ಈ ಸಿನಿಮಾ | ʼಪೆಂಟಗನ್‌ʼನಲ್ಲಿ ಹಿಡಿಸುವುದೇ 2 ಕಥೆ

Date:

ಚಿತ್ರ: ಪೆಂಟಗನ್‌ | ನಿರ್ದೇಶಕ: ಗುರು ದೇಶಪಾಂಡೆ, ಕಿರಣ್‌ ಕುಮಾರ್‌, ರಘು ಶಿವಮೊಗ್ಗ, ಆಕಾಶ್‌ ಶ್ರೀವತ್ಸ | ತಾರಾಗಣ: ಕಿಶೋರ್‌ ಕುಮಾರ್‌, ಪೃಥ್ವಿ ಅಂಬರ್‌, ರವಿ ಶಂಕರ್‌, ಪ್ರಕಾಶ್‌ ಬೆಳವಾಡಿ, ಪ್ರಮೋದ್‌ ಶೆಟ್ಟಿ, ಪ್ರಿತಿಕಾ ದೇಶಪಾಂಡೆ, ವಂಶಿ ಕೃಷ್ಣ ಶ್ರೀನಿವಾಸ್‌, ಅನುಶಾ ರೈ | ಭಾಷೆ: ಕನ್ನಡ | ಸಂಗೀತ ನಿರ್ದೇಶಕ: ಮಣಿಕಾಂತ್‌ ಕದ್ರಿ | ನಿರ್ಮಾಪಕ: ಗುರು ದೇಶಪಾಂಡೆ |

ಪುಟ್ಟಣ್ಣ ಕಣಗಾಲ್‌ ನೇತೃತ್ವದಲ್ಲಿ, ಏಳು ಮಂದಿ ನಿರ್ದೇಶಕರ ನಿರೂಪಣೆಯಲ್ಲಿ ಏಳು ಭಿನ್ನ ಕಥೆಗಳನ್ನು ಹೊಂದಿದ್ದ ʼಕಥಾಸಂಗಮʼ ಚಿತ್ರ 1976ರಲ್ಲಿ ತೆರೆಕಂಡಿತ್ತು. ರಿಷಭ್‌ ಶೆಟ್ಟಿ ಕೂಡ ಅದೇ ʼಕಥಾಸಂಗಮʼ ಶೀರ್ಷಿಕೆಯನ್ನು ಬಳಸಿಕೊಂಡು ಪುಟ್ಟಣ್ಣ ಕಣಗಾಲ್‌ ಮಾದರಿಯ ಪ್ರಯೋಗವನ್ನು ಮಾಡಿದ್ದರು. ಈ ಶುಕ್ರವಾರ ತೆರೆಕಂಡಿರುವ ‘ಪೆಂಟಗನ್‌’ ಸಿನಿಮಾ ಕೂಡ ಅಂಥದ್ದೇ ಮಾದರಿಯ ಚಿತ್ರ.

ಹೆಸರೇ ಸೂಚಿಸುವಂತೆ ʼಪೆಂಟಗನ್‌ʼ ಐದು ಸಣ್ಣ ಕಥೆಗಳ ಗುಚ್ಛವನ್ನು ಒಳಗೊಂಡಿರುವಂತಹ ಪ್ರಯೋಗಾತ್ಮಕ ಚಿತ್ರ. ಕೈಯಲ್ಲಿನ ಐದು ಬೆರಳುಗಳು ಸಮನಾಗಿರುವುದಿಲ್ಲ ಎನ್ನುವ ಹಾಗೆ, ಈ ಚಿತ್ರದಲ್ಲಿನ ಎಲ್ಲ ಕಥೆಗಳು ರುಚಿಸುವುದಿಲ್ಲ. ಆದರೆ, ಇಂಥದ್ದೊಂದು ಪ್ರಯತ್ನಕ್ಕಾಗಿ ಗುರು ದೇಶಪಾಂಡೆ ಮತ್ತು ತಂಡಕ್ಕೆ ಅಭಿನಂದನೆ.

