ರಾಜಕೀಯ ಸತ್ ಪರಂಪರೆಯ ರಾಜ್ಯದಲ್ಲಿ ನಡೆಯಬೇಕಿದೆ ಮುಕ್ತ, ನ್ಯಾಯಸಮ್ಮತ ಚುನಾವಣೆ

Date:

ಕರ್ನಾಟಕದ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆ ಆಗಿದೆ. ಅದರ ಬೆನ್ನಲ್ಲೇ ರಾಜಕೀಯ ಪಕ್ಷಗಳಲ್ಲಿ, ಕಾರ್ಯಕರ್ತರಲ್ಲಿ ಜೀವ ಸಂಚಾರವಾಗಿ ಚಟುವಟಿಕೆಗಳು ವೇಗ ಪಡೆದುಕೊಂಡಿವೆ.

ಒಂದು ಕಾಲವಿತ್ತು; ಜನರ ಕೆಲಸ ಮಾಡುವವರು, ದೇಶಕ್ಕಾಗಿ, ರಾಜ್ಯಕ್ಕಾಗಿ ದುಡಿದವರು ಚುನಾವಣೆಗಳಲ್ಲಿ ಉಮೇದುವಾರರಾಗುತ್ತಿದ್ದರು. ಪಕ್ಷಗಳೂ ಕೂಡ ಅಂಥವರನ್ನೇ ಹುಡುಕಿ ಟಿಕೆಟ್ ಕೊಡುತ್ತಿದ್ದವು. ಆದರೆ, ಈಗ ಪರಿಸ್ಥಿತಿ ತಿರುಗುಮುರುಗಾಗಿದೆ. ಕೋಟಿ ಕೋಟಿ ಖರ್ಚು ಮಾಡಬಲ್ಲವರು, ರೌಡಿಗಳು, ಯಾವ ಮಾರ್ಗದಲ್ಲಾದರೂ ಸರಿ ಗೆಲ್ಲಬಲ್ಲವರಿಗೆ ಆದ್ಯತೆ ನೀಡಲಾಗುತ್ತಿದೆ. ಹಿಂದುಳಿದ ಬಾಗೇಪಲ್ಲಿ, ಗೌರಿಬಿದನೂರಿನಂಥ ಗಡಿಭಾಗದ ತಾಲ್ಲೂಕುಗಳಲ್ಲಿ 100 ಕೋಟಿ ಖರ್ಚು ಮಾಡಬಲ್ಲ ಅಭ್ಯರ್ಥಿಗಳಿದ್ದಾರೆ ಎಂದರೆ, ಪ್ರಭಾವಿಗಳ, ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಸ್ಥಿತಿ ಹೇಗಿರಬಹುದು ಎಂದು ಗಾಬರಿಯಾಗುತ್ತದೆ.

ದೇಶಭಕ್ತರ ಪಕ್ಷ, ಶಿಸ್ತಿನ ಪಕ್ಷ ಎಂದು ಸ್ವಯಂಘೋಷಣೆ ಮಾಡಿಕೊಳ್ಳುವ ಬಿಜೆಪಿ ಕೂಡ ಇದಕ್ಕೆ ಹೊರತಲ್ಲ. ವಾಸ್ತವವಾಗಿ, ಬಿಜೆಪಿ ಉಳಿದ ಪಕ್ಷಗಳಿಗಿಂತ ಈ ವಿಚಾರದಲ್ಲಿ ಮುಂದಿದೆ. ಮತ ಗಳಿಕೆಗಾಗಿ ದ್ವೇಷ ಭಾಷಣ, ಪರ ಧರ್ಮ ನಿಂದನೆ, ಜನಸಮುದಾಯದಲ್ಲಿ ಕಲಹ ಬಿತ್ತಿ ಒಡಕು ಸೃಷ್ಟಿಸುವ ಕೆಲಸವೂ ಸೇರಿದಂತೆ ಮತಕ್ಕಾಗಿ ಹಣ ವ್ಯಯಿಸುವಂಥ ಅಪ್ರಜಾತಾಂತ್ರಿಕ ಕ್ರಿಯೆಗಳಲ್ಲಿ ಬಿಜೆಪಿ ಇತರೆಲ್ಲ ಪಕ್ಷಗಳನ್ನು ಹಿಂದಿಕ್ಕಿದೆ.

