ನಂದಿನಿ ಮುಳುಗಿಸೋದು ಗ್ಯಾರಂಟಿ: ಅಮುಲ್‌ ಕೇವಲ ಅಸ್ತ್ರ, ಸೂತ್ರಧಾರರು ಅಮಿತ್‌ ಶಾ ಮತ್ತು ಅಂಬಾನಿ

Date:

ಕೆಎಂಎಫ್‌ನಲ್ಲಿ ಭ್ರಷ್ಟಾಚಾರ ನಡೀತದೆ, ಸ್ವಜನಪಕ್ಷಪಾತ ಇದೆ, ನೇಮಕಾತಿಯಲ್ಲೂ ಹಗರಣ ನಡೀತದೆ. ಅವೆಲ್ಲಾಸರಿ ಹೋಗದಿದ್ದರೂ ಉಳಿಗಾಲವಿಲ್ಲ. ಆದರೆ, ಇವೆಲ್ಲದರ ನಡುವೆಯೇ ಈ ಮಿಲ್ಕ್‌ ಯೂನಿಯನ್ನುಗಳು, ಸಹಕಾರಿ ಕ್ಷೇತ್ರದಲ್ಲೇ ಸಾವಿರಾರು ಕೋಟಿ ಲಾಭ ಮಾಡ್ತಿವೆ.

ಕರ್ನಾಟಕದ ಸಹಕಾರಿ ಬ್ರ್ಯಾಂಡ್‌ ನಂದಿನಿಗೆ ಕುತ್ತು ಬಂದಿದೆ ಎಂಬ ಕೂಗೆದ್ದಿದೆ. ಅಮುಲ್‌ ಬೆಂಗಳೂರು ಮಾರುಕಟ್ಟೆಗೆ ಬಂದಾಕ್ಷಣ ಅಂಥದ್ದೇನೂ ಆಗಲ್ಲವೆಂದು ಬಿಜೆಪಿ ಪರ ಇರುವವರು ಪ್ರತಿವಾದ ಹೂಡಿದ್ದಾರೆ. ಆದರೆ, ಭಾರತದ ಡೈರಿ ಉದ್ದಿಮೆಯ ಸುತ್ತ ನಡೆಯುತ್ತಿರುವ ಬೆಳವಣಿಗೆಗಳನ್ನು ಕೆದಕಿದರೆ ಇದರ ಹಿಂದೆ ಒಂದು ಗುಜರಾತಿ ಲಾಬಿ ಇರುವುದು ಸ್ಪಷ್ಟವಾಗಿದೆ.

ಲಭ್ಯವಿರುವ ಮಾಹಿತಿ ಹಾಗೂ ಅಂಕಿ-ಅಂಶಗಳಿಂದ ಸ್ಪಷ್ಟವಾಗುವುದು ಏನು?

  1. ನಂದಿನಿ ಸಂಸ್ಥೆ ಇವತ್ತೇ ಮುಳುಗಿ ಹೋಗಲ್ಲ. ಆದರೆ ಆದಷ್ಟು ಬೇಗ ಮುಳುಗುತ್ತದೆ. ಅದಕ್ಕೆ ಕಾರಣ ಅಮುಲ್‌ ಅಲ್ಲ. ಗುಜರಾತಿನ ರೈತರು ಕರ್ನಾಟಕದ ರೈತರನ್ನ ಮುಳುಗಿಸಬೇಕು ಅಂತ ಪ್ರಯತ್ನಿಸುತ್ತಾ ಇಲ್ಲ. ಅವರೂ ಕಷ್ಟದಲ್ಲೇ ಇದ್ದಾರೆ. ಆದರೆ ಈ ಒಟ್ಟಾರೆ ಬೆಳವಣಿಗೆಯ ಹಿಂದೆ ಒಂದು ಗುಜರಾತಿ ಲಾಬಿ ಇದೆ.
  2. ನಂದಿನಿ ಮತ್ತು ಅಮುಲ್‌ ಎರಡೂ ಸಹಾ ಹೈನುಗಾರಿಕೆ ಕ್ಷೇತ್ರದ ಬಿಕ್ಕಟ್ಟನ್ನು ಎದುರಿಸ್ತಾ ಇವೆ. ಮೊದಲು ನಂದಿನಿ ಮುಳುಗುತ್ತದೆ. ನಂದಿನಿಯಂತಹ ವಿವಿಧ ಸಹಕಾರ ಮಿಲ್ಕ್‌ ಯೂನಿಯನ್ನುಗಳನ್ನು ತಿಂದ ಅಮುಲ್‌ ಒಂದಷ್ಟು ಕಾಲ ಉಳಿದುಕೊಳ್ಳುತ್ತದೆ. ಅಂತಿಮವಾಗಿ ರಿಲೆಯನ್ಸ್‌ ಕಂಪೆನಿಯ ಕೈಗೆ ಭಾರತದ ಹಾಲು ಉದ್ದಿಮೆಯನ್ನು ಧಾರೆಯೆರೆಯಲಾಗುತ್ತದೆ.

ಈ ಡೈರಿ ಉದ್ದಿಮೆಯ ಗಾತ್ರ ಹಾಗೂ ಅದು ಬೆಳೆಯುವ ಪ್ರಮಾಣದ ಕುರಿತ ಅಂದಾಜನ್ನು ನೋಡಿದರೆ ಇದರ ಮೇಲೆ ಯಾಕೆ ʼದೊಡ್ಡ ದೊಡ್ಡವರಿಗೆಲ್ಲಾʼ ಆಸಕ್ತಿ ಅಂತ ಗೊತ್ತಾಗುತ್ತದೆ. ಈಗ ಭಾರತದ ಡೈರಿ ಉದ್ದಿಮೆಯ ವಹಿವಾಟು 13 ಲಕ್ಷ ಕೋಟಿ. ಜಗತ್ತಿನಲ್ಲಿ ಹಾಲಿನ ಉತ್ಪಾದನೆ ಶೇ.2ರ ದರದಲ್ಲಿ ಏರುತ್ತಿದ್ದರೆ, ಭಾರತದಲ್ಲಿ ಶೇ.6ರ ದರದಲ್ಲಿ ಏರುತ್ತಿದೆ. ಜಗತ್ತಿನ ಹಾಲು ಉತ್ಪಾದನೆಯಲ್ಲಿ ಭಾರತದ ಪಾಲು ಈಗಿನ 23%ನಿಂದ ಮುಂದಿನ 25 ವರ್ಷಗಳಲ್ಲಿ 45%ಗೆ ಏರುತ್ತೆ ಅಂತ ಅಧ್ಯಯನಗಳು ಹೇಳಿವೆ. ಅಂದರೆ, 2027ರ ಹೊತ್ತಿಗೆ ಭಾರತದ ಡೈರಿ ಉದ್ದಿಮೆಯ ಗಾತ್ರ 30 ಲಕ್ಷ ಕೋಟಿಗೆ ಏರುತ್ತದೆ ಅಂತ ಎನ್‌ಡಿಡಿಬಿ ಮುಖ್ಯಸ್ಥ ಮೀನೇಶ್‌ ಶಾ ಹೇಳಿದ್ದಾರೆ.