ಮಿ. ಗೂಫೀಸ್‌ ಕೆಫೆ

ಚಂದ್ರಮೋಹನ್‌ ನಿರ್ದೇಶನದಲ್ಲಿ ಮೂಡಿಬಂದಿರುವ ʼಗೂಫೀಸ್‌ ಕೆಫೆʼಯ ಕಥೆ ಆರಂಭದಿಂದ ಕೊನೆಯವರೆಗೂ ನೋಡುಗರನ್ನು ಸೆಳೆಯುವುದೂ ಇಲ್ಲ, ಹಿಡಿಸುವುದೂ ಇಲ್ಲ. ಪ್ರೇಮ ವೈಫಲ್ಯ, ಅದಕ್ಕೆ ಹೊಂದಿಕೊಂಡಂತೆ ನಡೆಯುವ ಸಾವಿನ ನಾಟಕ ಇದ್ಯಾವುದು ರುಚಿಸುವುದಿಲ್ಲ. ನಿರ್ದೇಶಕರು ಕಥೆ ಹೆಣೆದ ರೀತಿ, ನಿರೂಪಣೆ ಮತ್ತು ಪಾತ್ರವರ್ಗ ಎಲ್ಲವೂ ವ್ಯರ್ಥ ಶ್ರಮ ಎನ್ನಿಸಿ ಬಿಟ್ಟಿತು. ಹೆಚ್ಚು ಹೇಳುವಂಥದ್ದು ಈ ಕಥೆಯಲ್ಲಿ ಏನೂ ಇಲ್ಲ.

ಮೈಸೂರು ಪಾಕ್‌

ಆಕಾಶ್‌ ಶ್ರೀವತ್ಸ ನಿರ್ದೇಶನದ ʼಮೈಸೂರು ಪಾಕ್‌ʼ ಎಂಬ ಕೌಟುಂಬಿಕ ಕಥಾಹಂದರ, ಈಗಾಗಲೇ ಮನೆ ಮಾತಾಗಿರುವ ಸಂದೇಶವನ್ನೇ ಮರಳಿ ಹೇಳುವ ಪ್ರಯತ್ನ ಮಾಡುತ್ತದೆ. ನಿರ್ದೇಶಕರು, ಒಂದೇ ಸೂರಿನಡಿಯಲ್ಲಿ ಬದುಕುವ ಒಡೆದ ಮನಸ್ಸುಗಳ ಭಾವನಾತ್ಮಕ ಕತೆಯನ್ನು ಹೇಳುವ ಪ್ರಯತ್ನ ಮಾಡಿದ್ದಾರೆ.

ಆದರೆ, ಕಥೆಯಲ್ಲಿ ಭಿನ್ನತೆ ಇಲ್ಲ. ಸೊಸೆಯ ಮೇಲಿನ ಅಸಮಾಧಾನಕ್ಕೆ ಮಾವ ʼಸ್ವಿಗ್ಗಿʼಯಲ್ಲಿ ಊಟ ಆರ್ಡರ್‌ ಮಾಡುವುದನ್ನೇ ನಿರ್ದೇಶಕರು ಹೊಸತನ ಎಂದು ತೋರುವ ಪ್ರಯತ್ನ ಮಾಡಿದ್ದಾರೆ. ʼತಾತನ ತಿಥಿಗೆ ತನ್ನಪ್ಪ ಮಾಡಿಸಿದ್ದ ಬಗೆ ಬಗೆಯ ಅಡುಗೆಯನ್ನು ನೋಡಿ, “ಅಪ್ಪ ತಾತ ಬದುಕಿದ್ದಾಗ ಅವರಿಗೆ ಯಾಕೆ ಈ ರೀತಿ ಅಡುಗೆ ಮಾಡಿ ಹಾಕಲಿಲ್ಲ” ಎಂದು ಪುಟಾಣಿ ಮಗು ಕೇಳುವ ಪ್ರಶ್ನೆ ಮಾತ್ರ ನೆನಪಿನಲ್ಲಿ ಉಳಿಯುತ್ತವೆ. ನಿಮಗಿದ್ದ ಸಮಯದ ಮಿತಿಯಲ್ಲಿ ಕಥೆಯನ್ನು ಇನ್ನೂ ತೀವ್ರವಾಗಿ ಭಿನ್ನವಾಗಿ ಕಟ್ಟಿಕೊಡಬಹುದಿತ್ತು ಆಕಾಶ್‌. ಅಂದಹಾಗೆ ಈ ಕಥೆಯಲ್ಲಿ ʼಸ್ವಿಗ್ಗಿʼ ಕಂಪನಿಗೆ ಬೇಕಾದ ಪ್ರಚಾರ ಚೆನ್ನಾಗಿಯೇ ಆಗಿದೆ. ಹಿರಿಯ ಪೋಷಕ ನಟ ಬಿರಾದರ್‌ ಮತ್ತು ಬಾಲ ನಟಿ ಆರಾಧ್ಯ ಮಾತ್ರ ಗಮನ ಸೆಳೆಯುತ್ತಾರೆ.

