ಕೆಲವೇ ದಿನಗಳಲ್ಲಿ ಪೈಪ್‌ಲೈನ್ ದುರಸ್ತಿ ಪೂರ್ಣಗೊಳಿಸಿ, ಗ್ರಾಮಕ್ಕೆ ನೀರಿನ ಸರಬರಾಜು ಪುನರಾರಂಭ ಮಾಡುವುದಾಗಿ ಅಧಿಕಾರಿಗಳು ಗ್ರಾಮಸ್ಥರಿಗೆ ಭರವಸೆ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ನಾಗನೂರು ಗ್ರಾಮದಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಜಲ ಜೀವನ ಮಿಷನ್(JJM) ಯೋಜನೆ ಸಂಪೂರ್ಣವಾಗಿ ವಿಫಲವಾಗಿದ್ದು, ಈ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಅಲ್ಲದೆ ʼನಾಗನೂರು ಗ್ರಾಮದಲ್ಲಿ ಜಲ ಜೀವನ ಮಿಷನ್ ವಿಫಲ: ನೀರಿಲ್ಲದೆ ನರಳುತ್ತಿರುವ ಗ್ರಾಮಸ್ಥರುʼಎಂಬ ತಲೆಬರಹದಡಿ ಈ ದಿನ.ಕಾಮ್ ವಿಡಿಯೋ ಪ್ರಕಟಿಸಿತ್ತು. ಈ ಬೆನ್ನಲ್ಲೇ ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ನಾಗನೂರು ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಕುರಿತು ಎರಡು ದಿನಗಳ ಹಿಂದೆ ಪ್ರಕಟವಾದ ವರದಿಯ ಪರಿಣಾಮವಾಗಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಹಾಳಾಗಿರುವ ಪೈಪ್‌ಲೈನ್ ಮತ್ತು ನಳಗಳನ್ನು ಪರಿಶೀಲಿಸಿದರು. ದುರಸ್ತಿ ಕಾರ್ಯವನ್ನು ತಕ್ಷಣ ಕೈಗೊಳ್ಳುವಂತೆ ಸೂಚನೆ ನೀಡಿದರು.
ಕೆಲವೇ ದಿನಗಳಲ್ಲಿ ಪೈಪ್‌ಲೈನ್ ದುರಸ್ತಿ ಪೂರ್ಣಗೊಳಿಸಿ, ಗ್ರಾಮಕ್ಕೆ ನೀರಿನ ಸರಬರಾಜನ್ನು ಪುನರಾರಂಭ ಮಾಡುವುದಾಗಿ ಅಧಿಕಾರಿಗಳು ಗ್ರಾಮಸ್ಥರಿಗೆ ಭರವಸೆ ನೀಡಿದ್ದಾರೆ.
ಚರಂಡಿ ಸಮಸ್ಯೆಯೂ ಗಂಭೀರ
ಗ್ರಾಮದಲ್ಲಿ ಸರಿಯಾದ ಚರಂಡಿ ವ್ಯವಸ್ಥೆಯಿಲ್ಲದ ಕಾರಣ ಸಾರ್ವಜನಿಕ ಸ್ಥಳಗಳಲ್ಲಿ ಕಸ-ನೀರು ಸಂಗ್ರಹವಾಗಿದ್ದು, ದುರ್ವಾಸನೆ ಬೀರುತ್ತಿದೆ. ಇದರಿಂದ ಆರೋಗ್ಯ ಸಮಸ್ಯೆಗಳ ಭೀತಿ ಹೆಚ್ಚಾಗಿದೆ. ಈ ಕುರಿತು ಅಧಿಕಾರಿಗಳು ಗಮನಹರಿಸಿ ಸರಿಯಾದ ಚರಂಡಿ ವ್ಯವಸ್ಥೆ ನಿರ್ಮಾಣ ಮಾಡಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದರು.
ಘಟನೆ ಹಿನ್ನೆಲೆ
ಮನೆಮನೆಗೆ ಶುದ್ಧ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಪೈಪ್‌ಲೈನ್ ಮತ್ತು ನಲ್ಲಿಗಳ ವ್ಯವಸ್ಥೆ ಮಾಡಲಾಗಿದ್ದರೂ, ಕಳೆದ ಒಂದು ವರ್ಷದಿಂದ ನೀರಿನ ಸರಬರಾಜು ಸ್ಥಗಿತಗೊಂಡಿತ್ತು. ಗ್ರಾಮದ ಪ್ರತಿಯೊಂದು ಮನೆಗೂ ನಲ್ಲಿಗಳನ್ನು ಅಳವಡಿಸಲಾಗಿದ್ದರೂ, ಅವುಗಳಿಂದ ನೀರು ಬರದೇ ಇರುವುದರಿಂದ ಗ್ರಾಮಸ್ಥರು ಕುಡಿಯುವ ನೀರಿಗಾಗಿ ದೂರದ ಮೂಲಗಳನ್ನು ಅವಲಂಬಿಸುವಂತಾಗಿರುವ ಕುರಿತು ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು.