ಹೀಗಾಗಿ ಇದರಲ್ಲಿ ಭಾರೀ ದೊಡ್ಡ ಲಾಭವಿದೆ. ಭಾರತದೊಳಗಿನ ಮಾರುಕಟ್ಟೆ ಮಾತ್ರವಲ್ಲದೇ, ಪ್ರಪಂಚದ ಎಷ್ಟೋ ದೇಶಗಳಿಗೆ ರಫ್ತು ಮಾಡುವ ಅವಕಾಶ ಇದೆ. ಏಕೆಂದರೆ ಮುಂದಿನ ಕಾಲು ಶತಮಾನದಲ್ಲಿ ಜಗತ್ತಿನ ಒಟ್ಟು ಹಾಲಿನ ಉತ್ಪಾದನೆಯಲ್ಲಿ ಹೆಚ್ಚು ಕಡಿಮೆ ಅರ್ಧದಷ್ಟು ನಾವೇ ಮಾಡುವ ಸಾಧ್ಯತೆ ಇದೆ. ಇದನ್ನು ಲೆಕ್ಕ ಹಾಕಿಯೇ ಮುಖೇಶ್‌ ಅಂಬಾನಿ ತನ್ನ ಪ್ರಿಯ ಪುತ್ರಿ ಇಶಾ ಅಂಬಾನಿಗೆ ಇದನ್ನು (ಅಂದರೆ ಈ ಕ್ಷೇತ್ರವನ್ನು) ಉಡುಗೊರೆಯಾಗಿ ಕೊಟ್ಟಿದ್ದಾರೆ. ಕೆಂಗೇರಿಯಿಂದ ವೈಟ್‌ಫೀಲ್ಡ್‌ತನಕ ಅಮುಲ್‌ನ ತಾಜಾತನ ಸವಿಯಿರಿ ಅಂತ ನಮ್ಮಲ್ಲಿ ಜಾಹೀರಾತು ಬಂದ ದಿನವೇ, ಅಮುಲ್‌ನ ಎಂಡಿ ಆರ್‌ ಎಸ್‌ ಸೋಧಿಯನ್ನು ರಿಲೆಯನ್ಸ್‌ ಕಂಪೆನಿ ಎಳೆದುಕೊಂಡಿದೆ. ಇದೇ ಆರ್‌ಎಸ್‌ ಸೋಧಿ ಭಾರತೀಯ ಡೈರಿ ಅಸೋಸಿಯೇಷನ್‌ನ ಅಧ್ಯಕ್ಷ, ಈ ಹೊತ್ತಿನವರೆಗೂ.

ಈ ವರ್ಷದ ಜನವರಿಯಲ್ಲಿ ರಿಲೆಯನ್ಸ್‌ ಕಂಪೆನಿಯು ರಿಜಿಸ್ಟ್ರಾರ್‌ ಆಫ್‌ ಕಂಪೆನಿಗೆ ತನ್ನ ವರದಿಯನ್ನು ಸಲ್ಲಿಸುವಾಗ ತಾನು ಡೈರಿ ಉದ್ದಿಮೆಗೆ ಬರುತ್ತೇನೆ ಎಂದು ಹೇಳಿತ್ತು. ವಾಸ್ತವದಲ್ಲಿ 2007ರಲ್ಲೇ ಅದು ಈ ವ್ಯವಹಾರಕ್ಕೆ ಕೈ ಹಾಕಿ ಡೈರಿ ಲೈಫ್‌ & ಡೈರಿ ಪ್ಯೂರ್‌ ಅಂತ ಶುರು ಮಾಡಿತ್ತು. ಆದರೆ ಆಗ ಅದು ಹೆಚ್ಚು ಮುಂದಕ್ಕೆ ಹೋಗಿರಲಿಲ್ಲ. ಹಾಗಾಗಿ ಹೆರಿಟೇಜ್‌ ಫುಡ್ಸ್‌ಗೆ 2017ರಲ್ಲಿ ಮಾರಿದ್ದರು. ಆ ನಂತರ ಮುಖೇಶ್‌ ಅಂಬಾನಿ ಮಗಳಿಗೆ ಮದುವೆಯಾಯಿತು. ಮಕ್ಕಳ ಮಧ್ಯೆ (ದೇಶದ) ಆಸ್ತಿಯನ್ನು ಹಂಚಿಕೊಡಬೇಕಲ್ಲಾ? ಹಾಗಾಗಿ ರೀಟೇಲ್‌ ಕ್ಷೇತ್ರವನ್ನು ಮಗಳಿಗೆ ಕೊಡುವುದೆಂದು ತೀರ್ಮಾನ ಮಾಡಿದರು. ಸುಮ್ಮನೇ ಕೊಟ್ಟುಬಿಟ್ಟರೆ ಆದೀತೇ? ಅದನ್ನು ಸದೃಢವಾಗಿ ಕಟ್ಟಿಕೊಡುವುದು ತಂದೆಯ ಕರ್ತವ್ಯವಲ್ಲವೇ? ರೀಟೇಲ್‌ ಕ್ಷೇತ್ರದಲ್ಲಿ ತರಕಾರಿ, ಹಣ್ಣು ಮಾತ್ರ ಮಾರಿಕೊಂಡು ಇದ್ದರೆ ಆಗಲ್ಲ; ದೇಶವ್ಯಾಪಿಯಾಗಿ ಮತ್ತು ಪರದೇಶಗಳಲ್ಲೂ ವಿಸ್ತರಿಸಬಹುದಾದ ಡೈರಿ ಉದ್ದಿಮೆಯನ್ನು ಮತ್ತೊಮ್ಮೆ ಶುರು ಮಾಡಲು ತಯಾರಿ ನಡೆಸಿದರು. ಜನವರಿಯಲ್ಲಿ ಅಂಬಾನಿ ಇತ್ತಕಡೆ ರಿಜಿಸ್ಟ್ರಾರ್‌ ಆಫ್‌ ಕಂಪೆನೀಸ್‌ಗೆ ಹೇಳಿದ್ದಷ್ಟೇ ನಡೆಯಲಿಲ್ಲ, ಅದೇ ಜನವರಿಯಲ್ಲೆ ಸೋಧಿ ಅಮುಲ್‌ನ ಎಂಡಿ ಸ್ಥಾನಕ್ಕೆ ರಾಜೀನಾಮೆ ನೀಡಿದರು!!

