“ದಾವಣಗೆರೆ ನಗರದ ಭೌಗೋಳಿಕ ಸ್ಥಾನಮಾನ, ಸಾರಿಗೆ ಸೌಲಭ್ಯ, ಶೈಕ್ಷಣಿಕ ಪ್ರಗತಿ ಹಾಗೂ ನ್ಯಾಯಾಂಗ ಮೂಲಸೌಕರ್ಯಗಳನ್ನು ಉಲ್ಲೇಖಿಸಿ, ಸಂಚಾರಿ ಹೈಕೋರ್ಟ್ ಪೀಠ ಸ್ಥಾಪನೆಗೆ ಇದು ಅತ್ಯಂತ ಸೂಕ್ತ ಸ್ಥಳವಾಗಿದೆ. ದಾವಣಗೆರೆಯಲ್ಲಿ ರಾಜ್ಯ ಹೈಕೋರ್ಟ್ನ ಸಂಚಾರಿ ಪೀಠ ಸ್ಥಾಪಿಸಬೇಕು” ಎಂದು ದಾವಣಗೆರೆ ಜಿಲ್ಲಾ ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷ ಎಲ್.ಎಚ್. ಅರುಣಕುಮಾರ್ ಹೇಳಿದ್ದಾರೆ. ಈ ಮೂಲಕ ದಾವಣಗೆರೆಯಲ್ಲಿ ರಾಜ್ಯ ಹೈಕೋರ್ಟ್ನ ಸಂಚಾರಿ ಪೀಠ ಸ್ಥಾಪಿಸಬೇಕು ಎಂಬ ಬೇಡಿಕೆ ಮತ್ತೆ ಮುನ್ನಲೆಗೆ ಬಂದಿದೆ.
“ಕರ್ನಾಟಕದ ಮಧ್ಯಭಾಗದಲ್ಲಿರುವ ದಾವಣಗೆರೆಯನ್ನು ರಾಜ್ಯ ರಾಜಧಾನಿಯನ್ನಾಗಿಸಬೇಕೆಂಬ ಆಶಯವನ್ನು ರಾಜ್ಯ ಏಕೀಕರಣಕ್ಕೂ ಮುನ್ನವೇ ರಾಷ್ಟ್ರನಾಯಕ ಎಸ್. ನಿಜಲಿಂಗಪ್ಪ ಸೇರಿದಂತೆ ಹಲವು ಮಹನೀಯರು ವ್ಯಕ್ತಪಡಿಸಿದ್ದರು” ಎಂದು ಅವರು ಸ್ಮರಿಸಿದ್ದಾರೆ.
“ಬೆಂಗಳೂರು–ಮುಂಬೈ ರಾಷ್ಟ್ರೀಯ ಹೆದ್ದಾರಿ, ಹಗಲು–ರಾತ್ರಿ ರೈಲು ಸಂಚಾರ ಹಾಗೂ ರಾಜ್ಯದ ವಿವಿಧ ಭಾಗಗಳನ್ನು ಸಂಪರ್ಕಿಸುವ ಬಸ್ ವ್ಯವಸ್ಥೆಯಿಂದ ದಾವಣಗೆರೆ ಪ್ರಮುಖ ಕೇಂದ್ರವಾಗಿ ಬೆಳೆದಿದೆ. ನಗರದಲ್ಲಿ ಹೈಟೆಕ್ ಬಸ್ ನಿಲ್ದಾಣ, ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿತ ಸಿಮೆಂಟ್ ರಸ್ತೆಗಳು, ಜಲಸಿರಿ ಯೋಜನೆ, ಉದ್ಯಾನವನಗಳು ಹಾಗೂ ಸುಸಜ್ಜಿತ ವಸತಿ ಮತ್ತು ಉಪಹಾರ ಕೇಂದ್ರಗಳಂತಹ ಸೌಲಭ್ಯಗಳೂ ಲಭ್ಯವಿವೆ ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಬೇಸೂರು ಅಣುಸ್ಥಾವರಕ್ಕೆ ಕೈಬಿಡಲು ಮಲೆನಾಡು ಅಣುಸ್ಥಾವರ ವಿರೋಧಿ ವೇದಿಕೆ ಹೋರಾಟ
“ಶೈಕ್ಷಣಿಕ ಕ್ಷೇತ್ರದಲ್ಲಿಯೂ ದಾವಣಗೆರೆ ‘ಆಕ್ಸ್ಫರ್ಡ್ ಆಫ್ ಕರ್ನಾಟಕ’ ಎಂಬ ಖ್ಯಾತಿ ಪಡೆದಿದ್ದು, ಇಲ್ಲಿ ಎರಡು ವಿಶ್ವವಿದ್ಯಾಲಯಗಳು ಹಾಗೂ ಎರಡು ಕಾನೂನು ಕಾಲೇಜುಗಳಿವೆ. ಸಂವಿಧಾನ ರಚನಾ ಸಭೆಯಲ್ಲಿ ಸದಸ್ಯರಾಗಿದ್ದ ವಕೀಲರಾದ ಹೆಚ್. ಸಿದ್ದವೀರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರು