ಹದ ಮಣ್ಣಲ್ಲದೆ ಮಡಕೆಯಾಗಲಾರದು.
ವೃತಹೀನನ ಬೆರೆಯಲಾಗದು.
ಬೆರೆದಡೆ ನರಕ ತಪ್ಪದು.
ನಾನೊಲ್ಲೆ ಬಲ್ಲೆನಾಗಿ, ಕುಂಭೇಶ್ವರಾ.
ಶರಣೆ ಕೇತಲಾದೇವಿಯು ಶಿವಶರಣ ಕುಂಬಾರ ಗುಂಡಯ್ಯನವರ ಧರ್ಮಪತ್ನಿ. 12ನೇ ಶತಮಾನದ ಬಸವಾದಿ ಶರಣರ ಸಮಕಾಲೀನ ಶಿವಶರಣೆಯರಲ್ಲಿ ಕೇತಲಾದೇವಿಯೂ ಒಬ್ಬರು. ಮೂಲತಃ ಬೀದರ್ ಜಿಲ್ಲೆಯ ಭಾಲ್ಕಿಯವರಾದ ಕೇತಲಾದೇವಿ, ತಮ್ಮ ಪತಿ ಕುಂಬಾರ ಗುಂಡಯ್ಯನವರೊಂದಿಗೆ ಕುಂಬಾರಿಕೆ ಕಾಯಕವನ್ನು ನಿಷ್ಠೆಯಿಂದ ನಡೆಸಿಕೊಂಡು ಬಂದವರು. ಮಣ್ಣಿನಿಂದ ಮಡಕೆಗಳನ್ನು ಸಿದ್ಧಪಡಿಸಿ, ಅವುಗಳನ್ನು ಮಾರಾಟ ಮಾಡುವ ಮೂಲಕ ಕಾಯಕ ಬದುಕನ್ನು ಕಟ್ಟಿಕೊಂಡಿದ್ದರು.
ಅನುಭವ ಮಂಟಪದಲ್ಲಿ ಶರಣರೊಂದಿಗೆ ಸಾಮಾಜಿಕ ಚಿಂತನೆಗಳಲ್ಲಿ ಭಾಗವಹಿಸಿ, ನಿಷ್ಠಾವಂತ ಕಾಯಕದ ಮೂಲಕ ಸಾತ್ವಿಕ ಬದುಕು ನಡೆಸಿದ ಶರಣ ಕುಂಬಾರ ಗುಂಡಯ್ಯನವರ ಯಾವುದೇ ವಚನಗಳು ಲಭ್ಯವಿಲ್ಲ. ಆದರೆ ಅವರು ನಿಷ್ಠೆಯಿಂದ ಕಾಯಕ ಮತ್ತು ಭಕ್ತಿಯನ್ನು ಆಚರಿಸಿಕೊಂಡು ಬದುಕಿದವರು ಎಂಬುದು ತಿಳಿದುಬರುತ್ತದೆ. ಪತಿಯ ಭಕ್ತಿಗೆ ಮೆಚ್ಚಿಕೊಂಡ ಕೇತಲಾದೇವಿಯವರು ಅವರೊಂದಿಗೆ ಸಾಮರಸ್ಯದ ಜೀವನ ನಡೆಸುತ್ತಾ, ‘ಕುಂಭೇಶ್ವರ’ ಎಂಬ ಅಂಕಿತನಾಮದಿಂದ ಬರೆದಿರುವ ಎರಡು ವಚನಗಳು ಮಾತ್ರ ದೊರೆತಿವೆ.
