ಅಂಚಿನ ಮಕ್ಕಳ ಅಕ್ಷರಕೋಟೆ JNU; ವಿವಿ ಜೀವಾಳ ʼಕೃಪಾಂಕʼದ ಮೇಲೆ ಬಿಜೆಪಿ ಕಣ್ಣು?

Date:

ದೆಹಲಿಯ ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯ (JNU) ಸಮಾಜದ ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳ ಮಕ್ಕಳಿಗೆ ಉನ್ನತ ಶಿಕ್ಷಣದ ಬಾಗಿಲು ತೆರೆಸಿದ ಅಕ್ಷರ ವೇದಿಕೆ. ಬಡತನದ ಬೇಗೆಯಲ್ಲಿ ಬೆಂದ ತಳವರ್ಗದ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಟ್ಟ ಸಾಮಾಜಿಕ ನ್ಯಾಯದ ಭದ್ರ ಕೋಟೆಯ ಮೇಲೀಗ ಗದಾ ಪ್ರಹಾರದ ಯತ್ನಗಳು ಜೋರಾಗಿವೆ. ವಿವಿಯ ಅನನ್ಯತೆಯಾದ ‘ಅವಕಾಶವಂಚಿತ ಕೃಪಾಂಕ’ಗಳ (Deprivation Points) ವ್ಯವಸ್ಥೆಯು ನ್ಯಾಯಾಲಯದ ಮೆಟ್ಟಿಲೇರಿರುವ ಮತ್ತು ಇದರ ವಿರುದ್ಧ ಉಳ್ಳವರ ವರ್ಗ ಧ್ವನಿ ಎತ್ತುತ್ತಿರುವ ಹೊತ್ತಿನಲ್ಲಿ, ಈ ವಿಶ್ವವಿದ್ಯಾಲಯದ ಐತಿಹಾಸಿಕ ಬದ್ಧತೆ ಹಾಗೂ ಅದರ ಸುತ್ತ ಹೆಣೆಯಲ್ಪಡುತ್ತಿರುವ ರಾಜಕೀಯ ಸಂಘರ್ಷಗಳನ್ನೊಮ್ಮೆ ತಿರುಗಿ ನೋಡುವ ಅಗತ್ಯವಿದೆ.

- Advertisement -

ದೆಹಲಿ ನಗರದಲ್ಲಿ ಮತ್ತೊಂದು ವಿಶ್ವವಿದ್ಯಾಲಯ ಕಟ್ಟಬೇಕು ಎಂಬ ಉದ್ದೇಶದಿಂದ ಜೆಎನ್‌ಯು ಹುಟ್ಟಿದ್ದಲ್ಲ. ದೇಶದ ವಿವಿಧ ಭಾಗಗಳ ಪ್ರತಿಭೆಗಳನ್ನು ಒಂದೇ ವೇದಿಕೆಗೆ ತಂದು, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯಿಂದ ಬರುವ ವಿದ್ಯಾರ್ಥಿಗಳಿಗೂ ಉನ್ನತ ಶಿಕ್ಷಣದ ಸಮಾನ ಅವಕಾಶ ಕಲ್ಪಿಸಬೇಕು ಎಂಬ ಆಶಯದೊಂದಿಗೆ ಸ್ಥಾಪಿಸಲಾದ ವಿವಿ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಜವಾಹರಲಾಲ್‌ ನೆಹರು ಅವರ ಹೆಸರಿನಲ್ಲಿದ್ದ ಈ ಉನ್ನತ ಶಿಕ್ಷಣ ಸಂಸ್ಥೆಯ ಕಲ್ಪನೆ 1960ರ ದಶಕದಲ್ಲೇ ರೂಪ ಪಡೆಯಿತು. 1966ರಲ್ಲಿ ಸಂಸತ್ತು ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯ ಕಾಯ್ದೆಯನ್ನು ಅಂಗೀಕರಿಸಿತು. ಬಳಿಕ 1969ರಲ್ಲಿ ಜೆಎನ್‌ಯು ಅಧಿಕೃತವಾಗಿ ಕಾರ್ಯಾರಂಭ ಮಾಡಿತು. ಆರಂಭದಿಂದಲೇ ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳಿಗಿಂತ ಭಿನ್ನವಾದ ಶೈಕ್ಷಣಿಕ ಮಾದರಿಯನ್ನು ರೂಪಿಸುವ ಪ್ರಯತ್ನ ಇಲ್ಲಿ ನಡೆಯಿತು. ಸಂಶೋಧನೆ, ಚಿಂತನೆ, ಸಾಮಾಜಿಕ ವಿಜ್ಞಾನ, ಭಾಷೆ, ಅಂತಾರಾಷ್ಟ್ರೀಯ ಅಧ್ಯಯನ ಮತ್ತು ವಿಜ್ಞಾನ ಕ್ಷೇತ್ರಗಳಲ್ಲಿ ಹೊಸ ಚಿಂತನೆಗೆ ವೇದಿಕೆಯಾಗಬೇಕು ಎಂಬುದು ಜೆಎನ್‌ಯುವಿನ ಆಶಯವಾಗಿತ್ತು. ಇದರ ಕ್ಯಾಂಪಸ್‌ ಕೂಡ ದೇಶದ ವಿವಿಧ ರಾಜ್ಯಗಳು, ಭಾಷೆಗಳು, ಸಾಮಾಜಿಕ ವರ್ಗಗಳು ಮತ್ತು ಆರ್ಥಿಕ ಹಿನ್ನೆಲೆಯ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸುವ ಮೂಲಕ ಅದೇ ವೈವಿಧ್ಯಕ್ಕೆ ಸಾಕ್ಷಿಯಾಯಿತು.