ಹಾಗಾದರೆ ಎಲ್ಲವೂ ಜನವರಿಯಲ್ಲೇ ನಡೆಯಿತು ಅಂತಾನಾ? ಖಂಡಿತಾ ಅಲ್ಲ. ಇಂತಹ ಯಾವ ವ್ಯವಹಾರಗಳೂ ಇದ್ದಕ್ಕಿದ್ದಂತೆ ನಡೆಯಲ್ಲ. 2007ರಿಂದಲೇ ತಾನು ಕಣ್ಣು ಹಾಕಿದ್ದ ಕ್ಷೇತ್ರ ಎಂದರೆ, ಅದಕ್ಕೆ ದೊಡ್ಡ ತಯಾರಿಯೇ ಆಗಿರುತ್ತದೆ ಅಲ್ಲವೇ? ದೇಶದಲ್ಲಿ ಡೈರಿ ಕ್ಷೇತ್ರವನ್ನು ವಶಪಡಿಸಿಕೊಳ್ಳುವುದು ಎಂದರೆ ಭಾರೀ ಪ್ರಮಾಣದ ಗ್ರಾಮಾಂತರ ಹಾಲು ಉತ್ಪಾದಕರ ನೆಟ್ವರ್ಕ್‌ ಇರುವ ಸಹಕಾರಿ ಕ್ಷೇತ್ರಕ್ಕೆ ಕೈ ಹಾಕುವುದು ಎಂದರ್ಥ. ಹೇಗೂ ಸಹಕಾರಿ ಕ್ಷೇತ್ರವನ್ನು ವಶಪಡಿಸಿಕೊಳ್ಳಲು ಬಿಜೆಪಿಯ ತಯಾರಿಯೂ ಇತ್ತು. ಎರಡೂ ಕೈಗೂಡಿ ಬಂದಿತು.

ಗ್ರಾಮೀಣ ಭಾಗದ ನೆಟ್ವರ್ಕ್‌ ಎಂದರೆ ಸುಮ್ಮನೇ ಅಲ್ಲ. ಉದಾಹರಣೆಗೆ ಕರ್ನಾಟಕದಲ್ಲಿ ಕೆಎಂಎಫ್‌ ಅಡಿಯಲ್ಲಿ ಒಟ್ಟು 17,014 ನೋಂದಾಯಿತ ಸಂಘಗಳಿವೆ. ಅವುಗಳಲ್ಲಿ 15043 ಸಂಘಗಳು ಸಕ್ರಿಯವಾಗಿವೆ. ಪ್ರತಿದಿನ ಸುಮಾರು 70 ರಿಂದ 80 ಲಕ್ಷ ಲೀಟರ್‌ ಸರಾಸರಿ ಹಾಲು ಉತ್ಪಾದನೆಯಾದರೆ, 8ರಿಂದ10 ಲಕ್ಷ ಲೀಟರ್ ಮೊಸರು ಉತ್ಪಾದನೆಯಾಗ್ತಿದೆ. 2022ರಲ್ಲಿ ಕೆಎಂಎಫ್‌ ಆದಾಯವು 4924.5 ಕೋಟಿ ರೂಪಾಯಿ ಈತ್ತು. ಕೆಎಂಎಫ್‌ನ ಈಗಿನ ವಾರ್ಷಿಕ ವಹಿವಾಟು 19784 ಕೋಟಿ ರೂಪಾಯಿ ಆಗಿದೆ. 2020ರಲ್ಲಿ ಆದಾಯವು 4725.6 ಕೋಟಿ ರೂಪಾಯಿ ಆಗಿತ್ತು. ಆದರೆ 2021ರಲ್ಲಿ ಆದಾಯವು ಕೊಂಚ ಏರಿಕೆಯಾಗಿ, 5356.2 ಕೋಟಿ ರೂಪಾಯಿಗೆ ತಲುಪಿತ್ತು. ಆದರೆ 2022ರಲ್ಲಿ ಆದಾಯ ಸ್ವಲ್ಪ ಕುಸಿದಿದೆ.

ಕರ್ನಾಟಕದ ಗ್ರಾಮೀಣ ಭಾಗದ 26 ಲಕ್ಷ ರೈತ ಕುಟುಂಬಗಳು ಈ ಉದ್ದಿಮೆಯ ಮೇಲೆ ಅವಲಂಬಿಸಿವೆ. ಹಾಕಿದಷ್ಟು ಬಂಡವಾಳ ಹೋಗಲಿ, ಕೂಲಿ ಸಹಾ ಗಿಟ್ಟದ ನಮ್ಮ ಕೃಷಿ ವ್ಯವಸ್ಥೆಯು ಉಳಿದುಕೊಂಡಿರೋದೇ ಹೈನುಗಾರಿಕೆ, ನರೇಗಾದಂತಹ ಕೃಷಿಗೆ ಪೂರಕವಾದ ಆದರೆ ಕೃಷಿಯೇತರ ಆರ್ಥಿಕತೆಯ ಮೇಲೆ. ಆದರೆ, ನಮ್ಮ ಹೈನುಗಾರಿಕೆ ಉದ್ದಿಮೆ ಬಹಳ ಅದ್ಭುತವಾದ ಪರಿಸ್ಥಿತಿಯಲ್ಲೇನೂ ಇಲ್ಲ. ಹಾಲು ಒಕ್ಕೂಟಗಳೆಲ್ಲವೂ ವೈನಾಗಿ ಇವೆ ಅಂತಲೂ ಅಲ್ಲ.

