ನಗರಾಭಿವೃದ್ಧಿ ಪ್ರಾಧಿಕಾರಗಳು ಸಮರ್ಪಕವಾಗಿ ಸಭೆಗಳನ್ನು ನಡೆಸದೆ ಸಾರ್ವಜನಿಕರಿಗೆ ಸೌಲಭ್ಯ ಕಲ್ಪಿಸುವಲ್ಲಿ ವಿಫಲವಾಗುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ, ಪ್ರತಿ ತಿಂಗಳು ಕಡ್ಡಾಯವಾಗಿ ಪ್ರಾಧಿಕಾರದ ಸಭೆ ನಡೆಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ನಗರದಲ್ಲಿ ರಾಜ್ಯದ ಒಟ್ಟು 34 ನಗರಾಭಿವೃದ್ಧಿ ಪ್ರಾಧಿಕಾರಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಚಾಟಿ ಬೀಸಿದರು. “ಕೆಲವು ಪ್ರಾಧಿಕಾರಗಳು ವರ್ಷಕ್ಕೆ ಕೇವಲ 2 ಅಥವಾ 3 ಸಭೆಗಳನ್ನು ಮಾತ್ರ ನಡೆಸುತ್ತಿರುವುದನ್ನು ನಾನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದೇನೆ. ಇದರಿಂದ ಯಾವುದೇ ಪ್ರಗತಿ ಸಾಧ್ಯವಿಲ್ಲ. ಇನ್ನು ಮುಂದೆ ಪ್ರಾಧಿಕಾರಗಳು ವರ್ಷಕ್ಕೆ ಕನಿಷ್ಠ 8 ಸಭೆಗಳನ್ನಾದರೂ ಕಡ್ಡಾಯವಾಗಿ ನಡೆಸಲೇಬೇಕು” ಎಂದು ಆದೇಶಿಸಿದರು.
ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ವಸತಿ ಇಲಾಖೆಯಿಂದ ಬೇಡಿಕೆಗೆ ತಕ್ಕಷ್ಟು ಮನೆಗಳನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಪ್ರಾಧಿಕಾರಗಳು ಲಭ್ಯವಿರುವ ಜಾಗಗಳನ್ನು ಸ್ವಾಧೀನಪಡಿಸಿಕೊಂಡು ಅಭಿವೃದ್ಧಿಪಡಿಸಬೇಕು. ಅಲ್ಲದೆ, ಖಾಸಗಿ ಬಿಲ್ಡರ್‌ಗಳ ಮಾದರಿಯಲ್ಲಿ ಪ್ರಾಧಿಕಾರಗಳೇ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಿ, ಸಾರ್ವಜನಿಕರಿಗೆ ಹಂಚಿಕೆ ಮಾಡುವ ಬಗ್ಗೆ ಪರಿಶೀಲನೆ ನಡೆಸುವಂತೆ ಸಚಿವರು ಸಲಹೆ ನೀಡಿದರು.
ನಗರಗಳ ಭವಿಷ್ಯದ ದೃಷ್ಟಿಯಿಂದ ಹಳೆಯ ಮಾಸ್ಟರ್ ಪ್ಲಾನ್‌ಗಳನ್ನು ಪರಿಷ್ಕರಿಸುವಂತೆ ಸೂಚಿಸಿದ ಸಚಿವರು, ಎಲ್ಲಾ ಪ್ರಾಧಿಕಾರಗಳು ಕಡ್ಡಾಯವಾಗಿ ಜಿಐಎಸ್ (GIS) ತಂತ್ರಜ್ಞಾನ ಆಧಾರಿತ ನಕ್ಷೆ ತಯಾರಿಸಬೇಕು ಎಂದರು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು, 2024ರಲ್ಲಿ ಅಸ್ತಿತ್ವಕ್ಕೆ ಬಂದಿರುವ ‘ಚಾಮುಂಡಿಬೆಟ್ಟ ಅಭಿವೃದ್ಧಿ ಪ್ರಾಧಿಕಾರ’ದ ವ್ಯಾಪ್ತಿಯ ಪ್ರದೇಶಗಳನ್ನು ಹೊರತುಪಡಿಸಿ ಹೊಸ ಮಾಸ್ಟರ್ ಪ್ಲಾನ್ ಸಿದ್ಧಪಡಿಸಬೇಕು ಎಂದು ಸ್ಪಷ್ಟಪಡಿಸಿದರು.
