ಸ್ಯಾಂಡಲ್‌ವುಡ್‌ನ ನಿರ್ದೇಶಕ ಓಂ ಪ್ರಕಾಶ್ ರಾವ್ ಹಾಗೂ ಅವರ ಪತ್ನಿ ಡೆನ್ನಿಸಾ ಪ್ರಕಾಶ್ ವಿರುದ್ಧ ₹3.85 ಕೋಟಿ ಹಣ ಪಡೆದು ವಾಪಸ್ ನೀಡದೆ, ಜೀವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ನಟ ಭಾಸ್ಕರ್ ಶೆಟ್ಟಿ, ವಾಸುದೇವ ರೆಡ್ಡಿ ಸೇರಿದಂತೆ ಹಲವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಬೆಂಗಳೂರು ನಗರ ಪೊಲೀಸ್ ಆಯುಕ್ತರು ಹಾಗೂ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
‘ಫೀನಿಕ್ಸ್’ ಹೆಸರಿನ ಸಿನಿಮಾ ನಿರ್ಮಾಣಕ್ಕಾಗಿ 2023ರಲ್ಲಿ ಓಂ ಪ್ರಕಾಶ್ ರಾವ್ ದಂಪತಿ ಭಾಸ್ಕರ್ ಶೆಟ್ಟಿ, ವಾಸುದೇವ ರೆಡ್ಡಿ ಸೇರಿದಂತೆ ಹಲವರಿಂದ ಹಂತ ಹಂತವಾಗಿ ಒಟ್ಟು ₹3.85 ಕೋಟಿ ಸಾಲ ಪಡೆದಿದ್ದರು ಎನ್ನಲಾಗಿದೆ. ಆರು ತಿಂಗಳೊಳಗೆ ಹಣವನ್ನು ಹಿಂದಿರುಗಿಸುವುದಾಗಿ ಭರವಸೆ ನೀಡಿದ್ದರೂ, ಸುಮಾರು ಮೂರು ವರ್ಷ ಕಳೆದರೂ ಹಣ ವಾಪಸ್ ನೀಡಿಲ್ಲ ಎಂದು ದೂರುದಾರರು ಆರೋಪಿಸಿದ್ದಾರೆ.
ಹಣ ವಾಪಸ್ ನೀಡುವಂತೆ ಕೇಳಿದಾಗಲೆಲ್ಲಾ ಸತಾಯಿಸುತ್ತಿದ್ದರು. ಇದೇ ವಿಚಾರವಾಗಿ ಮಾತನಾಡಲು ನಿರ್ದೇಶಕರ ಮನೆ ಬಳಿ ತೆರಳಿದ್ದಾಗ ಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಹಣ ನೀಡಿರುವುದಕ್ಕೆ ಸಂಬಂಧಿಸಿದ ದಾಖಲೆಗಳು ಹಾಗೂ ಸಿನಿಮಾ ನಿರ್ಮಾಣಕ್ಕೆ ಸಂಬಂಧಿಸಿದ ಒಪ್ಪಂದ ಪತ್ರಗಳು ತಮ್ಮ ಬಳಿ ಇರುವುದಾಗಿ ದೂರುದಾರರು ತಿಳಿಸಿದ್ದಾರೆ. ಈ ಸಂಬಂಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗಿತ್ತು. ಆದರೆ ಅಲ್ಲಿ ಪರಿಹಾರ ದೊರೆಯದ ಹಿನ್ನೆಲೆಯಲ್ಲಿ ಇದೀಗ ಕಾನೂನು ಹೋರಾಟಕ್ಕೆ ಮುಂದಾಗಿರುವುದಾಗಿ ಭಾಸ್ಕರ್ ಶೆಟ್ಟಿ ತಿಳಿಸಿದ್ದಾರೆ. ಒಪ್ಪಂದ ಪತ್ರಗಳು ಹಾಗೂ ಚೆಕ್‌ಗಳನ್ನು ಆಧಾರವಾಗಿಟ್ಟುಕೊಂಡು ವಂಚನೆ ಮತ್ತು ಚೆಕ್ ಬೌನ್ಸ್ ಪ್ರಕರಣ ದಾಖಲಿಸಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: ತನ್ನ ಮದುವೆ ನಡುವೆ ಕೇಟರಿಂಗ್ ಸಿಬ್ಬಂದಿಗೆ ಪ್ರಥಮ ಚಿಕಿತ್ಸೆ ನೀಡಿದ ಕೇರಳದ ವೈದ್ಯೆ: ವಿಡಿಯೋ ವೈರಲ್
ಈ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆ ಮೂಲಕ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದ್ದು, ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಗಳ ಕುರಿತು ಓಂ ಪ್ರಕಾಶ್ ರಾವ್ ದಂಪತಿಯ ಪ್ರತಿಕ್ರಿಯೆ ಲಭ್ಯವಾಗಿಲ್ಲ.




