ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರ | ಒಕ್ಕಲಿಗರ ಕೋಟೆಯಲ್ಲಿ ಅನ್ಯ ಭಾಷಿಕರೆ ಗೆಲುವಿನ ನಿರ್ಣಾಯಕರು

Date:

ಬೆಂಗಳೂರು ನಗರದಲ್ಲಿಯೇ ಅತೀ ದೊಡ್ಡ ವಿಧಾನಸಭಾ ಕ್ಷೇತ್ರವಾಗಿರುವ ರಾಜರಾಜೇಶ್ವರಿ ನಗರವನ್ನು ಕಳೆದ ಮೂರು ಅವಧಿಯಿಂದ ತನ್ನ ತೆಕ್ಕೆಯಲ್ಲಿ ಉಳಿಸಿಕೊಂಡಿರುವ ಮುನಿರತ್ನ ನಾಯ್ಡುಗೆ ಈ ಬಾರಿ ತನ್ನ ಹಿಡಿತದಲ್ಲಿ ಉಳಿಸಿಕೊಳ್ಳಲು ಹಲವು ಸವಾಲುಗಳು ಎದುರಾಗಿದೆ. ಬಿಜೆಪಿ ಸರ್ಕಾರದ ಆಡಳಿತ ವಿರೋಧಿ ಅಲೆ, ಶಾಸಕರ ವಿರುದ್ಧವೇ ಭ್ರಷ್ಟಾಚಾರದ ಆರೋಪ, ಅಭಿವೃದ್ಧಿ ಕಡಗಣನೆ ಹಾಗೂ ಸ್ಥಳೀಯರ ವಿಶ್ವಾಸ ನಿರಾಕರಣೆ ಸೇರಿದಂತೆ ಹಲವು ಸಮಸ್ಯೆಗಳು ಸ್ಥಳೀಯ ಶಾಸಕರ ಮುಂದಿದೆ.

ಶಾಸಕ ಮುನಿರತ್ನ ನಾಲ್ಕನೇ ಬಾರಿಯೂ ರಾಜರಾಜೇಶ್ವರಿ ನಗರ ಗೆಲ್ಲಬೇಕೆಂದರೆ ಇವೆಲ್ಲವನ್ನು ದಾಟಿ ಮುಂದೆ ಹೋಗಬೇಕು. ಆದರೆ ಪ್ರತಿಸ್ಪರ್ಧಿ ಕಾಂಗ್ರೆಸಿನ ಕುಸುಮ ಹನುಮಂತರಾಯಪ್ಪ ಅಂದುಕೊಂಡಷ್ಟು ಸುಲಭದ ಎದುರಾಳಿಯಲ್ಲ. 2020ರ ಉಪಚುನಾವಣೆಯಲ್ಲಿ ಸೋತ ನಂತರ ಕ್ಷೇತ್ರದಲ್ಲಿ ಹೆಚ್ಚು ಸಕ್ರಿಯರಾಗಿ ಸ್ಥಳೀಯರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಜೊತೆಗೆ ತಂದೆ ಹನುಮಂತರಾಯಪ್ಪ ಪ್ರಭಾವಿ ರಾಜಕಾರಣಿಯ ಬಲ ಬೇರೆ ಇದೆ. 90ರ ದಶಕದಲ್ಲಿಯೇ ರಾಜಕೀಯ ಪ್ರವೇಶಿಸಿದ ಹನುಮಂತರಾಯಪ್ಪ ಚುನಾವಣೆಯ ಹಲವು ಪಟ್ಟುಗಳನ್ನು ಬಲ್ಲವರು. ತಾವು ಶಾಸಕರಾಗದಿದ್ದರೂ ತಮ್ಮ ಮಗಳನ್ನು ವಿಧಾನಸೌಧಕ್ಕೆ ಕಳಿಸಲೇಬೇಕೆಂದು ಪಣ ತೊಟ್ಟಿದ್ದಾರೆ.