ಕೆಎಂಎಫ್‌ನಲ್ಲಿ ಭ್ರಷ್ಟಾಚಾರ ನಡೀತದೆ, ಸ್ವಜನಪಕ್ಷಪಾತ ಇದೆ, ನೇಮಕಾತಿಯಲ್ಲೂ ಹಗರಣ ನಡೀತದೆ. ಅವೆಲ್ಲಾಸರಿ ಹೋಗದಿದ್ದರೂ ಉಳಿಗಾಲವಿಲ್ಲ. ಆದರೆ, ಇವೆಲ್ಲದರ ನಡುವೆಯೇ ಈ ಮಿಲ್ಕ್‌ ಯೂನಿಯನ್ನುಗಳು, ಸಹಕಾರಿ ಕ್ಷೇತ್ರದಲ್ಲೇ ಸಾವಿರಾರು ಕೋಟಿ ಲಾಭ ಮಾಡ್ತಿವೆ. ಇದನ್ನು ಸರಿ ಮಾಡಬೇಕೇ ಹೊರತು ಮುಳುಗಿಸಬಾರದು. ಏಕೆಂದರೆ 26 ಲಕ್ಷ ರೈತ ಕುಟುಂಬಗಳು ಎಂದರೆ ಒಂದು ಕೋಟಿ ಜನ. ಅವರುಗಳೇ ತಳಮಟ್ಟದಿಂದ ಕಟ್ಟಿ ನಿಲ್ಲಿಸಿರುವ ಸ್ವಾಯತ್ತ ಸಂಸ್ಥೆ ಕೆಎಂಎಫ್‌.

ಹಾಗಾಗಿಯೇ ಏನೇ ಸಮಸ್ಯೆಗಳಿದ್ದರೂ ನಂದಿನಿಯೂ ಮುಳುಗಬಾರದು, ಅಮುಲ್‌ ಸಹಾ ಮುಳುಗಬಾರದು, ಅವಿನ್‌ (ತಮಿಳುನಾಡು), ಮಿಲ್ಮಾ (ಕೇರಳ) ಯಾವುದೂ ಮುಳುಗಬಾರದು. ಈ ಅಮುಲ್‌ದೇ ಒಂದು ದೊಡ್ಡ ಇತಿಹಾಸ ಇದೆ. ಅಮುಲ್ ಅನ್ನು 76 ವರ್ಷಗಳ ಹಿಂದೆ ಡಿಸೆಂಬರ್ 14, 1946ರಂದು ಡಾ. ವರ್ಗೀಸ್ ಕುರಿಯನ್ ಮತ್ತು ತ್ರಿಭುವಂದಾಸ್ ಕಿಶಿಭಾಯಿ ಪಟೇಲ್ ಸ್ಥಾಪಿಸಿದ್ದರು. ಇದರ ಪ್ರೇರಣೆಯಿಂದ ಹೈನುಗಾರಿಕೆ ಉದ್ಯಮ ದೇಶದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಬೆಳೆಯಿತು.

ಇದನ್ನೂ ಓದಿ: ಕರ್ನಾಟಕಕ್ಕೆ ಕಂಟಕವಾಗಲಿದೆಯೇ ನಂದಿನಿ-ಅಮುಲ್‌ ವಿಲೀನ?

ಆ ರೀತಿ ಬೆಳೆದ ಹೈನುಗಾರಿಕೆ ಉದ್ದಿಮೆ ಈಗ ಕಷ್ಟದಲ್ಲಿರೋದು ಯಾಕೆ? ಕೃಷಿ ಕೈ ಹಿಡಿಯದ್ದರಿಂದ ಹೆಚ್ಚೆಚ್ಚು ಜನ ಹಸು ಸಾಕ್ತಾ ಇದಾರೆ, ಅತಿಯಾದ ಉತ್ಪಾದನೆ ಆಗ್ತಾ ಇದೆ ಅಂತ ಒಂದು ವಾದ ಇದೆ. ಹೆಚ್ಚು ಉತ್ಪಾದನೆ ಇದ್ದುದ್ದು ಹೌದು. ಹಾಗಾಗಿಯೇ ನಂದಿನಿ ಹಾಲಿನ ಪುಡಿಯನ್ನು ಸರ್ಕಾರವೇ ಕೊಂಡು ಶಾಲಾ ಮಕ್ಕಳಿಗೆ ಕೊಡುವ ಯೋಜನೆ ಕ್ಷೀರಭಾಗ್ಯ ಜಾರಿಗೆ ಬಂದಿತು. ವರ್ಷಕ್ಕೆ ಸುಮಾರು 800 ಕೋಟಿ ರೂ. ಅದಕ್ಕೆ ಖರ್ಚಾಗ್ತಾ ಇದೆ. ಆದರೆ ಅದು ಪೂರ್ಣ ನಿಜವೂ ಅಲ್ಲ. ಹಾಗೆ ನೋಡಿದ್ರೆ ಪ್ರತಿದಿನ ಹಾಲು, ಮೊಸರು ಅಲ್ಲದೇ, ತುಪ್ಪ, ಐಸ್ ಕ್ರೀಮ್, ಬೆಣ್ಣೆ, ಪೇಡಾ, ಮೈಸೂರು ಪಾಕ್‌, ಚಾಕೋಲೇಟ್‌ ಇತ್ಯಾದಿ ಏನೆಲ್ಲವನ್ನೂ ಈ ನಂದಿನಿ ಸಹಕಾರಿ ಸಂಸ್ಥೆ ತಯಾರಿಸ್ತಾ ಇದೆ ಎಂಬುದು ಸರ್ವವಿದಿತ. ಆ ರೀತಿಯ ಮಾರುಕಟ್ಟೆ ವಿಸ್ತರಣೆಯ ಜೊತೆಗೆ ಬೇರೆ ಸಾಧ್ಯತೆಗಳೂ ಇವೆ. ಹಲವು ಕೃಷಿ ತಜ್ಞರು, ಇದೇ ನಂದಿನಿ ನೆಟ್ವರ್ಕ್‌ನಲ್ಲಿರುವ 17,000 ಡೈರಿಗಳಿಂದಲೇ ಕೃಷಿ ಉತ್ಪನ್ನಗಳನ್ನೂ ಖರೀದಿಸಿ, ಇನ್ನೂ ಬೃಹತ್ತಾದ ಮಾರುಕಟ್ಟೆ ವ್ಯವಸ್ಥೆ ಕಟ್ಟಹುದು ಅಂತ ಸಲಹೆ ನೀಡಿದ್ದಾರೆ. ಅಷ್ಟು ಚೆನ್ನಾಗಿದೆ ಈ ಸಹಕಾರಿ ಜಾಲ.

