ಜೆಟ್‌ಲ್ಯಾಗ್ ಪಬ್ ಪ್ರಕರಣಕ್ಕೆ ಸಂಬಂಧಿಸಿ ಇಂದು ವಿಚಾರಣೆಗೆ ಹಾಜರಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, “ನಟ ದರ್ಶನ್ ‘ಕಾಟೇರ’ ಯಶಸ್ಸು ಸಹಿಸಲಾಗದೆ ಕಾಣದ ಕೈಗಳ ಮೂಲಕ ನೋಟಿಸ್ ನೀಡಲಾಗಿದೆ. ಇದರ ಹಿಂದೆ ಯಾರಿದ್ದಾರೆ ಅನ್ನುವುದು ನಮಗೆ ಗೊತ್ತಿದೆ” ಎಂದು ಆರೋಪಿಸಿದ್ದಾರೆ.
“ನಾವು ಪಾರ್ಟಿ ಮಾಡಿರಲಿಲ್ಲ. ಊಟ ಮಾಡಿದ್ದು ಅಷ್ಟೇ. ನಮ್ಮನ್ನು ಯಾರೂ ಬಂದು ಕೇಳಿರಲಿಲ್ಲ. ನಮ್ಮಿಂದ ಯಾರಿಗೂ ತೊಂದರೆಯೂ ಆಗಿರಲಿಲ್ಲ. ಈಗ ನೋಡಿದ್ರೆ ನೋಟಿಸ್ ಕೊಟ್ಟು ಪೊಲೀಸ್ ಸ್ಟೇಷನ್ಗೆ ಕರೆಸಿಕೊಂಡಿದ್ದಾರೆ. ಕೇಸ್ನಲ್ಲಿ ಯಾಕೆ ದರ್ಶನ್ ಹೆಸರು ತರ್ತಿದ್ದಾರೆ ಅನ್ನೋದು ಗೊತ್ತಿಲ್ಲ. ದರ್ಶನ್ ಅವರನ್ನು ಯಾರು ಟಾರ್ಗೆಟ್ ಮಾಡ್ತಿದ್ದಾರೆ ಅನ್ನೋದು ಗೊತ್ತಿದೆ. ಅದು ನಿಮಗೂ ಗೊತ್ತು. ಕೇವಲ ಊಟ ಮಾಡಿದ್ದಕ್ಕಾಗಿ ನೋಟಿಸ್ ನೀಡಿರುವುದರ ಹಿಂದೆ ದುರುದ್ದೇಶ ಇದೆ. ಇಷ್ಟು ಜನರನ್ನು ಪೊಲೀಸ್ ಠಾಣೆಗೆ ಕರೆದು ಹೇಳಿಕೆ ಪಡೆದುಕೊಂಡಿದ್ದಾರೆ” ಎಂದರು ಆಕ್ರೋಶ ಹೊರಹಾಕಿದ್ದಾರೆ.
“ಕ್ಲೋಸ್ ಮಾಡಬೇಕಿದ್ದ ಪಬ್‌ನಲ್ಲಿ ಮಧ್ಯರಾತ್ರಿ 1 ಗಂಟೆ ಮೇಲೆ ಎಣ್ಣೆ ಪಾರ್ಟಿ ಮಾಡಿದ್ದೀರಿ ಎಂದು ಆರೋಪ ಮಾಡಲಾಗುತ್ತಿದೆ. ನಮಗೆ ಯಾವ ಪೊಲೀಸರು ಕೂಡ ಪಬ್ಗೆ ಬಂದು ಹೇಳಿರಲಿಲ್ಲ. ನಾವು ಸಕ್ಸಸ್ ಪಾರ್ಟಿ ಮಾಡಿದ್ದು ನಿಜ, ಊಟ ಮಾಡಿದ್ದು ಅಷ್ಟೇ. ಇಷ್ಟಕ್ಕೆ ಹೋಟೆಲ್ಗೆ ಹೋದ ಗ್ರಾಹಕರಿಗೆ ನೋಟಿಸ್ ನೀಡೋದು ಎಷ್ಟು ಸರಿ” ಎಂದು ರಾಕ್‌ಲೈನ್ ವೆಂಕಟೇಶ್ ಪ್ರಶ್ನಿಸಿದ್ದಾರೆ.
ಪೊಲೀಸರ ವಿಚಾರಣೆಗೆ ಹಾಜರಾದ ನಟ ದರ್ಶನ್ ಮತ್ತವರ ತಂಡ
‘ಕಾಟೇರ’ ಸಿನಿಮಾದ ಯಶಸ್ಸನ್ನು ಸಂಭ್ರಮಿಸಲು ಬೆಂಗಳೂರಿನ ಒರಾಯನ್ ಮಾಲ್ ಬಳಿ ಇರುವ ಜೆಟ್‌ಲ್ಯಾಗ್ ಪಬ್‌ನಲ್ಲಿ ತಡರಾತ್ರಿಯವರೆಗೂ ಪಾರ್ಟಿ ನಡೆಸಿದ ಸಂಬಂಧ ದಾಖಲಾಗಿದ್ದ ಪ್ರಕರಣದ ವಿಚಾರಣೆಗಾಗಿ ನಟ ದರ್ಶನ್ ಮತ್ತವರ ತಂಡ ಇಂದು ಪೊಲೀಸರ ಮುಂದೆ ಹಾಜರಾಗಿದ್ದಾರೆ.
