ನದಿಗಳಿಗೆ ರಾಜ್ಯಗಳ, ದೇಶಗಳ ಗಡಿಗಳ ಹಂಗಿಲ್ಲ. ನಾಗಾಲ್ಯಾಂಡ್‌ನಲ್ಲಿ ಸುರಿದ ಮಳೆ ಅಸ್ಸಾಂನಲ್ಲಿ ದುರಂತ ಸೃಷ್ಟಿಸುತ್ತದೆ. ಅರುಣಾಚಲ ಪ್ರದೇಶದ ಭೂಕುಸಿತ ಬ್ರಹ್ಮಪುತ್ರದ ಹರಿವಿನ ಮೇಲೆ ಪರಿಣಾಮ ಬೀರುತ್ತದೆ. ಆದರೆ ನಮ್ಮ ಆಡಳಿತ ವ್ಯವಸ್ಥೆ ಇನ್ನೂ ರಾಜ್ಯಗಳ ಗಡಿಗಳೊಳಗೇ ಯೋಚಿಸುತ್ತದೆ. ಒಂದೇ ಜಲಾನಯನ ಪ್ರದೇಶವನ್ನು ಒಟ್ಟಾಗಿ ನಿರ್ವಹಿಸುವ ಸಮನ್ವಯ ವ್ಯವಸ್ಥೆ ಇನ್ನೂ ಸಮರ್ಪಕವಾಗಿ ರೂಪುಗೊಂಡಿಲ್ಲ. ಇದರಿಂದಲೇ ಮೇಲಿಂದ ಮೇಲೆ ಈ ದುರಂತಗಳು ಸಂಭವಿಸುತ್ತಿವೆ.
ಪ್ರಕೃತಿ ಎಂದಿಗೂ ಏಕಾಏಕಿ ಕೋಪಗೊಳ್ಳುವುದಿಲ್ಲ. ಅದು ಮೊದಲು ಸೂಚನೆ ನೀಡುತ್ತದೆ, ಎಚ್ಚರಿಕೆ ನೀಡುತ್ತದೆ, ತನ್ನ ಬದಲಾಗಿರುವ ದಾರಿಯ ಹೆಜ್ಜೆಗಳನ್ನೂ ತೋರಿಸುತ್ತದೆ. ಆ ಸಂಕೇತಗಳನ್ನ ನಿರ್ಲಕ್ಷಿಸಿದಾಗಲೇ ಅವು ವಿನಾಶಕಾರಿ ದುರಂತಗಳಾಗಿ ಪರಿಣಮಿಸುತ್ತವೆ. ಅಸ್ಸಾಂನ ಪ್ರವಾಹವೂ ಅಂತಹದ್ದೇ ಒಂದು ಎಚ್ಚರಿಕೆ. ಬದಲಾಗುತ್ತಿರುವ ನದಿಗಳ ದಿಕ್ಕನ್ನು, ಬದಲಾಗುತ್ತಿರುವ ಮಳೆ ಮತ್ತು ಹವಾಮಾನವನ್ನು ಅದೇ ಹಳೆಯ ಪ್ರವಾಹ ನಿರ್ವಹಣಾ ನೀತಿಗಳಿಂದ ನಿಯಂತ್ರಿಸಲು ಸಾಧ್ಯವಿಲ್ಲ ಎಂಬ ಸತ್ಯವನ್ನು ಈ ದುರಂತ ಅನಾವರಣಗೊಳಿಸಿದೆ. ಭಾರತ ಎಚ್ಚೆತ್ತುಕೊಳ್ಳಲೇಬೇಕಾಗಿರುವ ಅಗತ್ಯವನ್ನು ಒತ್ತಿ ಹೇಳಿದೆ.
