‘ಪತ್ತು ತಲಾ’ ಸಿನಿಮಾ ನೋಡಲು ಬಂದಿದ್ದ ಅಲೆಮಾರಿ ಜನ
ಟಿಕೆಟ್ ಇದ್ದರೂ ಚಿತ್ರಮಂದಿರದ ಒಳಗೆ ಬಿಡದ ಸಿಬ್ಬಂದಿ
ತಮಿಳಿನ ಖ್ಯಾತ ನಟ ಸಿಲಂಬರಸನ್ ಅಭಿನಯದ ʼಪತ್ತು ತಲಾʼ ಸಿನಿಮಾ ಮಾರ್ಚ್ 30ರಂದು ತೆರೆಕಂಡು ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚೆನ್ನೈನ ಜನಪ್ರಿಯ ʼರೋಹಿಣಿʼ ಚಿತ್ರಮಂದಿರದಲ್ಲಿ ಈ ಸಿನಿಮಾ ತೆರೆಕಂಡ ಮೊದಲ ದಿನ ವೀಕ್ಷಣೆಗೆ ತೆರಳಿದ್ದ ಅಲೆಮಾರಿ ಜನರನ್ನು ಚಿತ್ರಮಂದಿರದ ಸಿಬ್ಬಂದಿ ಒಳ ಪ್ರವೇಶಿಸದಂತೆ ತಡೆದ ಘಟನೆ ನಡೆದಿದೆ.
ಅಲೆಮಾರಿ ಸಮುದಾಯದ ಮಹಿಳೆ ತನ್ನ ಕುಟುಂಬಸ್ಥರೊಂದಿಗೆ ಚಿತ್ರಮಂದಿರದ ಒಳಗೆ ಪ್ರವೇಶಿಸಲು ಯತ್ನಿಸಿದಾಗ ಸಿಬ್ಬಂದಿ ಅವರನ್ನು ತಡೆದಿರುವ ದೃಶ್ಯ ಸ್ಥಳೀಯ ಮಾಧ್ಯಮಗಳ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಟಿಕೆಟ್ ಹೊಂದಿದ್ದರು ಕೂಡ ಸಿನಿಮಾ ವೀಕ್ಷಣೆಗೆ ಬಂದವರು ಅಲೆಮಾರಿ ಸಮುದಾಯದ ಜನ ಎಂಬ ಕಾರಣಕ್ಕೆ ಸಿಬ್ಬಂದಿ ಅವರನ್ನು ಒಳ ಪ್ರವೇಶಿಸದಂತೆ ತಡೆದಿದ್ದಾರೆ. ಸಿಬ್ಬಂದಿ ವರ್ತನೆಯಿಂದ ಬೇಸತ್ತು ಚಿತ್ರಮಂದಿರದಿಂದ ಹಿಂತಿರುಗುತ್ತಿದ್ದ ಅಲೆಮಾರಿ ಸಮುದಾಯದವರಿಗೆ ನೆರವಾಗಿರುವ ಸ್ಥಳೀಯ ಮಾಧ್ಯಮ ಪ್ರತಿನಿಧಿಗಳು ಚಿತ್ರಮಂದಿರದ ಆಡಳಿತ ವರ್ಗವನ್ನು ಪ್ರಶ್ನಿಸಿದ್ದಾರೆ. ಮಾಧ್ಯಮಗಳ ಕ್ಯಾಮೆರಾಗಳು ಕಾಣುತ್ತಲೇ ಎಚ್ಚೆತ್ತುಕೊಂಡ ಸಿಬ್ಬಂದಿ ಕೂಡಲೇ ಅಲೆಮಾರಿ ಸಮುದಾಯದವರಿಗೆ ಚಿತ್ರಮಂದಿರದೊಳಗೆ ಪ್ರವೇಶ ನೀಡಿದ್ದಾರೆ.