ಆದರೆ ಕಳೆದ ವರ್ಷದಲ್ಲಿ ಅಮುಲ್‌ ಮತ್ತು ನಂದಿನಿ ಎರಡೂ ಕಡೆ ಹಾಲು ಉತ್ಪಾದನೆ ಕಡಿಮೆ ಆದ ಕುರಿತು ಸುದ್ದಿಗಳೂ ಬಂದವು. ದನಗಳಿಗೆ ಬಂದ ಚರ್ಮಗಂಟು ರೋಗ ಇದಕ್ಕೆ ಸ್ವಲ್ಪ ಕಾರಣವಿರಬಹುದು. ಆದರೆ, ಅದಕ್ಕಿಂತ ಹೆಚ್ಚಾಗಿ ರೈತರಿಗೆ ಸಿಗಬೇಕಾದಷ್ಟು ಆದಾಯ ಸಿಗದೇ ಇರುವುದೇ ಇದಕ್ಕೆ ಕಾರಣ. ಹಾಲಿನ ದರ ಸ್ವಲ್ಪ ಏರಿದ್ರೂ, ದನಗಳಿಗೆ ಹಾಕೋ ಫೀಡ್ಸ್‌ ದರ ಇನ್ನೂ ಜಾಸ್ತಿ ಏರುತ್ತೆ. ಮಿಲ್ಕ್‌ ಯೂನಿಯನ್‌ಗಳು ಮಾತ್ರವೇ ಇವೆಲ್ಲವನ್ನೂ ನಿರ್ವಹಿಸುವುದಕ್ಕೆ ಆಗದೇ ಇರುವುದರಿಂದ, ಸರ್ಕಾರವು ಲೀಟರ್‌ಗೆ ಇಂತಿಷ್ಟು ಎಂದು ಸಹಾಯಧನವನ್ನು ಕೊಡಬೇಕಾಗಿ ಬಂದಿದೆ.

ಇದನ್ನು ಸರಿಮಾಡಿಕೊಳ್ಳೋಕೆ ಏನು ಮಾಡಬೇಕು ಎಂಬುದನ್ನು ಆಲೋಚನೆ ಮಾಢದೇ ಒಂದು ರಾಜ್ಯದ ಸಹಕಾರಿ ಸಂಸ್ಥೆಯನ್ನ ಇನ್ನೊಂದು ರಾಜ್ಯದ ಸಹಕಾರಿ ಸಂಸ್ಥೆಯ ಮಾರುಕಟ್ಟೆ ಆಕ್ರಮಿಸಿಕೊಳ್ಳುವುದಕ್ಕೆ ಬಿಟ್ಟಿದ್ದಾರೆ ಎನ್ನುವ ಪ್ರಶ್ನೆ ಬಂದಿದೆ. ಅಷ್ಟೇ ಆಗಿದ್ದರೂ ತೊಂದರೆಯಿಲ್ಲ. ಆರೋಗ್ಯಕರ ಸ್ಪರ್ಧೆ ಎಂದುಕೊಳ್ಳಬಹುದಿತ್ತು. ಇಲ್ಲಿ ಸಮಸ್ಯೆ ಬಂದಿರೋದು ಬೇರೆ. ಇಡೀ ದೇಶದ ಎಲ್ಲ ಸಹಕಾರಿ ಸಂಸ್ಥೆಗಳನ್ನು ಗುಜರಾತಿ ಲಾಬಿ ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಹೊರಟಿದ್ದಾರೆ ಎನಿಸುವುದಕ್ಕೆ ಕಾರಣಗಳಿವೆ.

2021ರ ಜುಲೈನಲ್ಲಿ ಈವರೆಗೆ ಕೇಂದ್ರದಲ್ಲಿ ಅದುವರೆಗೆ ಅಸ್ತಿತ್ವದಲ್ಲಿ ಇರದ ಒಂದು ಸಚಿವಾಲಯವನ್ನು ನರೇಂದ್ರ ಮೋದಿ ಸರ್ಕಾರ ಸ್ಥಾಪನೆ ಮಾಡಿದೆ. ಅದೇ ಸಹಕಾರಿ ಇಲಾಖೆ. ಇದಕ್ಕೆ ಮಂತ್ರಿ ಗೃಹ ಸಚಿವರೂ ಆದ ಅಮಿತ್ ಶಾ. ಅದಕ್ಕೆ ಮುಂಚೆ ಸಹಕಾರಿ ಇಲಾಖೆ ರಾಜ್ಯ ಸರ್ಕಾರಗಳ ವ್ಯಾಪ್ತಿಯಲ್ಲಿ ಮಾತ್ರ ಇತ್ತು. ಅದರ ಸ್ಥಾಪನೆಯ ನಂತರ 2022ರ ಅಕ್ಟೋಬರಿನಲ್ಲಿ ಅಸ್ಸಾಂನಲ್ಲಿ ಸಹಕಾರ ವಲಯದ ಸಮ್ಮೇಳನ ನಡೆಯಿತು. ಸಹಕಾರ ಸಚಿವ ಅಮಿತ್ ಶಾ ಅವರು ಅಲ್ಲಿಯೇ ಗುಜರಾತ್ ಸಹಕಾರಿ ಹಾಲು ಒಕ್ಕೂಟ ಅಮೂಲ್ ಹಾಲು ಒಕ್ಕೂಟವನ್ನು ದೇಶದ ಇತರ ಐದು ಹಾಲು ಒಕ್ಕೂಟದೊಂದಿಗೆ ವಿಲೀನಗೊಳಿಸಲಾಗುವುದು ಎಂದು ಹೇಳಿಕೆ ನೀಡಿದ್ದರು.

