವಧಿಯಲ್ಲಾದ ಅಕ್ರಮಗಳು ಮತ್ತು ಭ್ರಷ್ಟಾಚಾರಗಳು ಕಾರಣ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಮಜಾಯಿಷಿ ನೀಡಿದರು.

ಆಳುವ ಸರ್ಕಾರದ ಬಳಿ ಯುವಜನರಿಗೆ ಉದ್ಯೋಗ ಕೊಡದೆ ಇರುವುದಕ್ಕೆ ಹಾಗೂ ವಿಳಂಬವಾಗುತ್ತಿರುವುದಕ್ಕೆ ಕಾರಣಗಳಿರಬಹುದು. ಮೀಸಲಾತಿ ಕಲ್ಪಿಸುವಲ್ಲಿ ಆಗಿರುವ ವಿಳಂಬವನ್ನು; ಹೈಕೋರ್ಟ್ ಮೆಟ್ಟಿಲು ಏರಿರುವುದನ್ನು ಸರ್ಕಾರ ನೆಪವಾಗಿ ಬಳಸಿಕೊಳ್ಳಬಹುದು. ಆದರೆ, ಆ ತೊಡಕುಗಳನ್ನು ನಿವಾರಿಸಲು, ನಿಭಾಯಿಸಲು, ನಿರ್ಧಾರಗಳನ್ನು ಕೈಗೊಳ್ಳಲು ಅಧಿಕಾರ ಎಂಬ ಬ್ರಹ್ಮಾಸ್ತ್ರವಿದೆಯಲ್ಲ? ನೆಪ ಹೇಳುವುದು, ವಿರೋಧ ಪಕ್ಷದ ಮೇಲೆ ಗೂಬೆ ಕೂರಿಸುವುದು ಸರ್ಕಾರಕ್ಕೆ ಶೋಭೆ ತರುವ ಕೆಲಸವಲ್ಲ. ಯುವಜನತೆ ಕೆಲಸವಿಲ್ಲದೆ ಕೈ ಕಟ್ಟಿ ಕೂರುವುದು ಯಾವ ರಾಜ್ಯಕ್ಕೂ, ದೇಶಕ್ಕೂ ಒಳ್ಳೆಯದನ್ನು ಮಾಡುವುದಿಲ್ಲ.

ಭ್ರಷ್ಟ ಬಿಜೆಪಿ ಹೋಗಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೂ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರವು ಉದ್ಯೋಗ ಸೃಷ್ಟಿ ಮತ್ತು ನೇಮಕಾತಿ ಪ್ರಕ್ರಿಯೆ ವೇಗಗೊಳಿಸಲಿಲ್ಲ. ಬದಲಿಗೆ ರಾಜಕೀಯ ಅಸ್ಥಿರತೆ ಮತ್ತು ಅಧಿಕಾರದ ಲೆಕ್ಕಾಚಾರಗಳಲ್ಲಿ ಮುಳುಗೇಳುತ್ತಿದೆ ಎಂದು ಪ್ರತಿಭಟನಾಕಾರರು ಟೀಕಿಸಿರುವುದರಲ್ಲಿ ತಪ್ಪಿಲ್ಲ. ಹಾಗೆಯೇ ಯುವಜನರ ಹೋರಾಟವನ್ನು ತಮ್ಮ ಕ್ಷುಲ್ಲಕ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ನೋಡಿದ ಬಿಜೆಪಿ ನಾಯಕರನ್ನು ವೇದಿಕೆಗೆ ಹತ್ತದಂತೆ ನೋಡಿಕೊಂಡಿರುವುದು, ಅವರ ವಿರುದ್ಧವೂ ಧಿಕ್ಕಾರ ಕೂಗಿ, ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಯಿಂದ ದೂರ ಇಟ್ಟಿರುವುದು ಕೂಡ ಸರಿಯಾಗಿಯೇ ಇದೆ.