ಈ ಸಂದರ್ಭದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರೋಹಿಣಿ ಚಿತ್ರಮಂದಿರದ ಮಾಲೀಕ ರೇವಂತ್ ಚರಣ್ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. “ಆ ಜನ ಹಾಕಿಕೊಂಡಿರುವ ಬಟ್ಟೆಯನ್ನು ನೋಡಿ ನಿಮ್ಮವರು ಅವರನ್ನು ಒಳಗೆ ಬಿಡುತ್ತಿಲ್ಲವೇ” ಎಂದು ಪ್ರಶ್ನಿಸುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ‘ಆರ್‌ಆರ್‌ಆರ್’ ತಮಿಳು ಸಿನಿಮಾ; ಟೀಕೆಗೆ ಗುರಿಯಾದ ಪ್ರಿಯಾಂಕಾ ಚೋಪ್ರಾ
“ಯಾರೊ ಒಬ್ಬರು ನಮಗೆ ಸಿನಿಮಾ ಟಿಕೆಟ್ ಕೊಟ್ಟರು. ಅದನ್ನೇ ಇಟ್ಟುಕೊಂಡು ಸಿನಿಮಾ ನೋಡಲು ಚಿತ್ರಮಂದಿರದ ಒಳಗೆ ಹೊರಟರೆ ಸಿಬ್ಬಂದಿ ನಮ್ಮನ್ನು ಒಳಗೆ ಬಿಡುತ್ತಿಲ್ಲ. ಚಿತ್ರಮಂದಿರದಲ್ಲೂ ನಾವು ಜನರ ಬಳಿ ಹಣಕ್ಕಾಗಿ ಬೇಡುತ್ತೇವೆ ಎಂದುಕೊಂಡಿರಬಹುದು” ಎಂದು ಅಲೆಮಾರಿ ಸಮುದಾಯದ ಮಹಿಳೆ ಬೇಸರ ವ್ಯಕ್ತಪಡಿಸಿದ್ದಾರೆ.
ಮಹಿಳೆ ಮಾತನಾಡಿರುವ ವಿಡಿಯೋವನ್ನು ಹಂಚಿಕೊಂಡು ನೆಟ್ಟಿಗರ ಟೀಕೆಗೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಚಿತ್ರಮಂದಿರದ ಮಾಲೀಕ ರೇವಂತ್, “ಇದು ಘಟನೆಯ ಇನ್ನೊಂದು ಮುಖ” ಎಂದಿದ್ದಾರೆ. ವಿಡಿಯೋದಲ್ಲಿ ಅಲೆಮಾರಿ ಸಮುದಾಯದ ಜನರಿಗೆ ಚಿತ್ರಮಂದಿರ ಪ್ರವೇಶಿಸಲು ಸಿಬ್ಬಂದಿ ಅನುವು ಮಾಡಿಕೊಟ್ಟ ದೃಶ್ಯವೂ ಸೆರೆಯಾಗಿದೆ.
“ಅಲೆಮಾರಿ ಜನಾಂಗದವರಿಗೆ ಯಾರೇ ಉಚಿತವಾಗಿ ಟಿಕೆಟ್ ನೀಡಿರಬಹುದು. ಆದರೆ, ಅವರು ಟಿಕೆಟ್ ಸಹಿತ ಮೊದಲ ಬಾರಿಗೆ ಚಿತ್ರಮಂದಿರಕ್ಕೆ ಬಂದಾಗ ನಿಮ್ಮ ಸಿಬ್ಬಂದಿ ಯಾಕೆ ತಡೆಯಲು ಯತ್ನಿಸಿದರು? ಮಾಧ್ಯಮಗಳು ಮಧ್ಯಪ್ರವೇಶಿಸಿದ ನಂತರವಷ್ಟೇ ಸಿನಿಮಾ ವೀಕ್ಷಣೆಗೆ ಅವಕಾಶ ನೀಡಲಾಗಿದೆ” ಎಂದು ರೋಹಿಣಿ ಚಿತ್ರಮಂದಿರ ಆಡಳಿತ ವರ್ಗಕ್ಕೆ ನೆಟ್ಟಿಗರು ಛೀಮಾರಿ ಹಾಕಿದ್ದಾರೆ.