ಇದೇ ಐತಿಹಾಸಿಕ ಹಿನ್ನೆಲೆಯಲ್ಲೇ ಜೆಎನ್‌ಯುವಿನ ‘ಅವಕಾಶವಂಚಿತ ಕೃಪಾಂಕ’ಗಳ (Deprivation Points) ವ್ಯವಸ್ಥೆಯನ್ನು ಅರ್ಥೈಸಿಕೊಳ್ಳಬೇಕು. ಆರಂಭದಿಂದಲೂ ಸಾಮಾಜಿಕ ನ್ಯಾಯ ಜೆಎನ್‌ಯುವಿನ ಶೈಕ್ಷಣಿಕ ಸಂಸ್ಕೃತಿಯ ಪ್ರಮುಖ ಭಾಗವಾಗಿ ಬೆಳೆಯಿತು. ಅವಕಾಶವಂಚಿತ ವಿದ್ಯಾರ್ಥಿಗಳಿಗೆ ಪ್ರವೇಶದ ಬಾಗಿಲು ತೆರೆಯುವುದು, ಅತ್ಯಂತ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಉನ್ನತ ಶಿಕ್ಷಣ ಒದಗಿಸುವುದು ಮತ್ತು ವಿವಿಧ ಅಂಚಿನ ಸಾಮಾಜಿಕ ಹಿನ್ನೆಲೆಯ ವಿದ್ಯಾರ್ಥಿಗಳು ಒಂದೇ ಕ್ಯಾಂಪಸ್‌ನಲ್ಲಿ ಮುಕ್ತವಾಗಿ ಕಲಿಯುವ ವಾತಾವರಣ ಸೃಷ್ಟಿಸುವುದು ಇದರ ಅತ್ಯಂತ ದೊಡ್ಡ ವಿಶಿಷ್ಟತೆಯಾಯಿತು. ನಗರ ಪ್ರದೇಶಗಳ ಸುಸಜ್ಜಿತ ಶಾಲೆಗಳಲ್ಲಿ ಓದಿದ ಮೇಲ್ವರ್ಗದ ವಿದ್ಯಾರ್ಥಿಗಳೊಂದಿಗೆ, ಹಿಂದುಳಿದ ಗ್ರಾಮೀಣ ಭಾಗದ ಬಡ ಮಕ್ಕಳು ನೇರವಾಗಿ ಸ್ಪರ್ಧಿಸಲಾಗದ ಅಸಮಾನತೆಯನ್ನು ಹೋಗಲಾಡಿಸಲು ಈ ಕೃಪಾಂಕಗಳ ವ್ಯವಸ್ಥೆ ವರದಾನವಾಯಿತು.

image 175

ಏನಿದು ‘ಅವಕಾಶವಂಚಿತ ಕೃಪಾಂಕ’ಗಳ (Deprivation Points) ವ್ಯವಸ್ಥೆ?

ಸಾಮಾನ್ಯವಾಗಿ ಪ್ರವೇಶ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದಲ್ಲೇ ಮೆರಿಟ್‌ ಪಟ್ಟಿ ಸಿದ್ಧವಾಗುತ್ತದೆ. ಆದರೆ ಎಲ್ಲ ವಿದ್ಯಾರ್ಥಿಗಳೂ ಒಂದೇ ರೀತಿಯ ಅವಕಾಶಗಳ ನಡುವೆ ಪರೀಕ್ಷೆ ಬರೆಯುವುದಿಲ್ಲ ಎಂಬುದು ಜೆಎನ್‌ಯು ಒಳನೋಟ. ಹೀಗಾಗಿ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ಪರಿಸ್ಥಿತಿಯಿಂದ ಬಂದ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆಯ ಅಂಕಗಳ ಜತೆಗೆ ಹೆಚ್ಚುವರಿ ಕೃಪಾಂಕ ನೀಡುವ ವ್ಯವಸ್ಥೆಯನ್ನು ರೂಪಿಸಲಾಗಿದೆ.