ದೇಶದ ರಕ್ಷಣೆ, ಮಿಲಿಟರಿ, ಧರ್ಮಗಳು, ಪೂಜಾ ಸ್ಥಳಗಳು ಎಲ್ಲವೂ ಚುನಾವಣೆಯ ಸರಕಾಗಲಿವೆ. ಇಂಥ ಪ್ರವೃತ್ತಿಗಳಿಗೆ ಕಡಿವಾಣ ಹಾಕಲೆಂದೇ ಟಿ ಎನ್ ಶೇಷನ್ ಅವರ ಕಾಲದಲ್ಲಿ ಭಾರತ ಚುನಾವಣಾ ಆಯೋಗ ಮಾದರಿ ನೀತಿ ಸಂಹಿತೆಯೊಂದನ್ನು ಜಾರಿಗೆ ತಂದಿತ್ತು. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ತೊಡಕಾಗಿದ್ದ ಅಂಶಗಳನ್ನು ನಿವಾರಿಸುವ ನಿಟ್ಟಿನಲ್ಲಿ ಅದು ಒಂದು ಹಂತಕ್ಕೆ ಯಶಸ್ವಿಯೂ ಆಗಿತ್ತು. ಆದರೆ, 2014ರಿಂದ ಈಚೆಗೆ ದೇಶದ ಅನೇಕ ಸಾಂವಿಧಾನಿಕ ಸಂಸ್ಥೆಗಳ ಸ್ವಾಯತ್ತತೆ ಮತ್ತು ವಿಶ್ವಾಸಾರ್ಹತೆಗೆ ಭಂಗ ಬಂದಂತೆ ಭಾರತ ಚುನಾವಣಾ ಆಯೋಗದ ವಿಶ್ವಾಸಾರ್ಹತೆಯೂ ಮುಕ್ಕಾಗಿದೆ.  

