ಈ ದಿನ ಸಂಪಾದಕೀಯ | ಬಿಜೆಪಿಯ ಹಸ್ತಗಳಿಗೆ ಮೆತ್ತಿದೆ ಇದ್ರೀಸ್ ನೆತ್ತರು

Date:

ಕೋಮುದ್ವೇಷದ ಹುಲಿಸವಾರಿ ಮಾಡುವವರು ಅರಿಯಬೇಕು. ಮುಂದೊಂದು ದಿನ ಸವಾರಿ ಮಾಡಿದವರೇ ಹುಲಿ ಬಾಯಿಗೆ ಆಹಾರ ಆದಾರು. ಅಸಂಭವವೇನಲ್ಲ.

ಜಾನುವಾರು ವ್ಯಾಪಾರ ಮತ್ತು ಸಾಗಣೆ ನಿರತ ಅಲ್ಪಸಂಖ್ಯಾತರು ದೊಂಬಿಹತ್ಯೆಯು ಮುಖ್ಯವಾಗಿ ಉತ್ತರ ಭಾರತದ ಪಿಡುಗು. ಕರ್ನಾಟಕದಲ್ಲಿ ಅದರಲ್ಲೂ ವಿಶೇಷವಾಗಿ ಕರಾವಳಿ ಸೀಮೆಯಲ್ಲಿ ಈ ಹಿಂದೆ ಮಾರಣಾಂತಿಕ ಹಲ್ಲೆಗಳು ನಡೆದಿರುವುದು ಉಂಟು. ಬೆತ್ತಲೆ ಮಾಡಿ ಥಳಿಸಿ ಅವಮಾನ ಮಾಡಿರುವುದೂ ಉಂಟು. ಆದರೆ ಹತ್ಯೆಯ ಹಂತ ತಲುಪಿದ್ದು ಇದೇ ಮೊದಲು. ತಮ್ಮನ್ನು ಗೋರಕ್ಷಕರೆಂದು ಕರೆದುಕೊಳ್ಳುವ ಗುಂಪುಗಳ ಪುಂಡಾಟಿಕೆಯು ಕೊಲೆಗಡುಕ ಸ್ವರೂಪ ಧರಿಸಿದೆ. ಜಾನುವಾರು ಸಾಗಿಸುತ್ತಿದ್ದ ಟ್ರಕ್ ವೊಂದರ ಚಾಲಕ ಇದ್ರೀಸ್ ಪಾಷಾನನ್ನು ಭಗವಾಧಾರಿ ಬಲಪಂಥೀಯ ಕಾರ್ಯಕರ್ತರು ಶನಿವಾರ ಬೆಳಗಿನ ಜಾವ ಸಾತನೂರು ಸಮೀಪ ಚಿತ್ರಹಿಂಸೆ ನೀಡಿ ಬಡಿದು ಕೊಂದಿರುವ ಪ್ರಕರಣ ವರದಿಯಾಗಿದೆ. ರಾಷ್ಟ್ರರಕ್ಷಣಾ ಪಡೆಯ ಮುಖ್ಯಸ್ಥ ತಾನೆಂದು ಹೇಳಿಕೊಳ್ಳುವ ಪುನೀತ್ ಕೆರೆಹಳ್ಳಿ ಎಂಬಾತ ಬೆದರಿಕೆ ಹಾಕುತ್ತಿರುವ ವಿಡಿಯೋಗಳು ಹೊರಬಿದ್ದಿವೆ. ಕೆರೆಹಳ್ಳಿ ಸಂಗಾತಿಗಳು ಕಟಕಟೆಯಲ್ಲಿ ನಿಂತಿದ್ದಾರೆ. ಆದರೆ ಈ ಹತ್ಯೆಯ ವಾತಾವರಣವನ್ನು ವರ್ಷಗಳಿಂದ ಬೆಳೆಸಿಕೊಂಡು ಬಂದದ್ದು ಭಾರತೀಯ ಜನತಾ ಪಾರ್ಟಿ ಮತ್ತು ಅದರ ಸರ್ಕಾರ. ಹೀಗಾಗಿ ಇದ್ರೀಸ್ ಹತ್ಯೆಯ ಹೊಣೆಯನ್ನು ಆಳುವ ಪಕ್ಷವೇ ಹೊರಬೇಕು.

