ಚುನಾವಣೆ ನಡೆಯಲಿದ್ದ 26 ರಾಜ್ಯಸಭಾ ಸ್ಥಾನಗಳಲ್ಲಿ 18 ಸ್ಥಾನಗಳಿಗೆ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 10 ಮಂದಿ ಬಿಜೆಪಿ, ನಾಲ್ವರು ಕಾಂಗ್ರೆಸ್, ಮೂವರು ಟಿಡಿಪಿ ಮತ್ತು ಜನ ಸೇವಾದ ಓರ್ವ ಅಭ್ಯರ್ಥಿ ಅವಿರೋಧ ಆಯ್ಕೆಗೊಂಡಿದ್ದಾರೆ. ಆಯ್ಕೆಯಾದವರಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕದ ಮಾಧ್ಯಮ ಮತ್ತು ಪ್ರಚಾರ ಮುಖ್ಯಸ್ಥ ಪವನ್ ಖೇರಾ ಸೇರಿದ್ದಾರೆ.
ಈ ಅವಿರೋಧ ಆಯ್ಕೆಯಿಂದಾಗಿ ಬಿಜೆಪಿ ಎರಡು ಸ್ಥಾನಗಳನ್ನು ಗಳಿಸಿದೆ. ಈ ಪೈಕಿ ತೀವ್ರ ವಿವಾದಕ್ಕೆ ಕಾರಣವಾಗಿರುವ, ಚುನಾವಣಾ ಆಯೋಗದ ವಿರುದ್ದ ಆಕ್ರೋಶ ಹುಟ್ಟಿಸಿರುವ ಕಾಂಗ್ರೆಸ್ ಅಭ್ಯರ್ಥಿ ಮೀನಾಕ್ಷಿ ನಟರಾಜನ್ ನಾಮಪತ್ರ ಸಲ್ಲಿಸಿದ್ದ ಸ್ಥಾನವೂ ಸೇರಿದೆ. ಮಧ್ಯಪ್ರದೇಶದ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೀನಾಕ್ಷಿ ನಟರಾಜನ್ ಅವರ ನಾಮಪತ್ರ ತಿರಸ್ಕೃತಗೊಂಡಿದ್ದರಿಂದ, ಆ ಸ್ಥಾನವೂ ಸೇರಿದಂತೆ ರಾಜ್ಯದ ಒಟ್ಟು ಮೂರು ಸ್ಥಾನಗಳಿಗೆ ಬಿಜೆಪಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇದನ್ನು ಓದಿದ್ದೀರಾ? ರಾಜ್ಯಸಭಾ ಚುನಾವಣೆ: ಕಾಂಗ್ರೆಸ್‌ನ ಮೂವರು, ಬಿಜೆಪಿ ಓರ್ವ ಅಭ್ಯರ್ಥಿ ಅವಿರೋಧ ಆಯ್ಕೆ
ಮಧ್ಯಪ್ರದೇಶದಲ್ಲಿ, ಮೂರು ಸ್ಥಾನಗಳು ಖಾಲಿಯಾಗಿದ್ದವು. ಹಿಂದೆ ಎರಡು ಸ್ಥಾನಗಳು ಬಿಜೆಪಿ ಮತ್ತು ಒಂದು ಸ್ಥಾನ ಕಾಂಗ್ರೆಸ್‌ನದ್ದಾಗಿತ್ತು. ಆದರೆ ಈಗ ಮೀನಾಕ್ಷಿ ನಾಮಪತ್ರ ತಿರಸ್ಕೃತಗೊಂಡಿದ್ದರಿಂದ ಈ ಸ್ಥಾನವೂ ಬಿಜೆಪಿಗೆ ಸೇರಿದೆ. ತೆಲಂಗಾಣದ ಹೈದರಾಬಾದ್‌ನಲ್ಲಿ ಬಾಕಿ ಇರುವ ಒಂದು ಕಾನೂನು ಪ್ರಕರಣದ ವಿವರಗಳನ್ನು ಮೀನಾಕ್ಷಿ ನಟರಾಜನ್ ಅವರು ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ ಬಹಿರಂಗಪಡಿಸಿಲ್ಲ ಎಂದು ಬಿಜೆಪಿ ನಾಯಕರು ಚುನಾವಣಾ ಅಧಿಕಾರಿಗೆ ದೂರು ನೀಡಿದ್ದರು. ಈ ಆಕ್ಷೇಪಣೆಯನ್ನು ಪುರಸ್ಕರಿಸಿದ ಚುನಾವಣಾಧಿಕಾರಿ ಅರವಿಂದ್ ಶರ್ಮಾ ಅವರು ಮೀನಾಕ್ಷಿ ಅವರ ನಾಮಪತ್ರವನ್ನು ತಿರಸ್ಕರಿಸಿದ್ದಾರೆ.
ಆದರೆ ಮೀನಾಕ್ಷಿ ನಟರಾಜನ್ ಅವರ ವಿರುದ್ಧ ಯಾವುದೇ ಎಫ್‌ಐಆರ್ (FIR) ಅಥವಾ ಕ್ರಿಮಿನಲ್ ಪ್ರಕರಣ ದಾಖಲಾಗಿಲ್ಲ, ಅವರಿಗೆ ಕೇವಲ ನೋಟಿಸ್ ಮಾತ್ರ ನೀಡಲಾಗಿತ್ತು. ಹಾಗಾಗಿ ಅಫಿಡವಿಟ್‌ನಲ್ಲಿ ಅದನ್ನು ಉಲ್ಲೇಖಿಸುವ ಅಗತ್ಯವಿರಲಿಲ್ಲ ಎಂದು ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ವಾದಿಸಿದ್ದಾರೆ.