ಪೊಲೀಸ್ ಇಲಾಖೆಯ ನಿಯಮದ ಪ್ರಕಾರ ತಡರಾತ್ರಿ 1 ಗಂಟೆವರೆಗೆ ಮಾತ್ರ ಪಬ್ ಓಪನ್ ಇಡಲು ಅವಕಾಶ ಇದೆ. ಆದರೆ, ಇಲ್ಲಿ ನಿಯಮವನ್ನು ಮೀರಿ ಮುಂಜಾನೆವರೆಗೆ ಪಾರ್ಟಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಜೆಟ್‌ಲ್ಯಾಗ್ ಪಬ್‌ನಲ್ಲಿ ಪಬ್ ಮಾಲೀಕರ ವಿರುದ್ಧ ಸುಬ್ರಹ್ಮಣ್ಯ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ನಿಯಮ ಉಲ್ಲಂಘಿಸಿ ಜ.3ರಂದು ಪಾರ್ಟಿ ನಡೆಸಿದ್ದ ಆರೋಪದ ಮೇರೆಗೆ ಜ.7ರಂದು ಪೊಲೀಸರು ವಿಚಾರಣೆಗೆ ಬರುವಂತೆ ನೋಟಿಸ್ ಜಾರಿ ಮಾಡಿದ್ದರು. ಜ.8ರಂದು ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿತ್ತು. ಆದರೆ, ದರ್ಶನ್ ಹಾಗೂ ತರುಣ್ ಸುಧೀರ್ ಸಿನಿಮಾದ ಪ್ರಚಾರಕ್ಕೆ ದುಬೈಗೆ ತೆರಳಿದ್ದರಿಂದ ವಿಚಾರಣೆಗೆ ಬಂದಿರಲಿಲ್ಲ. ನಿನ್ನೆ ದುಬೈಯಿಂದ ಮರಳಿದ್ದು, ಶುಕ್ರವಾರ(ಜ.12) ಎಲ್ಲರೂ ಒಮ್ಮೆಲೇ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ವಿಚಾರಣೆಗೆ ಆಗಮಿಸಿದ್ದಾರೆ. ಠಾಣೆಯಲ್ಲಿ ಎಲ್ಲರ ಹೇಳಿಕೆ ಪಡೆದುಕೊಳ್ಳಲಾಯಿತು.
ನಟ ದರ್ಶನ್ ಸೇರಿದಂತೆ ನಟರಾದ ನೀನಾಸಂ ಸತೀಶ್, ಡಾಲಿ ಧನಂಜಯ್, ಅಭಿಷೇಕ್ ಅಂಬರೀಶ್, ಚಿಕ್ಕಣ್ಣ, ಶ್ರೀನಗರ ಕಿಟ್ಟಿ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ನಿರ್ದೇಶಕ ತರುಣ್ ಸುಧೀರ್ ಸೇರಿದಂತೆ ಎಲ್ಲರೂ ಕೂಡ ಇಂದು ವಿಚಾರಣೆಗೆ ಹಾಜರಾಗಿದ್ದಾರೆ. ಸ್ಟೇಷನ್ ಬಳಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಈ ನಡುವೆ ಪೊಲೀಸ್ ಠಾಣೆ ಮುಂದೆ ಅಭಿಮಾನಿಗಳು ಸೇರಿದ್ದು, ಡಾ.ರಾಜ್‌ಕುಮಾರ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಪೊಲೀಸರು ಹೇಳಿದ್ದೇನು?
‘ಜ.3ರಂದು ಒರಾಯನ್ ಮಾಲ್‌ನಲ್ಲಿ ಚಿತ್ರರಂಗದ ಗಣ್ಯರಿಗೆ ಸಿನಿಮಾದ ವಿಶೇಷ ಪ್ರದರ್ಶನ ಆಯೋಜಿಸಲಾಗಿತ್ತು. ಅದಾದ ಮೇಲೆ ನಿರ್ಮಾಪಕ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ ಜಗದೀಶ್ ಮಾಲೀಕತ್ವದ ಜೆಟ್‌ಲ್ಯಾಗ್ ಪಬ್‌ನಲ್ಲಿ ಪಾರ್ಟಿ ಆಯೋಜನೆಗೊಂಡಿತ್ತು.
“ರಾತ್ರಿ 1 ಗಂಟೆಯವರೆಗೆ ಮಾತ್ರ ಪಾರ್ಟಿಗೆ ಅವಕಾಶವಿತ್ತು. ಆದರೆ, ರಾತ್ರಿ 8 ಗಂಟೆಗೆ ಆರಂಭವಾದ ಪಾರ್ಟಿ ಜ.4ರ ಮುಂಜಾನೆ 3.30ರವರೆಗೆ ನಡೆದಿತ್ತು. ಈ ವೇಳೆ ಪಾರ್ಟಿಯಲ್ಲಿ ಪಾಲ್ಗೊಂಡ ಎಲ್ಲರಿಗೂ ಮುಂಜಾನೆವರೆಗೆ ಮದ್ಯ ಹಾಗೂ ಊಟದ ವ್ಯವಸ್ಥೆ ಮಾಡಲಾಗಿತ್ತು’ ಎಂದು ಪೊಲೀಸರು ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದರು.