ಇವು ವಿಶ್ವಸಂಸ್ಥೆಯ ವಿಚಾರಣಾ ಆಯೋಗ ಮಾಡಿರುವ ಆರೋಪಗಳಲ್ಲ. ಬದಲಿಗೆ ನಮ್ಮ ಕರಳು ಕಿತ್ತುಬರುವಂತಹ ಸಾಕ್ಷ್ಯಾಧಾರಗಳ ಉಲ್ಲೇಖ. ಪ್ಯಾಲೆಸ್ತೀನಿ ಸಮಾಜದ ಅಸ್ತಿತ್ವವನ್ನೇ ಇತಿಹಾಸದ ಪುಟಗಳಿಂದ ಅಳಿಸಿಹಾಕಲು ವಿಶ್ವದ 'ದೊಡ್ಡಣ್ಣ'ನ ಬೆಂಬಲದೊಂದಿಗೆ ನಡೆಯುತ್ತಿರುವ ಈ ನರಮೇಧಕ್ಕೆ ಇನ್ನಾದರೂ ಮುಕ್ತಿ ಸಿಗಬಹುದೇ? ಮುಗ್ಧ ಮಕ್ಕಳ ರಕ್ತದಿಂದ ತೊಯ್ದಿರುವ ಆ ಮಣ್ಣು, ಹೆತ್ತವರ ಆಕ್ರಂದನ ಜಾಗತಿಕ ನಾಯಕರ ಮನಸ್ಸಾಕ್ಷಿಯನ್ನು ಬಡಿದೆಬ್ಬಿಸಬಹುದೇ?
ವಿಶ್ವ ಹಲವು ಯುದ್ಧಗಳನ್ನು, ಸಾಮ್ರಾಜ್ಯಗಳ ಪತನಗಳನ್ನು ಕಂಡಿದೆ. ಹಾಗೆಯೇ ಕ್ರೌರ್ಯದ ನಾನಾ ಮುಖಗಳಿಗೆ ನಮ್ಮ ನಾಗರಿಕತೆ ದಾಟಿ ಬಂದಿದೆ. ಆದರೆ ಇಸ್ರೇಲ್‌ನ ಯುದ್ಧಾಪರಾಧವು ಕ್ರೌರ್ಯದ ಪರಮಾವಧಿ ಮೀರಿದೆ. ಪ್ಯಾಲೆಸ್ತೀನ್ ಜನಾಂಗವನ್ನೇ ನಾಶ ಮಾಡುವ ಉದ್ದೇಶದಿಂದ ಇಸ್ರೇಲ್ ನಡೆಸಿದ ಕಂದಮ್ಮಗಳ ನರಮೇಧಕ್ಕೆ ನಾವಿಂದು ಸಾಕ್ಷಿಯಾಗುತ್ತಿದ್ದೇವೆ. ಪ್ಯಾಲೆಸ್ತೀನ್ ನೆಲದಲ್ಲಿ ಇಸ್ರೇಲ್ ನಡೆಸುತ್ತಿರುವ ರಕ್ತಪಾತವು ಕೇವಲ ಒಂದು ರಾಜಕೀಯ ಅಥವಾ ಸೇನೆಯ ಸಂಘರ್ಷವಾಗಿಲ್ಲ. ಇದು ಇಡೀ ಮಾನವೀಯತೆಯ ಆತ್ಮಕ್ಕಾದ ಗಾಯವೆಂಬುದನ್ನು ಇತ್ತೀಚಿನ ವಿಶ್ವಸಂಸ್ಥೆಯ ವರದಿ ಬಹಿರಂಗಪಡಿಸಿದೆ.
ಇಸ್ರೇಲ್ ನಡೆಸುತ್ತಿರುವ ಸರಣಿ ದಾಳಿಗಳು, ಬಾಂಬ್‌ಗಳ ಸುರಿಮಳೆ ಮತ್ತು ಅಮಾನವೀಯ ದಿಗ್ಬಂಧನಗಳ ಮಧ್ಯೆ ಸಿಲುಕಿ ಜೀವ ಕಳೆದುಕೊಂಡ ಕಂದಮ್ಮಗಳ ಸಂಖ್ಯೆ, ಕಮರಿಹೋದ ಕನಸುಗಳು, ನಾಶವಾದ ಒಂದು ಸಮಾಜದ ಭವಿಷ್ಯದ ವರದಿಯಿದು. ವಿಶ್ವಸಂಸ್ಥೆಯ ಸ್ವತಂತ್ರ ಅಂತಾರಾಷ್ಟ್ರೀಯ ವಿಚಾರಣಾ ಆಯೋಗದ ಈ ವರದಿಯು ಪ್ಯಾಲೆಸ್ತೀನ್ ಜನಾಂಗೀಯ ಹತ್ಯೆಯ ಮಹಾದುರಂತದ ಆಳ ಮತ್ತು ತೀವ್ರತೆಯನ್ನು ಜಗತ್ತಿನ ಮುಂದೆ ಬಿಚ್ಚಿಟ್ಟಿದೆ. ನಾವು ಅಂದಾಜಿಸಲೂ ಸಾಧ್ಯವಿಲ್ಲದ ಘೋರ ದುರಂತವನ್ನು ಸಮಿತಿಯ ಮುಖ್ಯಸ್ಥರಾಗಿ ನೇಮಕಗೊಂಡಿರುವ ಭಾರತದ ನಿವೃತ್ತ ನ್ಯಾಯಮೂರ್ತಿ ಎಸ್ ಮುರಳೀಧರ್ ವಿವರಿಸಿದ್ದಾರೆ.
ಇದನ್ನೂ ಓದಿ: ಪ್ಯಾಲೆಸ್ತೀನ್ ಮಕ್ಕಳ ನರಮೇಧ: ಇಸ್ರೇಲ್ ಕುತಂತ್ರ ಬೆತ್ತಲೆ ಮಾಡಿದ ನ್ಯಾ. ಎಸ್ ಮುರಳೀಧರ್ ಯಾರು?
ನರಮೇಧದ ಕ್ರೌರ್ಯ: ಬೆಚ್ಚಿಬೀಳಿಸುವ ಅಂಕಿ-ಅಂಶಗಳು
ವಿಶ್ವಸಂಸ್ಥೆಯ ತನಿಖಾ ಆಯೋಗದ ವರದಿಯ ಪ್ರಕಾರ, ಕಳೆದ ಎರಡು ವರ್ಷಗಳ ಅವಧಿಯಲ್ಲಿ ಇಸ್ರೇಲ್‌ನ ಭೀಕರ ದಾಳಿಗಳಿಗೆ ಬಲಿಯಾದ ಪ್ಯಾಲೆಸ್ತೀನ್ ಮಕ್ಕಳ ಸಂಖ್ಯೆ ಬರೋಬ್ಬರಿ 20,179 ದಾಟಿದೆ. ಇಷ್ಟು ದೊಡ್ಡ ಪ್ರಮಾಣದ ಮಕ್ಕಳ ಸಾವು ಕೇವಲ ‘ಯುದ್ಧದ ಅಡ್ಡಪರಿಣಾಮ’ ಎಂದು ತಳ್ಳಿಹಾಕಲಾಗದು. ಇದು ಇಡೀ ಪ್ಯಾಲೆಸ್ತೀನಿ ಸಮುದಾಯದ ಸಂತಾನ ಭವಿಷ್ಯವನ್ನೇ ಬೇರುಸಹಿತ ಅಳಿಸಿ ಹಾಕಲು ನಡೆಸಿದ ವ್ಯವಸ್ಥಿತ ನರಮೇಧ ಎಂಬುದು ಸಾಕ್ಷ್ಯಾಧಾರಗಳ ಸಹಿತ ಸಾಬೀತಾಗಿದೆ.