ಆ ನಂತರ ಸಹಕಾರಿ ಕ್ಷೇತ್ರದ ಮೇಲೆ ಕೇಂದ್ರದ ಸಂಪೂರ್ಣ ಹಿಡಿತವನ್ನು ಸಾಧಿಸುವ ಸಲುವಾಗಿಯೇ ಇದೇ ಡಿಸೆಂಬರ್ 7ರಂದು ಸಹಕಾರಿ ಮಂತ್ರಿಯೂ ಆಗಿರುವ ಅಮಿತ್ ಶಾ ಅವರು ‘ಬಹುರಾಜ್ಯ ಸಹಕಾರಿ ಸಂಸ್ಥೆಗಳ ತಿದ್ದುಪಡಿ ಮಸೂದೆ’ಯನ್ನು ಮಂಡಿಸಿದರು. ಅದರ ಬಗ್ಗೆ ವಿರೋಧ ಪಕ್ಷಗಳು ಸಾಕಷ್ಟು ವಿರೋಧವನ್ನು ತೋರಿ ಅದನ್ನು ಸದನ ಸಮಿತಿಯ ಅಧ್ಯಯನಕ್ಕೆ ಒಪ್ಪಿಸಬೇಕೆಂದು ಆಗ್ರಹಿಸಿದ್ದಾರೆ. ಪ್ರಸ್ತಾವಿತ ಮಸೂದೆಯ ಪ್ರಕಾರ:

  1. ಬಹುರಾಜ್ಯ ಸಹಕಾರಿಗಳ ಚುನಾವಣೆಯ ಉಸ್ತುವಾರಿ ಸಂಪೂರ್ಣ ಕೇಂದ್ರದ್ದು.
  2. ಬಹುರಾಜ್ಯ ಸಹಕಾರಿಯಲ್ಲಿ ಆಡಳಿತ ಮಂಡಳಿಯಲ್ಲಿ ಕೇಂದ್ರದಿಂದ ನಾಮ ನಿರ್ದೇಶನಗೊಂಡ ಕನಿಷ್ಠ ಮೂವರು ಸದಸ್ಯರಿರುತ್ತಾರೆ.
  3. ಒಂದು ಸಹಕಾರಿ ಸಂಸ್ಥೆಯನ್ನು ಬರ್ಖಾಸ್ತು ಮಾಡುವ ಅಥವಾ ಆಡಳಿತಾಧಿಕಾರಿ ನೇಮಿಸುವ ಅಧಿಕಾರ ಕೇಂದ್ರದ್ದು.

ಅದರ ಹಣಕಾಸಿನ ಸಹಕಾರ ಮತ್ತು ಆಡಿಟಿಂಗ್ ಹಾಗೂ ಶಿಸ್ತುಕ್ರಮ ಇತ್ಯಾದಿಗಳ ಜವಾಬ್ದಾರಿ ಕೇಂದ್ರದ್ದು. ಅರ್ಥಾತ್ ಒಂದು ಬಹುರಾಜ್ಯ ವಹಿವಾಟಿರುವ ಸಹಕಾರಿಯ ಮೇಲೆ ಅದರ ಮೂಲ ರಾಜ್ಯಗಳ ಅಧಿಕಾರ ಸಂಪೂರ್ಣವಾಗಿ ಇಲ್ಲವಾಗಿ ಕೇಂದ್ರದ್ದೇ ಅಧಿಕಾರವಾಗುತ್ತದೆ. ಅಂದರೆ ಒಂದು ವೇಳೆ ಅಮುಲ್- ನಂದಿನಿ ವಿಲೀನಗೊಂಡು ಒಂದು ಬಹುರಾಜ್ಯ ಸಹಕಾರಿ ಸಂಸ್ಥೆಯಾಗಿ ರೂಪುಗೊಂಡರೆ ಅದರ ಸಂಪೂರ್ಣ ಉಸ್ತುವಾರಿ ಅಧಿಕಾರ ಅಮಿತ್ ಶಾ ನೇತೃತ್ವದ ಕೇಂದ್ರದ ಸಹಕಾರಿ ಇಲಾಖೆಯದ್ದೇ ಆಗುತ್ತದೆ. ಈಗಾಗಲೇ ಅಮುಲ್ ಸಂಸ್ಥೆ ಇತರ ರಾಜ್ಯಗಳ ಸಹಕಾರಿಗಳೊಡನೆ ಸೇರಿಕೊಂಡು ಆ ಬಗೆಯ ಬಹುರಾಜ್ಯ ಸಹಕಾರಿ ಸ್ಥಾಪಿಸಿದೆ. ಅದರ ಮುಂದಿನ ಹೆಜ್ಜೆ ನಂದಿನಿ ಮತ್ತು ಕೆಎಂಎಫ್ ಆಗಿದೆ.

ಹೀಗೆ ವಿಲೀನಗೊಳಿಸಿದರೆ ರಾಜ್ಯದ ಸಂಪೂರ್ಣ ನಿಯಂತ್ರಣ ಕಳೆದುಕೊಳ್ಳಬೇಕಾಗುತ್ತದೆ. ಒಟ್ಟಾರೆ ಕೇಂದ್ರ ಸರ್ಕಾರದ ಕೈಗೆ ಹೋಗುತ್ತೆ. ಈ ಕೇಂದ್ರೀಕರಣದಿಂದ ರಾಜ್ಯದ ಮೂಲೆ ಮೂಲೆಯಲ್ಲಿರುವ ಸಣ್ಣ ಸಹಕಾರ ಸಂಘವನ್ನು ಅವರೇ ನಿರ್ವಹಿಸುತ್ತಿದ್ದ ಅಧಿಕಾರ ಕಳೆದುಕೊಳ್ಳುತ್ತಾರೆ.

ಇಂತಹ ವಿಲೀನದ ಸಾಧ್ಯತೆಯನ್ನು ಅಮಿತ್‌ಶಾ ಅವರು ಕರ್ನಾಟಕದಲ್ಲೇ ಸೂಚಿಸಿದರು. 30 ಡಿಸೆಂಬರ್ 2022ರಂದು ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕು ಗೆಜ್ಜಲಗೆರೆಯಲ್ಲಿರುವ ಜಿಲ್ಲಾ ಹಾಲು ಒಕ್ಕೂಟದ ಆವರಣದಲ್ಲಿ ಮೆಗಾ ಡೈರಿ ಉದ್ಘಾಟಿಸಿದ ಸಂದರ್ಭದಲ್ಲಿ ಅವರದನ್ನು ಹೇಳಿದರು. ʼಅಮುಲ್ ಹಾಗೂ ನಂದಿನಿ ಒಂದಾದರೆ ಕರ್ನಾಟಕ ಹಾಲು ಉತ್ಪಾದಕರಿಗೆ ಹಾಗೂ ರೈತರಿಗೆ ಅನುಕೂಲ ಮಾಡಿಕೊಡುತ್ತದೆ.ಕರ್ನಾಟಕದ ಪ್ರತಿ ಹಳ್ಳಿಯಲ್ಲಿ ಪ್ರಾಥಮಿಕ ಡೈರಿ ಸ್ಥಾಪಿಸಲು ಕೆಲಸ ಮಾಡುವಂತಾಗಬೇಕು ಮತ್ತು ಮುಂದಿನ ಮೂರು ವರ್ಷಗಳಲ್ಲಿ ಕರ್ನಾಟಕದಲ್ಲಿ ಪ್ರಾಥಮಿಕ ಡೈರಿ ಇಲ್ಲದೆ ಒಂದೇ ಒಂದು ಹಳ್ಳಿ ಇರುವುದಿಲ್ಲʼ.