ನಿಷ್ಠೆಯ ಕಾಯಕದ ಮೂಲಕ ಸುಖ-ಸಂತೃಪ್ತಿಯ ಜೀವನ ಕಂಡುಕೊಂಡ ಗುಂಡಯ್ಯ ಮತ್ತು ಕೇತಲಾದೇವಿ ಶರಣ ದಂಪತಿಗಳು ವೃತ್ತಿಯ ಶ್ರೇಷ್ಠತೆಗೆ ಸಾಕ್ಷಿಯಾಗಿದ್ದಾರೆ. ತಮ್ಮ ವೃತ್ತಿಪರಿಭಾಷೆಯನ್ನು ಬಳಸುವ ಬರೆದ ವಚನಗಳು ಕಾಯಕದ ಮಹತ್ವವನ್ನು ಹಾಗೂ ಭಕ್ತಿಯ ಜೀವಾನುಭಾವವನ್ನು ಅತ್ಯಂತ ಅರ್ಥಪೂರ್ಣವಾಗಿ ವ್ಯಕ್ತಪಡಿಸಿದ್ದಾರೆ. ‘ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ’ ಎಂಬಂತೆ ಗುಂಡಯ್ಯ ಮತ್ತು ಕೇತಲಾದೇವಿ ಶರಣ ದಂಪತಿಯ ಬದುಕು ಪರಸ್ಪರ ಪ್ರೀತಿ, ಭಕ್ತಿ ಮತ್ತು ಸಾಮರಸ್ಯದಿಂದ ಕೂಡಿತ್ತು. ತಮ್ಮ ಕಾಯಕ ಮತ್ತು ಭಕ್ತಿಯ ಮೂಲಕ ದೇವರನ್ನು ಒಲಿಸಿಕೊಂಡು ಕೈಲಾಸವನ್ನು ಕಾಣಬಹುದು ಎಂಬ ಸಂದೇಶವನ್ನು ಅವರ ಬದುಕು ಸಾರುತ್ತದೆ.
‘ಹದ ಮಣ್ಣಲ್ಲದೆ ಮಡಕೆಯಾಗಲಾರದು’ ಎಂಬ ಮಾತಿನ ಮೂಲಕ ಕೇತಲಾದೇವಿಯವರು ತಮ್ಮ ವೃತ್ತಿ ಕಾಯಕದ ಅನುಭವವನ್ನು ವ್ಯಕ್ತಪಡಿಸಿದ್ದಾರೆ. ಮಣ್ಣಿನ ಮಡಕೆ ಸಿದ್ಧಪಡಿಸುವುದು ಸುಲಭದ ಕೆಲಸವಲ್ಲ. ಜಿಗುಟಾದ ಮಣ್ಣನ್ನು ತಂದು, ಅದನ್ನು ಸೋಸಿ ಅದರಲ್ಲಿರುವ ಕಸ, ಕಡ್ಡಿ, ಕಲ್ಲು ಮತ್ತು ಹರಳುಗಳನ್ನು ಬೇರ್ಪಡಿಸಬೇಕು. ಹದಮಾಡಿದ ಮಣ್ಣಿನಲ್ಲಿ ಸಾಸಿವೆಯಷ್ಟು ಕಸ ಅಥವಾ ಕಲ್ಲಿನ ತುಣುಕು ಉಳಿದಿದ್ದರೂ ಅದು ಮಡಕೆ ತಯಾರಿಸಲು ಯೋಗ್ಯವಾಗುವುದಿಲ್ಲ. ಮಡಕೆ ಸಿದ್ಧಪಡಿಸಿದ ಬಳಿಕ ಮಣ್ಣಿನ ಗುಣಮಟ್ಟ ಸರಿಯಾಗಿರದಿದ್ದರೆ ಅದು ಬಿರುಕು ಬಿಟ್ಟು ಒಡೆದುಹೋಗಬಹುದು. ಹೀಗಾಗಿ ಮಣ್ಣಿನ ರೂಪಕದ ಮೂಲಕ ಮಾನವನ ಮನಸ್ಸು ಕೂಡ ಪರಿಶುದ್ಧವಾಗಿ ಹದಗೊಳ್ಳಬೇಕು ಎಂಬ ಸಂದೇಶವನ್ನು ಕೇತಲಾದೇವಿ ನೀಡುತ್ತಾಳೆ
‘ಮಡಿಕೆಯ ಮಾಡುವಡೆ ಮಣ್ಣೆ ಮೊದಲು’ ಎಂಬ ಬಸವಣ್ಣನವರ ವಚನದ ಆಶಯವೂ ಇದೇ ಆಗಿದೆ. ಉತ್ತಮ ಮಾನವನಾಗಲು ಉತ್ತಮ ಸಂಸ್ಕಾರ ಅಗತ್ಯ. ಮಣ್ಣನ್ನು ಸೋಸಿ, ನೀರು ಬೆರೆಸಿ, ತುಳಿದು ತುಳಿದು ಹದ ಮಾಡಬೇಕು. ಹದವಾದ ಹಸಿ ಮಣ್ಣನ್ನು ಚಕ್ರದ (ತಿಗರಿ) ಮೇಲೆ ಇಟ್ಟು, ಅದನ್ನು ತಿರುಗಿಸುತ್ತಾ ಕುಂಬಾರನು ತನ್ನ ಕೈಚಳಕದಿಂದ ವಿವಿಧ ಆಕಾರದ ಮಡಕೆಗಳನ್ನು ರೂಪಿಸುತ್ತಾನೆ. ಈ ಅದ್ಭುತ ಕಲೆ ಕುಂಬಾರನ ಕಾಯಕದ ವೈಶಿಷ್ಟ್ಯವಾಗಿದೆ.
