ಭಾರತೀಯ ತಟ ರಕ್ಷಣಾ ಪಡೆಯ ಕಾರವಾರ ಘಟಕದಲ್ಲಿ ಸುಮಾರು 20 ವರ್ಷಗಳ ಕಾಲ ದೇಶದ ಸಮುದ್ರ ಗಡಿ ಹಾಗೂ ಕರಾವಳಿ ಭದ್ರತೆಯಲ್ಲಿ ಸೇವೆ ಸಲ್ಲಿಸಿದ್ದ ‘ಸಾವಿತ್ರಿಬಾಯಿ ಫುಲೆ’ ಹಡಗಿಗೆ ಶನಿವಾರ ಸಂಜೆ ಕಾರವಾರ ಬಂದರಿನ ಕೋಸ್ಟ್ ಗಾರ್ಡ್ ಜೆಟ್ಟಿಯಲ್ಲಿ ಗೌರವಯುತ ವಿದಾಯ ನೀಡಲಾಯಿತು. ಇದೇ ವೇಳೆ ಹಡಗನ್ನು ಅಧಿಕೃತವಾಗಿ ಡಿ-ಕಮಿಷನ್ ಮಾಡಲಾಯಿತು.
ಸೂರ್ಯಾಸ್ತದ ಬಳಿಕ ನಡೆದ ಸಮಾರಂಭದಲ್ಲಿ ಹಡಗಿನ ಮೇಲಿದ್ದ ಕೋಸ್ಟ್ ಗಾರ್ಡ್ ಧ್ವಜ ಹಾಗೂ ರಾಷ್ಟ್ರಧ್ವಜವನ್ನು ಕೊನೆಯ ಬಾರಿಗೆ ಗೌರವಪೂರ್ವಕವಾಗಿ ಕೆಳಗಿಳಿಸಲಾಯಿತು. ಬಳಿಕ ಹಡಗಿನ ಉದ್ದಕ್ಕೆ ಸಮನಾದ ‘ಪೇಯಿಂಗ್ ಆಫ್ ಪೆನ್ನಂಟ್’ ಅನ್ನು ಕೆಳಗಿಳಿಸುವ ಮೂಲಕ ಅದರ ಸೇವಾ ನಿವೃತ್ತಿಯನ್ನು ಅಧಿಕೃತವಾಗಿ ಘೋಷಿಸಲಾಯಿತು.
ಕೋಸ್ಟ್ ಗಾರ್ಡ್ ಸಿಬ್ಬಂದಿಯಿಂದ ಗೌರವ ವಂದನೆಯನ್ನೂ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಕೋಸ್ಟ್ ಗಾರ್ಡ್ ಡಿಐಜಿ ಪ್ರವೀಣ್ ಕುಮಾರ್ ಮಿಶ್ರಾ, ‘ಸಾವಿತ್ರಿಬಾಯಿ ಫುಲೆ’ ಹಡಗು ಕೇವಲ ಉಕ್ಕು ಮತ್ತು ಯಂತ್ರಗಳಿಂದ ನಿರ್ಮಿತವಾಗಿರಲಿಲ್ಲ. ಅದರಲ್ಲಿದ್ದ ಕಮಾಂಡರ್‌ಗಳು, ಅಧಿಕಾರಿಗಳು ಹಾಗೂ ಸಿಬ್ಬಂದಿಯ ಶ್ರಮದಿಂದ ಅದು ಜೀವಂತವಾಗಿತ್ತು ಎಂದರು.
ಈ ಸುದ್ದಿ ಓದಿದ್ದೀರಾ ? ಉತ್ತರ ಕನ್ನಡ | ಏಳು ದ್ವೀಪಗಳ ಅಭಿವೃದ್ಧಿ, ಕಾರವಾರ ವಿಮಾನ ನಿಲ್ದಾಣ ವಿಸ್ತರಣೆಗೆ ಸಚಿವ ಸಂಪುಟ ಅಸ್ತು
ಕಳೆದ ಎರಡು ದಶಕಗಳಲ್ಲಿ ಹಡಗು ಭಾರತದ ಸಮುದ್ರ ಗಡಿ ಕಾವಲು ಹಾಗೂ ಕರಾವಳಿ ಭದ್ರತೆಯಲ್ಲಿ ನಿರಂತರವಾಗಿ ಸೇವೆ ಸಲ್ಲಿಸಿದೆ. ಕಠಿಣ ಹವಾಮಾನ, ಮಳೆ ಮತ್ತು ಬಿರುಗಾಳಿಯ ನಡುವೆಯೂ ಗಸ್ತು ನಡೆಸಿದ್ದು, ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ ಮೀನುಗಾರರು ಹಾಗೂ ನಾವಿಕರಿಗೆ ನೆರವು ನೀಡಿದೆ ಎಂದು ಹೇಳಿದರು.
