ಮೈಸೂರಿನ ವರುಣಾ ಕ್ಷೇತ್ರದಲ್ಲಿ ತಮ್ಮ ಪುತ್ರ ಬಿ.ವೈ ವಿಜಯೇಂದ್ರ ಕಣಕ್ಕಿಳಿಯುವುದಿಲ್ಲ ಎಂದು ಬಿಎಸ್ ಯಡಿಯೂರಪ್ಪ ಸ್ಪಷ್ಟವಾಗಿ ಹೇಳಿದ್ದಾರೆ. ಹೀಗಾಗಿ, ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಸವಾಲೊಡ್ಡಲು ಬಿಜೆಪಿ ಪ್ರಬಲ ಅಭ್ಯರ್ಥಿಗಾಗಿ ಹುಡುಕಾಟ ನಡೆಸುತ್ತಿದೆ.
2008ರಲ್ಲಿ ವರುಣಾ ಕ್ಷೇತ್ರ ರಚನೆಯಾದಾಗಿನಿಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಅಜೇಯವಾಗಿ ಮುನ್ನುಗ್ಗುತ್ತಿದೆ. 2008 ಮತ್ತು 2013ರಲ್ಲಿ ಸಿದ್ದರಾಮಯ್ಯ ಕ್ಷೇತ್ರದಲ್ಲಿ ಗೆದ್ದಿದ್ದರು. 2018ರಲ್ಲಿ ತಮ್ಮ ಪುತ್ರ ಯತೀಂದ್ರಗೆ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದರು. ಆ ಚುನಾವಣೆಯಲ್ಲಿ ಯತೀಂದ್ರ 51.1% ಮತಗಳನ್ನು ಪಡೆದು ಗೆಲುವು ದಾಖಲಿಸಿದ್ದರು. ಈಗ, ಸಿದ್ದರಾಮಯ್ಯ ಮತ್ತೆ ಕ್ಷೇತ್ರಕ್ಕೆ ಮರಳಿದ್ದಾರೆ. ಈ ಬಾರಿಯೂ, ಸಿದ್ದರಾಮಯ್ಯ ಗೆಲುವು ಖಚಿತ ಎಂಬ ಅಭಿಪ್ರಾಯವಿದೆ.
ಇಲ್ಲಿ ಕಾಂಗ್ರೆಸ್‌ನ ಪ್ರತಿಸ್ಪರ್ಧಿ ಬಿಜೆಪಿಯೇ ಆಗಿದ್ದರು, ಅದು ಗೆಲ್ಲಲು ಹೆಣಗಾಡುತ್ತಿದೆ. 2013ರಲ್ಲಿ ಬಿಜೆಪಿಯಿಂದ ಬಂಡೆದ್ದು ಯಡಿಯೂರಪ್ಪ ಹೊಸ ಪಕ್ಷ ಕಟ್ಟಿದ್ದಾಗ, ಬಿಜೆಪಿ 10ನೇ ಸ್ಥಾನಕ್ಕೆ ಕುಸಿದಿತ್ತು. ಯಡಿಯೂರಪ್ಪ ಅವರ ಆಪ್ತ ಕಾಪು ಸಿದ್ದಲಿಂಗ ಸ್ವಾಮಿ ಕೆಜೆಪಿಯಿಂದ ಸ್ಪರ್ಧಿಸಿ 34% ಮತಗಳನ್ನು ಪಡೆದು, ಎರಡನೇ ಸ್ಥಾನ ಪಡೆದಿದ್ದರು. ಬಳಿಕ, ಕೆಜೆಪಿ ಮತ್ತು ಬಿಜೆಪಿ ಒಗ್ಗೂಡಿದವು. ಈಗ ಬಿಜೆಪಿ ಎರಡನೇ ಸ್ಥಾನದಲ್ಲಿದೆ. ಕ್ಷೇತ್ರವನ್ನು ಗೆದ್ದುಕೊಳ್ಳಲು ತಿಣಕಾಡುತ್ತಿದೆ.
