ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಹೆಚ್ಚಿಸಲು ಕೃಪಾಂಕ ನೀಡಲು ಕೆಎಸ್‌ಇಎಬಿ ಮುಂದಾಗಿದೆ. ಇದರ ಅವಶ್ಯಕತೆ ವಿದ್ಯಾರ್ಥಿಗಳಿಗಿದೆಯೇ, ಇಲಾಖೆಯ ಈ ಆಮಿಷ, ಭವಿಷ್ಯದಲ್ಲಿ ವಿದ್ಯಾರ್ಥಿಗಳನ್ನು ತೊಂದರೆಗೆ ಈಡು ಮಾಡುತ್ತದೆಯೇ – ವಿಶ್ಲೇಷಣೆ ಇಲ್ಲಿದೆ.
ದೇಶದಲ್ಲಿ ಕೊರೊನಾ ಉಲ್ಬಣಗೊಂಡು ರಾಜ್ಯದ ವಿದ್ಯಾರ್ಥಿಗಳ ಕಲಿಕೆ ಈಗಾಗಲೇ ಹಿಂದುಳಿದಿದೆ ಎಂಬುದು ಶಿಕ್ಷಣ ತಜ್ಞರ ವಾದ. ಈ ಮಧ್ಯೆ ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಿಸಲು ಶೇ.10ರಷ್ಟು ಕೃಪಾಂಕ ನೀಡಲು ರಾಜ್ಯ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಮುಂದಾಗಿದೆ. ಮಂಡಳಿಯ ಈ ನಡೆ ಶೈಕ್ಷಣಿಕ ಕ್ಷೇತ್ರದಲ್ಲಿ ಬೇಕು-ಬೇಡವೆಂಬ ಚರ್ಚೆಯನ್ನು ಹುಟ್ಟಿಹಾಕಿದೆ.
ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳು ಭೌತಿಕವಾಗಿ ತರಗತಿಗಳನ್ನು ಎದುರಿಸಿದ್ದಾರೆ. ಪಬ್ಲಿಕ್ ಪರೀಕ್ಷೆಗೂ ಮುನ್ನ ಹಲವಾರು ಕಿರು ಪರೀಕ್ಷೆ, ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ಎದುರಿಸಿರುತ್ತಾರೆ. ಆದರೂ, ಕೂದಲೆಳೆ ಅಂತರದಲ್ಲಿ ಅನುತ್ತೀರರ್ಣಾರಾಗುವುದನ್ನು ತಡೆಯಲು ಇದೊಂದು ಉತ್ತಮ ಮಾರ್ಗ ಎನ್ನುತ್ತಿದ್ದಾರೆ ರಾಜ್ಯದ ಶಾಲಾ ಶಿಕ್ಷಕರು. ಇನ್ನೂ ಕೆಲವರು ಚುನಾವಣೆಯ ತಂತ್ರಗಳಿವು ಎಂದೂ ಆರೋಪಿಸುತ್ತಿದ್ದಾರೆ.
ಕಳೆದೆರಡು ವರ್ಷಗಳ ಹಿಂದೆ ಕೋವಿಡ್ ಉಲ್ಬಣಗೊಂಡಿತ್ತು. ಈ ವೇಳೆ ದೇಶಾದ್ಯಂತ ಲಾಕ್‌ಡೌನ್ ಹೇರಲಾಗಿತ್ತು. ಶಾಲಾ ಕಾಲೇಜುಗಳಿಗೆ ಮೊಕ್ತಾಂ ರಜೆ ಇತ್ತು. ವಿದ್ಯಾರ್ಥಿಗಳಿಗೆ ಎರಡು ವರ್ಷ ಕಲಿಕೆ ಎಂಬುದೇ ಇರದೆ, ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸದೆ, ಒಂಭತ್ತನೇ ತರಗತಿಯ ಅಂಕಗಳ ಆಧಾರದ ಮೇಲೆ ಎಸ್ಸೆಸ್ಸೆಲ್ಸಿಯಲ್ಲಿ ಕೃಪಾಂಕ ನೀಡಿ ಉತ್ತೀರ್ಣಗೊಳಿಸಲಾಗಿತ್ತು. ಆ ಸಮಯದಲ್ಲೇ ಶೇ.5ರಷ್ಟು ನೀಡುತ್ತಿದ್ದ ಕೃಪಾಂಕ ಶೇ.10ಕ್ಕೆ ಏರಿಕೆಯೂ ಆಗಿತ್ತು.