ನಿಷ್ಪಕ್ಷಪಾತವಾಗಿ ಚುನಾವಣೆಗಳನ್ನು ನಡೆಸುವುದು ಭಾರತದ ಚುನಾವಣಾ ಆಯೋಗದ ಜವಾಬ್ದಾರಿ. ಆದರೆ, ಹಾಗಾಗುತ್ತಿಲ್ಲ; ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರ ವಿರುದ್ಧವೂ ಚುನಾವಣಾ ಆಯೋಗದಲ್ಲಿ ದೂರುಗಳು ದಾಖಲಾಗಿದ್ದವು. ಈ ಪ್ರಕರಣಗಳಲ್ಲಿ ಗುರುತರ ಆಪಾದನೆಗಳ ಹೊರತಾಗಿಯೂ ಮೋದಿ ಮತ್ತು ಅಮಿತ್ ಶಾ ಅವರಿಗೆ ಆಯೋಗ ಕ್ಲೀನ್ ಚಿಟ್ ನೀಡಿತ್ತು. ಅದರ ಬಗ್ಗೆ ಚುನಾವಣಾ ಆಯುಕ್ತರಾಗಿದ್ದ ಅಶೋಕ್ ಲಾವಸ ಭಿನ್ನಮತ ಪ್ರಕಟಿಸಿದ್ದರು. ಕನಿಷ್ಠ ಮೋದಿ ಅವರಿಗೆ ನೋಟಿಸ್ ನೀಡಬೇಕೆಂಬುದು ಅಶೋಕ್ ಲಾವಸ ಅವರ ಅಭಿಪ್ರಾಯವಾಗಿತ್ತು. ಇದರ ಬೆನ್ನಲ್ಲೇ ಅಶೋಕ್ ಲಾವಸ ಅವರ ಹೆಂಡತಿ ಮತ್ತು ಮಗನ ಮೇಲೆ ಆದಾಯ ತೆರಿಗೆ ದಾಳಿ ನಡೆಯಿತು. ಇದರಿಂದ ನೊಂದ ಅಶೋಕ್ ಲಾವಸ ಚುನಾವಣಾ ಆಯುಕ್ತರ ಹುದ್ದೆಗೆ ರಾಜೀನಾಮೆ ನೀಡಿದರು. ಇದಲ್ಲದೇ ಒಡಿಶಾ, ಗುಜರಾತ್ ರಾಜ್ಯಗಳ ಚುನಾವಣೆಗಳನ್ನು ಅನಗತ್ಯವಾಗಿ ಹಲವು ಹಂತಗಳಲ್ಲಿ ನಡೆಸಿದ ರೀತಿಯ ಬಗೆಗೂ ಆಕ್ಷೇಪಣೆಗಳು, ಅನುಮಾನಗಳು ವ್ಯಕ್ತವಾದವು. ಟಿ ಎನ್ ಶೇಷನ್ ಅವರ ಕಾಲದಲ್ಲಿ ಆಯೋಗ ಗಳಿಸಿದ್ದ ಘನತೆ, ಜನರ ನಂಬಿಕೆ ಮಣ್ಣು ಪಾಲಾಗಿದೆ; ‘ಮಾದರಿ ನೀತಿ ಸಂಹಿತೆ’ಯ ಜಾಗದಲ್ಲಿ ‘ಮೋದಿ ಅನೀತಿ ಸಂಹಿತೆ’ ಜಾರಿಗೆ ತರಲಾಗಿದೆ ಎನ್ನುವ ಟೀಕೆ ವ್ಯಕ್ತವಾಯಿತು.  

ಇನ್ನು ಚುಣಾವಣೆಯಲ್ಲಿ ಹಣ ಚೆಲ್ಲುವ ರೀತಿಯನ್ನು ನೋಡಿದರೆ, ಭಾರತದಲ್ಲಿ ಪ್ರಜಾತಂತ್ರ ಉಳಿದಿದೆಯೇ ಎನ್ನುವ ಅನುಮಾನ ಬರುತ್ತದೆ. ಈ ವಿಚಾರದಲ್ಲಿಯೂ ಬಿಜೆಪಿಯೇ ಮುಂದಿರುವುದು ಅಂಕಿ ಅಂಶಗಳಿಂದ ಸಾಬೀತಾಗಿದೆ. ಆರ್‌ಬಿಐ ಮತ್ತು ಚುನಾವಣಾ ಆಯೋಗದ ವಿರೋಧದ ನಡುವೆಯೂ 2017ರಲ್ಲಿ ಮೋದಿ ಸರ್ಕಾರ ಕಾಯ್ದೆಗೆ ತಿದ್ದುಪಡಿ ತಂದು ಚುನಾವಣಾ ದೇಣಿಗೆಗಳ ಮೂಲವನ್ನು ಗುಪ್ತವಾಗಿಡಲು ಅನುವು ಮಾಡಿಕೊಟ್ಟಿತು. ಅದಾದ ನಂತರ ಕೇವಲ ಐದು ವರ್ಷಗಳಲ್ಲಿ, ಅಂದರೆ 2018ರಿಂದ 2022ರೊಳಗೆ, ಬಿಜೆಪಿ ಚುನಾವಣಾ ಬಾಂಡ್‌ಗಳ ಮೂಲಕ 5,270 ಕೋಟಿ ರೂಪಾಯಿ ಸಂಗ್ರಹಿಸಿತ್ತು. ಚುನಾವಣಾ ಬಾಂಡ್‌ಗಳ ಮೂಲಕ ಒಟ್ಟು ಸಂಗ್ರಹವಾದ ಹಣದಲ್ಲಿ ಬಿಜೆಪಿಯೇ ಶೇ.57 ಪಡೆದಿತ್ತು. ಇದರ ಪರಿಣಾಮ 2019ರ ಲೋಕಸಭಾ ಚುನಾವಣೆಯಲ್ಲಿ ಕಾಣಿಸಿಕೊಂಡಿತು. ಆ ವರ್ಷ ನಡೆದ ಲೋಕಸಭಾ ಚುನಾವಣೆ ಜಗತ್ತಿನಲ್ಲೇ ಅತಿ ದುಬಾರಿ ಚುನಾವಣೆ ಎನ್ನುವ ಅಪಖ್ಯಾತಿ ಪಡೆಯಿತು. 2019ರ ಲೋಕಸಭಾ ಚುನಾವಣೆಯಲ್ಲಿ ಒಟ್ಟು 60,000 ಕೋಟಿ ರೂಪಾಯಿ ವ್ಯಯಿಸಲಾಗಿತ್ತು. ಅದರಲ್ಲಿ ಬಿಜೆಪಿ ಪಾಲು 27,000 ಕೋಟಿ ರೂಪಾಯಿ; ಅಂದರೆ, ಒಟ್ಟು ವೆಚ್ಚದಲ್ಲಿ ಶೇ.45ರಷ್ಟು ಹಣವನ್ನು ಬಿಜೆಪಿಯೇ ವ್ಯಯಿಸಿತ್ತು. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 303 ಸ್ಥಾನಗಳನ್ನು ಗೆದ್ದಿತ್ತು. ಅಂದರೆ, ಒಬ್ಬೊಬ್ಬ ಸಂಸದನಿಗೆ ಬಿಜೆಪಿ ಖರ್ಚು ಮಾಡಿದ್ದ ಹಣ ಬರೋಬ್ಬರಿ 89 ಕೋಟಿ ರೂಪಾಯಿ.