ಸಿದ್ದರಾಮಯ್ಯ ವರುಣಾಗೆ ವಾಪಾಸ್ ಆಗಿರುವುದು ಬಿಜೆಪಿಗೆ ಮತ್ತಷ್ಟು ಬಿಕ್ಕಟ್ಟನ್ನು ಸೃಷ್ಟಿಸಿದೆ. ಆದರೂ, ವರುಣಾ ಗೆಲ್ಲಲೇಬೇಕೆಂದು ಕೇಸರಿ ಪಡೆ ಸಂಕಲ್ಪ ಮಾಡಿದೆ. ಈ ಬಾರಿ ಕ್ಷೇತ್ರದಲ್ಲಿ ಪ್ರಬಲ ಹೋರಾಟ ನಡೆಸಲಿದೆ ಎಂದು ಮೈಸೂರು ಗ್ರಾಮಾಂತರ ಬಿಜೆಪಿ ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್ ಹೇಳಿದ್ದಾರೆ. ”ಪಕ್ಷದ ನಾಯಕತ್ವವು ವರುಣಾ ಕುರಿತು ತೀವ್ರವಾಗಿ ಚರ್ಚಿಸುತ್ತಿದೆ. ಹಿಂದಿನಂತೆ ಯಾವುದೇ ರಾಜಿ ಇಲ್ಲ” ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಹೇಳಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ವಸತಿ ಸಚಿವ ವಿ ಸೋಮಣ್ಣ ಅವರನ್ನು ಕಣಕ್ಕಿಳಿಸಲು ಬಿಜೆಪಿ ನಾಯಕತ್ವ ಯೋಜಿಸುತ್ತಿದೆ ಎಂದೂ ಹೇಳಲಾಗುತ್ತಿದೆ. ಅಭ್ಯರ್ಥಿಯನ್ನು ಆಯ್ಕೆ ಮಾಡಲು ಬಿಜೆಪಿ ಮೂರು ಹಂತದ ಪ್ರಕ್ರಿಯೆಗಳನ್ನು ನಡೆಸಿದ್ದು, ಸಂಸದೀಯ ಮಂಡಳಿಗೆ ಪಟ್ಟಿಯೊಂದನ್ನು ಕಳಿಸಲಾಗಿದೆ. ಮಂಡಳಿಯು ಏಪ್ರಿಲ್ 10ರೊಳಗೆ ಹೆಸರನ್ನು ಅಂತಿಮಗೊಳಿಸುವ ನಿರೀಕ್ಷೆಯಿದೆ ಎಂದು ತಿಳಿದುಬಂದಿದೆ.
ಸೋಮಣ್ಣ ಮತ್ತು ವಿಜಯೇಂದ್ರ ಇಬ್ಬರೂ ಲಿಂಗಾಯತ ಸಮುದಾಯಕ್ಕೆ ಸೇರಿದವರು. ವರುಣಾದಲ್ಲಿ 25% ಲಿಂಗಾಯತ ಮತಗಳಿವೆ ಮತ್ತು ಸುತ್ತೂರು ಮಠದ ಪ್ರಭಾವವೂ ಇದೆ. ಅಲ್ಲಿ ಸಿದ್ದರಾಮಯ್ಯ ಮತ್ತು ಅವರ ಪುತ್ರ ಯತೀಂದ್ರ ನಿರಂತರ ಗೆಲುವು ದಾಖಲಿಸಿದ್ದಾರೆ. ಅವರ ಗೆಲುವಿಗೆ ಕುರುಬ (14%), ಮುಸ್ಲಿಂ (5%), ದಲಿತ (33%), ಮತ್ತು ಇತರೆ ಮತಗಳು ಪಾತ್ರವಹಿಸಿವೆ. ಈ ಬಾರಿ, ಲಿಂಗಾಯತರೊಂದಿಗೆ ಒಕ್ಕಲಿಗರನ್ನು ಸೆಳೆಯಲು ಬಿಜೆಪಿ ಯತ್ನಿಸುತ್ತಿದೆ.