ಶಿಕ್ಷಕರಿಗೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಕೃಪಾಂಕದ ಲಾಭವಿದೆ. ಆನ್‌ಲೈನ್ ತರಗತಿ ಮತ್ತು ಪರೀಕ್ಷೆ ಇಲ್ಲದೆ ಮುಂದಿನ ತರಗತಿಗೆ ತಳ್ಳುವ ವ್ಯವಸ್ಥೆಯಿಂದಾಗಿ ವಿದ್ಯಾರ್ಥಿಗಳಲ್ಲಿ ಕಲಿಕೆಯ ಹುಮ್ಮಸ್ಸಿಗೆ ತೆರೆ ಬಿತ್ತು. ದೇಶದ ಇತರ ರಾಜ್ಯದ ಪಬ್ಲಿಕ್ ಪರೀಕ್ಷೆಗಳ ಫಲಿತಾಂಶ ಒಳ್ಳೆಯ ರೀತಿಯಲ್ಲಿ ಹೊರಬೀಳುವ ಕಾರಣ, ಕರ್ನಾಟಕದ ಎಸ್ಸೆಸ್ಸೆಲ್ಸಿ ಫಲಿತಾಂಶವೂ ಅವರಿಗೆ ಒಗ್ಗುವಂತಿರಲಿ ಎಂಬ ಯೋಜನೆ ಶಿಕ್ಷಣ ಇಲಾಖೆಯದ್ದಾಗಿರಬಹುದು ಎಂದು ಶಿಕ್ಷಣ ತಜ್ಞರು ಹೇಳುತ್ತಿದ್ದಾರೆ.
ಕೃಪಾಂಕ ಎಂಬ ಆಮಿಷ – ಉನ್ನತ ಶಿಕ್ಷಣಕ್ಕೆ ಹೊಡೆತ
“ಶಿಕ್ಷಣ ವ್ಯವಸ್ಥೆ ಬದಲಾಗಬೇಕು. ವಿದ್ಯಾರ್ಥಿಗಳನ್ನು ಭೌತಿಕವಾಗಿ ಅಥವಾ ಮಾನಸಿಕವಾಗಿ ಆರೋಗ್ಯವಂತರನ್ನಾಗಿರುವಂತೆ ಕಾಪಾಡಿಕೊಳ್ಳುವುದು ಪೋಷಕರ ಕರ್ತವ್ಯ. ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಸದೃಢರನ್ನಾಗಿ ತಯಾರು ಮಾಡಲು ಶ್ರಮ ಪಡುವುದು ಶಿಕ್ಷಕರ ಕರ್ತವ್ಯ. ಆದರೆ, ಯಾರೂ ತಮ್ಮ ಕರ್ತವ್ಯ ವ್ಯವಸ್ಥಿತವಾಗಿ ಪೂರ್ಣಗೊಳಿಸುತ್ತಿಲ್ಲ. ಹೀಗಾಗಿ, ಮಕ್ಕಳು ಕಲಿಕೆಯಲ್ಲಿ ನಿರಾಸಕ್ತಿ ತೋರುತ್ತಿದ್ದಾರೆ. ಶಿಕ್ಷಣ ವ್ಯವಸ್ಥೆಯಲ್ಲಿ ಕನಿಷ್ಠ ಗುಣಮಟ್ಟ ಕಾಯ್ದುಕೊಳ್ಳಬೇಕು. ವಿದ್ಯಾರ್ಥಿಗಳು ಆಯಾ ವರ್ಗದಲ್ಲಿ ಕಲಿಯಲೇ ಬೇಕು. ರಿಯಾಯಿತಿ, ಕೃಪಾಂಕ ನೀಡುವ ಆಮಿಷಗಳು ಮಕ್ಕಳ ಉನ್ನತ ಶಿಕ್ಷಣದ ಮೇಲೆ ಪರಿಣಾಮ ಬೀಳುತ್ತದೆ. ಮಕ್ಕಳು ಕಲಿಯಲು ಬಂದಿರುತ್ತಾರೆ. ಹಾಗಾಗಿ ಕಲಿಸುವ ಕೆಲಸ ಶಿಕ್ಷಕರು ಮಾಡಬೇಕು. ಈ ಯೋಜನೆ ತಪ್ಪುದಾರಿಗೆ ದೂಕಿದಂತಿದೆ. ಶಿಕ್ಷಣ ಕಾಯ್ದೆ-23 ಪ್ರಕಾರ, ರಾಜ್ಯ ಸರ್ಕಾರ ತರಗತಿ ಮತ್ತು ವಿಷಯವಾರು ಮಕ್ಕಳು ಕಲಿಯ ಬೇಕಾದದನ್ನು ಸಿದ್ಧತೆ ಮಾಡಿಕೊಳ್ಳಬೇಕು. ಬಳಿಕ ಎಷ್ಟರ ಮಟ್ಟಿಗೆ ಕಲಿಯುತ್ತಿದ್ದಾರೆಂದು ಪರಿಶೀಲಿಸುತ್ತಿರಬೇಕು