ಅಸ್ಸಾಂನಲ್ಲಿ ಪ್ರವಾಹ ಹೊಸದೇನಲ್ಲ. ಬ್ರಹ್ಮಪುತ್ರ ಮತ್ತು ಅದರ ಉಪನದಿಗಳು ಪ್ರತಿ ವರ್ಷ ಲಕ್ಷಾಂತರ ಜನರ ಬದುಕನ್ನು ಅಸ್ತವ್ಯಸ್ತಗೊಳಿಸುತ್ತವೆ. ಆದರೆ ಈ ಬಾರಿಯ ಪ್ರವಾಹ ಹಿಂದಿನ ವರ್ಷಗಳಿಗಿಂತ ಭಿನ್ನವಾಗಿತ್ತು. ಬ್ರಹ್ಮಪುತ್ರದ ದಡದಲ್ಲಿರುವ ಪ್ರದೇಶಗಳಷ್ಟೇ ಅಲ್ಲ, ಇದುವರೆಗೆ ಸುರಕ್ಷಿತವೆಂದು ಭಾವಿಸಲಾಗುತ್ತಿದ್ದ ಶಿವಸಾಗರ್, ಚರೈದಿಯೋ, ಜೋರ್ಹಾಟ್ ಮತ್ತು ಗೋಲಾಘಾಟ್ ಜಿಲ್ಲೆಗಳೂ ಜಲಾವೃತವಾದವು. ನಾಗಾಲ್ಯಾಂಡ್‌ನ ಮೋನ್ ಜಿಲ್ಲೆಯಲ್ಲಿ ಕೆಲವೇ ಗಂಟೆಗಳಲ್ಲಿ ಸುರಿದ ದಾಖಲೆ ಪ್ರಮಾಣದ ಮಳೆಯ ನೀರು ಬೆಟ್ಟಗಳಿಂದ ಧುಮ್ಮಿಕ್ಕಿ ಅಸ್ಸಾಂನತ್ತ ಹರಿದು, ಬ್ರಹ್ಮಪುತ್ರದ ಉಪನದಿಗಳ ಜತೆಗೆ ತೆರೆದ ಭೂಪ್ರದೇಶಗಳ ಮೂಲಕವೂ ಭೋರ್ಗರೆದು ಕಂಡರಿಯದ ಭೀಕರ ಪ್ರವಾಹ ಸೃಷ್ಟಿಸಿತು.
ಈ ದುರಂತವನ್ನು ಅತಿವೃಷ್ಟಿಯ ಪರಿಣಾಮ ಎಂದು ಹೇಳಿ ಕೈತೊಳೆದುಕೊಳ್ಳಲು ಸಾಧ್ಯವಿಲ್ಲ. ಯಾಕೆಂದರೆ, ಇದರ ಹಿಂದೆ ಬ್ರಹ್ಮಪುತ್ರ ನದಿಯ ಭೌಗೋಳಿಕ ಸ್ವರೂಪ, ಹವಾಮಾನ ಬದಲಾವಣೆಯ ಪರಿಣಾಮ ಮತ್ತು ವರ್ಷಗಳಿಂದ ಮುಂದುವರೆದಿರುವ ನೀತಿ ವೈಫಲ್ಯಗಳಿವೆ. ಹಿಮಾಲಯದಿಂದ ಅಪಾರ ಪ್ರಮಾಣದ ಮಣ್ಣು ಮತ್ತು ಮರಳನ್ನು ಹೊತ್ತು ತರುವ ಬ್ರಹ್ಮಪುತ್ರ, ಅಸ್ಸಾಂನ ಸಮತಟ್ಟನ್ನು ತಲುಪುತ್ತಿದ್ದಂತೆ ತನ್ನ ವೇಗವನ್ನು ಕಳೆದುಕೊಳ್ಳುತ್ತದೆ. ಪರಿಣಾಮ, ನದಿಯ ತಳದಲ್ಲಿ ಹೂಳು ವರ್ಷದಿಂದ ವರ್ಷಕ್ಕೆ ಜಮೆಯಾಗುತ್ತಾ ನದಿಯ ಹರಿವಿನ ಸಾಮರ್ಥ್ಯವನ್ನು ಕುಗ್ಗಿಸುತ್ತದೆ. ಆಗ ನದಿ ತನ್ನ ಹಳೆಯ ಹಾದಿಯನ್ನು ತೊರೆದು ಹೊಸ ಮಾರ್ಗಗಳನ್ನು ಹುಡುಕುವುದು ಅದರ ಸಹಜ ಸ್ವಭಾವ. ಆದರೆ ಈ ವೈಜ್ಞಾನಿಕ ವಾಸ್ತವವನ್ನು ಅರ್ಥಮಾಡಿಕೊಳ್ಳುವ ಬದಲು, ನದಿಯನ್ನು ಒಡ್ಡುಗಳೊಳಗೆ ಬಂಧಿಸುವ ವ್ಯರ್ಥ ಪ್ರಯತ್ನದ ಹಳೆಯ ನಂಬಿಕೆಯನ್ನೇ ಭಾರತ ಇನ್ನೂ ಮುಂದುವರಿಸುತ್ತಿದೆ.