ಪ್ರಸ್ತುತ ನಿಯಮಗಳ ಪ್ರಕಾರ, ಅರ್ಹ ಅಭ್ಯರ್ಥಿಗಳಿಗೆ ಗರಿಷ್ಠ 12 ಕೃಪಾಂಕಗಳವರೆಗೆ ನೀಡಲಾಗುತ್ತದೆ. ಅಭ್ಯರ್ಥಿ ಶಿಕ್ಷಣ ಪಡೆದಿರುವ ಜಿಲ್ಲೆಯ ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಪರಿಸ್ಥಿತಿಯೂ ಇದರಲ್ಲಿ ಪ್ರಮುಖ ಮಾನದಂಡವಾಗಿದೆ. ಜಿಲ್ಲೆಗಳನ್ನು ಮಹಿಳಾ ಅನಕ್ಷರತೆ ಪ್ರಮಾಣ, ಕೃಷಿ ಕಾರ್ಮಿಕರ ಪ್ರಮಾಣ, ಗ್ರಾಮೀಣ ಜನಸಂಖ್ಯೆ ಹಾಗೂ ಮನೆಗಳಲ್ಲಿ ಶೌಚಾಲಯದ ಲಭ್ಯತೆ ಸೇರಿದಂತೆ ಹಲವು ಸೂಚಕಗಳ ಆಧಾರದಲ್ಲಿ ಹಿಂದುಳಿತದ ಮಟ್ಟಕ್ಕೆ ಅನುಗುಣವಾಗಿ ವರ್ಗೀಕರಿಸಲಾಗಿದೆ. ಹೆಚ್ಚು ಹಿಂದುಳಿದ ಕ್ವಾರ್ಟೈಲ್‌-1 ಜಿಲ್ಲೆಯಿಂದ ಬರುವ ಪದವಿ ಅಭ್ಯರ್ಥಿಗೆ ಗರಿಷ್ಠ 6 ಅಂಕ, ಕ್ವಾರ್ಟೈಲ್‌-2 ಜಿಲ್ಲೆಯಿಂದ ಬರುವವರಿಗೆ 4 ಅಂಕ ದೊರೆಯಬಹುದು (ಸ್ನಾತಕೋತ್ತರ ಪ್ರವೇಶದಲ್ಲಿ ಈ ಅಂಕಗಳು ಕ್ರಮವಾಗಿ 3 ಮತ್ತು 2). ಜತೆಗೆ, ನಿಯಮಾನುಸಾರ ಮಹಿಳಾ ಮತ್ತು ಟ್ರಾನ್ಸ್‌ಜೆಂಡರ್‌ ಅಭ್ಯರ್ಥಿಗಳಿಗೂ ಹೆಚ್ಚುವರಿ ಕೃಪಾಂಕಗಳ ಅವಕಾಶವಿದ್ದು, ಕಾಶ್ಮೀರಿ ವಲಸಿಗ ಅಭ್ಯರ್ಥಿಗಳಿಗೆ 5 ಅಂಕಗಳ ಪ್ರತ್ಯೇಕ ಅವಕಾಶವೂ ಇದೆ. ಇಲ್ಲಿ ಗಮನಿಸಬೇಕಾದ ಪ್ರಮುಖ ಸಂಗತಿಯೆಂದರೆ, ಈ ಕೃಪಾಂಕಗಳು ಪರೀಕ್ಷೆಯ ಅಂಕಗಳಿಗೆ ಪರ್ಯಾಯವಲ್ಲ. ಪ್ರವೇಶ ಪರೀಕ್ಷೆಯ ಮೂಲಕ ವಿದ್ಯಾರ್ಥಿಯ ಶೈಕ್ಷಣಿಕ ಸಾಮರ್ಥ್ಯವನ್ನು ಅಳೆಯುವುದರ ಜತೆಗೆ, ಆ ಸಾಮರ್ಥ್ಯವನ್ನು ಪ್ರದರ್ಶಿಸಲು ಆತನಿಗೆ ಅಥವಾ ಆಕೆಗೆ ದೊರೆತ ಅವಕಾಶಗಳನ್ನೂ ಪರಿಗಣಿಸುವುದು ಇದರ ಮೂಲ ಉದ್ದೇಶ.

