ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಮೇಲಿನ ಶೈಕ್ಷಣಿಕ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಇನ್ನು ಮುಂದೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿ ‘ತೃತೀಯ ಭಾಷೆ’ಯನ್ನು ಗ್ರೇಡಿಂಗ್ ವ್ಯವಸ್ಥೆಗೆ ಒಳಪಡಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಅಂತಿಮ ಫಲಿತಾಂಶದ ಅಂಕಗಳಿಗೆ ತೃತೀಯ ಭಾಷೆಯ ಅಂಕಗಳನ್ನು ಪರಿಗಣಿಸಲಾಗುವುದಿಲ್ಲ. ಬದಲಾಗಿ ಗ್ರೇಡಿಂಗ್ (ಉದಾಹರಣೆಗೆ: ಎ, ಬಿ, ಸಿ, ಡಿ) ನೀಡಲಾಗುತ್ತದೆ ಎಂದು ಇಲಾಖೆಯ ಸಚಿವರು ಹೇಳಿರುವುದನ್ನು ಕನ್ನಡಪರ ಹೋರಾಟಗಾರರು ಸ್ವಾಗತಿಸಿದ್ದಾರೆ.
ಇಲಾಖೆಯ ನಿರ್ಧಾರಕ್ಕೆ ಕರವೇ ನಾರಾಯಣಗೌಡ ಮೆಚ್ಚುಗೆ
ಶಿಕ್ಷಣ ಇಲಾಖೆ ತೆಗೆದುಕೊಂಡ ಈ ನಿರ್ಧಾರವನ್ನು ಸ್ವಾಗತಿಸಿದ ಕರವೇ ನಾರಾಯಣಗೌಡ ಅವರು, ಕಳೆದ 27 ವರ್ಷದಿಂದ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯದಲ್ಲಿ ದ್ವಿಭಾಷಾ ಶಿಕ್ಷಣ ನೀತಿಯನ್ನು ಜಾರಿಗೆ ತರಬೇಕೆಂದು ಸತತ ಚಳವಳಿ ನಡೆಸುತ್ತ ಬಂದಿದೆ. ದ್ವಿಭಾಷಾ ಶಿಕ್ಷಣ ನೀತಿಯ ಮೊದಲ ಹೆಜ್ಜೆಯಾಗಿ ರಾಜ್ಯ ಸರ್ಕಾರ ಮೂರನೇ ಭಾಷೆ ಹಿಂದಿಗೆ ಗ್ರೇಡ್ ನೀಡುವ ವ್ಯವಸ್ಥೆ ಜಾರಿಗೊಳಿಸುತ್ತಿದೆ. ಪ್ರತಿವರ್ಷ ರಾಜ್ಯ ಪಠ್ಯಕ್ರಮದಲ್ಲಿ ಓದುವ ವಿದ್ಯಾರ್ಥಿಗಳು ಕೇಂದ್ರ ಪಠ್ಯಕ್ರಮಗಳಿಗಿಂತ ಹೆಚ್ಚುವರಿಯಾಗಿ ನೂರು ಅಂಕಗಳಿಗೆ ಪರೀಕ್ಷೆ ಬರೆಯಬೇಕಾಗಿತ್ತು. ಇದರಿಂದಾಗಿ ಪ್ರತಿವರ್ಷ ಕನ್ನಡದ ಮಕ್ಕಳು ಹೆಚ್ಚಿನ ಹೊರೆಯನ್ನು ಹೊರಬೇಕಿತ್ತು. ಅಷ್ಟೇ ಅಲ್ಲದೆ ಎಷ್ಟೋ ಮಕ್ಕಳು ಕೇವಲ ಹಿಂದಿಯಲ್ಲಿ ಅನುತ್ತೀರ್ಣಗೊಂಡ ಕಾರಣಕ್ಕೆ ಎಸ್ ಎಸ್ ಎಲ್ ಸಿ ಮುಗಿಸಲು ಪರದಾಡುವಂತಹ ಸ್ಥಿತಿ ಇತ್ತು. ಇದೀಗ ರಾಜ್ಯ ಸರ್ಕಾರ ಕೈಗೊಂಡ ಕ್ರಮದಿಂದ ಮಕ್ಕಳ ಮೇಲಿನ ಹೊರೆ ಇಳಿದಂತಾಗಿದೆ ಎಂದಿದ್ದಾರೆ.