ಇವಿಷ್ಟೇ ಅಲ್ಲ; ನೀತಿ ಸಂಹಿತೆ ಉಲ್ಲಂಘಿಸಿ ನಮೋ ಟಿವಿ ಆರಂಭಕ್ಕೆ ಅವಕಾಶ ನೀಡಿದ್ದ ಭಾರತ ಚುನಾವಣಾ ಆಯೋಗದ ಬಗ್ಗೆಯೂ ತೀವ್ರ ಆಕ್ಷೇಪಣೆಗಳು ವ್ಯಕ್ತವಾಗಿದ್ದವು. ಬಿಜೆಪಿಯೂ ಸೇರಿದಂತೆ ಬಹುತೇಕ ಎಲ್ಲ ಪ್ರಮುಖ ರಾಜಕೀಯ ಪಕ್ಷಗಳೂ ಚುನಾವಣೆಯ ಕಾಲದಲ್ಲಿ ಇಂಥ ನಾನಾ ಆಸೆ, ಆಮಿಷ, ಅಪಮಾರ್ಗಗಳ ಮೂಲಕ ಮತದಾರರನ್ನು ಸೆಳೆಯುವ, ಪ್ರಜಾತಂತ್ರವನ್ನು ಅಣಕಿಸುವ ಕ್ರಿಯೆಗಳಲ್ಲಿ ತೊಡಗುತ್ತವೆ.