ಮಡಕೆ ತಯಾರಿಸಲು ಹೇಗೆ ಹದವಾದ, ನುಣುಪಾದ ಮಣ್ಣು ಅಗತ್ಯವೋ, ಅದೇ ರೀತಿ ಮನುಷ್ಯನು ತನ್ನೊಳಗಿನ ದುರ್ಗುಣ, ದುಶ್ಚಟ ಮತ್ತು ದೌರ್ಬಲ್ಯಗಳನ್ನು ತೊರೆದು ಪರಿಶುದ್ಧವಾದ ಮನಸ್ಸನ್ನು ರೂಪಿಸಿಕೊಳ್ಳಬೇಕು. ಉತ್ತಮ ಸಂಸ್ಕಾರದಿಂದ ಮಾನವನು ತನ್ನ ವ್ಯಕ್ತಿತ್ವಕ್ಕೆ ಹೊಸ ರೂಪ ನೀಡಿಕೊಂಡು, ಸಾಮಾನ್ಯ ಮಾನವನಿಂದ ವಿಶ್ವಮಾನವನಾಗಿ ಬೆಳೆಯಬಹುದು ಎಂಬುದು ವಚನಕಾರರ ಅನನ್ಯ ಚಿಂತನೆಯಾಗಿದೆ.
‘ವೃತ್ತಹೀನನ ಬೆರೆಯಲಾಗದು, ಬೆರೆದಡೆ ನರಕ ತಪ್ಪದು, ನಾನೊಲ್ಲೆ ಬಲ್ಲೆನಾಗಿ, ಕುಂಭೇಶ್ವರಾ’ ಎಂದು ಕೇತಲಾದೇವಿಯವರು ಹೇಳುತ್ತಾರೆ. ಇಲ್ಲಿ ‘ಹದ ಮಾಡುವುದು’ ಎಂಬುದು ಕೇವಲ ಮಣ್ಣಿಗೆ ಸಂಬಂಧಿಸಿದ ಪ್ರಕ್ರಿಯೆಯಲ್ಲ; ಅದು ಮಾನವನ ಬದುಕಿಗೂ ಅನ್ವಯಿಸುವ ರೂಪಕವಾಗಿದೆ. ಪ್ರತಿಯೊಬ್ಬರೂ ಸತ್ಕಾಯಕ ಮತ್ತು ಸನ್ನಡತೆಯ ಮೂಲಕ ತಮ್ಮಲ್ಲಿರುವ ದೌರ್ಬಲ್ಯ, ದುರ್ಗುಣಗಳಿಂದ ಮುಕ್ತರಾಗಿ ಮನಸ್ಸನ್ನು ಹದಗೊಳಿಸಿಕೊಳ್ಳಬೇಕು. ಉತ್ತಮ ಸಂಸ್ಕಾರ ನೀಡಿದಾಗ ಮಣ್ಣಿನ ಮಡಕೆ ಹೇಗೆ ಸುಂದರ ರೂಪ ಪಡೆಯುತ್ತದೆಯೋ, ಹಾಗೆಯೇ ಮಾನವನಿಗೂ ಉತ್ತಮ ಸಂಸ್ಕಾರ ದೊರೆತಾಗ ಆತ ಉನ್ನತ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಾಧ್ಯ ಎಂದು ವಚನಕಾರ್ತಿ ಕೇತಲಾದೇವಿ ಮಾರ್ಮಿಕವಾಗಿ ಹೇಳುತ್ತಾಳೆ.