ತ್ರಿಭಾಷಾ ಸೂತ್ರವೇ ಹಿಂದಿ ಹೇರಿಕೆಯನ್ನು ನಿಧಾನವಾಗಿ ಒಪ್ಪಿಸಲು ಮಾಡಿಕೊಂಡಿದ್ದ ಒಂದು ಕುತಂತ್ರದ ಯೋಜನೆ. ಅದು ಸ್ವಾತಂತ್ರ್ಯಾನಂತರ ಯಾವುದೇ ಎಗ್ಗಿಲ್ಲದೆ ರಾಜಾರೋಷವಾಗಿ ನಡೆದುಕೊಂಡುಬಂದಿದೆ. ಹಿಂದಿ ಹೇರಿಕೆಯ ಭಾಗವಾಗಿ ತ್ರಿಭಾಷಾ ಸೂತ್ರವನ್ನು ರದ್ದುಗೊಳಿಸಬೇಕನ್ನುವುದು ಕರ್ನಾಟಕ ರಕ್ಷಣಾ ವೇದಿಕೆ ಹಕ್ಕೊತ್ತಾಯವಾಗಿತ್ತು. ಕಡ್ಡಾಯ ಹಿಂದಿ ಕಲಿಕೆಯಿಂದಾಗಿ ಸಾವಿರಾರು ಮಕ್ಕಳ ಭವಿಷ್ಯ ಪ್ರತಿ ವರ್ಷ ಮಂಕಾಗುತ್ತಿತ್ತು. ಈಗ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ತೆಗೆದುಕೊಂಡ ಈ ನಿರ್ಧಾರ, ಹಿಂದಿ ಹೇರಿಕೆ ವಿರುದ್ದ ಹೋರಾಟದ ದೊಡ್ಡ ಯಶಸ್ಸು ಎಂದು ನಾನು ಭಾವಿಸಿದ್ದೇನೆ. ಇದಕ್ಕಾಗಿ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರು, ಮಾನ್ಯ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರು ಮತ್ತು ಈ ಹೋರಾಟದಲ್ಲಿ ಭಾಗವಹಿಸಿದ್ದ ಎಲ್ಲಾ ಕನ್ನಡ ಮನಸ್ಸುಗಳನ್ನು ಅಭಿನಂದಿಸುತ್ತೇನೆ ಎಂದಿದ್ದಾರೆ.
ಅನಾವಶ್ಯಕ ಭಾಷಾ ಕಲಿಕೆಯ ಹೊರೆ ತಗ್ಗಲಿದೆ- ಡಾ ನಿರಂಜನಾರಾಧ್ಯ ವಿ ಪಿ
ಅಭಿವೃದ್ಧಿ ಶಿಕ್ಷಣ ತಜ್ಞ ಡಾ ನಿರಂಜನಾರಾಧ್ಯ ವಿ ಪಿ, “ತ್ರಿಭಾಷ ಸೂತ್ರ ಮಕ್ಕಳಿಗೆ ಅನಾವಶ್ಯಕ ಭಾಷಾ ಕಲಿಕೆಯ ಹೊರೆಯಾಗಿದೆ. ಸರ್ಕಾರದ ಈಗಿನ ನಿರ್ಧಾರ ಈ ಹೊರೆಯನ್ನು ತಗ್ಗಿಸಿ ಮಕ್ಕಳ ಕಾಗ್ನಿಟಿವ್ ಕಲಿಕೆಯ ವೇಗ ಮತ್ತು ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಜೊತೆಗೆ ದ್ವಿಭಾಷಾ ಸೂತ್ರ ಕನ್ನಡ ಮತ್ತು ಆಂಗ್ಲ ಭಾಷೆಯನ್ನು ಮತ್ತಷ್ಟು ಪ್ರಭುತ್ವದ ಮಟ್ಟಕ್ಕೆ ಕಲಿಯಲು ಸಹಾಯಕವಾಗುತ್ತದೆ. ಇದೇ ಸಂದರ್ಭದಲ್ಲಿ ಕರ್ನಾಟಕದಲ್ಲಿ ಮಕ್ಕಳು ಕನ್ನಡ ಮತ್ತು ಆಂಗ್ಲ ಭಾಷೆಯ ಜೊತೆಗೆ ತಮ್ಮ ಮಾತೃಭಾಷೆಯನ್ನು ಕಲಿಯಲು ಬಯಸಿದರೆ ಸರ್ಕಾರ ಅದಕ್ಕೆ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸುವ ಜವಾಬ್ದಾರಿಯನ್ನು ಹೊಂದಿರುತ್ತದೆ. ಸರ್ಕಾರ ಈ ಮಹತ್ವದ ನಿರ್ಧಾರವನ್ನು ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿಯೇ ಮಾಡಿದ್ದರೆ ಒಳ್ಳೆಯದಾಗಿತ್ತು. ತಡವಾದರೂ ಒಳ್ಳೆಯ ನಿರ್ಧಾರ ಸ್ವಾಗತಾರ್ಹ” ಎಂದು ಹೇಳಿದ್ದಾರೆ.