ನಗರದ ಉತ್ತಮ ಶಾಲೆಯಲ್ಲಿ ಓದಿ, ದುಬಾರಿ ಕೋಚಿಂಗ್‌ ಪಡೆದು ಪರೀಕ್ಷೆ ಬರೆದ ವಿದ್ಯಾರ್ಥಿ ಮತ್ತು ಮೂಲಭೂತ ಸೌಲಭ್ಯಗಳೇ ಇಲ್ಲದ ಹಿಂದುಳಿದ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ಓದಿ ಅದೇ ಪರೀಕ್ಷೆ ಬರೆದ ವಿದ್ಯಾರ್ಥಿಯನ್ನು ಕೇವಲ ಅಂತಿಮ ಅಂಕಗಳಿಂದ ಹೋಲಿಸುವುದು ಎಷ್ಟು ನ್ಯಾಯಸಮ್ಮತ ಎಂಬ ಪ್ರಶ್ನೆಗೆ ಜೆಎನ್‌ಯು ತನ್ನದೇ ರೀತಿಯಲ್ಲಿ ಉತ್ತರ ಕಂಡುಕೊಂಡಿದೆ. ‘ಎಲ್ಲರೂ ಒಂದೇ ಪರೀಕ್ಷೆ ಬರೆಯುತ್ತಾರೆ’ ಎಂಬುದು ಸಮಾನತೆ ಅಲ್ಲ; ‘ಎಲ್ಲರೂ ಸಮಾನ ಅವಕಾಶದೊಂದಿಗೆ ಪರೀಕ್ಷೆ ಬರೆಯುವಂತಾಗಬೇಕು’ ಎಂಬುದು ನಿಜವಾದ ಸಮಾನತೆ. ಡಿಪ್ರಿವೇಶನ್‌ ಪಾಯಿಂಟ್ಸ್‌ ವ್ಯವಸ್ಥೆಯ ಹಿಂದಿರುವ ಮೂಲ ತತ್ವವೇ ಇದು.

ಕೃಪಾಂಕಕ್ಕೆ ವಿರೋಧ ಏಕೆ?

ಆದರೆ, ಜೆಎನ್‌ಯುವಿನ ಈ ವಿಶಿಷ್ಟ ವ್ಯವಸ್ಥೆಗೆ ಎಲ್ಲರೂ ಬೆಂಬಲ ವ್ಯಕ್ತಪಡಿಸುತ್ತಿಲ್ಲ. ‘ಅವಕಾಶವಂಚಿತ ಕೃಪಾಂಕ’ಗಳ ವಿರುದ್ಧ ವಿಶೇಷವಾಗಿ ಮೇಲ್ವರ್ಗಗಳ ವಿರೋಧ ವ್ಯಕ್ತವಾಗುತ್ತಿದೆ. ಪ್ರವೇಶ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳೇ ವಿದ್ಯಾರ್ಥಿಯ ಸಾಮರ್ಥ್ಯವನ್ನು ನಿರ್ಧರಿಸಬೇಕು. ಪರೀಕ್ಷೆ ಮುಗಿದ ಬಳಿಕ ಅಭ್ಯರ್ಥಿಯ ಹಿನ್ನೆಲೆಯ ಆಧಾರದಲ್ಲಿ ಹೆಚ್ಚುವರಿ ಅಂಕಗಳನ್ನು ಸೇರಿಸುವುದರಿಂದ ಮೆರಿಟ್‌ ವ್ಯವಸ್ಥೆಯೇ ದುರ್ಬಲವಾಗುತ್ತದೆ ಎಂಬುದು ವಿರೋಧಿಗಳ ವಾದ.