ಮಾನವನ ಮನಸ್ಸನ್ನು ಪರಿಶುದ್ಧಗೊಳಿಸುವುದು ಸುಲಭದ ಕಾರ್ಯವಲ್ಲ. ಆತನಲ್ಲಿರುವ ವ್ಯಸನಗಳನ್ನು ದೂರಮಾಡಿ, ಸಜ್ಜನರ ಮತ್ತು ಶರಣರ ಸಂಗವನ್ನು ಮಾಡಬೇಕು. ಮಹಾತ್ಮರ ಅನುಭಾವಗಳನ್ನು ಆಲಿಸಬೇಕು. ಮಣ್ಣಿನಿಂದ ರೂಪುಗೊಂಡ ಮಡಕೆ ಹಸಿಯಾಗಿರುವಾಗ ದುರ್ಬಲವಾಗಿರುತ್ತದೆ. ಅದು ಬಳಕೆಗೆ ಯೋಗ್ಯವಾಗಬೇಕಾದರೆ ಅದನ್ನು ಚನ್ನಾಗಿ ಬಡಿದು ಒಣಗಿಸಿ ಆವಿಗೆಯಲ್ಲಿ ಸುಡಬೇಕು. ಸುಟ್ಟ ನಂತರ ಮಡಕೆ ಗಟ್ಟಿಯಾಗಿ ಬಳಕೆಗೆ ಯೋಗ್ಯವಾಗುತ್ತದೆ. ಇದೇ ರೀತಿ ಮಾನವನ ಬದುಕು ಕೂಡ ಅನುಭವ, ಸಂಸ್ಕಾರ ಮತ್ತು ಸತ್ಕಾಯಕದ ಮೂಲಕ ಪರಿಪಕ್ವವಾಗಬೇಕು. ಅದಕ್ಕೆ ಕಠಿಣ ಪರಿಶ್ರಮ ಅಗತ್ಯತೆಯ ಕುರಿತು ವಿಶ್ಲೇಷಿಸಿದ್ದಾರೆ.
ಮಣ್ಣಿನಿಂದ ತಯಾರಾದ ಮಡಕೆಗಳ ಆಕಾರ, ಗಾತ್ರ, ಬಣ್ಣ ಬೇರೆಯಾದರೂ ಅವುಗಳ ಮೂಲವಸ್ತು ಒಂದೇ. ಅದೇ ರೀತಿ ಮಾನವ ಸಮಾಜದಲ್ಲಿಯೂ ಜಾತಿ, ಲಿಂಗ, ಮತ, ವರ್ಗಗಳ ಆಧಾರದ ಮೇಲೆ ಭೇದಭಾವ ಇರಬಾರದು. ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ಬದುಕುವ ವ್ಯಕ್ತಿಯಲ್ಲಿ ಭೇದಭಾವ, ಸಮಾನತೆ ಸ್ಥಾನವಿರುವುದಿಲ್ಲ. ಸಕಲ ಜೀವಾತ್ಮರಿಗೂ ಲೇಸನ್ನು ಬಯಸುವ ಸಮಾನತೆ ಭಾವನೆ ಆತನಲ್ಲಿ ಬೆಳೆಯುತ್ತದೆ. ಆತ ಜೀವಪರ, ಜನಪರ ಚಿಂತಕನಾಗಿ ರೂಪುಗೊಳ್ಳುತ್ತಾನೆ ಎಂಬ ಸಂದೇಶ ಸಾರುತ್ತಾರೆ.