ದೇಶ ಜಾಗತೀಕರಣದತ್ತ ಹೊರಳಿದ ನಂತರ, ಸರ್ಕಾರಿ ಹುದ್ದೆಗಳ ಸಂಖ್ಯೆ ಇಳಿಮುಖವಾಗತೊಡಗಿದೆ. ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಇಲ್ಲದಿರುವುದು ನಿರುದ್ಯೋಗ ಸಮಸ್ಯೆ ಉಲ್ಬಣಗೊಳ್ಳುವಂತೆ ಮಾಡಿದೆ. ಸರ್ಕಾರಿ ಹುದ್ದೆಗಳು ಭರ್ತಿಯಾಗದಿರುವುದರ ಹಿಂದೆ ಎಲ್ಲ ಪಕ್ಷಗಳ ಸಂವಿಧಾನ ವಿರೋಧಿ, ಕಾರ್ಪೊರೇಟ್ ಪರ ನೀತಿ ಅಡಗಿದೆ. ಅದಕ್ಕೆ ಪೂರಕವಾಗಿ, 2003ರಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ವಾಜಪೇಯಿಯವರ ನೇತೃತ್ವದ ಬಿಜೆಪಿ ಸರ್ಕಾರ ವಿತ್ತೀಯ ಶಿಸ್ತು ಮತ್ತು ಬಜೆಟ್ ನಿರ್ವಹಣಾ ಕಾಯ್ದೆಯನ್ನು ಜಾರಿಗೆ ತಂದಿದ್ದು, ಬೇಲಿ ಮೇಲೆ ಕೂತ ಸರ್ಕಾರಗಳಿಗೆ ಅನುಕೂಲವಾಗಿದೆ. ಆ ಕಾಯ್ದೆ ಸರ್ಕಾರಿ ಹುದ್ದೆಗಳನ್ನು ಹಂತ ಹಂತವಾಗಿ ಕಡಿಮೆ ಮಾಡುತ್ತಾ ಸರ್ಕಾರಿ ವೆಚ್ಚವನ್ನು ಕಡಿಮೆ ಮಾಡಿಕೊಳ್ಳುವುದನ್ನು ಹೇಳುತ್ತದೆ.

ಕೇಂದ್ರ ಸರ್ಕಾರದ ಈ ವಿತ್ತೀಯ ಶಿಸ್ತಿನ ನೆಪವೇ ರಾಜ್ಯ ಸರ್ಕಾರಗಳಿಗೆ ಅಸ್ತ್ರವಾಗಿದೆ. ಸರ್ಕಾರಿ ನೇಮಕಾತಿಗಳನ್ನು ತಡೆಹಿಡಿದು, ಅರೆ ಕಾಲಿಕ ಅಥವಾ ಹೊರಗುತ್ತಿಗೆ ನೇಮಕಾತಿಗಳಿಗೆ ಹೆಚ್ಚಿನ ಒತ್ತು ನೀಡುತ್ತಾ ಬರತೊಡಗಿದೆ. ನಡುವೆ ಕಣ್ಣೊರೆಸುವ ತಂತ್ರವಾಗಿ ಲೋಕಸೇವಾ ಆಯೋಗ(ಕೆಪಿಎಸ್‌ಸಿ) ಕಡೆಯಿಂದ ಕೆಲ ಹುದ್ದೆಗಳನ್ನು ತುಂಬತೊಡಗಿದೆ. ಆದರೆ ಆ ಭ್ರಷ್ಟ, ಜಾತಿಕೂಪ ಕೆಪಿಎಸ್‌ಸಿಯಿಂದ ಕೆಲಸ ಗಿಟ್ಟಿಸುವುದು, ಆದೇಶಪತ್ರ ಪಡೆಯುವುದು ಪಾತಾಳ ಮುಟ್ಟಿಬಂದರೂ ಸಿಗದಾಗಿದೆ. ನ್ಯಾಯಾಲಯ, ಕಾನೂನು ಮತ್ತು ಸರಕಾರದ ಭಯವೇ ಇಲ್ಲದ ಆ ನಿಷ್ಕ್ರಿಯ ಸಂಸ್ಥೆಯನ್ನು ಶಾಶ್ವತವಾಗಿ ಮುಚ್ಚುವುದೇ ಉತ್ತಮವೆಂಬುದು ಎಲ್ಲರ ಅಭಿಮತವಾಗಿದೆ.

ಸೋಜಿಗದ ಸಂಗತಿ ಎಂದರೆ, ಸಿದ್ದರಾಮಯ್ಯನವರ ಸರ್ಕಾರ ವಿತ್ತೀಯ ಶಿಸ್ತಿನ ನೆಪದಲ್ಲಿ ಉದ್ಯೋಗಾಕಾಂಕ್ಷಿಗಳ ಸರ್ಕಾರಿ ನೇಮಕಾತಿಗಳಿಗೆ ಕೊಕ್ಕೆ ಹಾಕಿತು. ಆದರೆ, ಪಕ್ಷದ ಶಾಸಕರು ಮತ್ತು ಕಾರ್ಯಕರ್ತರನ್ನು ಸಂತುಷ್ಟರನ್ನಾಗಿಸಲು, ಅನಗತ್ಯವಾಗಿ ಸಂಪುಟದರ್ಜೆ ಹುದ್ದೆಗಳನ್ನು ಸೃಷ್ಟಿಸಿತು. ನಿಗಮಮಂಡಳಿ ಅಧ್ಯಕ್ಷರಿಗೆ ರಾಜ್ಯ ಸಂಪುಟದರ್ಜೆ ಸ್ಥಾನಮಾನ ನೀಡಿತು. ಸದ್ಯ 55 ಜನಕ್ಕೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ನೀಡಿ ಆದೇಶ ಮಾಡಿರುವ ಸರ್ಕಾರ; ವೇತನ, ಆತಿಥ್ಯ ಭತ್ಯೆ, ನಿವಾಸ ಬಾಡಿಗೆ, ಪೆಟ್ರೋಲ್, ಸಿಬ್ಬಂದಿ ಸಂಬಳವೆಂದು ವಾರ್ಷಿಕವಾಗಿ ಅಂದಾಜು 22 ಕೋಟಿ ರೂ.ಗಳನ್ನು ವ್ಯಯಿಸುತ್ತಿದೆ.