ಆಟದ ಮೈದಾನಗಳಲ್ಲಿ, ಶಾಲೆಗಳಲ್ಲಿ ಮತ್ತು ತಮ್ಮ ತಾಯಂದಿರ ಮಡಿಲಲ್ಲಿ ಸುರಕ್ಷಿತವಾಗಿರಬೇಕಾಗಿದ್ದ ಪ್ಯಾಲೆಸ್ತೀನ್ ಮಕ್ಕಳು ಇಂದು ಮಣ್ಣಿನಡಿಯಲ್ಲಿ ಹೂತುಹೋಗಿದ್ದಾರೆ. ಇದು ಇಸ್ರೇಲ್ ಪಡೆದ ಜೀವಬಲಿಯಲ್ಲ, ಬದಲಿಗೆ ಒಂದು ಇಡೀ ಜನಾಂಗದ ನಾಳಿನ ಭರವಸೆಯನ್ನು ಕಮರಿಸುವ ತಂತ್ರಗಾರಿಕೆ ಎಂಬುದು ತನಿಖಾ ವರದಿಯು ಸ್ಪಷ್ಟಪಡಿಸಿದೆ.
ಡ್ರೋನ್, ತಂತ್ರಜ್ಞಾನ ಬಳಸಿ ಮಕ್ಕಳ ನರಮೇಧ!
ವಿಶ್ವಸಂಸ್ಥೆಯ ವರದಿಯು ಅತ್ಯಂತ ಕಳವಳಕಾರಿ ಮತ್ತು ಮನಕಲಕುವ ಮತ್ತೊಂದು ಸತ್ಯವನ್ನು ಹೊರಹಾಕಿದೆ.
ಅತ್ಯಾಧುನಿಕ ಯುದ್ಧ ತಂತ್ರಜ್ಞಾನ ಮತ್ತು ಡ್ರೋನ್‌ಗಳನ್ನು ಬಳಸಿ ನಿರ್ದಿಷ್ಟವಾಗಿ ಮಕ್ಕಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿ ನಡೆಸಿದೆ. ಯುದ್ಧಭೂಮಿಯಿಂದ ದೂರವಿದ್ದ, ಯಾವುದೇ ಆಯುಧ ಹಿಡಿಯದ, ರಕ್ಷಣೆಯಿಲ್ಲದ ಮಕ್ಕಳ ಮೇಲೆ ಡ್ರೋನ್‌ಗಳ ಮೂಲಕ ಮಾರಕ ಬಾಂಬ್‌ಗಳನ್ನು ಎಸೆಯಲಾಗಿದೆ.
ಸದ್ಯ ನಾವೆಲ್ಲರೂ ಬಳಸುವುದು ಕೃತಕ ಬುದ್ಧಿಮತ್ತೆ (AI). ಈ ತಂತ್ರಜ್ಞಾನವನ್ನೂ ಇಸ್ರೇಲ್ ಮಕ್ಕಳ ನರಮೇಧಕ್ಕಾಗಿ ಬಳಸಿದೆ. ತಂತ್ರಜ್ಞಾನವನ್ನು ಮಾನವೀಯತೆಯ ವಿರುದ್ಧದ ಅಸ್ತ್ರವನ್ನಾಗಿ ಮಾಡಿಕೊಂಡಿರುವುದಕ್ಕೆ ಇಸ್ರೇಲ್ ನಡೆಸಿದ ದಾಳಿಗಳೇ ಜ್ವಲಂತ ಸಾಕ್ಷಿ. ಆಗಸದಲ್ಲಿ ಹಾರಿ ಬಂದ ಡ್ರೋನ್ ಕಂಡು ನಿಬ್ಬೆರಗಾಗಿ ನೋಡಿದ ಅದೆಷ್ಟೋ ಜೀವಗಳು, ಅದು ತಮ್ಮ ಪ್ರಾಣ ಬಲಿ ಪಡೆಯಲು ಬರುತ್ತಿರುವ ಇಸ್ರೇಲ್ ಅಸ್ತ್ರ ಎಂಬುದನ್ನೂ ಅರಿಯುವಷ್ಟೂ ಸಮಯ ಇರಲಿಲ್ಲ. ಇಸ್ರೇಲ್ ಕುತಂತ್ರ ತಿಳಿಯುವ ವಯಸ್ಸೂ ಅದಲ್ಲ. ಆಕಾಶದಿಂದ ಧುಮುಕುವ ಸಾವು ತಮ್ಮತ್ತ ಏಕೆ ಬರುತ್ತಿದೆ ಎಂದೇ ತಿಳಿಯದ ಅದೆಷ್ಟೋ ಮುಗ್ಧ ಕಣ್ಣುಗಳು ಈಗ ಶಾಶ್ವತವಾಗಿ ಮುಚ್ಚಿಹೋಗಿವೆ.