ಈ ರೀತಿಯ ಒಂದು ಹೇಳಿಕೆಯನ್ನು ನೀಡಿದ್ದು ಗುಜರಾತ್‌ ಮೂಲದ ವ್ಯಕ್ತಿ. ಅವರು ಗುಜರಾತಿನ ಬ್ಯಾಂಕುಗಳು, ಗುಜರಾತಿನ ಉದ್ದಿಮೆದಾರರು, ಗುಜರಾತಿನ ರಾಜಕಾರಣಿಗಳ ಹಿತವನ್ನು ಕಾಪಾಡುವ ಕೆಲಸ ನಿರಂತರವಾಗಿ ಮಾಡುತ್ತಿದ್ದಾರೆ. ಅತ್ಯಂತ ಪ್ರಭಾವಿಯಾದ ದೇಶದ ಗೃಹ ಸಚಿವ. ಅವರ ಕೈಯ್ಯಲ್ಲೇ ಸಹಕಾರಿ ಇಲಾಖೆಯನ್ನು ಸೃಷ್ಟಿ ಮಾಡಿ ಕೊಡಲಾಗಿದೆ. ಅವರು ಈ ಮಾತನ್ನ ಹೇಳಿದ ನಂತರ ಮೂರು ತಿಂಗಳು ನಂತರ ಬೆಂಗಳೂರಿನ ಜನ ಒಂದು ದಿನ ಬೆಳಗ್ಗೆ ನಂದಿನಿ ಹಾಲು ತರಲೆಂದು ಅಂಗಡಿಗೆ ಹೋದಾಗ ಹಾಲೇ ಸಿಗಲ್ಲ ಎಂದಾಗುವುದು ಮತ್ತು ಅದೇ ಹೊತ್ತಿನಲ್ಲೇ ಅಮುಲ್‌ ಇಲ್ಲಿಗೆ ಬಂದಿರುವುದು ನೋಡಿದಾಗ ಏನು ಅರ್ಥ ಹುಟ್ಟುತ್ತದೆ.

ಇದು ಕೇವಲ ಅಮುಲ್‌- ನಂದಿನಿ ವಿಚಾರವೂ ಅಲ್ಲ. ಎಲ್ಲಾ ರೀತಿಯ ಕೇಂದ್ರೀಕರಣವಾಗುತ್ತಿರುವುದು, ಜಿಎಸ್‌ಟಿ ಕೇಂದ್ರೀಕರಣ, ಬ್ಯಾಂಕುಗಳ ವಿಲೀನ ಕರ್ನಾಟಕದ ಬ್ಯಾಂಕುಗಳನ್ನು ಇಲ್ಲದ ಹಾಗೆ ಮಾಡಿದ್ದು ಇವೆಲ್ಲವೂ ಮುಂದಿನ ದಿಕ್ಕು ಏನಿರಬಹುದೆಂಬುದನ್ನು ಸೂಚಿಸುತ್ತದೆ.

ಇದಕ್ಕಿಂತ ದೊಡ್ಡ ಅಪಾಯ ಇನ್ನೂ ಒಂದಿದೆ. ಅದು ಸಹಕಾರಿ ಕ್ಷೇತ್ರದ್ದು ಮಾತ್ರ ಅಲ್ಲ. ಬದಲಿಗೆ ಗುಜರಾತ್ ಮೂಲದ ಅಂಬಾನಿ ಮತ್ತು ಅದಾನಿ ಎಂಬ ಇಬ್ಬರು ಉದ್ಯಮಿಗಳ ಕೈಗೆ ದೇಶದ ಹಲವಾರು ಉದ್ದಿಮೆಗಳು ಹೋಗಿರುವುದು ನಮಗೆಲ್ಲರಿಗೆ ಗೊತ್ತಿದೆ. ಅವರುಗಳು ಕೃಷಿ ಕ್ಷೇತ್ರವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಕೃಷಿ ಕಾನೂನುಗಳನ್ನೂ ಜಾರಿಗೆ ತರಿಸಲು ಹೊರಟಿದ್ದನ್ನು ಈ ದೇಶ ನೋಡಿದೆ. ಈಗ ಮುಖೇಶ್‌ ಅಂಬಾನಿ ಈ ಹಿಂದೆ ಗುಜರಾತ್‌ನ ಅಮುಲ್‌ನ ಚೀಫ್ ಆಗಿದ್ದ ಆರ್ ಎಸ್ ಸೋಧಿ ಎಂಬುವವರನ್ನು ತನ್ನ ರಿಲಾಯನ್ಸ್ ಕಂಪೆನಿಗೆ ಸೇರಿಕೊಂಡಿದ್ದಾರೆ. ಜನವರಿಯಲ್ಲಿ ಅಮುಲ್‌ ಬಿಟ್ಟ ಸೋಧಿ ಇಂದಿಗೂ ಭಾರತೀಯ ಡೈರಿ ಅಸೋಸಿಯೇಷನ್‌ನ ಅಧ್ಯಕ್ಷ. ಬೆಂಗಳೂರಿನಲ್ಲಿ ಅಮುಲ್‌ ಜಾಹೀರಾತು ಬಂದ ದಿನವೇ, ಆತ ರಿಲೆಯನ್ಸ್‌ ಕಂಪೆನಿ ಸೇರಿಕೊಂಡಿದ್ದು.