ವಿರೋಧಿಗಳ ದೃಷ್ಟಿಯಲ್ಲಿ, ಡಿಪ್ರಿವೇಶನ್‌ ಪಾಯಿಂಟ್ಸ್‌ ವ್ಯವಸ್ಥೆ ಒಂದೇ ಪ್ರವೇಶ ಪರೀಕ್ಷೆ ಬರೆದ ಅಭ್ಯರ್ಥಿಗಳ ನಡುವೆ ಅಸಮಾನತೆ ಸೃಷ್ಟಿಸುತ್ತದೆ. ಉದಾಹರಣೆಗೆ, ಇಬ್ಬರು ವಿದ್ಯಾರ್ಥಿಗಳು CUETನಲ್ಲಿ ಒಂದೇ ಅಂಕ ಗಳಿಸಿದರೂ, ಒಬ್ಬರಿಗೆ ಹೆಚ್ಚುವರಿ ಡಿಪ್ರಿವೇಶನ್‌ ಪಾಯಿಂಟ್ಸ್‌ ಸಿಗುವುದರಿಂದ ಅವರ ಅಂತಿಮ ಪ್ರವೇಶ ಅಂಕ ಹೆಚ್ಚಾಗಬಹುದು. ಹೀಗಾಗಿ ಪರೀಕ್ಷೆಯಲ್ಲಿ ಗಳಿಸಿದ ಮೂಲ ಅಂಕಗಳೇ ಮೆರಿಟ್‌ಗೆ ಆಧಾರವಾಗಬೇಕು; ಪರೀಕ್ಷೆ ಮುಗಿದ ಬಳಿಕ ಹೆಚ್ಚುವರಿ ಅಂಕ ಸೇರಿಸುವುದು ಸ್ಪರ್ಧಾತ್ಮಕ ಪರೀಕ್ಷೆಯ ಸಮಾನತೆಯನ್ನು ದುರ್ಬಲಗೊಳಿಸುತ್ತದೆ ಎಂಬುದು ವಿರೋಧಿಗಳ ವಾದ. ಇದೇ ಪ್ರಶ್ನೆಯನ್ನು ಆಧರಿಸಿ ಅರ್ಜಿದಾರರು ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಆದರೆ ಜೆಎನ್‌ಯು ಮತ್ತು ವ್ಯವಸ್ಥೆಯ ಪರವಾಗಿರುವವರ ವಾದ ಇದಕ್ಕೆ ಸಂಪೂರ್ಣ ಭಿನ್ನ. ಅವರ ಪ್ರಕಾರ, ಪರೀಕ್ಷೆಯಲ್ಲಿ ಇಬ್ಬರೂ ಒಂದೇ ಪ್ರಶ್ನೆಪತ್ರಿಕೆಗೆ ಉತ್ತರಿಸಿದ ಮಾತ್ರಕ್ಕೆ ಇಬ್ಬರಿಗೂ ಒಂದೇ ರೀತಿಯ ಅವಕಾಶಗಳು ದೊರೆತಿದ್ದವು ಎಂದು ಅರ್ಥವಲ್ಲ. ಹಿಂದುಳಿದ ಜಿಲ್ಲೆಯಲ್ಲಿ ಮೂಲಭೂತ ಶೈಕ್ಷಣಿಕ ಸೌಲಭ್ಯಗಳ ಕೊರತೆಯಲ್ಲಿ ಓದಿದ ವಿದ್ಯಾರ್ಥಿ ಮತ್ತು ಉತ್ತಮ ಶಾಲೆ, ಕೋಚಿಂಗ್‌, ಪುಸ್ತಕ, ಇಂಟರ್‌ನೆಟ್‌ ಸೌಲಭ್ಯಗಳ ನಡುವೆ ಬೆಳೆದ ವಿದ್ಯಾರ್ಥಿಯನ್ನು ಕೇವಲ ಪರೀಕ್ಷೆಯ ಅಂಕಗಳಿಂದ ಹೋಲಿಸುವುದು ನಿಜವಾದ ಸಮಾನತೆಯಾಗುವುದಿಲ್ಲ. ಹೀಗಾಗಿ ಡಿಪ್ರಿವೇಶನ್‌ ಪಾಯಿಂಟ್ಸ್‌ ‘ಅಂಕ ಕಡಿಮೆ ಇದ್ದರೂ ಸೀಟು ಕೊಡುವುದು’ ಅಲ್ಲ; ಇತಿಹಾಸದಿಂದಲೂ ಅವಕಾಶದ ಕೊರತೆ ಎದುರಿಸಿದ ವಿದ್ಯಾರ್ಥಿಗೆ ಸ್ಪರ್ಧೆಯಲ್ಲಿ ಸ್ವಲ್ಪ ಸಮತಟ್ಟಾದ ನೆಲ ಒದಗಿಸುವ ಪ್ರಯತ್ನ ಎಂಬುದು ಅವರ ವಾದ. ಜೆಎನ್‌ಯು ಪರಿಗಣಿಸಿರುವುದು ಇದನ್ನೇ. ಒಂದು ಪರೀಕ್ಷೆ ಬರೆಯುವ ಮುನ್ನವೇ ವಿದ್ಯಾರ್ಥಿಗಳ ನಡುವಿನ ಅವಕಾಶದ ಅಂತರ ಸಾವಿರಾರು ಅಂಕಗಳಷ್ಟಿದ್ದರೆ, ಪರೀಕ್ಷೆಯ ನಂತರ ನೀಡುವ ಕೆಲವೇ ಹೆಚ್ಚುವರಿ ಅಂಕಗಳನ್ನು ಅನ್ಯಾಯ ಎಂದು ಕರೆಯುವುದು ಎಷ್ಟು ಸಮಂಜಸ? ಎಂಬುದು ಅವರ ಪ್ರಶ್ನೆ.

ಇದನ್ನೂ ಓದಿ: Gen Z ಚಳವಳಿ ಕುರಿತು RSS ಬೈಠಕ್‌ನಲ್ಲಿ ಆತಂಕ: ವ್ಯವಸ್ಥೆಯ ವೈಫಲ್ಯವನ್ನು ಒಪ್ಪಿಕೊಂಡ ಸಂಘ

ಹೀಗಾಗಿ ವಿವಾದದ ನಿಜವಾದ ಪ್ರಶ್ನೆ ‘ಕೃಪಾಂಕ ಕೊಡುವುದೇ ತಪ್ಪೇ?’ ಎಂಬುದಲ್ಲ; ‘ಮೆರಿಟ್‌ ಎಂದರೆ ಪರೀಕ್ಷೆಯ ಅಂಕ ಮಾತ್ರವೇ, ಅಥವಾ ವಿದ್ಯಾರ್ಥಿ ಆ ಪರೀಕ್ಷೆ ಎದುರಿಸಿದ ಸಾಮಾಜಿಕ ಮತ್ತು ಶೈಕ್ಷಣಿಕ ಪರಿಸ್ಥಿತಿಯನ್ನೂ ಮೆರಿಟ್‌ನ ಭಾಗವಾಗಿ ಪರಿಗಣಿಸಬೇಕೇ?’ ಎಂಬುದಾಗಿದೆ.