ತನ್ನ ಫ್ರಿಜ್ ನಲ್ಲಿ ಗೋಮಾಂಸ ಇಟ್ಟಿದ್ದನೆಂಬ ಅನುಮಾನದ ಮೇಲೆ ಉತ್ತರಪ್ರದೇಶದ ದಾದ್ರಿಯ ಮಹಮ್ಮದ್ ಅಖ್ಲಾಕ್ ನನ್ನೂ, ದನಗಳನ್ನು ಸಾಗಿಸುತ್ತಿದ್ದನೆಂದು ರಾಜಸ್ತಾನದ ಪೆಹಲೂಖಾನ್ ನನ್ನೂ ದೊಂಬಿ ಹತ್ಯೆಗಳಲ್ಲಿ ಹೊಸಕಿ ಹಾಕಲಾಯಿತು. ಮಧ್ಯಪ್ರದೇಶದ ಸಿವನಿಯಲ್ಲಿ ಇಬ್ಬರು ಆದಿವಾಸಿಗಳನ್ನೂ ಇದೇ ಕಾರಣಕ್ಕಾಗಿ ಬಡಿದು ಕೊಲ್ಲಲಾಯಿತು. ಈ ಪ್ರಕಾರದ ಘಟನೆಗಳು ಮತ್ತೆ ಮತ್ತೆ ಜರುಗಿರುವುದು ಬಿಜೆಪಿ ಶಾಸಿತ ರಾಜ್ಯಗಳಲ್ಲಿ ಎಂಬುದು ಗಮನಾರ್ಹ. ತಪ್ಪಿತಸ್ಥರನ್ನು ಕಾನೂನಿನ ಕುಣಿಕೆಗೆ ಸಿಗಿಸಲು ಬಿಜೆಪಿ ಸರ್ಕಾರಗಳು ಉತ್ಸುಕವಾಗಿಲ್ಲ. ಪೆಹಲೂಖಾನ್ ಹಂತಕರು ಯಾವ ಶಿಕ್ಷೆಯೂ ಇಲ್ಲದೆ ಖುಲಾಸೆಯಾದರು. ಅಖ್ಲಾಕ್ ಹಂತಕ ಸತ್ತಾಗ ಅವನ ಅಂತ್ಯಕ್ರಿಯೆ ಸರ್ಕಾರಿ ಗೌರವಗಳೊಂದಿಗೆ ಜರುಗಿತು. ಆಳುವ ಸರ್ಕಾರಗಳ ಮರ್ಜಿ ಕಾಯುವ ಪೊಲೀಸರು ಈ ಹಲ್ಲೆ- ಹತ್ಯೆಗಳ ಕುರಿತು ಕಿವುಡು-ಕುರುಡುತನ ನಟಿಸಿದ್ದಾರೆ. ಸರ್ಕಾರಗಳು ಮತ್ತು ಪೊಲೀಸರು ಕೂಡಿಯೇ ದೊಂಬಿ ಹಂತಕರ ಭಂಡ ಧೈರ್ಯಕ್ಕೆ ನೀರು ಗೊಬ್ಬರ ಎರೆದಿದ್ದಾರೆ.