ಸರ್ಕಾರದ ನಿರ್ಧಾರ ಸ್ವಾಗತಾರ್ಹ : ಪ್ರೊ ಪುರುಷೋತ್ತಮ ಬಿಳಿಮಲೆ
ಹಿಂದಿ ಪರೀಕ್ಷೆಯ ಅಂಕಗಳನ್ನು ಒಟ್ಟು ಅಂಕಗಳಿಕೆಗೆ ಪರಿಗಣಿಸದಂತೆ ಕರ್ನಾಟಕ ಸರ್ಕಾರ ತೆಗೆದುಕೊಂಡಿರುವ ತೀರ್ಮಾನವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆಯವರು ಸ್ವಾಗತಿಸಿದ್ದಾರೆ.
ರಾಜ್ಯ ಶಿಕ್ಷಣ ನೀತಿಯಲ್ಲಿ ಪ್ರತಿಪಾದಿಸಲಾದ ದ್ವಿಭಾಷಾ ನೀತಿಗೆ ಈ ತೀರ್ಮಾನ ಪೂರಕವಾಗಿದ್ದು, ವಿದ್ಯಾರ್ಥಿಗಳ ಮೇಲೆ ಅನಗತ್ಯ ಭಾಷಾ ಒತ್ತಡವನ್ನು ಕಡಿಮೆ ಮಾಡುವುದರ ಜೊತೆಗೆ ಕನ್ನಡ ಭಾಷೆಯ ಬೆಳವಣಿಗೆಗೆ ಉತ್ತೇಜನ ನೀಡಲಿದೆ.
ಕನ್ನಡದ ಹಿತದೃಷ್ಠಿಯಿಂದ ಈ ನಿರ್ಧಾರವು ಅತ್ಯಂತ ಮಹತ್ವದಾಗಿದ್ದು, ರಾಜ್ಯದ ಭಾಷಾ ಸ್ವಾಭಿಮಾನವನ್ನು ಬಲಪಡಿಸುವ ನಿಟ್ಟಿನಲ್ಲಿ ಐತಿಹಾಸಿಕ ಹೆಜ್ಜೆಯಾಗಿದೆ ಎಂದಿರುವ ಬಿಳಿಮಲೆ, ಕನ್ನಡ ಪರವಾದ ಇಂತಹ ನೀತಿಗಳನ್ನು ಸರ್ಕಾರವು ಮುಂದುವರೆಸಬೇಕೆಂದು ಹೇಳಿದರು. ರಾಜ್ಯದ ಶಿಕ್ಷಣ ವ್ಯವಸ್ಥೆಯನ್ನು ಕನ್ನಡ ಸ್ನೇಹಿಯಾಗಿ ರೂಪಿಸುವ ದಿಕ್ಕಿನಲ್ಲಿ ಈ ತೀರ್ಮಾನ ಪರಿಣಾಮಕಾರಿಯಾದ ಹೆಜ್ಜೆಯಾಗಿದ್ದು, ಕನ್ನಡದ ಅಭಿವೃದ್ಧಿಗೆ ಇದು ಹೊಸ ಚೈತನ್ಯವನ್ನು ತುಂಬಲಿದೆ” ಎಂದು ಹೇಳಿದ್ದಾರೆ.
ಹಿಂದಿ ಹೇರಿಕೆಯ ವಿರುದ್ಧ ಒಂದು ಮಹತ್ವದ ಮೈಲಿಗಲ್ಲು- ಅರುಣ್ ಜಾವಗಲ್
ಕನ್ನಡಪರ ಹೋರಾಟಗಾರ ಅರುಣ್ ಜಾವಗಲ್ ಪ್ರತಿಕ್ರಿಯಿಸಿ, ತ್ರಿಭಾಷಾ ಸೂತ್ರ ತಂದಿರುವುದೇ ಹಿಂದಿ ಹೇರಿಕೆಗೆ. ಶಿಕ್ಷಣ ಇಲಾಖೆ ತೆಗೆದುಕೊಂಡಿರುವ ಈ ನಿರ್ಧಾರ ಹಿಂದಿ ಹೇರಿಕೆಯ ವಿರುದ್ಧ ಒಂದು ಮಹತ್ವದ ಮೈಲಿಗಲ್ಲು. ಕನ್ನಡ ಪರ ಹೋರಾಟಗಾರರಿಗೆ ಸಿಕ್ಕ ಜಯ. ಸರ್ಕಾರದ ನಿರ್ಧಾರಕ್ಕೆ ಅಭಿನಂದಿಸುತ್ತೇನೆ ಎಂದಿದ್ದಾರೆ.