ಪ್ರತಿ ವರ್ಷ ಗ್ರಾಮ ಪಂಚಾಯಿತಿಗೆ ನೀರಿನ ಕರ ಪಾವತಿಸಿದರೂ ಮೂಲಭೂತ ಸೌಲಭ್ಯ ಸಿಗದೇ ಇರುವುದರಿಂದ ಗ್ರಾಮಸ್ಥರಲ್ಲಿ ಆಕ್ರೋಶ ವ್ಯಕ್ತವಾಗಿದೆ. ಸಮಸ್ಯೆ ಪರಿಹರಿಸುವಂತೆ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಅಧಿಕಾರಿಗಳು ಹಾಗೂ ಸ್ಥಳೀಯ ಶಾಸಕರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದರು.
ಗ್ರಾಮದ ನಿವಾಸಿ ಅನ್ನಪೂರ್ಣ ಮಾತನಾಡಿ, “ಒಂದು ವರ್ಷದಿಂದ ನಲ್ಲಿಗಳಿಗೆ ನೀರು ಬಂದಿಲ್ಲ. ನಾವು ಕರ ಪಾವತಿಸಿದರೂ ಯಾವುದೇ ಪ್ರಯೋಜನವಾಗಿಲ್ಲ” ಎಂದು ತಿಳಿಸಿದ್ದರು.
ಮಹಾದೇವಿ ಮಾತನಾಡಿ, “ನಮ್ಮ ಮನೆಗೆ ಒಂದು ವರ್ಷದಿಂದ ನೀರು ಬರುತ್ತಿಲ್ಲ. ಅಧಿಕಾರಿಗಳಿಗೆ ತಿಳಿಸಿದರೂ ಸ್ಪಂದನೆ ಇಲ್ಲ. ರಾಜಕಾರಣಿಗಳು ಮತ ಕೇಳಲು ಮಾತ್ರ ಬರುತ್ತಾರೆ. ಇಂತಹ ಸಮಸ್ಯೆಗಳನ್ನು ಮಾತ್ರ ಬಗೆಹರಿಸುವುದಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ಗುಳಪ್ಪ ಮಡಿವಾಳ ಅವರು ಮಾತನಾಡಿ, “ಯೋಜನೆಯ ಕಾಮಗಾರಿ ಪ್ರಾರಂಭದಲ್ಲೇ ದೋಷಪೂರಿತವಾಗಿದೆ. ಸಂಬಂಧಿತ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ನಮ್ಮ ಊರಿನ ನೀರಿನ ಸಮಸ್ಯೆಯನ್ನು ಎರಡು ದಿನಗಳಲ್ಲಿ ಬಗೆಹರಿಸಬೇಕು” ಎಂದು ಒತ್ತಾಯಿಸಿದ್ದರು.
ವರದಿಯ ಬೆನ್ನಲ್ಲೇ ಅಧಿಕಾರಿಗಳ ಭೇಟಿ

ಈ ಸುದ್ದಿ ಓದಿದ್ದಿರಾ ? ಬೆಳಗಾವಿ | ಬಸ್ ಹತ್ತುವ ಅವಸರದಲ್ಲಿ ಮಗು ಚಕ್ರದಡಿ ಸಿಲುಕಿ ಗಂಭೀರ ಗಾಯ
ಮಾಧ್ಯಮಕ್ಕೆ ಗ್ರಾಮಸ್ಥರ ಧನ್ಯವಾದ
ಮಾಧ್ಯಮಗಳಲ್ಲಿ ವರದಿ ಪ್ರಕಟವಾದ ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಈಗಲಾದರೂ ಶಾಶ್ವತ ಪರಿಹಾರ ನೀಡಬೇಕೆಂಬ ಆಶಾಭಾವನೆ ವ್ಯಕ್ತಪಡಿಸಿದ ಗ್ರಾಮಸ್ಥರು, ಸಮಸ್ಯೆಯ ವಿಷಯವನ್ನು ಹೊರತಂದ ಮಾಧ್ಯಮಗಳಿಗೆ ಧನ್ಯವಾದ ತಿಳಿಸಿದ್ದಾರೆ.