ರಾಜ್ಯ ಸರ್ಕಾರದ ಈ ದುಂದುವೆಚ್ಚವನ್ನು ಬಲ್ಲ ಜೆಡಿಎಸ್ ಮುಖಂಡ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಯವರು, ‘ರಾಜ್ಯದಲ್ಲಿ 2.94 ಲಕ್ಷ ಸರಕಾರಿ ಹುದ್ದೆಗಳು ಖಾಲಿ ಬಿದ್ದಿವೆ. ಸಂಪುಟದರ್ಜೆ ಹುದ್ದೆಗಳು ಮಾತ್ರ ಸೂಪರ್ ಫಾಸ್ಟ್ ಆಗಿ ಭರ್ತಿ ಆಗುತ್ತಿವೆ. ಕಾಂಗ್ರೆಸ್ ಸರ್ಕಾರದ ಆದ್ಯತೆ ಏನು ಎಂಬುದು ಅರ್ಥವಾಗುತ್ತದೆ’ ಎಂದು ವ್ಯಂಗ್ಯವಾಡಿದ್ದಾರೆ. ಮುಂದುವರೆದು, ‘ಬೆಂಗಳೂರು ನಗರದ 18 ಆಯಕಟ್ಟಿನ ಪೊಲೀಸ್ ಠಾಣೆಗಳಲ್ಲಿ ಇನ್‌ಸ್ಪೆಕ್ಟರ್‍‌ಗಳೇ ಇಲ್ಲ. ವರ್ಗಾವಣೆ ದಂಧೆಯಲ್ಲಿ ಸರಕಾರ ಮುಳುಗಿದ್ದರ ಪರಿಣಾಮವಿದು’ ಎಂದು, ವರ್ಗಾವಣೆಯ ಕರಾಳ ರೂಪವನ್ನೂ ತೆರೆದಿಟ್ಟಿದ್ದಾರೆ.

ಇದನ್ನು ಓದಿದ್ದೀರಾ?: ಬೆತ್ತಲಾಗಿದ್ದ ಬಿಜೆಪಿಯನ್ನು ಕಾಪಾಡಿದರೇ ಕಾಂಗ್ರೆಸ್ ಕಾರ್ಯಕರ್ತರು?

ಇದಕ್ಕೆ ಪೂರಕವಾಗಿ ಸರ್ಕಾರವೇ ನೇಮಿಸಿದ ಆರ್.ವಿ. ದೇಶಪಾಂಡೆ ಅವರ ಅಧ್ಯಕ್ಷತೆಯ ಕರ್ನಾಟಕ ಆಡಳಿತ ಸುಧಾರಣೆ ಆಯೋಗ, ರಾಜ್ಯದಲ್ಲಿ 7 ಲಕ್ಷ ನಿರುದ್ಯೋಗಿಗಳಿದ್ದಾರೆ ಎಂದು ವರದಿ ನೀಡಿದೆ. ಈ ನಿರುದ್ಯೋಗಿಗಳು ಸರಕಾರಿ ಹುದ್ದೆಗಳ ನಿರೀಕ್ಷೆಯಲ್ಲಿದ್ದು, ಖಾಲಿ ಹುದ್ದೆಗಳನ್ನು ಸರಕಾರ ಹಂತ ಹಂತವಾಗಿ ಭರ್ತಿ ಮಾಡಬೇಕಿತ್ತು. ಆದರೆ ಕುರ್ಚಿ ಕಿತ್ತಾಟದಲ್ಲಿ ಕಾಂಗ್ರೆಸ್ ನಾಯಕರು ಅಮೂಲ್ಯವಾದ 3 ವರ್ಷಗಳನ್ನು ಪೋಲು ಮಾಡಿದ್ದಾರೆ. ಈಗಲಾದರೂ ಆಡಳಿತಗಾರರು ಎಚ್ಚೆತ್ತು ಬಜೆಟ್ಟಿನಲ್ಲಿ ಪ್ರತ್ಯೇಕ ಹಣ ಇರಿಸಿ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಬೇಕಿದೆ.