ಕಾಮಾತುರಾಣಂ ನಾಭಯಂ ನಾಲಜ್ಜ

ರಘು ಶಿವಮೊಗ್ಗ ಡೇಟಿಂಗ್‌ ಆ್ಯಪ್‌ ಅವಾಂತರದ ಸುತ್ತ ಕಥೆ ಹೆಣೆದಿದ್ದಾರೆ. ಕ್ರೈಂ ಸೀನ್‌ ಸುತ್ತ ಗಿರಕಿ ಹೊಡೆಯುವ ಈ ಕಥೆಯಲ್ಲಿ ರೋಚಕತೆ ಇಲ್ಲದಿರುವುದು ಬೇಸರದ ಸಂಗತಿ. ಕೊಲೆ ನಡೆಯುವ ಹಂತದಿಂದ ಹಿಡಿದು ಕೊಲೆಗಾರ ಸಿಕ್ಕಿ ಬಿಳುವವರೆಗೆ ನೋಡಿ ಮುಗಿಸಿದರೂ ನೋಡುಗರಲ್ಲಿ ಕುತೂಹಲ ಮೂಡುವುದೇ ಇಲ್ಲ.

ಡೇಟಿಂಗ್‌ ಆ್ಯಪ್‌ ಹಿಂದಿನ ಕರಾಳತೆ, ಬ್ಲ್ಯಾಕ್‌ಮೇಲ್‌ ಜಾಲಕ್ಕೆ ಬಲಿಯಾಗುವ ಅಮಾಯಕರ ಬದುಕನ್ನು ತೋರಿಸಿದ ರೀತಿ ಸಮಾಧಾನಕರ. ಅತ್ಯಾಚಾರ ಮತ್ತು ಕೊಲೆಯಂತಹ ಪ್ರಕರಣಗಳನ್ನು ಪೊಲೀಸರು ತನಿಖೆ ನಡೆಸುವ ರೀತಿ ಎಲ್ಲೂ ಕೂಡ ಮತ್ತು ಗಂಭೀರವಾಗಿ ಕಾಣಿಸಲಿಲ್ಲ.

ದೋಣಿ ಸಾಗಲಿ ಮುಂದೆ ಹೋಗಲಿ

ನಿರ್ದೇಶಕ ಕಿರಣ್‌ ಕುಮಾರ್‌, ಶೋಷಿತರ ಕಥೆಯನ್ನು ಮನಮುಟ್ಟುವಂತೆ ತೆರೆಗೆ ಅಳವಡಿಸಿದ್ದಾರೆ. ತಮ್ಮ ಮೇಲಿನ ದೌರ್ಜನ್ಯ ಪ್ರಶ್ನಿಸುವ ದಲಿತರ ಧ್ವನಿ ಅಡಗಿಸಲು ಮೇಲ್ಜಾತಿಗರು ಯಾವ ಹಂತಕ್ಕೆ ಹೋಗಬಲ್ಲರು ಎಂಬ ಅಂಶದ ಸುತ್ತ ಕಥೆಯನ್ನು ಹೆಣೆಯಲಾಗಿದೆ. ನಿರೂಪಣೆ ಮತ್ತು ಕಥಾಹಂದರ ಎರಡೂ ಹಿಡಿಸುತ್ತದೆ. ಪಾತ್ರವರ್ಗವೂ ಗಮನ ಸೆಳೆಯುತ್ತದೆ. ಆದರೆ, ಚಿತ್ರದಲ್ಲಿ ಬರುವ ಆ್ಯಕ್ಷನ್‌ ದೃಶ್ಯಗಳು ತೀರಾ ಕಳಪೆ ಎನ್ನಿಸುತ್ತೆ. ದೃಶ್ಯವೊಂದರಲ್ಲಿ ಸಾವಿಗೀಡಾದ ನಾಯಕಿಯ ಮೃತದೇಹ ಉಸಿರಾಡಿದ್ದು ಕಂಡು ಅಚ್ಚರಿಯಾಯ್ತು. ನಿರ್ದೇಶಕರು ಸೂಕ್ಷ್ಮಗಳನ್ನು ಗಮನಿಸುವ ಅಗತ್ಯವಿದೆ. ರವಿ ಶಂಕರ್‌, ಪ್ರಿತಿಕಾ ದೇಶಪಾಂಡೆ ಗಮನ ಸೆಳೆಯುತ್ತಾರೆ.

ಕರ್ಮ

ಮಾಜಿ ಡಾನ್‌ವೊಬ್ಬ ಕನ್ನಡಪರ ಹೋರಾಟಗಾರನಾದಾಗ ಆತ ಎದುರಿಸುವ ಸವಾಲುಗಳ ಸುತ್ತ ಈ ಕತೆಯನ್ನು ಮನೋಜ್ಞವಾಗಿ ಕಟ್ಟಿಕೊಡಲಾಗಿದೆ. ಕೆಲವೊಮ್ಮೆ ಮನಃ ಪರಿವರ್ತನೆಗೊಂಡು ವ್ಯಕ್ತಿ ಬದಲಾದರೂ ಭೂತಕಾಲದ ಆತನ ಕೃತ್ಯಗಳು ಬೆಂಬಿಡುವುದಿಲ್ಲ ಎಂಬುದನ್ನೂ ನಿರ್ದೇಶಕರು ಸೂಕ್ಷ್ಮವಾಗಿ ದಾಟಿಸುವ ಪ್ರಯತ್ನ ಮಾಡಿದ್ದಾರೆ.