ಸುಪ್ರೀಮ್ ಕೋರ್ಟಿನ 1959ರ ತೀರ್ಪಿನ ಪ್ರಕಾರ ಹೋರಿಗಳು ಮತ್ತು ಎತ್ತುಗಳ ಕಡಿಯಲು ಅವಕಾಶವಿತ್ತು. ಗೋಹತ್ಯೆ ನಿಷೇಧ ಕಾಯಿದೆಯ ವ್ಯಾಪ್ತಿಯಿಂದ ವಿನಾಯಿತಿ ನೀಡಲಾಗಿತ್ತು. ಆದರೆ 2005ರಲ್ಲಿ ಹೊರಬಿದ್ದ ಸುಪ್ರೀಮ್ ಕೋರ್ಟಿನ ಮತ್ತೊಂದು ತೀರ್ಪು ಈ ವಿನಾಯಿತಿಯನ್ನು ರದ್ದು ಮಾಡಿತ್ತು. ಗುಜರಾತ್ ಕಾಯಿದೆಯನ್ನು ಎತ್ತಿ ಹಿಡಿದಿತ್ತು. ಹಿಂದುತ್ವವಾದಿಗಳು ಮತ್ತು ಸಂಘಪರಿವಾರ ಸಂಭ್ರಮಿಸಿದ್ದವು. ಬಿಜೆಪಿ ಶಾಸಿತ ರಾಜ್ಯಗಳು ಪೈಪೋಟಿಗೆ ಬಿದ್ದು ಗೋವಧೆ ನಿಷೇಧದ ಅತ್ಯಂತ ಕಠಿಣ ಕಾನೂನುಗಳನ್ನು ಜಾರಿಗೊಳಿಸಿದ್ದವು. ಮುಸಲ್ಮಾನರನ್ನು ಹಣಿಯುವುದು ಮತ್ತು ಕೋಮುವಾದಿ ರಾಜಕಾರಣದ ಬೆಂಕಿಗೆ ಎಣ್ಣೆ ಸುರಿಯುವುದು ಈ ಕಾನೂನುಗಳ ಹಿಂದಿನ ಅಸಲಿ ಉದ್ದೇಶವಾಗಿತ್ತು. ಈ ಕಾನೂನುಗಳು ದ್ವೇಷಸಾಧಕರ ಕೈಯಲ್ಲಿನ ಹತಾರುಗಳಾಗಿ ಹೋಗಿವೆ. ಈ ಮಾತಿಗೆ ಕರ್ನಾಟಕವೂ ಹೊರತಾಗಲಿಲ್ಲ. ಶಾಂತಿ ಸಹಬಾಳ್ವೆಯ ಕನ್ನಡ ನಾಡಿನಲ್ಲಿ ಹಿಜಾಬ್, ಹಲಾಲ್, ಅಝಾನ್ ಗಳ ಸುತ್ತ ಬಹುದೊಡ್ಡ ವಿವಾದದ ಬಿರುಗಾಳಿಯನ್ನೇ ಬಡಿದೆಬ್ಬಿಸಲಾಗಿದೆ. ದ್ವೇಷದ ವ್ಯಾಪಾರ ಬಲು ಬಿರುಸಿನಿಂದ ನಡೆದಿದೆ. ಕೋಮು ಅಸಹನೆಯನ್ನು ಕೆದಕಿ ಕೆಣಕಿ ಭುಗಿಲೆಬ್ಬಿಸಲಾಗಿದೆ. ಅಲ್ಪಸಂಖ್ಯಾತ ಕೋಮಿಗೆ ಸೇರಿದ ಎಲ್ಲ ಜಾನುವಾರು ವ್ಯಾಪಾರಿಗಳಿಗೆ ಗೋಹಂತಕರ ಹಣೆಪಟ್ಟಿ ಹಚ್ಚಿ ಖಳರೆಂದು ಬಿಂಬಿಸಲಾಗುತ್ತಿದೆ. ಮತಗಳಿಕೆಗಾಗಿ ಜನಸಾಮಾನ್ಯರನ್ನು ಧರ್ಮದ ಹೆಸರಿನಲ್ಲಿ ಒಡೆದು ಹತಾರುಗಳನ್ನಾಗಿಸಿ ಯಾದವೀ ಕಲಹದಲ್ಲಿ ತೊಡಗಿಸುವ ಹುನ್ನಾರವಿದು. ಬಿಜೆಪಿ- ಸಂಘಪರಿವಾರ ನಡೆಸಿರುವ ಹಿಂದುತ್ವದ ರಾಜಕಾರಣ ಈ ಹುನ್ನಾರದ ಹಿಂದಿರುವುದು ನಿಚ್ಚಳ ಗೋಚರ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಬಡವರ ಬೆವರಿಳಿಸುತ್ತಿರುವ ಬೆಲೆ ಏರಿಕೆ ಚುನಾವಣಾ ವಿಷಯವಲ್ಲವೇ?