ಈ ಕ್ಷೇತ್ರದಲ್ಲಿ 2013ರಿಂದ ಈವರೆಗೆ ನಡೆದಿರುವ ಮೂರು ಚುನಾವಣೆಯಲ್ಲಿ ಮುನಿರತ್ನ ಸತತ ಗೆಲುವು ಸಾಧಿಸಿದ್ದಾರೆ. ಅದಕ್ಕೂ ಮುನ್ನ 2008ರಲ್ಲಿ ಬಿಜೆಪಿಯಿಂದ ಎಂ. ಶ್ರೀನಿವಾಸ್ ಜಯಗಳಿಸಿದ್ದರು. ಬಿಬಿಎಂಪಿ ಪಾಲಿಕೆ ಸದಸ್ಯರಾಗಿದ್ದ ಮುನಿರತ್ನ 2013 ಮತ್ತು 2018ರಲ್ಲಿ ಕಾಂಗ್ರೆಸಿನಿಂದ ಶಾಸಕರಾಗಿ ಆಯ್ಕೆಯಾದರು. ಜೆಡಿಎಸ್ – ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಉರುಳಿಸಲು 2019ರಲ್ಲಿ ಬಿಜೆಪಿ ನಡೆಸಿದ ‘ಆಪರೇಷನ್ ಕಮಲ’ದಲ್ಲಿ ರಾಜೀನಾಮೆ ನೀಡಿ ಬಿಜೆಪಿಗೆ ಜಿಗಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ನಕಲಿ ಮತದಾರರ ಗುರುತಿನ ಚೀಟಿ ಹಗರಣದಿಂದಾಗಿ 2018ರ ಬಿಜೆಪಿಯ ಪರಾಜಿತ ಅಭ್ಯರ್ಥಿ ತುಳಸಿ ಮುನಿರಾಜು ಗೌಡ ನ್ಯಾಯಾಲಯದಲ್ಲಿ ದಾವೆ ಹೂಡಿದ ಕಾರಣ ಈ ಕ್ಷೇತ್ರದ ಉಪಚುನಾವಣೆ 2020ರ ನವೆಂಬರ್‌ನಲ್ಲಿ ನಡೆದು ಮುನಿರತ್ನ ಮೂರನೇ ಬಾರಿಗೆ ಶಾಸಕರಾಗಿ ಸಚಿವ ಪದವಿಯನ್ನು ಪಡೆದರು. ಆದರೆ ಕಳೆದ ಮೂರು ಚುನಾವಣೆಗಳಂತೆ ಈ ಬಾರಿ ಗೆಲುವು ಪಡೆಯುವುದು ಮುನಿರತ್ನಗೆ ಅಷ್ಟು ಸಲೀಸಲ್ಲ.

ಕಾಂಗ್ರೆಸ್ – ಬಿಜೆಪಿ ಅಭ್ಯರ್ಥಿಗಳಿಗೆ ಹೋಲಿಸಿದರೆ ಜೆಡಿಎಸ್‌ ಅಭ್ಯರ್ಥಿ ಈ ಕ್ಷೇತ್ರದಲ್ಲಿ ಅಷ್ಟು ಪ್ರಬಲವಾಗಿಲ್ಲ. ಸ್ಥಳೀಯ ನಾಯಕ ಡಾ. ವಿ ನಾರಾಯಣಸ್ವಾಮಿ ಅವರಿಗೆ ತೆನೆ ಪಕ್ಷದಿಂದ ಟಿಕೆಟ್ ನೀಡಲಾಗಿದೆ. ಅವರು ಕೂಡ ಅಲ್ಲಲ್ಲಿ ಹವಾ ಎಬ್ಬಿಸುತ್ತಿದ್ದು, ಮತದಾರರೊಂದಿಗೆ ಸಂಪರ್ಕ ಸಾಧಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಗೆಲುವಿಗೆ ಪೈಪೋಟಿ ನೀಡುವಷ್ಟು ಸಾಮರ್ಥ್ಯ ಹೊಂದಿಲ್ಲ. 2013ರ ಚುನಾವಣೆಯಲ್ಲಿ ಮಾತ್ರ ರಾಜರಾಜೇಶ್ವರಿ ನಗರದಲ್ಲಿ ಜೆಡಿಎಸ್ ಅಭ್ಯರ್ಥಿ ತಿಮ್ಮ ನಂಜಯ್ಯ ಜಯದ ಸಮೀಪ ಹೋಗಿ 18,813 ಮತಗಳಿಂದ ಸೋಲು ಕಂಡಿದ್ದರು.

ಈ ಸುದ್ದಿ ಓದಿದ್ದೀರಾ? ಯಶವಂತಪುರ ಕ್ಷೇತ್ರ | ತೆನೆ ಪಕ್ಷದ ಅನುಕಂಪದ ಅಲೆಯಲ್ಲಿ ಕೊಚ್ಚಿ ಹೋಗುವುದೇ ಕಮಲ!