ಕನ್ನಡಪರ ಹೋರಾಟಗಾರನ ಪಾತ್ರದಲ್ಲಿ ಕಿಶೋರ್‌ ಕುಮಾರ್‌ ಬಹುವಾಗಿ ಸೆಳೆಯುತ್ತಾರೆ. ಪೃಥ್ವಿ ಅಂಬರ್‌ ಕೂಡ ನೆನಪಿನಲ್ಲಿ ಉಳಿಯುತ್ತಾರೆ. ಕೊನೆಯಲ್ಲಿ ಕಿಶೋರ್‌ ಕುಮಾರ್‌, ಕನ್ನಡ ಭಾಷೆಯ ಬಗ್ಗೆ ಆಡುವ ಸುದೀರ್ಘ ಸಂಭಾಷಣೆ ಅವರ ಪಾತ್ರವನ್ನು ಮತ್ತು ಕಥೆಯನ್ನು ಇನ್ನಷ್ಟು ಶ್ರೀಮಂತಗೊಳಿಸಿದೆ.

ಕೊನೆಯ ಮಾತು:

5 ಸಣ್ಣ ಕತೆಗಳನ್ನು ಒಳಗೊಂಡ ‘ಪೆಂಟಗನ್‌’ ಚಿತ್ರಕ್ಕೆ ಮಣಿಕಾಂತ್‌ ಕದ್ರಿ ಅವರ ಸೊಗಸಾದ ಸಂಗೀತವಿದೆ. ಅಭಿಲಾಷ್‌, ಕಿರಣ್‌ ಹಂಪಾಪುರ ಮತ್ತು ಗುರು ಪ್ರಸಾದ್‌ ಅವರುಗಳ ಛಾಯಾಗ್ರಹಣ ಚಿತ್ರಕಥೆಗೆ ಪೂರಕವಾಗಿದೆ. ಈ ಚಿತ್ರದ ಮೊದಲಾರ್ಧದಲ್ಲಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಂಥದ್ದು ಏನೂ ಇಲ್ಲ. ಕೊನೆಯ ಎರಡು ಕಥೆಗಳ ಕಾರಣಕ್ಕಾಗಿ ʼಪೆಂಟಗನ್‌ʼ ಸಿನಿಮಾ ನೋಡಬಹುದಷ್ಟೇ.

Sanket
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಬೆಂಗಳೂರು ಕಂಬಳ’ಕ್ಕೆ ಚಾಲನೆ ನೀಡಲಿದ್ದಾರೆ ಅಶ್ವಿನಿ ಪುನೀತ್​ ರಾಜ್‌ಕುಮಾರ್

ಇತಿಹಾಸದಲ್ಲಿ ಮೊದಲ ಬಾರಿಗೆ ನಡೆಯಲಿರುವ 'ಬೆಂಗಳೂರು ಕಂಬಳ'ಕ್ಕೆ ಕ್ಷಣಗಣನೆ ಆರಂಭವಾಗಿದೆ. ನವೆಂಬರ್...

ಕಾರಿನೊಳಗೆ ಶವವಾಗಿ ಪತ್ತೆಯಾದ ಮಲಯಾಳಂ ನಟ ವಿನೋದ್ ಥಾಮಸ್

ಮಲಯಾಳಂ ನಟ ವಿನೋದ್ ಥಾಮಸ್ ಕೇರಳದ ಕೊಟ್ಟಾಯಂನ ಪಂಪಾಡಿ ಬಳಿಯ ಹೋಟೆಲ್‌ನಲ್ಲಿ...

ತೆಲಂಗಾಣ ಚುನಾವಣಾ ಹೊಸ್ತಿಲಲ್ಲಿ ಬಿಜೆಪಿಗೆ ರಾಜೀನಾಮೆ ನೀಡಿದ ವಿಜಯಶಾಂತಿ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

ಬಹುಭಾಷಾ ನಟಿ ಹಾಗೂ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ವಿಜಯಶಾಂತಿ ಅವರು...

ಮೊದಲು ಹೊಡೆದು ನಂತರ ಕ್ಷಮೆ ಕೇಳಿದ ನಟ ನಾನಾ ಪಾಟೇಕರ್: ವಿಡಿಯೋ ವೈರಲ್

ಸದಾ ಒಂದಿಲ್ಲೊಂದು ಸುದ್ದಿಯಲ್ಲಿರುವ ಬಾಲಿವುಡ್ ಹಿರಿಯ ನಟ-ನಿರ್ದೇಶಕ ನಾನಾ ಪಾಟೇಕರ್ ಇದೀಗ...