ಈ ಸುದ್ದಿ ಓದಿದ್ದೀರಾ?: ಚುನಾವಣೆ 2023 | ಸುದೀಪ್ ರಾಜಕೀಯವಾಗಿ ಚಾಣಾಕ್ಷ, ಬಿಸಿನೆಸ್‌ನಲ್ಲಿ ಬುದ್ಧಿವಂತ
2018ರಲ್ಲಿ ಬಿಜೆಪಿ ವಿಜಯೇಂದ್ರ ಹೆಸರನ್ನು ಘೋಷಿಸಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಅದನ್ನು ಹಿಂತೆಗೆದುಕೊಂಡಿತು. ಈಗ ಸೋಮಣ್ಣ ಮತ್ತು ವಿಜಯೇಂದ್ರ ಹೆಸರುಗಳು ಮತ್ತೆ ಮುನ್ನೆಲೆಗೆ ಬಂದಿವೆ. ಆದರೆ, ಅಲ್ಲಿನ ಸ್ಪರ್ಧೆಯಿಂದ ಎದುರಾಗಬಹುದಾದ ಅಪಾಯಗಳನ್ನು ಅರಿತಿರುವ ಇಬ್ಬರೂ ಸ್ಪರ್ಧೆಗೆ ಹಿಂಜರಿಯುತ್ತಿದ್ದಾರೆ. ಆದರೆ, ಯಡಿಯೂರಪ್ಪ ಬೆಂಬಲಿಗರ ಒಂದು ವರ್ಗ, `ಸಿದ್ದರಾಮಯ್ಯನವರ ಬಗ್ಗೆ ಯಡಿಯೂರಪ್ಪ ‘ಸಾಫ್ಟ್ ಕಾರ್ನರ್’ ಹೊಂದಿದ್ದಾರೆ ಎಂಬ ಆರೋಪದಿಂದ ವಿಜಯೇಂದ್ರ ಅವರು ಮುಕ್ತಗೊಳಿಸುತ್ತಾರೆ’ ಎನ್ನುತ್ತಿದ್ದಾರೆ.
ಸಿದ್ದರಾಮಯ್ಯ ಅವರನ್ನು ಸೋಲಿಸಿದರೆ ವಿಜಯೇಂದ್ರ ಅವರು ಪ್ರಬಲ ನಾಯಕರಾಗಿ ಹೊರಹೊಮ್ಮುತ್ತಾರೆ ಎಂದು ಯಡಿಯೂರಪ್ಪ ಬೆಂಬಲಿಗರ ಮತ್ತೊಂದು ಗುಂಪು ಹೇಳುತ್ತಿದೆ. ಆದರೆ, ಚೌಕಾಸಿ ಎಂಬಂತೆ ‘ಶಿಕಾರಿಪುರದಿಂದಲೂ ವಿಜಯೇಂದ್ರ ಸ್ಪರ್ಧಿಸಲು ಬಿಜೆಪಿ ಅವಕಾಶ ನೀಡಬೇಕು’ ಎಂದೂ ಒತ್ತಾಯಿಸುತ್ತಿದ್ದಾರೆ.
ವರುಣಾದಲ್ಲಿ ಕಣಕ್ಕಿಳಿದರೆ ಎರಡು ಸ್ಥಾನದಿಂದ ಸ್ಪರ್ಧಿಸುವ ಇರಾದೆಯನ್ನು ಸೋಮಣ್ಣ ಹೊಂದಿದ್ದಾರೆ. ವರುಣಾ ಮತ್ತು ಚಾಮರಾಜನಗರ ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಅವಕಾಶ ನೀಡುವಂತೆ ಸೋಮಣ್ಣ ಕೇಳಿದ್ದಾರೆ. ಆದರೆ, ಚಾಮರಾಜನಗರದೊಂದಿಗೆ ಸೋಮಣ್ಣ ಹೆಸರು ತಳುಕು ಹಾಕಿಕೊಳ್ಳುತ್ತಿದ್ದಂತೆ ಸ್ಥಳೀಯ ಮುಖಂಡರು ಬಹಿರಂಗವಾಗಿಯೇ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ವರುಣಾದಿಂದ ಸೋಮಣ್ಣ ಹಾಗೂ ವಿಜಯೇಂದ್ರ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದಾರೆ. ಅಂತಿಮವಾಗಿ ಬಿಜೆಪಿಯಿಂದ ವರುಣಾದಲ್ಲಿ ಯಾರು ಕಣಕ್ಕಿಳಿಯಲಿದ್ದಾರೆ. ಅವರು ಸಿದ್ದರಾಮಯ್ಯ ಕೋಟೆಯನ್ನು ಭೇದಿಸುವರೇ ಎಂಬುದಕ್ಕೆ ಉತ್ತರ ಶೀಘ್ರವೇ ದೊರೆಯಲಿದೆ.