ಇದನ್ನೂ ಓದಿ: ಇಸ್ರೇಲ್ ಕ್ರೌರ್ಯ: ಗಾಜಾದಲ್ಲಿ 20,179 ಮಕ್ಕಳು ಸಾವು; ಹಸಿದು ಬಳಲಿರುವ 12 ಲಕ್ಷ ಮಕ್ಕಳು
ಇಸ್ರೇಲ್ ಬಳಸಿದ ಉಪವಾಸ ಎಂಬ ಅಮಾನವೀಯ ಅಸ್ತ್ರ
ಕೇವಲ ಬಾಂಬ್ ಮತ್ತು ಗುಂಡುಗಳಷ್ಟೇ ಪ್ಯಾಲೆಸ್ತೀನ್ ಮಕ್ಕಳನ್ನು ಇಸ್ರೇಲ್ ಕೊಂದಿಲ್ಲ. ಹಸಿವು ಮತ್ತು ಅಪೌಷ್ಟಿಕತೆಯನ್ನು ಇಸ್ರೇಲ್ ಒಂದು ಯುದ್ಧೋಪಾಯವಾಗಿ ಬಳಸಿಕೊಳ್ಳುತ್ತಿದೆ. ಗಾಜಾ ಪಟ್ಟಿ ಸೇರಿದಂತೆ ಪ್ಯಾಲೆಸ್ತೀನ್‌ನ ಹಲವು ಪ್ರದೇಶಗಳ ಮೇಲೆ ಹೇರಲಾಗಿರುವ ವ್ಯಾಪಕ ದಿಗ್ಬಂಧನದಿಂದಾಗಿ ಆಹಾರ, ನೀರು ಮತ್ತು ಜೀವ ರಕ್ಷಕ ಔಷಧಿಗಳ ಸರಬರಾಜು ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಮುಗ್ಧ ನವಜಾತ ಶಿಶುಗಳು ಮತ್ತು ಮಕ್ಕಳು ಹನಿ ಹಾಲಿಗೆ, ಒಂದು ತುತ್ತು ಆಹಾರಕ್ಕೆ ತತ್ತರಿಸಿ, ಹಸಿವಿನಿಂದ ಬಳಲುವಂತಾಗಿದೆ.
ಅಂತಾರಾಷ್ಟ್ರೀಯ ಮಾನವೀಯ ಕಾಯ್ದೆಗಳ ಪ್ರಕಾರ ಜನಸಮುದಾಯವನ್ನು ಹಸಿವಿನಿಂದ ಕೊಲ್ಲುವುದು ಯುದ್ಧಾಪರಾಧ. ಇಸ್ರೇಲ್ ಈ ಕಾಯ್ದೆಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿದೆ ಎಂಬುದನ್ನು ವಿಶ್ವಸಂಸ್ಥೆಯ ವರದಿ ಸ್ಪಷ್ಟಪಡಿಸಿದೆ.
ಮಕ್ಕಳ ಮೇಲೆ ಲೈಂಗಿಕ ಹಿಂಸೆ: ಇಸ್ರೇಲ್‌ನ ಕ್ರೂರ ಮುಖ
ಇಸ್ರೇಲ್‌ನ ಕ್ರೌರ್ಯ ಇಷ್ಟಕ್ಕೆ ಕೊನೆಯಾಗಿಲ್ಲ. ವರದಿಯಲ್ಲಿ ಉಲ್ಲೇಖಿಸಲಾಗಿರುವ ಅತ್ಯಂತ ಕ್ರೂರ ಮುಖವೆಂದರೆ ಮಕ್ಕಳ ಮೇಲಿನ ಲೈಂಗಿಕ ಹಿಂಸೆ ಮತ್ತು ಬೇಕಾಬಿಟ್ಟಿ ಬಂಧನ. ಯಾವುದೇ ಕಾನೂನು ಪ್ರಕ್ರಿಯೆಗಳಿಲ್ಲದೆ, ಅಪ್ರಾಪ್ತ ಮಕ್ಕಳನ್ನು ಸೇನಾ ಬಂಧನ ಕೇಂದ್ರಗಳಲ್ಲಿ ಇರಿಸಲಾಗಿದೆ. ಅಲ್ಲಿ ಅವರ ಮೇಲೆ ದೈಹಿಕ ಹಾಗೂ ಮಾನಸಿಕ ದೌರ್ಜನ್ಯಗಳನ್ನು ಎಸಗಲಾಗುತ್ತಿದೆ.