ದೇಶದ ಭದ್ರತೆಗೆ ಸವಾಲು ಒಡ್ಡುವ ಶಕ್ತಿಗಳಿಗೆ ಕಟ್ಟುನಿಟ್ಟಿನ ಪ್ರತ್ಯುತ್ತರ ನೀಡುವ ಸಾಮರ್ಥ್ಯದ ಸಂಕೇತವಾಗಿದ್ದ ಈ ಹಡಗು ಸಕ್ರಿಯ ಸೇವೆಯಿಂದ ನಿವೃತ್ತಿಯಾಗುತ್ತಿದ್ದರೂ, ಕರಾವಳಿ ಕಾವಲು ಪಡೆಯ ಇತಿಹಾಸದಲ್ಲಿ ಅದರ ಕೊಡುಗೆ ಹಾಗೂ ಪರಂಪರೆ ಮುಂದುವರಿಯಲಿದೆ ಎಂದರು. ಹಡಗಿನಲ್ಲಿ ಸೇವೆ ಸಲ್ಲಿಸಿದ ಅಧಿಕಾರಿಗಳು, ನಾವಿಕರು, ತಾಂತ್ರಿಕ ಸಿಬ್ಬಂದಿ, ಎಂಜಿನಿಯರ್‌ಗಳು, ಎಲೆಕ್ಟ್ರಿಷಿಯನ್‌ಗಳು, ಶಸ್ತ್ರಾಸ್ತ್ರ ತಜ್ಞರು ಹಾಗೂ ಲಾಜಿಸ್ಟಿಕ್ಸ್ ತಂಡದ ಸೇವೆಯನ್ನು ಅವರು ಸ್ಮರಿಸಿದರು.
ಸಾವಿತ್ರಿಬಾಯಿ ಫುಲೆ’ ಹಡಗಿನ ಕಮಾಂಡಿಂಗ್ ಆಫೀಸರ್ ಕಮಾಂಡೆಂಟ್ ಗೌರವ್ ಶ್ರೀವಾಸ್ತವ್ ಮಾತನಾಡಿ, ಅಕ್ಟೋಬರ್ 28, 2006ರಂದು ಸೇವೆಗೆ ಸೇರ್ಪಡೆಯಾದ ಹಡಗು ಕಳೆದ 20 ವರ್ಷಗಳಲ್ಲಿ ಸಮುದ್ರ ಗಡಿ ಕಾವಲಿನಲ್ಲಿ ಪ್ರಮುಖ ಪಾತ್ರ ವಹಿಸಿದೆ ಹಡಗು ತನ್ನ ಸೇವಾವಧಿಯಲ್ಲಿ ಸುಮಾರು 78,468 ನಾಟಿಕಲ್ ಮೈಲುಗಳಷ್ಟು ಗಸ್ತು ನಡೆಸಿದೆ.
14 ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ಹಾಗೂ 4 ವೈದ್ಯಕೀಯ ತೆರವು ಕಾರ್ಯಾಚರಣೆಗಳಲ್ಲಿ ಭಾಗವಹಿಸಿ 71 ಮಂದಿಯ ಪ್ರಾಣ ರಕ್ಷಿಸಿದೆ. ಅಲ್ಲದೆ, 2 ಕಳ್ಳಸಾಗಣೆ ವಿರೋಧಿ ಕಾರ್ಯಾಚರಣೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎಂದು ತಿಳಿಸಿದರು.
2006-07, 2010-11 ಹಾಗೂ 2014ರಲ್ಲಿ ಅತ್ಯುತ್ತಮ ‘ಸರ್ಚ್ ಅಂಡ್ ರೆಸ್ಕ್ಯೂ ಯೂನಿಟ್’ ಪ್ರಶಸ್ತಿಯನ್ನೂ ಹಡಗು ಪಡೆದುಕೊಂಡಿತ್ತು. ಗೋವಾ ಶಿಪ್‌ಯಾರ್ಡ್ ಲಿಮಿಟೆಡ್‌ನಲ್ಲಿ ಸ್ವದೇಶಿಯಾಗಿ ನಿರ್ಮಾಣಗೊಂಡಿದ್ದ ಈ ಹಡಗು ಆತ್ಮನಿರ್ಭರ ಭಾರತದ ಪ್ರಯತ್ನಕ್ಕೆ ಸಾಕ್ಷಿಯಾಗಿತ್ತು ಎಂದು ಗೌರವ್ ಶ್ರೀವಾಸ್ತವ್ ಹೇಳಿದರು.
ಕಾರ್ಯಕ್ರಮದಲ್ಲಿ ಕೋಸ್ಟ್ ಗಾರ್ಡ್ ಕಾರವಾರದ ಕಮಾಂಡರ್ ಅಖಿಲ್ ಯಾದವ್, ಡಿಎಫ್‌ಒ ಆಂತೋಣಿ ಮರಿಯಪ್ಪ, ಸಿಐಎಸ್‌ಎಫ್ ಕೈಗಾ ಕಮಾಂಡಿಂಗ್ ಆಫೀಸರ್ ಅಜಯ್ ಕುಮಾರ್ ಝಾ, ನಿವೃತ್ತ ಡಿಐಜಿ ಮನೋಜ್ ಬಾಡ್ಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.