ನ್ಯಾಯಾಲಯದ ಮೆಟ್ಟಿಲೇರಿದ ‘ಅವಕಾಶವಂಚಿತ ಕೃಪಾಂಕ’

ಜೆಎನ್‌ಯುವಿನ ‘ಅವಕಾಶವಂಚಿತ ಕೃಪಾಂಕ’ಗಳ ವ್ಯವಸ್ಥೆ ಇದೀಗ ನ್ಯಾಯಾಲಯದ ಪರಿಶೀಲನೆಯಲ್ಲಿದೆ. ಜೆಎನ್‌ಯು ಸ್ನಾತಕೋತ್ತರ ಪ್ರವೇಶ ಬಯಸಿದ್ದ ಅಮಿತ್‌ ಮೆಹ್ರಾ ಎಂಬ ಅಭ್ಯರ್ಥಿ ಈ ವ್ಯವಸ್ಥೆಯನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ ಮೊರೆ ಹೋಗಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಸ್ಮೀತ್‌ ಸಿಂಗ್‌ ಅವರ ಏಕಸದಸ್ಯ ಪೀಠ, ಕಳೆದ ಆಗಸ್ಟ್‌ 14ರಂದು ಮಧ್ಯಂತರ ಆದೇಶ ನೀಡಿತ್ತು. ಡಿಪ್ರಿವೇಶನ್‌ ಪಾಯಿಂಟ್ಸ್‌ ಆಧಾರದಲ್ಲಿ ನಡೆಯುತ್ತಿರುವ ಪ್ರವೇಶಗಳನ್ನು ಅಂತಿಮಗೊಳಿಸದಂತೆ ಜೆಎನ್‌ಯುಗೆ ಸೂಚಿಸಿದ ಪೀಠ, ಈ ವ್ಯವಸ್ಥೆಯ ಮೂಲಕ CUET ಪರೀಕ್ಷೆಯಲ್ಲಿ ಅಭ್ಯರ್ಥಿ ಗಳಿಸಿದ ಮೂಲ ಅಂಕಗಳಿಗೆ ಹೆಚ್ಚುವರಿ ಅಂಕಗಳನ್ನು ಸೇರಿಸಲಾಗುತ್ತಿದೆ ಎಂಬುದನ್ನು ಪ್ರಶ್ನಿಸಿತ್ತು.

ಜೆಎನ್‌ಯು 2026-27ರ ಪ್ರವೇಶ ಪ್ರಾಸ್ಪೆಕ್ಟಸ್‌ ಪ್ರಕಾರ, ಅರ್ಹ ಅಭ್ಯರ್ಥಿಗಳಿಗೆ ಗರಿಷ್ಠ 12 ಡಿಪ್ರಿವೇಶನ್‌ ಪಾಯಿಂಟ್ಸ್‌ ನೀಡಬಹುದಾಗಿದೆ. ಪ್ರತಿ ಒಂದು ಡಿಪ್ರಿವೇಶನ್‌ ಪಾಯಿಂಟ್‌ ಅನ್ನು ಮೂರು ಅಂಕಗಳಿಗೆ ಸಮನಾಗಿ ಪರಿಗಣಿಸುವುದರಿಂದ, ಗರಿಷ್ಠ 36 ಹೆಚ್ಚುವರಿ ಅಂಕಗಳಷ್ಟು ಪರಿಣಾಮ ಅಭ್ಯರ್ಥಿಯ ಪ್ರವೇಶ ಅಂಕಗಳ ಮೇಲೆ ಬೀಳಬಹುದು. ಈ ಅಂಶವನ್ನೇ ನ್ಯಾಯಮೂರ್ತಿ ಜಸ್ಮೀತ್‌ ಸಿಂಗ್‌ ಅವರು ಪ್ರಮುಖವಾಗಿ ಪರಿಗಣಿಸಿದ್ದರು.