ದನದ ಮಾಂಸ ಸೇವಿಸುತ್ತ ಬಂದಿರುವ ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿಗಳು, ಆದಿವಾಸಿಗಳು ಹಿಂದುತ್ವವಾದಿಗಳ ಆಕ್ರೋಶಕ್ಕೆ ತುತ್ತಾಗುತ್ತಿದ್ದಾರೆ. ಜೀವನೋಪಾಯಕ್ಕಾಗಿ ದನದ ಉತ್ಪಾದನೆಗಳನ್ನು ಅವಲಂಬಿಸಿದ್ದವರ ಬದುಕು ದುಸ್ತರವಾಗಿ ಹೋಗಿದೆ. ಗೊಡ್ಡು ಬಿದ್ದ ಮತ್ತು ಮುದಿ ಜಾನುವಾರುಗಳನ್ನು ರೈತರು ಲಾಗಾಯಿತಿನಿಂದ ಕಸಾಯಿಖಾನೆಗೆ ಹೊಡೆಯುತ್ತಿದ್ದರು. ಇದೀಗ ಅವುಗಳನ್ನು ಕಡೆತನಕ ಸಾಕುವ ಭಾರವನ್ನೂ ಹೊತ್ತಿದ್ದಾರೆ. ಕೃಷಿ ಅರ್ಥವ್ಯವಸ್ಥೆ ತಾರುಮಾರಾಗಿ ಹೋಗಿದೆ. ಉತ್ತರಪ್ರದೇಶದಲ್ಲಿ ಬೀಡಾಡಿ ದನಗಳು ಹೊಲಗಳನ್ನು ನುಗ್ಗಿ ಫಸಲನ್ನು ಮೇಯುವ ಪಿಡುಗು ಬೃಹತ್ ರೂಪ ತಳೆದಿದೆ. ರೈತರು ರೋಸಿ ಹೋಗಿದ್ದಾರೆ.

ಕರ್ನಾಟಕದ ಕರಾವಳಿ ಸೀಮೆಗೆ ಸೀಮಿತವಾಗಿದ್ದ ಗುಂಪುಹತ್ಯೆ- ಹಲ್ಲೆಯ ಪ್ರವೃತ್ತಿ ಇದೀಗ ರಾಜ್ಯದ ರಾಜಧಾನಿಯ ಸನಿಹಕ್ಕೆ ಸಾಗಿ ಬಂದಿದೆ. ಕಾನೂನು-ಸುವ್ಯವಸ್ಥೆಗೆ ಸವಾಲಾಗಿ ಪರಿಣಮಿಸಿದೆ. ಪೊಲೀಸ್ ವ್ಯವಸ್ಥೆ ತನ್ನ ಕರ್ತವ್ಯವನ್ನು ಪಕ್ಷಪಾತವಿಲ್ಲದೆ ಪಾಲಿಸಬೇಕಿದೆ.

ಗುಂಪು ಹತ್ಯೆಗಳ ಅಪರಾಧಿಗಳನ್ನು ಹಣಿಯಲು ಹೊಸ ಕಾನೂನು ತರುವಂತೆ ಸುಪ್ರೀಂ ಕೋರ್ಟು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿ ವರ್ಷಗಳೇ ಉರುಳಿವೆ. ಮೋದಿ ಸರ್ಕಾರ ಮಿಸುಕಾಡಿಲ್ಲ. ಪ್ರತಿಪಕ್ಷಗಳ ಆಡಳಿತದ ಝಾರ್ಖಂಡ್, ರಾಜಸ್ತಾನ, ಪಶ್ಚಿಮ ಬಂಗಾಳ ಹಾಗೂ ಬಿಜೆಪಿಯದೇ ಆಡಳಿತದ ಮಣಿಪುರ ಸರ್ಕಾರಗಳು ತಂದಿರುವ ದೊಂಬಿಹತ್ಯೆ ನಿಗ್ರಹ ಮಸೂದೆಗಳಿಗೆ ಒಪ್ಪಿಗೆಯನ್ನೂ ನೀಡಿಲ್ಲ. ತ್ರಿವಳಿ ತಲಾಖ್ ಗೆ ತೋರಿದ ಧಾವಂತ ದೊಂಬಿಹತ್ಯೆ ನಿಷೇಧಕ್ಕೆ ಯಾಕಿಲ್ಲ?