ಪ್ರಶ್ನೆಯಿರುವುದು ಇಲ್ಲಿಯೇ. ಪ್ರವಾಹ, ಪ್ರಕೃತಿ ವಿಕೋಪಗಳ ಸ್ವರೂಪ ಬದಲಾಗುತ್ತಿದ್ದರೆ, ಅದಕ್ಕೆ ತಕ್ಕಂತೆ ನಮ್ಮ ನೀತಿಯೂ ಬದಲಾಗಬೇಕಲ್ಲವೇ? ಆದರೆ ದಶಕಗಳಿಂದ ನಮ್ಮ ಪ್ರವಾಹ ನಿರ್ವಹಣೆ ಒಡ್ಡುಗಳನ್ನು ನಿರ್ಮಿಸುವುದು, ಅವು ಒಡೆದರೆ ಮತ್ತೆ ಕಟ್ಟುವುದು, ಸಾವಿರಾರು ಕೋಟಿ ರೂಪಾಯಿ ವೆಚ್ಚ ಮಾಡುವುದು, ಮಳೆಗಾಲ ಮುಗಿದ ಬಳಿಕ ಎಲ್ಲವನ್ನೂ ಮರೆತುಬಿಡುವುದು ಮತ್ತು ದುರಂತದ ನಂತರ ಪರಿಹಾರ ಘೋಷಿಸುವುದಕ್ಕಷ್ಟೇ ಸೀಮಿತವಾಗಿದೆ. ಹವಾಮಾನ ಬದಲಾವಣೆಯ ಯುಗದಲ್ಲಿ ಈ ವಿಧಾನ ಎಷ್ಟು ಅಪಾಯಕಾರಿಯಾಗಿದೆ ಎಂಬುದನ್ನು ಅಸ್ಸಾಂನ ಈ ದುರಂತ ಮತ್ತೊಮ್ಮೆ ಮನವರಿಕೆ ಮಾಡಿಕೊಟ್ಟಿದೆ.
ಇದನ್ನೂ ಓದಿ: ಈ ದಿನ ಸಂಪಾದಕೀಯ | ಪ್ರಶ್ನೆಗಳ ಮುಖಕ್ಕೆ ಕೋಮು ಹಣೆಪಟ್ಟಿ ತರವಲ್ಲ!
ಹವಾಮಾನ ಬದಲಾವಣೆಯ ಪರಿಣಾಮ ಈ ಸವಾಲನ್ನು ಮತ್ತಷ್ಟು ಗಂಭೀರಗೊಳಿಸಿದೆ. ಭಾರತೀಯ ಹವಾಮಾನ ಇಲಾಖೆ (IMD) ಮತ್ತು ಅಂತಾರಾಷ್ಟ್ರೀಯ ಅಧ್ಯಯನಗಳು ಈಶಾನ್ಯ ಭಾರತದಲ್ಲಿ ಕಡಿಮೆ ಅವಧಿಯಲ್ಲಿ ಅತಿಯಾದ ಮಳೆ ಸುರಿಯುವ (Extreme Rainfall Events) ಘಟನೆಗಳು ಹೆಚ್ಚುತ್ತಿವೆ ಎಂದು ಸೂಚಿಸುತ್ತಿವೆ. ಈ ಬಾರಿ ನಾಗಾಲ್ಯಾಂಡ್‌ನ ಮೋನ್ ಜಿಲ್ಲೆಯಲ್ಲಿ ಕೆಲವೇ ಗಂಟೆಗಳಲ್ಲಿ ಸುರಿದ ಭಾರಿ ಮಳೆಯೇ ಅದಕ್ಕೆ ಉದಾಹರಣೆ. ಪರಿಣಾಮ ಈಗಾಗಲೇ ಭಾರೀ ಮಳೆ ನೀರಿನಿಂದ ವಿಪರೀತ ತೇವಗೊಂಡಿದ್ದ ಬೆಟ್ಟಗಳು ಕುಸಿದು ಬಿದ್ದವು, ಅಲ್ಲಲ್ಲಿ ಭೂಕುಸಿತ ಸಂಭವಿಸಿತು, ನಂತರ ಆ ನೀರು ಅಸ್ಸಾಂನತ್ತ ಧಾವಿಸಿ ಅನೇಕ ಜಿಲ್ಲೆಗಳನ್ನು ಜಲಾವೃತಗೊಳಿಸಿತು. ಸುಮಾರು 75 ಮಂದಿಯ ಜೀವ ಕಸಿಯಿತು. 4 ಲಕ್ಷಕ್ಕೂ ಅಧಿಕ ಜನರನ್ನು ಸಂಕಷ್ಟಕ್ಕೀಡುಮಾಡಿತು.