14 ವಾರ್ಡ್‌ಗಳ ಕ್ಷೇತ್ರ

ಉತ್ತರಹಳ್ಳಿ ವಿಧಾನಸಭಾ ವ್ಯಾಪ್ತಿಯಲ್ಲಿದ್ದ ರಾಜರಾಜೇಶ್ವರಿ ನಗರ, 2008ರಲ್ಲಿ ಕ್ಷೇತ್ರ ಪುನರ್ ವಿಂಗಡನೆ ನಂತರ ಹೊಸ ಕ್ಷೇತ್ರವಾಯಿತು. 2008ರಲ್ಲಿ ರಚನೆಗೊಂಡ ನಂತರ ಕ್ಷೇತ್ರವು ಒಂದು ಉಪ ಚುನಾವಣೆ, ಸೇರಿದಂತೆ ನಾಲ್ಕು ಸಾರ್ವತ್ರಿಕ ಚುನಾವಣೆಗಳನ್ನು ಕಂಡಿದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ವ್ಯಾಪ್ತಿಯೊಳಗಿರುವ ಕಾರಣ ಈ ಕ್ಷೇತ್ರದಲ್ಲಿ ಬೃಹತ್‌ ಬೆಂಗಳೂರು ಮಹಾನಗರ ವ್ಯಾಪ್ತಿಯ ಲಕ್ಷ್ಮೀದೇವಿ ನಗರ, ಜಾಲಹಳ್ಳಿ, ಜೆ ಪಿ ಪಾರ್ಕ್, ಯಶವಂತಪುರ, ಎಚ್‌ ಎಂ ಟಿ, ಲಗ್ಗೆರೆ, ಜ್ಞಾನಭಾರತಿ, ರಾಜರಾಜೇಶ್ವರಿ ನಗರ, ಕೊಟ್ಟಿಗೆಪಾಳ್ಯ ಹಾಗೂ ಬಾಹುಬಲಿ ನಗರ ಸೇರಿ ಒಟ್ಟು 14 ವಾರ್ಡ್‌ಗಳಿವೆ.

ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ನಗರಗಳು ಹೆಚ್ಚಿರುವ ಕಾರಣ ಕಾರ್ಮಿಕ ಸಮುದಾಯ ಹಾಗೂ ಕೆಳ ಮಧ್ಯಮ ವರ್ಗದವರೇ ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕೊಳಗೇರಿ ಪ್ರದೇಶಗಳು ಸಾಕಷ್ಟು ಇರುವುದರಿಂದ ತೆಲುಗು, ತಮಿಳು ಭಾಷಿಕರು ಹೆಚ್ಚಾಗಿದ್ದಾರೆ.

ಕಳೆದ ಮೂರು ಚುನಾವಣೆಗಳಿಂದ ಗೆಲುವು ಸಾಧಿಸುತ್ತಿರುವ ಮುನಿರತ್ನ ಅಭಿವೃದ್ಧಿ ಹಾಗೂ ಮೂಲಸೌಕರ್ಯಕ್ಕೆ ಒತ್ತು ನೀಡುವುದಕ್ಕಿಂತ ಉಡುಗೊರೆ ರಾಜಕಾರಣದಿಂದ ಪ್ರತಿ ಬಾರಿಯೂ ಜೋರಾಗಿ ಸದ್ದು ಮಾಡುತ್ತಿದ್ದಾರೆ. ಬೇರೆ ಕ್ಷೇತ್ರಗಳಿಗೆ ಹೋಲಿಸಿದರೆ ರಾಜರಾಜೇಶ್ವರಿ ನಗರದಲ್ಲಿ ಹೆಚ್ಚು ಉಡುಗೊರೆಗಳನ್ನು ನೀಡಲಾಗುತ್ತದೆ ಎನ್ನುತ್ತಾರೆ ಇಲ್ಲಿನ ಮತದಾರರು.       

ಜಾತಿವಾರು ಲೆಕ್ಕಾಚಾರ: 

ಒಟ್ಟು 4,78,300 ಮತದಾರರನ್ನು ಹೊಂದಿರುವ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯ ಮತ ಪ್ರಮಾಣ ಹೆಚ್ಚಿದೆ. ಒಕ್ಕಲಿಗರು 1,25,000, ಲಿಂಗಾಯತರು 49,000, ಬ್ರಾಹ್ಮಣರು 32,000, ಎಸ್‌ಸಿ-ಎಸ್‌ಟಿ 82,000, ಮುಸ್ಲಿಂ 15,000, ಕುರುಬ 6,000, ದೇವಾಂಗ 5,000 ರಷ್ಟು ಇದ್ದಾರೆ. ಆದರೆ ತಮಿಳು 45,000, ತೆಲುಗು 43,000 ಭಾಷಿಕ ಮತದಾರರು ಅಭ್ಯರ್ಥಿಗಳ ಗೆಲುವಿನ ಪ್ರಮುಖ ನಿರ್ಣಾಯಕರಾಗಿದ್ದಾರೆ. 