ಪೀಠದ ಪ್ರಾಥಮಿಕ ಅಭಿಪ್ರಾಯದ ಪ್ರಕಾರ, ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ವಿದ್ಯಾರ್ಥಿ ಗಳಿಸಿರುವ ಅಂಕಗಳನ್ನು ವಿಶ್ವವಿದ್ಯಾಲಯ ತನ್ನದೇ ನಿಯಮದ ಮೂಲಕ ಬದಲಾಯಿಸುವಂತಾದರೆ, ಪ್ರವೇಶ ಪರೀಕ್ಷೆಯ ಪಾವಿತ್ರ್ಯ ಮತ್ತು ಸ್ಪರ್ಧಾತ್ಮಕತೆಯೇ ಪ್ರಶ್ನಾರ್ಹವಾಗಬಹುದು. ಇದೇ ಕಾರಣಕ್ಕೆ ಪ್ರಕರಣದ ಅಂತಿಮ ವಿಚಾರಣೆ ನಡೆಯುವವರೆಗೆ ಡಿಪ್ರಿವೇಶನ್‌ ಪಾಯಿಂಟ್ಸ್‌ ಆಧಾರಿತ ಪ್ರವೇಶಗಳನ್ನು ಅಂತಿಮಗೊಳಿಸದಂತೆ ಮಧ್ಯಂತರ ತಡೆ ನೀಡಲಾಗಿತ್ತು. ಪ್ರಕರಣದ ಮುಂದಿನ ವಿಚಾರಣೆಯನ್ನು ಆಗಸ್ಟ್‌ 24ಕ್ಕೆ ನಿಗದಿಪಡಿಸಲಾಗಿತ್ತು. ಏಕಸದಸ್ಯ ಪೀಠದ ಈ ಮಧ್ಯಂತರ ಆದೇಶದಿಂದ ಜೆಎನ್‌ಯುವಿನಲ್ಲಿ ನಡೆಯಬೇಕಿದ್ದ ಪ್ರವೇಶ ಪ್ರಕ್ರಿಯೆಗೆ ತಡೆ ಉಂಟಾಯಿತು. ಇದನ್ನು ಪ್ರಶ್ನಿಸಿ ವಿಶ್ವವಿದ್ಯಾಲಯವು ದೆಹಲಿ ಹೈಕೋರ್ಟ್‌ನ ವಿಭಾಗೀಯ ಪೀಠದ ಮುಂದೆ ಮೇಲ್ಮನವಿ ಸಲ್ಲಿಸಿತು.

ಆಗಸ್ಟ್‌ 18ರಂದು ವಿಭಾಗೀಯ ಪೀಠವು ಏಕಸದಸ್ಯ ಪೀಠದ ಮಧ್ಯಂತರ ಆದೇಶವನ್ನು ಮಾರ್ಪಡಿಸಿತು. ಜೆಎನ್‌ಯು ತನ್ನ 2026-27ರ ಇ-ಪ್ರಾಸ್ಪೆಕ್ಟಸ್‌ನ ನಿಯಮಗಳಂತೆ, ವಿವಾದದಲ್ಲಿರುವ ಡಿಪ್ರಿವೇಶನ್‌ ಪಾಯಿಂಟ್ಸ್‌ ವ್ಯವಸ್ಥೆಯನ್ನೂ ಒಳಗೊಂಡಂತೆ ಪ್ರವೇಶ ಪ್ರಕ್ರಿಯೆಯನ್ನು ಮುಂದುವರಿಸಬಹುದು ಎಂದು ಪೀಠ ಸ್ಪಷ್ಟಪಡಿಸಿತು. ಆದರೆ, ಈ ಮೂಲಕ ನೀಡಲಾಗುವ ಯಾವುದೇ ಪ್ರವೇಶವೂ ಏಕಸದಸ್ಯ ಪೀಠದ ಮುಂದೆ ಬಾಕಿ ಇರುವ ಮೂಲ ಅರ್ಜಿಯ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಷರತ್ತು ವಿಧಿಸಿತು.

ಇದನ್ನೂ ಓದಿ: ಟೆಲಿಪ್ರಾಂಪ್ಟರ್‌ ಇಲ್ಲದೆ ವಂದೇ ಮಾತರಂ ಹಾಡಿದರೆ ರಾಜೀನಾಮೆ: ಬಿಜೆಪಿ ನಾಯಕರಿಗೆ ಪ್ರಿಯಾಂಕ್‌ ಖರ್ಗೆ ಸವಾಲು

ಜೆಎನ್‌ಯುವಿನಲ್ಲಿ ಡಿಪ್ರಿವೇಶನ್‌ ಪಾಯಿಂಟ್ಸ್‌ ನೀಡುವ ಪದ್ಧತಿ 1974ರಿಂದಲೂ ಜಾರಿಯಲ್ಲಿದ್ದು, ಕಾಲಕಾಲಕ್ಕೆ ತಿದ್ದುಪಡಿ ಮಾಡಲಾಗಿದೆ ಮತ್ತು ವಿಶ್ವವಿದ್ಯಾಲಯದ ಅಕಾಡೆಮಿಕ್‌ ಕೌನ್ಸಿಲ್‌ನ ಅನುಮೋದನೆಯನ್ನೂ ಪಡೆದಿದೆ ಎಂಬುದನ್ನು ಪೀಠ ದಾಖಲಿಸಿತು. ಹೀಗಾಗಿ, ಸದ್ಯಕ್ಕೆ ಕೃಪಾಂಕ ವ್ಯವಸ್ಥೆ ರದ್ದಾಗಿಲ್ಲ; ಅದರ ಕಾನೂನುಬದ್ಧತೆ ಕುರಿತ ಅಂತಿಮ ನಿರ್ಧಾರ ಇನ್ನೂ ಬಾಕಿಯಿದೆ.