ಎಂದು ನಿಯಮ ಹೇಳುತ್ತದೆ. ನಿಯಮಗಳು ಪ್ರಚಾರಕ್ಕಷ್ಟೆ ಆಗಿದೆ ಹೊರೆತು ಕಾರ್ಯಗತವಾಗುತ್ತಿಲ್ಲ,” ಎಂದು ಅಭಿವೃದ್ಧಿ ಶಿಕ್ಷಣ ತಜ್ಞ ವಿ ಪಿ ನಿರಂಜನಾರಾಧ್ಯ ಅವರು ಶಿಕ್ಷಣದ ವ್ಯವಸ್ಥೆಯ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಈ ಕುರಿತು ಈದಿನ.ಕಾಮ್‌ನೊಂದಿಗೆ ಮಾತನಾಡಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರ ಆಪ್ತ ಸಹಾಯಕ, “ಕೃಪಾಂಕ ಎಲ್ಲರಿಗೂ ದಕ್ಕುವುದಿಲ್ಲ. ಹತ್ತು, ಐದು ಅಂಕಗಳಿಂದ ಅನುತ್ತೀರ್ಣಾರಾಗುವವರಿಗೆ ಮಾತ್ರ ಈ ಯೋಜನೆ ಫಲಕಾರಿ. ಕೆಲವರು ಚುನಾವಣೆಗಾಗಿ ಈ ಚಿಂತನೆ ತರಲಾಗಿದೆ ಎನ್ನುತ್ತಿದ್ದಾರೆ. ಆದರೆ, ಅಂತಹ ಹೇಳಿಕೆಗಳೆಲ್ಲ ಸುಳ್ಳು. ವಿದ್ಯಾರ್ಥಿಗಳಿಗಾಗಿ ಕೃಪಾಂಕ ನೀಡಲಾಗುತ್ತಿದೆ,” ಎಂದರು.
ವಿದ್ಯಾರ್ಥಿಗಳ ಉತ್ತೀರ್ಣ ಖಾಸಗಿ ಶಾಲೆಗಳ ಪ್ರವೇಶಾತಿ ಹೆಚ್ಚಳ
“ಅನುತ್ತೀರ್ಣರಾಗುವ ಮಕ್ಕಳನ್ನು ಉತ್ತೀರ್ಣರನ್ನಾಗಿ ಮಾಡಿ ಅವರ ಭವಿಷ್ಯ ರೂಪಿಸುವುದು ಕೃಪಾಂಕದಿಂದ ಸಾಧ್ಯವಾಗುತ್ತದೆ. ಶ್ರಮ ಹಾಕಿ ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳಿಗೆ ಈ ಕ್ರಮ, ಒಂದಷ್ಟು ಹತಾಶೆಗೆ ಒಳಪಡಿಸುತ್ತದೆ. ಶಾಲೆಯ ಶೇಕಡಾವರು ಅಂಕ ಹೆಚ್ಚಾದರೆ ನಮಗೆ ಒಳ್ಳೆಯದು. ಏಕೆಂದರೆ, ಖಾಸಗಿ ಶಾಲೆಗಳಾಗಿರುವುದರಿಂದ ಶಾಲೆಗೆ ಪ್ರವೇಶಾತಿ ಪಡೆಯುವವರ ಸಂಖ್ಯೆ ಹೆಚ್ಚಾಗುತ್ತದೆ. ಹೀಗಾಗಿ, ಉತ್ತಮ ಫಲಿತಾಂಶ ಶಾಲೆಯ ಅಭಿವೃದ್ಧಿ ಮೇಲೆ ನಿಂತಿರುತ್ತದೆ. ಈ ಬಾರಿ ಕೃಪಾಂಕದ ಅವಶ್ಯಕತೆ ಇಲ್ಲ. ಕಳೆದ ವರ್ಷದಿಂದ ವಿದ್ಯಾರ್ಥಿಗಳು ಭೌತಿಕವಾಗಿ ಪಾಠ ಕೇಳಿದ್ದಾರೆ. ಹಲವಾರು ಕಿರು ಪರೀಕ್ಷೆ ಬರೆದಿರುತ್ತಾರೆ. ಕೃಪಾಂಕ ಕೊಟ್ಟರು ಒಳ್ಳೆಯದು, ಕೊಡದಿದ್ದರು ಮೇಲು,” ಎಂದು ಮಾದಪುರದ ಖಾಸಗಿ ಶಾಲೆಯ ಮುಖ್ಯ ಶಿಕ್ಷಕಿ ಶಾಕುಂತಲ ಈ ದಿನ.ಕಾಮ್‌ನೊಂದಿಗೆ ಅಭಿಪ್ರಾಯ ಹಂಚಿಕೊಂಡರು.