ರಾಜ್ಯಗಳ ಗಡಿಗಳನ್ನ ನದಿಗಳ್ಯಾಕೆ ಪಾಲಿಸಬೇಕು? ನಾಗಾಲ್ಯಾಂಡ್‌ನಲ್ಲಿ ಸುರಿದ ಮಳೆ ಅಸ್ಸಾಂನಲ್ಲಿ ದುರಂತ ಸೃಷ್ಟಿಸುತ್ತದೆ. ಅರುಣಾಚಲ ಪ್ರದೇಶದ ಭೂಕುಸಿತ ಬ್ರಹ್ಮಪುತ್ರದ ಹರಿವಿನ ಮೇಲೆ ಪರಿಣಾಮ ಬೀರುತ್ತದೆ. ಆದರೆ ನಮ್ಮ ಆಡಳಿತ ವ್ಯವಸ್ಥೆ ಇನ್ನೂ ರಾಜ್ಯಗಳ ಗಡಿಗಳೊಳಗೇ ಯೋಚಿಸುತ್ತದೆ. ಒಂದೇ ಜಲಾನಯನ ಪ್ರದೇಶವನ್ನು ಒಟ್ಟಾಗಿ ನಿರ್ವಹಿಸುವ ಸಮನ್ವಯ ವ್ಯವಸ್ಥೆ ಇನ್ನೂ ಸಮರ್ಪಕವಾಗಿ ರೂಪುಗೊಂಡಿಲ್ಲ. ಇದರಿಂದಲೇ ಮೇಲಿಂದ ಮೇಲೆ ಈ ದುರಂತಗಳು ಸಂಭವಿಸುತ್ತಿವೆ.
ಅಸ್ಸಾಂನಲ್ಲಿ ಸಾವಿರಾರು ಕಿಲೋಮೀಟರ್ ಉದ್ದದ ಪ್ರವಾಹ ತಡೆಗೋಡೆಗಳನ್ನು ನಿರ್ಮಿಸಲಾಗಿದೆ. ಆದರೆ ಪ್ರತಿವರ್ಷ ಮಳೆಗಾಲದಲ್ಲಿ ಅವು ಒಡೆಯುತ್ತವೆ. ಅವು ಒಡೆಯುವ ಕ್ಷಣದಲ್ಲಿ ನೀರಿನ ವೇಗ ಮತ್ತಷ್ಟು ಹೆಚ್ಚಾಗಿ, ನಷ್ಟದ ಪ್ರಮಾಣವೂ ಹೆಚ್ಚುತ್ತದೆ. ಒಡ್ಡುಗಳನ್ನು ನಿರ್ಮಿಸುವುದು ಪರಿಹಾರದ ಒಂದು ಭಾಗವಾಗಿರಬಹುದು. ಆದರೆ ಅದನ್ನೇ ಸಂಪೂರ್ಣ ಪರಿಹಾರವೆಂದು ಭಾವಿಸುವುದು ದೊಡ್ಡ ತಪ್ಪು. ಜಗತ್ತಿನ ಅನೇಕ ದೇಶಗಳು ಈಗ ನದಿಯನ್ನು ಬಂಧಿಸುವುದಕ್ಕಿಂತ, ನದಿಗೆ ಹರಿಯಲು ಅಗತ್ಯವಾದ ಜಾಗವನ್ನು ಒದಗಿಸುವ ‘ರೂಮ್ ಫಾರ್ ದಿ ರಿವರ್’ (Room for the River) ಮಾದರಿಯತ್ತ ಸಾಗುತ್ತಿವೆ. ಭಾರತದಲ್ಲಿ ಮಾತ್ರ ನದಿಯ ಪ್ರವಾಹ ಸಮತಟ್ಟುಗಳಲ್ಲೇ ಅತಿಕ್ರಮಣ, ರಸ್ತೆ, ಕಟ್ಟಡ ಮತ್ತು ಮೂಲಸೌಕರ್ಯಗಳನ್ನು ನಿರ್ಮಿಸಿ, ನಂತರ ಪ್ರವಾಹ ಬಂದಾಗ ಪ್ರಕೃತಿಯನ್ನೇ ದೂಷಿಸುವ ಪ್ರವೃತ್ತಿ ಮುಂದುವರಿದಿದೆ.