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಅವರ ಘನತೆಗೆ ಧಕ್ಕೆ ತರುವಂತಹ ವರ್ತನೆಗಳು ಇಸ್ರೇಲಿ ಪಡೆಗಳ ಕ್ರೌರ್ಯದ ಪರಮಾವಧಿಯನ್ನು ಎತ್ತಿ ತೋರಿಸುತ್ತವೆ. ಬಾಲ್ಯವನ್ನು ಅನುಭವಿಸಬೇಕಾದ ವಯಸ್ಸಿನಲ್ಲಿ ಮಕ್ಕಳು ಕತ್ತಲೆಯ ಜೈಲು ಕೋಣೆಗಳಲ್ಲಿ ನರಕಯಾತನೆ ಅನುಭವಿಸುತ್ತಿರುವುದು, ಲೈಂಗಿಕ ಶೋಷಣೆಗೆ ಒಳಗಾಗುತ್ತಿರುವುದು ಇಡೀ ಜಗತ್ತೇ ತಲೆತಗ್ಗಿಸಬೇಕಾದ ಸಂಗತಿ.
ಇವೆಲ್ಲವೂ ವಿಶ್ವಸಂಸ್ಥೆಯ ಸ್ವತಂತ್ರ ಅಂತಾರಾಷ್ಟ್ರೀಯ ವಿಚಾರಣಾ ಆಯೋಗ ಮಾಡಿರುವ ಆರೋಪಗಳಲ್ಲ. ಬದಲಿಗೆ ನಮ್ಮ ಕರಳು ಕಿತ್ತುಬರುವಂತಹ ಸಾಕ್ಷ್ಯಾಧಾರಗಳ ಉಲ್ಲೇಖ. ಪ್ಯಾಲೆಸ್ತೀನಿ ಸಮಾಜದ ಅಸ್ತಿತ್ವವನ್ನೇ ಇತಿಹಾಸದ ಪುಟಗಳಿಂದ ಅಳಿಸಿಹಾಕಲು ವಿಶ್ವದ ‘ದೊಡ್ಡಣ್ಣ’ನ ಬೆಂಬಲದೊಂದಿಗೆ ನಡೆಯುತ್ತಿರುವ ಈ ನರಮೇಧಕ್ಕೆ ಇನ್ನಾದರೂ ಮುಕ್ತಿ ಸಿಗಬಹುದೇ?
ಮುಗ್ಧ ಮಕ್ಕಳ ರಕ್ತದಿಂದ ತೊಯ್ದಿರುವ ಆ ಮಣ್ಣು ಮತ್ತು ಅಲ್ಲಿನ ಹೆತ್ತವರ ಆಕ್ರಂದನ ಜಾಗತಿಕ ನಾಯಕರ ಮನಸ್ಸಾಕ್ಷಿಯನ್ನು ಬಡಿದೆಬ್ಬಿಸಬಹುದೇ? ಕೇವಲ ಖಂಡನಾ ನಿರ್ಣಯಗಳಿಂದ ಈ ರಕ್ತಪಾತ ನಿಲ್ಲದು. ತಪ್ಪಿತಸ್ಥ ಇಸ್ರೇಲ್ ಅನ್ನು ಅಂತಾರಾಷ್ಟ್ರೀಯ ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಿಸಿ ಕಠಿಣ ಶಿಕ್ಷೆ ವಿಧಿಸಿದಾಗ ಮಾತ್ರ ಜಾಗತಿಕ ನ್ಯಾಯದ ಮೇಲಿನ ನಂಬಿಕೆ ಉಳಿಯಲು ಸಾಧ್ಯ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.