ಕರ್ನಾಟಕ ರಾಜಕೀಯ ಸತ್ ಪರಂಪರೆಗೆ ಹೆಸರಾದ ರಾಜ್ಯ. ಮತದಾರರಿಂದಲೇ ಒಂದೊಂದು ರೂಪಾಯಿ ಹಣ ಪಡೆದು ಚುನಾವಣೆ ಗೆದ್ದ ಶಾಂತವೇರಿ ಗೋಪಾಲಗೌಡರಿಂದ ಹಿಡಿದು ಪ್ರಜಾತಂತ್ರಕ್ಕೆ ಹೊಸ ವ್ಯಾಖ್ಯಾನ ನೀಡಿದ ದೇವರಾಜ ಅರಸುರಂಥವರವರೆಗೆ ಅನೇಕ ಮುತ್ಸದ್ದಿಗಳು, ಮುಖಂಡರು ಆಗಿಹೋದ ರಾಜ್ಯ. ಇಂಥ ರಾಜ್ಯದಲ್ಲಿ ಮೋದಿ ಮಹಿಮೆಯ ಹೆಸರಿನಲ್ಲಿ ಹಣದ ಮಹಿಮೆ ನಡೆಯಕೂಡದು. ಇವಿಎಂ ದುರ್ಬಳಕೆ ಆಗಕೂಡದು. ಮುಕ್ತ, ನ್ಯಾಯಸಮ್ಮತ ಚುನಾವಣೆ ನಡೆಯಬೇಕು. ಚುನಾವಣಾ ಆಯೋಗ, ಮಾಧ್ಯಮಗಳು, ಪ್ರಜ್ಞಾವಂತ ನಾಗರಿಕ ಸಂಘಟನೆಗಳು ಇದನ್ನು ಆಗುಮಾಡಬೇಕಿದೆ.                                                     

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಬ್ರ್ಯಾಂಡ್ ಬೆಂಗಳೂರಿನಲ್ಲಿ ಬಡವರ ಪ್ರಾಣಕ್ಕೆ ಗ್ಯಾರಂಟಿಯಿಲ್ಲ

ಸರ್ಕಾರದ ಕೋಟಿ ಕೋಟಿ ಅನುದಾನ ನೀಡಿ ಬೆಂಗಳೂರು ಹಬ್ಬಗಳಂಥ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುವ...

ಈ ದಿನ ಸಂಪಾದಕೀಯ | ಕೇಂದ್ರದ ಏಜೆಂಟರಾಗಿರುವ ರಾಜ್ಯಪಾಲರುಗಳಿಗೆ ಸುಪ್ರೀಮ್ ಚಾವಟಿ!

ಇಂದಿರಾಗಾಂಧೀ ಕಾಲದಲ್ಲೂ ಹೀಗೆಯೇ ರಾಜ್ಯಪಾಲರನ್ನು ಬಳಸಿಕೊಳ್ಳಲಾಗುತ್ತಿತ್ತು ಎಂಬ ವಾದ ಮುಂದೆ ಮಾಡಬಹುದು....

ಈ ದಿನ ಸಂಪಾದಕೀಯ | ಸರ್ಕಾರದ ಆರು ತಿಂಗಳ ‘ಅನನ್ಯ ಸಾಧನೆ’ ಮತ್ತು ವಿರೋಧ ಪಕ್ಷಗಳ ‘ಜವಾಬ್ದಾರಿ’

ಸರ್ಕಾರ ಆರು ತಿಂಗಳು ಮುಗಿಸಿ, ತನ್ನದು ಅನನ್ಯ ಸಾಧನೆ ಎಂದು ಬಣ್ಣಿಸಿಕೊಳ್ಳುತ್ತಿದೆ....

ಈ ದಿನ ಸಂಪಾದಕೀಯ | ಪ್ರಬಲ ಜಾತಿಗಳ ಜೋಡೆತ್ತುಗಳು, ಬಿಜೆಪಿಗರಿಗೇ ಬೇಡವಾಗಿದ್ದೇಕೆ?

ಅಪ್ಪನ ಆಸ್ಥಾನವನ್ನೇ ಆಕ್ರಮಿಸಿಕೊಂಡು ಅಟ್ಟಹಾಸ ಮೆರೆದ ವಿಜಯೇಂದ್ರ, ತಮ್ಮ ರಾಜಕಾರಣದುದ್ದಕ್ಕೂ ಹೊಂದಾಣಿಕೆಯಲ್ಲಿಯೇ...