ಜೆಎನ್‌ಯು ಕುರಿತ ಈ ವಿವಾದವನ್ನು ಕೇವಲ ಕೆಲವು ಹೆಚ್ಚುವರಿ ಅಂಕಗಳ ವಿವಾದವಾಗಿ ನೋಡಲು ಸಾಧ್ಯವಿಲ್ಲ. ಇದು ಮೆರಿಟ್‌ ಮತ್ತು ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಸಮಾನ ಅವಕಾಶ, ಪರೀಕ್ಷೆಯ ಅಂಕ ಮತ್ತು ವಿದ್ಯಾರ್ಥಿಯ ಹಿನ್ನೆಲೆ… ಇವುಗಳ ನಡುವಿನ ಹಳೆಯ ಸಂಘರ್ಷದ ಹೊಸ ರೂಪ. ಒಂದು ಕಡೆ, ಪರೀಕ್ಷೆಯಲ್ಲಿ ಗಳಿಸಿದ ಅಂಕಗಳಿಗೆ ಹೆಚ್ಚಿನ ಪ್ರಾಮುಖ್ಯ ನೀಡಬೇಕು ಎಂಬ ವಾದವಿದೆ. ಮತ್ತೊಂದೆಡೆ, ಆ ಅಂಕ ಗಳಿಸುವ ಹಾದಿಯಲ್ಲೇ ಎಲ್ಲ ವಿದ್ಯಾರ್ಥಿಗಳಿಗೂ ಸಮಾನ ಅವಕಾಶ ಇರಲಿಲ್ಲ ಎಂಬ ವಾಸ್ತವವಿದೆ.

ಜೆಎನ್‌ಯುವಿನ ಡಿಪ್ರಿವೇಶನ್‌ ಪಾಯಿಂಟ್ಸ್‌ ವ್ಯವಸ್ಥೆ ಮುಂದುವರಿಯಬೇಕೇ, ಬದಲಾಗಬೇಕೇ ಅಥವಾ ರದ್ದಾಗಬೇಕೇ ಎಂಬುದನ್ನು ಅಂತಿಮವಾಗಿ ನ್ಯಾಯಾಲಯ ನಿರ್ಧರಿಸಲಿದೆ. ಆದರೆ ಆ ತೀರ್ಪಿನಾಚೆಗೆ ಸಮಾನ ಅವಕಾಶ ಸಿಗದ ಸಮಾಜದಲ್ಲಿ ಕೇವಲ ಸಮಾನ ಪರೀಕ್ಷೆ ನಡೆಸುವುದೇ ನಿಜವಾದ ಮೆರಿಟ್‌ ಅನ್ನು ಅಳೆಯುವ ಮಾನದಂಡವಾಗಬಹುದೇ? ಎಂಬ ಪ್ರಶ್ನೆ ಇದೆ. ಜೆಎನ್‌ಯು ದಶಕಗಳಿಂದ ನೀಡುತ್ತ ಬಂದಿರುವ ಉತ್ತರವೇ ಈ ಪ್ರಶ್ನೆಯ ಸುತ್ತ ನಡೆಯುತ್ತಿರುವ ಇಂದಿನ ಸಂಘರ್ಷದ ಕೇಂದ್ರಬಿಂದು.

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮುತ್ತಿಗೆಗಳು ಸುತ್ತುವರೆದಿರುವ ಗ್ಯಾನೇಶ್ ರಾಜೀನಾಮೆ ಸನ್ನಿಹಿತವೇ?

ದಿಲ್ಲಿ- ಮುಂಬಯಿಯಲ್ಲಿ‌ ಯುವಜನರು ಮತ್ತು  ಪ್ರತಿಪಕ್ಷಗಳ ಪ್ರತಿಭಟನೆಗಳು ಮುಂದುವರೆದಿವೆ. ಕಾಂಗ್ರೆಸ್ ಮತ್ತಿತರೆ ...

ವಿಜಯಪುರ | ಬರಪೀಡಿತ ಪ್ರದೇಶಗಳಿಗೆ ಡಿಸಿಎಂ ಪರಮೇಶ್ವರ್‌ ಭೇಟಿ

ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಅವರು ಅ.8 ಹಾಗೂ 9ರಂದು ವಿಜಯಪುರ ಮತ್ತು...

ಮಲ್ಲೇಶ್ವರಂನಲ್ಲಿ ಫಾರ್ಮ್-7‌ ದುರ್ಬಳಕೆ ಆರೋಪ; ʼಈ ದಿನʼ ವರದಿ ಆಧರಿಸಿ ಕಾಂಗ್ರೆಸ್ ದೂರು

ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ...

ಕಮಲನಗರ | ಅರ್ಹ ವೈದ್ಯಕೀಯ ಪದವಿ ಇಲ್ಲದೆ ವೈದ್ಯ ವೃತ್ತಿ: ಕ್ಲಿನಿಕ್ ಸೀಜ್

ಕಮಲನಗರ ತಾಲ್ಲೂಕಿನ ಚಾಂದೋರಿ ಗ್ರಾಮದಲ್ಲಿ ಯಾವುದೇ ವೈದ್ಯಕೀಯ ಪದವಿ ಇಲ್ಲದೆ ಅಕ್ರಮವಾಗಿ...