ಕೊಡುಗೆ ನೀಡಿದ್ದು, ನಗರದಲ್ಲಿ ಪೊಲೀಸ್ ಮಹಾ ನಿರೀಕ್ಷಕರ ಕಚೇರಿ, ಅಭಿಯೋಜನಾ ಇಲಾಖೆಯ ಉಪ ನಿರ್ದೇಶಕರ ಕಚೇರಿ ಹಾಗೂ ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯ ಇರುವುದರಿಂದ ನ್ಯಾಯಾಂಗ ಚಟುವಟಿಕೆಗಳಿಗೆ ಅಗತ್ಯ ಮೂಲಸೌಕರ್ಯಗಳಿವೆ” ಎಂದು ಅಭಿಪ್ರಾಯಪಟ್ಟರು
“ದಾವಣಗೆರೆ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಅನೇಕ ಪ್ರಕರಣಗಳು ಬೆಂಗಳೂರಿನ ಹೈಕೋರ್ಟ್ನಲ್ಲಿ ವಿಚಾರಣೆಯಲ್ಲಿರುವುದರಿಂದ ಸಾರ್ವಜನಿಕರು ಮತ್ತು ಕಕ್ಷಿದಾರರು ನಿರಂತರವಾಗಿ ಬೆಂಗಳೂರಿಗೆ ತೆರಳಬೇಕಾಗಿರುವುದು ಸಮಯ ಹಾಗೂ ಹಣದ ವ್ಯಯಕ್ಕೆ ಕಾರಣವಾಗುತ್ತಿದೆ. ದಾವಣಗೆರೆ, ಚಿತ್ರದುರ್ಗ, ವಿಜಯನಗರ, ಶಿವಮೊಗ್ಗ ಹಾಗೂ ಹಾವೇರಿ ಜಿಲ್ಲೆಗಳನ್ನು ಸಂಚಾರಿ ಪೀಠದ ವ್ಯಾಪ್ತಿಗೆ ತರಬಹುದಾಗಿದೆ. ಇದರಿಂದ ಈ ಭಾಗದ ವಕೀಲರು ಮತ್ತು ಕಾನೂನು ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದ್ದು, ವಕೀಲರ ಅನುಭವಕ್ಕೂ ಹೊಸ ಆಯಾಮ ದೊರೆಯಲಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಗೋಹತ್ಯೆ ತಡೆಯಲು ಸರ್ಕಾರ ರಾಷ್ಟ್ರೀಯ ಪಶು ಎಂದು ಘೋಷಿಸಲಿ: ವಿಶ್ವ ಮುಸ್ಲಿಂ ಪರಿಷತ್
“ಜಿಲ್ಲಾ ನ್ಯಾಯಾಲಯದ ಹೊಸ ಕಟ್ಟಡ ನಿರ್ಮಾಣವಾಗುತ್ತಿರುವ ಹಿನ್ನೆಲೆಯಲ್ಲಿ, ದೇವರಾಜ ಅರಸು ಬಡಾವಣೆಯಲ್ಲಿರುವ ಹಾಲಿ ನ್ಯಾಯಾಲಯ ಕಟ್ಟಡವನ್ನು ಸಂಚಾರಿ ಪೀಠಕ್ಕಾಗಿ ಬಳಸಿಕೊಳ್ಳಬಹುದೆಂಬ ಸಲಹೆ ಇದೆ.
ರಾಜ್ಯದಲ್ಲಿ ಮತ್ತೊಂದು ಹೈಕೋರ್ಟ್ ಸಂಚಾರಿ ಪೀಠ ಸ್ಥಾಪಿಸುವ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ದಾವಣಗೆರೆಯಲ್ಲಿ ಸಂಘಟಿತ ಮತ್ತು ವ್ಯವಸ್ಥಿತ ಹೋರಾಟ ನಡೆಸುವ ಅಗತ್ಯವಿದೆ. ವ್ಯಾಪಾರಿ ಸಂಘಟನೆಗಳು, ನೌಕರರ ಸಂಘಗಳು, ರೈತ, ಕಾರ್ಮಿಕ, ದಲಿತ ಹಾಗೂ ಕನ್ನಡಪರ ಸಂಘಟನೆಗಳು ಈ ನ್ಯಾಯೋಚಿತ ಬೇಡಿಕೆಗೆ ಧ್ವನಿಗೂಡಿಸಬೇಕು” ಎಂದು ವಕೀಲ ಎಲ್.ಎಚ್. ಅರುಣಕುಮಾರ್ ಮನವಿ ಮಾಡಿದ್ದಾರೆ.





