ಸಾಲದ ಸುಳಿಗೆ ಸಿಲುಕಿ ಜೀವನ ನಡೆಸಲಾಗದೆ ನೇಕಾರ ಕೂಲಿ ಕಾರ್ಮಿಕನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ನಗರದ ವಡಗಾಂವಿಯಲ್ಲಿ ನಡೆದಿದೆ.
ಮೃತರನ್ನು ವಿಠ್ಠಲ ಲೋಕರಿ ಎಂದು ಗುರುತಿಸಲಾಗಿದೆ. ಅವರು ಪತ್ನಿ ನಿರ್ಮಲ ಹಾಗೂ ಮೂವರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ.

ಮಗ್ಗದ ಕೆಲಸದಿಂದ ಸೂಕ್ತ ಆದಾಯವಿಲ್ಲದೆ ಕುಟುಂಬ ನಿರ್ವಹಣೆ ಹಾಗೂ ಪತ್ನಿಯ ವೈದ್ಯಕೀಯ ವೆಚ್ಚಕ್ಕಾಗಿ ವಿಠಲ ಅವರು ಸುಮಾರು ₹6 ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಸಾಲದ ಒತ್ತಡ ತಾಳಲಾರದೆ ಆಗಸ್ಟ್ 16ರಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.
ವಿಠ್ಠಲ ಅವರ ಪತ್ನಿ ನಿರ್ಮಲಾ ಅವರು ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಪೌಷ್ಟಿಕಾಂಶದ ಕೊರತೆಯಿಂದ ಶಕ್ತಿಹೀನರಾಗಿದ್ದಾರೆ ಎನ್ನಲಾಗಿದೆ. ತಂದೆಯ ಸಾವಿನಿಂದ ಮಕ್ಕಳಾದ ಶಾಂತ (ಪ್ರಥಮ ಪಿಯುಸಿ), ಪ್ರೀತಿ (8ನೇ ತರಗತಿ) ಹಾಗೂ ಭೂಮಿಕಾ (3ನೇ ತರಗತಿ) ದಿಕ್ಕು ತೋಚದಂತಾಗಿದ್ದಾರೆ.
ಈ ಕುರಿತು ಈದಿನ.ಕಾಮ್ ಜತೆ ಅವರ ಮಗಳು ಮಾತನಾಡಿ “ನಮ್ಮ ಅಪ್ಪ ಸಾಲದ ಒತ್ತಡ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಮ್ಮನಿಗೆ ತೀವ್ರ ಅನಾರೋಗ್ಯವಿದೆ. ನಮಗೆ ಓದಿ ಸ್ವಾವಲಂಬಿಗಳಾಗುವ ಆಸೆಯಿದೆ. ಅಮ್ಮನ ಚಿಕಿತ್ಸೆಗೆ ಹಾಗೂ ನಮ್ಮ ಶಿಕ್ಷಣಕ್ಕೆ ನೆರವು ನೀಡಿ” ಎಂದು ಹಿರಿಯ ಮಗಳು ಶಾಂತ ಕಣ್ಣೀರಿನಿಂದ ಮನವಿ ಮಾಡಿದ್ದಾರೆ.
ತಂದೆಯನ್ನು ಕಳೆದುಕೊಂಡಿರುವ ಮಕ್ಕಳ ಶಿಕ್ಷಣ ಮುಂದುವರಿಸಲು ಹಾಗೂ ತಾಯಿಯ ವೈದ್ಯಕೀಯ ಚಿಕಿತ್ಸೆಗೆ ಸರ್ಕಾರ ಮತ್ತು ಜಿಲ್ಲಾಡಳಿತ ತಕ್ಷಣ ಆರ್ಥಿಕ ನೆರವು ನೀಡಬೇಕು ಎಂದು ಕುಟುಂಬಸ್ಥರು ಮನವಿ ಮಾಡಿದ್ದಾರೆ.
ತಂದೆಯನ್ನು ಕಳೆದುಕೊಂಡಿರುವ ಮಕ್ಕಳ ಶಿಕ್ಷಣ ಮುಂದುವರಿಸಲು ಹಾಗೂ ತಾಯಿಯ ವೈದ್ಯಕೀಯ ಚಿಕಿತ್ಸೆಗೆ ಸರ್ಕಾರ ಮತ್ತು ಜಿಲ್ಲಾಡಳಿತ ತಕ್ಷಣ ಆರ್ಥಿಕ ನೆರವು ನೀಡಬೇಕು ಎಂದು ಕುಟುಂಬಸ್ಥರು ಮನವಿ ಮಾಡಿದ್ದಾರೆ.
ನೇಕಾರ ಕಾರ್ಮಿಕರ ಸಂಕಷ್ಟಕ್ಕೆ ಈ ಘಟನೆ ಸಾಕ್ಷಿಯಾಗಿದ್ದು, ಕುಟುಂಬದ ನೆರವಿಗೆ ಸರ್ಕಾರ ಕೂಡಲೇ ₹10 ಲಕ್ಷ ಪರಿಹಾರ ಘೋಷಿಸಬೇಕು ಹಾಗೂ ಮಕ್ಕಳ ಶಿಕ್ಷಣ ಮತ್ತು ತಾಯಿಯ ಚಿಕಿತ್ಸೆಗೆ ಅಗತ್ಯ ನೆರವು ನೀಡಬೇಕು ಎಂದು ನೇಕಾರ ಕಾರ್ಮಿಕ ಮುಖಂಡ ರವಿ ಪಾಟೀಲ ಒತ್ತಾಯಿಸಿದ್ದಾರೆ.