ಗುಜರಾತಿನ ಅಮುಲ್‌ ಅನ್ನು ಖಾಸಗಿ ತೆಕ್ಕೆಗೆ ಹಾಕುವುದು ಈ ಗುಜರಾತಿ ಲಾಬಿಗೆ ಕಷ್ಟವಲ್ಲ. ಆದರೆ ನಂದಿನಿಯನ್ನು ನೇರವಾಗಿ ಖಾಸಗಿಯವರಿಗೆ ಮಾರುವುದು ಕಷ್ಟ. ಹಾಗಾಗಿ ಈಗ ಅಮುಲ್‌ ಮೊದಲು ಉಳಿದುಕೊಳ್ಳಬೇಕು. ಅದಕ್ಕಾಗಿ ನಂದಿನಿಯನ್ನು ಮುಳುಗಿಸಬೇಕು. ನಂದಿನಿಯನ್ನು ಕಷ್ಟಕ್ಕೆ ಗುರಿಯಾಗಿಸಿ, ಅದನ್ನು ಮೇಲೆತ್ತುವ ಹೆಸರಿನಲ್ಲಿ ನಂದಿನಿ-ಅಮುಲ್‌ ವಿಲೀನ ಆಗಿಬಿಡಬೇಕು. ಕರ್ನಾಟಕದ ಹಾಲು ಉತ್ಪಾದಕರೇ – ಹೇಗಾದರೂ ಮಾಡಿ ಉಳಿಸಿ, ನಂದಿನಿ-ಅಮುಲ್‌ ವಿಲೀನ್‌ ಆದರೇನೇ ಒಳ್ಳೆಯದು. ಅದನ್ನು ವಿರೋಧಿಸುವವರೇ ಶತ್ರುಗಳು ಅಂತ ಹೇಳುವ ವಾತಾವರಣ ನಿರ್ಮಾಣ ಮಾಡುವುದು. ನಂದಿನಿ-ಅಮುಲ್‌-ಅವಿನ್‌-ಮಿಲ್ಮಾಗಳೆಲ್ಲವೂ ವಿಲೀನವಾದ ನಂತರ ಅಂತಿಮವಾಗಿ ಅಮುಲ್‌ ಅನ್ನು ರಿಲೆಯನ್ಸ್‌ಗೆ ಮಾರುವುದು ಸಲೀಸು. ಇದೇ ಆ ಹುನ್ನಾರ.

ಬಿ ಎಸ್‌ ಎನ್‌ ಎಲ್‌ ಮುಳುಗಿಸಿದ್ದು, ರೈಲ್ವೇ ಖಾಸಗೀಕರಣ ಮಾಡುತ್ತಿರುವುದು, ದೇಶದ ಬಂದರುಗಳನ್ನು, ವಿಮಾನ ನಿಲ್ದಾಣಗಳನ್ನು ಅದಾನಿಗೆ ಮಾರಿದ್ದು, ರಸ್ತೆಗಳೆಲ್ಲವೂ ಖಾಸಗಿ ಟೋಲ್‌ ರಸ್ತೆಗಳಾಗುತ್ತಿರುವುದು ಇವೆಲ್ಲವನ್ನೂ ನೋಡಿದ ಮೇಲೆ ಇದು ಅಸಾಧ್ಯವೆಂದೆನಿಸುತ್ತದೆಯೇ? ಆದರೆ ಕರ್ನಾಟಕದ ಜನರು ಎಚ್ಚೆತ್ತಿದ್ದಾರೆ. ಅದರ ಪರಿಣಾಮ ಏನಾಗಲಿದೆ ಎಂಬುದಕ್ಕೆ ಹೆಚ್ಚು ಕಾಲ ಕಾಯಬೇಕಿಲ್ಲ.

ಡಾ. ಎಚ್‌ ವಿ ವಾಸು, ಇರ್ಷಾದ್‌ ವೇಣೂರು

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಇಸ್ರೇಲ್ ನರಮೇಧವನ್ನು ಖಂಡಿಸುವ ಪ್ರತಿಭಟನೆಗೆ ಅನುಮತಿ ನಿರಾಕರಣೆಗೆ ಕಾರಣವೇನು?

ಈಗ ರಂಗಶಂಕರದಲ್ಲಿ ಕವನವಾಚನ, ನಾಟಕವನ್ನು ನಡೆಸುವುದಕ್ಕೂ ಅನುಮತಿ ನಿರಾಕರಿಸಲಾಗಿದೆ. ಒಂದೆಡೆ ಕಾಂಗ್ರೆಸ್...

ಜಾತಿ ಗಣತಿ | ವರದಿ ಅನುಷ್ಠಾನದ ಮೂಲಕ ಈ ನೆಲದ ಹೆಣ್ಣುಮಕ್ಕಳ ಸಂಕಟ ಕೊನೆಗೊಳ್ಳಲಿ

ಜಾತಿಯ ಕಾರಣದಿಂದಲೇ ಬದುಕುವ ಹಕ್ಕುಗಳಿಂದ ನಿರಾಕರಣೆಗೊಂಡು ಹಸಿವು, ಅನಕ್ಷರತೆ, ನಿರುದ್ಯೋಗಗಳಡಿಯಲ್ಲಿ, ಅತ್ಯಂತ...

ಕಡ್ಲೇಪುರಿಯಂತೆ ಸೇಲ್ ಆಗುವ ಪ್ರಶಸ್ತಿ ಪುರಸ್ಕಾರಗಳು ಮತ್ತು ಸಾಂಸ್ಕೃತಿಕ ರಾಜಕಾರಣ

ಬಹುಪಾಲು ಖಾಸಗಿ ಪ್ರತಿಷ್ಠಾನ, ಸಂಘ ಸಂಸ್ಥೆಗಳು ನೀಡುವ ಪುಸ್ತಕ ಬಹುಮಾನ, ಪ್ರಶಸ್ತಿ,...

ಎಲ್ಲಾ ಜಾತಿ ವರ್ಗಗಳಿಗೂ ಸಾಮಾಜಿಕ ನ್ಯಾಯಕ್ಕಾಗಿ ಜಾತಿ ಗಣತಿ ವರದಿ ಜಾರಿಯಾಗಬೇಕು

ಚರಿತ್ರೆಯಲ್ಲಿ ನಡೆದು ಹೋಗಿರುವ ಅನ್ಯಾಯಗಳನ್ನು ಕಾಂತರಾಜ ಸಮಿತಿ ನಡೆಸಿರುವ ಜಾತಿ ಗಣತಿ...