ಕ್ಷೇತ್ರದ ಸಮಸ್ಯೆಗಳು:

ಕುಡಿಯುವ ನೀರು ಪೂರೈಕೆ, ಒಳಚರಂಡಿ ವ್ಯವಸ್ಥೆ ಕ್ಷೇತ್ರದಲ್ಲಿ ಸುಧಾರಿಸಬೇಕಿದೆ. ನೈಸ್ ರಸ್ತೆ, ಉತ್ತಮ ಆಸ್ಪತ್ರೆಗಳು, ಮಾಲ್‌ಗಳು ಕ್ಷೇತ್ರದಲ್ಲಿದ್ದು, ರಿಯಲ್ ಎಸ್ಟೇಟ್ ಉದ್ಯಮ ಜೋರಾಗಿರುವ ಕ್ಷೇತ್ರವಾಗಿದೆ. ಆದರೂ ಕ್ಷೇತ್ರದಲ್ಲಿ ಟೆಂಡರ್ ಗೋಲ್‌ಮಾಲ್‌, ನಕಲಿ ಬಿಲ್, ನಕಲಿ ಮತದಾರರ ಗುರುತಿನ ಚೀಟಿ ಪ್ರಕರಣಗಳು ಹೆಚ್ಚು ಸದ್ದು ಮಾಡಿದ್ದವು. ವೃಷಭಾವತಿ ಕಣಿವೆಯ ಉದ್ದಕ್ಕೂ ಇರುವ ಪ್ರದೇಶಗಳು ಪದೇ ಪದೇ ಪ್ರವಾಹ ಕಂಡಿವೆ. ಆದರೆ ಇದುವರೆಗೂ ಅದನ್ನು ಸರಿಪಡಿಸಲು ಹೆಚ್ಚಿನ ಕ್ರಮ ಕೈಗೊಂಡಿಲ್ಲ. ಉತ್ತಮ ರಸ್ತೆಗಳನ್ನು ನಿರ್ಮಿಸಲು ಮರಗಳನ್ನು ದೊಡ್ಡ ಪ್ರಮಾಣದಲ್ಲಿ ಕತ್ತರಿಸಲಾಗಿದೆ. ಕೆರೆಗಳನ್ನು ಕಾಂಕ್ರಿಟೀಕರಣಗೊಳಿಸಲಾಗಿದೆ. ಅಲ್ಲದೆ, ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಮಧ್ಯಪ್ರವೇಶದ ನಂತರವೂ ಕಸದ ಮಾಫಿಯಾ ಆತಂಕ ಮುಂದುವರೆದಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರೇಣುಕಸ್ವಾಮಿ ಕೊಲೆ ಪ್ರಕರಣ | 4ನೇ ಆರೋಪಿ ತಾಯಿ ಅನಾರೋಗ್ಯದಿಂದ ಸಾವು

ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ 4ನೇ ಆರೋಪಿ, ದರ್ಶನ್‌ ತೂಗುದೀಪ ಸೇನೆಯ...

ಮೋದಿಯನ್ನು ಬದಿಗೊತ್ತಿ ಯುವ ಭಾರತ ಗೆಲ್ಲುವತ್ತ ಚಿತ್ತ ಹರಿಸುವರೇ ರಾಹುಲ್‌ ಗಾಂಧಿ?

ದೇಶದ ಉದ್ದಗಲಕ್ಕೂ ನಡೆದ ಎರಡು ಭಾರತ್ ಜೋಡೋ ಯಾತ್ರೆಗಳು ಮತ್ತು 2024ರ...

ಪೋಷಕರು ತಮ್ಮ ಮನೆಯಿಂದಲೇ ಮಕ್ಕಳಿಗೆ ಸಾಹಿತ್ಯಾಸಕ್ತಿ ಬೆಳೆಸಬೇಕು: ಸ್ಪೀಕರ್ ಯು ಟಿ ಖಾದರ್

ಮಾತೃಭಾಷೆ, ಸಾಹಿತ್ಯಗಳು ಉಳಿದು ಬೆಳೆಯಬೇಕಾದರೆ ಮುಂದಿನ ಪೀಳಿಗೆಗೆ ವರ್ಗಾಯಿಸುವ ಅವಶ್ಯಕತೆ ಇದೆ....

ಹಗರಣಗಳು ಬಯಲಿಗೆ ಬರುವ ಭಯದಿಂದ ಸದನದಲ್ಲಿ ಬಿಜೆಪಿ ಗದ್ದಲ: ಡಿ ಕೆ ಶಿವಕುಮಾರ್ ವಾಗ್ದಾಳಿ

ಸರ್ಕಾರದ ಮೇಲೆ ಆರೋಪ ಮಾಡಿದ ಬಿಜೆಪಿಯವರಿಗೆ ಉತ್ತರವನ್ನು ಕೇಳುವ ಸಹನೆ, ಸಂಯಮ...