ಗೋರಕ್ಷಕರ ಗುಂಪು ಹಿಂಸಾಚಾರವನ್ನು ಪ್ರಧಾನಿ ಮೋದಿ ಮೂರು ಬಾರಿ ಖಂಡಿಸಿದ್ದಾರೆ. ‘ಬಹುಪಾಲು ಹಿಂಸಾಚಾರಿಗಳು ಗೋರಕ್ಷಕರ ಮುಖವಾಡ ಧರಿಸಿದ ಸಮಾಜಘಾತಕ ಶಕ್ತಿಗಳು. ಇವರ ಪೈಕಿ ಶೇ.80ರಷ್ಟು ಮಂದಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದವರು. ಗೋರಕ್ಷಣೆಯ ಹೆಸರಿನಲ್ಲಿ ದಂಧೆ ನಡೆಸಲಾಗುತ್ತಿದೆ. ರಾತ್ರಿ ಸಮಾಜವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುತ್ತಾರೆ. ಹಗಲು ಗೋರಕ್ಷಣೆಯ ಸೋಗು ಹಾಕುತ್ತಾರೆ. ದನದ ವ್ಯಾಪಾರಿಗಳು, ಗೋಮಾಂಸ ಸೇವಿಸುವವರು ಹಾಗೂ ಹಾಲು ವ್ಯಾಪಾರ ಮಾಡುವ ರೈತರನ್ನು ಗೋರಕ್ಷಣೆಯ ಹೆಸರಿನಲ್ಲಿ ಕೊಲ್ಲುವುದನ್ನು ಒಪ್ಪಲಾಗದು’ ಎಂಬ ಮಾತುಗಳನ್ನು ಅವರು ಆಡಿ ವರ್ಷಗಳು ಉರುಳಿವೆ. ತುಟಿ ಮೇಲಿನ ಖಂಡನೆಯಷ್ಟೇ ಸಾಕೇ, ಅಥವಾ ಆಡಿದ ಮಾತನ್ನು ನಡೆಸಿಕೊಡಬೇಕೇ?

ಕೋಮುದ್ವೇಷದ ಹುಲಿಸವಾರಿ ಮಾಡುವವರು ಅರಿಯಬೇಕು. ಈ ಅಪಾಯಕಾರಿ ಸವಾರಿ ಮಾಡಿದವರೇ ಮುಂದೆ ಒಂದು ದಿನ ಹುಲಿ ಬಾಯಿಗೆ ಆಹಾರ ಆದಾರು. ಅಸಂಭವವೇನಲ್ಲ.

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಬೆಲೆ ಏರಿಕೆ, ನಿರುದ್ಯೋಗವೇ ಚುನಾವಣೆ ವಿಷಯ; ಎಚ್ಚೆತ್ತ ಮತದಾರರು

ಅಚ್ಛೇ ದಿನಗಳು ಬರಲಿಲ್ಲ ಎಂಬುದು ಜನರ ಅಭಿಪ್ರಾಯಗಳಿಂದ ಸ್ಪಷ್ಟವಾಗುತ್ತದೆ. ದೇಶಭಕ್ತಿಯ ಹೆಸರಲ್ಲಿ...

ಈ ದಿನ ಸಂಪಾದಕೀಯ | ಲಡಾಖಿನ ಹೋರಾಟವೂ ಮತ್ತು ಮೋದಿಯ ಮೊಂಡಾಟವೂ

ಆರ್ಟಿಕಲ್‌ 370 ತೆರವುಗೊಳಿಸಿದ ಮೋದಿಯವರು, ಜಮ್ಮು ಮತ್ತು ಕಾಶ್ಮೀರದಲ್ಲಿ ಯಾರು ಬೇಕಾದರೂ...

ಈ ದಿನ ಸಂಪಾದಕೀಯ | ಸರ್ವಾಧಿಕಾರದತ್ತ ದೇಶ ದಾಪುಗಾಲು ಹಾಕುತ್ತಿಲ್ಲವೇ? ಅವರಿಗಾದದ್ದು ನಮಗಾಗುವುದಿಲ್ಲವೇ?

ಹಿಟ್ಲರ್ ಮತ್ತು ಪುಟಿನ್ ಮಾಡಿದಂತೆ, ಮೋದಿ ಅವರು ದೇಶದಲ್ಲಿ ವಿರೋಧ ಪಕ್ಷಗಳಿಲ್ಲದಂತೆ,...