ಈ ಸುದ್ದಿ ಓದಿದ್ದೀರಾ?: ಮೊದಲ ದಿನದ ಎಸ್ಎಸ್ಎಲ್‌ಸಿ ಪರೀಕ್ಷೆ; ಶೇ 98.48 ಹಾಜರಾತಿ
ಜೀವನದ ಮೊದಲ ಘಟ್ಟ ಸುಗಮವಾಗಿರಲು ಕೃಪಾಂಕವಿರಲಿ
“ಈಗ ಹತ್ತನೇ ತರಗತಿ ಪರೀಕ್ಷೆ ಎದುರಿಸುತ್ತಿರುವ ವಿದ್ಯಾರ್ಥಿಗಳು ಕೊರೊನಾ ಉಲ್ಬಣಗೊಂಡಿದ್ದ ಕಾಲದಲ್ಲಿ ಎಂಟು, ಒಂಭತ್ತನೇ ತರಗತಿ ಓದುತ್ತಿದ್ದ ವಿದ್ಯಾರ್ಥಿಗಳಾಗಿರುವ ಕಾರಣ ಅವರು ಶಾಲೆಗಳಿಗೆ ಬಂದು, ಅಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ವಿರಳ. ಕೃಪಾಂಕ ನೀಡುವುದರಿಂದ ಭವಿಷ್ಯದಲ್ಲಿ ವಿದ್ಯಾಭ್ಯಾಸ ಮುಂದುವರೆಸಲು ಅವರಿಗೆ ಒಳಿತಾಗುತ್ತದೆ. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಜೀವನದ ಮೊದಲ ಘಟ್ಟ. ಮೊದಲ ಹಂತದಲ್ಲೇ ಅವರು ಅನುತ್ತೀರ್ಣರಾಗಿ, ಕಲಿಕೆಯ ಮನಸ್ಸು ಕುಗ್ಗುವಂತಾದರೆ ಮುಂದಿನ ವಿದ್ಯಾಭ್ಯಾಸ ಪೂರ್ಣಗೊಳಿಸದೆ, ವೃತ್ತಿ ಜೀವನ, ಮನೆಯಲ್ಲೇ ಕಾಲ ಕಳೆಯುವುದು ಅಥವಾ ಆತ್ಮಹತ್ಯೆಗೆ ಶರಣಾಗುತ್ತಾರೆ. ಹೀಗಾಗಿ, ಕೃಪಾಂಕ ನೀಡುವುದು ಒಳ್ಳೆಯದೆ” ಎಂದು ಬೆಂಗಳೂರಿನ ಸರ್ಕಾರಿ ಅನುದಾನಿತ ಶಾಲೆಯ ಗಣಿತ ಶಿಕ್ಷಕ ಮಂಜೇಗೌಡ ಈ ದಿನ.ಕಾಮ್‌ನ ಸಂಪರ್ಕಕ್ಕೆ ಸಿಕ್ಕು ಕೃಪಾಂಕದ ಬಗ್ಗೆ ತೃಪ್ತಿಯನ್ನು ವ್ಯಕ್ತಪಡಿಸಿದರು.