ಕುಂಬಾರಿಕೆ ಕಾಯಕ ನಡೆಸಿಕೊಂಡು ಬಂದ ಶರಣೆ ಕೇತಲಾದೇವಿ ತಮ್ಮ ವೃತ್ತಿಯ ಅನುಭವಗಳನ್ನೇ ಮಾನವೀಯ ಮೌಲ್ಯಗಳ ಪ್ರತಿಪಾದನೆಗೆ ಬಳಸಿಕೊಂಡಿದ್ದಾರೆ. ದುರ್ಜನರ ಸಂಗವನ್ನು ತೊರೆದು ಸಜ್ಜನರ ಸಂಗವನ್ನು ಮಾಡಿದರೆ ವೈಚಾರಿಕ ಪ್ರಜ್ಞಾವಂತ ವ್ಯಕ್ತಿಯಾಗಿ ರೂಪುಗೊಳ್ಳಬಹುದು. ಶರಣರ ಚಿಂತನೆಗಳನ್ನು ಓದುತ್ತಾ, ಅವರ ಅನುಭಾವಗಳನ್ನು ಅರಿಯುತ್ತಾ ಹೋದಂತೆ ಜೀವನದ ಜ್ಞಾನವೂ ವಿಸ್ತಾರವಾಗುತ್ತದೆ. ಅಜ್ಞಾನ ಮತ್ತು ಅಂಧಕಾರದಲ್ಲಿ ಬದುಕುವವರ ಸಂಗದಿಂದ ಮನಸ್ಸು ಹದಗೊಳ್ಳುವುದಿಲ್ಲ. ಆದ್ದರಿಂದ ಅಂತಹವರ ಸಂಗವನ್ನು ʼನಾನೊಲ್ಲೆʼ ಎಂದು ಕೇತಲಾದೇವಿ ದಿಕ್ಕರಿಸುತ್ತಾರೆ. ಇದು ಕೇವಲ ವೈಯಕ್ತಿಕ ಬದುಕಿಗೆ ಸಂಬಂಧಿಸಿದ ಮಾತಲ್ಲ; ಅಂದಿನ ಸಮಾಜದ ಸ್ಥಿತಿಗತಿಯ ಬಗ್ಗೆಯೂ ಅವರು ವ್ಯಕ್ತಪಡಿಸಿದ ಅಸಮಾಧಾನವಾಗಿದೆ.
ಇಂದಿನ ಸಮಾಜದಲ್ಲಿಯೂ ಮಾನವೀಯ ಮೌಲ್ಯ, ಸೌಹಾರ್ದತೆ ಕೊರತೆ ಎದ್ದು ಕಾಣುತ್ತಿದೆ. ಕೋಮುದ್ವೇಷ, ಹಿಂಸೆ, ಕೊಲೆ ಸೇರಿದಂತೆ ಮನುಷ್ಯ ವಿರೋಧಿ ಕೃತ್ಯಗಳು ಸಮಾಜ ನಿತ್ಯವೂ ಘಟಿಸುತ್ತಿವೆ. ಇಂತಹ ಸಂದರ್ಭದಲ್ಲಿ ಶರಣರ ಸಮಾನತೆ, ಸಹಬಾಳ್ವೆ ಮತ್ತು ಸಾಮರಸ್ಯದ ಚಿಂತನೆಗಳು ಹೆಚ್ಚು ಪ್ರಸ್ತುತವಾಗುತ್ತವೆ. ‘ಇವನಮ್ಮವ’ ಎಂಬ ಭಾವ ಪ್ರತಿಯೊಬ್ಬರಲ್ಲೂ ಮೂಡಿದಾಗ ಮಾತ್ರ ಲಿಂಗ ರಹಿತ, ಜಾತಿ ರಹಿತ, ವರ್ಣ ರಹಿತ ಸಮಸಮಾಜ ನಿರ್ಮಾಣ ಸಾಧ್ಯ. ಇಂತಹ ಸಮತ್ವದ ಸಮಾಜವನ್ನು ಕಟ್ಟುವ ಮನಸ್ಸುಗಳ ಶರಣರ ಬಳಗ ಅಸಂಖ್ಯಾತವಾಗಲಿ ಎಂಬುದೇ ಶರಣ ಗುಂಡಯ್ಯ ಮತ್ತು ಕೇತಲಾದೇವಿಯವರ ಕಾಯಕ-ಭಕ್ತಿಯ ಬದುಕಿನ ಆಶಯವಾಗಿದೆ.