ಇದನ್ನೂ ಓದಿ: ಈ ದಿನ ಸಂಪಾದಕೀಯ | ಕೆಪಿಎಸ್‌ಸಿ ಕಾಯಕಲ್ಪಕ್ಕೆ ಇದು ಸಕಾಲ
1980ರಲ್ಲಿ ಸ್ಥಾಪನೆಯಾದ ಬ್ರಹ್ಮಪುತ್ರ ಮಂಡಳಿ (Brahmaputra Board) ಸಮಗ್ರ ಜಲಾನಯನ ನಿರ್ವಹಣೆ, ಪ್ರವಾಹ ನಿಯಂತ್ರಣ ಮತ್ತು ದೀರ್ಘಕಾಲೀನ ಯೋಜನೆಗಳ ಉದ್ದೇಶದಿಂದ ರಚನೆಯಾಗಿತ್ತು. ಆದರೆ ಅಧಿಕಾರದ ಕೊರತೆ, ತಾಂತ್ರಿಕ ಪರಿಣಿತರ ಅಭಾವ, ಸಮರ್ಪಕ ಹಣಕಾಸಿನ ಕೊರತೆ ಮತ್ತು ವಿವಿಧ ರಾಜ್ಯಗಳ ನಡುವೆ ಸಮನ್ವಯದ ಸಮಸ್ಯೆಯಿಂದ ಅದು ನಿರೀಕ್ಷಿತ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಿಲ್ಲ. ಈಗಿನ ಪರಿಸ್ಥಿತಿಯಲ್ಲಿ ಇಂತಹ ಸಂಸ್ಥೆಗಳನ್ನು ಬಲಪಡಿಸುವುದು ಐಚ್ಛಿಕವಲ್ಲ, ಅನಿವಾರ್ಯ.
ಅಸ್ಸಾಂನ ಈ ದುರಂತ ಭಾರತದ ಪ್ರವಾಹ ನಿರ್ವಹಣಾ ನೀತಿಗೆ ಪ್ರಕೃತಿಯೇ ನೀಡಿರುವ ಕೊನೆಯ ಎಚ್ಚರಿಕೆ ಎಂದು ಭಾವಿಸಿ ವ್ಯವಸ್ಥೆ ಕಾರ್ಯಪ್ರವೃತ್ತವಾಗಬೇಕು. ಅದು ಒಡೆದ ಒಡ್ಡುಗಳನ್ನು ಮತ್ತೆ ಕಟ್ಟುವುದಕ್ಕೆ ಸೀಮಿತವಾಗಬಾರದು. ನದಿಯ ಸ್ವಾಭಾವಿಕ ಹರಿವನ್ನು ಅರ್ಥ ಮಾಡಿಕೊಳ್ಳುವ ವೈಜ್ಞಾನಿಕ ಯೋಜನೆ, ಪ್ರವಾಹ ನಿರ್ವಹಣಾ ವ್ಯವಸ್ಥೆ, ಜಲಾನಯನ ಪ್ರದೇಶಗಳ ಪುನರುಜ್ಜೀವನ, ಅರಣ್ಯ ನಿರ್ಮಾಣಕ್ಕೆ ಹೆಚ್ಚಿನ ಒತ್ತು, ಅತ್ಯಾಧುನಿಕ ಮುನ್ನೆಚ್ಚರಿಕೆ ವ್ಯವಸ್ಥೆ ಹಾಗೂ ರಾಜ್ಯಗಳ ನಡುವಿನ ಸಮನ್ವಯಕ್ಕೆ ಈಗ ರಾಷ್ಟ್ರೀಯ ಆದ್ಯತೆ ನೀಡಲೇಬೇಕು. ನದಿ, ಕಡಲುಗಳನ್ನ ಗೆಲ್ಲಲಾಗುವುದಿಲ್ಲ, ಆದರೆ ಅವುಗಳ ಸ್ವಭಾವವನ್ನು ಅರ್ಥಮಾಡಿಕೊಂಡು ಅದರೊಂದಿಗೆ ಸಹಬಾಳ್ವೆ ನಡೆಸುವುದು ಖಂಡಿತ ಸಾಧ್ಯ. ಮಾನವ ಕುಲಕ್ಕೆ ಅದೇ ಉಚಿತ. ಆ ಸತ್ಯವನ್ನು ಭಾರತದ ಆಡಳಿತ ವ್ಯವಸ್ಥೆ ಎಷ್ಟು ಬೇಗ ಅರ್ಥಮಾಡಿಕೊಂಡು ಒಪ್ಪಿಕೊಳ್ಳುತ್ತದೆಯೋ, ಅಷ್ಟೇ ಬೇಗ ಸಾವಿರಾರು ಜೀವಗಳನ್ನ, ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಮತ್ತು ಮುಂದಿನ ತಲೆಮಾರುಗಳ ಭವಿಷ್ಯವನ್ನು ಕಾಪಿಟ್ಟುಕೊಂಡು ವರ್ಗಾಯಿಸಲು ಸಾಧ್ಯ!