ಇದನ್ನು ಓದಿದ್ದೀರಾ? ಮೈದಾನದಲ್ಲಿ ಮಾಸದ ಮೋಡಿ: 39ರ ವಯಸ್ಸಿನಲ್ಲೂ ಮಿಂಚುತ್ತಿರುವ ಮೆಸ್ಸಿ; ಫುಟ್‌ಬಾಲ್ ದಿಗ್ಗಜರ ಸ್ವಾರಸ್ಯಗಳು
ಪ್ರಾಧಿಕಾರಗಳು ಕೇವಲ ಕೆರೆಗಳ ಸೌಂದರ್ಯೀಕರಣದ (ಬ್ಯೂಟಿಫಿಕೇಷನ್) ಬಗ್ಗೆ ಒಲವು ತೋರುತ್ತಿದ್ದು, ಜಲಸಂಗ್ರಹದ ಕಡೆಗೆ ಗಮನಹರಿಸುತ್ತಿಲ್ಲ. ನೀರಿಲ್ಲದಿದ್ದರೆ ಕೆರೆಗಳಿಗೆ ಅರ್ಥವಿಲ್ಲ. ಕೊಳಚೆ ನೀರು ಕೆರೆ ಸೇರದಂತೆ ತಡೆಯುವುದು ಹಾಗೂ ಹೂಳೆತ್ತುವ (ಡಿ-ಸಿಲ್ಟಿಂಗ್) ಮೂಲಕ ಕುಡಿಯುವ ನೀರಿನ ಮೂಲವಾಗಿ ಕೆರೆಗಳನ್ನು ಅಭಿವೃದ್ಧಿಪಡಿಸಬೇಕು. ಕೆರೆಗಳ ಸರ್ವತೋಮುಖ ಅಭಿವೃದ್ಧಿಗೆ ಅಗತ್ಯವಿದ್ದರೆ ಹಾಲಿ ಇರುವ ಮಾರ್ಗಸೂಚಿಗಳನ್ನು ಬದಲಾಯಿಸಿಕೊಳ್ಳುವಂತೆ ಸೂಚಿಸಿದರು.
ಕಟ್ಟಡ ನಿರ್ಮಾಣ ಪರವಾನಗಿ ನೀಡುವ ಪ್ರಕ್ರಿಯೆಯಲ್ಲಿ ವಿಳಂಬವಾಗಬಾರದು. ವಿಳಂಬದಿಂದಾಗಿ ಜನಸಾಮಾನ್ಯರಿಗೆ ನಿರ್ಮಾಣ ವೆಚ್ಚ ಹೆಚ್ಚಾಗಿ ಹೊರೆಯಾಗಲಿದೆ. ವಿನಾಕಾರಣ ವಿಳಂಬ ಮಾಡುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಅಲ್ಲದೆ, ನಿವೇಶನ ಹಂಚಿಕೆಯಾದವರಿಗೆ ‘ಟೈಟಲ್ ಡೀಡ್’ (ಹಕ್ಕುಪತ್ರ) ನೀಡುವಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸಬೇಕು. ಹಂಚಿಕೆಯಾದ ನಿವೇಶನವನ್ನು ವಾಪಸ್ ಪಡೆಯುವ ಬದಲು, ನಿಯಮಾನುಸಾರ ದಂಡ ವಿಧಿಸಿ ಹಕ್ಕುಪತ್ರ ನೀಡಲು ಕ್ರಮವಹಿಸುವಂತೆ ತಿಳಿಸಿದರು.
ಇತ್ತೀಚೆಗೆ ಮುಖ್ಯಮಂತ್ರಿಗಳು ಡಿಸಿ ಮತ್ತು ಸಿಇಒಗಳ ಸಭೆಯಲ್ಲಿ ಸೂಚಿಸಿರುವಂತೆ, ನಗರಗಳ ಅಸಮರ್ಪಕ ಬೆಳವಣಿಗೆಗೆ ಕಡಿವಾಣ ಹಾಕಿ, ಯೋಜಿತ ಬೆಳವಣಿಗೆಯತ್ತ ವಿಶೇಷ ಗಮನಹರಿಸಬೇಕು ಎಂದು ಸಚಿವರು ನೆನಪಿಸಿದರು. ಜೊತೆಗೆ, ಎಲ್ಲಾ ಪ್ರಾಧಿಕಾರಗಳು ಆರ್ಥಿಕ ಇಲಾಖೆಯ ಮಾರ್ಗಸೂಚಿಯಂತೆ ಅತ್ಯಂತ ಪಾರದರ್ಶಕವಾಗಿ ಬ್ಯಾಂಕ್ ಖಾತೆಗಳನ್ನು ನಿರ್ವಹಣೆ ಮಾಡಬೇಕು ಎಂದು ಖಡಕ್ ಸೂಚನೆ ನೀಡಿದರು.
ಸಭೆಯಲ್ಲಿ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಬಿ.ಬಿ. ಕಾವೇರಿ, ನಗರ ಯೋಜನೆ ಇಲಾಖೆ ಆಯುಕ್ತ ಶಿವಾನಂದ ಕಾಪಸಿ, ನಗರ ಯೋಜನೆ ಇಲಾಖೆ ನಿರ್ದೇಶಕ ತಿಪ್ಪೇಸ್ವಾಮಿ ಸೇರಿದಂತೆ ರಾಜ್ಯದ ಎಲ್ಲಾ ನಗರಾಭಿವೃದ್ಧಿ ಪ್ರಾಧಿಕಾರಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.