ನಿರುದ್ಯೋಗ ಎನ್ನುವುದು ಸರಳ ಸಮಸ್ಯೆ ಅಲ್ಲ. ಅದು ಸದಾ ಕುದಿಯುವ ಜ್ವಾಲಾಮುಖಿ. ಧಾರವಾಡದ ನಿರುದ್ಯೋಗಿ ಯುವಜನರು ಶ್ರೀಮಂತರ ಮಕ್ಕಳಲ್ಲ, ಬಡವರ ಮಕ್ಕಳು. ಅವರ ಕಷ್ಟ, ಸಂಕಟ, ಹತಾಶೆ ಈಗ ಸ್ಫೋಟಗೊಂಡಿದೆ. ನಾಗರಿಕ ಸಮಾಜ ಅವರ ಬೆಂಬಲಕ್ಕೆ ನಿಲ್ಲಬೇಕಿದೆ. ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ, ಯುವಜನರ ಕೈಗೆ ಕೆಲಸ ಕೊಡದಿದ್ದರೆ ಬದ್ಧತೆ, ಸಮಾನತೆ, ಸ್ವಾವಲಂಬಿ ಪದಗಳು ಅರ್ಥ ಕಳೆದುಕೊಳ್ಳುತ್ತವೆ. ಅವುಗಳನ್ನಾಡುವ ನಾಯಕರು ನಗಣ್ಯರಾಗುತ್ತಾರೆ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಗ್ಯಾನೇಶ್ ರಕ್ಷಣೆಗಾಗಿ ಯುವತಿಯರನ್ನು ಪೀಡಿಸುವ ಕೀಚಕರಾಗುತ್ತಿದ್ದಾರೆಯೇ ದೆಹಲಿ ಪೊಲೀಸರು?

ರಕ್ಷಕರೇ ಭಕ್ಷಕರಾಗುವ ಅದೇ ಹಳೆಯ ನಿರಾಶಾಜನಕ ಕತೆಯಿದು. ದೆಹಲಿ ಪ್ರತಿಭಟನೆಯಲ್ಲಿ ಪೊಲೀಸರ...

ಈ ದಿನ ಸಂಪಾದಕೀಯ | ಸಂಸದೀಯ ಸಮಿತಿ ಸಭೆಯಿಂದ ಸುಪ್ರೀಂ ಕೋರ್ಟ್‌ ಹಿಂದೆ ಸರಿದದ್ದು ಸ್ವಾಗತಾರ್ಹ!

ಸಂವಿಧಾನದ 143ನೇ ವಿಧಿಯಡಿ ಸಂಸದೀಯ ಸಮಿತಿಯು ಮಹತ್ವದ ಕಾನೂನು ರೂಪಿಸುವಾಗ, ಸುಪ್ರೀಂ...

ಈ ದಿನ ಸಂಪಾದಕೀಯ | ಡಿಕೆಶಿ ಪ್ರತಿರೋಧಕ್ಕೆ ಮಣಿದ ಚುನಾವಣಾ ಆಯೋಗ; ಈವರೆಗಿನ ಅಕ್ರಮಗಳಿಗೆ ಹೊಣೆ ಯಾರು?

ಕರ್ನಾಟಕದಲ್ಲಿ ಎಸ್‌ಐಆರ್‌ ಆರಂಭವಾಗುವ ಮೊದಲೇ ನಾಗರಿಕ ಸಂಘಟನೆಗಳು ಕಾಂಗ್ರೆಸ್‌ ಗೆ ಎಸ್‌ಐಆರ್‌...

ಈ ದಿನ ಸಂಪಾದಕೀಯ | ದೇಶಕ್ಕೆ ಆರ್ಥಿಕ ಬಿಕ್ಕಟ್ಟು ಎದುರಾಗಲಿದೆಯೇ, ನಾಯಕರ ಮಾತು ಎಚ್ಚರಿಕೆಯ ಗಂಟೆಯೇ?

ವಿದೇಶಾಂಗ ನೀತಿ ಗೊತ್ತಿಲ್ಲದ ಜೈಶಂಕರ್‌, ಬಡವರು ಹೇಗೆ ಬದುಕುತ್ತಿದ್ದಾರೆ ಎಂದು ಅರಿಯದ...