ಅನುಭಾವಿ ವಚನಕಾರ್ತಿ ಕೇತಲಾದೇವಿಯವರ ಎರಡನೇ ವಚನವೂ ವೃತಾಚರಣೆ ಕುರಿತು ಇದೆ. ಈ ವಚನದಲ್ಲಿ ಸಂಸ್ಕೃತ ಶ್ಲೋಕವನ್ನು ಬಳಸಿರುವುದು ಕಾಣಬಹುದು. ಅಂದಿನ ಶತಮಾನದಲ್ಲಿಯೂ ಕೇತಲಾದೇವಿ ಸುಶಿಕ್ಷಿತಳಾಗಿದ್ದಳು ಎಂಬುದನ್ನು ಈ ವಚನದ ಮುಖಾಂತರ ಊಹಿಸಬಹುದು.
“ಲಿಂಗವಂತರ ಲಿಂಗಾಚಾರಿಗಳ ಅಂಗಳಕ್ಕೆ ಹೋಗಿ ಲಿಂಗಾರ್ಪಿತವ ಮಾಡುವಲ್ಲಿ ಸಂದೇಹವಿಲ್ಲದಿರಬೇಕು. ಆದೆಂತೆಂದಡೆ; ‘ಭಕ್ತಸ್ಯ ಮಂದಿರಂ ಗತ್ವಾ’ ಭಿಕ್ಷಲಿಂಗಾರ್ಪಿತಂ ತಥಾ। ಜಾತಿ ಜನ್ಮ ರಜೋಚ್ಛಿಷ್ಟಃ। ಪ್ರೇತಸೂತಕ ವರ್ಜಿತಃ।’ ಇಂತೆಂದುದಾಗಿ, ಕಾಣದುದನೆ ಚರಿಸದೆ, ಕಂಡುದನು ನುಡಿಯದೆ, ಕಾಣದುದನು ಕಂಡುದನು ಒಂದೆ ಸಮವೆಂದು ಅರಿಯಬಲ್ಲರೆ ಕುಂಭೇಶ್ವರಲಿಂಗವೆಂಬೆನು.
ಇದನ್ನೂ ಓದಿ : ವಚನ ಕಲ್ಯಾಣ | ಪರಧನ, ಪರಸ್ತ್ರೀ, ಪರದೈವಂಗಳಿಗೆರಗದಿಪ್ಪುದೆ ನೇಮ!
ಶರಣೆ ಕೇತಲಾದೇವಿಯವರ ವಚನಗಳಲ್ಲಿ ಕುಂಬಾರಿಕೆ ವೃತ್ತಿ ಕೇವಲ ಜೀವನೋಪಾಯವಾಗಿರದೆ, ಮಾನವನ ಅಂತಃಕರಣವನ್ನು ಹದಗೊಳಿಸಿ, ಉತ್ತಮ ಸಂಸ್ಕಾರದಿಂದ ವ್ಯಕ್ತಿತ್ವವನ್ನು ರೂಪಿಸುವ ಮಹತ್ವದ ರೂಪಕವಾಗಿದೆ. ಆದ್ದರಿಂದ ಕೇತಲಾದೇವಿ ಹಾಗೂ ಕುಂಬಾರ ಗುಂಡಯ್ಯ ದಂಪತಿಯ ಕಾಯಕನಿಷ್ಠೆ, ವೃತ್ತಿ ಪ್ರಾಮಾಣಿಕತೆ ಮತ್ತು ಸಮತೆಯ ಚಿಂತನೆ ಇಂದಿಗೂ ಸಮಾಜಕ್ಕೆ ದಾರಿದೀಪವಾಗಿದೆ.

(ಆ.12ರಿಂದ ಶ್ರಾವಣ ಮಾಸ ಆರಂಭಗೊಂಡಿದೆ. ತನ್ನಿಮಿತ್ತ ಪ್ರತಿದಿನ ಬಸವಾದಿ ಶಿವಶರಣರ ವಚನ ಅನುಭಾವವನ್ನು “ವಚನ ಕಲ್ಯಾಣ” ಹೆಸರಿನಲ್ಲಿ ವಿಶೇಷ ಬರಹಗಳು ʼಈದಿನ ಡಾಟ್ ಕಾಮ್ʼನಲ್ಲಿ ಪ್ರಕಟವಾಗಲಿದೆ. ಓದಿ…ಓದಿಸಿ)

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.



