ಕನ್ನಡ ಚಿತ್ರರಂಗದ ಅಪರೂಪದ ವೈಚಾರಿಕ ನಿರ್ದೇಶಕ, ಹಿರಿಯ ಪತ್ರಕರ್ತ, ಸೃಜನಶೀಲ ಲೇಖಕ ಎನ್.ಎಸ್. ಶಂಕರ್ ಅವರು ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನಲ್ಲಿ ಭಾನುವಾರ ಕೊನೆಯುಸಿರೆಳೆದಿದ್ದಾರೆ. ಕಳೆದ ಜನವರಿಯಲ್ಲಿ ಅವರ ಪತ್ನಿ ಕೂಡ ನಿಧನರಾಗಿದ್ದರು.
ಮೂಲತಃ ಪತ್ರಕರ್ತರಾಗಿದ್ದ ಎನ್.ಎಸ್. ಶಂಕರ್ ಅವರು ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದರು. ಲಂಕೇಶ್ ಪತ್ರಿಕೆಯ ಒಡನಾಟದಲ್ಲಿ ಬೆಳೆದ ಅವರು ತೀಕ್ಷ್ಣ ಬರಹಗಳ ಮೂಲಕ ಗುರುತಿಸಿಕೊಂಡಿದ್ದರು. ಕೇವಲ ಪತ್ರಿಕೋದ್ಯಮಕ್ಕೆ ಸೀಮಿತವಾಗದ ಶಂಕರ್, ಸಾಂಸ್ಕೃತಿಕ ಚಳವಳಿಗಳು ಮತ್ತು ಬಂಡಾಯ ಸಾಹಿತ್ಯದ ತತ್ವಗಳಿಗೆ ಸದಾ ಧ್ವನಿಯಾಗಿದ್ದರು.
ಚಿತ್ರರಂಗಕ್ಕೂ ಕೊಡುಗೆ ನೀಡಿರುವ ಎನ್.ಎಸ್. ಶಂಕರ್ ಅವರು ತಮ್ಮ ಚೊಚ್ಚಲ ಸಿನಿಮಾ ‘ಉಲ್ಟಾ ಪಲ್ಟಾ’ (1997) ಮೂಲಕ ಇಡೀ ಸ್ಯಾಂಡಲ್‌ವುಡ್ ತಿರುಗಿ ನೋಡುವಂತೆ ಮಾಡಿದ್ದರು. ವಿಲಿಯಂ ಶೇಕ್ಸ್‌ಪಿಯರ್ ಅವರ ಪ್ರಸಿದ್ಧ ಕೃತಿ ‘ದಿ ಕಾಮಿಡಿ ಆಫ್ ಎರರ್ಸ್’ ಆಧಾರಿತ ಈ ಹಾಸ್ಯ ಪ್ರಧಾನ ಚಿತ್ರ ಕನ್ನಡ ಸಿನೆಮಾ ಇತಿಹಾಸದಲ್ಲಿ ಒಂದು ವಿಶಿಷ್ಟ ಮೈಲಿಗಲ್ಲಾಗಿ ಉಳಿದಿದೆ. ಕಮರ್ಷಿಯಲ್ ಮತ್ತು ಕಲಾತ್ಮಕ ಚಲನಚಿತ್ರಗಳ ನಡುವಿನ ಗೋಡೆಯನ್ನು ಮುರಿದು ಹೊಸ ಮಾದರಿಯ ಚಿತ್ರಗಳಿಗೆ ಇದು ಪ್ರೇರಣೆಯೂ ಆಗಿತ್ತು. ತದನಂತರ ಅವರು ‘ಮಣಿ’ ಸೇರಿದಂತೆ ಕೆಲವು ಪ್ರಮುಖ ಚಿತ್ರಗಳನ್ನು ನಿರ್ದೇಶಿಸಿದ್ದರು.
ಬರಹಗಾರರಾಗಿದ್ದ ಎನ್.ಎಸ್. ಶಂಕರ್ ಅವರು ಕಲೆ, ಸಿನಿಮಾ, ರಾಜಕೀಯ ಮತ್ತು ಸಮಾಜದ ವಿವಿಧ ಆಯಾಮಗಳ ಕುರಿತು 20ಕ್ಕೂ ಹೆಚ್ಚು ಮಹತ್ವದ ಪುಸ್ತಕಗಳನ್ನು ಬರೆದಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅವರು ‘ಈಗ…’ ಎಂಬ ಮೂರು ಸಣ್ಣ ಕಥೆಗಳ ಆಂಥಾಲಜಿ ಸಿನಿಮಾ ಪ್ರೊಡಕ್ಷನ್ ಕೆಲಸಗಳಲ್ಲೂ ತೊಡಗಿಸಿಕೊಂಡಿದ್ದರು. ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಜ್ಯೂರಿ ಮೆಂಬರ್ ಆಗಿಯೂ ಅವರು ಸೇವೆ ಸಲ್ಲಿಸಿದ್ದರು.
ಶಂಕರ್ ಅವರ ಅಪಾರ ಸಾಧನೆಗಾಗಿ 2024ರಲ್ಲಿ ಕರ್ನಾಟಕ ಸರ್ಕಾರ ಇವರಿಗೆ ಗೌರವಾನ್ವಿತ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು.
ಎನ್.ಎಸ್. ಶಂಕರ್ ಅವರ ನಿಧನಕ್ಕೆ ಚಿತ್ರರಂಗದ ನಿರ್ದೇಶಕರು, ಕಲಾವಿದರು ಹಾಗೂ ಪತ್ರಕರ್ತರು ಕಂಬನಿ ಮಿಡಿದಿದ್ದಾರೆ. “ಅವರೊಬ್ಬ ಕೇವಲ ನಿರ್ದೇಶಕರಾಗಿರಲಿಲ್ಲ, ಬದಲಿಗೆ ಸಮಾಜವನ್ನು ಮುಕ್ತವಾಗಿ ವಿಶ್ಲೇಷಿಸುವ ದೊಡ್ಡ ಚಿಂತಕರಾಗಿದ್ದರು. ಅವರ ನಿಧನದಿಂದ ಕನ್ನಡ ಸಾಂಸ್ಕೃತಿಕ ಲೋಕದ ಗಟ್ಟಿಯಾದ ಧ್ವನಿಯೊಂದು ಅಡಗಿದಂತಾಗಿದೆ” ಎಂದು ಆಪ್ತ ವಲಯದ ಗಣ್ಯರು ಸ್ಮರಿಸಿದ್ದಾರೆ.