ಚುನಾವಣಾ ಪ್ರಕ್ರಿಯೆಯ ಫಲಿತಾಂಶ ಘೋಷಣೆಗೆ ತಡೆ ನೀಡುವಂತೆ ಕಾಂಗ್ರೆಸ್ ಸುಪ್ರೀಂ ಕೋರ್ಟ್‌ಗೆ ತುರ್ತು ಅರ್ಜಿ ಸಲ್ಲಿಸಿತ್ತು. ಆದರೆ, ಚುನಾವಣಾ ಪ್ರಕ್ರಿಯೆ ನಡೆಯುತ್ತಿರುವಾಗ ಮಧ್ಯಪ್ರವೇಶಿಸಲು ನಿರಾಕರಿಸಿದ ಸುಪ್ರೀಂ ಕೋರ್ಟ್, ಅರ್ಜಿಯ ವಿವರವಾದ ವಿಚಾರಣೆಯನ್ನು ನಡೆಸಲು ಸಮ್ಮತಿಸಿದೆ.
ಇದನ್ನು ಓದಿದ್ದೀರಾ? ಮೀನಾಕ್ಷಿ ನಟರಾಜನ್ ನಾಮಪತ್ರ’ ವಿವಾದ: 3 ಸ್ಥಾನ ಗೆದ್ದ ಬಿಜೆಪಿ
ಇನ್ನು ಗುಜರಾತ್‌ನಲ್ಲಿ, ನಾಲ್ಕು ರಾಜ್ಯಸಭೆ ಸ್ಥಾನಗಳು ಖಾಲಿಯಾಗಿದ್ದವು. ಮೂರು ಸ್ಥಾನಗಳು ಬಿಜೆಪಿ ಮತ್ತು ಒಂದು ಸ್ಥಾನ ಕಾಂಗ್ರೆಸ್‌ನದ್ದಾಗಿತ್ತು. ಎರಡು ರಾಜ್ಯಗಳಲ್ಲಿ ಎಲ್ಲಾ ಏಳು ಸ್ಥಾನಗಳನ್ನು ಬಿಜೆಪಿ ಅಭ್ಯರ್ಥಿಗಳು ಅವಿರೋಧವಾಗಿ ಗೆದ್ದಿದೆ. ಉಳಿದ ಎಂಟು ರಾಜ್ಯಸಭಾ ಸ್ಥಾನಗಳಿಗೆ ಜೂನ್ 18 ರಂದು ಮತದಾನ ನಡೆಯಲಿದೆ. ಜಾರ್ಖಂಡ್‌ನಲ್ಲಿ ಎರಡು ಸ್ಥಾನಗಳಿಗೆ ಮತ್ತು ಮಣಿಪುರ, ಮೇಘಾಲಯ, ಅರುಣಾಚಲ ಪ್ರದೇಶ, ಮಿಜೋರಾಂ, ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ತಲಾ ಒಂದು ಸ್ಥಾನಕ್ಕೆ ಜೂನ್ 18ರಂದು ಮತದಾನ ನಡೆಯಲಿದೆ.
245 ಸದಸ್ಯರ ರಾಜ್ಯಸಭೆಯಲ್ಲಿ ಎನ್‌ಡಿಎ ಪ್ರಸ್ತುತ 147 ಸಂಸದರನ್ನು ಹೊಂದಿದೆ. ಆದರೆ ವಿರೋಧ ಪಕ್ಷವು 67 ಮತ್ತು ಪ್ರಾದೇಶಿಕ ಪಕ್ಷಗಳು 28 ಸಂಸದರನ್ನು ಹೊಂದಿವೆ.
ರಾಜ್ಯಸಭಾ ಚುನಾವಣೆಗಳು ಹೇಗೆ ನಡೆಯುತ್ತವೆ?
ರಾಜ್ಯಸಭಾ ಚುನಾವಣೆಗಳು ಸಾರ್ವತ್ರಿಕ ಚುನಾವಣೆಗಳಿಗಿಂತ ಭಿನ್ನವಾಗಿವೆ. ಸದಸ್ಯರನ್ನು ಜನರ ಬದಲಾಗಿ ಶಾಸಕರು ಪರೋಕ್ಷವಾಗಿ ಆಯ್ಕೆ ಮಾಡುತ್ತಾರೆ. ರಾಜ್ಯಸಭೆಯ ಮೂರನೇ ಒಂದು ಭಾಗದಷ್ಟು ಸದಸ್ಯರು ಪ್ರತಿ ಎರಡು ವರ್ಷಗಳಿಗೊಮ್ಮೆ ನಿವೃತ್ತರಾಗುವುದರಿಂದ ಪ್ರತಿ ಎರಡು ವರ್ಷಗಳಿಗೊಮ್ಮೆ ಚುನಾವಣೆಗಳು ನಡೆಯುತ್ತವೆ. ರಾಜ್ಯಸಭೆಯು ಒಟ್ಟು 245 ಸ್ಥಾನಗಳನ್ನು ಹೊಂದಿದೆ. 233 ಸದಸ್ಯರನ್ನು ರಾಜ್ಯ ಶಾಸಕರು ಪರೋಕ್ಷವಾಗಿ ಆಯ್ಕೆ ಮಾಡುತ್ತಾರೆ. ಆದರೆ 12 ಸದಸ್ಯರನ್ನು ರಾಷ್ಟ್ರಪತಿಗಳು ನಾಮನಿರ್ದೇಶನ ಮಾಡುತ್ತಾರೆ.





